Uncategorizedಸಾಧನಕೇರಿ

ಸಾಧನ ಕೇರಿ/ ಸುನೀತಾ ನಾರಾಯಣ್ – ಕಹಿ ಸತ್ಯಗಳ ತೆರೆದಿಡುವ ಪರಿಸರವಾದಿ – ನೇಮಿಚಂದ್ರ

ಕಳೆದ ನಾಲ್ಕು ದಶಕಗಳಿಂದ ಸುನೀತಾ ನಾರಾಯಣ್ ‘ಪರಿಸರ ಪ್ರಜ್ಞೆ ಪ್ರತಿಯೊಬ್ಬರ ಹೊಣೆ’ ಎಂದು ಒತ್ತಿ ಹೇಳಿ ಹೋರಾಡುತ್ತಿರುವ ಪರಿಸರವಾದಿ ಮತ್ತು ಲೇಖಕಿ. ಈಕೆ ದಿಲ್ಲಿಯ ‘ಸೆಂಟರ್ ಫಾರ್ ಸಯನ್ಸ್ ಅಂಡ್ ಎನ್‍ವೈರ್ನಮೆಂಟ್’ (ಸಿ.ಎಸ್.ಇ) ಸಂಸ್ಥೆಯ ಡೈರೆಕ್ಟರ್ ಜನರಲ್ ಹಾಗೂ ಖಜಾಂಚಿ. ಸಿ.ಎಸ್.ಇ. ಇಸವಿ 1992ರಿಂದ ಹೊರ ತರುತ್ತಿರುವ ಅಭಿವೃದ್ಧಿಯ ರಾಜಕೀಯ ಮತ್ತು ಪರಿಸರ ರಕ್ಷಣೆಯನ್ನು ಕುರಿತ ‘ಡೌನ್ ಟು ಅರ್ತ್’ ಪತ್ರಿಕೆಯ ಸಂಪಾದಕಿ.

ಕಾಲು ಶತಮಾನದಿಂದ ‘ಡೌನ್ ಟು ಅರ್ತ್’ ಪತ್ರಿಕೆಯನ್ನು ಓದುತ್ತಾ ಬಂದಿದ್ದೇನೆ. ನನಗೆ ಪರಿಸರದ ಬಗ್ಗೆ ಹಾಗೂ ಅಭಿವೃದ್ಧಿ ರಾಜಕೀಯವನ್ನು ಕುರಿತು ಅರಿವು ಮೂಡಿಸಿದ, ಪರಿಸರ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಹಾಯಕವಾದ ಪತ್ರಿಕೆ ಇದು. ಈ ಪತ್ರಿಕೆಯ ಮೂಲಕವೇ ನನಗೆ ಸುನೀತಾ ನಾರಾಯಣ್ ಅವರ ದಿಟ್ಟ ವ್ಯಕ್ತಿತ್ವ ದ ಪರಿಚಯವಾಯಿತು.

ಮಳೆನೀರ ಸಂಗ್ರಹ, ದಿಲ್ಲಿಯಲ್ಲಿ ಸಿಎನ್‍ಜಿ ತರುವ ಹಿಂದಿನ ಪ್ರಯತ್ನ, ಬಡವರ ಪರ ನಿಂತ ಯೋಜನಾ ನೀತಿಗಳು, ಹೀಗೆ ಜನಹಿತದ ಕಾಳಜಿಗಳಲ್ಲಿ ಜ್ಞಾನಾಧಾರಿತ ಚಳುವಳಿಯಲ್ಲಿ ತಮ್ಮನ್ನು ತಾವು ತೀವ್ರವಾಗಿ ತೊಡಗಿಸಿಕೊಂಡ ಸುನೀತಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದೇ ವರ್ಷ ಸುನೀತಾ 60ರ ಹರಯಕ್ಕೆ ಕಾಲಿಡುತ್ತಿದ್ದಾರೆ ಎಂಬ ಕಾರಣಕ್ಕಲ್ಲ. ಇಸವಿ 2020ರ ಕೊನೆಯಲ್ಲಿ ಸುನೀತಾ ‘ಎಡಿನ್‍ಬರ್ಗ್ ಮೆಡಲ್’ ಪಡೆದರು ಎಂಬ ಸಂಭ್ರಮಕ್ಕೂ ಅಲ್ಲ. ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವ ಕಲ್ಯಾಣ ಕಾರ್ಯಕ್ಕೆ ನೀಡಿದ ಕೊಡುಗೆಗೆ ಸಂದ ಗೌರವವಿದು. ಅವರು ಇಂದು ಸುದ್ದಿಯಲ್ಲಿರುವುದು ಸಿಹಿ ಜೇನುತುಪ್ಪದ ಕಹಿ ಸತ್ಯವನ್ನು ಹೊರಹಾಕಿದ ಕೋಲಾಹಲಕ್ಕೆ.

ದಿನಾಂಕ 2 ಡಿಸೆಂಬರ್ 2020 ದಿನಪತ್ರಿಕೆಗಳಲ್ಲಿ ಬಿತ್ತರವಾದ ದೊಡ್ಡ ಸುದ್ದಿ; ‘ದಾಬರ್, ಪತಂಜಲಿ, ಜಂಡು ಸೇರಿದಂತೆ ಭಾರತದ ಮಾರುಕಟ್ಟೆಯಲ್ಲಿ ದೊರೆಯುವ ಬಹಳಷ್ಟು ಕಂಪನಿಗಳ ಜೇನುತುಪ್ಪದಲ್ಲಿ ಚೀನಾದ ಸಕ್ಕರೆ ಪಾಕವಿದೆ ಎಂದು ಸಿ.ಎಸ್.ಇ ಸಂಶೋಧಕರು ತಿಳಿಸಿದ್ದಾರೆ. ಚೀನಾದ ಈ ಸಕ್ಕರೆ ಪಾಕವನ್ನು ಎಷ್ಟು ಜಾಣತನದಿಂದ ತಯಾರಿಸಿದ್ದಾರೆ ಎಂದರೆ, ಅದು ಭಾರತದಲ್ಲಿ ಜೇನುತುಪ್ಪದಲ್ಲಿಯ ಕಲಬೆರಕೆಯನ್ನು ಗುರುತಿಸಲು ನಡೆಸುವÀ ಮೂಲ ಪರೀಕ್ಷೆಗಳನ್ನು ಬೈಪಾಸ್ ಮಾಡುತ್ತದೆ’. ಇದರ ಅರ್ಥ, ಈ ಪರೀಕ್ಷೆಗಳಲ್ಲಿ ಈ ಕಲಬೆರಕೆಯ ಜೇನುತುಪ್ಪ ಸುಲಭವಾಗಿ ಪಾಸಾಗುತ್ತದೆ. ಅಂದರೆ ಇದೊಂದು ರೀತಿ ‘ಕಸ್ಟಮೈಸ್ಡ್ ಅಡಲ್ಟ್ರೇಷನ್’ ಎಂದು ಸಿ.ಎಸ್.ಇ ಆರೋಪಿಸಿದೆ. ಜೇನುತುಪ್ಪ ತಯಾರಕ ಕಂಪನಿಗಳು ಈ ಆರೋಪವನ್ನು ನಿರಾಕರಿಸಿವೆ. ‘ತಮ್ಮ ಜೇನುತುಪ್ಪ ‘ಫೂಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ’ದ (ಎಫ್.ಎಸ್.ಎಸ್.ಎ.ಐ) ನಿಯಂತ್ರಕ ಅವಶ್ಯಕತೆಗಳನ್ನೆಲ್ಲ ಪಾಲಿಸುತ್ತದೆ’ ಎಂದು ವಾದಿಸಿದ್ದಾರೆ.

ಇದೆಲ್ಲ ಆರಂಭವಾದದ್ದು ಹೀಗೆ. ಉತ್ತರ ಭಾರತದ ಜೇಣುನೊಣ ಸಾಕುವ ರೈತರು ಕರೋನಾ ಮಹಾಮಾರಿಯ ಸಂದರ್ಭದಲ್ಲಿ ಜೇನುತುಪ್ಪದ ಮಾರಾಟ ಏಕಾಏಕಿ ಹೆಚ್ಚಿದ್ದರೂ, ತಮಗೆ ಬರುತ್ತಿರುವ ಲಾಭ ಕಡಮೆ ಆದದ್ದನ್ನು ತಿಳಿಸಿದ್ದರು. ಸಿ.ಎಸ್.ಇ.ಯ ನಿರ್ದೇಶಕರಾದ ಸುನೀತಾ ನಾರೇನ್ ಈ ವಿಷಯವಾಗಿ ತನಿಖಾ ಸಂಶೋಧನೆÉಯನ್ನು ಕೈಗೆತ್ತಿಕೊಂಡರು.

ಪರಿಸರದೊಡನೆ ಕೆಡುತ್ತಲೇ ಸಾಗಿರುವ ನಮ್ಮ ‘ಡಿಸ್ಟೋಪಿಯನ್’ ಸಂಬಂಧವೇ ಕೋವಿಡ್‍ಗೆ ಕಾರಣ ಎಂದು ಸುನೀತಾ ಹೇಳುತ್ತಾರೆ. ಹವಾಮಾನದ ಬಿಕ್ಕಟ್ಟು ವಿಶ್ವದ ಬಡಜನರನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿದೆ, ಇನ್ನಷ್ಟು ಅಭದ್ರತೆಯಲ್ಲಿ ಅವರನ್ನು ಇರಿಸುತ್ತಿದೆ. ವಾತಾವರಣಕ್ಕೆ ಸೇರುತ್ತಲೇ ಹೋಗುತ್ತಿರುವ ‘ಗ್ರೀನ್‍ಹೌಸ್’ ಅನಿಲಗಳಿಗೆ ಬಡಜನರು ಕಾರಣರಲ್ಲ. ತಮ್ಮ ಪರಿಶ್ರಮದ ಬೆವರಿನಲ್ಲಿ ದೈಹಿಕ ಶ್ರಮದಲ್ಲಿ ದುಡಿವ ಇವರೆಲ್ಲರೂ, ಅತ್ಯಲ್ಪ ಇಂಧನವನ್ನು, ನಮ್ಮ ದೇಶದ ಅತಿ ಕಡಮೆ ಸಂಪನ್ಮೂಲಗಳನ್ನು ಬಳಸುತ್ತಿರುವವರು. ಹವಾಮಾನ ಬದಲಾವಣೆಯ ಪರಿಣಾಮಗಳು ಬಡವರನ್ನು ಮತ್ತು ರೈತರನ್ನು ಇನ್ನಿಲ್ಲದ ಹಾಗೆ ಕಾಡುತ್ತಿದೆ. ಹವಾಮಾನ ಬದಲಾವಣೆಯ ನಿಜವಾದ ಸಂತ್ರಸ್ತರು, ಪೀಡಿತರು ಈ ಬಡವರು ಮತ್ತು ರೈತಾಪಿ ಜನರು ಎನ್ನುತ್ತಾರೆ ಸುನೀತಾ ನಾರೇನ್. ಹಾಗೆಂದೇ ಸುನೀತಾ ಸಸ್ಟೇನೆಬಲ್ ‘ಸುಸ್ಥಿರ ಅಭಿವೃದ್ಧಿ’ಯನ್ನು ತೀವ್ರವಾಗಿ ಪ್ರದಿಪಾದಿಸುತ್ತಾರೆ.

ಸಿ.ಎಸ್.ಇ. ಒಂದು ಸ್ವತಂತ್ರ ಸಂಶೋಧನಾ ಸಂಸ್ಥೆ. ಇಸವಿ 1980ರಲ್ಲಿ ಇದನ್ನು ಪರಿಸರವಾದಿ ಅನಿಲ ಅಗರ್ವಾಲ್ ಸ್ಥಾಪಿಸಿದರು. ಭಾರತದ ಪಾಲಿಸಿಗಳು ಜನಪರವಿರಬೇಕು, ಜನತೆಯನ್ನು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು. ಭಾರತದ ತನ್ನದೇ ಆದ ಸಾಂಪ್ರದಾಯಿಕ ಪರಿಸರ ನಿರ್ವಹಣೆಯ ವಿಧಾನಗಳನ್ನು ನಾವು ಅರಿಯಬೇಕು ಮತ್ತು ಕಲಿಯಬೇಕು ಎಂದು ಹೇಳುತ್ತಾ, ಅಂತಹ ಪಾಲಿಸಿಗಳ ಪರ ಗಟ್ಟಿ ದನಿಯಲ್ಲಿ ವಾದಿಸುತ್ತಲೇ ತಮ್ಮ ಇಡೀ ಬದುಕನ್ನು ಕಳೆದವರು ಅನಿಲ್ ಅಗರ್ವಾಲ್. ಇಸವಿ 1970ರಲ್ಲಿ ಇಂಜಿನಿಯರ್ ಪದವೀಧರರಾದ ಇವರು, ಕೈತುಂಬಾ ಸಂಬಳ ತರುವ ಕಾರ್ಪೊರೇಟ್ ಕೆಲಸವನ್ನು ತೊರೆದು, ಭಾರತದ ಬಡಜನರ ವೈಜ್ಞಾನಿಕ ಹಾಗೂ ತಾಂತ್ರಿಕ ಅಗತ್ಯಗಳನ್ನು ಪತ್ತೆ ಹಚ್ಚುವ ವಿಜ್ಞಾನ ಪತ್ರಿಕೋದ್ಯಮಕ್ಕೆ ತೊಡಗಿದರು. ಭಾರತದ ಅತ್ಯಂತ ವಿಶಿಷ್ಟವಾದ, ಎಲ್ಲರನ್ನು ಬಡಿದೆಬ್ಬಿಸಿ ಎಚ್ಚರಿಸಿದ0ತಹ ಇಸವಿ 1974ರ ‘ಚಿಪ್ಕೋ ಚಳುವಳಿ’ಯನ್ನು ಇವರು ವಿಸ್ತಾರವಾಗಿ ವರದಿ ಮಾಡಿದರು.

ಸಿ.ಎಸ್.ಇ. ಜನಹಿತದ ಸಂಶೋಧನೆಯಲ್ಲಿ ತೊಡಗಿರುವ ಲಾಭಕ್ಕಾಗಿ ಅಲ್ಲದ ಸಂಸ್ಥೆ. ಇಸವಿ 1980ರಿಂದಲೂ ಸಿ.ಎಸ್.ಇ, ಪರಿಸರ-ಅಭಿವೃದ್ಧಿ ಕುರಿತ ಭಾರತದ ವಿಷಯಗಳ ಬಗ್ಗೆ ‘ಥಿಂಕ್ ಟ್ಯಾಂಕ್’ನಂತೆ ದುಡಿಯುತ್ತಿದೆ. ಈ ಸಂಸ್ಥೆಯಲ್ಲಿ ಸುನೀತಾ ಇಸವಿ 1982ರಿಂದಲೇ ಅನಿಲ್ ಅಗರ್ವಾಲ್ ಅವರೊಡನೆ ಕೆಲಸ ಮಾಡ ತೊಡಗಿದರು.

ಸುನೀತಾ ನಾರೇನ್


ಸುನೀತಾ ಇಸವಿ 1961ರಲ್ಲಿ ಜನಿಸಿದರು. ದಿಲ್ಲಿಯಲ್ಲಿಯೇ ಅವರ ಆರಂಭಿಕ ಶಾಲಾ ವಿದ್ಯಾಭ್ಯಾಸ ನಡೆಯಿತು. ದಿಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಈಕೆ, ಅಂಚೆ ಮೂಲಕ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಲೇ, ಸಿ.ಎಸ್.ಇ.ನಲ್ಲಿ ಕೆಲಸ ಮಾಡಲು ಆರಂಭಿಸಿದವರು. ಇಸವಿ 1985ರಲ್ಲಿ ಸುನೀತಾ ‘ಭಾರತದ ಪರಿಸರ ವರದಿ’ಯ (ಸಿಟಿಸನ್ಸ್ ಸ್ಟೇಟ್ ಆಫ್ ಇಂಡಿಯಾ ಎನ್‍ವೈರ್ನಮೆಂಟ್ ರಿಪೋರ್ಟ್) ಸಹ-ಸಂಪಾದಕರಾಗಿದ್ದರು. ಈ ಪ್ರಾಜೆಕ್ಟ್ ಆಕೆ ಜನರು ನೈಸರ್ಗಿಕ ಸಂಪನ್ಮೂಲಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲು ದೇಶದ ಉದ್ದಗಲಕ್ಕೆ ಪ್ರವಾಸ ಮಾಡಿ ಬಂದರು. ಇಸವಿ 1989ರಲ್ಲಿ ಸುನೀತಾ ನಾರೇನ್ ಮತ್ತು ಅನಿಲ್ ಅಗರ್ವಾಲ್ ‘ಟುವಡ್ರ್ಸ್ ಗ್ರೀನ್ ವಿಲೇಜಸ್’ ಪುಸ್ತಕವನ್ನು ಬರೆದರು. ಸ್ಥಳೀಯ ಪ್ರಜಾಪ್ರಭುತ್ವ ಮತ್ತು ತಾಳಬಲ್ಲ, ಬಹುಕಾಲ ಮುಂದುವರೆಯಬಲ್ಲ ಸುಸ್ಥಿರ ಅಭಿವೃದ್ಧಿಯನ್ನು ಕುರಿತ ಪುಸ್ತಕವಿದು. ಪರಿಸರ ಮತ್ತು ಅಭಿವೃದ್ಧಿಯ ನಡುವಿನ ಸಂಬಂಧವನ್ನು ಆಳವಾಗಿ ಅಧ್ಯಯನ ಮಾಡಿರುವ ಸುನಿತಾ ಅವರು, ಸುಸ್ಥಿರ ಅಭಿವೃದ್ಧಿಯತ್ತ ಜನರ ಗಮನವನ್ನು ಸೆಳೆದು ಸಾರ್ವಜನಿಕ ಪ್ರಜ್ಞೆಯನ್ನು ಜಾಗೃತಗೊಳಿಸುವತ್ತ ದುಡಿಯುತ್ತಾ ಬಂದಿದ್ದಾರೆ. 2012ರಲ್ಲಿ ಸುನೀತಾ ಭಾರತದ 7ನೇ ಪರಿಸರ ವರದಿಯನ್ನು ತಯಾರಿಸಿದರು. ‘ಮಲವಿಸರ್ಜನೆಯ ವಿಷಯ; ಭಾರತದ ನಗರ ಪ್ರದೇಶದ ನೀರು ಸರಬರಾಜು ಮತ್ತು ಮಾಲಿನ್ಯ’ವನ್ನು ಕುರಿತ ವಿಶ್ಲೇಷಣಾತ್ಮಕ ವರದಿ ಇದಾಗಿದೆ.
ಈಗ ಸುದ್ದಿ ಮಾಡಿರುವ ಜೇನುತುಪ್ಪದ ಕಲಬೆರಕೆಯ ವಿಷಯಕ್ಕೆ ಬರೋಣ.

ಸ್ವದೇಶೀ ಜೇನುತುಪ್ಪದಲ್ಲಿ ವಿದೇಶೀ ಸಕ್ಕರೆ ಪಾಕ!

ಜೇನುತುಪ್ಪ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಯುರ್ವೇದದಲ್ಲಿ ಜೇನುತುಪ್ಪಕ್ಕೆ ಬಹಳ ಮಹತ್ವವಿದೆ. ತನ್ನ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಕ್ಕೆ ಜೇನುತುಪ್ಪ ಪ್ರಸಿದ್ಧವಾದದ್ದು. ಜೇನುತುಪ್ಪದಲ್ಲಿ ಆಂಟಿಆಕ್ಸಿಡೆಂಟ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ ಇನ್‍ಫ್ಲೆಮೇಟರಿ ಗುಣಗಳಿವೆ. ಭಾರತದಲ್ಲಿ ಜೇನುತುಪ್ಪಕ್ಕೆ ಅಗಾಧ ಮಾರುಕಟ್ಟೆ ಇದೆ. ದಾಬರ್, ಪತಂಜಲಿ, ಬೈದ್ಯನಾಥ್, ಹಿಮಾನಿ, ಜಂಡು, ಹಿಮಾಲಯ ಹೀಗೆ ಅನೇಕ ದೊಡ್ಡ ಕಂಪನಿಗಳು ಮತ್ತು ಬಹಳಷ್ಟು ಸಣ್ಣ ಕಂಪನಿಗಳು ಜೇನುತುಪ್ಪದ ತಯಾರಿಕೆಯಲ್ಲಿವೆ. ಜೊತೆಗೆ ಬಹಳ ಹಿಂದಿನಿಂದಲೇ ‘ಖಾದಿ ಗ್ರಾಮೋದ್ಯೋಗ’ ಮತ್ತು ‘ಹಿಮಾಚಲ ಪ್ರದೇಶ ಆಗ್ರೋ ಇಂಡಸ್ಟ್ರಿ ಕಾರ್ಪೊರೇಶನ್’ ಕೂಡಾ ಜೇನುತುಪ್ಪವನ್ನು ತಯಾರಿಸುತ್ತಿವೆ. ಇದಲ್ಲದೆ ಜರ್ಮನಿ, ಫ್ರಾನ್ಸ್, ಡೆನ್‍ಮಾರ್ಕ್, ಸ್ವಿಟ್ಸರ್‍ಲ್ಯಾಂಡ್, ಆಸ್ಟ್ರೇಲಿಯಾಗಳಿಂದಲೂ ಜೇನುತುಪ್ಪ ಭಾರತಕ್ಕೆ ಆಮದಾಗುತ್ತದೆ.

ಹಾಗೆಂದೇ, ‘ಈ ಜೇನುತುಪ್ಪದ ಕಲಬೆರಕೆಯ ಮೋಸ ಅತ್ಯಂತ ಕೆಟ್ಟದ್ದಷ್ಟೇ ಅಲ್ಲ, ಅತ್ಯಂತ ಚಾತುರ್ಯದ್ದು ಮತ್ತು ತಾಂತ್ರಿಕವಾಗಿ ಅತ್ಯಾಧುನಿಕದ್ದು’ ಎಂದಿದ್ದಾರೆ ಸುನಿತಾ ನಾರಾಯಣ್. ‘ಇಸವಿ 2003 ಮತ್ತು 2006ರಲ್ಲಿ ನಮ್ಮ ತನಿಖೆ ವಿದೇಶೀ ತಂಪು ಪಾನೀಯಗಳಲ್ಲಿ ಕೀಟನಾಶಕಗಳ ಕಲಬೆರಿಕೆಯನ್ನು ಪತ್ತೆ ಹಚ್ಚಿತ್ತು. ಅದಕ್ಕಿಂತಲೂ ದೊಡ್ಡ ಮೋಸ ಈ ಜೇನುತುಪ್ಪದ ಕಲಬೆರಕೆ. ಇಲ್ಲಿಯವರೆಗೂ ನಾವು ಕಂಡು ಹಿಡಿದ ನಮ್ಮ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾದ ಆಹಾರದ ಕಲಬೆರೆಕೆ ಇದಾಗಿದೆ. ಅದರಲ್ಲೂ ಕರೋನಾ ಮಹಾಮಾರಿಯೊಡನೆ ಇನ್ನೂ ಹೋರಾಡುತ್ತಿರುವ ಈ ಸಂದರ್ಭದಲ್ಲಿ, ಜೇನುತುಪ್ಪಕ್ಕೆ ಸಕ್ಕರೆ ಬೆರೆಸುವ ಕಲಬೆರಕೆ ಅತ್ಯಂತ ಆಘಾತಕಾರಿ’ ಎಂದಿದ್ದಾರೆ ಸುನೀತಾ.

ಇದು ಖಂಡಿತಕ್ಕೂ ನಿಜ. ಏಕಾಏಕಿ ಎರಗಿ ಬಂದ ಚಿಕಿತ್ಸೆ ಇಲ್ಲದ ಕರೋನಾ ಮಹಾಮಾರಿಗೆ ಸಾವಿರಾರು ಜನ ಬಲಿಯಾಗುತ್ತಿರುವ ಸಂದರ್ಭದಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತಾವು ವಿಶ್ವಾಸವಿಟ್ಟ ಸ್ವದೇಶೀ ಕಂಪನಿಯ ಜೇನುತುಪ್ಪ ಕೊಂಡರೆ, ಅದರಲ್ಲಿ ವಿದೇಶೀ ಸಕ್ಕರೆ ಪಾಕವಿದ್ದು ಅವರ ಆರೋಗ್ಯಕ್ಕೆ ಹಾನಿ ಉಂಟು ಮಾಡಿದೆ. ಇದು ನಿಜಕ್ಕೂ ವಿಶ್ವಾಸಘಾತುಕ ನಡತೆಯಾಗಿದೆ.

‘ಭಾರತದ ಮಾರುಕಟ್ಟೆಯಲ್ಲಿ ಇರುವ ಹೆಚ್ಚು ಕಡಮೆ ಎಲ್ಲ ಜೇನುತುಪ್ಪದ ಬ್ರಾಂಡ್‍ಗಳು ಸಕ್ಕರೆ ಪಾಕದಿಂದ ಕಲಬೆರಿಕೆಯಾಗಿವೆ’ ಎಂದು ಸಿ.ಎಸ್.ಇ. ತಿಳಿಸಿದೆ. ‘ಈ ಕರೋನಾ ಸಮಯದಲ್ಲಿ, ಸಕ್ಕರೆ ಪಾಕದ ಜೇನುತುಪ್ಪ ಕುಡಿದು ಜನರ ಆರೋಗ್ಯ ಮತ್ತಷ್ಟು ಹದಗೆಡುವ ಕಾರಣ, ಇದು ಇನ್ನಷ್ಟು ಚಿಂತೆಗೆ ಕಾರಣವಾಗಿದೆ. ಸಕ್ಕರೆ ನೇರವಾಗಿ ದೇಹದ ಬೊಜ್ಜಿಗೆ ಕಾರಣವಾಗುತ್ತದೆ. ಬೊಜ್ಜು ಮೈಯವರು ಮಾರಣಾಂತಿಕ ಸೋಂಕುಗಳಿಗೆ ಹೆಚ್ಚು ಬೇಗ ಒಳಗಾಗುತ್ತಾರೆ. ಜೇನುತುಪ್ಪದ ಕಲಬೆರಕೆಯ ಉದ್ಯಮ, ಈಗಿರುವ ಭಾರತೀಯ ಪರೀಕ್ಷೆಗಳನ್ನು ಬೈಪಾಸು ಮಾಡುವಂತೆ ವಿನ್ಯಾಸÀಗೊಂಡಿದೆ. ಆರಂಭದಲ್ಲಿ, ಮೆಕ್ಕೆಜೋಳ, ಕಬ್ಬು, ಭತ್ತ, ಬೀಟ್‍ರೂಟ್‍ಗಳಿಂದ ತೆಗೆದ ಸಕ್ಕರೆಯನ್ನು ಜೇನುತುಪ್ಪಕ್ಕೆ ಬೆರೆಸುತ್ತಿದ್ದರು. ಇಂತಹ ಕಲಬೆರೆಕೆಯನ್ನು ಸಿ3 ಮತ್ತು ಸಿ4 ಎಂಬ ಭಾರತೀಯ ಪರೀಕ್ಷೆಗಳು ಕಂಡು ಹಿಡಿಯುತ್ತವೆ. ಆದರೆ ಇದೀಗ ಹೊಸದಾಗಿ ವಿನ್ಯಾಸ ಮಾಡಿದ ಚೀನಾದ ಸಕ್ಕರೆ ಪಾಕ ಈ ಪರೀಕ್ಷೆಗಳಲ್ಲಿ ಪಾಸ್ ಆಗುತ್ತದೆ. ಇದನ್ನು ಕೇವಲ ‘ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್’ (ಎನ್.ಎಮ್.ಆರ್.) ಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಲು ಸಾಧ್ಯ. ಭಾರತದಿಂದ ವಿದೇಶಕ್ಕೆ ರಫ್ತು ಮಾಡುವ ಜೇನುತುಪ್ಪಕ್ಕೆ ಎನ್.ಎಮ್.ಆರ್. ಪರೀಕ್ಷೆ ಕಡ್ಡಾಯ’ ಎಂದು ಸುನೀತಾ ತಿಳಿಸಿದ್ದಾರೆ.

ಸುನೀತಾ ಅವರ ಮುಖಂಡತ್ವದಲ್ಲಿ, ಸಿ.ಎಸ್.ಇ. ಸಂಶೋಧಕರು ಭಾರತದಲ್ಲಿ ಮಾರಾಟವಾಗುವ 13 ಪ್ರತಿಷ್ಠಿತ ಹಾಗೂ ಸಣ್ಣ ಬ್ರಾಂಡ್‍ಗಳ ಸಂಸ್ಕರಿಸಲಾದ ಜೇನುತುಪ್ಪ (ಪ್ರಾಸಸ್ಡ್ ಹನಿ) ಹಾಗೂ ಕಚ್ಚಾ ಜೇನುತುಪ್ಪಗಳನ್ನು (ರಾ ಹನಿ) ಆರಿಸಿಕೊಂಡರು. ಈ ಸ್ಯಾಂಪಲ್‍ಗಳನ್ನು ಗುಜರಾತಿನ ‘ನ್ಯಾಷನಲ್ ಡೈರಿ ಡೆವಲೆಪ್‍ಮೆಂಟ್ ಬೋರ್ಡ್’ನ (ಎನ್.ಡಿ.ಡಿ.ಬಿ) ‘ಸೆಂಟರ್ ಫಾರ್ ಅನಲಿಸಿಸ್ ಅಂಡ್ ಲರ್ನಿಂಗ್ ಇನ್ ಲೈವ್‍ಸ್ಟಾಕ್ ಅಂಡ್ ಫೂಡ್’ನಲ್ಲಿ (ಸಿ.ಎ.ಎಲ್.ಎಫ್) ಪರೀಕ್ಷೆ ಮಾಡಿದರು. ಇಲ್ಲಿ ಒಂದು ಬ್ರಾಂಡನ್ನು ಹೊರತು ಪಡಿಸಿ ಉಳಿದೆಲ್ಲ ಬ್ರಾಂಡ್‍ಗಳು ಭಾರತದ ಬೇಸಿಕ್ ಪ್ಯೂರಿಟಿ ಟೆಸ್ಟ್ (ಶುದ್ಧತೆಯ ಮೂಲ ಪರೀಕ್ಷೆಯನ್ನು) ಪಾಸು ಮಾಡಿದವು. ಆದರೆ ಇವೇ ಬ್ರಾಂಡ್‍ಗಳನ್ನು ಜರ್ಮನಿಯಲ್ಲಿಯ ವಿಶೇಷ ತಜ್ಞತೆಯ ಪ್ರಯೋಗಶಾಲೆಯಲ್ಲಿ ಎನ್.ಎಮ್.ಆರ್ ಪರೀಕ್ಷೆಗೆ ಒಳಪಡಿಸಿದಾಗ ಹದಿಮೂರು ಬ್ರಾಂಡ್‍ಗಳಲ್ಲಿ ಮೂರು ಬ್ರಾಂಡ್‍ಗಳು ಮಾತ್ರ ಪಾಸಾದವು. ‘ಇದು ಕಲಬೆರಕೆಯ ಉದ್ಯಮ ಹೇಗೆ ಭಾರತೀಯ ಪರೀಕ್ಷೆಗಳ ಮೂಲಕ ನುಸುಳುವಂತೆ ವಿಕಾಸಗೊಂಡಿದೆÉ ಎನ್ನುವುದನ್ನು ತೋರಿಸುತ್ತದೆ’ ಎನ್ನುತ್ತಾರೆ ಸಿ.ಎಸ್.ಇ.ಯ ‘ಫೂಡ್ ಸೇಫ್ಟಿ ಅಂಡ್ ಟಾಕ್ಸಿಕ್ ತಂಡ’ದ ಪ್ರೋಗ್ರಾಮ್ ಡೈರೆಕ್ಟರ್ ಆದ ಅಮಿತ್ ಖುರಾನಾ.

ಸಿ.ಎಸ್.ಇ. ವರದಿ ಹೊರಬಂದ ತಕ್ಷಣ, ದಾಬರ್ ಕಂಪನಿ ಜರ್ಮನಿಯ ಪ್ರಯೋಗಶಾಲೆಯಲ್ಲಿ ದಾಬರ್ ಜೇನುತುಪ್ಪ ಎನ್.ಎಮ್.ಆರ್. ಪರೀಕ್ಷೆಯಲ್ಲಿ ಪಾಸ್ ಆದ ಸ್ವತಂತ್ರ ‘ಟೆಸ್ಟ್ ರಿಪೋರ್ಟ್’ ಅನ್ನು ಪತ್ರಿಕೆಗಳಿಗೆ ಕಳುಹಿಸಿತು. ‘ಇತ್ತೀಚಿನ ವರದಿಗಳು ನಮ್ಮ ಬ್ರಾಂಡ್‍ನ ಹೆಸರು ಕೆಡಿಸುವ ದುರುದ್ದೇಶದ್ದಾಗಿವೆ. ನಮ್ಮ ಗ್ರಾಹಕರಿಗೆ ಭರವಸೆ ನೀಡಲು ಬಯಸುತ್ತೇವೆ; ದಾಬರ್ ಹನಿ 100% ಶುದ್ಧವಾದದ್ದು. ಇದು 100% ದೇಶೀಯವಾದದ್ದು, ಸಹಜ ರೀತಿಯಲ್ಲಿ ಭಾರತೀಯ ಮೂಲಗಳಿಂದ ಸಂಗ್ರಹಿಸಿದ್ದು ಮತ್ತು ಪ್ಯಾಕ್ ಮಾಡಿದ್ದು. ಇದರಲ್ಲಿ ಸಕ್ಕರೆ ಅಥವಾ ಇನ್ಯಾವ ಕಲಬೆರಕೆಯನ್ನೂ ಸೇರಿಸಿಲ್ಲ’ ಎಂದು ದಾಬರ್ ತಿಳಿಸಿದೆ. ‘ಅದಲ್ಲದೆ ಭಾರತದಲ್ಲಿ ತನ್ನದೇ ಪ್ರಯೋಗಶಾಲೆಯಲ್ಲಿ ಎನ್.ಎಮ್.ಆರ್. ಟೆಸ್ಟಿಂಗ್ ಸಲಕರಣೆ ಇರುವ ಕಂಪನಿ ದಾಬರ್ ಒಂದೇ. ಈ ಸಲಕರಣೆಯಲ್ಲಿ ನಿಯಮಿತವಾಗಿ ಭಾರತದಲ್ಲಿ ಮಾರಾಟಮಾಡುವ ನಮ್ಮ ಜೇನುತುಪ್ಪವನ್ನು ಪರೀಕ್ಷೆ ಮಾಡುತ್ತೇವೆ’ ಎಂದಿದ್ದಾರೆ. ಪತಂಜಲಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಚಾರ್ಯ ಬಾಲಕೃಷ್ಣ, ‘ಈ ರಿಪೋರ್ಟ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಜೇನುತುಪ್ಪದ ಮಾರಾಟದ ಪ್ರಮಾಣವನ್ನು ಕಡಮೆ ಮಾಡುವ ಪ್ರಯತ್ನದ್ದು’ ಎಂದು ದೂರಿದ್ದಾರೆ. ‘ಭಾರತೀಯ ಪ್ರಕೃತಿ ಸಹಜ ಜೇನುತುಪ್ಪದ ತಯಾರಕರಿಗೆ ಅಪಖ್ಯಾತಿ ತುಂದು ಸಂಸ್ಕರಿಸಿದ ಜೇನುತುಪ್ಪವನ್ನು ಪ್ರಚಾರ ಮಾಡುವ ಪಿತೂರಿ ಇದಾಗಿದೆ. ಅದಲ್ಲದೆ ಕೋಟಿ ಕೋಟಿ ರೂಪಾಯಿ ಮೌಲ್ಯದ ಜರ್ಮನ್ ತಾಂತ್ರಿಕತೆ ಮತ್ತು ಯಂತ್ರಗಳನ್ನು ಪ್ರೋತ್ಸಾಹಿಸುವ ಅಂತರಾಷ್ಟ್ರೀಯ ಮಾರ್ಕೆಟಿಂಗ್ ತಂತ್ರವಾಗಿದೆ’ ಎಂದೂ ಹೇಳಿದ್ದಾರೆ. ‘ಜಂಡು ಪ್ಯೂರ್ ಹನಿ’ ತಯಾರಕರಾದ ಇಮಾಮಿ ಕಂಪನಿ, ತಾವು ಭಾರತೀಯ ಸರಕಾರ ಮತ್ತು ಎಫ್.ಎಸ್.ಎಸ್.ಎ.ಐ.ನ ಎಲ್ಲ ಗುಣಮಟ್ಟದ ನಿಯಮಗಳನ್ನು ಪಾಲಿಸುತ್ತಿರುವುದಾಗಿ ಹೇಳಿದೆ.

ತಕರಾರು ಇರುವುದೇ ಇಲ್ಲಿ. ಈ ಕಲಬೆರಕೆಯನ್ನು ಭಾರತೀಯ ಪರೀಕ್ಷೆಗಳು ಪತ್ತೆ ಹಚ್ಚುವಲ್ಲಿ ಸೋತಿವೆ ಎಂದೇ ಸಿ.ಎಸ್.ಇ. ತಿಳಿಸಿರುವುದು. ಸಿ.ಎಸ್.ಇ. ತನ್ನ ಲ್ಯಾಬ್ ರಿಪೋರ್ಟ್ ಅನ್ನು ದಿನಾಂಕ 17 ಡಿಸೆಂಬರ್ 2020ರಂದು ಎಫ್.ಎಸ್.ಎಸ್.ಎ.ಐ.ಗೆ ಕಳುಹಿಸಿತ್ತು. ಸಿ.ಎಸ್.ಇ.ನ ಖುರಾನ ಅವರು ‘ಅತ್ಯಂತ ಆಘಾತಕಾರಿ ವಿಷಯವೆಂದರೆ ಶೇಕಡ 25, ಶೇಕಡಾ 50ರಷ್ಟು ಸಕ್ಕರೆ ಪಾಕವನ್ನು ಜೇನುತುಪ್ಪಕ್ಕೆ ಸೇರಿಸಿದ್ದರೂ, ಅದು ಭಾರತೀಯ ಶುದ್ಧತೆಯ ಪರೀಕ್ಷೆಯನ್ನು ಪಾಸು ಮಾಡುತ್ತದೆ. ಈ ಮೂಲಕ ಇಂದಿನ ಇಸವಿ 2020ರÀ ಎಫ್.ಎಸ್.ಎಸ್.ಎ.ಐ ಹನಿ ಸ್ಟಾಂಡರ್ಡ್ ಪರೀಕ್ಷೆಯನ್ನು ಬೈಪಾಸ್ ಮಾಡುವ ಸಕ್ಕರೆ ಪಾಕ ಅಸ್ತಿತ್ವದಲ್ಲಿದೆ ಎಂದು ನಾವು ಸಾಬೀತು ಮಾಡಿದ್ದೇವೆ’ ಎಂದಿದ್ದಾರೆ.


ಇಂದು ಪತ್ತೆ ಹಚ್ಚಿರುವ ಡಿಸೈನರ್ ಸಕ್ಕರೆ ಕಲಬೆರಕೆಯಿಂದಾಗಿ, ಜೇನುತುಪ್ಪದ ಗುಣಮಟ್ಟಕ್ಕೆ ವಿಧಿಸಿರುವ ನಿಯಮಗಳನ್ನು ಪುನರ್ ಪರಿಶೀಲನೆ ಮಾಡುವ ಅಗತ್ಯವಿದೆ. ಚೀನಾದಿಂದ ಆಮದಾಗುವ ಸಕ್ಕರೆಯ ಪಾಕವನ್ನು ನಿಯಂತ್ರಿಸುವ ಒಂದೇ ಕಾರ್ಯದಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಕಾರಣ ಈ ಸಕ್ಕರೆ ಪಾಕ ಇಂದು ಭಾರತದಲ್ಲಿಯೂ ತಯಾರಾಗುತ್ತಿದೆ. ಹಾಗೆಂದೇ ಜೇನುತುಪ್ಪವನ್ನು ಕುರಿತಂತೆ ಸುಧಾರಿಸಿದ ಪರೀಕ್ಷಣಾ ಕ್ರಮಗಳು, ಕಲ್ಮಷಗಳು ಸೇರಿದ ಬಗೆಯನ್ನು ಪತ್ತೆ ಹಚ್ಚುವ ಟ್ರೇಸೆಬಲಿಟಿ ಎಲ್ಲವೂ ಬೇಕಿದೆ. ಇದಿಲ್ಲದೆ ಜನಸಾಮಾನ್ಯರ ಆರೋಗ್ಯ ಅಪಾಯದಲ್ಲಿದೆ. ಜೊತೆಗೇ ಅಗಾಧ ಸಂಖ್ಯೆಯಲ್ಲಿಯ ಜೇನುಪಾಲಕ ರೈತರ ಜೀವನೋಪಾಯವೂ ವಿಪತ್ತಿಗೆ ತುತ್ತಾಗುತ್ತದೆ.
ಸಿ.ಎಸ್.ಇ. ಜೇನುತುಪ್ಪದ ಕಲಬೆರೆಕೆಯ ಬಗ್ಗೆ ಡಿಸೆಂಬರ್‍ನಲ್ಲಿಯೇ ತಿಳಿಸಿದೆ. ಆದರೆ ‘ಎಫ್.ಎಸ್.ಎಸ್.ಎ.ಐ ಜೇನುತುಪ್ಪದ ಕಲಬೆರಕೆ ಮತ್ತು ಕಲ್ಮಷಗಳನ್ನು ಕುರಿತು ದೃಢವಾದ ಕಾರ್ಯಾಚರಣೆಯನ್ನು ಮಾಡಿಲ್ಲ’ ಎಂದು ಸಿ.ಎಸ್.ಇ. ಹೇಳಿಕೆ ನೀಡಿದೆ. ಬದಲಿಗೆ ಕಂಪನಿಗಳು, ಸುನೀತ ಅವರನ್ನು ‘ವಿದೇಶೀ ಏಜೆಂಟ್’ ಎಂದೆಲ್ಲ ಆರೋಪಿಸುತ್ತಿವೆ.
ತಂಪು ಪಾನೀಯಗಳಲ್ಲಿ ಕೀಟನಾಶಕ!
ಇಸವಿ 2003ರಲ್ಲಿಯೇ ಸಿ.ಎಸ್.ಇ. ವಿಷಕಾರಕ ಕೀಟನಾಶಕಗಳು ವಿದೇಶೀ ತಂಪು ಪಾನೀಯಗಳಾದ ಕೋಕೋಕೋಲಾ ಪೆಪ್ಸಿಯಲ್ಲಿವೆ ಎಂದು ತೋರಿಸಿದ್ದನ್ನು ಎಲ್ಲರೂ ಮರೆತಂತಿದೆ. ಈ ಟಾಕ್ಸಿಕ್ ಪೆಸ್ಟಿಸೈಡ್ಸ್ ಕ್ಯಾನ್ಸರ್ ತರುವಂತಹವು, ನಮ್ಮ ನರ ವ್ಯವಸ್ಥೆ, ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಹಾನಿ ಮಾಡಬಲ್ಲವು. ರೋಗನಿರೋಧಕ ಶಕ್ತಿಯನ್ನು ತೀವ್ರವಾಗಿ ಕುಗ್ಗಿಸುತ್ತವೆ. ಅಮೆರಿಕದಲ್ಲಿ ಮಾರಾಟ ಮಾಡುವ ಇವೇ ಬ್ರಾಂಡಿನ ಸ್ಯಾಂಪಲ್ ಪಡೆದು ಸಿ.ಎಸ್.ಇ. ಪರೀಕ್ಷೆ ಮಾಡಿತ್ತು, ಅವುಗಳಲ್ಲಿ ಕೀಟನಾಶಕಗಳ ಮಾಲಿನ್ಯ ಇರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ದ್ವಿಮುಖ ನೀತಿಯನ್ನು ಸಿ.ಎಸ್.ಇ. ಬಯಲು ಮಾಡಿತ್ತು. ಸಿ.ಎಸ್.ಇ. ಹೊರತೆಗೆದ ಪುರಾವೆಗಳ ಪರಿಣಾಮವಾಗಿ, ಭಾರತ ಸರಕಾರ ‘ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ’ಯನ್ನು (ಜಿ.ಪಿ.ಸಿ.) ನಿಯೋಜಿಸಿತು. ಈ ಕಮಿಟಿ ದಿನಾಂಕ 4 ಫೆಬ್ರವರಿ 2004ರಂದು ತನ್ನ ವರದಿಯನ್ನು ಒಪ್ಪಿಸಿತು. ಕಮಿಟಿಯ ವರದಿ ಸಿ.ಎಸ್.ಇ. ತನಿಖೆಯಿಂದ ಪತ್ತೆ ಹಚ್ಚಿದ ವಿಚಾರಗಳು ಸರಿಯಿದೆ ಎಂದು ತೋರಿಸಿತು, ಕೋಲಾಗಳಲ್ಲಿ ಸಂಪೂರ್ಣವಾಗಿ ಕೀಟನಾಶಕ ಇಲ್ಲದೆ ಇರುವಂತೆ ಮಾಡಲು ಸಲಹೆ ನೀಡಿತು.

ಇಷ್ಟಾದರೂ ಸಿ.ಎಸ್.ಐ ವಿರುದ್ಧವಾಗಿ ಈ ಕಂಪನಿಗಳು ಅತಿ ಕೆಟ್ಟ ರೀತಿಯಲ್ಲಿ ಪ್ರಚಾರ ಮಾಡಿದ್ದನ್ನು ಮರೆಯುವಂತಿಲ್ಲ. ನ್ಯಾಯಾಲಗಳಲ್ಲಿ ಕೇಸುಗಳನ್ನು ಫೈಲ್ ಮಾಡಿದ್ದರು. ಸಿ.ಎಸ್.ಇ ಬೆದರಿಕೆಗಳಿಗೆ ಬಗ್ಗಲಿಲ್ಲ. ತಾನು ಕಂಡುಹಿಡಿದ ಸತ್ಯಾಂಶÀಗಳ ಪರವಾಗಿ ದೃಢವಾಗಿ ನಿಂತಿತು.


ಇಸವಿ 2003 ವರದಿ ಹೊರಬಂದಾಗ, ಕೋಕೋಕೋಲಾ ‘ಸಿ.ಎಸ್.ಎ.ನ ಮಿಥ್ಯಾರೋಪದಿಂದ ಆ ವರ್ಷದ ಮೂರನೇ ಕ್ವಾರ್ಟರ್‍ನಲ್ಲಿ ತನ್ನ ಕೋಲಾ ಮಾರಾಟದಲ್ಲಿ ಶೇಕಡಾ 11ರಷ್ಟು ಕಡಿತವಾಗಿದೆ’ ಎಂದು ಹುಯಿಲೆಬ್ಬಿಸಿತ್ತು. ಅಂದರೆ ಇಂತಹ ವಿಷಯ ಕೂಡಾ ಎಲ್ಲರಿಗೂ ತಲುಪುವುದಿಲ್ಲ, ಎಲ್ಲರನ್ನೂ ಎಚ್ಚರಿಸುವುದಿಲ್ಲ. ಕಾರಣ, ಕಡಿತವಾದದ್ದು ಕೇವಲ ಶೇಕಡಾ 11ರಷ್ಟು ಮಾತ್ರ. ಅದಕ್ಕಿಂತಲೂ ದಿಗ್ಭ್ರಮೆಯ ವಿಷಯವೆಂದರೆ, ಮರುವರ್ಷಗಳಲ್ಲಿ ಕೋಲಾ ಕಂಪನಿಗಳ ವ್ಯಾಪಾರ ಜೋರಾಗಿಯೇ ನಡೆಯುತ್ತಾ ಮೇಲೇರಿತು. ಇಸವಿ 2006ರಲ್ಲಿ ಸಿ.ಎಸ್.ಇ. ಮತ್ತೆ ನಮ್ಮ ದೇಶದ ಮಾರುಕಟ್ಟೆಯಲ್ಲಿ ಇದ್ದ ತಂಪು ಪಾನೀಯಗಳನ್ನು ತೆಗೆದುಕೊಂಡು ಪರಿಶೀಲಿಸಿತು. ಜಿ.ಪಿ.ಸಿ. ವರದಿಯ ನಂತರವೂ ಏನೊಂದೂ ಬದಲಾಗಿರಲಿಲ್ಲ, ಅವುಗಳಲ್ಲಿ ಕೀಟನಾಶಕಗಳು ಇದ್ದವು. ಮತ್ತೆ 3 ವರ್ಷಗಳು ಉರುಳಿದವು, ಆರೋಗ್ಯ ಸಚಿವಾಲಯ ತಂಪು ಪಾನೀಯದಲ್ಲಿಯ ಕೀಟನಾಶಕಗಳನ್ನು ಕುರಿತು, ನಿಯಮಾವಳಿಯನ್ನು ನೋಟಿಫೈ ಮಾಡಿತು. ಆದರೆ ‘ಕೀಟನಾಶಕಗಳನ್ನು ಹೇಗೆ ಪರಿಶೀಲಿಸುವುದು ಎಂಬ ವಿಧಾನವನ್ನು ನೀಡದೆ ಈ ನೋಟಿಫಿಕೇಶನ್ ಅಪ್ರಯೋಜಕ’ ಎಂದು ಸಿ.ಎಸ್.ಇ ತಿಳಿಸಿತ್ತು. ಇಸವಿ 2013ರಲ್ಲಿ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿಯ ದಾವೆಯ ತೀರ್ಪು ನೀಡುವಾಗ, ಎಫ್.ಎಸ್.ಎಸ್.ಎ.ಐ.ಗೆ ತನ್ನ ಜವಾಬ್ದಾರಿಯನ್ನು ನೆನಪು ಮಾಡಬೇಕಾಯ್ತು. ತಂಪು ಪಾನೀಯಗಳಲ್ಲಿ ಕೀಟನಾಟಕಗಳ ವಿಷಯ ಕಡೆಗೂ ಏನಾಯಿತು ಎಂದು ತಿಳಿಯಲು ಸುನೀತಾ ಅವರನ್ನು ಸಂಪರ್ಕಿಸಿದೆ. ಇಸವಿ 2016ರಲ್ಲಿ ‘ಎಫ್.ಎಸ್.ಎಸ್.ಎ.ಐ’, ‘ಮ್ಯಾನ್ಯುಯಲ್ ಆಫ್ ಮೆಥೆಡ್ಸ್ ಆಫ್ ಅನಲಿಸಿಸ್ ಆಫ್ ಫೂಡ್ಸ್ – ಪೆಸ್ಟಿಸೈಡ್ಸ್ ರೆಸಿಡ್ಯೂಸ್’ ಹೊರತಂದಿರುವುದು ಸಮಾಧಾನದ ವಿಷಯ. ಆ ಮ್ಯಾನುಯಲ್‍ನ ಪಿಡಿಎಫ್ ಪ್ರತಿಯನ್ನು ಸುನೀತಾ ಕಳುಹಿಸಿ ಕೊಟ್ಟರು.
ಸುರಕ್ಷತೆ ನಮ್ಮ ಆದ್ಯತೆ
ಬಹುರಾಷ್ಟ್ರೀಯ ಕಂಪನಿಗಳಿಗಳಷ್ಟೇ ಅಲ್ಲ, ದೇಶೀಯ ಕಂಪನಿಗಳಿಗೂ ಲಾಭವೊಂದೇ ಮಂತ್ರವಾದಾಗ, ಸುರಕ್ಷತೆ ನಮ್ಮ ಆದ್ಯತೆ ಆಗಬೇಕು. ನಮ್ಮ ಆರೋಗ್ಯಕ್ಕೆ ನಾವೇ ಜವಾಬ್ದಾರರು.
ಅಂದಹಾಗೆ ಕರೋನಾದಿಂದ ಜೇನುತುಪ್ಪ ಅಧಿಕವಾಗಿ ಮಾರಾಟವಾಯಿತು. ಆದರೆ ಇದು ಕೇವಲ ತಯಾರಕ ಕಂಪನಿಗಳಿಗೆ ಲಾಭ ತಂದಿತು. ಜೇನುಸಾಕುವ ಬಡ ರೈತರಿಗಲ್ಲ. ರೈತರೇಕೆ ಕಾರ್ಪೊರೇಟ್ ಕಂಪನಿಗಳು ಕೃಷಿಯಲ್ಲಿ ಪ್ರವೇಶಿಸುವುದನ್ನು ವಿರೋಧಿಸುತ್ತಾರೆ ಎಂದು ಅಚ್ಚರಿಗೊಳ್ಳುವ ಪಟ್ಟಣವಾಸಿಗಳಿಗೆ ಬಹುಶಃ ಈ ಪ್ರಕರಣ ಉತ್ತರ ನೀಡಬಲ್ಲದು.
ಸುನೀತಾ ನಾರೇನ್ ಅವರಿಗೆ ಜನಸಾಮಾನ್ಯರ ಬದುಕು ಮತ್ತು ಪರಿಸರ ಆದ್ಯತೆಯ ವಿಷಯಗಳಾಗಿವೆ. ಲಾಭವೊಂದೇ ಮುಖ್ಯವೆಂಬ ಬಹುಪಾಲು ಉದ್ಯಮಿಗಳ ಬಾಯಲ್ಲಿ ಸುನೀತಾ ಮತ್ತು ಸಿ.ಎಸ್.ಇ. ಕುರಿತು ಸಾಕಷ್ಟು ದೂರುಗಳಿವೆ. ಇದು ಸಾಲದೆಂದು ಆಪತ್ತುಗಳೂ ಅವರನ್ನು ಹುಡುಕಿ ಬಂದಿವೆ. 20 ಅಕ್ಟೋಬರ್ 2013ರಂದು ಸುನೀತಾ ಸೈಕಲ್‍ನಲ್ಲಿ ಹೋಗುತ್ತಿದ್ದರು. ವಿಪರೀತ ವೇಗವಾಗಿ ಹಾಯ್ದುಬಂದ ಕಾರು ಆ ಮುಂಜಾವಿನ ಸಮಯದಲ್ಲಿ ಈಕೆಯನ್ನು ಗುದ್ದಿ ಹಾಯಿತು, ನಿಲ್ಲಿಸದೆ ಓಡಿ ಹೋಯಿತು. ಹಾದಿಹೋಕರು ಸುನೀತಾ ಅವರನ್ನು ಆಸ್ಪತ್ರೆಗೆ ತಂದಾಗ ಮುಖ ಮತ್ತು ಮೂಳೆಗಳಿಗೆ ಬಹಳಷ್ಟು ಜಖಂ ಆದರೂ ಸುನೀತಾ ಪ್ರಾಣಾಪಾಯದಿಂದ ಪಾರಾದರು. ಗುಣವಾಗಿ ತಮ್ಮ ದಿನಚರಿಗೆ ಹಿಂತಿರುಗಿದ ಸುನೀತಾ ತಮ್ಮ ಎಂದಿನ ಉತ್ಸಾಹದಲ್ಲಿ ಜನಹಿತ ಸಂಶೋಧನೆಯಲ್ಲಿ ತೊಡಗಿದರು.

ಸಿ.ಎಸ್.ಇ. ಸಂಸ್ಥೆಯೊಡನೆ ಬೆಳೆದ ಸುನೀತಾ, ಸಂಸ್ಥೆಯನ್ನು ಬೆಳೆಸಿದರು. ಸಂಸ್ಥೆಗೆ ಅಗತ್ಯದ ಆರ್ಥಿಕ ಬೆಂಬಲವನ್ನು ಮತ್ತು ಸಂಸ್ಥೆಯ ನಿರ್ವಹಣೆಯನ್ನು ವಿಕಾಸಗೊಳಿಸಿದರು. ಇಂದು ಈ ಸಂಶೋಧನಾ ಸಂಸ್ಥೆ ನೂರಾ ಇಪ್ಪತ್ತು ಮಂದಿಯನ್ನು ಒಳಗೊಂಡಿದೆ. ಪರಿಸರ ರಕ್ಷಣೆ ಮತ್ತು ಜನಹಿತದ ಕಾರ್ಯಕ್ರಮಗಳನ್ನು, ಸಂಶೋಧನಾ ಯೋಜನೆಗಳನ್ನು ಹಮ್ಮಿಕೊಂಡಿದೆ.

ಹಲವು ಸಂಸ್ಥೆಗಳ ಬೋರ್ಡ್‍ನಲ್ಲಿ, ಅನೇಕ ಸರ್ಕಾರದ ಸಮಿತಿಗಳಲ್ಲಿ ಇದ್ದರೂ, ಸುನೀತಾ ತಮ್ಮ ದಿಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಜಾಗತಿಕ ಪ್ರಜಾಪ್ರಭುತ್ವ, ಸ್ಥಳೀಯ ಪ್ರಜಾಪ್ರಭುತ್ವದ ಅಗತ್ಯದ ಬಗ್ಗೆ ಒತ್ತಿ ಹೇಳಿದ್ದಾರೆ. ತಮ್ಮ ಆಸಕ್ತಿ ಮತ್ತು ತಜ್ಞತೆಯ ವಿಷಯಗಳ ಬಗ್ಗೆ ಸುನೀತಾ ಜಾಗತಿಕ ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಇಸವಿ 2008ರಲ್ಲಿ ‘ಕೆ.ಆರ್.ನಾರಾಯಣನ್ ಉಪನ್ಯಾಸ’ವನ್ನು ನೀಡುತ್ತಾ ‘ಪರಿಸರವಾದ ಸಮಾನತೆಯನ್ನು ಏಕೆ ಬೇಡುತ್ತದೆ?’ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ, ‘ಬಡವರ, ನಿರ್ಗತಿಕರ ಪರಿಸರವಾದದಿಂದ ನಮ್ಮ ಒಟ್ಟು ಭವಿಷ್ಯದ ಒಳಿತಿಗೆ ನಾವು ಕಲಿಯಬೇಕಾದ ವಿಷಯಗಳನ್ನು’ ಕುರಿತು ಹೇಳಿದ್ದರು.
ಇಸವಿ 2020ರಲ್ಲಿ, ಡಬ್ಲ್ಯು.ಎಚ್.ಒ.-ಯೂನಿಸೆಫ್ ಲ್ಯಾನ್ಸೆಟ್ ಕಮಿಷನ್‍ನಲ್ಲಿ ‘ವಿಶ್ವ ಮಕ್ಕಳ ಭವಿಷ್ಯ’ವನ್ನು ಕುರಿತ ಸಮಿತಿಯ ಸಹ-ಅಧ್ಯಕ್ಷರಾಗಿ ದುಡಿದರು. ಕಳೆದ ದಶಕಗಳಲ್ಲಿ ಪೌಷ್ಟಿಕಾಂಶದ ವಿಷಯದಲ್ಲಿ ಮತ್ತು ವಿದ್ಯಾಭ್ಯಾಸದ ಕ್ಷೇತ್ರಗಳಲ್ಲಿ ಅಗಾಧ ಸುಧಾರಣೆ ಆಗಿದ್ದರೂ, ಇಂದಿಗೂ ಮಕ್ಕಳ ಭವಿಷ್ಯ ಅನಿಶ್ಚಿತವಾಗಿದೆ. ಹವಾಮಾನ ಬದಲಾವಣೆ, ಪರಿಸರಕ್ಕಾಗಿರುವ ಹಾನಿ, ವಲಸೆಯಾಗುತ್ತಿರುವ ಜನಸಂಖ್ಯೆ, ಘರ್ಷಣೆ, ವ್ಯಾಪಕ ಅಸಮಾನತೆ; ಇವೆಲ್ಲವುಗಳ ಜೊತೆಯಲ್ಲಿ ಕೊಳ್ಳೆ ಹೊಡೆಯುವ ಸುಲಿಗೆ ಮಾಡುವಂತಹ ಪರಭಕ್ಷಕ ಲೂಟಿಕೋರ ವಾಣಿಜ್ಯ ವ್ಯವಹಾರಗಳು ಪ್ರತಿಯೊಂದು ದೇಶದಲ್ಲಿಯೂ ಮಕ್ಕಳ ಆರೋಗ್ಯ ಮತ್ತು ಭವಿಷ್ಯಕ್ಕೆ ಅಪಾಯವಾಗಿವೆ ಎಂದು ಪುರಾವೆಗಳೊಡನೆ ತೋರಿಸಿದರು.
ಸುನೀತಾ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಇಸವಿ 2004ರಲ್ಲಿ ‘ಚಮೇಲಿ ದೇವಿ ಜೇನ್ ಪ್ರಶಸ್ತಿ’ ಲಭಿಸಿತ್ತು. ಇಸವಿ 2005ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿತು. ಇದೇ 2005ರಲ್ಲಿ ‘ಸ್ಟಾಕ್‍ಹೋಮ್ ವಾಟರ್ ಪ್ರೈಸ್’ ಪ್ರಶಸ್ತಿ ಸಿ.ಎಸ್.ಇ.ಗೆ ಲಭಿಸಿತು. ಇಸವಿ 2009ರಲ್ಲಿ ಕಲಕತ್ತಾ ವಿಶ್ವವಿದ್ಯಾಲಯ ಸುನೀತಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿತು. ಇಸವಿ 2016ರಲ್ಲಿ ಸುನೀತಾ ಅವರನ್ನು ‘ಟೈಮ್’ ಪತ್ರ್ರಿಕೆ ‘ವಿಶ್ವದ ನೂರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ’ ಹೆಸರಿಸಿತು. ಇಸವಿ 2016ರಲ್ಲಿ ‘ಐ.ಎ.ಎಮ್.ಸಿ.ಆರ್’ನ ‘ಕ್ಲೈಮೇಟ್ ಚೇಂಜ್ ಕಮ್ಯುನಿಕೇಶನ್ ರಿಸರ್ಚ್ ಇನ್ ಆಕ್ಷನ್’ ಪುರಸ್ಕಾರ ಲಭಿಸಿತು. ಇಸವಿ 2018ರಲ್ಲಿ ಪ್ರತಿಷ್ಠಿತ ‘ಇಂದಿರಾ ಗಾಂಧಿ ಶಾಂತಿ ಪುರಸ್ಕಾರ’ ಸಿ.ಎಸ್.ಇ.ಗೆ ಲಭಿಸಿದೆ.

ಇದೇ ವರ್ಷ ಉತ್ತರಾಖಂಡದ ‘ಚಮೋಲಿ’ ತಾಣದಲ್ಲಿ ಆದ ಭೂಕುಸಿತ, ಹಿಮಪ್ರವಾಹ ಸಾವುನೋವುಗಳ ಸರಮಾಲೆಗೆ ಕಾರಣವಾಯಿತು. ಮಾರ್ಚ್ 2021ರ ‘ಡೌನ್ ಟು ಅರ್ತ್’ ಪತ್ರಿಕೆ ‘ಅತಿಸೂಕ್ಷ್ಮವಾದ ಹಿಮಾಲಯದ ಪರಿಸರವನ್ನು ನಾವೇಕೆ ಕಲಕಬಾರದು’ ಎಂದು ವೈಜ್ಞಾನಿಕವಾಗಿ ವಿವರಿಸುತ್ತಾ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ನಿರ್ಲಕ್ಷಿಸಿ ನಡೆಸುತ್ತಲೇ ಸಾಗಿರುವ ಯೋಜನೆಗಳು ಪ್ರಕೃತಿ ಪ್ರಕೋಪಕ್ಕೆ ನೇರ ಕಾರಣ ಎಂದು ತಿಳಿಸಿತು. ಪರಿಸರದೊಡನೆ ನಮ್ಮ ಸಂಬಂಧ ಸ್ವಾರ್ಥ ಮತ್ತು ಶೋಷಣೆಯ ಮೇಲೆ ಆಧಾರವಾದಾಗ ವಿಪತ್ತು ಮತ್ತು ದುರಂತ ತಪ್ಪಿದ್ದಲ್ಲ ಎಂದು ಎಚ್ಚರಿಸಿತು. ಸುನೀತಾ ನಾರೇನ್ ಪರಿಸರ ರಕ್ಷಣೆಯ ಅಗತ್ಯವನ್ನು, ಪರಿಸರವನ್ನು ಕುರಿತ ತಪ್ಪು ಹೆಜ್ಜೆಗಳನ್ನು ನಿರ್ಭಯವಾಗಿ ಅನಾವರಣಗೊಳಿಸುತ್ತಾ ಸಾಗಿದ್ದಾರೆ.

ನೇಮಿಚಂದ್ರ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *