ಸಿನಿಮಾತು/ ಗಂಡಿನೊಳಗಿನ ಹೆಣ್ಣಿನ ಮನಃಸ್ಥಿತಿ – ಮಂಜುಳಾ ಪ್ರೇಮ್‍ಕುಮಾರ್

ಋತುಪರ್ಣೋ ಘೋಷ್ ಅವರ ಹೆಚ್ಚಿನ ಸಿನಿಮಾಗಳು ಹೆಣ್ಣಿನ ಭಾವನೆ, ತಳಮಳ ತಲ್ಲಣಗಳ ಬಗ್ಗೆಯೇ ಕೇಂದ್ರೀಕೃತವಾಗಿವೆ, ಬಹುಶಃ ಇದಕ್ಕೆ ಕಾರಣ ಅವರೊಳಗಿನ ಹೆಣ್ತನ. “ಗಂಡಿನೊಳಗಿನ ಹೆಣ್ಣಿನ ಮನಃಸ್ಥಿತಿ” ಯನ್ನು ಸಿನೆಮಾಗಳ ಮೂಲಕ ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವುದರಿಂದಲೆ ಅವರ ಸಿನಿಮಾಗಳು ಭಿನ್ನವಾಗುತ್ತವೆ.

“ನಾನು ಹೆಣ್ಣಲ್ಲ, ಹೆಣ್ಣಾಗಲು ಬಯಸುವುದಿಲ್ಲ, ಆದರೆ ನನ್ನೊಳಗಿನ ಅವಳನ್ನು ಉಪೇಕ್ಷಿಸುವುದಿಲ್ಲ” ಹೀಗೆಂದು ಅಳುಕಿಲ್ಲದೆ ಹೇಳಿಕೊಂಡು ಹೆಣ್ಣಾಗಲು ಚಡಪಡಿಸಿದವರು ಬಂಗಾಳಿ ಚಿತ್ರರಂಗದ ನಟ, ನಿರ್ದೇಶಕ, ಸಂಭಾಷಣಕಾರ ಋತುಪರ್ಣೋ (ರಿತುಪರ್ಣೋ) ಘೋಷ್. ಭಾರತೀಯ ಚಿತ್ರರಂಗಕ್ಕೆ ಬಂಗಾಳಿ ಚಿತ್ರರಂಗ ಕೊಟ್ಟ ಮಹತ್ವದ ಕೊಡುಗೆ. ಸುಮಾರು ಎರಡು ದಶಕಗಳ ಕಾಲ ಕ್ರಿಯಾಶೀಲರಾಗಿ ಸಿನೆಮಾವನ್ನೇ ಉಸಿರಾಗಿಸಿಕೊಂಡಿದ್ದವರು. ಸತ್ಯಜಿತ್ ರೇ ಮುಂತಾದ ಹಿರಿಯ ನಿರ್ದೇಶಕರಿಂದ ಪ್ರಭಾವಿತರಾಗಿದ್ದರೂ ಸ್ವಂತಿಕೆ ಉಳಿಸಿಕೊಂಡಿದ್ದ ನಿರ್ದೇಶಕ. ಪರ್ಯಾಯ ಸಿನಿಮಾಗಳನ್ನು ಕಮರ್ಷಿಯಲ್ ಸಿನೆಮಾಗಳ ಸೂತ್ರಕ್ಕೆ ಒಗ್ಗಿಸಿಕೊಂಡು ಅದ್ದೂರಿ ಸಿನಿಮಾಗಳನ್ನು ಮಾಡಿ ಭಾರತೀಯ ಸಿನಿಮಾ ಜಗತ್ತಿನ ಗಮನ ಸೆಳೆದವರು .

“ಗಂಡಿನೊಳಗಿನ ಹೆಣ್ಣಿನ ಮನಃಸ್ಥಿತಿ” ಇಂಥ ವಿಚಿತ್ರ ಸ್ಥಿತಿಯನ್ನು ಸಿನೆಮಾಗಳ ಮೂಲಕ ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವುದರಿಂದಲೆ ಇವರ ಸಿನಿಮಾಗಳು ಭಿನ್ನವಾಗುತ್ತವೆ.

ಘೋಷ್ ಅವರ ಸಿನೆಮಾಗಳಂತೆ ವೈಯಕ್ತಿಕ ಬದುಕು ಸಹ, ಧ್ವನಿ ಕೇಳಿದವರಿಗೆ, ಉಡುಪುಗಳನ್ನು ನೋಡಿದವರಿಗೆ ‘ಇವರು ಹೆಣ್ಣೋ, ಗಂಡೋ ‘ ಎಂದು ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತಿತ್ತು. ತನ್ನೊಳಗಿನ ಹೆಣ್ತನವನ್ನು ಅದುಮಿಡಲಾಗದೆ, ತಾನೊಬ್ಬ ‘ಗೇ’ ಎಂದು ಬಹಿರಂಗವಾಗಿ ಘೋಷಿಸಿಕೊಂಡರು. ಹೆಣ್ಣಾಗಲು ಹಲವಾರು ಶಸ್ತ್ರಕ್ರಿಯೆ ಮಾಡಿಸಿಕೊಂಡರು, ಒಂದಾದ ಮೇಲೆ ಒಂದರಂತೆ ಮಾಡಿಸಿಕೊಂಡ
ಶಸ್ತ್ರಕ್ರಿಯೆಗಳಿಂದ ಹೃದಯಾಘಾತವಾಗಿ ನಿಧನಹೊಂದಿದರು (ಮೇ 30, 2013). ಇದು ಅಭಿಮಾನಿಗಳಾರೂ ಊಹಿಸಲಾರದಂತ ದುರಂತ.

1994 ರಲ್ಲಿ ತೆರೆಗೆ ಬಂದ ‘ಉನಿಷೆ ಏಪ್ರಿಲ್ ‘ ನಿಂದ 2013 ರ ‘ಸತ್ಯಾನ್ವೇಷಿ’ ವರೆಗೆ 24 ಸಿನಿಮಾ ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಎರಡು ಹಿಂದಿ, ಎರಡು ಇಂಗ್ಲಿಷ್. ಹನ್ನೆರಡು ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ರವೀಂದ್ರನಾಥ ಟಾಗೋರ್ ನೃತ್ಯ ನಾಟಕವನ್ನಾಧರಿಸಿದ ಚಿತ್ರ ‘ ಚಿತ್ರಾಂಗದಾ’ ವೀಕ್ಷಕರ ಮೆಚ್ಚುಗೆಗೆ ಪಾತ್ರವಾದ ಸಿನಿಮಾ ಹಾಗು ಸಾಕಷ್ಟು ಚರ್ಚೆಗೊಳಗಾದ ಸಿನಿಮಾ. ಹೆಣ್ಣಾಗುವ ತುಡಿತವಿದ್ದ ಘೋಷ್ ಅವರು ಅನುಭವಿಸಿದ ಮಾನಸಿಕ, ದೈಹಿಕ ಸ್ಥಿತಿಯನ್ನು, ಕುಟುಂಬದ ಮೇಲೆ ಆದು ಉಂಟುಮಾಡುವ ಪರಿಣಾಮವನ್ನು ಈ ಸಿನಿಮಾ ಮೂಲಕ ಹೇಳಿಕೊಂಡಿದ್ದಾರೆ.

ಮಹಾಭಾರತದಲ್ಲಿ ಬರುವ ಚಿತ್ರಾಂಗದೆ (ಬಬ್ರುವಾಹನನ ತಾಯಿ) ಪಾತ್ರವನ್ನ ರೂಪಕವಾಗಿ ಬಳಸಿಕೊಂಡು ನೃತ್ಯನಾಟಕ ಒಂದನ್ನು ನಿರ್ದೇಶಿಸಲು ಹೊರಟಿದ್ದಾನೆ ರುದ್ರೋ ಚಟರ್ಜಿ (ಋತುಪರ್ಣೋ ಘೋಷ್). ಚಿತ್ರಾಂಗದೆ ಪಾತ್ರಧಾರಿ ಸಹ ಇವನ . ತಾಲೀಮಿನ ಸಮಯದಲ್ಲಿ ತಾನೇ ‘ಚಿತ್ರಾಂಗದೆ’ ಎಂದು ಭ್ರಮಿಸಿ ಪಾತ್ರದಲ್ಲಿ ಲೀನನಾಗಿಬಿಡುತ್ತಾನೆ. ಪಾರ್ಥೋ ನೃತ್ಯರೂಪಕಕ್ಕೆ ನೆರವು ನೀಡಲು ಬರುವ ಸುಂದರ ಯುವಕ. ಗಂಡು, ಹೆಣ್ಣು ಇಬ್ಬರನ್ನು ಪ್ರೀತಿಸಬಲ್ಲವನು. ಸಹಜವಾಗಿಯೇ ರುದ್ರೋ ಚಟರ್ಜಿ ಇವನಲ್ಲಿ ಆಕರ್ಷಿತನಾಗುತ್ತಾನೆ, ಸಂಬಂಧ ಬೆಳೆಯುತ್ತದೆ. ತನ್ನ ಮತ್ತು ಪಾರ್ಥೋನ ನಡುವಿನ ಸಂಬಂಧಕ್ಕೆ ಕುಟುಂಬದ ಸ್ವರೂಪ ಕೊಡಲು ಮತ್ತು ಮಗುವೊಂದನ್ನ ಪಡೆಯಲು ಪದೇ ಪದೇ ಶಸ್ತ್ರಕ್ರಿಯೆಗೆ ಒಳಗಾಗುತ್ತಾನೆ. ಆದರೆ ಪಾರ್ಥೋ ಈಗಾಗಲೆ ಪ್ರೇಯಸಿಯಿಂದ ಮಗುವೊಂದನ್ನು ಪಡೆದಿರುವ ವಿಷಯ ತಿಳಿದು ಹತಾಶನಾಗುತ್ತಾನೆ. ಹೆಣ್ಣಾಗುವ ಬಯಕೆಯನ್ನು ಮುಚ್ಚಿಡಲಾಗದೆ ಖಿನ್ನತೆಗೊಳಗಾಗುವ ರುದ್ರೋನ ಈ ಕಥೆ ಘೋಷ್ ಅವರ ವೈಯಕ್ತಿಕ ಬದುಕಿನಂತೆ ಇದೆ ಅನಿಸಿಬಿಡುತ್ತದೆ, ಅಂತ್ಯವಂತೂ ಕಣ್ಣಲ್ಲಿ ನೀರು ಜಿನುಗುವಂತೆ ಮಾಡುತ್ತದೆ.

ಕಾನೂನಿನ ಒಪ್ಪಿಗೆ ಇದ್ದರೂ, ಸಲಿಂಗ ಕಾಮ, ಲಿವಿಂಗ್ ಟುಗೆದರ್ ನಂತಹ ಸಂಬಂಧಗಳನ್ನು ಸಾಂಪ್ರದಾಯಕ ಭಾರತೀಯ ಸಮಾಜ ಸ್ವೀಕರಿಸುವುದಿಲ್ಲ, ಅಂತಹ ಪರಿಸ್ಥಿತಿ ಎದುರಾದಾಗ ಕುಟುಂಬದವರ ಮನಸ್ಥಿತಿ, ಕುಟುಂಬದ ಮೇಲೆ ಬೀರುವ ಪರಿಣಾಮ, ಇತ್ಯಾದಿಗಳನ್ನು ಇಂತಹುದೇ ಒಂದು ಸಂಪ್ರದಾಯಸ್ಥ ಕುಟುಂಬದ ಪರಿಸರದಲ್ಲಿ ಬೆಳೆದುಬಂದ ಘೋಷ್ ಸೂಕ್ಷ್ಮವಾಗಿ ಸಿನಿಮಾ ಚೌಕಟ್ಟಿಗೆ ಇಳಿಸಿದ್ದಾರೆ.

ಅನೇಕ ಭಾರತೀಯ ಭಾಷೆಗಳಲ್ಲಿ ಇಂಥ ಮನಃಸ್ಥಿತಿ ಸಂಬಂಧದ ಸಿನೆಮಾಗಳು ನಿರ್ಮಾಣಗೊಂಡಿವೆ, ಆದರೆ ಘೋಷ್ ಸಿನಿಮಾ ಕೊಡುವ ರೀತಿಯೆ ಬೇರೆ. ಹೆಚ್ಚಿನ ಸಿನಿಮಾಗಳು ಹೆಣ್ಣಿನ ಭಾವನೆ, ತಳಮಳ ತಲ್ಲಣಗಳ ಬಗ್ಗೆಯೇ ಕೇಂದ್ರೀಕೃತವಾಗಿವೆ, ಬಹುಶಃ ಇದಕ್ಕೆ ಕಾರಣ ಅವರೊಳಗಿನ ಹೆಣ್ತನ ಇರಬಹುದು.

ಬಂಗಾಳಿ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಿ ಹೋದ ಘೋಷ್ ನಿಧನರಾಗಿ ಮೇ 30 ಕ್ಕೆ ಏಳು ವರ್ಷಗಳಾಗುತ್ತವೆ. ಬದುಕಿದ್ದಿದ್ದರೆ ಇನ್ನಷ್ಟು ಉತ್ತಮ ಸಿನಿಮಾಗಳನ್ನು ಸಿನಿಪ್ರೇಮಿಗಳಿಗೆ ಕೊಟ್ಟಿರುತ್ತಿದ್ದರು.

ಮಂಜುಳಾ ಪ್ರೇಮ್‍ಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *