FEATUREDಸಿನಿಮಾತು

ಸಿನಿಮಾತು/ ನಾಲ್ಕು ಕಥೆಗಳಲ್ಲಿ ಜೀವಂತಿಕೆಯ ನೇಯ್ಗೆ – ಮಮತಾ ಅರಸೀಕೆರೆ

“ಸಿಲ್ಲು ಕರುಪಟ್ಟಿ” – ಚಿರಪರಿಚಿತ ಪಾತ್ರಗಳು, ಮಧುರ ಆಲೋಚನೆಗಳು ಮತ್ತು ಮನುಷ್ಯ ಸಹಜ ಸಂಬಂಧಗಳಿರುವ ನಾಲ್ಕು ಕತೆಗಳ ನವಿರಾದ ನೇಯ್ಗೆಯಿಂದ ಗಮನ ಸೆಳೆಯುವ ತಮಿಳು ಸಿನಿಮಾ. ಇದರಲ್ಲಿ ಹೆಣ್ಣಿನ ಭಾವನೆಗಳನ್ನು ಅವಳ ಮನಸ್ಸಿನ ಆಳದಿಂದ ಹೊರತೆಗೆದು ಒಂದಿಷ್ಟೂ ಸಿಕ್ಕಿಲ್ಲದೆ ಮುಂದಿಡುವ ಬಗೆ ಬಹಳ ಸುಂದರವಾಗಿದೆ.

ಸಂಬಂಧಗಳ ಬಗ್ಗೆ ನವಿರಾಗಿ ಹೇಳುತ್ತಾ ಸಾಗುವ ” “ಸಿಲ್ಲು ಕರುಪಟ್ಟಿ” ತಮಿಳು ಚಿತ್ರವನ್ನ ಮನ್ಸೋರೆಯವರು ಕಡ್ಡಾಯವಾಗಿ ನೋಡಿ ಅಂದಿದ್ದರು. ಕುತೂಹಲದಿಂದ ಅಂದೇ ನೆಟ್‍ಫ್ಲಿಕ್ಸ್ ಗೆ ಚಂದಾದಾರಳಾಗಿ ಸಿನೆಮಾ ನೋಡಿದೆ. ಅಷ್ಟೆ. ಅದೆಷ್ಟು ಮನಸ್ಸಿಗೆ ತಾಕಿತು ಅಂದರೆ ಮತ್ತೆ ಮತ್ತೆ ಮೂರು ಬಾರಿ ನೋಡಿದೆ. ಚಿಕ್ಕಚಿಕ್ಕದಾಗಿ ಸಾಗುವ ಮಧುರವೆನಿಸೊ ನಾಲ್ಕು ಕತೆಗಳು, ಅಲ್ಲಿನ ದೃಶ್ಯಗಳು, ಸಂಗೀತದ ಹಿನ್ನೆಲೆ, ಸಹಜ ಸಾಧಾರಣವೆನಿಸುವ ಪಾತ್ರವರ್ಗ, ಉತ್ತಮ ಛಾಯಾಗ್ರಹಣ ಎಲ್ಲ ಹಿಡಿಸಿಬಿಟ್ಟವು.

ಚಿರಪರಿಚಿತವೆನಿಸುವ ಪಾತ್ರಗಳು, ಮಧ್ಯಮವರ್ಗಕ್ಕೆ ಹತ್ತಿರವೆನಿಸುವ ಕತೆಗಳು. ಸಾಮಾನ್ಯವಾಗಿ ಕತೆಗಳಲ್ಲಿ ಪುನರಾವರ್ತನೆಯಾಗುವ ಮನುಷ್ಯ ಸಂಬಂಧಗಳ ನಡುವಿನ ಪ್ರೀತಿ, ಸಂಪರ್ಕ, ಆಪ್ತತೆ, ಸೆಳೆತ ಮೊದಲಾದ ಗುಣಗಳನ್ನೊಳಗೊಂಡ ಕತಾಸಂಗಮ. ನಿರ್ದೇಶಕಿ ಹಲಿತಾ ಶಮೀಮ್ ಅವರ ಸೂಕ್ಷ್ಮಸಂವೇದನೆ ಇಲ್ಲಿ ಸ್ಪಷ್ಟವಾಗಿ ಅರ್ಥವಾಗುತ್ತದೆ

ಈ ಸಿನೆಮಾದಲ್ಲಿ ಒಟ್ಟು ನಾಲ್ಕು ಕತೆಗಳ ಗುಚ್ಛವಿದೆ. ಮೊದಲನೆಯದು ಪಿಂಕ್ ಬ್ಯಾಗ್, ಕಾಕಾ ಕಾಡಿ, ಟರ್ಟಲ್ಸ್, ಹೇ ಅಮ್ಮು … ನಾಲ್ಕೂ ವಿವಿಧ ವಯೋಮಾನದ ಜೀವಂತಿಕೆಯ ಕತೆಗಳು. ಸಣ್ಣ ಸಣ್ಣ ಸಂದರ್ಭಗಳನ್ನೂ ಬಿಡದೇ ಕತೆಯ ಅಂಗವನ್ನಾಗಿ ಮುಖ್ಯ ಸಂಗತಿಯನ್ನಾಗಿ ಕಾಣಿಸುವಂತಹ ನೇಯ್ಗೆಗಳು. ಅವೇ ಪುಟ್ಟಪುಟ್ಟ ಘಟನೆಗಳೇ ಬದುಕಿನ ಬಹುಮುಖ್ಯ ಪಾತ್ರವಾಗುತ್ತದೆನ್ನುವ ಸಂದೇಶ ಸಾರುತ್ತವೆ.

ಪಿಂಕ್ ಬ್ಯಾಗ್

ಅದೊಂದು ಸ್ಲಂ ಪ್ರದೇಶ. ಹತ್ತಿರದಲ್ಲೇ ಇಡೀ ನಗರದ ಕಸವನ್ನ ತಂದು ಸುರಿಯುವ ದೊಡ್ಡ ಬಯಲು. ಸ್ಲಂನಲ್ಲಿ ವಾಸಿಸುವ ಮಕ್ಕಳಿಗೆ ಅದೇ ಕಸ ಆಯುವ ಸ್ಥಳ, ಆಟದ ಮೈದಾನ ಎಲ್ಲಾ. ಕಸದ ದೊಡ್ಡ ಗುಡ್ಡವೊಂದರ ಮೇಲೆ ಮಕ್ಕಳೆಲ್ಲಾ ಸೇರಿ ಜನ್ಮದಿನ ಆಚರಿಸಿಕೊಳ್ಳುವ ಸಂಭ್ರಮ. ಆ ಜೀವಂತಿಕೆ ಬೇರೆಲ್ಲೂ ಕಾಣಲು ಸಾಧ್ಯವೇ ಇಲ್ಲವೇನೋ ಎನ್ನುವಂತೆ ಅವರ ಉತ್ಸಾಹದ ಚಹರೆಗಳನ್ನು ಸೆರೆಹಿಡಿಯಲಾಗಿದೆ. ಆ ಸ್ಲಂನಲ್ಲೂ ಕೂಡ ಮನುಷ್ಯರ ಸಂಚಾರ, ಪರಸ್ಪರ ಅಗತ್ಯಗಳನ್ನು ಪೂರೈಸಿಕೊಳ್ಳುವ ಘಟನೆಗಳು ಜರುಗುತ್ತವೆ.

ಆ ಕಸದ ಗುಡ್ಡದ ಮೇಲೆ ದಿನಾ ಪಿಂಕ್ ಬ್ಯಾಗೊಂದು ಬಂದು ಬೀಳುತ್ತಿರುತ್ತದೆ. ಅದನ್ನು ಆ ಗುಂಪಿನ ಹದಿಹರಯದವನಾದ ಮಾಂಜ ಎತ್ತಿಕೊಳ್ಳುತ್ತಾನೆ. ಅದರಲ್ಲಿ ಕೆಲವು ವಸ್ತುಗಳ ಜೊತೆಗೆ ಕ್ಯಾಸೆಟ್ ಪ್ಲೇಯರ್, ಗ್ರೀಟಿಂಗ್ ಕಾರ್ಡ್ ಸಿಗುತ್ತದೆ. ಕಾರ್ಡಿನಲ್ಲಿ ಒಂದು ಹುಡುಗಿಯ ಫೋಟೊ. ಅದನ್ನ ಜೋಪಾನವಾಗಿ ಕನ್ನಡಿ ಹಿಂದೆ ಬಚ್ಚಿಡುವ ಮಾಂಜ ಕ್ಯಾಸೆಟ್ ಪ್ಲೇಯರ್‍ನಲ್ಲಿ ಆ ಹುಡುಗಿ ಹಾಡಿದ್ದನ್ನ ಕೇಳಿಸಿಕೊಳ್ಳುತ್ತಾ ಆಕೆಯ ಬಗ್ಗೆ ಕಲ್ಪನೆಗಳ ನ್ನು ಕಟ್ಟಿಕೊಳ್ಳುತ್ತಾನೆ. ಮತ್ತೊಂದು ದಿನ ಪಿಂಕ್ ಬ್ಯಾಗಿನಲ್ಲಿ ಆಕೆಯ ಉಂಗುರವೊಂದು ಕಂಡು ಆ ಪ್ಲೇಯರ್ ಮತ್ತು ಉಂಗುರ ಎರಡನ್ನೂ ದಾರದಲ್ಲಿ ಬಿಗಿದು ಹೇಗಾದರೂ ಅವನ್ನು ಆ ಹುಡುಗಿಗೆ ತಲುಪಿಸಬೇಕೆಂದು ಆ ಹುಡುಗಿಯ ಮನೆ ಬಳಿ ಠಳಾಯಿಸುತ್ತಾನೆ.

ಆಕೆ ಮಿಟ್ಟಿ. ಶ್ರೀಮಂತ ಮನೆತನದ ಹುಡುಗಿ. ಅವಳ ಮನೆ ಮುಂದಿನ ಆ ಬೀದಿಯೇ ನಿರ್ಮಾನುಷ. ವiಂಜ ಕಸದ ತೊಟ್ಟಿಯ ಹಿಂದೆ ಕುಳಿತು ಒಂದೆರಡು ದಿನ ಆ ಹುಡುಗಿಗಾಗಿ ಕಾಯುತ್ತಾನೆ. ಕೊನೆಗೆ ಬೀಚಿನಲ್ಲಿ ಹುಡುಗಿಯನ್ನ ಕಂಡು ಹೇಗೋ ಮಾಡಿ ಅವಳ ವಸ್ತುಗಳನ್ನು ತಲುಪಿಸಿ ಓಡುತ್ತಾನೆ. ಆಕೆಯ ತುಟಿಯಲ್ಲೊಂದು ಮುಗುಳ್ನಗು.

ಕಾಕಾ ಕಾಡಿ

ಮುಖಿಲನ್ ಒಬ್ಬ ಟೆಕಿ ಹಾಗೂ ಹವ್ಯಾಸಕ್ಕಾಗಿ ಮೆಮೆಗಳನ್ನು ಸೃಷ್ಟಿಸುವನು. ಎಲ್ಲವೂ ಸುಗಮವಾಗಿರುವಾಗ ಆತನಿಗೆ ಕ್ಯಾನ್ಸರ್ ರೋಗ ಅಟಕಾಯಿಸಿಕೊಳ್ಳುತ್ತದೆ. ಇದರಿಂದ ಆತನಿಗೆ ನಿಕ್ಕಿಯಾಗಿದ್ದ ಹುಡುಗಿ ತಪ್ಪಿಹೋಗುತ್ತಾಳೆ. ಪ್ರತಿದಿನ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಹುಡುಗಿಯೊಬ್ಬಳು ಆತ ಹೋಗುತ್ತಿದ್ದ ಊಬರ್ ವಾಹನವನ್ನ ಶೇರ್ ಮಾಡುತ್ತಿರುತ್ತಾಳೆ. ಈತನ ಹತಾಶೆಯನ್ನು ಗಮನಿಸಿ ಒಂದು ದಿನ ಆತನನ್ನು ಮಾತಿಗೆಳೆಯುತ್ತಾಳೆ. ಅಂದಿನಿಂದ ಅವರು ಎಲ್ಲಾ ವಿಷಯಗಳ ಬಗ್ಗೆ ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ. ಈ ಮಾತುಕತೆಯಲ್ಲಿ ಲಘು ಹಾಸ್ಯವನ್ನು ತುಂಬುವ ಮೂಲಕ ನಿರ್ದೇಶಕರು ಮಾಡುವ ಪ್ರಯತ್ನವನ್ನು ಮೆಚ್ಚಬೇಕು. ಚಿನಕುರಳಿಯಂತಹ ಸಂಭಾಷಣೆಗಳು ಕಚಗುಳಿಯಿಡುತ್ತವೆ. ಮುಖಿಲನ್ ಸೃಷ್ಟಿಸುವ ಮೆಮೆಗಳ ಅಭಿಮಾನಿಯಾಗಿ ಆಕೆ ಮುಖಿಲನ್‍ನಲ್ಲಿ ಜೀವನೋತ್ಸಾಹವನ್ನು ತುಂಬುತ್ತಾಳೆ. ಆತ ಆಸ್ಪತ್ರೆ ಸೇರಿದಾಗ ಅಲ್ಲಿಯೂ ಹಿಂಬಾಲಿಸಿ ಉಡುಗೊರೆಗಳ ಮೂಲಕ ಆತ್ಮಬಲ ತುಂಬುತ್ತಾಳೆ.

ಟರ್ಟಲ್ಸ್

ಬದುಕಿನ ಇಳಿಸಂಜೆಯಲ್ಲಿರುವ ನವನೀತನ್‍ಗೆ ಪಾರ್ಕಿನಲ್ಲಿ ಮೊಮ್ಮಗಳೊಂದಿಗೆ ಜಾರುಬಂಡೆಯಾಡುತ್ತಿರುವ ಯಶೋದ ಕಾಣಸಿಗುತ್ತಾ, ಕುತೂಹಲ ಮೂಡಿಸುತ್ತಾಳೆ. ಆಕಸ್ಮಿಕವಾಗಿ ಚೆಕಪ್‍ಗೆಂದು ಬಂದವರು ಆಸ್ಪತ್ರೆಯಲ್ಲಿ ಇಬ್ಬರೂ ಮಾತಿಗೆ ಸಿಗುತ್ತಾರೆ. ಯಶೋದ ಆಮೆಗಳನ್ನು ಸಂರಕ್ಷಿಸುವ ಸಂಸ್ಥೆಯೊಂದರಲ್ಲಿ ಸ್ವಯಂ ಸ್ಫೂರ್ತಿಯಿಂದ ಕೆಲಸ ಮಾಡುವವಳು. ಆ ದಿನ ನವನೀತನ್‍ರನ್ನು ಬೀಚಿಗೆ ಆಹ್ವಾನಿಸುತ್ತಾಳೆ. ಇಡೀರಾತ್ರಿ ಆಮೆಗಳನ್ನು ಸಂರಕ್ಷಿಸುತ್ತಾ ಬೀಚಿನಲ್ಲಿ ಕಳೆಯುವ ಅವರು ಬೆಳಗಾಗುವರೆಗೆ ಮಾತನಾಡುತ್ತಾ ತಮ್ಮ ಸ್ವಂತ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಆತ ವಿಧುರ, ಈಕೆ ಅವಿವಾಹಿತೆ.

ಬೀಚಿನಲ್ಲಿ ಜೋಡಿಗಳ ಚುಂಬನ ಕಂಡ ನವನೀತನ್ ತುಂಟತನ ಮಾಡಲುಹೋಗಿ ಯಶೋದ ಮುನಿಸಿಕೊಳ್ಳುತ್ತಾಳೆ. ಹೇಗೋ ಸಮಾಧಾನ ಮಾಡುವ ಆತ ಮತ್ತೊಮ್ಮೆ ಭೇಟಿಯಾಗಲು ಆಹ್ವಾನಿಸಿದಾಗ ಅದೇ ಹುರುಪಲ್ಲಿ ಅಲಂಕರಿಸಿಕೊಂಡು ಯಶೋದ ಮನೆಯಿಂದ ಹೊರಡುತ್ತಾಳೆ. ಪುಟ್ಟ ಆಘಾತಕ್ಕೆ ಸಿಲುಕಿ ಆಸ್ಪತ್ರೆ ಸೇರಿದ ಆಕೆಯ ವಿಷಯ ಗೊತ್ತಾಗದೆ ನವನೀತನ್‍ಗೆ ತಳಮಳ. ಆಟೋದವರ ಸಹಾಯದಿಂದ ಯಶೋದಳ ಮನೆಯನ್ನು ಪತ್ತೆ ಹಚ್ಚುವ ಆತ ಮನೆಗೆ ತೆರಳಿ ಸಮಾಧಾನಿಸುವ ಮೂಲಕ ಇಬ್ಬರೂ ಹತ್ತಿರವಾಗುತ್ತಾ, ಪರಸ್ಪರರ ಕೊರತೆಗಳನ್ನು ತುಂಬುವಂತೆ ಪ್ರೇರೇಪಣೆಗೊಳ್ಳುತ್ತಾ ಆಸರೆಯಾಗುತ್ತಾರೆ. ಇಲ್ಲಿ ಇಳಿವಯಸಿನ ಪ್ರೇಮದ ತಲ್ಲಣ, ದುಗುಡ, ವ್ಯಕ್ತವಾಗಿರುವ ಪರಿ ಅನನ್ಯ.

ಹೇ ಅಮ್ಮು

ಧನಪಾಲ್ ತನ್ನತ್ತಲೇ ಸದಾ ಗಮನ ಇರಬೇಕೆಂದು ಬಯಸುವ ಪತಿ. ಮನೆಯಲ್ಲಿ ಯಂತ್ರದಂತೆ ಕೆಲಸ ಮಾಡುವ ಅಮುದಿನಿ ಮತ್ತು ಮೂವರು ಮಕ್ಕಳಿರುವ ಕುಟುಂಬವಿದೆ. ಆತ ಆಕೆಯನ್ನ ತನ್ನಿಚ್ಛೆಯನ್ನು ಪೂರೈಸಲೇ ಇರುವವಳು ಎಂಬಂತೆ ವರ್ತಿಸುವವ. ಅಮುದಿನಿಗೆ ಅರ್ಥಪೂರ್ಣ ಜೀವನ ಮತ್ತು ತೃಪ್ತಿಕರ ಲೈಂಗಿಕಾಸಕ್ತಿ. ಈ ವಿಷಯದ ಬಗ್ಗೆ ಹೇಳುವ ಸಾಕಷ್ಟು ಸಿನೆಮಾಗಳಿವೆಯಾದರೂ ಸ್ತ್ರೀಯ ಮನ, ಮೆದುಳು ಏನನ್ನು ಬಯಸುತ್ತದೆ ಎಂಬ ವಿಷಯದಲ್ಲಿ ವ್ಯವಹರಿಸಿರುವ ಸಿನೆಮಾ ಕಡಿಮೆಯೆ. ತನ್ನನ್ನು ಅಲಕ್ಷಿಸುವ ವಿಷಯವಾಗಿ ಅಮುದಿನಿ ಗಂಡನೊಂದಿಗೆ ವಾದಕ್ಕೆ ಬೀಳುತ್ತಾಳೆ. ಆತ ಅಲೆಕ್ಸಾ ಯಂತ್ರವನ್ನು ಕೊಂಡುತರುತ್ತಾನೆ.

ಕೊನೆಗೆ ಆಕೆ ಅಲೆಕ್ಸಾ ಎಂಬ ಬ್ಲೂಟೂತ್‍ನ ಮೂಲಕ ಚಲಾಯಿಸಲ್ಪಡುವ ಯಂತ್ರದೊಂದಿಗೆ ತನ್ನೆಲ್ಲಾ ಭಾವನೆಗಳನ್ನು ಹಂಚಿಕೊಳ್ಳುವಾಗ ಅದೂ ಸ್ಪಂದಿಸುತ್ತದೆ. ಇದೇ ರೀತಿ ಕೆಲವು ದಿನಗಳು ಜರುಗಿ ಅದೇ ಅಲೆಕ್ಸಾ ಮೂಲಕ ಧನಪಾಲನಿಗೆ ಆಕೆಯ ಮನೋಇಂಗಿತ ಅರಿವಾಗಿ ವರ್ತನೆ ಬದಲಾಗುತ್ತದೆ. ಆತ ಫೋನಿನಲ್ಲೆ ಐ ಲವ್ ಯು ಹೇಳುವಾಗ ಆಕೆ ಹಿಡಿದಿದ್ದ ಫೋನ್ ಸಾಂಬಾರಿನಲ್ಲಿ ಬೀಳುವುದು, ಆತ ಆಕೆಯೊಂದಿಗೆ ಶಾಪಿಂಗಿಗೆ ಹೋಗುವ ದೃಶ್ಯ ಪರಿಣಾಮಕಾರಿಯಾಗಿದೆ.

ಎಲ್ಲಿಯೂ ಕಸಿವಿಸಿಯಾಗದಂತೆ ಕಂಡೂ ಕಾಣದಂತೆ ಮಧು, ಮುಖಿಲನ್ ನಡುವಿನ ಪೋಲಿ ಮಾತುಗಳು, ಇಳಿವಯಸಿನ ಪ್ರೇಮದ ನಿಭಾಯಿಸುವಿಕೆ, ಅಮುದಿನಿಯ ಲೈಂಗಿಕ ಬೇಡಿಕೆ ಮೊದಲಾದ ಅಂಶಗಳನ್ನು ಎಚ್ಚರಿಕೆಯಿಂದ ಮೃದುವಾಗಿ ನಿರ್ವಹಿಸಲಾಗಿದೆ.

ಸ್ಲಂ ಲೋಕದ ವಾತಾವರಣದಲ್ಲಿನ ಜೀವಂತಿಕೆ, ಮಧುವಿನ ಪ್ರೀತಿಯ ವ್ಯಾಖ್ಯಾನ, ಮುಖಿಲನ್‍ನ ಹತಾಶೆಗೆ ನಾಯಿಯ ಉಪಮೆ, ನವನೀತನ್ ಕೃಷ್ಣನ ಹೆಸರಾದರೆ ಯಶೋದ ತಾಯಿಯ ಹೆಸರು, ಮುನಿಸಿಕೊಂಡ ಯಶೋದಳನ್ನು ಒಲಿಸುವಾಗ ಟೀ ಕಪ್ ಕೊಟ್ಟು ನವನೀತನ್ `ಆಡೆಡ್ ಡಿಗ್ನಿಟಿ’ ಎನ್ನುವುದು, ಮನೆಯಲ್ಲಿ ಅಸಹಾಯಕಳಾಗಿ ಮಲಗಿದ ಯಶೋದಳ ನೆರಳಿಗೆ ಮುತ್ತಿಡುವುದು, ಗೃಹಿಣಿ ಅಮುದಿನಿಯ ನೇರ, ತಣ್ಣನೆ ಮಾತುಗಳು, ಅಪ್ಪ ಧನಪಾಲನಿಗೆ ಅರ್ಥವಾಗದ ಆಕೆಯ ಮನೋಇಂಗಿತವನ್ನ ಮಕ್ಕಳ ಮೂಲಕ ಹೇಳಿಸುವುದು, ಗಟ್ಟಿಯಾಗಿ ಮಾತನಾಡುವ ಧನಪಾಲನಿಗೆ ಕೊನೆಗೆ ಅಲೆಕ್ಸಾ ಕೂಡ ಉತ್ತರಿಸದೆ ಮಕ್ಕಳು ಮತ್ತು ಅಮುದಿನಿ ದನಿಗೆ ಮಾತ್ರ ಸ್ಪಂದಿಸುವುದು, ಗಡಿಯಾರದ ಮುಳ್ಳಿನ ಶಬ್ದ, ಶಾಲಾವಾಹನದ ಚಾಲಕ ಅಮುದಿನಿಯ ಹೇರ್ ಕಟ್ ಬಗ್ಗೆ ಮಾತನಾಡುವುದು, ತಪ್ಪನ್ನರಿತುಕೊಂಡು ಧನಪಾಲ್ ಹೆಂಡತಿಯನ್ನ ಹುಡುಕಿ ಮಾಲ್‍ಗೆ ಹೋಗುವುದು ಮೊದಲಾದ ಸೂಕ್ಷ್ಮ ಕುಸುರಿಯ ದೃಶ್ಯಗಳು, ಸಣ್ಣ ಪುಟ್ಟದೆಂದು ಅವಜ್ಞೆ ಮಾಡದಂತೆ ನಿರಂತರ ವೀಕ್ಷಿಸುತ್ತಿರುವಂತೆ ಮಾಡುವ ಅಂಶಗಳು ಚಿತ್ರದುದ್ದಕ್ಕೂ ಇವೆ.

ಪ್ರತೀ ಕತೆಯಲ್ಲೂ ಮೊದಲಿನ ಕತೆಯ ಪಾತ್ರಧಾರಿಗಳು ಕ್ಷಣದ ದೃಶ್ಯದಲ್ಲಾದರೂ ಹಾದುಹೋಗುವಂತೆ ನಿರೂಪಿಸುವ ಮೂಲಕ ಕತೆಗಳ ನಡುವೆ ಸಂಪರ್ಕ ಸಾಧಿಸಲಾಗಿದೆ. ಸಂಬಂಧಗಳ ನಡುವಿನ ನವಿರುತನವನ್ನ ನಯವಾಗಿ ಹೇಳುವ ಚಿತ್ರ ಬಹಳ ಇಷ್ಟದಿಂದ ನೋಡಿಸಿಕೊಳ್ಳುತ್ತದೆ , ಖಂಡಿತ ಒಮ್ಮೆ ಹಾಗೂ ಮತ್ತೊಮ್ಮೆ ವೀಕ್ಷಿಸಲೇನೂ ಅಡ್ಡಿಯಿಲ್ಲ.

-ಮಮತಾ ಅರಸೀಕೆರೆ

-ಮಮತಾ ಅರಸೀಕೆರೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *