ಸಾಧನ ಕೇರಿ/ ಮಹಿಳಾ ವಿಜ್ಞಾನಿಗಳಿಗೆ ಸಂಭ್ರಮದ ವರ್ಷ – 2020 – ನೇಮಿಚಂದ್ರ

ಇಸವಿ 2020, ಮಹಿಳಾ ವಿಜ್ಞಾನಿಗಳಿಗೆ ಸಂಭ್ರಮದ ವರ್ಷ. ಕಾರಣ, ವಿಜ್ಞಾನ ರಂಗದಲ್ಲಿ ಮಹಿಳೆಯರು ಈ ವರ್ಷ ಮೂರು ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭೌತಶಾಸ್ತ್ರದಲ್ಲಿ ಒಬ್ಬ ಮಹಿಳೆಗೆ ಹಾಗೂ ರಸಾಯನ ಶಾಸ್ತ್ರದಲ್ಲಿ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಲಭಿಸಿದೆ. ನೊಬೆಲ್ ಪ್ರಶಸ್ತಿಗೆ ನೂರು ವರ್ಷಗಳಿಗೆ ಮೀರಿದ ಇತಿಹಾಸವಿದೆ. ಇಸವಿ 1901ರಲ್ಲಿ ನೊಬೆಲ್ ಪ್ರಶಸ್ತಿ ಆರಂಭವಾಗಿತ್ತು. ಆದರೆ ಕಳೆದ 119 ವರ್ಷಗಳಲ್ಲಿ ಭೌತಶಾಸ್ತ್ರದಲ್ಲಿ ಕೇವಲ ಮೂವರು ಮಹಿಳೆಯರಿಗೆ ನೊಬೆಲ್ ಲಭಿಸಿದೆ. ರಸಾಯನಶಾಸ್ತ್ರದಲ್ಲಿ ಕೇವಲ 7 ಮಂದಿ ಮಹಿಳೆಯರಿಗೆ ಇಲ್ಲಿಯರೆಗೆ ನೊಬೆಲ್ ಪಾರಿತೋಷಕ ಬಂದಿದೆ. ವೈದ್ಯ ರಂಗದ ನೊಬೆಲ್ 12 ಮಂದಿ ಮಹಿಳೆಯರಿಗೆ ಸಂದಿದೆ. ಹಾಗೆಂದೇ, ಒಂದೇ ವರ್ಷದಲ್ಲಿ ಮಹಿಳೆಯರಿಗೆ ದೊರೆತಿರುವ 3 ನೊಬೆಲ್‍ಗಳು ಸಂತಸದ ದಾಖಲೆ ಆಗಿದೆ.

ಭೌತಶಾಸ್ತ್ರದ ನೊಬೆಲ್

ಮಹಿಳಾ ವಿಜ್ಞಾನಿ ಆಂಡ್ರಿಯಾ ಗೇಸ್, ಈ ಬಾರಿಯ ಭೌತಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಪಡೆದವರಲ್ಲಿ ಒಬ್ಬರಾಗಿದ್ದಾರೆ. ಅಮೆರಿಕದ ಆಂಡ್ರಿಯಾ ಗೇಸ್ ಅವರಿಗೆ ನಮ್ಮ ನಕ್ಷತ್ರಪುಂಜವಾದÀ ‘ಹಾಲುಹಾದಿ’ಯ (ಮಿಲ್ಕಿ ವೇ) ನಡುಮಧ್ಯೆಯಲ್ಲಿ ಅಗಾಧ ತೂಕದ, ಅತಿ ಸಾಂದ್ರವಾದ ವಸ್ತುವನ್ನು ಕಂಡುಹಿಡಿದದ್ದಕ್ಕೆ ದೊರೆತಿದೆ. ಇಂಗ್ಲೀಷಿನಲ್ಲಿ ಹೇಳುವುದಾದರೆ ಅವರು ನಮ್ಮ ಗ್ಯಾಲಕ್ಸಿಯ ಕೇಂದ್ರದಲ್ಲಿ ಒಂದು ‘ಸೂಪರ್‍ಮ್ಯಾಸಿವ್ ಕಾಂಪ್ಯಾಕ್ಟ್ ಆಬ್ಜೆಕ್ಟ್’ ಅನ್ನು ಕಂಡು ಹಿಡಿದಿದ್ದಾರೆ. ಈ ವಸ್ತು ‘ಕಪ್ಪುಕುಳಿ’ – ‘ಬ್ಲಾಕ್ ಹೋಲ್’ ಆಗಿದೆ.

ಈ ವರ್ಷದ ಭೌತಶಾಸ್ತ್ರದ ನೊಬೆಲ್ ಪಾರಿತೋಷಕವನ್ನು 89 ವರ್ಷ ವಯಸ್ಸಿನ ರೋಜರ್ ಪೆನ್‍ರೋಸ್, ಆಂಡ್ರಿಯಾ ಗೇಸ್ ಮತ್ತು ರೇನ್‍ಹಾರ್ಡ್ ಗೆನ್ಸಿಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಇವರದು ಅತ್ಯಂತ ರೋಚಕವಾದ ಆವಿಷ್ಕಾರವಾಗಿದೆ. ಬ್ರಹ್ಮಾಂಡವನ್ನು ಕುರಿತಂತೆ ನಮ್ಮ ಅರಿವನ್ನು ಹಿಗ್ಗಿಸುವ ಅದ್ಭುತದ ಆವಿಷ್ಕಾರ ಈ ಮೂವರು ವಿಜ್ಞಾನಿಗಳದು. ‘ಬ್ಲಾಕ್‍ಹೋಲ್ಸ್’ ಎಂದು ಕರೆಯುವ ‘ಕಪ್ಪುಕುಳಿಗಳು’ ಬ್ರಹ್ಮಾಂಡದ ಕುತೂಹಲಕಾರಿ ವಿದ್ಯಾಮಾನಗಳು.
ಪ್ರಸಿದ್ಧ ಹಿರಿಯ ವಿಜ್ಞಾನಿ ರೋಜರ್ ಪೆನ್‍ರೋಸ್, ಐನ್‍ಸ್ಟೈನ್ ಅವರ ‘ಸಾಪೇಕ್ಷತಾ ಸಿದ್ಧಾಂತ’ (ಜೆನರಲ್ ಥಿಯರಿ ಆಫ್ ರಿಲೇಟಿವಿಟಿ), ಕಪ್ಪುಕುಳಿಗಳ ಉದ್ಭವಕ್ಕೆ ಕಾರಣವಾಗುತ್ತದೆ ಎಂದು ತೋರಿಸಿದ್ದರು. ಆಂಡ್ರಿಯಾ ಮತ್ತು ರೇನ್‍ಹಾರ್ಡ್ ತಮ್ಮ ಸ್ವತಂತ್ರ ಅವಲೋಕನ ಮತ್ತು ಸಂಶೋಧನೆಗಳ ಮೂಲಕ ಅದೃಶ್ಯವಾದ ಅಗಾಧ ತೂಕದ ವಸ್ತುವೊಂದು ನಮ್ಮ ಗ್ಯಾಲಕ್ಸಿಯಾದ ಹಾಲುಹಾದಿಯ ನಟ್ಟ ನಡುವಿದ್ದು, ತನ್ನ ಹತ್ತಿರದ ನಕ್ಷತ್ರಗಳ ಕಕ್ಷೆಯನ್ನು ನಿರ್ದೇಶಿಸುತ್ತ್ತಿದೆ ಎಂದು ಕಂಡು ಹಿಡಿದರು. ಈ ರಾಕ್ಷಸ ತೂಕದ ಕಪ್ಪುಕುಳಿ ಎಲ್ಲವನ್ನೂ ತನ್ನೊಳಗೆ ಸೆಳೆದು ನುಂಗಿಹಾಕುತ್ತದೆÉ, ಏನನ್ನೂ ಹೊರಗೆ ಬರಲು ಬಿಡದು. ಬೆಳಕು ಕೂಡಾ ಕಪ್ಪುಕುಳಿಯಿಂದ ಹೊರಕ್ಕೆ ತಪ್ಪಿಸಿಕೊಳ್ಳಲಾರದು, ಹಾಗೆಂದೇ ಕಪ್ಪುಕುಳಿ ಅದೃಶ್ಯವಾಗಿದೆ.
ರೋಜರ್ ಪೆನ್‍ರೋಸ್ ಓರ್ವ ಪ್ರಸಿದ್ಧ ಗಣಿತಜ್ಞ. ಇವರು ಗಣಿತದ ಅತ್ಯಂತ ಚುರುಕಿನ ವಿಧಾನಗಳನ್ನು ಬಳಸಿ ಐನ್‍ಸ್ಟೈನ್ ಅವರ ‘ಸಾಪೇಕ್ಷತಾ ವಾದ’ದ ನೇರ ಪರಿಣಾಮ ಕಪ್ಪುಕುಳಿಗಳು ಎಂದು ಸಾಬೀತು ಮಾಡಿದ್ದರು. ಐನ್‍ಸ್ಟೈನ್ ಅವರ ಜೀವಿತಕಾಲದಲ್ಲಿಯೇ ಇಂತಹ ಒಂದು ಸಾಧ್ಯತೆಯನ್ನು ವಿಜ್ಞಾನಿಗಳು ಊಹಿಸಿದ್ದರೂ, ಸ್ವತಃ ಐನ್‍ಸ್ಟೈನ್ ಅವರಿಗೆ ‘ಕಪ್ಪುಕುಳಿ’ಯಂತಹ ವಸ್ತುಗಳ ಅಸ್ತಿತ್ವವನ್ನು ನಂಬುವುದು ಕಷ್ಟವಾಗಿತ್ತು. ಪೆನ್‍ರೋಸ್ ಇಸವಿ 1964ರಲ್ಲಿ ‘ಆಕಾಶ-ಸಮಯ’ದ (ಸ್ಪೇಸ್-ಟೈಮ್) ಲಕ್ಷಣಗಳನ್ನು ವಿಶ್ಲೇಷಿಸಲು ಕ್ರಾಂತಿಕಾರಿ ಎಂಬಂತಹ ಗಣಿತದ ವಿಧಾನಗಳನ್ನು ಕಂಡುಹಿಡಿದರು. ಇಸವಿ 1965ರಲ್ಲಿ, ಐನ್‍ಸ್ಟೈನ್ ಅವರು ಮರಣಿಸಿ ಆಗಲೇ 10 ವರ್ಷಗಳಾಗಿದ್ದವು, ರೋಜರ್ ಪೆನ್‍ರೋಸ್ ಕಪ್ಪುಕುಳಿಗಳು ರೂಪುಗೊಳ್ಳಬಲ್ಲವು ಎಂದು ಗಣಿತದ ಮೂಲಕ ಸಾಬೀತು ಮಾಡಿ ಅವುಗಳನ್ನು ವಿವರಿಸಿದರು. ಐನ್‍ಸ್ಟೈನ್ ಅವರ ‘ಸಾಪೇಕ್ಷತಾ ವಾದ’ಕ್ಕೆ ಅತ್ಯಂತ ಪ್ರಮುಖವಾದ ಕೊಡುಗೆ ಇದೆಂದು ಪರಿಗಣಿಸಲಾಗಿದೆ.
ಅಗಾಧವಾದ ದ್ರವ್ಯ ಪದಾರ್ಥ, ಅಂದರೆ ಭೌತವಸ್ತು, ಅತಿ ಸಣ್ಣ ಜಾಗದಲ್ಲಿ ಅಮುಕಿ ಇಟ್ಟಾಗ ಕಪ್ಪುಕುಳಿಗಳು ಸೃಷ್ಟಿಯಾಗುತ್ತವೆ. ಈ ಕಪ್ಪುಕುಳಿಗಳು ಅಗಾಧ ಗುರುತ್ವಾಕರ್ಷಣೆಯನ್ನು ಹೊಂದಿದ್ದು, ತಮ್ಮ ತೀವ್ರ ಗುರುತ್ವಾಕರ್ಷಣೆಯಿಂದಾಗಿ ಇವು ಆಕಾಶ ಮತ್ತು ಸಮಯವನ್ನು ಬಾಗಿಸುತ್ತವೆ. ಅವುಗಳ ಅಗಾಧ ಗುರುತ್ವಾಕರ್ಷಣೆ ಎಷ್ಟು ಶಕ್ತವಾಗಿದೆ ಎಂದರೆ, ಅದರಿಂದ ಏನೊಂದೂ ಹೊರಗೆ ತಪ್ಪಿಸಿಕೊಂಡು ಬರಲಾರದು. ಹಾಗೆಂದೇ ಕಪ್ಪುಕುಳಿ, ಬೆಳಕನ್ನೂ ಕೂಡಾ ತನ್ನ ಗುರುತ್ವಾಕರ್ಷಣೆಯಲ್ಲಿ ಸೆಳೆದು ಹಿಡಿದಿಟ್ಟುಕೊಳ್ಳುತ್ತದೆ. ಇಂದು ಕಪ್ಪುಕುಳಿಯ ಅಸ್ತಿತ್ವವನ್ನು ವಿಶ್ವದ ಎಲ್ಲೆಡೆಯ ಖಗೋಳಶಾಸ್ತ್ರಜ್ಞರು ಒಪ್ಪಿಕೊಂಡಿದ್ದಾರೆ. ಆದರೂ ನಮಗೆ ಕಪ್ಪುಕುಳಿಗಳ ಬಗ್ಗೆ ತಿಳಿಯದೆ ಇರುವುದು ಬಹಳಷ್ಟಿದೆ.

ಆಂಡ್ರಿಯಾ ಹಾಗೂ ರೇನ್‍ಹಾರ್ಡ್ ಇವರಿಬ್ಬರೂ, 1990ರ ದಶಕದಿಂದಲೇ ಖಗೋಳಶಾಸ್ತ್ರಜ್ಞರ ತಂಡಗಳ ಮುಖಂಡರಾಗಿ, ನಮ್ಮ ಗ್ಯಾಲಕ್ಸಿಯ ಕೇಂದ್ರದಲ್ಲಿರುವ ‘ಸ್ಯಾಜಿಟೇರಿಯಸ್ ಎ ಸ್ಟಾರ್’ ಎಂಬ ತಾಣದತ್ತ ತಮ್ಮ ಗಮನವನ್ನು ಹÀರಿಸಿದ್ದರು. ನಮ್ಮ ‘ಹಾಲುಹಾದಿ’ಯ ಕೇಂದ್ರಕ್ಕೆ ಹತ್ತಿರವಾಗಿ ಇರುವ ಪ್ರಖರವಾದ ನಕ್ಷತ್ರಗಳ ಕಕ್ಷೆಯನ್ನು ಹೆಚ್ಚಿನ ನಿಖರತೆಯಿಂದ ಮ್ಯಾಪ್ ಮಾಡಿ, ಇವರು ಗುರುತಿಸಿದ್ದಾರೆ. ಈ ಎರಡೂ ಖಗೋಳ ತಂಡಗಳ ಅವಲೋಕನ ಮತ್ತು ಸಂಶೋಧನೆ, ನಕ್ಷತ್ರಗಳನ್ನು ಕುರಿತ ಮಾಪನಗಳು, ಗುರುತಿಸಿದ ಅವುಗಳ ಕಕ್ಷೆಯ ಪಥದ ಅಳತೆಗಳು, ಅತ್ಯಂತ ಭಾರವಾದ ಅದೃಶ್ಯವಾದ ವಸ್ತುವೊಂದು ನಕ್ಷತ್ರಗಳ ಗುಂಪನ್ನು ತನ್ನತ್ತ ಸೆಳೆಯುತ್ತಾ, ನಕ್ಷತ್ರಗಳು ತಲೆತಿರುಗುವಂತಹ ಅತಿವೇಗದಲ್ಲಿ ಸುತ್ತುವಂತೆ ಮಾಡಿದೆ ಎಂದು ತೋರಿಸಿವೆ. ಸುಮಾರು 41 ಲಕ್ಷ ಸೌರ್ಯವ್ಯೂಹಗಳಷ್ಟು ಭೌತವಸ್ತು (ಮಾಸ್), ನಮ್ಮ ಸೌರವ್ಯೂಹದಷ್ಟು ಸಣ್ಣ ಜಾಗದಲ್ಲಿ ಪ್ಯಾಕ್ ಆಗಿದೆ ಎಂದರೆ, ಅದೆಷ್ಟು ಸಾಂದ್ರವಾದ ವಸ್ತುವೆಂದು ಊಹಿಸಿ.


ಭೂಮಿಯಲ್ಲಿರುವ ಅತ್ಯಂತ ಶಕ್ತ ದೂರದರ್ಶಕಗಳನ್ನು ಬಳಸಿ ಈ ಇಬ್ಬರು ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ನಡೆಸಿದ್ದಾರೆ. ಅಂತರ ತಾರಾ ವಲಯದಲ್ಲಿರುವ ಅನಿಲ ಮತ್ತು ಧೂಳಿನ ಬೃಹತ್ ಮೋಡಗಳ ಮೂಲಕ ಇಣುಕಿ ನೋಡಬಲ್ಲ ವಿಧಾನವನ್ನು, ಸಾಧನವನ್ನು ಕಂಡುಹಿಡಿದರು. ತಂತ್ರಜ್ಞಾನದ ಸರಹದ್ದನ್ನು ಹಿಗ್ಗಿಸಿ, ನವೀನ ತಂತ್ರಜ್ಞಾನವನ್ನು ಸುಧಾರಿಸಿ, ಭೂಮಿಯ ವಾತಾವರಣದಿಂದ ಉಂಟಾಗುವ ವಿಕೃತ ಬದಲಾವಣೆಗಳನ್ನು ಪರಿಹರಿಸುವ ಬಗೆಯನ್ನೂ ಕಂಡುಹಿಡಿದರು.
ಒಂದು ನಕ್ಷತ್ರದ ಕಕ್ಷೆಯನ್ನು ಗಮನಿಸಲು ಬೇಕಾದ ಅತಿ ದೀರ್ಘಕಾಲದ ಸಂಶೋಧನೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ವಿಶಿಷ್ಟವಾದ ಸಲಕರಣೆಗಳನ್ನು ನಿರ್ಮಿಸಿದ್ದೇ ಈ ವಿಜ್ಞಾನಿಗಳ ಪ್ರಮುಖ ಸಾಧನೆಯಾಗಿದೆ. ಈ ವಿಜ್ಞಾನಿಗಳ ಮುಂಚೂಣಿಯ ಸಂಶೋಧನಾ ಕಾರ್ಯ ನಮಗೆ ಇಲ್ಲಿಯವರೆಗಿನ ಅತ್ಯಂತ ನಂಬಲರ್ಹ ‘ಸೂಪರ್ ಮ್ಯಾಸಿವ್ ಬ್ಲಾಕ್ ಹೋಲ್’ನ ಇರುವಿಕೆಗೆ ಪುರಾವೆಯನ್ನು ಒದಗಿಸಿ ಕೊಟ್ಟಿದೆ.
ಇದರೊಂದಿಗೇ, ಕಳೆದ ವರ್ಷ ಇಸವಿ 2019ರಲ್ಲಿ, ಮೊಟ್ಟಮೊದಲ ಕಪ್ಪುಕುಳಿಯನ್ನು ‘ಕಾಣಲು’ ಸಾಧ್ಯವಾಗಿದೆ. ಹೌದು, ಕಾಣಲಾರದ ಅದೃಶ್ಯವಾದ ಕಪ್ಪುಕುಳಿಗಳನ್ನು ಅಗಾಧ ತಂತ್ರಜ್ಞಾನವನ್ನು ಒಟ್ಟೈಸುವ ಮೂಲಕ ಕಳೆದ ವರ್ಷ, ‘ಈವೆಂಟ್ ಹೊರೈಸನ್ ಟೆಲಿಸ್ಕೋಪ್ ಕೊಲಾಬ್ಯುರೇಶನ್’ನ (ಇಟಿಎಚ್) ವಿಜ್ಞಾನಿಗಳು ‘ಕಂಡರು’. ಕಪ್ಪುಕುಳಿಯ ಚಿತ್ರವನ್ನು ಛಾಯಾಚಿತ್ರದಂತೆ ಊಹಿಸಬೇಡಿ, ಇದು ದೂರದರ್ಶಕಗಳು ಸೆರೆಹಿಡಿದ ವಿದ್ಯುತ್ಕಾಂತೀಯ ತರಂಗಗಳ ಮೂಲಕ ಸೃಷ್ಟಿಸಿದ ಸಿಮ್ಯುಲೇಟೆಡ್ ಚಿತ್ರ. ನೇರವಾಗಿ ಕಾಣಲಾರದ ಕಪ್ಪುಕುಳಿಯನ್ನು ಅಪರೋಕ್ಷ ರೀತಿಯಲ್ಲಿ ಸೆರೆಹಿಡಿದ ‘ರೇಡಿಯೋ ತರಂಗಗಳ ಚಿತ್ರ’ ಇದು.

ಭೂಮಿಯ ವಿವಿಧ ಭಾಗದ ಅತ್ಯಂತ ಶಕ್ತವಾದ ಎಂಟು ದೂರದರ್ಶಕಗಳ ನೆಟ್‍ವರ್ಕ್ ಮೂಲಕ ಕ್ರೂಢೀಕರಿಸಿದ ಚಿತ್ರ ಇದು. ಒಂದು ರೀತಿ ಭೂಮಿಯಷ್ಟು ಅಗಲವಾದ ‘ವರ್ಚುಯಲ್ ಟೆಲಿಸ್ಕೋಪ್’ ಅನ್ನು ಈ ನೆಟ್‍ವರ್ಕ್ ಸೃಷ್ಟಿಸಿತು. ಈ ಮಿಥ್ಯಾ ದೂರದರ್ಶಕದ ಮೂಲಕ ಅವರು ನಮ್ಮದೇ ನಕ್ಷತ್ರಪುಂಜವಾದ ಹಾಲುಹಾದಿಯ ನಟ್ಟನಡುವಿನ ‘ಸ್ಯಾಗಿಟೇರಿಯಸ್ ಎ ಸ್ಟಾರ್’ ಎಂಬ ಸ್ಥಳದತ್ತ ದಿಟ್ಟಿಸಿದರು. ಈ ತಾಣ ಭೂಮಿಯಿಂದ 26,000 ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ. ಇದೇ ತಾಣದತ್ತ ಆಂಡ್ರಿಯಾ 1990ರ ದಶಕದಿಂದಲೂ ಕೇಂದ್ರೀಕರಿಸಿದ್ದರು.

ಅಮೆರಿಕದ ವಿಜ್ಞಾನಿ ಆಂಡ್ರಿಯಾ ಗೇಸ್ ಇಸವಿ 1965ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ಬಾಲ್ಯದಲ್ಲಿ ಆಕೆಯ ಕುಟುಂಬ ನ್ಯೂಯಾರ್ಕ್‍ನಿಂದ ಶಿಕಾಗೋಗೆ ಬಂದಾಗ, ಆಂಡ್ರಿಯಾ ‘ಯೂನಿವರ್ಸಿಟಿ ಆಫ್ ಶಿಕಾಗೋ ಲ್ಯಾಬ್ ಸ್ಕೂಲ್’ಗೆ ಸೇರಿದರು. ಇದು ಶಿಕಾಗೋ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಶಾಲೆ. ಮಾನವ, ಚಂದ್ರನ ಮೇಲೆ ಇಳಿದ ‘ಅಪೊಲೋ ಪ್ರೋಗ್ರಾಮ್’ಗಳು ಆಂಡ್ರಿಯಾಗೆ ಸ್ಫೂರ್ತಿಯಾದವು. ತಾನು ಮೊಟ್ಟ ಮೊದಲ ಮಹಿಳಾ ಗಗನಯಾತ್ರಿ ಆಗಬೇಕು ಎಂದು ಕೂಡಾ ಬಯಸಿದ್ದು ಉಂಟು. ಆಕೆಯ ತಾಯಿ ಸುಸಾನ್ ಗೇಟನ್, ಆಂಡ್ರಿಯಾಗೆ ಎಲ್ಲಿಲ್ಲದ ಪ್ರೋತ್ಸಾಹ ನೀಡಿದರು. ಪ್ರೌಢಶಾಲೆಯಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕಿ ಆಂಡ್ರಿಯಾಗೆ ಮಹಿಳಾ ಮಾದರಿಯಾಗಿ ಪ್ರೇರಣೆ ಕೊಟ್ಟರು. ಕಾಲೇಜಿನಲ್ಲಿ ಗಣಿತದಲ್ಲಿ ಮೇಜರ್ ತೆಗೆದುಕೊಂಡ ಆಂಡ್ರಿಯಾ, ನಂತರ ಭೌತಶಾಸ್ತ್ರಕ್ಕೆ ಬದಲಾಯಿಸಿಕೊಂಡರು.
ಇಸವಿ 1987ರಲ್ಲಿ ‘ಮ್ಯಸಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ‘ಕ್ಯಾಲಿಫೋರ್ನಿಯಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯಿಂದ ಇಸವಿ 1992ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಲಾಸ್ ಆಂಜಲಸ್‍ನ ‘ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ’ದಲ್ಲಿ ಈಕೆ ಖಗೋಳಶಾಸ್ತ್ರಜ್ಞಳಾಗಿ ಮತ್ತು ಪ್ರೊಫೆಸರ್ ಆಗಿಯೂ ಇದ್ದಾರೆ. ಆಂಡ್ರಿಯಾ ಇಸವಿ 2004ರಲ್ಲಿ ‘ನ್ಯಾಷನಲ್ ಅಕಾಡೆಮಿ ಆಫ್ ಸಯನ್ಸ್‍ಸ್’ಗೆ ಚುನಾಯಿತರಾದರು ಹಾಗೂ ‘ಅಮೆರಿಕನ್ ಫಿಸಿಕಲ್ ಸೊಸೈಟಿ’ಗೆ ಇಸವಿ 2019ರಲ್ಲಿ ಫೆಲೋ ಆಗಿ ಆರಿಸಿ ಬಂದರು. ಆಂಡ್ರಿಯಾ ಭೌತವಿಜ್ಞಾನಿ, ಟಾಮ್ ಲಾಟುರೆಟ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳು.
ಆಂಡ್ರಿಯಾ ‘ಅಡ್ಯಾಪ್ಟಿವ್ ಆಪ್ಟಿಕ್ಸ್’ ಎಂಬಂತಹ ಅತಿ ಹೆಚ್ಚಿನ ‘ಸ್ಪೇಷಿಯಲ್ ರೆಸೊಲ್ಯೂಷನ್ ಇಮೇಜಿಂಗ್’ ತಂತ್ರಜ್ಞಾನವನ್ನು ಬಳಸುವ ಕೆಕ್ ದೂರದರ್ಶಕಗಳನ್ನು ತನ್ನ ಸಂಶೋಧನೆಗೆ ಬಳಸಿದರು. ಕೆಕ್ ಟೆಲಿಸ್ಕೋಪ್‍ಗಳು ಅಮೆರಿಕಾದ ಹವಾಯಿಯಲ್ಲಿ ಸುಮಾರು 13,600 ಅಡಿ ಎತ್ತರದಲ್ಲಿರುವ ಕೆಕ್ ತಾರಾ ವೀಕ್ಷಣಾಲಯಲ್ಲಿವೆ (ಆಬ್ಸರ್‍ವೇಟರಿ). ಇಲ್ಲಿರುವ ಎರಡು ಕೆಕ್ ದೂರದರ್ಶಕಗಳು, 1990ರ ದಶಕದ ಪೂರ್ವಾರ್ಧದಲ್ಲಿ ವಿಶ್ವದ ಅತಿ ದೊಡ್ಡ ಖಗೋಳಶಾಸ್ತ್ರೀಯ ದೂರದರ್ಶಕಗಳಾಗಿದ್ದವು. ಈ ಕೆಕ್ 1 ಮತ್ತು ಕೆಕ್ 2 ಎಂಬ ದೂರದರ್ಶಕಗಳನ್ನು ಆಂಡ್ರಿಯಾ ಬಳಸಿದರು. ನಮ್ಮ ನಕ್ಷತ್ರಪುಂಜವಾದ ಹಾಲುಹಾದಿಯ ಕೇಂದ್ರದಲ್ಲಿರುವ ‘ಸ್ಯಾಜಿಟೇರಿಯಸ್ ಎ ಸ್ಟಾರ್’ ಎಂಬ ವಲಯವನ್ನು ಗಮನಿಸಿದರು. ಈಕೆ ಹಾಲುಹಾದಿಯ ಕೇಂದ್ರಕ್ಕೆ ಹತ್ತಿರವಾದ ಈ ತಾಣದಲ್ಲಿ, ನಕ್ಷತ್ರಗಳ ಚಲನೆಯ ರೀತಿಯನ್ನು (ಕೈನಮ್ಯಾಟಿಕ್ಸ್) ಗತಿವಿಜ್ಞಾನ ತಜ್ಞತೆಯನ್ನು ಬಳಸಿ ಗಮನಿಸಿದರು, ಈ ತಾಣವನ್ನು ತಮ್ಮ ವೈಜ್ಞಾನಿಕ ತನಿಖೆಯ ವಿಷಯವಾಗಿ ಆರಿಸಿ ಕೊಂಡರು.
ಅವರು ದೀರ್ಘ ಕಾಲ, ದಶಕಗಳು ಇಲ್ಲಿಯ ನಕ್ಷತ್ರಗಳ ಚಲನೆಯನ್ನು ಗಮನಿಸಿ ದಾಖಲಿಸಿದರು. ಸೂರ್ಯನ ಸುತ್ತ ಗ್ರಹಗಳು ಸುತ್ತುವಂತೆ, ನಕ್ಷತ್ರಗಳು ಗ್ಯಾಲಕ್ಸಿಯ ಕೇಂದ್ರದ ಸುತ್ತ ಸುತ್ತುತ್ತವೆ. ಆದರೆ ನಕ್ಷತ್ರಗಳು ನಮ್ಮ ಗ್ಯಾಲಕ್ಸಿಯ ಕೇಂದ್ರದ ಸುತ್ತ ಒಂದು ಬಾರಿ ಸುತ್ತಿ ಬರಲು ಅತಿ ದೀರ್ಘ ಕಾಲವನ್ನು ತೆಗೆದುಕೊಳ್ಳುತ್ತವೆ. ಉದಾಹರಣೆಗೆ ನಮ್ಮ ಅತಿ ಹತ್ತಿರದ ನಕ್ಷತ್ರವಾದ ಸೂರ್ಯ, ಗ್ಯಾಲಕ್ಸಿಯ ಕೇಂದ್ರದ ಸುತ್ತ ಹಾದು ಬರಲು 20 ಕೋಟಿ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಕೇಂದ್ರಕ್ಕೆ ಹತ್ತಿರವಿರುವ ಎಸ್‍ಓ-2 ಎಂಬ ನಕ್ಷತ್ರ ಚಲಿಸುವ ಪಥವನ್ನು ದಶಕಗಳ ಕಾಲ ಗಮನಿಸಿದ ಆಂಡ್ರಿಯಾ, ಈ ನಕ್ಷತ್ರ ಕೇವಲ 15 ವರ್ಷಗಳಲ್ಲಿ ಗ್ಯಲಾಕ್ಸಿಯ ಕೇಂದ್ರದ ಸುತ್ತ ಒಮ್ಮೆ ಸುತ್ತಿ ಬಂದದ್ದನ್ನು ಅವಲೋಕಿಸಿದರು. ಇದಕ್ಕೆ ಮೊದಲು ನಮಗೆ ಗೊತ್ತಿದ್ದ ಗ್ಯಾಲಕ್ಸಿಯ ಕೇಂದ್ರಕ್ಕೆ ಹತ್ತಿರವಿದ್ದ ನಕ್ಷತ್ರಗಳೂ 500 ವರ್ಷಗಳನ್ನು ತೆಗೆದುಕೊಳ್ಳುತ್ತಿದ್ದವು. ಹಾಗಾಗಿ ಜೀವಿತ ಕಾಲದಲ್ಲಿ ಇವುಗಳ ಕಕ್ಷೆಯನ್ನು ಪೂರ್ಣ ಅವಲೋಕಿಸಲು ಸಾಧ್ಯವಿರಲಿಲ್ಲ. ಆದರೆ ಕೇಂದ್ರಕ್ಕೆ ಹತ್ತಿರವಿರುವ ಅನೇಕ ನಕ್ಷತ್ರಗಳ ಭಾಗಶಃ ಕಕ್ಷೆಯನ್ನು ಆಂಡ್ರಿಯಾ ತೊಂಬತ್ತರ ದಶಕದಿಂದ ಹಿಂಬಾಲಿಸಿ ಅವಲೋಕಿಸಿದ್ದರು. ಇಸವಿ 1995ರಿಂದ ಆರಂಭವಾದ ಅತ್ಯಂತ ಸೂಕ್ಷ್ಮ ಅವಲೋಕನದಲ್ಲಿ ಆಂಡ್ರಿಯಾ, ಈ ಎಸ್‍ಒ-2 ಎಂದು ಕರೆಯುವ ನಕ್ಷತ್ರ, ಒಂದು ಪೂರ್ಣ ದೀರ್ಘ ವೃತ್ತಾಕಾರದ (ಎಲಿಪ್ಟಿಕಲ್) ಕಕ್ಷೆಯಲ್ಲಿ ಕೇಂದ್ರದ ಸುತ್ತ ಸುತ್ತಿ ಬಂದದ್ದನ್ನು ದಾಖಲಿಸಿದರು. ಇಸವಿ 2012ರಲ್ಲಿ ಎರಡನೇ ನಕ್ಷತ್ರ ಎಸ್‍ಒ-102ನ್ನು ಆಕೆಯ ತಂಡ ಅದೇ ನಮ್ಮ ಗ್ಯಾಲಕ್ಸಿಯ ಕೇಂದ್ರದ ಸುತ್ತ ಸುತ್ತಿರುವುದನ್ನು ಗುರುತಿಸಿದರು.
ಅವರು ಅವಲೋಕಿಸಿದ ಈ ನಕ್ಷತ್ರಗಳ ಪಥ, ನಮ್ಮ ಗ್ಯಾಲಕ್ಸಿಯ ಕೇಂದ್ರದಲ್ಲಿ ‘ಸೂಪರ್ ಮ್ಯಾಸಿವ್ ಕಪ್ಪುಕುಳಿ’ಯ ಇರುವಿಕೆಗೆ ಪುರಾವೆಯನ್ನು ಒದಗಿಸಿ ಕೊಟ್ಟಿತು. ಕೆಪ್ಲರ್‍ನ ಮೂರನೆ ನಿಯಮವನ್ನು ಅನ್ವಯಿಸಿ, ಈ ನಕ್ಷತ್ರಗಳು ಸುತ್ತುತ್ತಿರುವ ಆ ಕಪ್ಪುಕುಳಿಯ ತೂಕ 41 ಲಕ್ಷ ಸೌರವ್ಯೂಹಗಳ ತೂಕಕ್ಕೆ ಸಮನಾಗಿದೆ ಎಂದು ತೋರಿಸಿದರು.
ಗುರುತ್ವಾಕರ್ಷಣೆಯ ಸೆಳೆತವೇ ಆಕಾಶಕಾಯಗಳನ್ನು ಕಕ್ಷೆಯಲ್ಲಿ ಸುತ್ತುವಂತೆ ಮಾಡುತ್ತದೆ. ಆ ಅಗಾಧ ಭೌತವಸ್ತು ತನ್ನತ್ತ ಸೆಳೆಯುತ್ತಾ ಇರದಿದ್ದರೆ, ಈ ನಕ್ಷತ್ರಗಳು ದೂರ ಹಾರಿ ಹೋಗಿ ಬಿಡುತ್ತಿದ್ದವು. ಇಲ್ಲ ಕೊನೇಪಕ್ಷ ಅತ್ಯಂತ ನಿಧಾನವಾಗಿ ಸುತ್ತುತ್ತಿದ್ದವು. ಆದರೆ ಆಂಡ್ರಿಯಾ ಕಂಡದ್ದು ಇವು ಅತ್ಯಂತ ವೇಗದಲ್ಲಿ ಸುತ್ತುತ್ತಿವೆ. ಇವೆಲ್ಲಕ್ಕೂ ಇರುವ ಏಕೈಕ ವಿವರಣೆ, ನಮ್ಮ ಗ್ಯಾಲಕ್ಸಿಯ ನಡುಮಧ್ಯದಲ್ಲಿ ‘ಸೂಪರ್ ಮ್ಯಾಸಿವ್ ಕಪ್ಪುಕುಳಿ’ಯೊಂದು ಇದೆ ಎಂಬುದೇ ಆಗಿದೆ. ಇಂತಹುದೇ ಕಪ್ಪುಕುಳಿಗಳು ಇತರ ನಕ್ಷತ್ರಪುಂಜಗಳ ನಡುಮಧ್ಯೆಯಲ್ಲೂ ಇವೆ ಎಂದು ವಿಜ್ಞಾನಿಗಳು ಊಹಿಸುತ್ತಾರೆ.
ಆಕಾಶಕಾಯಗಳ, ಕಪ್ಪುಕುಳಿಗಳ ಇಷ್ಟೆಲ್ಲ ಅದ್ಭುತದ ಸಂಶೋಧನೆಯಲ್ಲಿ ತೊಡಗಿರುವ ಆಂಡ್ರಿಯಾ ಭೌತಶಾಸ್ತ್ರದಲ್ಲಿ ನೊಬೆಲ್ ಪಡೆದ ನಾಲ್ಕನೇ ಮಹಿಳಾ ವಿಜ್ಞಾನಿ. ವಿಪರ್ಯಾಸವೆಂದರೆ, 117 ವರ್ಷಗಳ ಹಿಂದೆಯೇ, ಇಸವಿ 1903ರಲ್ಲಿ ಮೇರಿ ಕ್ಯೂರಿ ಭೌತಶಾಸ್ತ್ರದಲ್ಲಿ ನೊಬೆಲ್ ಪಡೆದು, ನೊಬೆಲ್ ಪಾರಿತೋಷಿಕ ಪಡೆದ ಮೊಟ್ಟ ಮೊದಲ ಮಹಿಳಾ ವಿಜ್ಞಾನಿಯಾಗಿದ್ದರು. ನಂತರ ಮೇರಿ ಕ್ಯೂರಿ ರಸಾಯನಶಾಸ್ತ್ರದಲ್ಲಿ ಇಸವಿ 1911ರಲ್ಲಿ ನೊಬೆಲ್ ಪಡೆದು, ವಿಜ್ಞಾನದಲ್ಲಿ ಎರಡು ನೊಬೆಲ್ ಪಾರಿತೋಷಕ ಪಡೆದ ಪ್ರಥಮ ವಿಜ್ಞಾನಿಯಾದರು. ಇಂದಿಗೂ ಕೂಡ, ವಿಜ್ಞಾನದ ಎರಡು ಬೇರೆ ಬೇರೆ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ವಿಜ್ಞಾನಿ ಮೇರಿಕ್ಯೂರಿ.

ಮಿಲೇವಾ ಮ್ಯಾರಿಚ್

ಅಂದಹಾಗೆ, ಐನ್‍ಸ್ಟೈನ್ ಅವರ ಪತ್ನಿ ಮಿಲೇವಾ ಮ್ಯಾರಿಚ್ ಕೂಡಾ ಭೌತಶಾಸ್ತ್ರಜ್ಞೆ ಆದವರು. ಮಿಲೇವಾ ಮತ್ತು ಐನ್‍ಸ್ಟೈನ್ ಇಬ್ಬರೂ ಸ್ವಿಟ್ಸರ್‍ಲ್ಯಾಂಡ್‍ನಲ್ಲಿ ಭೌತಶಾಸ್ತ್ರದ ವಿದ್ಯಾರ್ಥಿಗಳಾಗಿದ್ದಾಗ ಭೇಟಿಯಾದವರು. 1902ರಿಂದ 1909ರವರೆಗೆ ಐನ್‍ಸ್ಟೈನ್ ಮತ್ತು ಮಿಲೇವಾ ಬರ್ನ್‍ನಲ್ಲಿ ಕಳೆದ ವರ್ಷಗಳು ಅತ್ಯಂತ ಮಹತ್ವದ್ದಾಗಿತ್ತು. ಇತ್ತೀಚಿನ ಅಧ್ಯಯನಗಳು ಐನ್‍ಸ್ಟೈನ್ ತನ್ನ ‘ಸಾಪೇಕ್ಷತಾ ಸಿದ್ಧಾಂತ’ವನ್ನು ರೂಪಿಸುವ ಆ ವರ್ಷಗಳಲ್ಲಿ, ಮಿಲೇವಾ ಮೇಲೆ ಎಷ್ಟು ಅವಲಂಬಿತಾಗಿದ್ದರು ಎಂದು ತೋರಿವೆ. ಮಿಲೇವಾ ಐನ್‍ಸ್ಟೈನ್‍ರಂತೆಯೇ ಗಣಿತ ಮತ್ತು ಭೌತವಿಜ್ಞಾನವನ್ನು ಓದಿದವರು. ಐನ್‍ಸ್ಟೈನ್ ಸಾಪೇಕ್ಷತಾ ಸಿದ್ಧಾಂತದ ಆರಂಭದ ಅಧ್ಯಯನಗಳನ್ನು ‘ನಮ್ಮ ಕೆಲಸ’ ಎಂದೇ ಉಲ್ಲೇಖಿಸಿದ್ದರು. ಭೌತವಿಜ್ಞಾನದ ಹಾದಿಯನ್ನೇ ಬದಲಿಸಿದ ಸಾಪೇಕ್ಷತಾ ಸಿದ್ಧಾಂತ ಅವರಿಬ್ಬರ ಜೊತೆಯ ವೈಜ್ಞಾನಿಕ ಅಧ್ಯಯನವಾಗಿತ್ತು’ ಎಂಬ ವಾದಗಳಿವೆ. ಐನ್‍ಸ್ಟೈನ್ ಮಿಲೀವಾರನ್ನು ಕುರಿತು, ‘ಆಕೆ ನನ್ನ ಬಲಗೈ, ನನ್ನ ಸಮಾನಳು, ಸ್ವತಂತ್ರ ಮನೋಭಾವದವಳು. ಅವಳಿಲ್ಲದ ನನ್ನ ಕೆಲಸಗಳೇ ನಿಂತು ಹೋಗುತ್ತವೆ’ ಎಂದು ಹೇಳಿದ್ದರು. ಆದರೆ ಮುಂದುವರೆದಂತೆ, ಅವರ ವೈವಾಹಿಕ ಬದುಕಿನಲ್ಲಿ ಮಿಲೇವಾರ ವ್ಯಕ್ತಿತ್ವ ತುಳಿದು ಹೋಗಿ, ಆಕೆಯ ವೈಜ್ಞಾನಿಕ ಮುನ್ನಡೆಯನ್ನು ಕಡಿದು ಹಾಕಿ, ಐನ್‍ಸ್ಟೈನ್ ಪ್ರಸಿದ್ಧಿಯ ತುತ್ತತುದಿಗೇರಿದ ಸಮಯವೇ ಅವರ ವಿಚ್ಛೇದನವಾಗಿತ್ತು. ಮಿಲೇವಾ, ಐನ್‍ಸ್ಟೈನ್ ಅವರ ಪ್ರಸಿದ್ಧಿಯ ಭಾಗವಾಗಲಿಲ್ಲ. ಈ ಶತಮಾನದ ಆರಂಭದಲ್ಲಿ ಬೆಳಕು ಕಂಡ ದಾಖಲೆಗಳು, ಐನ್‍ಸ್ಟೈನ್ ತಮ್ಮ ಕಸಿನ್ ಎಲ್ಸಾಳ ಸಂಬಂಧದಲ್ಲಿ ಪತ್ನಿಗೆ ವಂಚಿಸಿದ್ದೇ ಅವರ ವಿವಾಹದ ಕುಸಿತಕ್ಕೆ ಮೂಲ ಕಾರಣವೆಂದು ತೋರಿಸಿವೆ. ಬೌದ್ಧಿಕವಾಗಿ ಸರಿಸಮಾನಳಿದ್ದು ತನ್ನ ವೈಜ್ಞಾನಿಕ ಸಿದ್ಧಾಂತಗಳಲ್ಲಿ ಸಂಗಾತಿಯಾದ ಮಿಲೇವಾ ಅವರಿಗಿಂತ ಐನ್‍ಸ್ಟೈನ್, ಅಪ್ಪಟ ಗೃಹಿಣಿಯಾದ ತನಗೆ ಪ್ರಿಯವಾದ ಅಡುಗೆಯನ್ನು ಮಾಡಿ, ತನ್ನೆಲ್ಲ ಗಮನವನ್ನು ತನ್ನತ್ತ ಮತ್ತು ಮನೆಯತ್ತ ನೀಡಿದ ಎಲ್ಸಾ ಹೆಚ್ಚು ಪ್ರಿಯವಾದಳು.

ರಸಾಯನಶಾಸ್ತ್ರದ ನೊಬೆಲ್ 2020

ಈ ವರ್ಷ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಫ್ರೆಂಚ್ ವಿಜ್ಞಾನಿ ಇಮ್ಯಾನ್ಯುಯೆಲ್ ಶಾರ್‍ಪೆನ್‍ಷೀರ್ ಮತ್ತು ಅಮೆರಿಕದ ಜೆನಿಫರ್ ಡೌಡ್ನಾ – ಈ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ಲಭಿಸಿದೆ. ‘ಆಣ್ವಿಕ ಜೀವ ವಿಜ್ಞಾನ’ ಕ್ಷೇತ್ರದಲ್ಲಿ ಅಂದರೆ ‘ಮಾಲಿಕ್ಯುಲರ್ ಲೈಫ್ ಸಯನ್ಸ್’ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಂಶೋಧನೆ ಇವರದಾಗಿದೆ.
ಮೊದಲ ಬಾರಿಗೆ ವಿಜ್ಞಾನದ ಒಂದು ನೊಬೆಲ್ ಪಾರಿತೋಷಿಕ ಇಬ್ಬರು ಮಹಿಳೆಯರಿಗೆ ಜೊತೆಯಾಗಿ ದೊರೆತಿದೆ. ಪುರುಷರೊಡನೆ ಸಹಯೋಗದಲ್ಲಿಯೇ ವಿಜ್ಞಾನ ಸಾಧ್ಯ ಎಂಬ ಸ್ಥಿತಿಯಿಂದ ಹಾದು ಬಂದು, ಮಹಿಳೆಯರಿಬ್ಬರು ಸಹಯೋಗದಲ್ಲಿ ಸಾಧಿಸಿದ ಈ ವೈಜ್ಞಾನಿಕ ಕ್ರಾಂತಿ, ಹೆಣ್ಣು ಮಕ್ಕಳ ಆತ್ಮವಿಶ್ವಾಸದ ಹೊಸಯುಗಕ್ಕೆ ಸೂಚಕವಾಗಿದೆ.

‘ಜೀನ್ ಟೆಕ್ನಾಲಜಿ’, ಅಂದರೆ ‘ವಂಶವಾಹಿ ತಂತ್ರಜ್ಞಾನ’ದ ಅತ್ಯಂತ ಹರಿತ ಸಾಧನವಾದ ‘ಕ್ರಿಸ್ಪರ್/ಕ್ಯಾಸ್9 ಜೆನೆಟಿಕ್ ಸಿಸರ್ಸ’ ಎಂದು ಕರೆಯುವ ‘ವಂಶವಾಹಿ ಕತ್ತರಿ’ಯ ಅನ್ವೇಷಣೆಗೆ ಇವರಿಗೆ ಈ ವರ್ಷದ ನೊಬೆಲ್ ಪಾರಿತೋಷಕ ದೊರೆತಿದೆ. ಇದನ್ನು ‘ಜೀನೋಮ್ ಎಡಿಟಿಂಗ್’ ಎಂದೂ ಕರೆಯುತ್ತಾರೆ. ‘ಜೀನೋಮ್’ ಎಂದರೆ ನಮ್ಮ ‘ವಂಶಾವಳಿ’. ವಂಶವಾಹಿಗಳ ಸಮುದಾಯವೇ ಈ ಜೀನೋಮ್. ವಂಶವಾಹಿಗಳನ್ನು ಕತ್ತರಿಸಿ ಜೋಡಿಸಬಲ್ಲ ಈ ‘ಜೀನೋಮ್ ಎಡಿಟಿಂಗ್’ ವಿಧಾನವನ್ನು ವಿಕಾಸಗೊಳಿಸಿರುವುದು ಈ ವಿಜ್ಞಾನಿಗಳ ಸಾಧನೆ.
ಈ ಜೆನೆಟಿಕ್ ಕತ್ತರಿಯನ್ನು ಬಳಸಿ ಪ್ರಾಣಿಗಳ ಇಲ್ಲವೆ ಸಸ್ಯಗಳ ಅಥವಾ ಸೂಕ್ಷ್ಮಜೀವಿಗಳ ಡಿ.ಎನ್.ಎ. ಅನ್ನು ಅತ್ಯಂತ ನಿಖರವಾಗಿ ನಾವು ಬಯಸಿದಲ್ಲಿ ಕತ್ತರಿಸಲು ಸಾಧ್ಯವಿದೆ. ಕತ್ತರಿಸಿದ ಜಾಗದಲ್ಲಿ ಪೂರ್ವಯೋಜಿತ ಬದಲಾವಣೆಗಳನ್ನು ಸೇರಿಸಲೂ ಸಾಧ್ಯವಿದೆ. ಈ ಮೂಲಕ ಕ್ಷಿಪ್ರ ಸಮಯದಲ್ಲಿ ಜೀವ ಸಂಕೇತಗಳನ್ನು (ಕೋಡ್ ಆಫ್ ಲೈಫ್) ಬದಲಾಯಿಸಬಲ್ಲ ಸಾಧ್ಯತೆಯನ್ನು ಈ ಜೆನಿಟಿಕ್ ಕತ್ತರಿ ತಂದಿತು. ಅವರು ಕಂಡುಹಿಡಿದ ಈ ತಂತ್ರಜ್ಞಾನ ಹೊಸ ಬಗೆಯ ಕ್ಯಾನ್ಸರ್ ಚಿಕಿತ್ಸೆಗೆ ಸಹಾಯಕವಾಗಿದೆ. ಆನುವಂಶಿಕ ರೋಗಗಳಿಗೆ ಹೊಸದೇ ಬಗೆಯ ವೈದ್ಯಕೀಯ ಚಿಕಿತ್ಸೆಗೆ ಕಾರಣವಾಗಬಲ್ಲದು. ಆನುವಂಶಿಕವಾಗಿ ಪಡೆಯುವ ರೋಗಗಳನ್ನು ಸಂಪೂರ್ಣ ತಡೆಯುವ ಸಾಧ್ಯತೆಯ ಕನಸನ್ನು, ಮುಂದೊಮ್ಮೆ ದಿಟವಾಗಿಸಬಲ್ಲದು ಕೂಡಾ.
ಹ್ಯೂಮನ್ ಜೀನೋಮ್
ಎರಡು ದಶಕಗಳ ಹಿಂದೆ ಮನುಷ್ಯ ದೇಹದ ನೀಲಿ ನಕಾಶೆ – ಹ್ಯೂಮನ್ ಜೀನೋಮ್ ಸಿದ್ಧವಾಗಿದ್ದು ಭಾರೀ ಸುದ್ದಿಯಾಗಿತ್ತು. ನಮ್ಮ ದೇಹದ ವಂಶವಾಹಿಗಳ (ಜೀನ್) ಕುಂದು ಕೊರತೆ ವೈಪರೀತ್ಯದಿಂದಾಗಿ ಅದೆಷ್ಟೋ ಬಗೆಯ ರೋಗಗಳಿಗೆ ನಾವು ಗುರಿಯಾಗುತ್ತೇವೆ. ನಿಜ, ನಮ್ಮ ವಂಶವಾಹಿಗಳು ಈ ರೋಗಗಳು ಬಂದೇ ಬರುತ್ತದೆ ಅಥವಾ ಬರುವುದೇ ಇಲ್ಲ ಎಂದು ನಿಖರವಾಗಿ ಹೇಳಲಾರವು. ಆದರೆ ಇಂಥಾ ರೋಗಗಳು ಬರುವ ಸಾಧ್ಯತೆಯನ್ನು, ಬರುವ ಅಪಾಯವಿದೆ ಎಂಬ ಸೂಚನೆಯನ್ನು ಖಂಡಿತಾ ನೀಡಬಲ್ಲವು. ರೋಗಗಳು ಬರುವ ಮೊದಲೆ, ರೋಗಗಳು ಬಂದೆರಗುವ ಸಾಧ್ಯತೆಯನ್ನು ಕಂಡು ಹಿಡಿದು, ಬಾರದಂತೆ ವಂಶವಾಹಿ ಚಿಕಿತ್ಸೆಯಿಂದ ತಡೆಯಲು ಸಾಧ್ಯವಾಗುವಂತಹ ಶಕ್ತ ಸಲಕರಣೆಯಾಗಿ ಜೆನಿಟಿಕ್ ಕತ್ತರಿಯನ್ನು ಈ ಇಬ್ಬರು ವಿಜ್ಞಾನಿಗಳು ನೀಡಿದ್ದಾರೆ.

ಡಿ.ಎನ್.ಎ. ಎಂಬುದು ನಮ್ಮ ವಂಶವಾಹಿಯ ನಕ್ಷೆ, ನಮ್ಮ ದೇಹದ ಪ್ರತಿ ಜೀವಕೋಶದಲ್ಲೂ ಇರುವಂತಹುದು. ಡಿ.ಎನ್.ಎ. 46 ವರ್ಣತಂತುಗಳನ್ನು (ಕ್ರೋಮೋಸೋಮ್ಸ್) ಹೊಂದಿದೆ. ಇದರಲ್ಲಿ 23 ತಂದೆಯ ವೀರ್ಯದಿಂದಲೂ, 23 ತಾಯಿಯ ಅಂಡಾಣುವಿನಿಂದಲೂ ಬಂದದ್ದು. ಈ ವರ್ಣತಂತುಗಳಲ್ಲಿ ವಂಶವಾಹಿಗಳಿವೆ. ಇಂಗ್ಲೀಷಿನಲ್ಲಿ ಇವನ್ನು ಜೀನ್ ಎಂದು ಕರೆಯುತ್ತಾರೆ. ಮನುಷ್ಯ ದೇಹದಲ್ಲಿ ಸುಮಾರು ಒಂದು ಲಕ್ಷ ವಂಶವಾಹಿಗಳಿವೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
ಡಿ.ಎನ್.ಎ., ತೆಳ್ಳನೆಯ ಎರಡೆಳೆಯ ಸುರುಳಿಯಂತೆ ಕಾಣಿಸುತ್ತದೆ. ಡಿ.ಎನ್.ಎ.ಯ ಎರಡೂ ಎಳೆಯನ್ನು, ಏಣಿಯ ಕಾಲುಗಳು ಹಿಡಿದಿಡುವಂತೆ ನಾಲ್ಕು ರಾಸಾಯನಿಕ ತುಂಡುಗಳು ಹಿಡಿದಿಟ್ಟಿವೆ. ಈ ರಾಸಾಯನಿಕ ತುಣುಕುಗಳಲ್ಲಿ ಅಸಂಖ್ಯಾತ ಮಾಹಿತಿಯಿದ್ದು, ಮನುಷ್ಯನ ಪ್ರತಿ ಅಂಗರಚನೆಯೂ ಈ ರಾಸಾಯನಿಕ ತುಣುಕುಗಳು ಹೇಳಿದಂತೆ, ನಿರ್ದೇಶಿಸಿದಂತೆ ರೂಪುಗೊಳ್ಳುತ್ತದೆ. ಈ ತುಣುಕುಗಳಲ್ಲಿರುವ ಮಾಹಿತಿಯನ್ನು ಓದುವಂತಿದ್ದರೆ, ಅವುಗಳ ಸಾಂಕೇತಿಕ ಭಾಷೆಯ ಒಡಪನ್ನು ಒಡೆದು, ಬಹುಶಃ ಯಾವ ವಂಶವಾಹಿಯ ತುಣುಕು ಯಾವುದಕ್ಕೆ ಕಾರಣ ಎಂದು ತಿಳಿಯಬಹುದು. ವಂಶವಾಹಿಗಳ ಸಮುದಾಯವಾದ ಮನುಷ್ಯನ ವಂಶಾವಳಿ (ಅಂದರೆ ಹ್ಯೂಮನ್ ಜೀನೋಮ್) ಎಂಬ ಬೃಹತ್ ಗ್ರಂಥದಲ್ಲಿ 3.2 ಲಕ್ಷ ಕೋಟಿ ಅಕ್ಷರಗಳಿವೆ. ಇಂದು ಈ ಇಬ್ಬರು ವಿಜ್ಞಾನಿಗಳು ಈ ಮನುಷ್ಯನ ವಂಶಾವಳಿಯಲ್ಲಿ ಬೇಕಿರುವ ಭಾಗವನ್ನು ಉಳಿಸಿಕೊಂಡು ಬೇಕಿಲ್ಲದ ಭಾಗವನ್ನು ಕಿತ್ತು ಹಾಕಬಲ್ಲ ಸಾಧನವನ್ನು ಕ್ರಿಸ್ಪರ್/ಕ್ಯಾಸ್ 9 ಜೆನೆಟಿಕ್ ಕತ್ತರಿಯ ಮೂಲಕ ನೀಡಿದ್ದಾರೆ. ಈ ಮೂಲಕ ಆನುವಂಶಿಕವಾಗಿ ಬರುವ ಭೀಕರ ರೋಗಗಳಿಗೆ ಹೆಚ್ಚು ನಿಖರವಾದ, ಶಕ್ತವಾದ ‘ಜೀನ್ ತೆರಪಿ’ ಅಂದರೆ ‘ವಂಶವಾಹಿ ಚಿಕಿತ್ಸೆ’ಯ ಸಾಧ್ಯತೆಯನ್ನು ತೋರಿಸಿದ್ದಾರೆ. ಹಾಗೆಂದೇ ಇದು ಅತ್ಯಂತ ಮಹತ್ವದ ಸಂಶೋಧನೆಯಾಗಿದೆ.

ಫ್ರೆಂಚ್ ವಿಜ್ಞಾನಿ ಇಮ್ಯಾನ್ಯುಯೆಲ್ ಮೇರಿ ಶಾರ್‍ಪೆನ್‍ಷೀರ್, ಇಸವಿ 1968ರಲ್ಲಿ ಹುಟ್ಟಿದರು. ಈಕೆ ಮೈಕ್ರೋಬಯಾಲಜಿ, ಜೆನಿಟಿಕ್ಸ್ ಮತ್ತು ಜೀವರಸಾಯನಶಾಸ್ತ್ರದಲ್ಲಿ ಸಂಶೋಧನೆ ನಡೆಸಿದ್ದಾರೆ. ಇಸವಿ 2015ರಿಂದ ಈಕೆ ಬರ್ಲಿನ್‍ನ ‘ಮ್ಯಾಕ್ಸ್ ಪ್ಲಾಂಕ್ ಇನ್‍ಸ್ಟಿಟ್ಯೂಟ್ ಫಾರ್ ಇನ್‍ಫೆಕ್ಷನ್ ಬಯಾಲಜಿ’ ಸಂಸ್ಥೆಯ ನಿರ್ದೇಶಕಿಯಾಗಿದ್ದಾರೆ. ಇಸವಿ 2018ರಲ್ಲಿ ಈಕೆ ಪ್ಯಾಥಜನ್ ವಿಜ್ಞಾನಕ್ಕಾಗಿಯೇ ಮೀಸಲಾದ ಒಂದು ಸ್ವತಂತ್ರ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ಈಕೆ ‘ಪಿಯರ್ ಮತ್ತು ಮೇರಿ ಕ್ಯೂರಿ ಯೂನಿವರ್ಸಿಟಿ’ಯಲ್ಲಿ ಜೀವರಸಾಯನಶಾಸ್ತ್ರ, ಮೈಕ್ರೋಬಯಾಲಜಿ ಮತ್ತು ಜೆನಿಟಿಕ್ಸ್ ಓದಿದರು. ‘ಪ್ಯಾಶ್ಚರ್ ಸಂಸ್ಥೆ’ಯಲ್ಲಿ ಡಾಕ್ಟರ ಡಿಗ್ರಿಗೆ ಸಂಶೋಧನೆ ನಡೆಸಿದರು. ಇಲ್ಲಿ ಈಕೆ, ಆಂಟಿಬಯಾಟಿಕ್ ರೆಸಿಸ್ಟೆನ್ಸ್‍ನಲ್ಲಿ (ಪ್ರತಿಜೀವಕಗಳನ್ನು ನಿರೋಧಿಸುವಲ್ಲಿ) ತೊಡಗಿರುವ ಅಣು-ಕಾರ್ಯವಿಧಾನವನ್ನು (ಮಾಲಿಕ್ಯುಲರ್ ಮೆಕಾನಿಸ್ಮ್) ತನ್ನ ಸಂಶೋಧನೆಗೆ ಆಯ್ದುಕೊಂಡಿದ್ದರು. ಮೊದಲಿಗೆ ‘ಪಿಯರ್ ಮತ್ತು ಮೇರಿ ಕ್ಯೂರಿ ವಿಶ್ವವಿದ್ಯಾಲಯ’ದಲ್ಲಿ ಸಹಾಯಕ ಪ್ರಾಧ್ಯಾಪಕಳಾಗಿ ಕೆಲಸ ಮಾಡಿದ ಈಕೆ, ನಂತರ ‘ಪಾಶ್ಚರ್ ಸಂಸ್ಥೆ’ಯಲ್ಲಿ ಡಾಕ್ಟರೇಟ್ ಪದವಿಗೆ ಸಂಶೋಧನೆ ನಡೆಸಿದರು. ಇಸವಿ 1997ರಿಂದ 1999ರವರೆಗೆ ‘ನ್ಯೂಯಾರ್ಕ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್’ನಲ್ಲಿ ಸಹಾಯಕ ಸಂಶೋಧಕ ವಿಜ್ಞಾನಿಯಾಗಿ ಕೆಲಸ ಮಾಡಿದರು. ಇಲ್ಲಿ ಈಕೆ ಪ್ಯಾಮೆಲಾ ಕೋವಿನ್ ಅವರ ಪ್ರಯೋಗಶಾಲೆಯಲ್ಲಿ ದುಡಿದರು. ಪ್ಯಾಮೆಲಾ ಅವರು ಚರ್ಮದ ಜೀವಕೋಶದಲ್ಲಿ ತಜ್ಞರಾದ ಜೀವ ವಿಜ್ಞಾನಿ. ಸಸ್ತನಿಗಳ ವಂಶವಾಹಿಯನ್ನು ಮಾರ್ಪಾಡು ಮಾಡುವುದರಲ್ಲಿ (ಮ್ಯಾನಿಪ್ಯುಲೇಟ್) ಆಕೆ ಆಸಕ್ತರಿದ್ದರು. ಇಲ್ಲಿ ಇಮ್ಯಾನ್ಯುಯೆಲ್ ಇಲಿಗಳಲ್ಲಿ ಕೂದಲು ಬೆಳೆಯುವ ವಿಧಾಯಕವನ್ನು ಶೋಧಿಸಿ, ವೈಜ್ಞಾನಿಕ ಪ್ರಬಂಧವನ್ನು ಪ್ರಕಟಿಸಿದರು.

ನಂತರ ‘ಸೇಂಟ್ ಜ್ಯೂಡ್ ಚಿಲ್ಡ್ರನ್ಸ್ ರಿಸರ್ಚ್ ಆಸ್ಪತ್ರೆ’ಯಲ್ಲಿಯೂ ಮತ್ತು ‘ಸ್ಕಿರ್‍ಬಾಲ್ ಇನ್‍ಸ್ಟಿಟ್ಯೂಟ್ ಆಫ್ ಬಯೋಮಾಲಿಕ್ಯುಲರ್ ಮೆಡಿಸಿನ್’ನಲ್ಲಿಯೂ ಸಂಶೋಧನೆ ನಡೆಸಿದರು. ಐದು ವರ್ಷಗಳು ಅಮೆರಿಕದಲ್ಲಿ ಸಂಶೋಧನೆ ನಡೆಸಿ, ಇಮ್ಯಾನ್ಯುಯೆಲ್ ಯೂರೋಪಿಗೆ ಹಿಂತಿರುಗಿ ವಿಯೆನ್ನಾ ವಿಶ್ವವಿದ್ಯಾಲಯದ ‘ಮೈಕ್ರೋಬಯಾಲಜಿ ಮತ್ತು ಜೆನಿಟಿಕ್ಸ್ ಸಂಸ್ಥೆ’ಯಲ್ಲಿ ಪ್ರಯೋಗಶಾಲೆಯ ಮುಖ್ಯಸ್ಥಳಾಗಿ ಸೇರಿಕೊಂಡರು. ಇಲ್ಲಿ ಈಕೆ ಗೌರವ ಪ್ರಾಧ್ಯಾಪಕಿಯೂ ಆಗಿದ್ದರು.
ನಂತರದ ವರ್ಷಗಳಲ್ಲಿ ಇಮ್ಯಾನ್ಯುಯೆಲ್ ಸ್ವೀಡನ್‍ಗೆ ಹೋಗಿ, ‘ಉಮೇವಾ ವಿಶ್ವವಿದ್ಯಾಲಯ’ದ ‘ಮಾಲಿಕ್ಯಲರ್ ಇನ್‍ಫೆಕ್ಷನ್ ಮೆಡಿಸಿನ್ ಸ್ಟೀಡನ್’ನ ಪ್ರಯೋಗಶಾಲೆಯ ಮುಖ್ಯಸ್ಥಳೂ, ಸಹಾಯಕ ಪ್ರಧ್ಯಾಪಕಿಯೂ ಆದರು. ಇಲ್ಲಿ ತಂಡದ ಮುಖಂಡಳಾಗಿ ಇಸವಿ 2013ರವರೆಗೆ ದುಡಿದರು. ಇದರ ನಂತರ ಜರ್ಮನಿಗೆ ಬಂದ ಈಕೆ ಅನೇಕ ಕಡೆಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು, ಇಸವಿ 2015ರಲ್ಲಿ ಬರ್ಲಿನ್‍ನ ‘ಮ್ಯಾಕ್ಸ್ ಪ್ಲಾಂಕ್ ಇನ್‍ಸ್ಟಿಟ್ಯೂಟ್ ಫಾರ್ ಇನ್‍ಫೆಕ್ಷನ್ ಬಯಾಲಜಿ’ಯ ನಿರ್ದೇಶಕ ಸ್ಥಾನವನ್ನು ಸ್ವೀಕರಿಸಿದರು.


ಇಮ್ಯಾನ್ಯುಯೆಲ್ ಅವರೊಡನೆ ನೊಬೆಲ್ ಪಡೆದ ಜೆನಿಫರ್ ಆನ್ ಡೌಡ್ನಾ ಇಸವಿ 1964ರಲ್ಲಿ ಜನಿಸಿದರು. ಈಕೆ ಹವಾಯಿಯಲ್ಲಿ ಬೆಳೆದರು. ಇಸವಿ 1985ರಲ್ಲಿ ಪೊಮೊನಾ ಕಾಲೇಜಿನಿಂದ ಪದವಿ ಪಡೆದ ಜೆನಿಫರ್, 1989ರಲ್ಲಿ ಹಾರ್ವರ್ಡ್ ಮೆಡಿಕಲ್ ಶಾಲೆಯಿಂದ ಡಾಕ್ಟರೇಟ್ ಪದವಿ ಪಡೆದರು. ಈಕೆ ಬರ್ಕಲಿಯಲ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗ ಮತ್ತು ಮಾಲೆಕ್ಯುಲರ್ ಹಾಗೂ ಸೆಲ್ ಬಯಾಲಜಿ ವಿಭಾಗಳಲ್ಲಿ ‘ಲೀ ಕಾ ಶಿಂಗ್ ಚಾನ್ಸಲರ್ ಚೇರ್ ಪ್ರೊಫೆಸರ್’ ಆಗಿದ್ದಾರೆ. ಇಸವಿ 1997ರಿಂದಲೂ ಈಕೆ ‘ಹೋವರ್ಡ್ ಹ್ಯೂಗ್ಸ್ ಮೆಡಿಕಲ್ ಸಂಸ್ಥೆ’ಯ ಒಡನಾಟದಲ್ಲಿಯೂ ಇದ್ದಾರೆ. ಈಕೆ ಮತ್ತು ಪತಿ ಜೇಮಿ ಕೇಟ್ ಅವರು ಬರ್ಕ್‍ಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ. ಇವರಿಗೆ ಒಬ್ಬ ಮಗ ಇದ್ದಾನೆ.
‘ಕ್ರಿಸ್ಪರ್ ಕ್ರಾಂತಿ’ ಎಂದೇ ಕರೆಯಲಾಗುತ್ತಿರುವ ಕ್ಷೇತ್ರದಲ್ಲಿ ಜೆನಿಫರ್ ಮುಂಚೂಣಿಯ ವಿಜ್ಞಾನಿಯಾಗಿದ್ದಾರೆ. ‘ಜೀನೋಮ್ ಎಡಿಟಿಂಗ್’ ತಂತ್ರವನ್ನು ವಿಕಾಸಗೊಳಿಸುವಲ್ಲಿ ಮೂಲಾಧಾರವಾದ ‘ಕ್ರಿಸ್ಪರ್’ ಕುರಿತ ಸಂಶೋಧನೆಯನ್ನು ನಡೆಸಿ ಮುಂದಾಳತ್ವ ವಹಿಸಿದ್ದಾರೆ.

ಜೆನಿಟಿಕ್ ಕತ್ತರಿ
ಇಸವಿ 2011ರಲ್ಲಿ ಇಮ್ಯಾನುಯೆಲ್, ಜೆನಿಫರ್ ಅನ್ನು ಒಂದು ಸಂಶೋಧನಾ ಸಮ್ಮೇಳನದಲ್ಲಿ ಭೆಟ್ಟಿಯಾದರು. ಅಲ್ಲಿಂದ ಮುಂದೆ ಅವರ ಸಹಯೋಗ ಆರಂಭವಾಯಿತು. ಜೆನಫರ್ ಅವರ ಪ್ರಯೋಗಶಾಲೆಯೊಡನೆ ಕೆಲಸ ಮಾಡುತ್ತಾ ಇಮ್ಯಾನ್ಯುಯೆಲ್ ಅವರ ಪ್ರಯೋಗಶಾಲೆ ಕ್ಯಾಸ್9 ಬಳಸಿ, ಡಿ.ಎನ್.ಎ. ಸರಪಳಿಯಲ್ಲಿ, ಬಯಸಿದ ತಾಣದಲ್ಲಿ ತುಂಡರಿಸಬಹುದಾದ ಜೆನಿಟಿಕ ಕತ್ತರಿಯ ತಂತ್ರಜ್ಞಾನವನ್ನು ಕಂಡು ಹಿಡಿದರು.
ಈ ಇಬ್ಬರು ಮಹಿಳಾ ವಿಜ್ಞಾನಿಗಳು ಪರಸ್ಪರ ಸಹಯೋಗದಲ್ಲಿ ‘ಕ್ರಿಸ್ಪರ್/ಕ್ಯಾಸ್9’ಗಳನ್ನು ಪ್ರೋಗ್ರಾಮ್ ಮಾಡಬಲ್ಲ ‘ಜೀನೋಮ್ ಎಡಿಟಿಂಗ್’ನಲ್ಲಿ ಬಳಸಬಹುದು ಎಂದು ಮೊಟ್ಟ ಮೊದಲಿಗೆ ಪ್ರತಿಪಾದಿಸಿದರು. ಕ್ರಿಸ್ಪರ್/ಕ್ಯಾಸ್9 ಎಂಬುದು ಬ್ಯಾಕ್ಟೀರಿಯಾದಿಂದ ತೆಗೆದ ಕಿಣ್ವಗಳು. ಇವು ಸೂಕ್ಷ್ಮಜೀವೀಯ ರೋಗನಿರೋಧಕತೆಯನ್ನು (ಮೈಕ್ರೋಬಿಯಲ್ ಇಮ್ಯುನಿಟಿ) ನಿಯಂತ್ರಿಸುತ್ತವೆ. ಈ ಇಬ್ಬರು ಮಹಿಳಾ ವಿಜ್ಞಾನಿಗಳು ಜೊತೆಯಾಗಿ ಬ್ಯಾಕ್ಟೀರಿಯಾದ ಜೆನಿಟಿಕ್ ಕತ್ತರಿಯನ್ನು ಪ್ರಣಾಳದಲ್ಲಿ ಪುನರ್‍ಸೃಷ್ಟಿಸುವಲ್ಲಿ ಯಶಸ್ವಿಯಾದರು. ನಂತರ ಈ ಜೆನಿಟಿಕ್ ಕತ್ತರಿಯ ಆಣ್ವಿಕ ಘಟಕಗಳನ್ನು ಸರಳೀಕರಿಸಿ, ಕತ್ತರಿಯನ್ನು ಉಪಯೋಗಿಸುವುದನ್ನು ಸುಲಭವಾಗಿಸಿದರು. ಇವರ ಆವಿಷ್ಕಾರ ಜೀವಶಾಸ್ತ್ರದ ಇತಿಹಾಸದಲ್ಲಿಯೇ ಮೈಲುಗಲ್ಲಾಗಿದೆ. ಇದೀಗ ಡಿ.ಎನ್.ಎ. ಅಣುಗಳನ್ನು ಪೂರ್ವನಿಶ್ಚಿತ ತಾಣದಲ್ಲಿ ನಿಖರವಾಗಿ ಕತ್ತರಿಸಬಹುದಿದೆ. ಡಿ.ಎನ್.ಎ. ಅನ್ನು ಕತ್ತರಿಸಿರುವ ಸ್ಥಳದಲ್ಲಿ, ಹೊಸ ಜೀವಸಂಕೇತಗಳನ್ನು ಬರೆಯುವುದು ಸುಲಭವಾಗಲಿದೆ.
ಇಮ್ಯಾನ್ಯುಯೆಲ್ ಮತ್ತು ಜೆನಿಫರ್ ಕ್ರಿಸ್ಪರ್/ಕ್ಯಾಸ್9 ಜೆನಿಟಿಕ್ ಕತ್ತರಿಯನ್ನು ಇಸವಿ 2012ರಲ್ಲಿ ಕಂಡು ಹಿಡಿದಾಗಿನಿಂದ, ಅದರ ಬಳಕೆಯಲ್ಲಿ ಆಸ್ಫೋಟವೇ ಆಗಿದೆ. ಈ ಸಾಧನ ಮೂಲಭೂತ ಸಂಶೋಧನೆಯಲ್ಲಿ ಅನೇಕ ಆವಿಷ್ಕಾರಗಳನ್ನು ಸಾಧ್ಯವಾಗಿಸಿದೆ. ಸಸ್ಯ ವಿಜ್ಞಾನಿಗಳು, ಉಪದ್ರವಕಾರಿ ಕೀಟಗಳನ್ನು ಎದುರಿಸಬಲ್ಲ ಸಸ್ಯಗಳನ್ನು ವಿಕಾಸಗೊಳಿಸಲು ಸಾಧ್ಯವಾಯಿತು. ಬರಗಾಲವನ್ನು ತಡೆದುಕೊಳ್ಳಬಲ್ಲ ಸಸ್ಯಗಳನ್ನೂ ವಿಕಾಸಗೊಳಿಸಲು ಸಾಧ್ಯವಾಗುತ್ತಿದೆ. ಇದಲ್ಲದೆ ಕ್ಯಾನ್ಸರಿಗೆ ಹೊಸ ಚಿಕಿತ್ಸೆಗಳು ‘ಕ್ಲಿನಿಕಲ್ ಟ್ರಯಲ್’ನ ಹಂತದಲ್ಲಿವೆ. ಆನುವಂಶಿಕವಾಗಿ ಅಂದರೆ ವಂಶ ಪಾರಂಪರ್ಯವಾಗಿ ಬರುವ ರೋಗಗಳನ್ನು ಕತ್ತರಿಸಿ ವಾಸಿ ಮಾಡಬಲ್ಲ ಕನಸು ಕೂಡಾ ಮುಂದೊಮ್ಮೆ ನನಸಾಗಬಲ್ಲದಿದೆ. ನಿಜಕ್ಕೂ, ಈ ‘ಜೆನಿಟಿಕ್ ಕತ್ತರಿ’ ಜೀವವಿಜ್ಞಾನವನ್ನು ಹೊಸಯುಗಕ್ಕೆ ಕೊಂಡೊಯ್ದಿದೆ. ಆದರೆ, ಇಂತಹ ಅದ್ಭುತದ ಶಕ್ತ ಸಾಧನ, ತಪ್ಪು ಅಳವಡಿಕೆಗಳತ್ತ ವಾಲದಂತೆ ಕಾನೂನು ಕಾಯಿದೆಗಳೂ, ನಿಬಂಧನೆಗಳೂ ಬೇಕಾಗುತ್ತವೆ.
ರೋಗನಿವಾರಣೆಯ ಉದಾತ್ತ ಉದ್ದೇಶವೇ ಈ ಇಬ್ಬರು ವಿಜ್ಞಾನಿಗಳನ್ನು ‘ಕ್ರಿಸ್ಪರ್/ಕ್ಯಾಸ್ 9’ ವಂಶವಾಹಿ ಕತ್ತರಿಯನ್ನು ಕಂಡು ಹಿಡಿಯುವಲ್ಲಿ ಪ್ರೇರೇಪಿಸಿದ್ದು. ಇದನ್ನು ವಾಣಿಜ್ಯ ಕಾರಣಕ್ಕೆ ಬಳಸಿಕೊಳ್ಳಲು ಕಂಪನಿಗಳು ಧಾವಿಸಿ ಇವರ ಬಳಿಗೆ ಬಂದಾಗ ಈ ವಿಜ್ಞಾನಿಗಳಿಗೆ ದಿಗ್ಭ್ರಮೆ ಮತ್ತು ಆಘಾತ. ವಂಶವಾಹಿಯಲ್ಲಿರುವ ರೋಗಕಾರಕ ನ್ಯೂನತೆಗಳನ್ನು ಸರಿಪಡಿಸುವುದು ಮಾನವೀಯ ಉದ್ದೇಶ. ಆದರೆ ಬಿಳಿಯ ಬಣ್ಣದ, ಎತ್ತರದ, ಗಂಡು ಮಗುವನ್ನು ಪಡೆಯುವ, ‘ಡಿಸೈನರ್ ಮಗು’ವನ್ನು ಸೃಷ್ಟಿಸುವತ್ತ ಕಂಪನಿಗಳು ನುಗ್ಗಿದರೆ, ವರ್ಣಭೇದ, ಲಿಂಗತಾರತಮ್ಯದ ಸಮಾಜಗಳಲ್ಲಿ ಮಾನವ ಸಮತೋಲನವೇ ಪಲ್ಲಟವಾಗಬಲ್ಲದು. ಹಾಗೆಂದೇ, ಹೊಸ ತಂತ್ರಜ್ಞಾನದ ಎಲ್ಲ ಬಗೆಯ ಸಾಧ್ಯತೆಗಳನ್ನು ಪರಾಮರ್ಶಿಸಿ ಮಾನವೀಯ ಸಾಧ್ಯತೆಗಳಿಗೆ ಮಾತ್ರ ಹಾದಿ ಮಾಡಿಕೊಡುವ ಹೊಸದಾದ ಕಾನೂನು, ಕಾಯಿದೆಗಳು ಬೇಕಾಗುತ್ತವೆ.
ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಮುನ್ನಡೆಯನ್ನು ತಡೆಯಬಾರದು, ತಡೆಯಲಾಗದು ಕೂಡ. ಆದರೆ ಅವನ್ನು ಏತÀಕ್ಕೆ ಬಳಸುತ್ತೇವೆ ಎಂಬ ಬಗ್ಗೆ ಎಚ್ಚರವಿರಬೇಕು. ಇಲ್ಲಿ ನಾನು ಯುರೇನಿಯಂ ವಿದಲನವನ್ನು ವಿವರಿಸಿದ ಮಹಿಳಾ ವಿಜ್ಞಾನಿ ಲೀಸ್ ಮೈಟ್ನರ್, ಅಣ್ವಸ್ತ್ರ ತಯಾರಿಸಲು ನಿರಾಕರಿಸಿದ ವಿಷಯವನ್ನು ಹೇಳಲೇ ಬೇಕು. ಈಕೆ ನೊಬೆಲ್ ವಂಚಿತ ಮಹಿಳೆಯರಲ್ಲಿ ಮುಖ್ಯವಾದವರು.
ಲೀಸ್ ಮೈಟ್ನರ್
ಇಸವಿ 1878ರಲ್ಲಿ ಹುಟ್ಟಿದ ಲೀಸ್ ಮೈಟ್ನರ್ ಮೇಧಾವಿ ಭೌತಶಾಸ್ತ್ರಜ್ಞೆ. ಬರ್ಲಿನ್‍ನ ‘ಕೈಸರ್ ವಿಲ್ಹೆಮ್ ಇನ್‍ಸ್ಟಿಟ್ಯೂಟ್’ನಲ್ಲಿ ವಿಕಿರಣಶೀಲ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದವರು. ಪ್ರೊಟಾಕ್ಟಿನಿಯಮ್ ಮೂಲ ಧಾತುವನ್ನು ಕಂಡು ಹಿಡಿದ ಈಕೆ, ನಂತರ ಯುರೇನಿಯಂ ವಿಭಜನೆಯನ್ನೂ ವಿವರಿಸಿದರು. ಭೌತವಿಜ್ಞಾನಿಯಾದ ಲೀಸ್ ಮೈಟ್ನರ್ ಹಾಗೂ ರಸಾಯನಶಾಸ್ತ್ರಜ್ಞರಾದ ಆಟೋ ಹಾನ್ ಮತ್ತು ಫ್ರಿಟ್ಸ್ ಸ್ಟ್ರಾಸ್‍ಮನ್, ನಾಲ್ಕು ವರ್ಷಗಳ ಸಂಶೋಧನೆಯ ಅಂಚಿಗೆ ಯುರೇನಿಯಂ ವಿದಲನವನ್ನು ಕಂಡು ಹಿಡಿದರು. ಆದರೆ ಹಿಟ್ಲರನ ಆಳ್ವಿಕೆಯ ಕಾಲದಲ್ಲಿ, ಈಕೆ ನಾಜಿ ಭಯದಲ್ಲಿ ಜರ್ಮನಿಯನ್ನು ತೊರೆದು ಹೋಗಬೇಕಾಯಿತು. ಇಸವಿ 1944ರಲ್ಲಿ ಆಕೆಯ ಜೊತೆಯಲ್ಲಿ ಕೆಲಸ ಮಾಡಿದ ಆಟೋ ಹಾನ್‍ಗೆ ನೊಬಲ್ ಪಾರಿತೋಷಕ ದೊರೆಯಿತು. ಸರಿ ಸಮಾನವಾಗಿ ದುಡಿದ, ಆರಂಭದ ಸಂಶೋಧನೆಯ ಮುಂದಾಳತ್ವವನ್ನು ವಹಿಸಿದ್ದ ಲೀಸ್ ಮೈಟ್ನರ್‍ಳ ಹೆಸರೇ ಇರಲಿಲ್ಲ. ಪರಮಾಣು ವಿಭಜನೆಯಲ್ಲಿ ಮೊಟ್ಟ ಮೊದಲಿಗಳಾದರೂ ಈ ವಿಜ್ಞಾನಿ ಅಣುಬಾಂಬ್ ತಯಾರಿಸಲು ನಿರಾಕರಿಸಿದರು.

ನ್ಯೂಕ್ಲಿಯರ್ ವಿದಲನವನ್ನು ಮೊಟ್ಟಮೊದಲಿಗೆ 1939ರಲ್ಲಿ ಲೀಸ್ ಮೈಟ್ನರ್ ವಿವರಿಸಿದ್ದರು. ಆಕೆ ವಿವರಿಸಿದ ನಂತರ ಆಟೋ ಹಾನ್, ಜರ್ಮನ್ ಪತ್ರಿಕೆಯಲ್ಲಿ ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ತನ್ನ ಹಾಗೂ ಸ್ಟ್ರಾಸ್‍ಮನ್ ಹೆಸರಿನಲ್ಲಿ ಪ್ರಕಟಿಸಿದ್ದರು. ಹಿಟ್ಲರನ ಆಡಳಿತದ ಆ ಸಮಯದಲ್ಲಿ ಯಹೂದಿಯಾದ ಲೀಸ್ ಮೈಟ್ನರ್ ಹೆಸರು ಸೇರಿಸುವುದು ಅಸಂಭವವಾಗಿತ್ತು. ಕೆಲವೇ ವಾರಗಳ ನಂತರ ಮೈಟ್ನರ್ ಪರಮಾಣು ವಿದಲನದ ವಿವರಣೆಯನ್ನು ಬ್ರಿಟನ್ನಿನ ಪ್ರತಿಷ್ಠಿತ ‘ನೇಚರ್’ ಪತ್ರಿಕೆಯಲ್ಲಿ ಪ್ರಕಟಿಸಿದರು. ಆದರೆ ಚರಿತ್ರೆಯ ಈ ಸಮಯದ ಲಾಭವನ್ನು ಪಡೆದ ಹಾನ್, ಪರಮಾಣು ವಿದಲನ ತನ್ನೊಬ್ಬನ ಸಂಶೋಧನೆಯ ಫಲಿತಾಂಶ ಎಂದು ಸಾರಿದ. 1944ರಲ್ಲಿ ಆಟೋ ಹಾನ್‍ಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು. ಲೀಸ್ ಮೈಟ್ನರ್ ಬರ್ಲಿನ್ ಬಿಟ್ಟು ಹೋದ ನಂತರ ತಾನು ಮಾಡಿದ ರಾಸಾಯನಿಕ ಪ್ರಯೋಗಗಳಿಂದ ಪರಮಾಣು ವಿದಲನವನ್ನು ಕಂಡು ಹಿಡಿಯುವುದು ಸಾಧ್ಯವಾಯಿತು ಎಂದು ಸಾರಿದ. ಆತ ಹೇಳಿದ್ದೇ ಸತ್ಯವಾಯಿತು. ತನ್ನ ಅನ್ವೇಷಣೆಗೆ ‘ಭೌತವಿಜ್ಞಾನ ಅಥವಾ ಭೌತವಿಜ್ಞಾನಿಯ ಯಾವ ಸಹಾಯವೂ ಇರಲಿಲ್ಲ’ ಎಂದು ಹೇಳಿದ.

ಆದರೆ ಆಟೋ ಹಾನ್ ಮತ್ತು ಲೀಸ್ ಮೈಟ್ನರ್ ಅವರ ಜೊತೆಯಲ್ಲಿ ಸಂಶೋಧನೆ ನಡೆಸಿದ್ದ ಸ್ಟ್ರಾಸ್‍ಮನ್ ಈ ಹೇಳಿಕೆಗಳನ್ನು ಸಂಪೂರ್ಣವಾಗಿ ನಿರಾಕರಿಸಿದರು. ಅವರ ಸಹಸಂಶೋಧನೆಯಲ್ಲಿ ‘ಲೀಸ್ ಮೈಟ್ನರ್ ಮುಂದಾಳತ್ವ ವಹಿಸಿದ್ದ ವಿಜ್ಞಾನಿ, ಆಕೆ ಜರ್ಮನಿ ಬಿಟ್ಟುಹೋದ ಮೇಲೂ ಪತ್ರಗಳ ಮೂಲಕ ತಮ್ಮ ಸಂಶೋಧನೆಗೆ ನೆರವಾಗಿದ್ದರು’ ಎಂದು ಅವರು ತಿಳಿಸಿದರು. ಚರಿತ್ರೆಯ ಆಳದಲ್ಲಿ ಎಲ್ಲಿಯೋ ಮುಚ್ಚಿಹೋಗಿದ್ದ ಈ ಸತ್ಯ, ದಶಕ ದಶಕಗಳ ನಂತರ ಬೆಳಕು ಕಂಡಿತು. ಅವರ ನಡುವಿನ ಪತ್ರಗಳು ಮೈಟ್ನರ್ ಈ ಸಂಶೋಧನೆಗೆ ಜರ್ಮನಿ ಬಿಟ್ಟ ನಂತರವೂ ನೆರವಾದ ಪರಿಯನ್ನು ತೆರೆದಿಟ್ಟವು. ಆಕೆಯ ಜೀವಿತಕಾಲದಲ್ಲಿ ಆಕೆಗೆ ನ್ಯಾಯವಾಗಿ ಸಲ್ಲಬೇಕಿದ್ದ ಗೌರವ ಪ್ರಶಸ್ತಿಗಳು ದೊರೆಯಲಿಲ್ಲ. ಇಸವಿ 1992ರಲ್ಲಿ 109ನೇ ಮೂಲಧಾತುವಿಗೆ ‘ಮೈಟ್ನಿರಿಯಮ್’ ಎಂದು ಹೆಸರು ನೀಡಿ ಲೀಸ್ ಮೈಟ್ನರ್‍ಗೆ ಚಿರಗೌರವ ಸಲ್ಲಿಸಲಾಗಿದೆ.

ಸೆಪ್ಟೆಂಬರ್ 1, 1939, ಮೈಟ್ನರ್ ಯುರೇನಿಯಂ ವಿದಲನವನ್ನು ಕುರಿತ ತನ್ನ ಪ್ರಬಂಧವನ್ನು ಪ್ರಕಟಿಸಿದ ಕೆಲವೇ ತಿಂಗಳು, ಎರಡನೇ ಮಹಾಯುದ್ಧ ಆರಂಭವಾಯಿತು. ಮೈಟ್ನರ್ ಅಧ್ಯಯನ ತಿಳಿಸಿದ ಆ ಅಗಾಧ ಶಕ್ತಿಯನ್ನು ವಿಧ್ವಂಸಕ ಅಸ್ತ್ರವಾಗಿ ಪರಿವರ್ತಿಸಲು ಸ್ಪರ್ಧೆಯೇ ನಡೆಯಿತು. ಲೀಸ್ ಮೈಟ್ನರ್ ಅಣ್ವಸ್ತ್ರ ತಯಾರಿಸಲು ಸಿದ್ಧವಿರಲಿಲ್ಲ. ಅಮೆರಿಕೆಯ ಅಣ್ವಸ್ತ್ರ ತಯಾರಿಕೆಯ ‘ಮ್ಯಾನ್‍ಹ್ಯಾಟನ್ ಯೋಜನೆ’ಯಲ್ಲಿ ಕೆಲಸ ಮಾಡಲು ಆಕೆಯನ್ನು ಆಹ್ವಾನಿಸಲಾಯಿತು. ಆದರೆ ಅಣ್ವಸ್ತ್ರ ತಯಾರಿಸಲು ಸಂಪೂರ್ಣ ನಿರಾಕರಿಸಿದ ಮೈಟ್ನರ್, ಅಮೆರಿಕೆಯ ಯುದ್ಧದಾಹದ ಸಂಶೋಧನೆಗಳಿಂದ ಸಂಪೂರ್ಣ ದೂರ ಉಳಿದರು. ‘ತಾನೆಂದೂ ಇಂಥಾ ಅಗಾಧ ಶಕ್ತಿಯ ವಿಧ್ವಂಸಕ ಉಪಯೋಗದ ಪರವಿಲ್ಲ’ ಎಂದು ಸ್ಪಷ್ಟವಾಗಿ ಸಾರಿದರು. ಸ್ಟ್ರಾಸ್‍ಮನ್ ಕೂಡಾ ಅಣ್ವಸ್ತ್ರ ತಯಾರಿಸಲು ಸಿದ್ಧವಿರಲಿಲ್ಲ. ಆತ ನಾಜಿ ಪಾರ್ಟಿಯನ್ನು ಸೇರಲು ನಿರಾಕರಿಸಿದ್ದರು. ‘ನನ್ನ ಕೆಲಸ ಹಿಟ್ಲರ್‍ಗೆ ಅಣ್ವಸ್ತ್ರ ಒದಗಿಸುವುದಾದರೆ, ನನ್ನನ್ನು ನಾನು ಕೊಂದುಕೊಳ್ಳುತ್ತೇನೆ’ ಎಂದು ಹೇಳಿದ್ದರು. ಆದರೆ ಆಟೋ ಹಾನ್ ಜರ್ಮನಿಯ ಅಣ್ವಸ್ತ್ರ ಯೋಜನೆಯಲ್ಲಿ ಕೆಲಸ ಮಾಡಿದರು.

ನೊಬೆಲ್ ವಂಚಿತ ಮಹಿಳಾ ವಿಜ್ಞಾನಿಗಳು
ನೊಬೆಲ್ ಪ್ರಶಸ್ತಿ ವಿಜೇತ ಮಹಿಳಾ ವಿಜ್ಞಾನಿಗಳ ಸಂಖ್ಯೆ ಎಷ್ಟು ಸಣ್ಣದು ಎಂದು ಅರಿವಾಗಿತ್ತು. ಮತ್ತಷ್ಟು ಆಳಕ್ಕೆ ಇಳಿದಂತೆ, ನೊಬೆಲ್ ವಂಚಿತ ಮಹಿಳಾ ವಿಜ್ಞಾನಿಗಳ ಸಂಖ್ಯೆ ಉದ್ದವಿದೆ ಎಂಬ ಸೂಚನೆಯೂ ಹೊಳೆಯಿತು. ಲೀಸ್ ಮೈಟ್ನರ್ ಒಬ್ಬಾಕೆಯಲ್ಲ, ನೊಬೆಲ್ ವಂಚಿತಳಾದದ್ದು.
ಈ ವರ್ಷ ಇಬ್ಬರು ಮಹಿಳೆಯರಿಗೆ ಜೆನಿಟಿಕ್ ರಂಗದ ಸಂಶೋಧನೆಗೆ ನೊಬೆಲ್ ಬಂದಿರುವುದು, ಈ ರಂಗದ ಅತ್ಯಂತ ಮೂಲಾಧಾರವಾದ ಸಂಶೋಧನೆಯನ್ನು ನಡೆಸಿಯೂ ಅಜ್ಞಾತಳಾಗಿ ಉಳಿದ ಮಹಿಳಾ ವಿಜ್ಞಾನಿ ರೋಸಲಿಂಡ್ ಫ್ರಾಂಕ್ಲಿನ್‍ಗೆ ಒಂದು ರೀತಿಯಲ್ಲಿ ಗೌರವ ಸೂಚಿಸಿದ ಹಾಗೆ ಎಂದು ನಾನು ಭಾವಿಸುತ್ತೇನೆ. ನಿಜಕ್ಕೂ ರೋಸಲಿಂಡ್ ಫ್ರಾಂಕ್ಲಿನ್ ಅನ್ನು ‘ಜೆನಿಟಿಕ್ ರಂಗದ ಆದಿಮಾತೆ’ ಎಂದು ಕರೆಯಬೇಕು. ಆದರೆ ಆಕೆ ನೊಬೆಲ್‍ನಿಂದ ವಂಚಿತಳಾದಳು. ಈ ಜೆನೆಟಿಕ್ ರಂಗದ ಮೂಲ ನಮ್ಮ ದೇಹದ ಪ್ರತಿಯೊಂದು ಜೀವಕೋಶದಲ್ಲಿರುವ, ನಮ್ಮ ವಂಶವಾಹಿಗಳ ನಕಾಶೆಯನ್ನು ಹೊತ್ತ ಡಿ.ಎನ್.ಎ ರಚನೆಯಲ್ಲಿದೆ.

ಇಂದು ಜೆನೆಟಿಕ್ ರಂಗ, ಕ್ಲೋನಿಂಗ್ ತನಕವೂ ತಲುಪಿದೆ. ಮನುಷ್ಯನ ದೇಹದ ನೀಲಿ ನಕಾಶೆ – ‘ಹ್ಯೂಮನ್ ಜೀನೋಮ್’ ಸಿದ್ಧವಾಗಿ ಎರಡು ದಶಕಗಳಾಗಿದೆ. ಇಂದು ‘ವಂಶವಾಹಿ ಕತ್ತರಿ’ ಕೂಡಾ ಸಿದ್ಧವಾಗಿ ‘ಜೀನೋಮ್ ಎಡಿಟಿಂಗ್’ ಸಾಧ್ಯವಾಗಿದೆ. ಇಷ್ಟೆಲ್ಲ ಸಾಧ್ಯತೆಯ ಜೆನಿಟಿಕ್ ರಂಗಕ್ಕೆ ಅಡಿಪಾಯ ಹಾಕಿದವರಾಗಿ ವ್ಯಾಟ್ಸನ್ ಮತ್ತು ಕ್ರಿಕ್ ಅವರ ಹೆಸರುಗಳು ಪತ್ರಿಕೆಯಲ್ಲಿ ಧಾರಾಳವಾಗಿ ಕೇಳಿ ಬಂದಿವೆ. 1953ರಲ್ಲಿ ಡಿ.ಎನ್.ಎ. ರಚನೆಯನ್ನು ಕಂಡು ಹಿಡಿದ ವಿಜ್ಞಾನಿಗಳಾಗಿ, ಇವರಿಗೆ 1962ರಲ್ಲಿಯೇ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಈ ಎಲ್ಲ ಸಡಗರದ ನಡುವೆ ಡಿ.ಎನ್.ಎ. ರಚನೆಯನ್ನು ಕಂಡು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳಾ ವಿಜ್ಞಾನಿ, ರೋಸಲಿಂಡ್ ಫ್ರಾಂಕ್ಲಿನ್ ಹೆಸರು ನಮಗೆಲ್ಲೂ ಕೇಳಿ ಬರುವುದಿಲ್ಲ.

ರೋಸಲಿಂಡ್ ಫ್ರಾಂಕ್ಲಿನ್

ಮೂರೂವರೆ ದಶಕಗಳ ಹಿಂದೆ ‘ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಯನ್ಸ್’ನ ಗ್ರಂಥಾಲಯದಲ್ಲಿ ವಿಜ್ಞಾನಿ ವ್ಯಾಟ್ಸನ್ ಅವರ ‘ಡಬಲ್ ಹೆಲಿಕ್ಸ್’ ಪುಸ್ತಕ ಸಿಕ್ಕಿತ್ತು. ಡಿ.ಎನ್.ಎ ರಚನೆಯನ್ನು ಕಂಡುಹಿಡಿಯುವತ್ತ ಒಂದು ವೇಗದ ಸ್ಪರ್ಧೆಯೇ ಏರ್ಪಟ್ಟಂತೆ, ಆ ಪಂದ್ಯದಲ್ಲಿ ಗೆದ್ದು ನಿಂತ ತಮ್ಮ ವಿವರಗಳನ್ನು ಮುಚ್ಚುಮರೆಯಿಲ್ಲದೆ ಬಿಚ್ಚಿ ತೆರೆದಿಟ್ಟ ದಿಟ್ಟ ಪುಸ್ತಕವಾಗಿ ‘ಡಬಲ್ ಹೆಲಿಕ್ಸ್’ ಕಂಡಿತ್ತು. ಆದರೆ ಇಲ್ಲಿ ನನ್ನ ಗಮನ ಸೆಳೆದದ್ದು ರೋಸಲಿಂಡ್ ಫ್ರಾಂಕ್ಲಿನ್ ಅವರ ಚಿತ್ರಣ. ನನಗಾಗ ರೋಸಲಿಂಡ್ ಬಗ್ಗೆ ಈ ಪುಸ್ತಕ ಹೇಳುವುದಷ್ಟನ್ನು ಬಿಟ್ಟರೆ ಮತ್ತೇನೂ ತಿಳಿದಿರಲಿಲ್ಲ.

ಇಸವಿ 1920ರಲ್ಲಿ ಹುಟ್ಟಿದ ಬ್ರಿಟಿಷ್ ವಿಜ್ಞಾನಿ ರೋಸಾಲಿಂಡ್ ಫ್ರಾಂಕ್ಲಿನ್ ಅತ್ಯಂತ ಪ್ರತಿಭಾವಂತ ಕ್ರಿಸ್ಟಲೋಗ್ರಾಫರ್. ಆಕೆಯ ಕ್ಷ-ಕಿರಣ ಚಿತ್ರಗಳು ಡಿ.ಎನ್.ಎ.ಯ ‘ಜೋಡಿ ಸುರುಳಿ’ ರಚನೆಯನ್ನು ಕಂಡು ಹಿಡಿಯಲು ಮುಖ್ಯ ಸಾಧನವಾದವು. ರೋಸಲಿಂಡ್ ಕಟು ಪರಿಶ್ರಮದಿಂದ ಪಡೆದ ಸಂಶೋಧನಾ ಚಿತ್ರಗಳನ್ನು ಆಕೆಯ ಅನುಮತಿ ಇಲ್ಲದೆಯೇ ಪಡೆದು, ಅವುಗಳ ಆಧಾರದ ಮೇಲೆ ‘ಜೋಡಿ ಸುರುಳಿ’ ರಚನೆಯನ್ನು ಕಂಡು ಹಿಡಿದ ವ್ಯಾಟ್ಸನ್ ಮತ್ತು ಕ್ರಿಕ್, 1962ರಲ್ಲಿ ನೊಬಲ್ ಪಾರಿತೋಷಕ ಪಡೆದರು.

ರೋಸಲಿಂಡ್ ಫ್ರಾಂಕ್ಲಿನ್ ನೊಬೆಲ್ ಪಾರಿತೋಷಕ ಪಡೆದ ಬ್ರಿಟನ್ನಿನ ಪ್ರಥಮ ಮಹಿಳೆಯಾಗಬೇಕಿತ್ತು. ಡಿ.ಎನ್.ಎ.ಯ ರಚನೆಯನ್ನು ಕಂಡು ಹಿಡಿಯುವಲ್ಲಿ ಈಕೆಯ ಪಾತ್ರ ಅಪೂರ್ವದ್ದು. ಕ್ಷ-ಕಿರಣ ವಿವರ್ತನೆಯಲ್ಲಿ ಅಂದರೆ ‘ಎಕ್ಸ್-ರೇ ಡಿಫ್ರಾಕ್ಷನ್’ನಲ್ಲಿ ಅದ್ಭುತ ಪರಿಣತಿಯನ್ನು ಸಾಧಿಸಿ ಈ ವಿಜ್ಞಾನಿ ಇದೇ ತಂತ್ರವನ್ನು ಡಿ.ಎನ್.ಎ ರಚನೆಯ ಅಧ್ಯಯನಕ್ಕೆ ಬಳಸಿದರು. ರೋಸಲಿಂಡ್ ಡಿ.ಎನ್.ಎ.ಯ ‘ಜೋಡಿ ಸುರುಳಿ’ -ಡಬಲ್ ಹೆಲಿಕ್ಸ್- ರಚನೆಗೆ ಅತಿ ಹತ್ತಿರವಿದ್ದ ಸಮಯ. ಆದರೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಇದೇ ವಿಷಯವನ್ನು ಕುರಿತು ಸಂಶೋಧನೆ ನಡೆಸುತ್ತಿದ್ದ ವ್ಯಾಟ್ಸನ್ ಮತ್ತು ಕ್ರಿಕ್ ಅವರಿಗೆ, ಈಕೆಯ ಸಂಶೋಧನಾ ಪ್ರಬಂಧಗಳನ್ನು, ದತ್ತಾಂಶಗಳನ್ನು, ಕ್ಷ-ಕಿರಣ ವಿವರ್ತನಾ ಚಿತ್ರಗಳನ್ನು ಈಕೆಗೆ ತಿಳಿಯದಂತೆ ತೋರಿಸಲಾಗಿತ್ತು. ಈ ಚಿತ್ರಗಳ ಆಧಾರದ ಮೇಲೆ ಡಿ.ಎನ್.ಎ.ಯ ಜಂಟಿ ಸುರುಳಿ ರಚನೆಯನ್ನು ಈಕೆಗಿಂತ ಮೊದಲೇ ಕಂಡು ಹಿಡಿದ ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಅವರಿಗೆ ನೊಬೆಲ್ ಪಾರಿತೋಷಕ ದೊರೆಯಿತು. ಆ ಹೊತ್ತಿಗೆ ರೋಸಲಿಂಡ್ ಕ್ಯಾನ್ಸರಿನಿಂದ ತೀರಿಕೊಂಡಿದ್ದರು.

ತಮ್ಮ ಸಂಶೋಧನೆಯ ಯಶಸ್ಸಿಗೆ ಮೂಲ ಕಾರಣವಾದ ರೋಸಲಿಂಡ್ ಅವರ ದತ್ತಾಂಶಗಳಿಗೆ ಕೃತಜ್ಞತೆ ವ್ಯಕ್ತ ಪಡಿಸುವ ಬದಲು, ವ್ಯಾಟ್ಸನ್ ತಾನು ಬರೆದ ‘ಡಬಲ್ ಹೆಲಿಕ್ಸ್’ ಪುಸ್ತಕದಲ್ಲಿ ಅದಾಗಲೇ ಮೃತಳಾಗಿದ್ದ ರೋಸಲಿಂಡ್ ಅವರನ್ನು ಹಟಮಾರಿ ಹೆಣ್ಣಾಗಿ, ಕೆಟ್ಟ ರೀತಿಯಲ್ಲಿ ಚಿತ್ರಿಸಿದರು. ಆಕೆಯ ವೇಷಭೂಷಣ, ದಪ್ಪ ಕನ್ನಡಗಳನ್ನು ಟೀಕಿಸುತ್ತಾ ‘ತುಟಿಗೆ ಬಣ್ಣ ಕೂಡಾ ಹಚ್ಚದ, ಹೆಣ್ತನವೊಂದೂ ಕಾಣದ ಹೆಣ್ಣೆಂದು’ ಬಣ್ಣಿಸಿದರು. ಇಸವಿ 1986ರಲ್ಲಿ ‘ಡಿಸ್ಕವರ್’ ಪತ್ರಿಕೆಯಲ್ಲಿ ರೋಸಲಿಂಡ್ ಬಗ್ಗೆ ಮೊಟ್ಟ ಮೊದಲಿಗೆ ಓದಿದ ನನಗೆ, ಹೊರೇಸ್ ಫ್ರೀಲಾಂಡ್ ಜಡ್ಸನ್ ಅವರ ಲೇಖನ ‘ದಿ ಲೆಜೆಂಡ್ ಆಫ್ ರೋಸಲಿಂಡ್’ ಓದುವ ಅವಕಾಶ ದೊರೆಯಿತು. ‘ಡಿ.ಎನ್.ಎ. ರಚನೆಯನ್ನು ಕಂಡು ಹಿಡಿಯುವ ಪಂದ್ಯದಲ್ಲಿದ್ದ ಏಕೈಕ ಮಹಿಳಾ ವಿಜ್ಞಾನಿಯನ್ನು ನೊಬೆಲ್ ಪ್ರಶಸ್ತಿಯಿಂದ ವಂಚಿಸಲಾಯಿತೆ?’ ಎಂಬ ಪ್ರಶ್ನೆಯನ್ನು ಜಡ್ಸನ್ ಎತ್ತಿದ್ದರು. ಇದೀಗ ರೋಸಲಿಂಡ್ ನನ್ನ ಆಸಕ್ತಿ, ಅಧ್ಯಯನದ ವಿಷಯವಾದರು. ‘ನೇಚರ್’ ಪತ್ರಿಕೆಯಲ್ಲಿ ಬಂದ ಈ ಸಂಶೋಧನೆಯ ಮೂಲ ಪ್ರಬಂಧಗಳನ್ನು, ವಾದ ವಿವಾದಗಳನ್ನು ಅಷ್ಟೂ ಹುಡುಕಿ ಸಂಗ್ರಹಿಸಿದ್ದೆ.

ಆಕೆಯ ಸಂಶೋಧನಾ ಬುದುಕಿನ ಚಿತ್ರ ಸ್ಪಷ್ಟವಾಗಿ ಮೂಡಿದರೂ, ಆಕೆಯ ವೈಯಕ್ತಿಕ ಬದುಕು, ಹೋರಾಟದ ವಿವರಗಳು ದೊರೆಯಲಿಲ್ಲ. ರೋಸಲಿಂಡ್ ಫ್ರಾಂಕ್ಲಿನ್ ಡಿ.ಎನ್.ಎ. ಕುರಿತು ಸಂಶೋಧನೆ ನಡೆಸಿದ ಲಂಡನ್ನಿನ ‘ಕಿಂಗ್ಸ್ ಕಾಲೇಜಿ’ಗೆ ಇಸವಿ 1997ರಲ್ಲಿ ಭೆಟ್ಟಿ ಇತ್ತರೂ ಹೆಚ್ಚಿನ ವಿವರಗಳು ತಿಳಿದುಬರಲಿಲ್ಲ. ಆದರೆ ಚಾರಿಂಗ್ ರಸ್ತೆಯಲ್ಲಿದ್ದ ಮಹಿಳಾ ವಿಷಯಕ್ಕೇ ಮೀಸಲಾದ ‘ಸಿಲ್ವರ್ ಮೂನ್’ ಪುಸ್ತಕದ ಅಂಗಡಿಯಲ್ಲಿ ನನಗೆ ರೋಸಲಿಂಡ್ ಬಗ್ಗೆ ಪ್ರಕಟವಾದ ಏಕೈಕ ಪುಸ್ತಕ ಆನ್ ಸೈರ್ ಅವರ ‘ರೋಸಲಿಂಡ್ ಅಂಡ್ ಡಿ.ಎನ್.ಎ.’ ದೊರೆಯಿತು. ಇತಿಹಾಸದ ಮಂಜನ್ನು ಕರಗಿಸಿದ ಪುಸ್ತಕ ಇದು. ಆನ್ ಸೈರ್ ಹೇಳುವಂತೆ ‘ಗೆದ್ದವರು ಎಲ್ಲವನ್ನೂ ಬಾಚಿಕೊಂಡಿದ್ದರು’. ಇಂದು ರೋಸಲಿಂಡ್ ಅವರ ಬದುಕು ಮತ್ತು ಸಾಧನೆಯನ್ನು, ಗಂಡುರಂಗದಲ್ಲಿ ಹೆಣ್ಣು ಪಡುವ ಪಾಡಿನ ಶ್ರೇಷ್ಠ ಉದಾಹರಣೆಯಾಗಿ ಸ್ತ್ರೀವಾದಿಗಳು ಗುರುತಿಸಿದ್ದಾರೆ.

ರೋಸಲಿಂಡ್ ಫ್ರಾಂಕ್ಲಿನ್ ತನ್ನ 37ನೇ ವಯಸ್ಸಿನಲ್ಲಿ ಇಸವಿ 1958ರಲ್ಲಿ ತೀರಿಕೊಂಡರು. ಹೊಸ ತಾಂತ್ರಿಕ ಅನ್ವೇಷಣೆಗಳು ಮತ್ತು ನಿಖರವಾದ, ಖಚಿತವಾದ ತಂತ್ರಗಳನ್ನು ಸಂಕೀರ್ಣ ‘ಬೃಹದಣು’ಗಳ ಅಂದರೆ ‘ಮ್ಯಾಕ್ರೊ ಮಾಲೆಕ್ಯೂಲ್ಸ್’ಗಳ ಸಂಶೋಧನೆಯಲ್ಲಿ ಬಳಸಿದ್ದು ವಿಜ್ಞಾನಕ್ಕೆ ಈಕೆ ನೀಡಿದ ಮುಖ್ಯ ಕೊಡುಗೆ. ಆಕೆಯ ಎಲ್ಲ ಕೆಲಸದಲ್ಲಿ ನಿಖರತೆ ಮತ್ತು ಪರಿಪೂರ್ಣತೆ ಎದ್ದುಕಾಣುತ್ತಿತ್ತು. ಕ್ಯಾನ್ಸರಿನಿಂದ ನರಳುತ್ತಿದ್ದರೂ, ಸಾವು ನಿಕಟವಿದೆ ಎಂಬ ಅರಿವಿದ್ದರೂ, ಕೊನೆಯ ದಿನದವರೆಗೂ ದುಡಿದ ಮಹಾನ್ ವಿಜ್ಞಾನಿ, ರೋಸಲಿಂಡ್ ಫ್ರಾಂಕ್ಲಿನ್. ತನ್ನ ಸಾವಿನ ಹೊತ್ತಿಗಾಗಲೇ ಈಕೆ ಕೈಗಾರಿಕಾ ರಸಾಯನಶಾಸ್ತ್ರಜ್ಞೆಯಾಗಿಯೂ, ಅಣು ಜೀವಶಾಸ್ತ್ರಜ್ಞೆಯಾಗಿಯೂ ಆಗಿ, ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರೂ, ರೋಸಲಿಂಡ್ ಅವರ ಮೇಧಾವಿತನಕ್ಕೆ ತಕ್ಕ ಪುರಸ್ಕಾರ ದೊರೆತಿರಲಿಲ್ಲ. ಮತ್ತೆ ನಾಲ್ಕು ವರ್ಷಗಳ ಕಾಲ ಬದುಕಿದ್ದರೆ ಬಹುಶಃ ನೊಬೆಲ್ ಪಾರಿತೋಷಕದಲ್ಲಿ ಭಾಗಿಯಾಗುತ್ತಿದ್ದ ಈಕೆ, ತನ್ನ ಅಕಾಲ ಸಾವಿನಲ್ಲಿ ಅಜ್ಞಾತಳಾದಳು.

ಆನ್ ಸೈರ್ ಅವರ ಪುಸ್ತಕ ವಿಜ್ಞಾನ ರಂಗದಲ್ಲಿ ಕಡೆಗಾದರೂ ರೋಸಲಿಂಡ್‍ಗೆ ಸಲ್ಲಬೇಕಾದ ಜಾಗವನ್ನು ನೀಡುವತ್ತ ಶ್ರಮಿಸುತ್ತದೆ. ‘ವ್ಯಾಟ್ಸನ್’ ಅವರ ಪುಸ್ತಕದಲ್ಲಿ ರೋಸಲಿಂಡ್ ಸಿಡುಕಿನ ಸ್ತ್ರೀವಾದಿಯಾಗಿ ಕಾಣುತ್ತಾರೆÉ. ‘ಈ ಪುಸ್ತಕದ ತುಂಬ, ಅತಿ ಸೂಕ್ಷ್ಮ ಸುಳ್ಳುಗಳು ಒಂದಕ್ಕೊಂದು ಹೆಣೆದುಕೊಂಡು ನಿರ್ದಿಷ್ಟ ದಿಕ್ಕಿನತ್ತ ಸಗುತ್ತವೆ. ಅವೆಲ್ಲವೂ ನಿಜವಲ್ಲದ, ವಿಜ್ಞಾನಿ ರೋಸಲಿಂಡ್ ಫ್ರಾಂಕ್ಲಿನ್‍ಗೆ ಯಾವ ರೀತಿಯೂ ಹೊಂದದ, ‘ಹಟಮಾರಿ ರೋಸಿ’ಯ ಕಾಲ್ಪನಿಕ ಪಾತ್ರವನ್ನು ಸೃಷ್ಟಿಸುತ್ತದೆ. ವೈಜ್ಞಾನಿಕ ಪತ್ರಿಕೆಗಳಲ್ಲಿ, ಜನಪ್ರಿಯ ಮಾಧ್ಯಮಗಳಲ್ಲಿ ರೋಸಲಿಂಡ ಅವರÀ ವ್ಯಕ್ತಿತ್ವವನ್ನು, ಆಕೆಯ ಕೊಡುಗೆಯನ್ನು, ಒಂದೋ ಉದಾಸೀನದಿಂದ ನೋಡಿದ್ದಾರೆ, ಇಲ್ಲವೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಇವೆರಡಕ್ಕೂ ಮೂಲ ಸಾಮಗ್ರಿ ಒದಗಿಸಿರುವುದು, ವ್ಯಾಟ್ಸನ್. ಆಕೆಯ ಹಟಮಾರಿ ಸ್ವಭಾವ ‘ಆಂಟಿ ಹೆಲಿಕಲ್’ ಬಲೆಯಲ್ಲಿ ಸಿಕ್ಕಿಕೊಂಡಿತ್ತು ಎಂಬುದು ಕೇವಲ ವ್ಯಾಟ್ಸನ್ ಅವರ ಭ್ರಮೆಯಾಗಿತ್ತು. ಹೆಲಿಕಲ್ ಸಿದ್ಧಾಂತ ತನ್ನೊಬ್ಬನದೆಂದು ಸಾರುವ, ತನ್ನ ಮೇಧಾವಿತನವನ್ನು ಕೊಚ್ಚಿಕೊಳ್ಳುವ ಅಪರೋಕ್ಷ ಬಗೆಯಾಗಿತ್ತು’ ಎಂದು ಆನ್ ಸೈರ್ ತೀವ್ರವಾಗಿ ಟೀಕಿಸಿದ್ದಾರೆ.

‘ನಿಜ ರೋಸಲಿಂಡ್ ಪಂದ್ಯದಲ್ಲಿ (ಅಲ್ಲೊಂದು ಡಿ.ಎನ್.ಎ. ರಚನೆಯನ್ನು ಕಂಡುಹಿಡಿಯಲು ಪಂದ್ಯ ಇತ್ತೆಂದು ಭಾವಿಸುವುದಾದರೆ) ಸೋತಿದ್ದರು. ಆದರೆ ಸೋತದ್ದು ಅಲ್ಪ ಅಂತರದಲ್ಲಿ. ಒಂದು ನಿಮಿಷ ಯೋಚಿಸಿ, ರೋಸಲಿಂಡ್ ಅವರÀ ಚಿತ್ರಗಳು, ದತ್ತಾಂಶಗಳು ದೊರೆಯದಿದ್ದರೆ, ತಮ್ಮದೇ ಪ್ರಯೋಗ ಮತ್ತು ಮಾಹಿತಿಯನ್ನು ಸೃಷ್ಟಿಸಿಕೊಳ್ಳುವಂತಿದ್ದರೆ, ವ್ಯಾಟ್ಸನ್ ಮತ್ತು ಕ್ರಿಕ್ ಈ ಸಂಶೋಧನೆಗೆ ಎಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತಿದ್ದರು? ಪಂದ್ಯದಲ್ಲಿ ಗೆಲ್ಲುತ್ತಿದ್ದರೆ?’ ಎಂಬೆಲ್ಲ ಪ್ರಶ್ನೆಗಳನ್ನು ಆನ್ ಸೈರ್ ಎತ್ತುತ್ತಾರೆ.

ರೋಸಲಿಂಡ್ ಸತ್ತು ದಶಕಗಳೇ ಆಗಿದ್ದರೂ, ವ್ಯಾಟ್ಸನ್ ಅವರ ಜೀವಿತ ಕಾಲದಲ್ಲಿಯೇ ಆಕೆಯ ಸಂಶೋಧನೆಗೆ ನ್ಯಾಯ ಒದಗಿಸುವ ಪ್ರಯತ್ನ ನಡೆದದ್ದು ಮಹಿಳಾ ವಿಜ್ಞಾನಿಗಳಿಗೆ ಒಂದಿಷ್ಟು ಸಮಾಧಾನ ತರುವ ವಿಷಯ. ಆದರೆ ಇಂದಿಗೂ, ನಮ್ಮ ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆಯ ತುದಿಯಲ್ಲಿ ನಿಂತಿರುವ ‘ಡಬಲ್ ಹೆಲಿಕ್ಸ್’ ಸ್ಮಾರಕ ಶಿಲ್ಪದ ಅಡಿಯಲ್ಲಿ, ಈಗಲೂ ಕೇವಲ ವ್ಯಾಟ್ಸನ್ ಮತ್ತು ಕ್ರಿಕ್ ಅವರ ಹೆಸರಿದೆ. ಅಲ್ಲಿ ರೊಸಲಿಂಡ್ ಫ್ರಾಂಕ್ಲಿನ್ ಹೆಸರು ನ್ಯಾಯವಾಗಿ ಸೇರಬೇಕಿದೆ.

ವಿಜ್ಞಾನ ರಂಗದಲ್ಲಿಯ ಲಿಂಗ ತಾರತಮ್ಯ ಕಳೆಯಲಿ, ಹೆಣ್ಣು ಮಕ್ಕಳಿಗೆ ಆತ್ಮವಿಶ್ವಾಸದ ಮಾದರಿಗಳಾಗಿ ಈ ಎಲ್ಲ ಮಹಿಳಾ ವಿಜ್ಞಾನಿಗಳು ಪ್ರೇರಣೆ ನೀಡಲಿ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *