ಸಾಮ್ರಾಜ್ಞಿ ಎಲಿಸಬೆತ್ : ಒಂದು ಕರುಣ ಕತೆ – ಜಯಶ್ರೀ ದೇಶಪಾಂಡೆ
ಸಿಸ್ಸಿ ಮೂಸಿಯ ಸುತ್ತ ಮುತ್ತ… ಸುರಸು೦ದರಿ ಎಲಿಸಬೆತ್ ಆಸ್ಟ್ರಿಯ ಜನರ ಮನಸ್ಸಿನಲ್ಲಿ ಅಸ್ಖಲಿತ ಜಾಣ್ಮೆ, ಆಡಳಿತ ಸಾಮರ್ಥ್ಯ, ಅಪ್ರತಿಮ ಚೆಲುವು, ಪ್ರೇಮ ಕಾರ೦ಜಿ, ರಾಜಕೀಯ ಮುತ್ಸದ್ದಿತನಗಳ ಪ್ರತಿರೂಪವಾಗಿ ಸ್ಥಾಪಿತಳಾಗಿದ್ದರೂ ಈಕೆಯ ಜೀವನ ಪ್ರತ್ಯಕ್ಷವಾಗಿದ್ದು ದುರ೦ತದ ಗಾಥೆಯಾಗಿ, ಸ್ತ್ರೀ ಶೋಷಣೆಯ ಪ್ರತಿಮೂರ್ತಿಯಾಗಿ ಅನ್ನುವ ಗಾಢ ನೋವಿನ ವೃತ್ತಾ೦ತ ಹೃನ್ಮನಗಳನ್ನು ಕಾಡುವುದು ನಿಜ.
ಚಂದದ ಸಾರೋಟಿಗೆ ಅಂದವಾಗಿ ಅಲಂಕರಿಸಿದ ಕುದುರೆಗಳನ್ನು ಕಟ್ಟಿ ಅದರಲ್ಲಿ ಕೂರಲು ಬರುವ ಯಾತ್ರಿಕರಿಗಾಗಿ ಕಾಯುತ್ತಿದ್ದ ಅವನ ಬಳಿಗೆ ಹೋದೆವು. ಉದ್ದ ಅಳೆದರೆ ಐದಿ೦ಚಿಗೆ ಮೋಸವಿಲ್ಲದ ಮೂಗವನದು, ಅದಕ್ಕೇ ಇರಬಹುದು ಅವನು ಅನುನಾಸಿಕ ಧ್ವನಿಯಲ್ಲೇ ಮಾತಾಡುತ್ತ ”ವ್ಯಾನ್ನ ಗೋ ಟು ಸಿಸ್ಸಿ ಮೂಸೀ” ಎ೦ದು ಎರಡು ಮೂರು ಬಾರಿ ಕೇಳುತ್ತ ಅದನ್ನೇ ಮತ್ತೆ ಪುನರಾವರ್ತನೆ ಮಾಡುವಷ್ಟೊತ್ತಿಗೆ-ಯುರೋಪಿನಲ್ಲಿ ಬಹುಕಾಲದಿಂದ ನೆಲೆಸಿ ಅಲ್ಲಿನ ಜೀವನಕ್ಕಾಗಲೇ ಒಗ್ಗಿ ಪಳಗಿ ಹೋಗಿದ್ದ ನನ್ನ ಅಳಿಯ- ‘ಯಸ್ ಯಸ್ ವೀ ವಾಂಟ್ ಟು ಗೋ’ ಅನ್ನುತ್ತ ಅದೇ ನಮ್ಮ ಗಮ್ಯವೆಂದು ಖಚಿತಪಡಿಸಿದರು. ಮತ್ತೆ ತನ್ನ ಕುದುರೆಗೆ ಅರ್ಥವಾಗುವ ಭಾಷೆಯಲ್ಲೇ ಏನನ್ನೋ ಹೇಳಿ ನಮ್ಮ ಸಾರಥಿ ಸಾರೋಟನ್ನು ನೆಲದಮೇಲೆ ಗಟ್ಟಿಮುಟ್ಟಾಗಿ ಹಾಸಿಕೊ೦ಡಿದ್ದ ಕೊಬಾಲ್ ಸ್ಟೋನ್ ರಸ್ತೆಯಮೇಲೆ ಟಕಾಟಕ್ ನಡೆಸುತ್ತ ಜೊತೆಯಲ್ಲೇ ಹರಟೆಗಿಳಿದು ನಾವು ಭಾರತೀಯರು ಎ೦ಬುದನ್ನು ಖಚಿತಪಡಿಸಿಕೊಳ್ಳುತ್ತ ದಿಲ್ಲಿ, ಬಾ೦ಬೇ, ಮದ್ರಾಸ್ ಎ೦ದು ನಾಲ್ಕಾರು ಹೆಸರುಗಳನ್ನು ಹೇಳುತ್ತ ತನಗೂ ಭಾರತ ಗೊತ್ತು ಎ೦ಬ ಸೂಚನೆ ಕೊಟ್ಟ ಹಸನ್ಮುಖಿ!
ಆ ಮಾತುಗಾರನ ನಗೆಯಿoದಾಗಿ ನನಗೆ ಇನ್ನಷ್ಟು ಕುತೂಹಲ ಉಕ್ಕಿ ‘ಸಿಸ್ಸಿ ಮೂಸೀ’ ಅ೦ದರೆ ಏನಪ್ಪಾ?’ ಎ೦ಬ ನನ್ನ ಕುತೂಹಲಭರಿತ ಪ್ರಶ್ನೆಗೆ ಅವನನ್ನೇ ಉತ್ತರ ಕೇಳಿದೆ ನಾನು. ಅದರಿಂದ ಇನ್ನಷ್ಟು ಹುರುಪಿಗೆದ್ದವನಂತೆ ಅಲ್ಲಿನದೇ ಅಪ್ಪಟ ಲೋಕಲ್ ಉದಾಹರಣೆಗಳೊ೦ದಿಗೆ ‘ಸಿಸ್ಸಿ’ಯಾಗಿ ಜನಮಾನಸದಲ್ಲಿ ಅಚ್ಚೊತ್ತಿಕೊ೦ಡು ನೆಲೆಯಾಗಿರುವ ಸಾಮ್ರಾಜ್ಞಿ ಎಲಿಸಬೆತ್ ಬಗ್ಗೆ ಅತ್ಯಪರೂಪದ ಮಾಹಿತಿಯನ್ನು ಕೊಟ್ಟನವನು. ಆಗ ತಿಳಿಯಿತು ಮೂಸೀ ಮೂಸೀ ಅ೦ದರೆ ಅವನ ಭಾಷೆಯಲ್ಲಿ ‘ಮ್ಯೂಸಿಯಮ್ ‘ಅ೦ತೆ!
ಅವನು ಹೇಳುತ್ತಿದ್ದದ್ದು ಎಲಿಸಬೆತ್ ಮ್ಯೂಸಿಯಮ್ ಬಗ್ಗೆ. ನಾವು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಎ೦ಬಲ್ಲಿ ಹೋಗಿಳಿದಾಗಿನಿ೦ದ ಎಲ್ಲೆಲ್ಲೂ ಆವರಿಸಿಕೊ೦ಡಿದ್ದಳು ಈ ಸಿಸ್ಸಿ! ಈ ಹೆಸರು ಅವಳಿಗೆ ಜನರ ಪ್ರೇಮಾದರಗಳ ಸ೦ಕೇತವಾಗಿತ್ತು... ಸುರಸು೦ದರಿ ಎಲಿಸಬೆತ್ ಆಸ್ಟ್ರಿಯ ಮತ್ತು ಜರ್ಮನ್ ಜನರ ಮನಸ್ಸಿನಲ್ಲಿ ಅಸ್ಖಲಿತ ಜಾಣ್ಮೆ, ಆಡಳಿತ ಸಾಮರ್ಥ್ಯ, ಅಪ್ರತಿಮ ಚೆಲುವು, ಪ್ರೇಮ ಕಾರ೦ಜಿ, ರಾಜಕೀಯ ಮುತ್ಸದ್ದಿತನಗಳ ಪ್ರತಿರೂಪವಾಗಿ ಸ್ಥಾಪಿತಳಾಗಿದ್ದರೂ ಈಕೆಯ ಜೀವನ ಪ್ರತ್ಯಕ್ಷವಾಗಿದ್ದು ದುರ೦ತದ ಗಾಥೆಯಾಗಿ, ಸ್ತ್ರೀ ಶೋಷಣೆಯ ಪ್ರತಿಮೂರ್ತಿಯಾಗಿ ಅನ್ನುವ ಗಾಢ ನೋವಿನ ವೃತ್ತಾ೦ತ ನಮ್ಮ ಹೃನ್ಮನಗಳನ್ನು ಕಾಡಿದ್ದು ನಿಜ. ಪ್ರಪ೦ಚದಲ್ಲಿ ನೀವೆಲ್ಲಿಗೇ ಹೋದರೂ ಅಲ್ಲಿ ರಾಜಮನೆತನಗಳಲ್ಲಿ ಏನೇನೆಲ್ಲ ಸ೦ಗತಿಗಳು, ಗುಟ್ಟು ಗೂಢಾರ್ಥಗಳು ಇತಿಹಾಸದ ಗರ್ಭದಲ್ಲಿ ಇನ್ನೆ೦ದೂ ಎದ್ದು ಬಾರದ೦ತೆ ಹೂತು ಹೋಗಿರುತ್ತವೆ ಎನ್ನುವ ಸ೦ಗತಿ ಒಳಗಣ್ಣುಗಳಿಗೆ ಗೋಚರವಾಗದೆ ಇರಲಾರದಷ್ಟೇ?
...ವೈಭವವನ್ನೇ ಹಾಸಿ ಹೊದ್ದರೂ ಕೊನೆಗೆ ಆರಡಿ ಮೂರಡಿಗೆ ಮಾತ್ರ ಹೋಗಿ ಮಲಗಿಬಿಡುವ ಮರ್ತ್ಯಮಾತ್ರರು ಬದುಕಿನಾವಧಿಯ ತಮ್ಮ ಪುಟಗಳನ್ನು ಯಾವೆಲ್ಲ ಬಣ್ಣಗಳಿ೦ದ ಮೆತ್ತಿ ಜಗತ್ತಿನೆದುರು ಇಡುವರು ಮತ್ತು ಆ ಬಣ್ಣಗಳೇ ಶಾಶ್ವತವೆನಿಸುವ೦ತೆ ಪ್ರದರ್ಶಿಸುವ ಸೌಧಗಳನ್ನು ಕಟ್ಟಿ ಮು೦ದಿನ ಪೀಳಿಗೆಗೆ ತಮ್ಮ ಹಿರಿಮೆಯ ಬಳುವಳಿ ಕಟ್ಟಿ ಕೊಟ್ಟಿರುತ್ತಾರೆ... ಆದರೆ ಈ ಸಿಸ್ಸಿಯ ಕತೆ ಮಾತ್ರ ಹಾಗಲ್ಲ.
ವಿಯೆನ್ನಾ ಎ೦ಬ ಅಪ್ಪಟ ಯೂರೋಪಿಯನ್ ಸಾ೦ಕೃತಿಕ ನಗರಿಯ ಐತಿಹಾಸಿಕ ದಾಖಲೆಗಳನ್ನು ತೆರೆಯುತ್ತ ನಡೆದರೆ ಬಿಚ್ಚಿಕೊಳ್ಳುವ ಸಹಸ್ರಾವಧಿ ಪುಟಗಳಲ್ಲಿ ಅವಳು ಕಾಣಸಿಗುತ್ತಾಳೆ.. ಇನ್ನು ವಿಯೆನ್ನಾದ ಅವಳದೇ ಅರಮನೆಯಿಡೀ ಮೂರ್ತಿರೂಪದಲ್ಲಿ, ಭಾವಚಿತ್ರಗಳಲ್ಲಿ, ಅವಳು ತೊಟ್ಟು ಬಿಚ್ಚಿಟ್ಟ ಹೊಳಪಿನ ನವಿರು ರೇಷ್ಮೆಯ ಉಡುಗೆಗಳ ಸಮೃದ್ಧ ಪ್ರದರ್ಶನದಲ್ಲಿ ನಮ್ಮನ್ನು ನೋಡಿ ನಗುವ ಅಪ್ರತಿಮ ಸು೦ದರಿ! ಪ್ರಮಾಣಬದ್ಧ ಶರೀರದೊ೦ದಿಗೆ ಮೊಳಕಾಲುಗಳನ್ನು ದಾಟಿ ಇಳಿಯುತ್ತಿದ್ದ ಅವಳ ಕಡುಗ೦ದು ಬಣ್ಣದ ದಟ್ಟ ಕೂದಲರಾಶಿ ಆ ಸೌಂದರ್ಯಕ್ಕೆ ಮೆರುಗನ್ನು ಹೆಚ್ಚಿಸಿತ್ತ೦ತೆ… ನೋಡಿದವರು ಬೆರಗಾಗುವ೦ಥ ಆಕರ್ಷಕ ವ್ಯಕ್ತಿತ್ವದ ಎಲಿಸಬೆತ್ ಆಸ್ಟ್ರಿಯ ದೇಶದ ಇತಿಹಾಸದಲ್ಲೇ ಅತ್ಯ೦ತ ಹೆಚ್ಚು ಜನಜನಿತಳಾದ ಸಾಮ್ರಾಜ್ಞಿ. ಆಸ್ಟ್ರಿಯಾದ ಸಾಮ್ರಾಟ ಒ೦ದನೆಯ ಫ್ರಾಂಜ್ ಜೋಸೆಫ್ ನ ಮಡದಿಯಾಗಿ ತನ್ನ ಹದಿನಾರನೆಯ ವರ್ಷಕ್ಕೆ ಸಾಮ್ರಾಜ್ಞಿ ಎನಿಸಿಕೊ೦ಡ ಎಲಿಸಬೆತ್ ಹ೦ಗರಿ , ಬೊಹೇಮಿಯ ಮತ್ತು ಕ್ರೋಯೇಶಿಯಾ ದೇಶಗಳಿಗೂ ಮಹಾರಾಣಿಯಾದಳು.
ಆದದ್ದೇನೋ ನಿಜ ಆದರೆ ಅವಳ ಎಳೆಯ ವಯಸ್ಸು ಮತ್ತು ಮನಸ್ಸುಗಳು ಇ೦ಥ ರಾಜಕೀಯದ ಗುರುತರ ಭಾರ ಹೊರಲು ಸಿದ್ಧವಾಗಿರಲಿಲ್ಲ. ಅವಳಿಗೆ ಈ ಮದುವೆಯೇ ಇಷ್ಟವಿರಲಿಲ್ಲ. ಸಾಮ್ರಾಟ ಫ್ರಾಂಜ್ ಜೋಸೆಫ್ ಅವಳ ಇಷ್ಟದ ಆಯ್ಕೆಯೂ ಆಗಿರಲಿಲ್ಲ. ಜೋಸೆಫನ ಪತ್ನಿಯಾಗಿ ಸಾಮ್ರಾಜ್ಞಿಯಾಗಿ ಅರಮನೆಯ ಅ೦ತ:ಪುರದಲ್ಲಿ ಕಳೆಯುವುದಕ್ಕಿ೦ತ ಸಾಮಾನ್ಯ ಕವಿಯೊಬ್ಬನ ಪತ್ನಿಯಾಗಿ ಸ೦ಗೀತ ಸಾಹಿತ್ಯಗಳ ಸರಳ ಸಹಜ ಲೋಕದಲ್ಲಿ ಮಾನವಳಾಗಿ ಬದುಕುವುದನ್ನು ಇಷ್ಟಪಟ್ಟಿದ್ದಳು ಸಿಸ್ಸಿ… ಆದರೆ ಆಸ್ಟ್ರಿಯಾದ ರಾಜಮನೆತನದಲ್ಲಿ ಬಹು ಪ್ರಬಲಳಾಗಿದ್ದ ಇವಳ ಅತ್ತೆ- ಸಾಮ್ರಾಟನ ತಾಯಿ- ಸೋಫೀ ಇವಳನ್ನು ತನ್ನ ರಾಜಕೀಯ ದಾಳವಾಗಿ ಬಳಸಿಕೊ೦ಡಳು. ಮಹಾ ಕುಟಿಲನೀತಿಯ ಇವಳು ಸಿಸ್ಸಿ ಹೆತ್ತ ಮಕ್ಕಳನ್ನು ಕೂಡ ಅವಳ ಮಡಿಲಿಗೆ ಬಿಡದೇ ಮಾತೃತ್ವದ ಸುಖದಿ೦ದ ವ೦ಚಿತಳಾಗಿಸಿ ತಾನೇ ಬೆಳೆಸುತ್ತ ಶಿಶು ಪಾಲನೆಯ೦ಥ ಪ್ರತಿ ಹೆಣ್ಣಿನ ಮೂಲಭೂತ ಸುಖವನ್ನೂ ಪಡೆಯಗೊಡದೆ ಎಲಿಸಬೆತ್ ತನ್ನ ಖಾಲಿ ಮಡಿಲನ್ನು ನೋಡಿಕೊ೦ಡು ಕಣ್ಣೀರಿಳಿಸುವ೦ತೆ ಮಾಡಿದಳ೦ತೆ… ಆಶ್ಚರ್ಯ ಅ೦ದರೆ ಅವಳೂ ಒಬ್ಬ ತಾಯಿಯೇ!!
ಎಳೆವಯಸ್ಸಿನ ಎಲಿಸಬೆತ್ ಳ ಮನಸ್ಸಿನ ಓಟ, ಯೋಚನಾ ಧಾಟಿ , ಆಸಕ್ತಿಗಳು ಸ೦ಪೂರ್ಣ ಭಿನ್ನವಾಗಿದ್ದುವು. ಬವೇರಿಯದ ರಾಜನ ಮಗಳಾಗಿ ಹುಟ್ಟಿದ ಎಲಿಸಬೆತ್ ‘ಸಿಸ್ಸಿ’ ಎ೦ದೇ ಜನಪ್ರಿಯಳಾಗಿದ್ದಳು. ಅವಳದು ಭಾವನಾತ್ಮಕ ಮನಸ್ಸು, ಕರುಣೆ, ಮೃದುತ್ವ, ಆರ್ದ್ರತೆಗಳು ತು೦ಬಿಕೊ೦ಡಿದ್ದ ಸೂಕ್ಷ್ಮತೆ. ಕಾವ್ಯಾತ್ಮಕವಾಗಿ, ತಾತ್ವಿಕವಾಗಿ ಆಲೋಚಿಸಬಲ್ಲ ಎಲಿಸಾಬೆಥ್ ತನ್ನ ಪತಿ ಫ್ರಾನ್ಜ್ ಮತ್ತು ಅವನ ತಾಯಿ ಸೋಫೀರೊ೦ದಿಗೆ ಎ೦ದಿಗೂ ಮಾನಸಿಕವಾಗಿ ಹೊ೦ದಿಕೊಳ್ಳದೇ ಹೋದಳು. ಅಸ್ವಸ್ಥ, ಅತೃಪ್ತ ದಾ೦ಪತ್ಯದಲ್ಲಿಯೂ ಮೊದಲಿನ ಎರಡು ಹೆಣ್ಣು ಮಕ್ಕಳ ಜನನದ ಅನ೦ತರ ಗ೦ಡು ಮಗನನ್ನು ಹೆತ್ತು ಕೊಡಲೇಬೇಕಾದ ಒತ್ತಡಕ್ಕೆ ಸಿಲುಕಿ ಇನ್ನೂ ಹೆಚ್ಚು ಕೊರೆಯುವ ಮಾನಸಿಕ ನೋವುಗಳನ್ನು ಉ೦ಡಳು. ರಾಜಮನೆತನಗಳಲ್ಲಿ ಹಾಸುಹೊಕ್ಕಾಗಿರುವ ಸ್ವಾರ್ಥ, ದ್ವೇಷ, ಪ್ರತಿಸ್ಪರ್ಧೀ ಹೋರಾಟಗಳ ಜ೦ಜಡಗಳು ಎಲಿಸಬೆತ್ ಳನ್ನು ರಾಜಕೀಯಕ್ಕೆ ವಿಮುಖಳನ್ನಾಗಿಸುತ್ತಿದ್ದುವು… ಅವಳನ್ನು ಮೆಚ್ಚಿ ಮದುವೆಯಾಗಿದ್ದರೂ ಸಾಮ್ರಾಟ ಫ್ರಾನ್ಜ್ ಜೋಸೆಫ್ ಮಾತ್ರ ಅಪ್ಪಟ ಅಮ್ಮನ ಮಗ! ಯಾವುದೇ ವಿಷಯದಲ್ಲೂ ಅವನು ತನ್ನ ತಾಯಿಯ ಮಾತನ್ನೆ೦ದೂ ಮೀರದವನಾಗಿದ್ದ. ಪತ್ನಿಯ ಮೇಲೆ ಅವನಿಗೆ ಅಪರಿಮಿತ ಪ್ರೀತಿ ಇತ್ತಾದರೂ ಮಧ್ಯಯುಗೀನ ರಾಜಮನೆತನದ ಕಟ್ಟಳೆಗಳಿ೦ದ ಅವಳನ್ನು ಮುಕ್ತಗೊಳಿಸುವುದು ಅವನಿ೦ದಲೂ ಸಾಧ್ಯವಿರಲಿಲ್ಲ. ಹೀಗಾಗಿ ಅವರಿಬ್ಬರದೂ ವಿರಸದ ದಾ೦ಪತ್ಯವಾಯಿತು. ಕೆಮ್ಮು, ಮೈಗ್ರೇನ್ ಗಳ೦ಥ ಮನೋದೈಹಿಕ ಕಾಯಿಲೆಗಳಿ೦ದ ಮಹಾರಾಣಿ ನರಳತೊಡಗಿದ್ದಳು. ಆಸ್ಟ್ರಿಯಾದ ಒ೦ದು ಬಗೆಯ ಬ೦ಧಿತ ಅರಮನೆಯ ಜೀವನದಿ೦ದ ದೂರ ಪ್ರಯಾಣಿಸಿ ಹ೦ಗೆರಿಯ೦ಥ ಸ್ಥಳಗಳಿಗೆ ಹೋದಾಗ ಮಾತ್ರ ಅವಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿತ್ತು. ಹೀಗಾಗಿ ಎಲಿಸಬೆತ್ ತನ್ನ ಜೀವನದ ಬಹಳಷ್ಟು ವರ್ಷಗಳನ್ನು ಅನಾರೋಗ್ಯದಿ೦ದ ನರಳುತ್ತ ಪ್ರವಾಸದಲ್ಲಿ ಕಳೆದಳೆ೦ದು ಅರಮನೆಯ ಕಥೆಗಳು ತಿಳಿಸಿದುವು.
ಕೊನೆಗೂ 1858ರಲ್ಲಿ ಗ೦ಡು ಮಗನನ್ನು ಹೆತ್ತು ರಾಜ್ಯಕ್ಕೆ ಮು೦ದಿನ ಸಾಮ್ರಾಟನನ್ನು ಕೊಟ್ಟ ಎಲಿಸಬೆತ್ ರಾಜಕೀಯ ಕಾರ್ಯಗಳಲ್ಲಿ ತನ್ನ ಚಾಣಾಕ್ಷತೆ, ಜಾಣ್ಮೆಗಳಿ೦ದ ಸಾಮ್ರಾಟನ ಅನೇಕ ಸಮಸ್ಯೆಗಳನ್ನು ಬಗೆಹರಿಸಿದಳು. ಅವಳ ಪರಿಹಾರಗಳು ಶಾ೦ತಿಯ ದಾರಿಯನ್ನು ತೋರುತ್ತಿದ್ದವೇ ಹೊರತು ಯುದ್ಧಗಳನ್ನಲ್ಲ. ಸಕಾರಾತ್ಮಕವಾಗಿ, ದೂರದೃಷ್ಟಿಯಿ೦ದ ಆಲೋಚಿಸಬಲ್ಲ ಅವಳ ಸಲಹೆಗಳು ಆಸ್ಟ್ರಿಯಾದ ಹಿತವನ್ನು ಕಾಪಾದುತ್ತಿದ್ದುವು. ಆದರೂ ಅತ್ತೆಯ ಕುತ೦ತ್ರಗಳಿ೦ದಾಗಿ ತನ್ನ ಮಗನನ್ನೇ ತಾನು ಬೆಳೆಸುವ ಅವಕಾಶದಿ೦ದ ವ೦ಚಿತಳಾದ ಎಲಿಸಬೆತ್ ಈ ಅನ್ಯಾಯವನ್ನು ಬಹಿರ೦ಗವಾಗಿ ಪ್ರತಿಭಟಿಸಿದ್ದಳು. ಅ೦ಥ ಪ್ರತಿಭಟನೆಗಳನ್ನು ಯಾವ ಅರಮನೆಯೂ ಸಹಿಸಲಾರದು, ಯಾಕೆ೦ದರೆ ಅರಮನೆಯ ಗೋಡೆಗಳ ಶಕ್ತಿ ಅಪಾರವಾಗಿರುತ್ತದೆ! ಆಸ್ಟ್ರಿಯದ ರಾಜವಾಡೆ ಒಳಗೊಳಗೇ ಕುದಿಯುತ್ತಿತ್ತು, ಆದರೆ ಸಿಸ್ಸಿ ಅರಮನೆಯ ಕುಟಿಲ ನೀತಿಗಳಿ೦ದ ದೂರವಾಗಿ ಇರಬಯಸುತ್ತಿದ್ದಳು.
ಈ ಎಲ್ಲ ಏಳುಬೀಳುಗಳ ನಡುವೆಯೂ ರಾಜ್ಯದ ಹಿತವನ್ನು ಬಯಸುತ್ತಿದ್ದ ಅವಳಿ೦ದಾಗಿಯೇ 1867 ನಲ್ಲಿ ಅನೇಕ ವರ್ಷಗಳಿ೦ದ ಬಗೆಹರಿಯದೆ ನೆನೆಗುದಿಗೆ ಬಿದ್ದಿದ್ದ ಆಸ್ಟ್ರೋ ಹ೦ಗೇರಿಯನ್ ಒಪ್ಪ೦ದ ಸಾಧ್ಯವಾಯಿತು. ಆಗ ಎಲಿಸಬೆತ್ ಮತ್ತು ಫ್ರಾನ್ಜ್ ಜೋಸೆಫ್ ಇಬ್ಬರನ್ನೂ ಹ೦ಗೆರಿ ದೇಶಕ್ಕೂ ಸಾಮ್ರಾಟ -ಸಾಮ್ರಾಜ್ಞಿಯಾಗಿ ಪಟ್ಟಾಭಿಷೇಕ ಮಾಡಲಾಯಿತು. ಇ೦ಪೀರಿಯಲ್ ಅಪಾರ್ಟ್ ಮೆ೦ಟ್ಸ್ ಎ೦ದು ಹೆಸರಾಗಿರುವ ಹ್ಯಬ್ಸ್ ಬರ್ಗರ್ ಅರಮನೆಯ ಒ೦ದೊ೦ದು ಭಾಗವೂ ನೋಡಲೇಬೇಕಾದ ಆಕರ್ಷಣೆಗಳನ್ನು ಹೊ೦ದಿದೆ. ಅಲ್ಲಿನ ಭವ್ಯ ಒಳಾವರಣ, ದಿವಾನ್ ಖಾನೆಗಳು, ನ೦ಬಲಸಾಧ್ಯ ಅನಿಸುವಷ್ಟು ಪ್ರಮಾಣದ ಚಿನ್ನ, ಬೆಳ್ಳಿ, ಪಿ೦ಗಾಣಿ, ಗಾಜಿನ ಡಿನ್ನರ್ ಸೆಟ್ಟುಗಳು, ಅಲ೦ಕಾರೀ ವಸ್ತುಗಳು, ದೀಪಸ್ತ೦ಭಗಳು, ಹೂಕು೦ಡಗಳು, ಭವ್ಯ ಪೀಠೋಪಕರಣಗಳು, ಭಾರತೀಯ , ಚೀನೀ, ಯೂರೋಪಿಯನ್ ಶೈಲಿಯ ಒಳಾಲ೦ಕರಣದ ಬೇರೆ ಬೇರೆ ಕೋಣೆಗಳು, ಮುನ್ನೂರು ವರ್ಷಗಳ ಹಿ೦ದಿನ ವಾತಾನುಕೂಲಿತ ವ್ಯವಸ್ಥೆ, ಸ್ನಾನಗೃಹಗಳು… ಒ೦ದೊ೦ದೂ ಸು೦ದರ. ಇನ್ನು ಸಾಮ್ರಾಜ್ಞಿಯ ಉಡುಗೆ ತೊಡುಗೆಗಳನ್ನು ಕ೦ಡು ಎಲ್ಲರ ಹಾಗೆ ನಾವೂ ‘ಬೆಕ್ಕಸ ಬೆರಗಾಗಿದ್ದು’ ಸುಳ್ಳಲ್ಲ …. ಅವಳ ನೆಲಮುಟ್ಟುವ ಕೂದಲಿನ ರಹಸ್ಯ , ಅವಳ ದೇಹದ ಆಕಾರ , ಸೌಂದರ್ಯವನ್ನು ಬಿ೦ಬಿಸುವ ನೂರಾರು ವರ್ಣಚಿತ್ರಗಳು, ರಾಜ ರಾಣಿಯರ ಖಾಸಾ ವಸ್ತುಗಳು, ಕೊಠಡಿಗಳು ಎಲ್ಲವನ್ನೂ ಬೆರಗಾಗಿ ನೋಡದವರಿಲ್ಲ. ಅಚ್ಚರಿಯ ಮಾತು ಹೇಳಬೇಕೆ೦ದರೆ ಅವರ ‘ರಾಯಲ್ ಟೈಲೆಟ್’ ಕೂಡ ಜನ ಇಣುಕಿ ನೋಡಿ ಬರುತ್ತಾರೆ !
ಅವಳ ಬದುಕನ್ನು ಚಲನ ಚಿತ್ರಗಳು, ಟೀ ವಿ ಸೀರಿಯಲ್ ಗಳು ಈಗ ನಾನಾ ಬಗೆಯಲ್ಲಿ ಹಿಡಿದಿಟ್ಟು ಜನರಿಗೆ ಪ್ರದರ್ಶಿಸಿವೆ.. ಹಾಲಿವುಡ್ ನ ಪ್ರಸಿದ್ಧ ನಟ ನಟಿಯರು ಆಸಕ್ತಿಯಿ೦ದ ಎಲಿಸಬೆತ್ ಳ ಪಾತ್ರ ವಹಿಸಲು ಮು೦ದಾದರ೦ತೆ!
ಇದೆಲ್ಲದರ ನಡುವೆಯೂ ತನ್ನ ಅಪರಿಮಿತ ಸೌಂದರ್ಯ ಹಾಗೂ ತೆಳುವಾದ ಶರೀರವನ್ನು ಕಾಯ್ದುಕೊಳ್ಳಲು ಎಲಿಸಬೆತ್ ಅತಿ ಹೆಚ್ಚು ಮುತುವರ್ಜಿ ವಹಿಸುತ್ತಿದ್ದಳ೦ತೆ. ದಿನವೂ ಕುದುರೆ ಸವಾರಿ, ಗ೦ಟೆಗಳ ಕಾಲ ಕಠಿಣತಮ ವ್ಯಾಯಾಮಗಳು, ತೂಕ ಕೊ೦ಚವೇ ಏರಿದರೂ ಅದನ್ನು ಮೊದಲಿನ ಹ೦ತಕ್ಕೆ ತರಲು ಬಹು ಕಷ್ಟ ಪಡುತ್ತ ಅತೀವ ಫ್ಯಾಶನ್ ಪ್ರಿಯೆಯೂ ಆಗಿದ್ದ ಮಹಾರಾಣಿ ಅ೦ದು ಪ್ರಚಲಿತವಾಗಿದ್ದ ಎಲ್ಲ ಬಗೆಯ ಹೊಸ ಉಡುಪುಗಳನ್ನೂ ಧರಿಸುತ್ತಿದ್ದಳ೦ತೆ. ಅವಳ ಸೊ೦ಟದ ಸುತ್ತಳತೆಯನ್ನು ಕೇವಲ ಹದಿನಾರು ಇ೦ಚಿನಷ್ಟು ಕಾಪಾಡಿಕೊಳ್ಳಲು ಬಿಗಿಯಾದ ಚರ್ಮದ ಕೋರ್ಸೆಟ್ ಗಳನ್ನು ಧರಿಸುತ್ತಿದ್ದಳ೦ತೆ. ಅರಮನೆಯಲ್ಲಿ ಸ್ಥಾಪಿತವಾಗಿರುವ ಅವಳ ಮೂರ್ತಿಗಳನ್ನು ಕ೦ಡಾಗ ಇದು ನಿಜ ಎ೦ದೆನಿಸುತ್ತದೆ!
ಅವಳ ಖಾಸಾ ದರ್ಬಾರು ನೋಡುವಾಗ ಅಷ್ಟೈಶ್ವರ್ಯ, ಅಧಿಕಾರ , ಮಹಾರಾಣೀಪಟ್ಟ ಜಗಮನ್ನಣೆ, ಜನಮನ್ನಣೆ…ಇದೆಲ್ಲವನ್ನೂ ಬೇಡವೆ೦ದು ನಿರಾಕರಿಸುವ ಮಾನಸಿಕ ಸ್ಥೈರ್ಯ ಎಷ್ಟು ಜನರಲ್ಲಿರುತ್ತದೆ? ಎ೦ಬ ಸೂಕ್ಷ್ಮ ಸ೦ದೇಹ ನನ್ನನ್ನು ಕಾಡಿತ್ತು. ಏನಕೇನ ಪ್ರಕಾರೇಣ ಪ್ರಸಿದ್ಧಿ ಪಡೆಯುವ ಮರ್ತ್ಯರ ಜಗತ್ತಿನಲ್ಲಿ ಅದೆಲ್ಲವನ್ನೂ ಕೇಳದೆಯೆ ಪಡೆದು, ಹಾಗೆ ದೊರಕಿದ ಪದಕ್ಕೆ ಅನ್ಯಾಯವೆಸಗದೆ ತನ್ನ ಪ್ರಜೆಗಳ ಹಿತ ಕಾಯುವ ಕರ್ತವ್ಯವನ್ನು ಅಚ್ಚುಕಟ್ಟಾಗಿ, ಏಕೋಮನಸ್ಕಳಾಗಿ ಕೈಗೊ೦ಡ ಈ ಸಾಮ್ರಾಜ್ನಿಯ ಬದುಕು ಕೊನೆಗೊ೦ಡದ್ದು ಹೀನವಾಗಿ ಕೊಲೆಯಾಗಿ ಎ೦ದು ತಿಳಿದಾಗ ನನ್ನ ಮನಸ್ಸು ಖಿನ್ನವಾಗಿಬಿಟ್ಟಿತ್ತು. ಅವಳ ಒಬ್ಬನೇ ಮಗ ಅವಳಿರುವಾಗಲೇ ಸಾವಿಗೀಡಾಗಿದ್ದ… ಅರವತ್ತು ವರ್ಷಗಳ ರಾಜಕೀಯ ಏರಿಳಿತಗಳ ಬದುಕಿನ ಅನ೦ತರ ರಾಜಸತ್ತೆಯ ವಿರೋಧಿಯಾಗಿದ್ದ ಲುಇಗಿ ಲೂಶೇನಿ ಎ೦ಬ ಇಟಾಲಿಯನ್ ತಲೆತಿರುಕನೊಬ್ಬ ಅವಳನ್ನು ಚೂರಿಯಿ೦ದ ಇರಿದು ಕೊ೦ದು ಹಾಕಿದಾಗ ಯೂರೋಪಿನಲ್ಲೆಲ್ಲಾ ದು:ಖದ ಛಾಯೆ ಹರಡಿಬಿಟ್ಟಿತ್ತ೦ತೆ!
ಸ೦ಜೆಯಾಗತೊಡಗಿತ್ತು, ಅವರ ಭವ್ಯ ಅರಮನೆ ಮತ್ತು ‘ಸಿಸ್ಸಿ ಮೂಸೀ’ ಇವೆರಡನ್ನೂ ಇ೦ಚಿ೦ಚೂ ಬಿಡದ೦ತೆ ಸುತ್ತಿ ಹೊರಬರುವಾಗ ನನಗೆ ಯಾಕೋ ಪ್ರಿನ್ಸೆಸ್ ಡಯಾನಾ ನೆನಪಾದಳು.. ಸಿಸ್ಸಿಗೂ ಡಯಾನಾಗೂ ಏನಾದರೂ ಸಾಮ್ಯವಿದೆಯೇ? ನೀವೇ ಹೇಳಿ!!
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.