ಭಿನ್ನ ಹಾದಿಯ ಪಯಣ  ‘ನಾತಿಚರಾಮಿ’ – ಎಂ.ಎಸ್. ಮುರಳೀಕೃಷ್ಣ

 

ಒಬ್ಬ ಮಹಿಳೆ, ಆಕೆ ವಿವಾಹವಾಗದ ಸ್ತ್ರೀಯಾಗಿರಲಿ, ಗಂಡನಿಂದ ಬೇರ್ಪಟ್ಟಿರಲಿ ಅಥವಾ ವಿಧವೆಯಾಗಿರಲಿ, ಅಂತಹವಳನ್ನು ಇಪ್ಪತ್ತೊಂದನೇ ಶತಮಾನದ ಈ ಕಾಲಘಟ್ಟದಲ್ಲೂ ನಮ್ಮ ಸಮಾಜ ನಡೆಸಿಕೊಳ್ಳುತ್ತಿರುವ ರೀತಿಯಲ್ಲಿ ಪುರುಷಸಂಹಿತೆಯೇ ಎದ್ದು ಕಾಣುತ್ತದೆ. ಮದುವೆಯೆಂಬುದು ಒಬ್ಬ ಮಹಿಳೆಗೆ ಆಸರೆ, ರಕ್ಷಣೆಯ ಕವಚವೆಂದೇ ಭಾವಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ‘ನಾತಿಚರಾಮಿ’ ಚಲನಚಿತ್ರ ಭಿನ್ನ, ದಿಟ್ಟ ಹಾದಿಯಲ್ಲಿ ಪಯಣಿಸುತ್ತದೆ.

“ನೀನು ನೈಜವಾಗಿ ಪ್ರೀತಿಸುವುದರತ್ತ ಮೌನವಾಗಿ ಸಾಗುವಂತಾಗಲಿ” –ಜಲಾಲುದ್ದೀನ್ ರೂಮಿ

ಮೇಲೆ ಪ್ರಸ್ತಾಪಿಸಿರುವ ರೂಮಿಯದು ಎಂದು ಹೇಳಲಾಗಿರುವ ಹೇಳಿಕೆಯಲ್ಲಿ ‘ಪ್ರೀತಿ’ ಎಂಬ ಪದಕ್ಕೆ ವಿಶಾಲಾರ್ಥಗಳಿವೆ; ಬಹು ಆಯಾಮಗಳಿವೆ. ವೈಯಕ್ತಿಕ ಆಯ್ಕೆಯ ವಿಷಯವೂ ಇದೆ. ಒಂದರ್ಥದಲ್ಲಿ ಅತೀವವಾಗಿ ಇಷ್ಟಪಡುವ ಸಂಗತಿಯೂ ಪ್ರೀತಿಯ ಆಯಾಮವನ್ನು ಪಡೆಯಬಹುದು. ಇಂತಹ ಕೆಲವು ಆಲೋಚನೆಗಳು ‘ನಾತಿಚರಾಮಿ’ ಎಂಬ ಕನ್ನಡ ಚಲನಚಿತ್ರ ವೀಕ್ಷಿಸಿದ ತರುವಾಯ ನನ್ನಲ್ಲಿ ಮೂಡಿದವು. ಇರಲಿ…

ಈ ಚಲನಚಿತ್ರದ ವಸ್ತುವಿನತ್ತ ಸ್ಥೂಲವಾಗಿ ಗಮನವನ್ನು ಹರಿಸೋಣ. ಗೌರಿ ಒಂದು ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಯುವ ವಿಧವೆ. ಆಕೆ ಮತ್ತು ಮಹೇಶನದ್ದು ಪ್ರೇಮ ವಿವಾಹ. ಅವರೀರ್ವರ ಮನೆಯವರೂ ಈ ಮದುವೆಯನ್ನು ವಿರೋಧಿಸಿರುತ್ತಾರೆ. ಪ್ರೇಮ-ಕಾಮಗಳ ಸಮಾಗಮದಲ್ಲಿ ಅವರು ಬಾನಾಡಿಗಳಾಗಿರುತ್ತಾರೆ. ಅಪಘಾತವೊಂದರಲ್ಲಿ ಮಹೇಶ ಅಸುನೀಗುತ್ತಾನೆ. ಗೌರಿ ಮರುಮದುವೆಯಾಗುವುದಿಲ್ಲ. ಮಹೇಶನ ಪ್ರೀತಿಯನ್ನೇ ಒಡನಾಡಿಯನ್ನಾಗಿಸಿಕೊಂಡು ಜೀವನವನ್ನು ನಡೆಸುತ್ತಿರುತ್ತಾಳೆ. ಆದರೆ ಅವಳಲ್ಲಿ ಕಾಮವಾಂಛೆಯ ಹಾವಿನ ಹೆಡೆಯೆತ್ತಿರುತ್ತದೆ. ಆಕೆ ಯಾವುದೇ ಸಂಬಂಧದ ಸೋಂಕಿರದ ಕಾಮಕ್ಕಾಗಿ ಹಾತೊರೆಯುತ್ತಿರುತ್ತಾಳೆ. ದಿನದಿಂದ ದಿನಕ್ಕೆ ಇದು ಹೆಮ್ಮರವಾಗುತ್ತದೆ; ಆಕೆ ತರಗೆಲೆಯಾಗುತ್ತಾಳೆ. ಇಂತಿಪ್ಪ ಸಮಯದಲ್ಲಿ, ಆಕೆಯ ಜೀವನದಲ್ಲಿ, ತನ್ನ ಗ್ರಾಮೀಣ ಮೂಲದ ಪತ್ನಿ ಸುಮಾಳನ್ನು ಕೇವಲ ಕಾಮದ ಬೊಂಬೆಯಂತೆ ಕಾಣುವ, ಸ್ವತಂತ್ರವಾಗಿ ಸಂಪತ್ತನ್ನು ಗಳಿಸಬೇಕೆಂಬ ಮಹತ್ವಾಕಾಂಕ್ಷೆಯಿರುವ ಸಿವಿಲ್ ಇಂಜನಿಯರ್ ಸುರೇಶನ ಪ್ರವೇಶವಾಗುತ್ತದೆ.

ಹಾಗೆಯೇ ಆಕೆಯ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಹವಣಿಸುವ ಸಹೋದ್ಯೋಗಿ, ಆಕೆಗೆ ಸಲಹೆಯನ್ನು ನೀಡುವ, ಸಾಫ್‍ಸೀದಾ ಮಾತನಾಡುವ ಒಬ್ಬ ಮನಶ್ಶಾಸ್ತ್ರಜ್ಞ, ಆಕೆಯ ಮನೆಯ ಕೆಲಸಗಳನ್ನು ನಿಭಾಯಿಸುವ ಸಹಾಯಕಿ, ಮರುವಿವಾಹ ಮಾಡಿಕೊಳ್ಳುವಂತೆ ಒತ್ತಾಯಿಸುವ ಆಕೆಯ ಸಾಂಪ್ರದಾಯಿಕ ಮನಸ್ಸಿನ ತಾಯಿ ಹಾಗೂ ಇನ್ನು ಕೆಲವರು ಆಕೆಯ ಬಾಳಹಾದಿಯ ಪಯಣಿಗರಾಗಿರುತ್ತಾರೆ. ಆಕೆಯ ದೈಹಿಕ ಕಾಮನೆಗಳು ತಣಿಯುವುದೇ ಎಂಬುದು ಈ ಚಲನಚಿತ್ರದ ಜೀವಾಳ.

ಸೂಕ್ಷ್ಮಗ್ರಾಹಿ ಕಥೆಗಾರ್ತಿ ಸಂಧ್ಯಾರಾಣಿಯವರ ಕಥೆಯನ್ನು ಆಧರಿಸಿರುವ ಈ ಚಲನಚಿತ್ರದ ನಿರ್ದೇಶಕರು ಮಂಸೋರೆ. ಹಾಗೆ ನೋಡಿದರೇ, ಈ ಕಥೆಯ ವಸ್ತು ತೀರಾ ಹೊಸದೇನಲ್ಲ. ಆದರೆ ಈ ಚಲನಚಿತ್ರದ ನಿರೂಪಣೆಯಲ್ಲಿ ಹಸಿ ಹಸಿ ಅಶ್ಲೀಲ ದೃಶ್ಯಗಳಿಲ್ಲ. ‘ಫೈರ್’, ‘ವಾಟರ್’, ‘ಮಾರ್ಗರೀಟಾ ವಿತ್ ಎ ಸ್ಟ್ರಾ’, ‘ಮಸಾನ್’, ‘ಪಿಂಕ್’, ‘ಲಿಪ್‍ಸ್ಟಿಕ್ ಅಂಡರ್ ಮೈ ಬುರ್ಖಾ’, ‘ಕಾನೂರು ಹೆಗ್ಗಡತಿ’, ‘ಕಾಡಿನ ಬೆಂಕಿ’ ಮುಂತಾದ ಚಲನಚಿತ್ರಗಳಲ್ಲಿ ಇಂತಹ ಅಥವಾ ಇದಕ್ಕೆ ಸಂಬಂಧಿಸಿದ ವಸ್ತುಗಳಿವೆ.

ಲಾಗಾಯ್ತಿನಿಂದಲೂ ನಮ್ಮಲ್ಲಿ ಒಬ್ಬಗಂಡು ಕಾಮದ ಬಗೆಗೆ ಎಂತಹ ಮಾರ್ಗದ ಪಯಣಿಗನಾದರೂ ಆತನದ್ದು ‘ಪುರುಷ’ ನಡೆಯೇ ಆಗಿರುತ್ತದೆ. ಅದೊಂದು ಸಹಜ ಕ್ರಿಯೆ, ಬಲಶಾಲಿತ್ವದ ಸಂಕೇತ ಎಂದೇ ಪರಿಗಣಿಸಲಾಗುತ್ತದೆ. ಅದೇ ಒಬ್ಬ ಹೆಣ್ಣು ಚೌಕಟ್ಟಿನಿಂದಾಚೆ ಸ್ಚಲ್ಪ ಯೋಚಿಸಿದರೂ, ಹೆಜ್ಜೆಯನ್ನು ಹಾಕಲು ತವಕಿಸಿದರೂ, ಆಕೆಯನ್ನು ನಿಕೃಷ್ಟವಾಗಿ ಕಾಣುವುದು ಸರ್ವೇಸಾಮಾನ್ಯ. ಆಕೆ ಮೆಲುದನಿಯಲ್ಲಿ ಕೆಲವು ಆಪ್ತ ಗೆಳತಿಯರ ನಡುವೆ ಕಾಮದಂತಹ ವಿಷಯವನ್ನು ಪ್ರಸ್ತಾಪಿಸುವ ಸಂದರ್ಭಗಳೇ ಜಾಸ್ತಿ. ಒಬ್ಬ ಮಹಿಳೆ, ಆಕೆ ವಿವಾಹವಾಗದ ಸ್ತ್ರೀಯಾಗಿರಲಿ, ಗಂಡನಿಂದ ಬೇರ್ಪಟ್ಟಿರಲಿ ಅಥವಾ ವಿಧವೆಯಾಗಿರಲಿ, ಅಂತಹವಳನ್ನು ಇಪ್ಪತ್ತೊಂದನೇ ಶತಮಾನದ ಈ ಕಾಲಘಟ್ಟದಲ್ಲೂ ನಮ್ಮ ಸಮಾಜ ನಡೆಸಿಕೊಳ್ಳುತ್ತಿರುವ ರೀತಿಯಲ್ಲಿ ಪುರುಷಸಂಹಿತೆಯೇ ಎದ್ದು ಕಾಣುತ್ತದೆ. ಮದುವೆಯೆಂಬುದು ಒಬ್ಬ ಮಹಿಳೆಗೆ ಆಸರೆ, ರಕ್ಷಣೆಯ ಕವಚವೆಂದೇ ಭಾವಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ‘ನಾತಿಚರಾಮಿ’ ಭಿನ್ನ, ದಿಟ್ಟ ಹಾದಿಯಲ್ಲಿ ಪಯಣಿಸುತ್ತದೆ.

ಈ ಚಲನಚಿತ್ರ ತಯಾರಾದ ಸಮಯವನ್ನು ಒಂದು ಸಂಕ್ರಮಣ ಕಾಲಘಟ್ಟವೆಂದು ಗುರುತಿಸಬಹುದೇನೋ. ವಿವಾಹವೆಂಬ ವ್ಯವಸ್ಥೆ ಭದ್ರವಾಗಿಯೇ ಇದೆ. ಈ ಹಿಂದೆ ಪ್ರಸ್ತಾಪಿಸಿರುವಂತೆ ಹೆಣ್ಣಿಗೆ ವಿವಾಹವೆಂಬ ವ್ಯವಸ್ಥೆ ತೀರಾ ಅನಿವಾರ್ಯ ಹಾಗೂ ಅದು ಆಕೆಯ ಆಸರೆಯ ಆಧಾರಸ್ತಂಭ ಎಂಬ ದೃಷ್ಟಿಕೋನವೂ ಬಲವಾಗಿಯೇ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮದುವೆಯಾಗದೆ ಒಂದು ಹೆಣ್ಣು-ಗಂಡು ಒಂದೇ ಸೂರಿನಡಿ ಒಟ್ಟಿಗೆ ಬಾಳ್ವೆ ನಡೆಸುತ್ತಿರುವ ಸಂಗತಿಗಳಿದ್ದರೂ, ಈ ವ್ಯವಸ್ಥೆ ಉಚ್ಚವರ್ಗದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ. ಮಧ್ಯಮವರ್ಗದಲ್ಲಂತೂ ಇದನ್ನು ಕೀಳಾಗಿ ಕಾಣಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ವಿವಾಹ ವಿಚ್ಛೇದನಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ, ‘ನಾತಿಚರಾಮಿ’ ಈ ವ್ಯವಸ್ಥೆಯೊಳಗಿನ ಕೆಲವು ಹೆಣ್ಣು ದನಿಗಳನ್ನು ಗಟ್ಟಿಯಾಗಿ ಬಿಂಬಿಸಿವೆ.

ಈ ಚಲನಚಿತ್ರದಲ್ಲಿ ನಾಯಿಯ ಓಟ (ಮನಶ್ಶಾಸ್ತ್ರಜ್ಞನ  ಕೈಯಿಂದ ಬಿಡುಗಡೆಗೊಂಡ), ಅದರ ಉಣ್ಣುವ ಕ್ರಿಯೆ, ಬೆಂಡೆಕಾಯಿ ಪಲ್ಯದ ತಯಾರಿ, ಗಿಡದ ಕಸಿ ಮಾಡುವ ಕಾರ್ಯ, ವಿಂಡ್ ಚೈಮ್ಸ್  ಶಬ್ಧ ಹಾಗೂ ಸಂಪರ್ಕದಿಂದ ಆಗುವ ಅವುಗಳ ಅಲುಗಾಟ, ಕಿಟಕಿ ತೆರೆಯುವಿಕೆ ಮುಂತಾದ ಸಾಮಾನ್ಯ ರೂಪಕಗಳು ದೃಶ್ಯಕಟ್ಟುವಿಕೆಯ ಕಲೆಯನ್ನು ಪ್ರತಿಬಿಂಬಿಸುತ್ತವೆ. ಕೊನೆಯ ಶಾಟ್ ಕಲಾತ್ಮಕವಾಗಿರುವುದರ ಜೊತೆಗೆ ಇತ್ಯಾತ್ಮಕವಾಗಿಯೂ ಇದೆ. ಅನೇಕ ದೃಶ್ಯಗಳಲ್ಲಿ ಹಿನ್ನೆಲೆ ಸಂಗೀತ ಗೌಣವಾಗಿದೆ. ಅಲ್ಲಲ್ಲಿ ಮೌನ ಮನೆಮಾಡಿರುವುದು ಚಲನಚಿತ್ರ ಸೂಸುವ ಭಾವಸ್ಪರ್ಶಕ್ಕೆ ವೀಕ್ಷಕರನ್ನು ದೂಡುತ್ತದೆ; ಅವರು ತಮ್ಮ ಚಿಂತನಾ ಲಹರಿಗಳನ್ನು ಹರಿಬಿಡುವಂತೆ ಮಾಡುತ್ತದೆ. ಬಿಂದುಮಾಲಿನಿ ಹಾಡಿರುವ ಹಾಡುಗಳು ಈ ಚಲನಚಿತ್ರದ ಭಾವಲಯಕ್ಕೆ ಸ್ಪಂದಿಸುವಂತಿವೆ. ವರ್ಣಗಳ ಬಳಕೆ ಗಮನಿಸುವಂತಿದೆ. ಯುವ ವಿಧವೆಯಾಗಿ ನಟಿಸಿರುವ ಶ್ರುತಿ ಹರಿಹರನ್‍ರದ್ದು ಮಾಗಿದ ನಟನೆ. ಉಳಿದ ಕಲಾವಿದರೂ ಸಮರ್ಥವಾಗಿ ಸಾಥ್ ನೀಡಿದ್ದಾರೆ.

ಗೌರಿ ಪ್ರಸ್ತುತ ಕಾಲದ ಬದಲಾವಣೆಗಳ ಜೊತೆಜೊತೆಗೆ ಬಾಳುತ್ತಿದ್ದರೂ, ಆಕೆಯಲ್ಲಿ ಮಧ್ಯಮವರ್ಗದ ಗುಣಲಕ್ಷಣಗಳಿವೆ; ಅವು ಢಾಳಾಗಿವೆ. ನಮ್ಮಲ್ಲಿ ವಿವಾಹವೆಂಬುದನ್ನು ಒಂದು ಮೌಲ್ಯ ಎಂದೇ ಪರಿಗಣಿಸಲಾಗುತ್ತದೆ. ವಿಧವೆಯಾದರೂ ಗೌರಿ ನಾತಿಚರಾಮಿ ಎಂಬ ಪರಿಕಲ್ಪನೆಗೆ ಆತುಕೊಳ್ಳುವ ಪರಿ ಹಾಗೂ ಆಕೆಯ ಮಾವ ಭೇಟಿಯಾದ ತರುವಾಯ ಆಕೆಯಲ್ಲಿ ಏಳುವ ತಳಮಳಗಳು ಮೇಲೆ ತಿಳಿಸಿರುವ ಮೌಲ್ಯದ ಕಲ್ಪನೆಗೆ ಇಂಬುಕೊಡುವಂತೆ ಚಲನಚಿತ್ರದಲ್ಲಿ ಅಭಿವ್ಯಕ್ತಿಗೊಳಿಸಲಾಗಿದೆಯೇ ಎಂಬ ಪ್ರಶ್ನೆಯೂ ಏಳುತ್ತದೆ. ಮಾವನ ಪಾತ್ರ ತುರುಕಿದಂತೆ ಭಾಸವಾಗುತ್ತದೆ.

‘ನಾತಿಚರಾಮಿ’ಯಂತಹ ಪ್ರಯತ್ನಗಳನ್ನು ಕನ್ನಡ ಚಲನಚಿತ್ರ ವೀಕ್ಷಕರು ಬೆಂಬಲಿಸಬೇಕು. ಇದರಿಂದ ಸದಭಿರುಚಿಯ ಚಲನಚಿತ್ರಗಳ ತಯಾರಿಕೆಗೆ ಪುಷ್ಟಿ ನೀಡಿದಂತಾಗುತ್ತದೆ.

ಎಂ.ಎಸ್. ಮುರಳೀಕೃಷ್ಣ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *