ಸಾಧನಕೇರಿ / ಹೆಣ್ಣುಮಕ್ಕಳಿಗೆ ಶಕ್ತಿ ತುಂಬಿದ `ಮುಕ್ತಿ ಸದನ’ – ಗಿರಿಜಾ ಶಾಸ್ತ್ರಿ
ಬಾಲ ವಿಧವೆಯರ ಶಿಕ್ಷಣದ ಕನಸು ಕಂಡ ಹಾಗೂ ಬಾಲ್ಯವಿವಾಹದ ವಿರುದ್ಧ ಸಿಡಿದೆದ್ದ ಪಂಡಿತಾ ರಮಾಬಾಯಿ ಸರಸ್ವತಿ, ಪುರುಷ ಕೇಸರಿಗಳ ವಿರೋಧಗಳ ನಡುವೆ ಅವರಿಗೆ ಸೆಡ್ಡು ಹೊಡೆದು ನಿಂತರು. ಅನೇಕ ಪ್ರಥಮಗಳ ಮಹಿಳೆ ರಮಾಬಾಯಿಯವರ ಸಾಧನೆಗಳು ಬೆರಗು ಹುಟ್ಟಿಸುತ್ತವೆ. ನೊಂದ ಹೆಣ್ಣು ಮಕ್ಕಳ ಬವಣೆ ನೀಗಲು ಪುಣೆಯಲ್ಲಿ ಅವರು ಸ್ಥಾಪಿಸಿದ `ಮುಕ್ತಿ ಸದನ’ ಕ್ಕೆ ನೀಡುವ ಭೇಟಿಯೇ ಒಂದು ಭಾವನಾತ್ಮಕ ಅನುಭವ
ಮುಕ್ತಿ ಸದನ ! ಹೆಸರೇ ಎಲ್ಲವನ್ನೂ ಹೇಳುತ್ತದೆ. ಬಾಲ ವಿಧವೆಯರ ಮುಕ್ತಿಗಾಗಿ ಮತ್ತು ಬಾಲ್ಯವಿವಾಹ ಪದ್ದತಿಯನ್ನು ವಿರೋಧಿಸುವುದಕ್ಕಾಗಿ ಹುಟ್ಟಿಕೊಂಡ ಒಂದು ಮಿಷನ್. ಪುಣೆಯ ಕೇಡ್ ಗಾಂವ್ ಬಳಿಯಲ್ಲಿರುವ ಈ ಮುಕ್ತಿಶಾಲೆ ೧೮೮೯ ಮಾರ್ಚ್ ಹನ್ನೊಂದರಂದು ಸ್ಥಾಪನೆಯಾಯಿತು. ಈ ‘ಮುಕ್ತಿ ಸದನ’ ಸು. ೧೨೦ ಎಕರೆಗಳ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ನಮ್ಮ ಕನ್ನಡದ ಹೆಣ್ಣು ಮಗಳು ಪಂಡಿತಾ ರಮಾಬಾಯಿ ರಮಾಬಾಯಿ ಸರಸ್ವತಿ (೧೮೫೮-೧೯೨೨) ಈ ಸದನದ ಹಿಂದಿನ ಶಕ್ತಿ ಮತ್ತು ಅದರ ರೂವಾರಿ.
ನನಗಿಂತ ಬರೋಬ್ಬರಿ ನೂರು ವರ್ಷಗಳ ಹಿಂದೆ ಅಂದರೆ ೧೮೫೮ರಲ್ಲಿ ಹುಟ್ಟಿದ ರಮಾಬಾಯಿ ನನಗಿಂತ ನೂರು ವರುಷಗಳಷ್ಟು ಮುಂದಿದ್ದಾರೆ. ಬಹಳ ವರ್ಷಗಳಿಂದ ಮುಕ್ತಿ ಶಾಲೆಯನ್ನು ನೋಡಬೇಕೆಂಬ ನನ್ನ ಕನಸು ಕೈಗೂಡಿದ್ದು ಇತ್ತೀಚೆಗಷ್ಟೇ.
ನೂರಮೂವತ್ತು ವರುಷಗಳ ಹಳೆಯ ವಾಸನೆ ಹೊತ್ತ ಪುಟ್ಟ ಕೊಠಡಿ. ‘ರಮಾಬಾಯಿವರದು ಪುಟ್ಟ ಶರೀರ ನಾಲ್ಕು ಅಡಿ ಇದ್ದರಷ್ಟೇ. ಅವರ ಎತ್ತರಕ್ಕೆ ಸರಿಯಾಗಿ ಮೇಜು ಕುರ್ಚಿಗಳನ್ನು ವಿಶೇಷವಾಗಿ ಮಾಡಿಸಲಾಗಿತ್ತು ‘
ಬಹಳ ತಗ್ಗಿನಲ್ಲಿದ್ದ ರಮಾಬಾಯಿಯವರು ತಮ್ಮ ಅಧ್ಯಯನಕ್ಕೆ ಬಳಸುತ್ತಿದ್ದ ಮೇಜು ಕುರ್ಚಿಗಳನ್ನು ತೋರಿಸುತ್ತಾ ಅಲ್ಲಿನ ವ್ಯವಸ್ಥಾಪಕರು ಹೇಳಿದರು. ಅದರ ಪಕ್ಕದಲ್ಲೇ ಅವರು ಮಲಗುತ್ತಿದ್ದ ಮಂಚ. ಗೋಡೆಯ ಮೇಲೆಲ್ಲಾ ರಮಾಬಾಯಿಯವರ ಸಾಧನೆಗಳನ್ನು ತೋರಿಸುತ್ತಿದ್ದ ಭಾವಚಿತ್ರಗಳು. ಎಲ್ಲದಕ್ಕೂ ಒಂದು ರೀತಿಯ ವಿಚಿತ್ರ ಹಳೆಯ ವಾಸನೆ. ಆದರೆ ಅವುಗಳಲ್ಲಿನ ಮುನ್ನೋಟ ಮಾತ್ರ ಅತ್ಯಂತ ಆಧುನಿಕ.
ಚರ್ಚಿನೊಳಗೆ ಹೊಕ್ಕಾಗಲೂ ಅದೇ ಹಳೆಯ ವಾಸನೆ. ಸ್ವತಃ ರಮಾಬಾಯಿಯವರೇ ನಿಂತು ಕಟ್ಟಿಸಿದ ಕಟ್ಟಡ ನೂರು ವರ್ಷಗಳಾದರೂ ಇನ್ನೂ ಗಟ್ಟಿಮುಟ್ಟಾಗಿದೆ. ಹಿಂಬದಿಯ ಸಾಲಿನಲ್ಲಿ ಎಂಟು ಹತ್ತು ಕಣ್ಣಿಲ್ಲದ ಮಹಿಳೆಯರು ಕುಳಿತಿದ್ದರು. ರಜೆ ದಿನವಾದ್ದರಿಂದ ಮಕ್ಕಳು ಮತ್ತು ಮುದುಕಿಯರನ್ನು ಸೇರಿಸಿಕೊಂಡು ಶಿಕ್ಷಕಿಯೊಬ್ಬಳು ಕಥೆ ಹೇಳುವುದರಲ್ಲಿ ನಿರತಳಾಗಿದ್ದಳು.
ರಮಾಬಾಯಿಯವರ ಸಾಹಸಗಾಥೆಗಳನ್ನು ಅವರು ಪಟ್ಟ ಪಾಡುಗಳನ್ನು, ಅವರ ಕೊಡುಗೆಗಳನ್ನು ನನ್ನ ಸಂಶೋಧನಾ ಪ್ರಬಂಧದಲ್ಲಿ ವಿವರವಾಗಿ ಬರೆದಿದ್ದೇನೆ. ತಿಲಕ್, ರಾನಡೆ, ಅಭ್ಯಂಕರ್ ಅವರಂತಹ ಪುರುಷ ಕೇಸರಿಗಳ ವಿರೋಧಗಳ ನಡುವೆ ಅವರಿಗೆ ಸೆಡ್ಡು ಹೊಡೆದು ನಿಂತ ರಮಾಬಾಯಿಯವರ ಸಾಧನೆಗಳು ಬೆರಗು ಹುಟ್ಟಿಸುತ್ತವೆ.
ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ೧೮೮೯ ಮಾರ್ಚ್ ಹನ್ನೊಂದರಂದು ಶಾರದಾ ಸದನ ಶಾಲೆಯನ್ನು ರಮಾಬಾಯಿಯವರು ಪ್ರಾರಂಭಿಸಿದರು. ಗಂಗಾಧರ ಪಂತ್ ಗದ್ರೆಯವರ ಮಗಳು ಶಾರದಾ ಎನ್ನುವ ಹುಡುಗಿ ಈ ಶಾಲೆಯ ಮೊದಲ ವಿದ್ಯಾರ್ಥಿನಿ . ಆದುದರಿಂದಲೇ ಈ ಶಾಲೆಗೆ ಅವಳ ಹೆಸರನ್ನೇ ಇಡಲಾಯಿತು. ಎರಡನೆಯ ವಿದ್ಯಾರ್ಥಿ ಗೋದೂಬಾಯಿ, ಒಬ್ಬ ಬಾಲವಿಧವೆ. ಮುಂದೆ ಇವಳನ್ನು ಮಹಿಳಾ ಶಿಕ್ಷಣದ ನೇತಾರರೆಂದೇ ಪ್ರಸಿದ್ಧವಾಗಿರುವ ಸಮಾಜ ಸುಧಾರಕರಾದ ಮಹರ್ಷಿ ಧೋಂಡೋ ಕೇಶವ ಕರ್ವೆಯವರು ಸಂಪ್ರದಾಯವಾದಿಗಳ ಕಡು ವಿರೋಧವನ್ನೂ ಲೆಕ್ಕಿಸದೇ ಮದುವೆಯಾದದ್ದು, ಮಹಿಳಾ ಹೋರಾಟದ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು.
೧೮೯೧ ರಲ್ಲಿ ಆ ಶಾಲೆಯಲ್ಲಿ ೨೬ ಮಂದಿ ವಿಧವೆಯರೂ ೧೩ ಅವಿವಾಹಿತ ಹುಡುಗಿಯರೂ ಕಲಿಯುತ್ತಿದ್ದರೆಂದೂ ೧೮೯೬ ರ ಹೊತ್ತಿಗೆ ಇವರ ಸಂಖ್ಯೆ ಗಣನೀಯ ಪ್ರಮಾಣಕ್ಕೆ ಏರಿತ್ತೆಂದೂ ದಾಖಲೆಗಳು ತಿಳಿಸುತ್ತವೆ. ರಮಾಬಾಯಿಯವರು ಜಡ್ಡುಗಟ್ಟಿದ ಹಿಂದೂ ಧರ್ಮದ ಆಚರಣೆ, ನಂಬಿಕೆಗಳಿಂದ ರೋಸಿಹೋಗಿ ಕ್ರೈಸ್ತ ಮತಕ್ಕೆ ಮತಾಂತರಗೊಂಡವರು. ಆದರೂ ತಮ್ಮ ಶಾಲೆಯಲ್ಲಿ ಶಿಕ್ಷಣದ ಜೊತೆಗೆ, ಯಾವುದೇ ಧಾರ್ಮಿಕ ವಿಚಾರಗಳನ್ನು ಭೋದಿಸದೇ ಕೇವಲ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಮೂಢ ನಂಬಿಕೆಗಳ ವಿರುದ್ಧವಾಗಿ ಹುಡುಗಿಯರನ್ನು ಎಚ್ಚರಿಸುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಶಿಶುವಿಹಾರ ಶಿಕ್ಷಣ ಅವರ ಕಲ್ಪನೆಯ ಕೂಸು ನನಸಾಗಿದ್ದೂ ಇಲ್ಲಿಯೇ.
ಬಾಲ ವಿಧವೆಯರ ಶಿಕ್ಷಣದ ಕನಸು ಕಂಡ ಹಾಗೂ ಬಾಲ್ಯವಿವಾಹದ ವಿರುದ್ಧ ಸಿಡಿದೆದ್ದ ರಮಾಬಾಯಿ ಯವರನ್ನು, ಹಿಂದೂ ಹುಡುಗಿಯರನ್ನು ಮತಾಂತರ ಗೊಳಿಸುವ ಮಿಷನರಿ ಚಟುವಟಿಕೆಗಳಲ್ಲಿ ಅವರು ತೊಡಗಿದ್ದಾರೆಂಬ ಆಪಾದನೆಯ ಮೇರೆಗೆ ಅಲ್ಲಿಂದ ಉಚ್ಛಾಟಿಸಲಾಯಿತು. ಪುಣೆಯ ಬಳಿ ಕೇಡ್ ಗಾಂವ್ ನಲ್ಲಿ ೧೨೦ ಎಕರೆಗಳ ಒಂದು ಬೆಂಗಾಡನ್ನು ನೀಡಲಾಯಿತು. ಅದನ್ನು ಹಸನು ಮಾಡಲು ಸ್ವತಃ ರಮಾಬಾಯಿಯವರೇ ಮುಂದಾದಾಗ ಅಲ್ಲಿನ ಅನೇಕ ಮಹಿಳೆಯರು ಕೈಜೋಡಿಸಿದರು. ಹನ್ನೆರೆಡು ಬಾವಿಗಳನ್ನು ಕೊರೆದು ಕಟ್ಟಿದರು. ಅಲ್ಲಿರುವ ಚರ್ಚ್ ನ್ನು ಕಟ್ಟಲು ರಮಾಬಾಯಿಯವರು ಸ್ವತಃ ಗುದ್ದಲಿ ಸನಿಕೆಗಳನ್ನು ಹಿಡಿದರು. ಕಾಲಗುಣ ಸರಿಯಿಲ್ಲವೆಂದು ಮಾವನ ಮನೆಯಿಂದ ದೂಡಲ್ಪಟ್ಟ ಚಿಕ್ಕ ಹುಡುಗಿಯನ್ನು ಕರೆದು ಅವಳನ್ನು ಬರಮಾಡಿಕೊಳ್ಳುವುದರ ಮೂಲಕ ಮಹಿಳೆಯರ ಮುಕ್ತಿ ಮಿಷನ್ ಆರಂಭಿಸಿದವರು. ಇಂದು ಎಲ್ಲಾ ವಯಸ್ಸಿನ ಅನಾಥ ಮಕ್ಕಳು ಅವರದೇ ಆದ ಶಾರದಾ ಸದನ ಶಾಲೆಯಲ್ಲಿ ಕಲಿಯುತ್ತಾರೆ. ವಯಸ್ಸಾದ ಪರಿತ್ಯಕ್ತ ಮಹಿಳೆಯರೂ, ಅಂಧ ಮಹಿಳೆಯರೂ ಇಲ್ಲಿ ಇದ್ದಾರೆ.
ಮುಕ್ತಿ ಮಿಷನ್ ಇಂದು ಸಾಮಾನ್ಯ ಮಹಿಳೆಯರೇ ಅಲ್ಲದೇ ಅಂಧ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿಯೂ ತನ್ನ ಪಾಡಿಗೆ ತಾನು ಕೆಲಸಮಾಡುತ್ತಿದೆ.
ಪಂಡಿತಾ ರಮಾಬಾಯಿ ಸರಸ್ವತಿ ಅನೇಕ ಪ್ರಥಮಗಳ ಮಹಿಳೆ –
ಪಂಡಿತಾ ಮತ್ತು ಸರಸ್ವತಿ ಎಂಬ ಬಿರುದನ್ನು ಪಡೆದ ಮೊದಲ ಮಹಿಳೆ, ಕೈಸರ್ ಎ ಹಿಂದ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ, ಬೈಬಲ್ ಗ್ರಂಥವನ್ನು ಹೀಬ್ರೂ ಮತ್ತು ಗ್ರೀಕ್ ಭಾಷೆಯಿಂದ ನೇರವಾಗಿ ಮರಾಠಿಗೆ ಅನುವಾದಿಸಿದ ಮೊದಲ ಮಹಿಳೆ.
ಮಹಿಳೆಯರಿಗಾಗಿ ವೈದ್ಯಕೀಯ ಶಿಕ್ಷಣದ ವಕಾಲತ್ತು ವಹಿಸಿದ ಮೊದಲು ಮಹಿಳೆ (ಹಂಟರ್ ಕಮಿಷನ್), ಹಿಂದಿ ರಾಷ್ಟ್ರಭಾಷೆಯಾಗಬೇಕೆಂದು ಹೇಳಿದ ಮೊದಲ ಮಹಿಳೆ, ಮರಾಠಿಯ ಬ್ರೇಲ್/ ಟೈಪ್ ಸೆಟ್ ನ್ನು ಕಂಡು ಹಿಡಿದ ಮೊದಲ ಮಹಿಳೆ.
ಗೃಹ ಕೈಗಾರಿಕೆಯನ್ನು (ವಿಶೇಷವಾಗಿ ಖಾದಿ ನೂಲುವ ಮತ್ತು ಅದನ್ನು ಧರಿಸುವ) ಸಂಸ್ಥಾಪಿಸಿದ ಮೊದಲ ಮಹಿಳೆ, ಮಹಿಳಾ ಹಕ್ಕುಗಳಿಗಾಗಿ ವ್ಯವಸ್ಥೆ ಯ ವಿರುದ್ಧ ಧ್ವನಿ ಎತ್ತಿದ ಮೊದಲ ಮಹಿಳೆ, ಬರಗಾಲದಲ್ಲಿ ಅನಾಥ ಮಕ್ಕಳು ಹಾಗೂ ವಿಧವೆಯರಿಗೆ ವ್ಯಾಪಕವಾದ ಪರಿಹಾರ ಯೋಜನೆಯನ್ನು ಕೈಗೊಂಡ ಮೊದಲ ಮಹಿಳೆ ಮತ್ತು ಶಿಶುವಿಹಾರ ಶಿಕ್ಷಣ ಪರಿಚಯಿಸಿದ ಮೊದಲ ಮಹಿಳೆ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.