ಸಿನಿಮಾತು/ ಕೊಲಾಂಬಿ: ಊಹಿಸಲಸಾಧ್ಯ ತಿರುವು -ಮಂಜುಳಾ ಪ್ರೇಮ್‍ಕುಮಾರ್
ಸ್ವಾತಂತ್ರ್ಯದ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದು, ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿ ನಮ್ಮವರೇ ಆಗಿ ಸೌಹಾರ್ದದಿಂದ ಬದುಕುತ್ತಿರುವ ಎಷ್ಟೋ ಜನರಿದ್ದಾರೆ. ಪ್ರಸ್ತುತ ಪೌರತ್ವ ಕಾಯಿದೆ ಕುರಿತು ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ `ಕೊಲಾಂಬಿ’ ಸಿನಿಮಾ ಒಂದು ವಿಶೇಷ ಪ್ರಯತ್ನ ಅನಿಸಿಕೊಳ್ಳುತ್ತದೆ.
ಸದಾಕಾಲ ಹೊಸತನಕ್ಕೆ ತುಡಿಯುವ ಮಲಯಾಳಂ ಚಿತ್ರರಂಗದವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಯಶಸ್ವಿಯಾಗಿದ್ದಾರೆ, ಖ್ಯಾತನಾಮ ನಟ ನಟಿಯರಿಲ್ಲದೆಯೂ ಚಿತ್ರಗಳು ಭರ್ಜರಿ ಯಶಸ್ಸು ಕಂಡ ನಿದರ್ಶನಗಳಿವೆ. ಭಾಷೆ ಬಲ್ಲವರಿಗೆ ಒಳ್ಳೆಯ ಸಿನಿಮಾ ಒಂದು ‘ದೃಶ್ಯಕಾವ್ಯ’ವೇ ಆಗಿಬಿಡುತ್ತದೆ. ಆದರೆ ಅಷ್ಟಾಗಿ ಭಾಷೆಯ ಪರಿಚಯವಿಲ್ಲದವರಿಗೆ ಅಲ್ಲಿನ ‘ದೃಶ್ಯ’ವೇ ‘ಭಾಷೆ ‘ಯಾಗುತ್ತದೆ. ಇಂಥದೊಂದು ಭಾಷೆಯ ಸಿನಿಮಾವನ್ನು ನೋಡಿ ಗ್ರಹಿಸುವಾಗ, ನೋಟ, ಶ್ರವಣ, ಮನಸ್ಸು ಮತ್ತು ಮೆದುಳು, ಇವನ್ನು ಕ್ರಿಯಾಶೀಲವಾಗಿ ಇರಿಸಿಕೊಳ್ಳಬೇಕಾಗುತ್ತದೆ. ಹೀಗೆ ಅನ್ನಿಸಿದ್ದು ಟಿ.ಕೆ.ರಾಜೀವ್ ಕುಮಾರ್ ನಿರ್ದೇಶನದ, ಮಲಯಾಳಂ ಚಲನಚಿತ್ರ ‘ಕೊಲಾಂಬಿ’ (ಧ್ವನಿವರ್ಧಕ) ನೋಡುವಾಗ.
2005 ರಲ್ಲಿ ಸರಕಾರ ಸಭೆ, ಸಮಾರಂಭ, ಮುಂತಾದ ಕಡೆಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುತ್ತದೆ. ಇವುಗಳ ಮೇಲೇ ಅವಲಂಬಿತರಾಗಿದ್ದವರ ಜೀವನ, ಅವುಗಳನ್ನೇ ಕಲಾಕೃತಿಗಳನ್ನಾಗಿ ಬಳಸಿಕೊಂಡು ಕಲಾಪ್ರದರ್ಶನದಲ್ಲಿ ಮೆಚ್ಚುಗೆ ಗಳಿಸುವ ಕಲಾವಿದೆ, ಸ್ವಾತಂತ್ರ್ಯ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದು ಮುಖ್ಯವಾಹಿನಿಯಲ್ಲಿ ಬೆರೆತು ಹೋದ ಸಹೋದರರನ್ನು ಹುಡುಕುತ್ತಿರುವ ಪೊಲೀಸರು- ಇವುಗಳನ್ನೇ ಆಧಾರವಾಗಿಟ್ಟು ಕೊಂಡು ‘ಕೊಲಾಂಬಿ’ (ಧ್ವನಿವರ್ಧಕ) ಯಾಗಿ ಕಥೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜೀವ್ ಕುಮಾರ್.
1960 ರಿಂದ ಈ ಧ್ವನಿವರ್ಧಕಗಳ ಮೇಲೆ ಅವಲಂಬಿತರಾಗಿ ಜೀವನ ನಡೆಸುತ್ತಿದ್ದ ಕೊಚ್ಚಿಯ ವಯೋವೃದ್ಧ ದಂಪತಿಗಳಾದ ಸುಂದರಾಂಬಾಳ್ ಮತ್ತು ಆಕೆಯ ಪತಿ ಜೀವನ ನಿರ್ವಹಣೆಗಾಗಿ ಉಸಿರು ನಿಲ್ಲಿಸಿದ ಈ ಧ್ವನಿವರ್ಧಕಗಳನ್ನು , ಗ್ರಾಮಫೋನ್, ಮೈಕು ಇತ್ಯಾದಿಗಳನ್ನೇ ಯಶಸ್ವಿಯಾಗಿ ಬಳಸಿಕೊಳ್ಳುತ್ತಾರೆ. ಮನೆಯ ಪಡಸಾಲೆಯಲ್ಲೆ ‘ಒಳ್ಳೆ ಕಾಫಿ, ಜೊತೆಗೊಂದಿಷ್ಟು ಸಂಗೀತ’. ಕಾಫಿ ಸವಿಯುತ್ತ ಮೆಚ್ಚಿನ ಗಾಯಕ, ಗಾಯಕಿಯರ ಹಾಡು ಕೇಳಲು ಪೊಲೀಸ್ ಅಧಿಕಾರಿ, ಬ್ಯಾಂಕ್ ಮ್ಯಾನೇಜರ್, ಮುಸ್ಲಿಂ ಗೆಳೆಯರು ಇತ್ಯಾದಿ ಬರುತ್ತಾರೆ.
ಕೊಚ್ಚಿ -##ಬಿನ್ನಾಲೆ ಯ ಕಲಾಪ್ರದರ್ಶನದಲ್ಲಿ ಭಾಗವಹಿಸಲು ದೆಹಲಿಯಿಂದ ಬರುವ ಕಲಾವಿದೆ ಅರುಂಧತಿಗೆ ಈ ದಂಪತಿಗಳ ಪರಿಚಯವಾಗುತ್ತದೆ, ಇವರ ಸಂಗ್ರಹದಲ್ಲಿರುವ ಸುಮಾರು ಅರವತ್ತಕ್ಕಿಂತ ಹೆಚ್ಚು ಧ್ವನಿವರ್ಧಕಗಳಿಂದ ಆಕರ್ಷಿತಳಾಗುತ್ತಾಳೆ. ಗಾಂಧೀಜಿ, ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರೀ ಮುಂತಾದವರ ಭಾಷಣಕ್ಕಾಗಿ ಉಪಯೋಗಿಸಿದವು, ಮತ್ತೆ ಕೆಲವು ಪ್ರಸಿದ್ಧ ಸಂಗೀತಗಾರರ ಹಾಡುಗಾರಿಕೆಯ ಸಮಯದಲ್ಲಿ ಬಳಸಿದವು. ಮುಂದೆ ನಡೆಯುವುದೆಲ್ಲ ಈ ದಂಪತಿಗಳು ಮತ್ತು ಅರುಂಧತಿಯನ್ನು ಬೆಸೆಯುವ ಭಾವನಾತ್ಮಕ ಸಂಬಂಧ. ಒಂದು ದಿನ ಕಾಣದಿದ್ದರೆ ಅರೆ ರಾತ್ರಿಯಲ್ಲೂ ಅವಳನ್ನು ಹುಡುಕಿಕೊಂಡು ಹೋಗುವ ಸುಂದರಾಂಬಾಳ್ ದಂಪತಿಗಳು, ಬ್ಯಾಂಕ್ ಲೋನ್, ಕಾನೂನಿನ ತೊಡಕುಗಳು ಬಂದಾಗ ನೆರವಾಗುವ, ನೈತಿಕ ಬೆಂಬಲ ನೀಡುವ ಅರುಂಧತಿ. ಕಲಾಪ್ರದರ್ಶನದಲ್ಲಿ ಹೊಸದನ್ನೇನಾದರೂ ಪ್ರದರ್ಶಿಸುವ ತುಡಿತವುಳ್ಳ ಅರುಂಧತಿಗೆ ಧ್ವನಿ ಕಳೆದುಕೊಂಡಿರುವ ಈ ಧ್ವನಿವರ್ಧಕಗಳೇ ವಸ್ತುವಾಗುತ್ತವೆ.
ಇನ್ನೇನು ಎಲ್ಲ ಸುಖಾಂತ್ಯವ ಎನ್ನುವಾಗಲೇ ಕಥೆಗೊಂದು ಊಹಿಸಲಸಾಧ್ಯವಾದ ತಿರುವು ನೀಡಿದ್ದಾರೆ ನಿರ್ದೇಶಕರು…
ಸ್ವಾತಂತ್ರ್ಯದ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದು, ಕಣ್ ತಪ್ಪಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿ ನಮ್ಮವರೇ ಆಗಿ ಸೌಹಾರ್ದದಿಂದ ಬದುಕುತ್ತಿರುವವರು ಎಷ್ಟೋ ಜನರಿದ್ದಾರೆ. ಹೀಗೆ ಬಂದ ಇಬ್ಬರು ಸಹೋದರರನ್ನು ಪೊಲೀಸರು ಹುಡುಕುತ್ತಿದ್ದಾರೆ. ಅವರಲ್ಲಿ ಅಣ್ಣ ಕೊಚ್ಚಿಯ ಸಂಪ್ರದಾಯಸ್ಥ ಕುಟುಂಬದ ಹೆಣ್ಣೊಬ್ಬಳನ್ನು ಮದುವೆಯಾಗಿ ಹಿಂದುಗಳಂತೆಯೇ ಬದುಕುತ್ತಿದ್ದಾನೆ. ತಮ್ಮ ಮಸೀದಿಯೊಂದರಲ್ಲಿ ಆಶ್ರಯ ಪಡೆದು ಕೊನೆಯವರೆಗೂ ಮುಸಲ್ಮಾನನಾಗೇ ಉಳಿಯುತ್ತಾನೆ. ಇದರ ಸುಳಿವು ಪೊಲೀಸ್ ಅಧಿಕಾರಿಗೂ ಇರುತ್ತದೆ.
ಕೊನೆಯಲ್ಲಿ ತಮ್ಮನ ಸಾವು, ಆ ಸಂದರ್ಭದಲ್ಲಿ ಆಜಾನ್ ಕೂಗುವವರಿಲ್ಲದೆ ಅಣ್ಣನೇ ಆಜಾನ್ ಕೂಗಬೇಕಾಗುತ್ತದೆ.
ಹಲವಾರು ವರ್ಷಗಳು ಜೋಪಾನಮಾಡಿದ್ದ ಗುಟ್ಟೊಂದರ ಅನಾವರಣದೊಂದಿಗೆ ಮತ್ತೆ ದೀರ್ಘವಾಗಿ, ಲಯಬದ್ಧವಾಗಿ ಉಸಿರಾಡಲು ಪ್ರಾರಂಭಿಸುತ್ತವೆ ಈ ‘ಕೊಲಾಂಬಿ’ (ಧ್ವನಿವರ್ಧಕ) ಗಳು. ಇಲ್ಲಿ ಬರೀ ಪಾತ್ರಗಳಷ್ಟೇ ಅಲ್ಲದೆ, ಧ್ವನಿವರ್ಧಕಗಳನ್ನು ಪಾತ್ರಗಳಂತೆ ತೊಡಗಿಸಿಕೊಂಡಿದ್ದಾರೆ ನಿರ್ದೇಶಕರು.
ಅರುಂಧತಿಯಾಗಿ ನಿತ್ಯಾ ಮೆನನ್, ಸುಂದರಾಂಬಾಳ್ ಆಗಿ ರೋಹಿಣಿ ಗಮನ ಸೆಳೆಯುತ್ತಾರೆ. ಉಳಿದಂತೆ ರೆಂಜಿ ಪನ್ನಿಕ್ಕರ್ , ದಿಲೀಶ್ ಪೋತನ್ ಇತ್ಯಾದಿ ನಟರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ರಮೇಶ್ ನಾರಾಯಣ್ ಅವರ ಸಂಗೀತ, ರವಿವರ್ಮ ಅವರ ಛಾಯಾಗ್ರಹಣ, ಒಟ್ಟಾರೆ ಇದೊಂದು ದೃಶ್ಯ ಕಾವ್ಯವೇ ಸರಿ!
ಪ್ರಸ್ತುತ ಪೌರತ್ವ ಕಾಯಿದೆ ಕುರಿತು ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಈ ಸಿನಿಮಾ ಒಂದು ವಿಶೇಷ ಪ್ರಯತ್ನ ಅನಿಸಿಕೊಳ್ಳುತ್ತದೆ.
-ಮಂಜುಳಾ ಪ್ರೇಮ್‍ಕುಮಾರ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಬಹಳ ಧ್ವನಿಪೂರ್ಣವಾಗಿ ಸಿನೆಮಾ ಕುರಿತು ಪರಿಚಯಿಸಿದ್ದೀರಿ. ನೋಡಲೇ ಬೇಕಾದ ಪಟ್ಟಿಗೆ ‘ಕೊಲಾಂಬಿ’ ಸೇರಿತು. ಧನ್ಯವಾದಗಳು.