Uncategorizedಸಾಧನಕೇರಿ

ಸಾಧನ ಕೇರಿ/ ಶಾರದಾ ಬಾಪಟ್ ಎಂಬ ಅಸಾಮಾನ್ಯ ಅನ್ವೇಷಕಿ – ಗಿರಿಜಾ ಶಾಸ್ತ್ರಿ

ಮದುವೆ ಆದೊಡನೆ ತಮ್ಮ ಕನಸುಗಳನ್ನು ಮಡಿಸಿಟ್ಟು ಗಂಡ ಮಕ್ಕಳ ಕನಸುಗಳನ್ನು ಹಾಸಿಹೊದೆಯುವ ಮಹಿಳೆಯರೇ ನಮ್ಮ ಸುತ್ತಮುತ್ತ ಕಾಣುತ್ತಾರೆ. ಆದರೆ, ಮನೆಯನ್ನೂ ತೂಗಿಸಿಕೊಂಡು ತಮ್ಮ ಆಸಕ್ತಿಗಳನ್ನೂ ಪೋಷಿಸಿಕೊಂಡು, ಬಹು ಮುಖ ಪ್ರತಿಭೆ ಮುರುಟಲು ಬಿಡದೇ ನೀರೆರೆಯುತ್ತಾ ಹೇಗೆ ಜೀವನದಲ್ಲಿ ಯಶಸ್ವಿಯಾಗಿ ಬದುಕಬಹುದು ಎನ್ನುವುದಕ್ಕೆ ಶಾರದಾ ಬಾಪಟ್ ಉತ್ತಮ ಉದಾಹರಣೆ. ಕಾನೂನು, ಕಂಪ್ಯೂಟರ್, ವಿಜ್ಞಾನ, ವೈದ್ಯಕೀಯ, ವಿಮಾನ ಹಾರಾಟ, ಟ್ರೆಕ್ಕಿಂಗ್, ಟೆನಿಸ್ ಆಟ, ಸಂಗೀತ, ಸಾವಯವ ಕೃಷಿ- ಎಲ್ಲದರಲ್ಲೂ ಸಾಧನೆ ಮಾಡಿರುವ ಅವರು ಮಹಿಳೆಯರಿಗೆ ಅತ್ಯುತ್ತಮ ಮಾದರಿ.

“ಅಸಾಮಾನ್ಯ ಮಹಿಳೆ (Super Woman) ಎನ್ನುವುದು ಒಂದು ಮಿಥ್ಯೆ. ಎಲ್ಲಾ ಮಹಿಳೆಯರೂ ಅಸಾಮಾನ್ಯರೇ. ಪ್ರತಿಯೊಬ್ಬ ಮಹಿಳೆಗೂ ಪ್ರಕೃತಿ ನೂರಕ್ಕೆ ನೂರು ಅಂಶ ಕಾರ್ಯಕ್ಷಮತೆಯನ್ನು ದಯಪಾಲಿಸಿರುತ್ತದೆ. ಆದರೆ ಅನೇಕ ಸಾಮಾಜಿಕ ಕಾರಣಗಳಿಗಾಗಿ ಅದನ್ನು ಚಿವುಟಿ ಹಾಕಲಾಗುತ್ತದೆ, ಆದರೆ ಅದನ್ನು ಮೀರಲು ಸಾಧ್ಯ.” “ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು. ಅವಳಿಗೆ ಯಾವುದೂ ಅಸಾಧ್ಯವಲ್ಲ, ಈ ಸಾಧನೆಗೆ ವಯಸ್ಸೆಂಬುದಿಲ್ಲ” – ದೂರದರ್ಶನದ ಮರಾಠಿ ವಾಹಿನಿಯ ಒಂದು ಸಂದರ್ಶನದಲ್ಲಿ ಹೀಗೆ ಮಾತನಾಡುತ್ತಿದ್ದವರು ಪುಣೆಯ ಜನಪ್ರಿಯ ವೈದ್ಯೆ, ಅಸಾಮಾನ್ಯ ಮಹಿಳೆ, ಶಾರದಾ ಬಾಪಟ್. ಮಹಾರಾಷ್ಟ್ರದಲ್ಲಿ ಮಹಿಳೆಯರ ಮಾದರಿಯೆಂದೇ ಗುರುತಿಸಲ್ಪಡುವ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ಹಂಬಲದಲ್ಲಿ ಗೂಗಲ್ ಜಾಲದಲ್ಲಿ ಜಾಲಾಡುತ್ತಾ ಹೋದರೆ !! ಅಲ್ಲಿ ಶಾರದಾ ವಿಶ್ವರೂಪ ದರ್ಶನ ತೆರೆದುಕೊಂಡಿತು.

ಸಂದರ್ಶನದಲ್ಲಿ ಶಾರದಾ ಅವರು ಹೇಳಿದ ಮಾತುಗಳು ಮಹಿಳೆಯರನ್ನು ಕೇವಲ ಉತ್ತೇಜಿಸಲು ಹೇಳಿದ ಮಾತುಗಳಲ್ಲ. ಹಾಗೆ ಬದುಕಿ ತೋರಿಸಿದವರು ಶಾರದಾ ಅವರು. ಮಹಿಳೆಯರ ಕಾರ್ಯ ಕ್ಷೇತ್ರ ವಿಸ್ತರಿಸುತ್ತಿರುವ ಇಂದಿನ ದಿನಗಳಲ್ಲಿ ಹೀಗೆ ಇನ್ನೂ ಮಹಿಳಾಪರವಾಗಿ ಮಾತನಾಡುವುದು ಸರಿಯೇ ಎಂಬ ಪ್ರಶ್ನೆ ಬರುತ್ತದೆ. ಆದರೆ ಭಾರತದ ಮಹಿಳಾ ಅಭಿವೃದ್ಧಿಯ ಒಟ್ಟು ಅಂಕಿ ಅಂಶಗಳನ್ನು ನೋಡಿದರೆ ಇದು ಇನ್ನೂ ನಿರಾಶಾದಾಯಕವಾಗಿಯೇ ಇದೆ.

ನಮ್ಮ ಬದಿಯ ಫ್ಲಾಟಿನ ಒಡಿಯಾ ಮಹಿಳೆ “ನಮ್ಮ ಹೆಣ್ಣುಮಕ್ಕಳನ್ನು ದುಡಿಯಲು ಹೊರಗೆ ಕಳುಹಿಸುವುದಿಲ್ಲ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಬೆಳಗಾಯಿತೆಂದರೆ ಚಪಾತಿ, ಪಲ್ಯ ಡಬ್ಬಿ ಎಂದು ಮನೆ ಮಕ್ಕಳ ದೇಖರೇಖಿ ನೋಡಿ, ನೀಟಾಗಿ ಅಲಂಕರಿಸಿಕೊಂಡು ಬೀದಿಗಿಳಿದು, ಬೆಳಗಿನ ಏಳುಗಂಟೆಯ ಗಾಡಿ ಹಿಡಿಯಲು ಲಗುಬಗೆಯಿಂದ ಓಡುತ್ತಿರುವ ಲಕ್ಷಾಂತರ ಮಹಿಳೆಯರನ್ನು ದಿನಾ ನೋಡುತ್ತಿರುವ ಮುಂಬಯಿಯಂತಹ ನಗರದಲ್ಲೇ ಇಂತಹ ಮಹಿಳೆಯರೂ ಇದ್ದಾರೆ !! ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಎಷ್ಟೋ?

ಮಕ್ಕಳನ್ನು ರೂಪಿಸುವುದು ಅವರ ಕುಟುಂಬ. ಬಾಲ್ಯದಲ್ಲಿ ಸಿಕ್ಕ ಪೋಷಣೆಯ ಮೇಲೆ ಭವಿಷ್ಯದ ಬದುಕು ಅವಲಂಬಿಸಿರುತ್ತದೆ. ಶಾರದಾ ಬಾಪಟ್ ಬೆಳೆದದ್ದು ಇಂತಹ ಮುಕ್ತ ವಾತಾವರಣದ ಕುಟುಂಬವೊಂದರಲ್ಲಿ. ಪ್ರೀತಿಯ ತಾಯಿ ತಂದೆ, ಸಹೋದರ, ಬಂಧುವರ್ಗ, ಸಾಕು ಪ್ರಾಣಿಗಳ ನಡುವೆ ಪುಣೆಯ ಸುರಕ್ಷಿತ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ ಆಕೆ, ಬೆಳೆದದ್ದು ಮಕ್ಕಳ ಸ್ವತಂತ್ರ ಚಟುವಟಿಕೆಗಳಿಗೆ ಆಸ್ಪದ ಕೊಟ್ಟಂತಹ, ಅವರ ಆಲೋಚನೆಗಳಿಗೆ, ಅವರ ಸೃಜನಶೀಲತೆಗೆ ಮಹತ್ವ ಕೊಟ್ಟಂತಹ ಮನೆಯಲ್ಲಿ. “ನಮ್ಮ ತಂದೆ ತಾಯಿ ಬಾಲ್ಯದಿಂದಲೇ ನಮ್ಮ ಆಸಕ್ತಿಗಳಿಗೆ ನೀರೆರೆದು ಪೋಷಿಸಿದರು, ಪು.ಲ. ದೇಶಪಾಂಡೆಯವರ ಬರಹಗಳ ಕಡೆಗೆ ನನ್ನ ತಂದೆ ಗಮನ ಸೆಳೆದರು, ಬಟ್ರ್ರಂಡ್ ರಸೆಲ್ , ಐನ್ ರ್ಯಾಂಡ್ ನನ್ನ ಪ್ರೀತಿಯ ಲೇಖಕರಾಗಿದ್ದರು. ನಾನು ಓದಿನಲ್ಲಿ ಮುಂದಿದ್ದೆ. ಮಾತ್ರವಲ್ಲದೇ ಸಂಗೀತ, ನೃತ್ಯ, ನಿಟ್ಟಿಂಗ್, ಕುದುರೆ ಸವಾರಿ, ಈಜು ಕಲಿಯುವುದು, ಟೇಬಲ್ ಟೆನ್ನಿಸ್ ಹೀಗೆ ಅನೇಕ ಹವ್ಯಾಸಗಳು ನನಗಿದ್ದವು. ಅನೇಕ ಬಹುಮಾನಗಳೂ ಬಂದವು. ಆದರೆ ನಾನು ಮಹತ್ವಾಕಾಂಕ್ಷಿಯಾಗಿರಲಿಲ್ಲ. ಕಲಿಯುವುದು ನನ್ನ ಆಸಕ್ತಿಯ ವಿಷಯವಾಗಿತ್ತೇ ಹೊರತು, ಅದು ಸ್ಪರ್ಧೆಯ ಭಾಗವಾಗಿರಲಿಲ್ಲ. ಅದಕ್ಕೆ ಕಾರಣ ನಮ್ಮ ತಾಯಿ ತಂದೆಯರೇ. ಅವರು ಎಂದೂ ನಮ್ಮ ಬಾಲ್ಯದ ಚಟುವಟಿಕೆಗಳಿಗೆ ಅಡ್ಡಿಮಾಡದೇ, ನಮ್ಮಲ್ಲಿ ಬಿತ್ತಿದ್ದು ಗೆಲ್ಲುವ ಹಂಬಲವನ್ನಲ್ಲ, ಬದಲಾಗಿ ಆಸಕ್ತಿ ಇರುವ ಸಂಗತಿಗಳಲ್ಲಿ ಖುಷಿಯಿಂದ ತೊಡಗಿಸಿಕೊಳ್ಳುವುದನ್ನು ಮಾತ್ರ” ಎನ್ನುತ್ತಾರೆ ಶಾರದಾ ಬಾಪಟ್. ಹೀಗಾಗಿಯೇ ಅವರು ಪ್ರತಿಭೆಯ ಪ್ರದರ್ಶನದ ರೇಸಿನಲ್ಲಿ ತಂದೆ ತಾಯಿಗಳು ಸಾಯಹೊಡೆದ ಕುದುರೆಯಾಗದೇ ಸ್ವತಂತ್ರ ವ್ಯಕ್ತಿಯಾಗಿ ಬಹುಮುಖ ಪ್ರತಿಭೆಯಿಂದ ಅರಳಿದರು. “ಖುಷಿ ಇರುವುದು ಸಮರ್ಥವಾಗಿ ಕೆಲಸಗಳನ್ನು ಮಾಡುವುದರಲ್ಲಿಯೇ ಹೊರತು ಬಹುಮಾನಗಳನ್ನು ಗೆಲ್ಲುವುದರಲ್ಲಲ್ಲ ಎಂಬುದನ್ನು ಬಹು ಬೇಗ ಕಲಿತೆ” ಎನ್ನುತ್ತಾರೆ.

ವಿಜ್ಞಾನದ ವಿದ್ಯಾಥಿಯಾಗಿ ಪಿಯುಸಿಗೆ ಸೇರಿಕೊಂಡ ಶಾರದಾ ಕಪ್ಪೆ, ಜಿರಲೆಗಳ ಡಿಸೆಕ್ಷನ್ ಗೆ ಹೇಸಿ ಕಲಾವಿಭಾಗಕ್ಕೆ ಸೇರಿಕೊಂಡರು. ಬಿ.ಎ. ಓದಿ. ಕಾನೂನು ಪದವಿ ಪಡೆದು ಈ ಮಧ್ಯೆ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಡಿಪ್ಲೊಮಾ ಗಳಿಸಿ, ತಂದೆಯವರ ಸಹಾಯದಿಂದ ಸ್ವತಃ ಟ್ರೇಡಿಂಗ್ ಕಂಪನಿ ತೆರೆದು, ನರೇಂದ್ರ ಎನ್ನುವವರನ್ನು ಮದುವೆಯಾಗಿ ಒಂದು ಮಗುವಿನ ತಾಯಿಯಾದ ಮೇಲೆ, ಮೂವತ್ತೈದನೇ ವರುಷದಲ್ಲಿ ವೈದ್ಯಕೀಯ ಪದವಿ ಮಾಡುವ ಹಂಬಲದಿಂದ ಮತ್ತೆ ವಿಜ್ಞಾನದ ವಿದ್ಯಾರ್ಥಿಯಾಗಿ ಪಿಯುಸಿಗೆ ಸೇರಿಕೊಂಡು ಪರಿಣಿತ ವೈದ್ಯಳಾದದ್ದು ಸಾಹಸಗಾಥೆ.

ಶಾರದಾ ಅವರ ತಾಯಿ ಬೆನ್ನುನೋವು, ಥೈರಾಯ್ಡ್ ಮತ್ತು ಇನ್ನಿತರ ಸಮಸ್ಯೆಗಳಿಂದ ನಿರಂತರವಾಗಿ ಬಳಲುತ್ತಿದ್ದರು. ಒಬ್ಬ ವೈದ್ಯರಿಂದ ಇನ್ನೊಬ್ಬ ವೈದ್ಯರ ಬಳಿಗೆ ಎಡತಾಕಿದರೂ ಯಾವ ಪರಿಹಾರವೂ ಕಾಣಲಿಲ್ಲ. ಆಗ ಉದ್ಯಮಿಯಾದ ಶಾರದಾ ಅನೇಕ ವೈದ್ಯಕೀಯ ಪುಸ್ತಕಗಳು, ಪತ್ರಿಕೆಗಳ ಮೊರೆ ಹೊಕ್ಕರು. ತಾಯಿಯ ನೋವನ್ನು ಕಡಿಮೆ ಮಾಡಲು ಅವರಿಗೆ ಅನೇಕ ವೈದ್ಯಕೀಯ ಸೌಲಭ್ಯಗಳಿಗೇನು ಕೊರತೆ ಇರಲಿಲ್ಲ. ಆದರೂ ಸ್ವತಃ ತಾವೇ ವೈದ್ಯರಾಗಬೇಕೆನ್ನುವ ಹಂಬಲ ಜಾಗೃತವಾಯಿತು. ಆಗ ಅವರಿಗೆ ವಯಸ್ಸು 35. “ ನನ್ನ ಗಂಡನನ್ನು ಬಿಟ್ಟು ಬೇರೆ ಯಾರೂ ನನ್ನ ಹಂಬಲವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ತಮಾಷೆ ಮಾಡುತ್ತಿರುವೆನೆಂದೇ ಭಾವಿಸಿದ್ದರು. ಹದಿನೈದು ವರುಷಗಳಿಂದ ಅಮ್ಮ ನರಳುತ್ತಿದ್ದರು. ತಜ್ಞ ವೈದ್ಯರುಗಳ ಬಳಿಗೆ ಓಡಾಡಿದರೂ ರೋಗದ ಸ್ವಭಾವ ಪತ್ತೆಯಾಗಲಿಲ್ಲ. ಅವರ ನೋವು ಕಡಿಮೆಯಾಗಲಿಲ್ಲ. ವೈದ್ಯ ವಿಜ್ಞಾನ ಬಹಳ ಸಂಕೀರ್ಣವಾದುದು. ಅದನ್ನು ತಿಳಿದುಕೊಳ್ಳಲು ಶಿಸ್ತು ಬದ್ಧ ಅಧ್ಯಯನವಿಲ್ಲದೇ ಸಾಧ್ಯವಿಲ್ಲ ಎನಿಸಿತು. ಹೀಗಾಗಿ ಮೆಡಿಕಲ್ ಓದಲು ಸಂಕಲ್ಪ ಮಾಡಿದೆ. ನನ್ನ ಗಂಡ ನರೇಂದ್ರಗೆ ಇದು ಅವಾಸ್ತವ, ಅಸಾಧ್ಯವೆಂದೇ ತೋರಿತು. ಅವರು ಇದಕ್ಕೆ ಒಪ್ಪಲಿಲ್ಲ. ನಾವಿಬ್ಬರೂ ಇದರ ಕುರಿತಾಗಿ ಅನೇಕ ದಿನಗಳು ಯುದ್ಧವನ್ನೇ ಮಾಡಿದ್ದೇವೆ.” ಎನ್ನುವ ಶಾರದಾ ಹಟ ಬಿಡದೇ ಅವರು ಕಲಿತ ಶಾಲೆಗೆ ಹೋಗಿ ಹನ್ನೆರಡನೆ ಇಯತ್ತೆಗೆ ವಿಜ್ಞಾನ ವಿಭಾಗಕ್ಕೆ ಸೇರಿಕೊಳ್ಳುವ ಕೋರಿಕೆಯನ್ನು ಮುಂದಿಟ್ಟರು.

ಶಾರದಾ ಅವರು ಅರ್ಹರಾಗಿದ್ದರೂ ಅವರು ಕಲಿತ ಶಾಲೆಯ ಪ್ರಾಂಶುಪಾಲರು ಇದಕ್ಕೆ ಅಪ್ಪಣೆಯನ್ನೂ ನೀಡದೇ, ಬೇರೆ ಕಡೆ ಕಲಿಯಲು, ಎನ್ ಓ ಸಿ (No Objection Certificate) ಪತ್ರವನ್ನು ನೀಡಲೂ ನಿರಾಕರಿಸಿದರು. ಇವರ ಪ್ರಯತ್ನಕ್ಕೆ ಎಲ್ಲ ಕಡೆಯಿಂದ ಋಣಾತ್ಮಕ ಪ್ರತಿಕ್ರಿಯೆಗಳೇ ಬಂದವು. ಇವರ ಹುಚ್ಚನ್ನು ಕಂಡು ಜನ ಕೂಡ ನಕ್ಕರು. ಆದರೂ ಶಾರದಾ ಅವರು ಧೃತಿಗೆಡಲಿಲ್ಲ. ಪ್ರಯತ್ನವನ್ನೂ ಬಿಡಲಿಲ್ಲ. ಇವರು ಓದಿದ ವಿದ್ಯಾಸಂಸ್ಥೆಗಳಿಗೆಲ್ಲಾ ಎಡತಾಕಿದರು. ಕೊನೆಗೊಮ್ಮೆ 12 ನೇ ಇಯತ್ತೆಗೆ ಪ್ರವೇಶ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ತರಗತಿಗೆ ಹೋದಾಗ ವಿದ್ಯಾರ್ಥಿಗಳು ಇವರನ್ನು ಅಧ್ಯಾಪಕಿ ಇರಬಹುದೆಂದು ತಿಳಿದು ಅದರಂತೆ ವರ್ತಿಸಿದಾಗ ಆದ ಮುಜುಗರವನ್ನು ಬಹಳ ಸೊಗಸಾಗಿ ಹೇಳಿಕೊಳ್ಳುತ್ತಾರೆ ಶಾರದಾ.

2011 ರಲ್ಲಿ ಶಾರದಾ ಅವರು ಅಮೇರಿಕೆಗೆ ಹೋದಾಗ ಅಲ್ಲಿ ಸ್ಯಾನ್‍ಫ್ರಾನ್ಸಿಸ್ಕೊ ದಿಂದ ಎಲ್ಲೋ ಸ್ಟೋನ್ ವರೆಗೆ ರೋಡ್ ಟ್ರಿಪ್ ಕೈಗೊಂಡರು. ಆಗ ಅಲ್ಲಿ ಅವರಿಗೊಂದು ಆಶ್ಚರ್ಯ ಕಾದಿತ್ತು. ಕಂಪ್ಯೂಟರ್ ಶಿಕ್ಷಣ ಪಡೆದುಕೊಂಡ ಒಬ್ಬ ವ್ಯಕ್ತಿ ಅದನ್ನು ಬಿಟ್ಟು ವೈದ್ಯಕೀಯ ಶಿಕ್ಷಣಕ್ಕೆ ವರ್ಗಾಂತರಗೊಂಡ ಸಂಗತಿಯನ್ನು ಅವನ ಬಾಯಿಂದಲೇ ಕೇಳಿದಾಗ ತಾನೂ ಏಕೆ ವೈದ್ಯಕೀಯ ಶಿಕ್ಷಣವನ್ನು ಪಡೆದುಕೊಳ್ಳಬಾರದು ಎನ್ನುವ ಹುಕ್ಕಿ ಅವರಿಗೆ ಬಂದಿತು. ಅದೇ ಕಾರಣವಾಗಿ ಭಾರತಕ್ಕೆ ಹಿಂದಿರುಗಿ ಬಂದ ನಂತರ ವೈದ್ಯಕೀಯ ಶಿಕ್ಷಣದ ಬೆನ್ನುಹತ್ತಿದರು.

ಕುಟುಂಬದ ಜವಾಬ್ದಾರಿಯ ಜೊತೆಗೆ ಇಡೀ ವರ್ಷ ಓದುವುದರಲ್ಲಿ ಕಳೆದ ಶಾರದಾ ಅವರಿಗೆ ಪರೀಕ್ಷೆ ಇನ್ನೇನು ಕೆಲವೇ ದಿನಗಳಿವೆ ಎಂದಾಗ ಒಂದು ಆಘಾತ ಕಾದಿತ್ತು. ಅವರ ತಾಯಿ ತೀರಿಕೊಂಡರು. ಇದರಿಂದ ಬಹಳ ಖಿನ್ನರಾದ ಅವರು ಪರೀಕ್ಷೆಗೆ ಹೋಗುವುದರ ಬಗ್ಗೆ ವಿಮುಖರಾದಾಗ ಅವರ ಗಂಡ ಅವರಿಗೆ ಧೈರ್ಯತುಂಬಿ ಪರೀಕ್ಷೆಗೆ ಕಳುಹಿಸಿದರು. ಈ ದುಃಖದ ನಡುವೆಯೂ ವೈದ್ಯರುಗಳಿಗೆ ಗೊತ್ತಿರುವ ಮತ್ತು ಗೊತ್ತಿಲ್ಲದಿರುವ ವಿಷಯಗಳ ಬಗ್ಗೆ ತಿಳಿದು ಕೊಳ್ಳುವ ಆಸಕ್ತಿ ಬಲವಾಯಿತು.

ಬುದ್ಧಿವಾದ: ಅವರು ಪಿ.ಯು.ಸಿ. ಯಲ್ಲಿದ್ದಾಗಲೇ ಮೆಡಿಕಲ್ ಕಾಲೇಜುಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸತೊಡಗಿದರು. ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಒಬ್ಬರು “ಈ ಶಿಕ್ಷಣ ಬಹಳ ಕಷ್ಟಕರವಾದುದು. ಮನೆಯ ಹೊಣೆಯಿಲ್ಲದ ಯವಕ ಯುವತಿಯರಿಗೇ ಇದು ದುಸ್ತರವಾಗಿರುವಾಗ ನಿನ್ನಂತಹ ಗೃಹಿಣಿಗಂತೂ ಇದು ಸಾಧ್ಯವೇ? ಮೆಡಿಕಲ್ ಓದುವ ಆಸೆಯನ್ನು ಬಿಟ್ಟು ಬಿಡು” ಎಂದರು. ಅದಾದ ನಂತರ ಅನೇಕ ಖಾಸಗಿ ಕಾಲೇಜುಗಳಿಗೆ ಅರ್ಜಿ ಹೊತ್ತು ತಿರುಗಿದರು. “ಎಲ್ಲಾ ಕಡೆ ನನಗೆ ನಿರಾಶೆಯೇ ಕಾದಿತ್ತು. ಜನರು ತಪ್ಪು ಮಾಹಿತಿಗಳನ್ನೇ ಕೊಟ್ಟರು ಮತ್ತು ವೈದ್ಯಕೀಯ ಶಿಕ್ಷಣದ ಆಸೆ ಕೈಬಿಡಬೇಕೆಂದು ಬುದ್ಧಿವಾದ ಹೇಳಿದರು” ಎಂದು ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಶಾರದಾ.

ಕೊನೆಗೆ ಅವರ ಮನೆಯ ಎದುರಿಗೇ ಇದ್ದ, ಅವರ ತಾಯಿಯನ್ನು ತಪಾಸಣೆಗೆ ಕರೆದುಕೊಂಡು ಹೋಗುತ್ತಿದ್ದ ವಾಡಿಯಾ ಆಸ್ಪತ್ರೆಯು ಫಿಲಿಪ್ಪೀನ್ಸ್ ದೇಶದ ಏಂಜಲ್ಸ್ ಯೂನಿವರ್ಸಿಟಿ ಫೌಂಡೇಷನ್ನಿನ ಸಹಯೋಗದೊಂದಿಗೆ ಒಂದು ಹೊಸ ವೈದ್ಯಕೀಯ ಕಾಲೇಜನ್ನು ತೆರೆಯುತ್ತಿರುವುರ ಬಗೆಗೆ ಒಂದು ಜಾಹೀರಾತನ್ನು ಅವರ ತಾಯಿ ಬದುಕಿರುವಾಗಲೇ ತೊರಿಸಿದ್ದರು. ‘ನನಗಾಗಿಯೇ ಈ ಕಾಲೇಜು ತೆರೆಯುತ್ತಿದೆ, ಈ ಅವಕಾಶವನ್ನು ಬಿಡಬಾರದು. ವೈದ್ಯಳಾಗಬೇಕೆಂಬ ನನ್ನ ಕನಸು ಕೈತಪ್ಪಿ ಹೋಗಬಾರದು ಎಂದು ಖುಷಿಯಾದೆ’ ಎನ್ನುವ ಅವರಿಗೆ ಅಲ್ಲಿನ ಡೀನ್, ಅವರ ಎಣೆಯಿಲ್ಲದ ಆಸಕ್ತಿ ಹೋರಾಟಗಳನ್ನು ಕೇಳಿ ಅವರ ಕಾಲೇಜಿನಲ್ಲಿ ಮೆಡಿಕಲ್ ಓದಲು ಅವಕಾಶ ಮಾಡಿಕೊಟ್ಟರು. ಒಂದು ವರುಷದ ನಂತರ ಮತ್ತೊಂದು ಸಮಸ್ಯೆ ಧುತ್ತೆಂದು ಎರಗಿ ಬಂದಿತು. ಹೊಸ ಕಾಲೇಜಿನ ಪರವಾನಗಿಯನ್ನು ಭಾರತದ ಮೆಡಿಕಲ್ ಕೌನ್ಸಿಲ್ ರದ್ದು ಮಾಡಿತು. ಇನ್ನು ಮುಂದೆ ಕಲಿಯಲು ಅವರು ಫಿಲಿಪ್ಪೀನ್ಸ್ ಗೆ ಹೋಗದೇ ವಿಧಿಯೇ ಇರಲಿಲ್ಲ.

ಶಾಲೆಗೆ ಹೋಗುವ ಮಗನನ್ನ ಬಿಟ್ಟು ಎರಡು ವರ್ಷಗಳ ಕಾಲ ಹೊರಗೆ ಇರುವುದು ಬಹಳ ದುಸ್ತರವಾಗಿತ್ತು. ಮನೆಯ ಜವಾಬ್ದಾರಿ ಎಲ್ಲವನ್ನೂ ಬಿಟ್ಟು ಅವರು ಹೋಗ ಬೇಕಾಯಿತು. ಮನೆಯ ವಹಿವಾಟನ್ನು ಕೆಲಸದವರಿಗೆ ಒಪ್ಪಿಸಿ, ಗಂಡನಿಗೆ ಅಡುಗೆ ಕಲಿತುಕೊಳ್ಳಲು ಹೇಳಿ, ತಾವು ನಡೆಸುತ್ತಿದ್ದ ಕಂಪನಿಗೆ ರಾಜೀನಾಮೆ ಇತ್ತು, ಅವರು ಫಲಿಫೈನ್ಸ್ ಗೆ ತೆರಳಿದರು. ತರಗತಿಯಲ್ಲಿ ಅಧ್ಯಾಪಕರ ವಯಸ್ಸಿನ ಇವರನ್ನು ವಿದ್ಯಾರ್ಥಿಗಳು ಬಹು ಬೇಗನೇ ಒಪ್ಪಿಕೊಂಡರು. ಅದಕ್ಕೆ ಇವರ ಹಾಸ್ಯೆ ಪ್ರಜ್ಞೆಯೇ ಕಾರಣವಾಗಿತ್ತು. ಅಪರಿಚಿತ ವಾತವರಣಕ್ಕೆ ಬೇಗನೇ ಹೊಂದಿಕೊಂಡರು. ವೈದ್ಯಕೀಯ ಶಿಕ್ಷಣವು ಅವರಿಗೆ ಹೊಸದೊಂದು ಲೋಕವನ್ನೇ ತೆರೆಯಿತು- ಅದು ದೇಹದೊಳಗಿನ ಲೋಕವಾಗಿತ್ತು.

ಸಾಹಸದ ಕಥೆ: ಬಾಲ್ಯದಿಂದಲೂ ಬಹಳ ಧೈರ್ಯಶಾಲಿಯಾದ ಶಾರದಾ ಅವರ ವಸತಿಯ ಬಳಿಯೇ ವಿಮಾನ ಹಾರಾಟ ಕಲಿಸುವ ಶಾಲೆಯಿತ್ತು. ಕಾಲೇಜಿನ ಬಿಡುವಿನ ವೇಳೆಯಲ್ಲಿ ಈ ಶಾಲೆಗೆ ಪೈಲಟ್ ತರಬೇತಿ ತೆಗೆದುಕೊಳ್ಳಲು ಸೇರಿಕೊಂಡರು. ಅಲ್ಲಿ ಅವರಿಗೆ ಅದಕ್ಕೆ ಬೇಕಾದ ಲೈಸೆನ್ಸ್ ಕೂಡ ಸುಲಭವಾಗಿ ದೊರೆಯಿತು. ವಿಮಾನ ಹಾರಾಟದಲ್ಲಿ ಕೂಡ ಬಹಳ ತೊಂದರೆಗಳನ್ನು ಅನುಭವಿಸಿದರು. ಮಂಜು ಮುಸುಕಿದ ಆಕಾಶದಲ್ಲಿ ಇಳಿಯಲು ದಾರಿಕಾಣದೇ ಇನ್ನೇನು ಮುಗಿದೇ ಹೋಯಿತು ಎನ್ನುವ ಕ್ಷಣಗಳಲ್ಲಿ ಮಂಜು ಸರಿದು ಪಾರಾದ ಸಾಹಸ ಕಥೆಯನ್ನು ಅವರ ಬಾಯಿಂದಲೇ ಕೇಳಬೇಕು. ಪೈಲಟ್ ತರಬೇತಿಯನಂತರ ಪರೀಕ್ಷೆ ಬರೆಯಲು ಮನೀಲಾಗೆ ಹೋಗಬೇಕಾಯಿತು. ಇವರ ಇಂಗ್ಲಿಷ್ ಉಚ್ಚಾರವನ್ನು ಅರಿಯದ ಅಲ್ಲಿನ ಟಾಕ್ಸಿ ಚಾಲಕರು ಇವರಿಗೆ ದಾರಿ ತಪ್ಪಿಸಿದರು. ಕೊನೆಗೂ ಪರೀಕ್ಷೆ ಬರೆದು ಅದರಲ್ಲಿ ಪಾಸಾದರು. ‘ಯಾವುದನ್ನೂ ನಾನು ಪಡೆದೇ ತೀರಬೇಕೆಂಬ ಹಟವಾಗಲೀ, ನಾನು ಅಂದು ಕೊಂಡಿದ್ದು ನಡೆದೇ ತೀರವುದೆಂಬ ಆಸೆಯಾಗಲೀ ನನಗಿರಲಿಲ್ಲ. ನೋಡುವಾ ಇದೊಂದು ಪ್ರಯತ್ನ ಮಾಡುವ ಎನ್ನುವುದೇ ನನ್ನ ಧೋರಣೆಯಾಗಿತ್ತು, ಕಾರ್ಯವಿಧಾನವಾಗಿತ್ತು. ಅದು ಕೈಗ ಎಟುಕುವವರೆಗೆ ಅನೇಕ ಪ್ರಯತ್ನಗಳನ್ನು, ಬೇರೆ ಬೇರೆ ರೀತಿಯಲ್ಲಿ ಮಾಡುತ್ತಾ ಹೋದೆ, ಒಮ್ಮೊಮ್ಮೆ ನನಗೆ ಒಂಟಿತನ ಕಾಡುತ್ತಿತ್ತು. ಆಗೆಲ್ಲ ನನ್ನ ಕುಟುಂಬದ ಜೊತೆಗೆ ಮಾತನಾಡಲು ಇಂಟರ್ನೆಟ್ ಸಹಕರಿಸಿತು. ನನ್ನ ಟೆನ್ನಿಸ್ ಆಟದ ಪ್ರೀತಿಯು. ಯೂನಿವರ್ಸಿಟಿಯ ಹೊರಗಿನ ಜನರ ಜೊತೆ ಸ್ನೇಹ ಬೆಳೆಸಿಕೊಳ್ಳಲು ಸಹಕರಿಸಿತು” ಎನ್ನುತ್ತಾರೆ.

ಮೆಡಿಕಲ್ ಎರಡನೆಯ ವರುಷ ಬಿಡುವಿಲ್ಲದೆ ಹಗಲಿರುಳು 38 ಗಂಟೆಗಳ ಕಾಲ ದುಡಿಯಬೇಕಾಯಿತು. ಇದರಿಂದ ನಿಮಗೆ ಆಯಾಸವಾಗಲಿಲ್ಲವೆ? ಎಂದು ಕೇಳಿದರೆ. ಆಸ್ಪತ್ರೆಯ ಅನನ್ಯ ಅನುಭವಗಳು, ರೋಗಿಗಳ ಒಡನಾಟದಿಂದ ನಾನು ಜೀವನದಲ್ಲಿ ಕಲಿತ ಪಾಠ ಬಹಳ ಎಂದು ಉತ್ತರಿಸುತ್ತಾರೆ. ಶಾರದಾ ಅವರು ತಮ್ಮ 42 ನೇ ವಯಸ್ಸಿನಲ್ಲಿ ಮೆಡಿಕಲ್ ಡಿಗ್ರಿ ಮುಗಿಸಿ, ಪುಣೆಯ ರೂಬಿ ಹಿಲ್ ಕ್ಲಿನಿಕ್ ನಲ್ಲಿ ಕ್ಲಿನಿಕಲ್ ಅಸಿಸ್ಟೆಂಟಾಗಿ, ರಿಸರ್ಚ್ ಅಸೋಸಿಯೇಟ್ ಆಗಿ ಸೇರಿಕೊಂಡರು. ಕೇವಲ ಕುತೂಹಲದಿಂದ ಮೆಡಿಕಲ್ ಓದಿದ ಅವರಿಗೆ ಸಂಶೋಧನಾ ಕ್ಷೇತ್ರವೇ ಹಿಡಿಸಿತು. ಖಾಸಗಿಯಾಗಿ ವೈದ್ಯಕೀಯ ಸೇವೆ ಸಲ್ಲಿಸುವುದರ ಜೊತೆಗೆ ಎಲ್ಲರಿಗೂ ವೈದ್ಯಕೀಯ ನೆರವು ದೊರಕಬೇಕೆನ್ನುವ ಉದ್ದೇಶದಿಂದ ‘ಆಗಲೊ ಅನಲಿಟಿಕ್ಸ’ ಎನ್ನುವ ಕಂಪನಿಯನ್ನು ಸೇರಿಕೊಂಡರು. ಅಂತರ್ಜಾಲದ ಪ್ರಜಾಸತ್ತಾತ್ಮಕ ಮಾಹಿತಿ, ಪ್ರಿಡಿಕ್ಟಿವ್ ಅನಲಲಿಟಿಕ್ಸ್ ಮತ್ತು ಮಷೀನ್ ಲರ್ನಿಂಗ್ ಇವು ಪ್ರಜಾಸತ್ತಾತ್ಮಕ ಆರೋಗ್ಯ ಪೋಷಣೆಗೆ (ಜemoಛಿಡಿಚಿಣize heಚಿಟಣh ಛಿಚಿಡಿe) ಶಕ್ತಿಯನ್ನು ಒದಗಿಸುತ್ತದೆ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು.

ಇಂದು ಶಾರದಾ ಅವರು ಪುಣೆಯಲ್ಲಿ ಬಹಳ ಜನಪ್ರಿಯ ಡಾಕ್ಟರ್. ಪುಣೆಯ ಕರ್ವೆನಗರದಲ್ಲಿ ಅಸಂಖ್ಯಾತ ರೋಗಿಗಳಿಗೆ ಅತ್ಯುತ್ತಮ ವೈದ್ಯಕೀಯ ನೆರವನ್ನು ನೀಡಿದ್ದಾರೆ. ನರವಿಜ್ಞಾನ (ನ್ಯೂರಾಲಜಿ) ಚರ್ಮರೋಗ (ಡರ್ಮಿಟಾಲಜಿ), ಕರುಳಿನ ರೋಗ (ಗ್ಯಾಸ್ಟ್ರೋ ಎಂಟ್ರಾಲಜಿ) ಮಧುಮೇಹ (ಡಯಾಬಿಟಾಲಜಿ) ಹೋಮಿಯೋಪತಿ, ನಿರ್ನಾಳ ಗ್ರಂಥಿ ಶಾಸ್ತ್ರ (ಎಂಡೋಕ್ರೈನಾಲಜಿ) ಗಳ ಕ್ಷೇತ್ರದಲ್ಲಿ ಅನೇಕ ಅಧ್ಯಯನಗಳನ್ನು ಕೈಗೊಂಡಿದ್ದಾರೆ. ಮಕ್ಕಳ ಶುಶ್ರೂಷೆಗೆ, ದೀರ್ಘಕಾಲದ ವಾಸಿಯಾಗದ ರೋಗಗಳಿಗೆ ಕೂಡ ಜನ ಇವರ ಕ್ಲಿನಿಕ್‍ಗೆ ಮುತ್ತಿಕೊಳ್ಳುತ್ತಾರೆ. ಬಹಳ ಸೂಕ್ಷ್ಮ ಸಂವೇದಿಯಾದ ಶಾರದಾ ಬಾಪಟ್ ಅನುಕೂಲವಿಲ್ಲದ ರೋಗಿಗಳಿಗೆ ಆರ್ಥಿಕ ಸಹಾಯವನ್ನೂ ಮಾಡುತ್ತಾರೆ.

ಶಾರದಾ ಅವರಿಗೆ ಬಾಲ್ಯದಿಂದಲೂ ಸಂಗೀತದ ಮೇಲೆ ಆಸಕ್ತಿ ಇತ್ತು. ಗಿಟಾರ್, ಮೌತ್ ಆರ್ಗನ್, ಮತ್ತು ಪಿಯಾನೋ ಕಲಿತಿದ್ದರು. ಫಿಲಿಪ್ಪೀನ್ಸ್ ಗೆ ಹೋದ ಕಾರಣ ಅವೆಲ್ಲವೂ ಮರೆಗೆ ಸಂದಿದ್ದವು. ಭಾರತಕ್ಕೆ ಬಂದ ಮೇಲೆ ಪಿಯಾನೋ ಕಲಿಯಲು ಪಿಯಾನೋ ಶಾಲೆಗೆ ಸೇರಿದರು. ಅದರಲ್ಲಿ ನಾಲ್ಕನೇ ವರ್ಗದ ಪರೀಕ್ಷೆಗೆ ಕುಳಿತು ಪಾಸಾದರು.

ಶಾರದಾ ಅವರು ಟ್ರೆಕ್ಕಿಂಗ್ ಪ್ರಿಯೆ ಕೂಡ. ಕಾಶ್ಮೀರ ಕಣಿವೆಯಲ್ಲಿ ಬಾಂಬ್ ಸ್ಫೋಟವಾದ ಹೊಸದರಲ್ಲಿ (1988) ಅಲ್ಲಿಗೆ ಟ್ರೆಕ್ಕಿಂಗ್ ಕೈಗೊಂಡರು. ಅನಂತರ ವ್ಯಾಲಿ ಆಫ್ ಫ್ಲವರ್ಸ್ (1998), ದೋಡಿ ತಾಲ್ ಮತ್ತು ಕೌರಿಪಾಸ್ ಗಳಲ್ಲಿ ಟ್ರೆಕ್ಕಿಂಗ್ ಮಾಡಿದ ಸ್ವರ್ಗೀಯ ಅನುಭವವನ್ನು ಆನಂದದಿಂದ ಹಂಚಿಕೊಳ್ಳುತ್ತಾರೆ.
ವೈದ್ಯಕೀಯ ವೃತ್ತಿಯನ್ನು ಮಾಡುವಾಗ, ನಾವು ತಿನ್ನುವ ಆಹಾರದಲ್ಲಿ ಏನೋ ದೋಷವಿದೆ ಎಂದು ತಿಳಿಯಿತು. ಅದರಿಂದ ಸಾಕಷ್ಟು ಪೋಷಣೆ ಸಿಗುತ್ತಿಲ್ಲವೆಂದು ಅವರಿಗೆ ಭಾಸವಾಯಿತು. ನಮ್ಮ ಜೀವನ ಪದ್ಧತಿ, ಆಹಾರವನ್ನು ಬೆಳೆಯುವ ಕ್ರಮ ಕೂಡ ಬಹಳ ಮುಖ್ಯವೆಂದು ಭಾವಿಸಿ ತಾವೇ ಸಾವಯವ ಕೃಷಿಯನ್ನು ಮಾಡಲು ಮೊದಲಾದರು. ಪರಿಸರ ಸಂರಕ್ಷಣೆಯ ಭಾಗವಾಗಿ ಸಾವಿರಾರು ಗಿಡಗಳನ್ನು ನೆಟ್ಟ ಹೆಮ್ಮೆಯೂ ಅವರಿಗಿದೆ.

ಇಡೀ ವಾರದ ಕೆಲಸಗಳನ್ನು ಮೊದಲೇ ಯೋಜನೆ ಮಾಡುತ್ತಾರೆ. ಮನೆಕೆಲಸದ ಜೊತೆಗೆ, ವಾರಕ್ಕೆ ಎರಡು ಮೂರು ದಿನ ಆಫೀಸಿಗೆ, ಹದಿನೈದು ದಿನಗಳಿಗೊಮ್ಮೆ 2-3 ದಿನಗಳನ್ನು ತಮ್ಮ ತೋಟದಲ್ಲಿ ಕಳೆಯುತ್ತಾರೆ. ಇದರ ಮಧ್ಯೆ ವೈದ್ಯ ಮತ್ತು ರೋಗಿಗಳ ನಡುವೆ ಸಂಬಂಧ ಬೆಳೆಸಲು ಪೂರಕವಾದ ‘ಪೂನಾ ಸಿಟಿಜನ್-ಡಾಕ್ಟರ್ ಫೋರಂ’ ಎನ್ನುವ ಟ್ರಸ್ಟ್ ಗೆ ಭೇಟಿ ನೀಡುತ್ತಾರೆ. ‘ ವಾರಕ್ಕೆ 2-3 ದಿನ ಟೆನ್ನಿಸ್ ಮತ್ತು ಯೋಗ ಮಾಡುತ್ತಾರೆ. ‘ಕುಟುಂಬದವರ ಜೊತೆ ಸಂತೋಷದಿಂದ ಕಾಲಕಳೆಯುತ್ತಾ ಒಮ್ಮೊಮ್ಮೆ ಪಿಯಾನೋ ನುಡಿಸುತ್ತೇನೆ’ ಎನ್ನುತ್ತಾರೆ ಶಾರದಾ.

‘ಇಷ್ಟೆಲ್ಲಾ ಕಾರ್ಯಬಾಹುಳ್ಯದ ನಡುವೆಯೂ ಆಯಾಸವಾಗದೇ ಹೇಗೆ ಇಷ್ಟು ಗಟ್ಟಿಯಾಗಿದ್ದೀರಿ, ಇದನ್ನೆಲ್ಲಾ ಮಾಡಲು ನಿಮಗೆ ಸಾಧ್ಯವಾದುದಾರೂ ಹೇಗೆ’ ಎನ್ನುವ ಪ್ರಶ್ನೆಗೆ, ‘ಸುಮ್ಮನೇ ಸದ್ಯದ ಇರುವಿಕೆಯ ಜತೆಗೆ ನಾನಿರುವುದೇ ಬಹಳ ಅನಂದದ ಅನುಭವ. ನನಗೆ ಇದು ಪ್ರಕೃತಿ ಕಲಿಸಿದ ಪಾಠ. ನಮ್ಮ ಅಸ್ತಿತ್ವವನ್ನು ನಾವು ಸಾಬೀತು ಪಡಿಸಬೇಕಾಗಿಲ್ಲ. ಹಾಗೆ ಸಾಬೀತು ಪಡಿಸಬೇಕಾದದ್ದು ಏನೂ ಇಲ್ಲ. ‘ಸಾಮಾಜಿಕ ಅಭಿವೃದ್ಧಿಗೆ ದುಡಿಯುವುದು, ಜೊತೆಗೆ ನನ್ನ ಕಂಪನಿಯನ್ನು ಮುಂದಕ್ಕೆ ತರುವುದು ನನ್ನ ಕನಸು. ಹಾಗೆಯೇ ವನವನ್ನು ಬೆಳೆಸಿ ವಾನಪ್ರಸ್ಥಾಶ್ರಮವನ್ನು ಕಟ್ಟುವುದೂ ಇನ್ನೊಂದು ಕನಸಾಗಿದೆ. ನಮ್ಮ ಮಕ್ಕಳು ಪ್ರಕೃತಿಯ ಜೊತೆಗಿದ್ದು ಅದರ ಅದ್ಭುತಗಳನ್ನು, ವಿಸ್ಮಯಗಳನ್ನು ಮನಗಾಣಬೇಕಾಗಿದೆ’ ಎನ್ನುತ್ತಾರೆ ಶಾರದಾ. ಇಷ್ಟೆಲ್ಲಾ ಕೆಲಸಗಳನ್ನು ಹಚ್ಚಿಕೊಂಡ ಅವರು ‘ಏನೂ ಕೆಲಸವಿಲ್ಲದೇ ಇದ್ದಾಗ ಟಿ.ವಿ. ನೋಡುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ಗರ್ಕಾಗಿರುವುದು ನನಗೆ ಸಂತೋಷದ ಸಂಗತಿ’ ಎನ್ನುತ್ತಾರೆ.

ನಮ್ಮ ಹೆಣ್ಣು ಮಕ್ಕಳಿಗೆ ಮದುವೆಯಾದ ಕೂಡಲೇ ಕೇವಲ ಮನೆಯೇ ಮಂತ್ರಾಲಯವಾಗಿಬಿಡುತ್ತದೆ. ತಮ್ಮ ಆಸಕ್ತಿ, ಪ್ರತಿಭೆಗಳನ್ನೆಲ್ಲಾ ಗಂಟು ಮೂಟೆ ಕಟ್ಟಿ ಮೂಲೆಗೆಸೆದು ‘ಗಂಡ ಮಕ್ಕಳ ಸೇವೆಗೇ ಸಮಯ ಸಾಲದು’ ಎಂದು ಆಕ್ಷೇಪಿಸುತ್ತಾರೆ. ಮನೆಯನ್ನೂ ತೂಗಿಸಿಕೊಂಡು ತಮ್ಮ ಆಸಕ್ತಿಗಳನ್ನೂ ಪೋಷಿಸಿಕೊಂಡು, ಬಹು ಮುಖ ಪ್ರತಿಭೆ ಮುರುಟಲು ಬಿಡದೇ ನೀರೆರೆಯುತ್ತಾ ಹೇಗೆ ಜೀವನದಲ್ಲಿ ಯಶಸ್ವಿಯಾಗಿ ಬದುಕಬಹುದು ಎನ್ನುವುದಕ್ಕೆ ಶಾರದಾ ಬಾಪಟ್ ಉತ್ತಮ ಉದಾಹರಣೆ. ಮಹಾರಾಷ್ಟ್ರದಲ್ಲಿ ಮಹಿಳೆಯರ ಮಾದರಿಯಾಗಿ ಅವರು ರೂಪುಕೊಂಡಿರುವುದು ಆಶ್ಚರ್ಯವೇನಲ್ಲ.

ಗಿರಿಜಾ ಶಾಸ್ತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *