ಸಿನಿಮಾತು/ ಪಿತೃಪ್ರಧಾನ ವ್ಯವಸ್ಥೆಗೆ ಕಪಾಳಮೋಕ್ಷ – ಗಿರಿಜಾ ಶಾಸ್ತ್ರಿ

ಸಂಸಾರದೊಳಗೆ ಹೆಣ್ಣು ಎಂದಿಗೂ ಎರಡನೇ ದರ್ಜೆಯ ಪ್ರಜೆ, ಅವಳು ಗಂಡನಿಂದ ಅಪಮಾನ, ತಿರಸ್ಕಾರಗಳನ್ನು ಸಹಿಸಿಕೊಳ್ಳಬೇಕಾದ್ದು ಅನಿವಾರ್ಯ ಎಂಬ ನಮ್ಮ ಸಾಮಾಜಿಕ ನಂಬಿಕೆಯನ್ನು ಪ್ರಶ್ನಿಸಿ ಅದಕ್ಕೆ ಬಲವಾದ ಹೊಡೆತವನ್ನು ಕೊಡುತ್ತದೆ ಅನುಭವ್ ಸಿನ್ಹ ನಿರ್ದೇಶನದ ಹಿಂದಿ ಚಿತ್ರ `ಥಪ್ಪಡ್’.

“ಥಪ್ಪಡ್” ನಂತಹ ಸಿನಿಮಾ ಬರಲು ೨೦೨೦ರವರೆಗೂ ಕಾಯಬೇಕಾಯಿತೇ? ಹೆಂಡತಿಗೆ ಹೊಡೆಯುವ ಹಕ್ಕು ಯಾವ ಗಂಡನಿಗೂ ಇಲ್ಲ ಎನ್ನುವುದು ಈ ಸಿನಿಮಾದ ಸಂದೇಶ.

ಲಂಡನ್ ಗೆ ಹೋಗಲು ತಯಾರಾದ ಗಂಡನಿಗೆ ಅದು ರದ್ದಾಗಿ ಇದ್ದಕ್ಕಿದ್ದಂತೆ ಆಘಾತ. ಅದರಿಂದಾದ ನಿರಾಸೆ ತಾಳಲಾರದೆ ತಾನು ಏರ್ಪಡಿಸಿದ ಪಾರ್ಟಿಯಲ್ಲೇ ತನ್ನನ್ನು ವಂಚಿಸಿದ ಸಹೋದ್ಯೋಗಿಯ ಜೊತೆ ವಾದಕ್ಕೆ ವಾದ ಬೆಳೆದು ಜಗಳ ಬಿಡಿಸಲು ಮಧ್ಯೆ ಬಂದ ಹೆಂಡತಿಯ ಕಪಾಲಕ್ಕೆ ಬೀಸಿ ಹೊಡೆಯುತ್ತಾನೆ. ‘ಗಂಡ ತಾನೇ ಹೊಡೆದದ್ದು? ಸಹಿಸಿಕೊಂಡು ಹೋಗ ಬೇಕಪ್ಪ ‘ ಇದು ಲಾಗಾಯ್ತಿನಿಂದ ನಮ್ಮ ಹೆಣ್ಣು ಮಕ್ಕಳಿಗೆ ಹೇಳಿಕೊಡುವ ಪಾಠ. ಹೆಂಡತಿಯನ್ನು ಹೊಡೆಯುವ ಹಕ್ಕು ನಿನಗಿಲ್ಲ ಎಂದು ಯಾವ ತಂದೆ ತಾಯಿಯೂ ತಮ್ಮ ಗಂಡು ಮಕ್ಕಳಿಗೆ ಹೇಳಿಕೊಡುವುದಿಲ್ಲ. ಬದಲಾಗಿ ಹೊಡೆಯದಿದ್ದರೆ ಅವನ ಗಂಡಸುತನವನ್ನೇ ಅಪಮಾನ ಮಾಡಲಾಗುತ್ತದೆ.

ಇತ್ತ ಹೆಣ್ಣು ಮಕ್ಕಳಿಗೂ ಗಂಡ ಎಸಗುವ ತಪ್ಪು ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಬದಲು ಸಹನೆಯ ಪಾಠ ಹೇಳಲಾಗುತ್ತದೆ. ಅವಳೂ ಅವನಿಗೆ ಹೊಡೆಯಬಹುದು ಆದರೆ ಹೊಡೆಯುವುದಿಲ್ಲ.( ಮಧ್ಯಮವರ್ಗ ದ ಹೆಣ್ಣು) ಗಂಡ ಪರಮೇಶ್ವರ ಅವನನ್ನು ಹೇಗೆ ಹೊಡೆದಾಳು? ಸಮಾಜದ ಮಾನ ಮರ್ಯಾದೆ ಗೆ ಅಂಜಿ ಸಹಸಿಕೊಳ್ಳುತ್ತಾಳೆ. ಹಾಗೆ ಹೊಡೆಸಿಕೊಂಡು ಸುಮ್ಮನಿರುವ ಹೆಣ್ಣು ಪತಿವ್ರತೆ. ಆದುದರಿಂದಲೇ ಅವಳ ಪರಿವಾರ ಸುಖೀ ಪರಿವಾರ ಎಂದು ನಂಬಿಸಲಾಗುತ್ತದೆ.

ಗಂಡಸಿಗೆ ಎಷ್ಟೇ ಕೋಪ ಬಂದರೂ ಅವನು ತನ್ನ ಮೇಲಧಿಕಾರಿಯನ್ನು ಹೊಡೆಯಲಾರ. ಕೆಲಸದ ಒತ್ತಡದಿಂದಾದ ಹತಾಶೆ ಕೋಪವನ್ನು ಹೆಂಡತಿಯನ್ನು ಹೊಡೆಯುವುದರ ಮೂಲಕ ಹೊರಹಾಕುತ್ತಾನೆ. ಯಾಕೆಂದರೆ ಇವನ ಅಧಿಕಾರ ಮೇಲಧಿಕಾರಿಯಮೇಲೆ ನಡೆಯುವುದಿಲ್ಲ. ಅವನ ಅಧಿಕಾರ ನಡೆಯುವುದೇನಿದ್ದರೂ ಅವನ ಅಡಿಯಾಳುಗಳ ಮೇಲೆ. ಹೆಂಡತಿ ಅವನ ಅಡಿಯಾಳಾಗಿರುವುದರಿಂದ ಅವಳ ಮೇಲೆ ತನ್ನ ಅಧಿಕಾರ ಚಲಾಯಿಸುತ್ತಾನೆ. ಹೀಗಾಗಿ ಹೆಂಡತಿಗೆ ಹೊಡೆಯುವುದು ಅವನ ಅಘೋಷಿತ ಹಕ್ಕು ಆಗಿಬಿಡುತ್ತದೆ.

ಡೈವೋರ್ಸ್ ವರೆಗೆ ಹೋದ ಕತೆಯಲ್ಲಿ ನಾಯಕಿ ಕೇಳುವುದಿಷ್ಟೇ ಕೇವಲ ತನ್ನ ಘನತೆ, ಮರ್ಯಾದೆ, ಗಂಡನ ಆಸ್ತಿಯ ಭಾಗವನ್ನಲ್ಲ. ಇಪ್ಪತ್ತೊಂದನೆ ಶತಮಾನದಲ್ಲೂ ಹೆಣ್ಣು ತನ್ನ ಘನತೆಗಾಗಿ ಹೋರಾಡಬೇಕಾಗಿರುವುದು ದುರಂತವೇ ಸರಿ.

  • ಗಿರಿಜಾ ಶಾಸ್ತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *