Uncategorizedಸಿನಿಮಾತು

ಸಿನಿಮಾತು/ ದೌರ್ಜನ್ಯದ ವಿರುದ್ಧ ಎತ್ತಿದ ದನಿ – ಮಂಜುಳಾ ಪ್ರೇಮ್‍ಕುಮಾರ್

ಮನೆ, ಮನೆತನದ ಮರ್ಯಾದೆಗೋಸ್ಕರ ಮಗಳ ಮೇಲಿನ ಅತ್ಯಾಚಾರವನ್ನೂ ಮುಚ್ಚಿಡುವುದು ಲೋಕದ ಎಲ್ಲ ಸಮಾಜಗಳಲ್ಲಿ ಕಾಣುವ ಕಹಿಸತ್ಯ. ಅದನ್ನು ವಿರೋಧಿಸುವವರು ಶಿಕ್ಷೆಗೆ ಒಳಪಡುವುದೂ ಎಲ್ಲೆಡೆ ಕಾಣುವ ಕಟುಸತ್ಯ. ಇವುಗಳ ಜೊತೆ, ಕೊಲೆಯನ್ನು ಸದುದ್ದೇಶದಿಂದ ಮಾಡಿದ್ದರೂ ಗರಿಷ್ಠ ಮಟ್ಟದ ಶಿಕ್ಷೆ ತಪ್ಪಿದ್ದಲ್ಲ ಎನ್ನುವುದನ್ನೂ ಹೇಳುವ ಇರಾನ್ ಸಿನಿಮಾ “ಹುಷ್! ಗರ್ಲ್ಸ್ ಡೋಂಟ್ ಸ್ಕ್ರೀಮ್” ಹಲವು ದೃಷ್ಟಿಗಳಿಂದ ಜಗತ್ತಿನ ಗಮನ ಸೆಳೆದಿದೆ. ಹೆಣ್ಣುಮಕ್ಕಳ ಮೇಲಿನ ನಿರಂತರ ದೌರ್ಜನ್ಯವನ್ನು ಖಂಡಿಸಿ ಕೂಗಿ ಪ್ರಶ್ನಿಸುತ್ತಿದೆ.

ಧಾರ್ಮಿಕ ಮೂಲಭೂತ ವಾದವನ್ನು ಒಪ್ಪಿಕೊಂಡಿರುವ ಅನೇಕ ರಾಷ್ಟ್ರಗಳಲ್ಲಿ ಬೇರೆ ಬೇರೆ ಅಪರಾಧಗಳ ಜೊತೆಗೆ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತ ಬಂದಿವೆ ಮತ್ತು ನಡೆಯತ್ತಿವೆ. ಭಾರತವು ಇದಕ್ಕೆ ಹೊರತಾಗಿಲ್ಲ. ಹಲವು ದೇಶಗಳಲ್ಲಿ ಲೈಂಗಿಕ ಅಪರಾಧ ಮಾಡಿದವರನ್ನ ಶಿಕ್ಷಿಸುವ ವಿಷಯದಲ್ಲಿ ಕಾನೂನಿನಲ್ಲೆ ತೊಡಕಿರುವುದು ಗೋಚರವಾಗುತ್ತದೆ. ಇಂತಹ ಕಿರುಕುಳಕ್ಕೆ ಒಳಗಾದವರಿಗೆ ರಕ್ಷಣೆ ನೀಡುವಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಚಿತ್ರರಂಗವು “ಇಂಥ ದೃಶ್ಯಗಳನ್ನು ಸಿನೆಮಾಗಳಲ್ಲಿ ವೈಭವೀಕರಿಸಿ ತೋರಿಸಿ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತವೆ ” ಎಂಬುದು ಬಹುತೇಕರ ವಾದ.

“ಇಂಥ ದೃಶ್ಯಗಳನ್ನು ತೋರಿಸುವುದರ ಮೂಲಕ ಸಮಾಜದ ಮೇಲಾಗುವ, ವಿಶೇಷವಾಗಿ ಮಹಿಳೆ ಮತ್ತು ಮಕ್ಕಳ ಮೇಲಾಗುವ ಪರಿಣಾಮದ ಅರಿವನ್ನು ಮೂಡಿಸುತ್ತವೆ” ಎನ್ನುವವರು ಇದ್ದಾರೆ. ಇಂಥ ಹೇಳಿಕೆಗೆ ನಿದರ್ಶನ ಎನ್ನುವಂತಿದೆ ಇರಾನ್ ದೇಶದ ಸಿನಿಮಾ “ಹುಷ್! ಗರ್ಲ್ಸ್ ಡೋಂಟ್ ಸ್ಕ್ರೀಮ್”.

ಈ ಸಿನಿಮಾ ಜಗತ್ತಿನ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿದೆ. ಇದರ ನಿರ್ದೇಶಕರು ಪೌರಾನ್ ದೇರಕ್ಷಾಂದೇಹ್. ಪೌರಾನ್, ಪ್ರತಿಭಾವಂತೆ, ಸೂಕ್ಷ್ಮ ಸಂವೇದನೆಯ, ಪ್ರಗತಿಪರ ಚಿಂತನೆಯ ಮಹಿಳೆ. ನಿರ್ದೇಶಕಿಯಷ್ಟೇ ಅಲ್ಲದೆ ನಿರ್ಮಾಪಕಿ ಮತ್ತು ಸಂಭಾಷಣಾಕಾರರು ಸಹ. ಟೆಹರಾನಿನ ಪ್ರತಿಷ್ಠಿತ ಸಂಸ್ಥೆಗಳಯ ಪಧವೀಧರೆ. ಸುಮಾರು ಹತ್ತಕ್ಕಿಂತಲೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.

ಇರಾನಿನ ಕರ್ದಿಷ್ ಪ್ರಾಂತ್ಯದಲ್ಲಿ ಜನರನ್ನು ಕಾಡುತ್ತಿದ್ದ ‘Plague’ ಕಾಯಿಲೆಯ ಪರಿಣಾಮಗಳ ಬಗೆಗಿನ ಸಾಕ್ಷ್ಯ ಚಿತ್ರವೇ ಮೊದಲನೆಯದು. ಆ ನಂತರ (1986) ಕಾಲಿಟ್ಟಿದ್ದು ಪೂರ್ಣಪ್ರಮಾಣದ ಚಲನಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನದತ್ತ , ‘ಮ್ಯೂಟ್ ಕಾಂಟ್ಯಾಕ್ಟ್’ ಮೊದಲ ಸಿನಿಮಾ . ಇಲ್ಲಿಂದ ಆರಂಭವಾಯಿತು ಪೌರಾನ ಅವರ ಸಿನಿ ಪಯಣ. ಸುಮಾರು ಹದಿಮೂರಕ್ಕಿಂತಲೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಮಹಿಳಾ ಪರ ಸಿನಿಮಾಗಳು.

“ಹುಷ್! ಗರ್ಲ್ಸ್ ಡೋಂಟ್ ಸ್ಕ್ರೀಮ್” ಆರಂಭದ ದೃಶ್ಯವೇ ಹೀಗೆ ತೆರೆದುಕೊಳ್ಳುತ್ತದೆ, ಮದುವೆಯ ದಿನ ವಧು ಶಿರೀನ್ ನೈಮಿ (ನಟಿ ತನ್ನಾಜ್ ತಬತಬಾಯ್) ದಿಗ್ಬ್ರಮೆಗೊಂಡು ನಿಂತಿದ್ದಾಳೆ. ಧರಿಸಿರುವುದು ಅಚ್ಚ ಬಿಳಿಯ ಉಡುಪು, ಉಡುಪಿನ ಮೇಲೆ ಅಲ್ಲಲ್ಲಿ ರಕ್ತದ ಕಲೆ, ಕೈಗಂಟಿರುವ ರಕ್ತ, ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಆಘಾತಕ್ಕೊಳಗಾಗಿದ್ದಾಳೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಭಯ, ಆತಂಕ , ಮಡುಗಟ್ಟಿದೆ. ಮದುವೆಗೆ ಬಂದವರಿಗಷ್ಟೇ ಅಲ್ಲ, ಪ್ರೇಕ್ಷಕರಲ್ಲೂ ಅಚ್ಚರಿ ಹುಟ್ಟಿಸುತ್ತದೆ.

ಕೊಲೆ ಆಪಾದನೆಯ ಮೇಲೆ ಶಿರೀನಳನ್ನು ಬಂಧಿಸುತ್ತಾರೆ ಪೊಲೀಸರು, ಆರಂಭದಲ್ಲಿ ಪೊಲೀಸರ ವಿಚಾರಣೆಗೆ ಸಹಕರಿಸುವುದಿಲ್ಲ ಶಿರೀನ್. ಕಾನೂನು ಸಲಹೆ ನೀಡಲು ಬರುವ ವಕೀಲೆ ನೈತಿಕವಾಗಿ ಬೆಂಬಲಿಸುತ್ತಲೇ, ಶಿರೀನ್ ಕೊಂದಿದ್ದು ಯಾರನ್ನು? ಮತ್ತು ಏಕೆ? ಎಂದು ಕೊಲೆಯ ಕಾರಣ ಹುಡುಕಲು ಪ್ರಯತ್ನಿಸುತ್ತಾಳೆ. ವಿಚಾರಣೆ ಕೊನೆಯ ಹಂತಕ್ಕೆ ಬಂದಾಗ ಉತ್ತರಸಿಗುತ್ತದೆ. ಕೋರ್ಟಿನ ವಿಚಾರಣೆಯ ಸಂದರ್ಭದಲ್ಲಿ ಕಲಾಪವನ್ನು ವರದಿ ಮಾಡುವ ಸುದ್ದಿ ಮಾಧ್ಯಮಗಳ ಮೂಲಕ ಕೊಲೆ ಪ್ರಕರಣ ದೇಶದ ಗಮನ
ಸೆಳೆಯುತ್ತದೆ. ಗಂಡಿನ ಮನೆಯವರಿಗೆ ಮರ್ಯಾದೆ ಪ್ರಶ್ನೆಯಾದರೆ ಶಿರೀನ್ ಕುಟುಂಬದವರಿಗೆ ಆತಂಕ.

ವಿಚಾರಣೆಯ ಕೊನೆ ಹಂತದಲ್ಲಿ ಶಿರೀನ್ ಬಿಚ್ಚಿಡುವ ಸತ್ಯ ಇದು:

ಮದುವೆಯ ದಿನ, ನೆರೆಮನೆಯ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಬಿಲ್ಡಿಂಗ್ ಕಾವಲುಗಾರನನ್ನು ಶಿರೀನ್ ಕೊಲೆಮಾಡಿರುತ್ತಾಳೆ. ಕೊಂಚ ಉದ್ವೇಗದಲ್ಲಿದ್ದಂತೆ ಕಾಣುವ ಶಿರೀನ್ ಕೊಲೆಯ ಹಿಂದಿರುವ ಕಾರಣವನ್ನೂ ಹೇಳುತ್ತಾ ಹೋಗುತ್ತಾಳೆ, ಶಿರೀನ್ ಎಂಟು ವರ್ಷದವಳಿದ್ದಾಗ ಶಾಲೆಯಿಂದ ಕರೆತರುತ್ತಿದ್ದ ವ್ಯಕ್ತಿ
ಮೊರಾದ್ ನಿಂದ ಪದೇ ಪದೇ ಲೈಂಗಿಕ ಕಿರುಕುಳಕ್ಕೊಳಗಾಗಿರುತ್ತಾಳೆ, ಅವಳು ಬೆಳೆದು ದೊಡ್ಡವಳಾದಮೇಲೂ ಆ ನೆನಪುಗಳಿಂದ ಹೊರಬರಲು ಸಾಧ್ಯವಾಗದೆ ದುಃಸ್ವಪ್ನಗಳಂತೆ ಕಾಡುತ್ತಲೇ ಇರುತ್ತವೆ. ಕಣ್ಣೆದುರೇ ಬಾಲಕಿಯ ಮೇಲೆ ನಡೆಯುತ್ತಿದ್ದ ಅತ್ಯಾಚಾರದ ಪ್ರಯತ್ನ ತಪ್ಪಿಸಲು ಕೊಲೆ ಮಾಡಿದ್ದಾಗಿ ಸಮರ್ಥಿಸಿ ಕೊಳ್ಳುತ್ತಾಳೆ. ಶಿರೀನ್ ಳ ಅಸಹಾಯಕತೆಗೆ ಕುಟುಂಬದವರು ಮತ್ತು ಗಂಡನ ಮನೆಯವರು ಪಶ್ಚಾತ್ತಾಪ ಪಡುತ್ತಾರೆ ಮತ್ತು
ನಿರಪರಾಧಿ ಎಂದು ನಿರೂಪಿಸಲು ವಕೀಲೆಗೆ ಸಹಕರಿಸುತ್ತಾರೆ. ಸಾಕ್ಷಿ ಕೇಳುತ್ತದೆ ಕೋರ್ಟ್. ಬಾಲಕಿಯ ಭವಿಷ್ಯ ಮತ್ತು ಮನೆತನದ ಮರ್ಯಾದೆ ಪ್ರಶ್ನೆಯನ್ನೇ ಮುಂದಿಡುತ್ತ “ಮಗಳ ಮೇಲಾಗುತ್ತಿದ್ದ ದೌರ್ಜನ್ಯ
ಶಿರೀನಳಿಂದ ತಪ್ಪಿತು ” ಎಂದು ಸಾಕ್ಷಿ ಹೇಳಲು ನಿರಾಕರಿಸುತ್ತಾನೆ ಬಾಲಕಿಯ ತಂದೆ.

ಸರಿಯಾದ ಸಾಕ್ಷಿಯಿಲ್ಲದೆ ಶಿರೀನ್ ಗೆ ಮರಣದಂಡನೆ ವಿಧಿಸುತ್ತದೆ ಕೋರ್ಟ್.

ನಿರ್ದೇಶಕಿ ಪೌರಾನ್

ಇರಾನ್ ಅಷ್ಟೇ ಅಲ್ಲ, ಬಹಳಷ್ಟು ದೇಶಗಳ ಜನರ ಮನಸ್ಥಿತಿಯು ಇದೇ ಬಗೆಯದು. ಮಕ್ಕಳ ಭವಿಷ್ಯ, ಮರ್ಯಾದೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು “ಅತ್ಯಾಚಾರ, ಲೈಂಗಿಕ ಕಿರುಕುಳ, ಬೇರೇನೇ ಆದರೂ ಅದರ ವಿರುದ್ಧ ಧ್ವನಿ ಎತ್ತದೆ ಸಹಿಸಿಕೊಳ್ಳುತ್ತಲೆ ಇರಬೇಕು, ಕೂಗಬಾರದು” ಎಂದು ಭಾವಿಸುತ್ತಾರೆ. ಇಂತಹ ಮನಸ್ಥಿತಿಯನ್ನು, ಅಸಹಾಯಕ ಧೋರಣೆಯನ್ನು ವಿರೋಧಿಸುತ್ತಲೇ ಸಮರ್ಥವಾಗಿ ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕಿ ಪೌರಾನ್.

“ಕೊಲೆಯೊಂದನ್ನು ಸದುದ್ದೇಶಕ್ಕಾಗಿ ಮಾಡಿದ್ದರೂ ಅದಕ್ಕೆ ಗರಿಷ್ಠ ಮಟ್ಟದ ಶಿಕ್ಷೆ ತಪ್ಪಿದ್ದಲ್ಲ ” ಎಂಬ ಕಟುಸತ್ಯವನ್ನು ಈ ಸಿನಿಮಾದ ಮೂಲಕ ಚೌಕಟ್ಟಿಗಿಳಿಸಿದ್ದಾರೆ. ಇಡೀ ಸಿನಿಮಾದಲ್ಲಿ ಎದ್ದು ಕಾಣುವ ಅಂಶವೆಂದರೆ ಶಿರೀನ್ ಮತ್ತವಳ ಕುಟುಂದವರ ಅಸಹಾಯಕತೆ. ಆರಂಭದ ದೃಶ್ಯದಿಂದಲೇ ಗಂಭೀರವಾಗಿ ಆತಂಕ, ದಿಗ್ಭ್ರಮೆಯಲ್ಲಿ ತೆರೆದುಕೊಳ್ಳುವ ಸಿನಿಮಾ ಗಾಢ ವಿಷಾದದಲ್ಲಿ ಅಂತ್ಯಗೊಳ್ಳುತ್ತದೆ. ಚಿತ್ರ ಮುಗಿದು ಹೊರಬಂದಮೇಲೂ ಗುಂಗಿನಿಂದ ಹೊರಬರದಂತೆ ಕಾಡುತ್ತಿರುತ್ತದೆ ಮತ್ತು ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆ.

ಪೌರಾನ್ ಅವರ ಸಂಯಮದ ನಿರ್ದೇಶನ, ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿರುವ ಬಿಗಿ, ಕಲಾವಿದರ ಪರಿಶ್ರಮ, ಛಾಯಾಗ್ರಹಣ, ಪ್ರತಿ ಫ್ರೇಮಿನಲ್ಲೂ ಎದ್ದುಕಾಣುತ್ತದೆ. 2013 ರಲ್ಲಿ ತೆರೆಗೆ ಬಂದಿರುವ ಸಿನಿಮಾ ಸಾರ್ವಕಾಲಿಕ ಸತ್ಯಗಳನ್ನು ಹೇಳುತ್ತದೆ.

  • ಮಂಜುಳಾ ಪ್ರೇಮ್‍ಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *