ಸಿನಿಮಾತು / ಅವಳೊಬ್ಬಳಿದ್ದಳು ಮೀನಾ! – ಜಯಶ್ರೀ ದೇಶಪಾಂಡೆ

ಛೋಟೀ ಬಹೂ! – ಅವಳ ಎಲ್ಲ ಪ್ರಯತ್ನಗಳಿಗೂ ದೊರಕಿದ್ದು ಸೋಲು, ನಿರಾಸೆ, ನಿರಾಕರಣೆಯ ಉತ್ತರ ಮಾತ್ರವೇ. ತಾನು ಸಪ್ತಪದಿ ತುಳಿದು ಬಂದ ಅದೇ ಭವ್ಯ ಬಂಗಲೆಯೊಳಗೆ ಸಮಾಧಿಯಾಗುವವರೆಗೆ ದುಶ್ಚಟಗಳಲ್ಲಿ ಜಾರುತ್ತಾಳೆ .  ಆದರೆ ಅಳಲಿಲ್ಲ ಛೋಟೀ ಬಹೂ! ಅವಳ ಅಳು ಇದ್ದದ್ದು ಆ ಗಾಢ ನಿಮೀಲಿತ ನೇತ್ರಗಳೊಳಗಿನ ಆರ್ತತೆಯಲ್ಲಿ. ಇಲ್ಲ, ಅವಳು ಅಳುವುದಿಲ್ಲ ಕಣ್ಣಿನಲ್ಲೇ ತನ್ನ ಅಳುವನ್ನು ಕೊಂದು ಬಚ್ಚಿಟ್ಟು ಕಣ್ಣೀರಿಗೇ ಅಳುವನ್ನು ಕಲಿಸುತ್ತಾಳೆ!

”ನ ಜಾವೋ ಸೈಂಯಾ ಛುಡಾಕೆ ಬೈಂಯಾ ಕಸಮ್ ತುಮ್ಹಾರೀ ಮೈ ರೋ ಪಡೂಂಗೀ ..” ಗೋಗರೆಯುತ್ತಾಳೆ ಅವಳು. ‘ರೋ ಪಡೂಂಗೀ’ ಅನ್ನುತ್ತಿರುವ ಅವಳ ಕಣ್ಣುಗಳಲ್ಲಿ ನೀರಿನ ಪಸೆ ಮಾತ್ರ ಇಲ್ಲ! ಅದು ಜೀವದ ಹತಾಶ ಚಡಪಡಿಕೆ ಭಾವದ ಮುಖಾಂತರ ಆ ನಯನಗಳಲ್ಲಿ ಪ್ರತ್ಯಕ್ಷವಾಗಿರುವುದಷ್ಟೇ… ಇಲ್ಲ, ಕಣ್ಣೀರಲ್ಲ, ಅದು. ನಿರಾಸೆ, ಹತಪ್ರಯತ್ನಗಳ ಪರಮಾವಧಿಯನ್ನು ತಲುಪಿದ ಕ್ಷಣಗಳಲ್ಲಿ ಸಾಮಾನ್ಯವಾಗಿ ಹೆಣ್ಣಿನ ಸಹಾಯಕ್ಕೆ ಬರುವ , ತನ್ಮೂಲಕ ಸಂದರ್ಭಕ್ಕೊಂದು ವಿಷಣ್ಣ, ಅತಾರ್ಕಿಕ ಸಮಾರೋಪವನ್ನು ತಂದಿಳಿಸುವ ಅಸ್ತ್ರವೂ ಅಲ್ಲ. ಆ ಕಣ್ಣುಗಳಲ್ಲಿರುವುದು ಅವರ್ಣನೀಯ ವೇದನೆ. ತನ್ನಿಂದ ತಪ್ಪಿಸಿಕೊ೦ಡು ವೇಶ್ಯೆಯಲ್ಲಿ  ಸ್ವರ್ಗ ಕಾಣಲು ಹೋಗುತ್ತಿದ್ದ ಪತಿಯಲ್ಲಿ ಕಣ್ಣೀರನ್ನೂ ಹಿಂದಿರಿಸಿ ಬೇಡಿಕೆ, ಹತಾಶೆ, ಅನುನಯಭರಿತ ಪ್ರಣಯ ಯಾಚನೆಯ ಒಸಗೆಯನ್ನು ಇಟ್ಟ ಅಹವಾಲು! ಹೌದು, ಅವಳು ಮೀನಾಕುಮಾರಿ.. ಅವಳೇ ಮೀನಾಕುಮಾರಿ, ಕಳೆದ ಶತಮಾನದ ಹಿಂದಿ ಸಿನಿತೆರೆಯ ದುರಂತ ನಾಯಕಿ.

ಈ ಸಂದರ್ಭ “ಸಾಹಿಬ್ ಬೀಬಿ ಔರ್ ಗುಲಾಮ್” ಚಿತ್ರದ್ದು, ಬೀಬಿ ಮೀನಾಕುಮಾರಿ, ಅವಳೇ ಛೋಟಿ ಬಹು.. ದೊಡ್ಡ ಜಮೀನುದಾರರ ಮನೆಯ ಚಿಕ್ಕ ಮಗನಾಗಿ ಹುಟ್ಟಿ ಸುಖ ಭೋಗ, ಐಷಾರಾಮಗಳನ್ನು ಮಾತ್ರವೇ ಉಂಡು ಬೆಳೆದ ರಹಮಾನ್ ಛೋಟಿ ಬಹೂಳ ಗಂಡ, ಅವನೇ ಈ ಸಾಹೇಬ್, ಮದ ಮತ್ಸರ, ಕಾಮ-ಮೋಹಗಳ ಭಂಡಾರವಾಗಿರುವ ವ್ಯಕ್ತಿತ್ವಕ್ಕೆ ನಿದರ್ಶನ ಅವನೇ … ಹಳೆಯ ಕಾಲದ ಜಮೀನುದಾರರಲ್ಲಿ ಅನೇಕರ ತದೇಕ ವ್ಯಕ್ತಿಚಿತ್ರಣದಂತೆ ಯಥಾವತ್ ಅವನು. ದುಡ್ಡು- ಕೊಳೆತು ಹೋಗುವಷ್ಟು ದುಡ್ಡು. ಕಣ್ಣು ಹಾಯಿಸಿದಷ್ಟು ದೂರಕ್ಕೆ ಚಾಚಿಕೊಂಡಂಥ ಹಚ್ಚ ಹಸಿರು ಜಮೀನು… ಊರೆಲ್ಲ ಇವರ ಅಡಿಯಾಳು.

‘ನಿನ್ನಕಾಲುಗಳಡಿಯಲ್ಲಿ ಏನೆಲ್ಲಾ ಐಷಾರಾಮಗಳಿರುವಾಗ ಏಕೆ ದುಃಖತಪ್ತಳಾಗಿರುವೆ ಬಹೂ?’ ಎಂದು ಯಾರೂ ಕೇಳುವವವರಿಲ್ಲ ಅಲ್ಲಿ. ಸಪ್ತಪದಿ ತುಳಿದು ಆ ಅರಮನೆಯಂಥ ಬಂಗಲೆಗೆ ಬಂದಿದ್ದ ಚಿಕ್ಕ ಸಾಹೇಬನ ಎಳೆಯಯಸ್ಸಿನ ಸತಿಯನ್ನು ಮಾತನಾಡಿಸುವವರಿಲ್ಲ. ಇನ್ನುಳಿದ ಬಹೂಗಳಿಗೆ  ಐಶ್ವರ್ಯದ್ದೇ ಕನಸು, ಸುಖ, ನೆಮ್ಮದಿ, ಒಂದರ್ಥದಲ್ಲಿ ಅದೇ ಬದುಕಿನ ವ್ಯಾಖ್ಯೆ… ಅರ್ಥ, ಸಕಲವೂ. ಇದು ಬೇಕಿಲ್ಲದ ಬಹು , ಸೊಸೆ.. ಇವಳೊಬ್ಬಳೇ.. ”ಗೆಹನೇ ಬನವಾಂವೂ ..ಗೆಹನೇ ತುಡವಾಂವೂ.. ಕ್ಯಾ ಯಹೀ ಹೋತೀ ಹೈ ಜಿಂದಗೀ?’ ಎನ್ನುತ್ತ ಚಿನ್ನ, ರನ್ನದೊಡವೆಗಳ ಸುಖಗಳಿಗೂ ಛೀತ್ಕಾರವಿಡುತ್ತಾಳೆ. ಕಳಚಿ ಬಿಸಾಕಿ ತಿಳಿವಸ್ತ್ರಗಳಲ್ಲಿರುತ್ತಾಳೆ. ಏನೇ ಮಾಡಿದರೂ ಹೃದಯದಲ್ಲಿ ಉರಿಯುತ್ತಿರುವ ಬೆಂಕಿ ಆರದು. ಅದಕ್ಕೆ ಬೇಕಿರುವುದು ಗಂಡ ಎನಿಸಿಕೊಂಡವನ ಪ್ರೀತಿ. ಮದುವೆಯೆಂಬ ಬಂಧನದ ತಳಹದಿ..ಹೆಣ್ಣು ತನ್ನ ಮುಂದಿನ ಬದುಕಿಡೀ ಕಳೆಯುವ ಆಧಾರವಾದ ಅಮೃತ. ಇದರಿಂದ ವಂಚಿತಳಾದ ಛೋಟೀ ಬಹೂ ಕಣ್ಣೀರನ್ನು ಕಣ್ಣಿನಿಂದ ಹೊರಗಿಳಿಯಗೊಡದೆಯೂ ಅಳುತ್ತಿರುತ್ತಾಳೆ!

ಅಲ್ಲಿಗೆ ಮೋಹಿನೀ ಸಿಂಧೂರ ಹಿಡಿದು ಬಂದ ಸೇವಕ -ಗುಲಾಮ ಭೂತನಾಥನ (ಗುರುದತ್ತ) ತರುಣ ಮನಕ್ಕೆ ಒಂದು ಸಂಗತಿ ಮಾತ್ರ ತಿಳಿದಿದೆ. ಛೋಟೀ ಬಹೂ ಎಲ್ಲರಂಥವಳಲ್ಲ. ಅದೊಂದು ಅವ್ಯಕ್ತ ಆರ್ತನಾದದ ವಿಗ್ರಹ ಎಂದು ಮಾತ್ರ ಅರಿತುಕೊಳ್ಳುತ್ತದೆ ಅವನ ಯುವ ಹೃದಯ. ಮೋಹಿನೀ ಸಿಂಧೂರ ಹಚ್ಚಿಕೊಂಡರೆ ಸದಾ ವೇಶ್ಯೆಯಲ್ಲಿ  ಸುಖ ಕಾಣುವ ಪತಿ ತನ್ನತ್ತ ತಿರುಗಬಹುದೆಂಬ ಲೋಕಾರೂಢಿಯ ನಂಬಿಕೆಗೆ ಜೋತು ಬಿದ್ದು ಸಿಂಧೂರಕ್ಕಾಗಿ ಹಂಬಲಿಸುವ ಛೋಟೀ ಬಹೂ ತನ್ನ ಮನಸ್ಸನ್ನು ಅರಿಯದೆ ಆಕ್ರಮಿಸಿಕೊಳ್ಳುವುದನ್ನು ತಡೆಯಲಾಗದೇ ಒದ್ದಾಡುತ್ತ ಉಳಿದುಬಿಡುವ ಮುಗ್ಧ ಭೂತನಾಥ. ತಾನು ಏನು ಮಾಡಿದರೆ ಅವಳ ನೋವನ್ನು ಇಳಿಸಿಯೇನು ಎಂಬ ತುಡಿತದಲ್ಲಿ ಅವಳ ಗುಪ್ತ ಸಹಾಯಕನಾಗಿಬಿಡುತ್ತಾನೆ.

ಇಲ್ಲಿ ಮೀನಾ ಕುಮಾರಿ ನಟಿಯಲ್ಲ ಛೋಟೀ ಬಹುವೇ ಆವಿರ್ಭವಿಸಿರುವ ಜೀವಾತ್ಮ. ಗಂಡ ತನ್ನ ಹಕ್ಕು ,ಅವನ ಪ್ರೀತಿ ತನಗೆ ಸಪ್ತಪದಿಯ ಮೂಲಕ ಲಭಿಸಿರುವ ಇನ್ನೂ ದೊಡ್ಡ ಹಕ್ಕೆಂದು ಚಲಾಯಿಸಿವ ಧಾರ್ಷ್ಟ್ಯ ಅವಳದಲ್ಲ. ಮಾತಿನಲ್ಲಿ ಒಡನುಡಿಯಲಾಗದ ಸಂಕಟವನ್ನು, ಕಣ್ಣೀರಿನಲ್ಲಿ ತೊಳೆದು ಹಾಕಲಾಗದ ವೇದನೆಯನ್ನು ಕರುಳಿನ ಸುರುಳಿಗಳೊಳಗೇ ಅಡಗಿಸಿ ಎಲ್ಲವನ್ನೂ ನುಂಗಿಬಿಡುವ ಪಾಠವನ್ನು ತನ್ನದೇ ಶರೀರಕ್ಕೆ ಕಲಿಸುತ್ತಾಳೆ. ಆದರೆ ಅವಳದೂ ಉಪ್ಪು, ಹುಳಿ ಖಾರಗಳನ್ನುಂಡ ತರುಣ ಶರೀರ. ಸಹಜವಾಗಿಯೇ ಇರುವ ಮನೋದೈಹಿಕ ಕಾಮನೆಗಳು ಅವಳಲ್ಲಿ ಭುಗಿಲೇಳುತ್ತಿದ್ದರೆ ಅದು ಅವಳದಾಗಲೀ ಅವಳ ಶರೀರದ್ದಾಗಲೀ ತಪ್ಪಲ್ಲ. ಪತಿಯ ಸಂಗ, ಪ್ರೀತಿ,  ಸ್ನೇಹ ಮರೀಚಿಕೆಯಂತೆ ಕಣ್ಣೆದುರೇ ಮಾಯವಾಗುತ್ತಿರುವಾಗ ಜಾರುವ ಮುಷ್ಟಿಯೊಳಗಿನ ಮರಳನ್ನು ಹಿಡಿಯಲೆತ್ನಿಸಿದಂತೆ ಅವನನ್ನು ಹಿಡಿಯಲು ಒದ್ದಾಡುತ್ತಾಳೆ…  ತನ್ನನ್ನು ದೂಡಿ  ವೇಶ್ಯೆಮನೆಗೆ ಪಲಾಯನಮಾಡುತ್ತಿರುವ ಪತಿ ಕೋಣೆ ದಾಟದಿರಲೆ೦ದು ಹರಸಾಹಸ ಮಾಡುತ್ತಾಳೆ, ತನ್ನ ನಿಜವಾಗದ ಕನಸುಗಳನ್ನು ಬೆನ್ನಟ್ಟಿ ಕಣ್ಣಿಗೆ ಕಾಣದ ಕತ್ತಲೆಯಲ್ಲೂ ಓಡುತ್ತಿರುತ್ತಾಳೆ. ಅವಳ ಮನಸನ್ನಾಗಲೀ, ಸಹಜ ಬಯಕೆಗಳನ್ನಾಗಲೀ ಗಮನಿಸದೆ, ಭಾವನೆಗಳಿಗೆ ತಿಲಮಾತ್ರದ ಬೆಲೆಯನ್ನೂ ಕೊಡದ ಗಂಡ ಚಿಕ್ಕ ಸಾಹೇಬ, ”ವೇಶ್ಯೆ ಕೊಡುವ ಸುಖವನ್ನು ನೀನು ಕೊಡಬಲ್ಲೆಯಾ? ಅವಳು ಮಾಡುವುದನ್ನೆಲ್ಲ ನೀನು ಮಾಡಬಲ್ಲೆಯಾ?” ಎಂದು ಬಿಡುವ ಹೀನತನಕ್ಕಿಳಿಯಲು ಹೇಸದಾದಾಗ ಮರ್ಮಾಘಾತಿತಳಾಗುವ ಛೋಟೀ ಬಹೂ ಆಗಲೂ ಹಾಕುವುದು ಕಣ್ಣೀರಲ್ಲ …. ಕಣ್ಣೀರು ಬಂದರೆ ಅದು ಅವಳನ್ನೇ ನಿಟ್ಟಿಸಿ ನೋಡುತ್ತಿರುವ ನಮ್ಮ ನಿಮ್ಮೆಲ್ಲರ ಕಣ್ಣುಗಳಲ್ಲಿ!

ಅಷ್ಟಕ್ಕೇ ಮುಗಿಯಿತೇ ? ಇಲ್ಲ, ಅವನಿಗಾಗಿ .. ಅಂಥ ಹೀನಮನಸ್ಕ ಗಂಡನಿಗಾಗಿ  ವೇಶ್ಯೆ ಮಾಡುವುದನ್ನೆಲ್ಲ ಮಾಡಲಣಿಯಾಗುತ್ತಾಳೆ..  ಪತಿಯನ್ನು ತನ್ನ ಪಲ್ಲಂಗದಲ್ಲಿ ಉಳಿಸಿಕೊಳ್ಳಲು.

”ಪಿಯಾ ಐಸೋ ಜಿಯಾ ಮೇ ಸಮಾಯೆ ಗಯೋ ರೇ ಕಿ ಮೈಂ ತನಮನ ಕೀ ಸುಧಾ ಬುಧ ಗಂವಾ ಬೈಠೀ” ಎನ್ನುತ್ತ ಒಂದು ಪ್ಯಾಲೆ ಮದ್ಯಕ್ಕೆ ಕೈ ಹಾಕಿದವಳು ಅದರಲ್ಲಿ ಮತ್ತೆ ಮೇಲೇಳಲಾಗದಂತೆ ಜಾರಿಬಿಡುತ್ತಾಳೆ. ಕಾರಣ ಅವಳ ಎಲ್ಲ ಪ್ರಯತ್ನಗಳಿಗೂ ದೊರಕಿದ್ದು ಸೋಲು, ನಿರಾಸೆ, ನಿರಾಕರಣೆಯ ಉತ್ತರ ಮಾತ್ರವೇ. ದುಶ್ಚಟಗಳಲ್ಲಿ ಜಾರುತ್ತಾಳೆ ಛೋಟೀ ಬಹು , ಎಲ್ಲಿಯವರೆಗೆ ಎಂದರೆ ತಾನು ಸಪ್ತಪದಿ ತುಳಿದು ಬಂದ ಅದೇ ಭವ್ಯ ಬಂಗಲೆಯೊಳಗೆ ಸಮಾಧಿಯಾಗುವವರೆಗೆ.  ಆದರೆ ಅಳಲಿಲ್ಲ ಛೋಟೀ ಬಹೂ ! ಅವಳ ಅಳು ಇದ್ದದ್ದು ಆ ಗಾಢ ನಿಮೀಲಿತ ನೇತ್ರಗಳೊಳಗಿನ ಆರ್ತತೆಯಲ್ಲಿ… “ನ ಜಾವೋ ಸೈಂಯಾ..” ಎನ್ನುತ್ತಲಿರುವಾಗಲೇ ಕೊಸರಿಕೊಳ್ಳುತ್ತಿದ್ದ ಅವನನ್ನು ತಡೆಯುವುದರಲ್ಲಿ ವಿಫಲಳಾಗಿ ಅಳುತ್ತಾಳೆ… ಇಲ್ಲ, ಅವಳು ಅಳುವುದಿಲ್ಲ ಕಣ್ಣಿನಲ್ಲೇ ತನ್ನ ಅಳುವನ್ನು ಕೊಂದು ಬಚ್ಚಿಟ್ಟು ಕಣ್ಣೀರಿಗೇ ಅಳುವನ್ನು ಕಲಿಸುತ್ತಾಳೆ!

ನನ್ನನ್ನು ಇನ್ನಾವ ನಟಿಯ ‘ಅಳು’ವೂ ಇಷ್ಟು ಗಾಢವಾಗಿ ಕಾಡಿದ್ದಿಲ್ಲ. ದಶಕಗಳೇ ಉರುಳಿ ಹೋದರೂ ಅವಳ ನಿಮೀಲಿತ ನೇತ್ರಗಳೊಳಗಿ೦ದ ಗುಪ್ತವಾಗಿ ಹೊರಚೆಲ್ಲುವ ಹನಿಗಳು ನನ್ನ ಕಣ್ಣೆದುರಲ್ಲಿವೆ… ಮೀನಾ ಕುಮಾರಿ ತನ್ನ ಬದುಕೇ ಪ್ರತಿಫಲಿಸಿದ ವರ್ಣಚಿತ್ರವಾಗಿ ಹಗಲಿರುಳು ಕಾಡಿದರೆ ಉತ್ತರವಾಗಿ ಹೊರಬರುವುದು ಒಂದು ನಿಟ್ಟುಸಿರು ಅಷ್ಟೇ!

ಕಾಲ ಅಲ್ಲಿಗೇ ನಿಲ್ಲಲಿಲ್ಲ…ನಿಲ್ಲುವುದೂ ಇಲ್ಲ.

ಇಂದಿನ ವಾಸ್ತವದಲ್ಲಿ ಈ ಮೀನಾ ಮತ್ತು ಮೀನಾಳಂಥವರ ಕಾಲ ಅವಳೊಂದಿಗೆ ಗತಕ್ಕೆ ಸಂದು ಹೋಗಿದೆಯೇ?

– ಜಯಶ್ರೀ ದೇಶಪಾಂಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *