ಸಿನಿಮಾತು / ಕತ್ತಲ ಜಗತ್ತಿಗೆ ಬೆಳಕು ಕೊಡುವ ಆಸೆ – ಭಾರತಿ ಹೆಗಡೆ
ಸಿನಿಮಾ ನಟಿಯಾಗಬೇಕೆಂಬ ಹೊಂಗನಸು ಹೊತ್ತ ಹೆಣ್ಣೊಬ್ಬಳು ಕಡೆಗೆ ತಾನೇ ಸಿನಿಮಾಕ್ಕೆ ವಸ್ತುವಾದ ಕತೆಯನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಗಂಗೂಬಾಯಿ ಕಾಠಿಯಾವಾಡಿ’ ಹೇಳುತ್ತದೆ. ಪ್ರಿಯಕರನೊಂದಿಗೆ ಓಡಿಹೋಗಿ ಮೋಸಹೋಗಿ ವೇಶ್ಯಾವಾಟಿಕೆಯ ಜಾಲಕ್ಕೆ ಸಿಲುಕಿಕೊಂಡ ಹೆಣ್ಣು, ಹಾಗೆ ಸಿಲುಕಿಯೂ ಅಲ್ಲಿ ನಲುಗಿ ಅವಳ ಬದುಕು ದುರಂತವಾದ ಕತೆಯಲ್ಲ ಇದು. ಬದಲಿಗೆ ಆ ಕೂಪದೊಳಗೆ ಎದ್ದುನಿಂತು ಇಡೀ ಕಾಮಾಟಿಪುರವನ್ನೇ ತನ್ನ ಮುಷ್ಟಿಯೊಳಗೆ ಹಿಡಿದಿಟ್ಟುಕೊಂಡು ನ್ಯಾಯಕ್ಕಾಗಿ ಹೋರಾಡಿದ ದಿಟ್ಟ ಹೆಣ್ಣೊಬ್ಬಳ ವಿಶಿಷ್ಟ ಕಥನ.
ಇದು ವೇಶ್ಯಾವಾಟಿಕೆಯ ಸುತ್ತ ಸುತ್ತುವ ಸಿನಿಮಾ ಎಂದು ಮೊದಲೇ ತಿಳಿಯಲು ಕಾರಣ ಈ ಸಿನಿಮಾವನ್ನು ಗಂಗೂಬಾಯಿ ಎಂಬ ವೇಶ್ಯೆಯೊಬ್ಬಳ ಸತ್ಯ ಕತೆ ಎಂದು ಮೊದಲೇ ಬಿಂಬಿಸಲಾಗಿತ್ತು. ಗಂಗೂಬಾಯಿ ಹರಜೀವನದಾಸ್ ಎನ್ನುವವಳ ಜೀವನ ಚರಿತ್ರೆ, ಪತ್ರಕರ್ತ ಎಸ್. ಹುಸೇನ್ ಜೈದಿ ಹಾಗೂ ಜೇನ್ ಬೋರ್ಗೆಸ್ ಬರೆದಿರುವ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕ ಆಧಾರಿತ ಸಿನಿಮಾ ಎಂದು ಪ್ರಕಟಿಸಲಾಗಿತ್ತು.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಿರುವುದು ಆಲಿಯಾ ಭಟ್. ಈ ಕಲಾತ್ಮಕ ಸಿನಿಮಾದಲ್ಲಿ ಬನ್ಸಾಲಿ ಸ್ಪರ್ಶ ಢಾಳಾಗಿ ಕಾಣುತ್ತದೆ. ಸ್ವಲ್ಪ ಮಟ್ಟಿಗೆ ವೈಭವೀಕರಣ ಇದೆ ಎನಿಸಿದರೂ ಮೂಲ ಕಥೆಗೆ ಅದರಿಂದ ತೊಂದರೆಯೇನೂ ಇಲ್ಲ.
ಪ್ರಾರಂಭದಲ್ಲಿಯೇ ಹುಡುಗಿಯೊಬ್ಬಳನ್ನು ಕೂರಿಸಿ ಅವಳ ಹಣೆಗೆ, ಕೆನ್ನೆಗೆ ರಂಗು ಬಳಿದು, ತುಟಿಗೆ ಬಲವಂತವಾಗಿ ಬಣ್ಣ ಬಳಿದು, ಬಾಯಿಗೆ ಬಟ್ಟೆ ತುರುಕಿ ಮೂಗನ್ನು ಚುಚ್ಚುವಾಗ ಅವಳು ರೋದಿಸುವ ದೃಶ್ಯವಿದೆ. ಆ ಹುಡುಗಿಯಿಂದ ಇಡೀ ಕಾಮಾಟಿಪುರದ ಗಲ್ಲಿಗಲ್ಲಿಯ ಮೇಲೆಲ್ಲ ಕ್ಯಾಮೆರಾವನ್ನು ಹೊರಳಿಸುತ್ತಾರೆ ಬನ್ಸಾಲಿ. ಅವಳ ಕೂಗು ಇಡೀ ಕಾಮಾಟಿಪುರದ ಗಲ್ಲಿಗಳಲ್ಲೆಲ್ಲ ಮಾರ್ದನಿಸುತ್ತಿದ್ದರೂ ಎಲ್ಲರೂ ಇದೆಲ್ಲ ಮಾಮೂಲಿಯೆಂಬಂತೆ ನಿರ್ಲಿಪ್ತರಾಗಿ ಹೋಗುವ ವಾಸ್ತವದ ಚಿತ್ರಣವನ್ನು ಎದೆಗೆ ಬಡಿಯುವಂತೆ ಚಿತ್ರಿಸುತ್ತಾರೆ.
ಕತ್ತಲ ಕೋಣೆಯಲ್ಲಿ ಬಿದ್ದುಕೊಂಡಿರುವ ಅಳುತ್ತಾ ಬಿದ್ದುಕೊಂಡಿರುವ ಹುಡುಗಿಯೊಬ್ಬಳನ್ನು ಮಾತನಾಡಿಸಲು ಬರುವ ಸಿನಿಮಾದ ನಾಯಕಿ ಗಂಗೂಬಾಯಿ ಅವಳ ಸಮಸ್ಯೆ ಕೇಳುತ್ತಾಳೆ. ಅಳುತ್ತಲೇ ಹುಡುಗಿ ತನ್ನ ಪ್ರೀತಿ ಪ್ರೇಮದ ಕಥೆ ಹೇಳುತ್ತಾಳೆ. ಗಹಗಹಿಸಿ ನಗುವ ಗಂಗೂಬಾಯಿ ತನ್ನ ಕಥೆಯನ್ನು ಬಿಚ್ಚಿಡುತ್ತಾಳೆ.
ಗುಜರಾತಿನ ಹಳ್ಳಿ ಕಾಠಿಯಾವಾಡಿಯ ತರುಣಿ ಗಂಗಾ ದೊಡ್ಡ ವ್ಯಾಪಾರಿಯೊಬ್ಬಳ ಮಗಳು. ಅಲ್ಲಿ ಗುಮಾಸ್ತೆಯಾಗಿದ್ದ ರಮಣಿಕ್ ಎಂಬುವನೊಂದಿಗೆ ಇವಳಿಗೆ ಸಲುಗೆ. ಮುಖ್ಯವಾಗಿ ಬಾಲಿವುಡ್‍ನ ಆಗಿನ ಸ್ಟಾರ್‍ಗಳಾದ ದೇವಾನಂದ್, ಹೇಮಾಮಾಲಿನಿ ಮುಂತಾದವರಂತೆ ತಾನೂ ದೊಡ್ಡ ನಟಿಯಾಗಬೇಕೆಂಬ ಕನಸು ಹೊತ್ತವಳು. ಅವಳ ಕನಸಿಗೆ ನೀರೆರೆದು ಅದನ್ನು ಸಫಲಮಾಡುತ್ತೇನೆಂದು ಅಭಯ ಕೊಟ್ಟವನು ರಮಣಿಕ್. ದೇವಾನಂದ್ ಸಿನಿಮಾದಲ್ಲಿ ನಟಿಸಲು ಮಾತುಕತೆಯಾಗಿದೆ, ತಕ್ಷಣ ಹೊರಡಬೇಕೆಂದು ಅವಳನ್ನು ಊರಿನಿಂದ ಹೊರಡಿಸಿಕೊಂಡು ಬರುತ್ತಾನೆ. ಲವಲೇಶದಷ್ಟೂ ಅನುಮಾನವಿಲ್ಲದೆ, ನಂಬಿಕೆಯಿಂದ ಅವರ ಹಿಂದೆ ಗಂಗಾ ಹೊರಡುತ್ತಾಳೆ. ಅವನು ಸೀದಾ ಅವಳನ್ನು ಕರೆದುಕೊಂಡು ಬಂದಿದ್ದು ಮುಂಬೈನ ಕೆಂಪುದೀಪ ಪ್ರದೇಶವಾದ ಕಾಮಾಟಿಪುರಕ್ಕೆ. ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವಳೊಬ್ಬಳಿಗೆ ಐದುನೂರು ರೂಪಾಯಿಗೆ ರಮಣಿಕ್ ಇವಳನ್ನು ಮಾರಿದ್ದ.
ಇದು ಗಂಗಾಗೆ ಗೊತ್ತಾಗುವ ಹೊತ್ತಿಗೆ ಅವಳು ಕಾಮಾಟಿಪುರದ ಕೋಣೆಯೊಳಕ್ಕೆ ಬಂಧಿಯಾಗಿಬಿಟ್ಟಿದ್ದಳು. ಮುಂದಿನದು ಗೋಳಿನ ಕತೆಯಾಗಬೇಕಿತ್ತು. ಆದರೆ ಹಾಗೆ ಆಗಲಿಲ್ಲ. ಮೊದಲೇನೋ ಇಷ್ಟವಿಲ್ಲದೆ ನಾಲ್ಕು ದಿನ ಉಪವಾಸಬಿದ್ದಳು. ಕೊನೆಗೆ ಆ ಒಡತಿ ಹೇಳಿದಂತೆ ಕೇಳಿದಳು. ನಿಧಾನಕ್ಕೆ ಎದ್ದು ಮೇಕಪ್ ಮಾಡಿಕೊಂಡು ಮನೆಯ ಮುಂದಿನ ಬೀದಿಯಲ್ಲಿ ಗೋಡೆಗೆ ಒರಗಿ ನಿಂತಳು. ಪಕ್ಕದಲ್ಲಿ ನಿಂತಿದ್ದವಳೊಬ್ಬಳು ಇವಳ ಲಂಗವನ್ನು ಮೇಲಕ್ಕೆ ಸಿಗಿಸಿದಳು. ಒಂದು ಕಾಲನ್ನು ಮಡಚಿ ಗೋಡೆಗೆ ಆನಿಸಿದಳು. ಮತ್ತೊಬ್ಬಳು ವೇಶ್ಯೆಯೊಬ್ಬಳು ಹೇಗೆ ಗಿರಾಕಿಯನ್ನು ಕರೆಯಬೇಕೆಂದು ಕೈ ಉದ್ದನಿಲ್ಲಿಸಿ ಹೇಳಿಕೊಟ್ಟಳು. ಗೊಂಬೆಯ ಹಾಗೆ ನಿಂತ ಗಂಗಾ ನಿಧಾನಕ್ಕೆ ಗಿರಾಕಿಯನ್ನು ಕರೆಯತೊಡಗಿದಳು.
ಅತಿಸುಂದರಿ ಗಂಗಾ ಅತಿಬೇಗ ಖ್ಯಾತಿ ಪಡೆದಳು. ಗಿರಾಕಿಗಳೇ ಅವಳಿಗೆ ಗಂಗೂ, ಗಂಗೂಬಾಯಿ ಎಂದು ಹೆಸರಿಟ್ಟರು. ಎಲ್ಲವೂ ಅವರಿಚ್ಛೆಯಂತೆಯೇ ನಡೆಯತೊಡಗಿತು. ರಾಜಕಾರಣಿಗಳು, ಸಿನಿರಂಗದವರು, ಭೂಗತ ಪಾತಕಿಗಳು, ಶೇಟುಗಳು, ದೊಡ್ಡದೊಡ್ಡ ವ್ಯಾಪಾರಿಗಳು ಎಲ್ಲರೂ ಗಂಗಾಳೇ ಬೇಕೆಂದು ಬಯಸಿ ಬರುತ್ತಿದ್ದರು. ಆ ಕಾಲಕ್ಕೆ ಅತಿ ಬೇಡಿಕೆಯ ವೇಶ್ಯೆಯಾಗಿದ್ದಳು ಗಂಗೂಬಾಯಿ. ಕ್ರಮೇಣ ತಮಗೆಲ್ಲ ವಾರಕ್ಕೊಮ್ಮೆ ರಜಾ ಬೇಕು ಎಂದು ಒತ್ತಾಯಿಸಿ, ಒಡತಿಯನ್ನೂ ಧಿಕ್ಕರಿಸಿ ಗೆಳತಿಯರನ್ನು ಸಿನಿಮಾಕ್ಕೆ ಕರೆದುಕೊಂಡು ಹೊರಟಳು. ಮಿಕ್ಕ ಹುಡುಗಿಯರು ಹೆದರಿಕೊಂಡರೂ ಅವರಿಗೆಲ್ಲ ಧೈರ್ಯ ತುಂಬಿದಳು. ಸಿನಿಮಾ ಥಿಯೇಟರ್‍ನಲ್ಲೇ ಒಬ್ಬ ‘ಏ ಗಂಗೂಬಾಯಿ ಬಾ’ ಎಂದು ಅವಳನ್ನು ಕರೆದಾಗ ಝಾಡಿಸಿ ಒದ್ದು, ಮಿಕ್ಕ ಎಲ್ಲರಿಗೂ ವಾರಕ್ಕೊಮ್ಮೆಯಾದರೂ ರಜೆ ಇರುತ್ತದೆ, ನಮಗೆ ರಜ ಬೇಡ್ವಾ ಎಂದು ಅವನಿಗೆ ಕ್ಯಾಕರಿಸಿ ಉಗಿದು ಸಿನಿಮಾ ಥಿಯೇಟರ್‍ನೊಳಕ್ಕೆ ಹೋಗುತ್ತಾಳೆ.
ಒಮ್ಮೆ ರೌಡಿಯೊಬ್ಬ ಇವಳನ್ನು ಹೊಡೆದು, ಕಚ್ಚಿ ತುಂಬ ಹಿಂಸಿಸಿದಾಗ ಅವಳ ಒಡತಿ ಬೇಕೆಂದೇ ಮೌನವಾಗಿದ್ದುಬಿಡುತ್ತಾಳೆ. ಅವನ ಹಿಂಸೆಯಿಂದ ಮೈತುಂಬ ಗಾಯಮಾಡಿಕೊಂಡು ಆಸ್ಪತ್ರೆಯ ಪಾಲಾದಳು ಗಂಗಾ. ಆದರೆ ಹಾಗೆ ಅಳುತ್ತಾ ಕೂರದೇ ಮುಂಬೈನ ಡಾನ್ ಕರೀಂ ಲಾಲನ ಬಳಿ ಹೋಗುತ್ತಾಳೆ. ಅವನ ಮನೆಯ ಟೆರೇಸ್‍ನಲ್ಲಿ ಕುಳಿತು ನಿನ್ನೊಂದಿಗೆ ಕೆಲಸ ಮಾಡುವವನೊಬ್ಬ ನನಗೆ ಹೀಗೆಲ್ಲ ಹಿಂಸೆ ನೀಡಿದ್ದಾನೆಂದು ತನ್ನ ಪರಿಸ್ಥಿತಿಯನ್ನು ವಿವರಿಸುತ್ತಾಳೆ. ನಂತರ ಖುದ್ದು ಕರೀಂ ಲಾಲ ಕಾಮಾಟಿಪುರಕ್ಕೆ ಬಂದು ಆ ರೌಡಿಯನ್ನು ಸಾಯಿಸಿದ್ದಲ್ಲದೆ, ಗಂಗೂಬಾಯಿ ತನ್ನ ತಂಗಿ ಎಂದು ಎಲ್ಲರಿಗೂ ಕೇಳುವಂತೆ ಸಾರುತ್ತಾನೆ. ಯಾವಾಗ ಕರೀಂ ಲಾಲ ಇವಳಿಗೆ ಒತ್ತಾಸೆಯಾಗಿ ನಿಲ್ಲುತ್ತಾನೋ ಆಗ ಅವಳ ಒಡತಿಯೂ ಸೇರಿದಂತೆ ಇಡೀ ಕಾಮಾಟಿಪುರ ಗಂಗೂಬಾಯಿಗೆ ತಲೆಬಾಗುತ್ತದೆ. ಅಲ್ಲಿಂದ ಅವಳ ಖದರೇ ಬದಲಾಗಿ ಹೋಗುತ್ತದೆ.
ಕಾಮಾಟಿಪುರದಲ್ಲಿ ಒಡತಿ ಶೀಲಾ ಮೌಸಿ ತೀರಿಕೊಂಡಾಗ ಗಂಗೂಬಾಯಿಯೇ ಒಡತಿ ಆಗುತ್ತಾಳೆ. ಆಗಲೇ ಅವಳು ವೇಶ್ಯಾವೃತ್ತಿಯಲ್ಲಿ ತೊಡಗಿರುವವರಿಗೆ ನ್ಯಾಯಯುತವಾದ ಬದುಕನ್ನು ಕಲ್ಪಿಸಿಕೊಡಲು ಹೋರಾಟಕ್ಕಿಳಿಯುತ್ತಾಳೆ. ವಾರಕ್ಕೊಂದು ರಜಾ ಕೊಟ್ಟು, ಆ ಹುಡುಗಿಯರನ್ನು ಸಿನಿಮಾಕ್ಕೆ, ಹೋಟೆಲ್‍ಗಳಿಗೆ ಸುತ್ತಾಡಿಸುತ್ತಾಳೆ. ಮುಂದೆ ಚುನಾವಣೆಗೆ ನಿಂತು ಗೆದ್ದು ಕಾಮಾಟಿಪುರಕ್ಕೆ ಅಧ್ಯಕ್ಷೆಯಾಗುತ್ತಾಳೆ.
ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ಎಂದು ಅವಳು ಕೇಳಿಕೊಂಡದ್ದು ಈ ದೇಶದ ಪ್ರಧಾನಿ ನೆಹರೂ ಅವರನ್ನು. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕೆಂಬ ಹೋರಾಟ ಈಗಲೂ ನಡೆಯುತ್ತಿದೆ. ಆದರೆ ಗಂಗೂಬಾಯಿ ಆಗ ಅರವತ್ತರ ದಶಕದಲ್ಲೇ ಈ ಪ್ರಶ್ನೆಯನ್ನು ಪ್ರಧಾನಿಯವರೆಗೆ ಒಯ್ದಿದ್ದಳು. ಅಷ್ಟೇ ಅಲ್ಲ, ಮುಂಬೈನ ಆಜಾದ್ ಮೈದಾನದಲ್ಲೂ ತಮ್ಮ ಕಾನೂನುಬದ್ಧ ಬೇಡಿಕೆಗಳನ್ನು ಜನರ ಮುಂದಿಡುತ್ತಾಳೆ.
ಕಾಮಾಟಿಪುರಕ್ಕೆ ತಾಗಿದಂತೆ ಶಾಲೆ ತೆರೆಯಲು ಹೊರಟಾಗ, ಕೆಲವು ಪೋಷಕರು ಹಾಗೂ ಶಿಕ್ಷಕರು ಸೇರಿ ಕಾಮಾಟಿಪುರವನ್ನು ಮುಚ್ಚಿಸಬೇಕು, ಗಂಗೂಬಾಯಿಯನ್ನು ಇಲ್ಲಿಂದ ಓಡಿಸಬೇಕು, ಇಲ್ಲದಿದ್ದರೆ ಶಾಲೆಯ ವಾತಾವರಣ ಹದಗೆಡುತ್ತದೆಂದು ಧರಣಿ ಮಾಡುತ್ತಾರೆ. ಆಗ ಸ್ವತಃ ಗಂಗೂಬಾಯಿ ಅಲ್ಲಿರುವ ಮಕ್ಕಳನ್ನು ಕರೆದುಕೊಂಡು ಶಾಲೆಗೇ ಬಂದು ನಮ್ಮ ಮಕ್ಕಳಿಗೂ ಶಿಕ್ಷಣ ಕೊಡಿ, ಈ ಶಾಲೆಯ ವಾತಾವರಣದ ಪ್ರಭಾವ ಕಾಮಾಟಿಪುರದ ಮೇಲಾಗಿ ಅದರ ವಾತಾವರಣ ಬದಲಾಗಲಿ ಬಿಡಿ ಎಂದು ಹೇಳುತ್ತಾಳೆ. ಅಲ್ಲಿ ಸಿಕ್ಕ ಪತ್ರಕರ್ತನಿಗೆ `ಓ...ನೀನು ಜರ್ನಲಿಸ್ಟಾ- ನಾನು ಗಂಗೂಬಾಯಿ ಅಂತ. ನಾನು ಒಬ್ಬ ವೇಶ್ಯೆ’ ಎಂದು ಯಾವ ಮುಚ್ಚುಮರೆಯೂ ಇಲ್ಲದೇ ಪರಿಚಯಿಸಿಕೊಳ್ಳುತ್ತಾಳೆ. ನಂತರ ಅದೇ ಪತ್ರಕರ್ತ ಇವಳನ್ನು ಸಂದರ್ಶಿಸಿ ಲೇಖನವನ್ನೂ ಪ್ರಕಟಿಸುತ್ತಾನೆ. ಆಗ ಕೆಲವು ಓದುಗರ ಪತ್ರವನ್ನು ತಂದು ಅವಳ ಮುಂದೆ ಓದುತ್ತಾನೆ. ಅದರಲ್ಲಿ
ಅಕ್ಕತಂಗಿಯರೇ’ ಎಂಬ ಸಂಬೋಧನೆ ಕೇಳಿ ಅವಳ ಅಕ್ಕಪಕ್ಕದಲ್ಲಿರುವ ಗೆಳತಿಯರೆಲ್ಲ ನಮಗೆಂಥ ಅಣ್ಣತಮ್ಮಂದಿರು’ ಎಂದು ಬಿದ್ದೂಬಿದ್ದು ನಗುವಾಗ ಪ್ರೇಕ್ಷಕರಿಗೆ ವಾಸ್ತವದ ವ್ಯಂಗ್ಯ ಚುಚ್ಚುತ್ತದೆ.
ಗಂಗೂಬಾಯಿ ಕಾಠಿಯಾವಾಡಿ’ ತುಂಬ ಡೈಲಾಗ್ಸ್ ಓರಿಯಂಟೆಡ್ ಸಿನಿಮಾ ಆಗಿದೆ, ಅಷ್ಟೊಂದು ಭಾವುಕವಾಗಿ, ಆದ್ರ್ರತೆಯಿಂದ ಕೂಡಿಲ್ಲ ಎಂಬ ವಿಮರ್ಶೆ ಈ ಸಿನಿಮಾ ಕುರಿತು ಕೇಳಿಬರುತ್ತಿದೆ. ಆದರೆ ನಿರ್ಭಾವುಕವಾಗಿರುವುದೇ ಈ ಸಿನಿಮಾದ ಹೈಲೈಟ್ ಎಂಬುದು ನನ್ನ ಭಾವನೆ.
ಹೋರಾಟಗಾರ್ತಿ
ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಸಿನಿಮಾಗಳು, ಕಾದಂಬರಿಗಳು, ಕಥೆಗಳು, ಕವಿತೆಗಳು ಯಾವುದೂ ಹೊಸತಲ್ಲ. ಹಾಗೆ ನೋಡಿದರೆ ಈ ಸಿನಿಮಾವನ್ನು ಕೆಲವು ಕಡೆ ಹಿಂದಿನ ಪಾಕೀಝಾ’ ಕ್ಕೂ ಹೋಲಿಸಿದ್ದಾರೆ. ಹಾಗೆಯೇ ಕನ್ನಡದಲ್ಲಿ ದೇವದಾಸಿಯ ಕತೆಯ ಸುತ್ತ ಹೆಣೆದಿರುವ
ಗೆಜ್ಜೆಪೂಜೆ’, ಗಂಡ ತೀರಿಹೋದ ಮೇಲೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವೇಶ್ಯೆಯಾಗುವ ಹೂವು ಹಣ್ಣು’,
ಮಸಣದ ಹೂವು’, ಇದೇ ರೀತಿಯ ಕಥೆ ಹೆಣೆದಿರುವ ಹಿಂದಿಯ `ಸಡಕ್’ -ಹೀಗೆ ಬೇಕಾದಷ್ಟು ಸಿನಿಮಾಗಳು ಬಂದಿವೆ. ಆದರೆ ಗಮನಿಸಬೇಕಾದ ಅಂಶವೇನೆಂದರೆ ಇವೆಲ್ಲ ವೈಯಕ್ತಿಕ ನೆಲೆಗಟ್ಟಿನಲ್ಲಿ ನಿಲ್ಲುವಂಥವು. ತಾವು ಸಿಲುಕಿದ ಈ ಜಾಲದಲ್ಲಿ ಒದ್ದಾಡಿ, ಅಸಹ್ಯಪಟ್ಟುಕೊಂಡು ಇದರಿಂದ ಹೊರಗೆ ಬರಬೇಕೆಂದು ಅಂದುಕೊಂಡೂ ಹೊರಬರಲಾರದೆ ಕಡೆಗೆ ದುರಂತ ಅಂತ್ಯ ಕಂಡ ಕಥೆಗಳಿವು.
ಆದರೆ ಈ ಸಿನಿಮಾದಲ್ಲಿ ಗಂಗೂಬಾಯಿ ಮೋಸಕ್ಕೊಳಗಾಗಿ ಬಂದದ್ದು ನಿಜ. ಆದರೆ ಅದರಲ್ಲೇ ದುಃಖ ಪಡುತ್ತಾ ಕೊರಗಲಿಲ್ಲ. ಬದಲಾಗಿ ಅದು ಅನಿವಾರ್ಯ ಎಂದಾದ ಮೇಲೆ ಅದನ್ನು ಒಪ್ಪಿಕೊಂಡು ತನ್ನವರಿಗಾಗಿ ನ್ಯಾಯಯುತ ಬದುಕನ್ನು ಕಲ್ಪಿಸಿಕೊಡಲು ಹೋರಾಡುತ್ತಾಳೆ. ವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸಿ ಎನ್ನುವುದರಿಂದ ಹಿಡಿದು, ಅವರಿಗೆ ವಾರಕ್ಕೊಮ್ಮೆ ರಜೆ, ಅವರ ಮೇಲೆ ಯಾವುದೇ ರೀತಿಯ ದಬ್ಬಾಳಿಕೆ ನಡೆಯಬಾರದು, ಅವರ ಮಕ್ಕಳಿಗೆ ಶಿಕ್ಷಣ ಸಿಗಬೇಕು ಇತ್ಯಾದಿಯಾಗಿ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸಲು ಹೋರಾಡುತ್ತಾಳೆ. ಜೊತೆಗೆ ಈ ದಂಧೆಗೆ ಅನಿವಾರ್ಯವಾಗಿ ಸಿಲುಕಿಕೊಳ್ಳುವ ಹೆಣ್ಣುಮಕ್ಕಳನ್ನು ಒತ್ತಾಯಿಸದೇ, ಹೆದರಿಸದೇ ಅವರು ಬಯಸಿದರೆ ಅವರನ್ನು ಮನೆಗೆ ಕಳುಹಿಸಿ ಮಾನವೀಯತೆ ಮೆರೆಯುತ್ತಾಳೆ. ಈ ಕಾರಣಕ್ಕೆ ಈ ಸಿನಿಮಾ ತುಂಬ ಭಿನ್ನವಾಗಿ ನಿಲ್ಲುತ್ತದೆ.
ಈ ಸಿನಿಮಾವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ ಇದರ ಸೂಕ್ಷ್ಮ ಭಾವನಾತ್ಮಕ ಹೆಣಿಗೆಗಳು ನಮಗೆ ಅರ್ಥವಾಗುತ್ತವೆ. ಗಂಗೂಬಾಯಿಯನ್ನು ಪ್ರೀತಿಸುವ ದರ್ಜಿಯೊಂದಿಗೆ ಇಸ್ಪೀಟ್ ಆಡುವ ಗಂಗೂಬಾಯಿ ನಂತರ ಅದೇ ಹುಡುಗನಿಗೆ ಅಲ್ಲಿ ಇಷ್ಟವಿಲ್ಲದೆ ಬಂದ ಹುಡುಗಿಯೊಬ್ಬಳನ್ನು ಕೊಟ್ಟು ಮದುವೆ ಮಾಡುತ್ತಾಳೆ. ವಧುವರರಿಬ್ಬರನ್ನೂ ಕಾರಲ್ಲಿ ಕೂರಿಸಿ ಕಳಿಸಿದ ಮೇಲೆ ತಾವು ಆಡುತ್ತಿದ್ದ ಒಂದೊಂದೇ ಕಾರ್ಡ್‍ಗಳನ್ನು ತನ್ನ ನೀರು ಜಿನುಗುತ್ತಿದ್ದ ಕಣ್ಣುಗಳಿಂದ ನೋಡುತ್ತ ಎಸೆಯುವುದು ಹೃದಯವನ್ನು ಕಲಕುತ್ತದೆ. ಅದೇ ರೀತಿ ಒಮ್ಮೆ ತನ್ನ ತವರಿಗೆ ಫೋನ್‍ಮಾಡಿ ತನ್ನ ಅಮ್ಮನೊಡನೆ ಮಾತನಾಡುತ್ತಾಳೆ. ಟ್ರಂಕ್‍ಕಾಲ್ ಮಾಡಿದಾಗ ಅವಳ ಅಮ್ಮ ಏನಕ್ಕೆ ಫೋನ್ ಮಾಡಿದ್ದೆ ಎಂದು ನಿರ್ಮಮಕಾರದಿಂದ ಮಾತನಾಡಿದಾಗ ಇವಳಿಗೆ ನೋವಾಗುತ್ತದೆ. ಟ್ರಂಕ್‍ಕಾಲ್‍ನಲ್ಲಿ ಪದೇಪದೆ ಮೂರು ನಿಮಿಷ ಇದೆ, ನಾಲ್ಕು ನಿಮಿಷ ಇದೆ ಎಂದು ಎಚ್ಚರಿಸುವಾಗಲೆಲ್ಲ ಅವಳ ಧ್ವನಿ ಜೋರಾಗುತ್ತ ಹೋಗುತ್ತದೆ. ಧ್ವನಿ ನಡುಗುತ್ತ, ಕಣ್ಣಲ್ಲಿ ನೀರು ಜಿನುಗುತ್ತ ಇದ್ದರೂ ಜೋರು ಮಾಡಿ ಫೋನ್ ಇಡುತ್ತಾಳೆ. ಹೀಗೆ ಪ್ರತಿ ಫ್ರೇಮ್ ಅನ್ನೂ ಬನ್ಸಾಲಿ ಸೂಕ್ಷ್ಮವಾಗಿ ಹಿಡಿದಿಟ್ಟಿದಾರೆ. ಹಾಗೆಯೇ ಇಡೀ ಸಿನಿಮಾವನ್ನು ಆವರಿಸಿಕೊಂಡಿರುವ ಆಲಿಯಾ ಭಟ್ ನಿಜಕ್ಕೂ ಅತಿ ಚಿಕ್ಕ ವಯಸ್ಸಿಗೆ ಅತಿ ಪ್ರಬುದ್ಧ ಅಭಿನಯ ನೀಡುವ ನಟಿ. ಗಂಗೂಬಾಯಿಯೇ ಆಲಿಯಾಳನ್ನು ಆವಾಹಿಸಿಕೊಂಡಿದ್ದಾಳೇನೋ ಎಂಬಂತೆ ನಟಿಸಿದ್ದಾಳೆ ಆಲಿಯಾ.
ನಿಜಕ್ಕೂ ಸಿನಿಮಾ ನೋಡಿ ಮುಗಿಸಿದ ಮೇಲೆ, ಕಾಮಾಟಿಪುರ, ಅಲ್ಲಿ ಕೇಳಿಬರುವ ನೋವಿನ ನಿಟ್ಟುಸಿರು, ವ್ಯಂಗ್ಯ ತುಂಬಿದ ನಗು, ಬಹುದಿನಗಳವರೆಗೆ ನಮ್ಮನ್ನು ತಟ್ಟುತ್ತಲೇ ಇರುತ್ತದೆ. ಅಲ್ಲಿರುವ ಹೆಣ್ಣುಗಳ ವಿಷಾದ, ನೋವು, ನಮ್ಮನ್ನು ಬಹುದಿನಗಳವರೆಗೆ ಕಾಡುತ್ತದೆ.
ಭಾರತಿ ಹೆಗಡೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.