FEATUREDಸಾಧನಕೇರಿ

ಸಾಧನಕೇರಿ/ ಸಹಜ ಸುಂದರ ಕಾದಂಬರಿಗಳನ್ನು ಕೊಟ್ಟ ವಾಣಿ – ತಿರು ಶ್ರೀಧರ

“ಸಾಹಿತ್ಯರಚನೆ ಎನ್ನುವುದು ಕೇವಲ ಕಲ್ಪನೆಯಷ್ಟೆ ಆಗಿಲ್ಲದೆ, ಅನುಭವದ ಭಾಗ ಕೂಡಾ ಸರಿಸಮಾನವಾಗಿ ಬೆರೆತಿದ್ದಾಗ ಮಾತ್ರ ಉತ್ತಮ ಸಾಹಿತ್ಯ ಸೃಷ್ಟಿ ಸಾಧ್ಯ” ಎಂದು ಹೇಳುತ್ತಿದ್ದ ಲೇಖಕಿ ವಾಣಿ ವೈವಿಧ್ಯಮಯ ಕಾದಂಬರಿ ಮತ್ತು ಕಥೆಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಮೇ 12 ವಾಣಿ ಅವರ ಜನ್ಮದಿನದ ಪ್ರಯುಕ್ತ ಅವರ ಜೀವನ ಮತ್ತು ಸಾಧನೆಗಳ ಅವಲೋಕನ ಇಲ್ಲಿದೆ.

ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ‘ವಾಣಿ’ ಅವರ ಹೆಸರು ಹಲವು ಕಾರಣಗಳಿಂದ ಗಮನ ಸೆಳೆಯುತ್ತದೆ. ಅವರ ಮೂಲ ಹೆಸರು ಬಿ. ಎನ್. ಸುಬ್ಬಮ್ಮ. ಸರಳ, ಸಹಜ ಬರವಣಿಗೆಯಲ್ಲಿ ವೈವಿಧ್ಯತೆಯ ಸುಂದರ ಕಥಾಕುಸುಮಗಳನ್ನು ನೀಡಿದ ವಾಣಿಯವರು 1917 ವರ್ಷದ ಮೇ 12 ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಸುಬ್ಬಮ್ಮನವರ ತಂದೆ ಶಾಸನ ಸಭೆಯ ಸದಸ್ಯರಾಗಿ, ರಾಜಸೇವಾಸಕ್ತ ಬಿರುದಾಂಕಿತರಾಗಿದ್ದ ನರಸಿಂಗರಾಯರು. ತಾಯಿ ಹಿರಿಯಕ್ಕಮ್ಮನವರು.

ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ಪ್ರಸಿದ್ಧ ವಕೀಲರಾದ ಎಂ. ಎನ್. ನಂಜುಂಡಯ್ಯನವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಾಣಿಯವರ ವಿದ್ಯಾಭ್ಯಾಸ ಎಸ್ ಎಸ್ ಎಲ್ ಸಿ ಯಲ್ಲಿ ಕೊನೆಗೊಂಡಿತು. ಆದರೆ ಇಂಗ್ಲಿಷ್, ಕನ್ನಡ ಪುಸ್ತಕಗಳನ್ನು ಓದಲು ಕುಳಿತರೆ ಊಟ, ತಿಂಡಿಗಳ ಪರಿವೆಯೇ ಅವರಿಗೆ ಇರುತ್ತಿರಲಿಲ್ಲವಂತೆ. ಪತಿಯ ಮನೆ 40-50 ಜನರಿದ್ದ ದೊಡ್ಡ ಅವಿಭಕ್ತ ಕುಟುಂಬ. ಆದರೂ ಬಿಡುವು ಸಿಕ್ಕರೆ ಸಾಕು ವಾಣಿಯವರು ಬರವಣಿಗೆಯಲ್ಲಿ ತಲ್ಲೀನರಾಗಿಬಿಡುತ್ತಿದ್ದರಂತೆ. ‘ಚಿಲುಮೆಯಲ್ಲಿ ನೀರು ಉಕ್ಕಿದಂತೆ ಪುಟಿದೇಳುತ್ತಿದ್ದ ಬರವಣಿಗೆಯ ಚೈತನ್ಯವನ್ನು ನನ್ನಿಂದ ತಡೆಹಿಡಿಯಲಾಗದೆ ಬರೆಯುತ್ತಿದ್ದೆ’ ಎನ್ನುತ್ತಿದ್ದ ವಾಣಿಯವರದ್ದು ಅತಿ ಸಹಜ ಬರವಣಿಗೆ.

ಸುಬ್ಬಮ್ಮನವರು ‘ವಾಣಿ’ಯಾಗಿದ್ದೇ ಒಂದು ಕಥೆಯಂತಿದೆ. ತಮ್ಮ ಮೊದಲ ಕಥೆ ‘ತಾರಾ’ವನ್ನು ಪತ್ರಿಕೆಗೆ ಕಳುಹಿಸುವಾಗ ಅದು ಪ್ರಕಟವಾಗುತ್ತದೋ ಇಲ್ಲವೋ ಎಂಬ ಹಿಂಜರಿಕೆಯಿಂದ, ಕಥೆಯೊಂದಿಗೆ ಸಂಪಾದಕರಿಗೆ ಮನವಿಯೊಂದನ್ನಿರಿಸಿ, ತಮ್ಮ ಕಥೆಯನ್ನು ‘ಶ್ರೀನಾಥ’ ಎಂಬ ಹೆಸರಿನಲ್ಲಿ ಪ್ರಕಟಿಸುವಂತೆ ಕೋರಿದ್ದರು. ಆದರೆ ಕಥೆಯನ್ನು ಮೆಚ್ಚಿದ ಸಂಪಾದಕರು ಅದನ್ನು ‘ವಾಣಿ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಹೀಗಾಗಿ ಸುಬ್ಬಮ್ಮನವರು ‘ವಾಣಿ’ ಎಂಬ ಬರಹಗಾರ್ತಿಯಾಗಿ ಬದಲಾದರು. ಅವರು ಬರೆದ ಎರಡನೆಯ ಕಥೆಯು ಕನ್ನಡ ಸಾಹಿತ್ಯ ಪರಿಷತ್ತಿನ ಭಾಸ್ಕರರಾವ್ ಸ್ಮಾರಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿತು. ಹೀಗಾಗಿ ಅವರು ಹೆಚ್ಚು ಹೆಚ್ಚು ಆತ್ಮವಿಶ್ವಾಸದಿಂದ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು. 1944ರ ವರ್ಷದಲ್ಲಿ ವಾಣಿಯವರ ಏಳು ಕಥೆಗಳನ್ನೊಳಗೊಂಡ ಕಥಾಸಂಕಲನವು ಮಾಸ್ತಿಯವರ ಮುನ್ನುಡಿಯೊಂದಿಗೆ ಪ್ರಕಟಗೊಂಡಿತು. ಮುಂದೆ ‘ನಾಣಿಯ ಮದುವೆ’, ‘ಬಾಬು ಬರ್ತಾನೆ’, ‘ಅರ್ಪಣೆ’, ‘ಅಪರೂಪದ ಅತಿಥಿ’, ‘ಹ್ಯಾಪಿ ಬರ್ತ್‌‌ಡೇ’ ಮುಂತಾದ ಹಲವಾರು ಕಥಾಸಂಕಲನಗಳು ಪ್ರಕಟಗೊಂಡವು.

ಲೇಖಕಿ ವಾಣಿ

ವಾಣಿಯವರು, ಉತ್ತರ ಭಾರತವು ಚಂಡಮಾರುತದಿಂದ ಸಂಕಷ್ಟಕ್ಕೊಳಗಾದ ಸುದ್ದಿಯನ್ನಾಧರಿಸಿ ರಚಿಸಿದ ಕಾದಂಬರಿ ‘ಬಿಡುಗಡೆ’. ಈ ಮೊದಲ ಕಾದಂಬರಿ ಬಿಡುಗಡೆಯಾಗಲು ಬಹಳಷ್ಟು ವರ್ಷ ಕಾಯಬೇಕಾಯಿತು. ಅಂದಿನ ದಿನಗಳು ಪ್ರಕಾಶಕರನ್ನು ಹುಡುಕುವುದೇ ಬಹು ಪ್ರಯಾಸವಾಗಿದ್ದ ಕಾಲ. ಮೊಟ್ಟ ಮೊದಲ ಕಾದಂಬರಿಯನ್ನು ಮೈಸೂರಿನ ಡಿ.ವಿ.ಕೆ. ಮೂರ್ತಿಯವರು ತಮ್ಮ ಪ್ರಕಾಶನದಡಿಯಲ್ಲಿ ಪ್ರಕಟಿಸಿದ್ದೇ ಅಲ್ಲದೆ ನಂತರ ಅವರು ಬರೆದ ಕಾದಂಬರಿಗಳೆಲ್ಲವನ್ನೂ ಪ್ರಕಟಿಸಿದರು. ಬಿಡುಗಡೆ, ಎರಡು ಕನಸು, ಶುಭಮಂಗಳ, ಕಾವೇರಿಯ ಮಡಿಲಲ್ಲಿ, ಹೊಸಬೆಳಕು, ಅನಿರೀಕ್ಷಿತ, ಪ್ರೇಮಸೇತು, ತ್ರಿಶೂಲ, ಸುಲಗ್ನಾ ಸಾವಧಾನ ಮುಂತಾದ 20 ಕಾದಂಬರಿಗಳಲ್ಲಿ ಎರಡು ಕನಸು, ಶುಭಮಂಗಳ, ಹೊಸಬೆಳಕು ಚಲನಚಿತ್ರಗಳಾಗಿ ಪ್ರಸಿದ್ಧಿ ಪಡೆದಿವೆ. ಕೆಲವು ಕಾದಂಬರಿಗಳು ಮಲಯಾಳಂ ಹಾಗೂ ತೆಲುಗಿಗೂ ಅನುವಾದಗೊಂಡಿವೆ.

ವಾಣಿಯವರ 518 ವಚನಗಳ ಸಂಗ್ರಹ ‘ನವನೀತ’ ಪ್ರಕಟಗೊಂಡಿದ್ದು, ಅದಕ್ಕೆ ಮಹಾನ್ ವಿದ್ವಾಂಸರಾದ ಹಾ.ಮಾ. ನಾಯಕರು ಮುನ್ನುಡಿ ಬರೆದಿದ್ದಾರೆ. ವಾಣಿಯವರ ನಿಧನಾನಂತರದಲ್ಲಿ ಪ್ರಕಟಗೊಂಡದ್ದು ‘ತಾರಮ್ಮಯ್ಯ’ ಎಂಬ ಹರಟೆಗಳ ಸಂಗ್ರಹ. ವಾಣಿಯವರು ಹಲವಾರು ನಾಟಕಗಳನ್ನೂ ಬರೆದಿದ್ದರೂ ಅವು ಪ್ರಕಟಣೆಯ ಅದೃಷ್ಟವನ್ನು ಕಾಣಲಿಲ್ಲ. “ಸಾಹಿತ್ಯರಚನೆ ಎನ್ನುವುದು ಕೇವಲ ಕಲ್ಪನೆಯಷ್ಟೆ ಆಗಿಲ್ಲದೆ, ಅನುಭವದ ಭಾಗ ಕೂಡಾ ಸರಿಸಮಾನವಾಗಿ ಬೆರೆತಿದ್ದಾಗ ಮಾತ್ರ ಉತ್ತಮ ಸಾಹಿತ್ಯ ಸೃಷ್ಟಿ ಸಾಧ್ಯ” ಎಂದು ವಾಣಿ ಅವರು ತಮ್ಮ ಅಕ್ಕನ ಮಗಳು ತ್ರಿವೇಣಿಯವರೊಡನೆ ಆಗಾಗ್ಗೆ ಹೇಳುತ್ತಿದ್ದರಂತೆ.

ವಾಣಿಯವರ ‘ಮನೆಮಗಳು’ ಕಾದಂಬರಿಗೆ 1962 ರಲ್ಲಿ ರಾಜ್ಯ ಸರಕಾರದ ಪ್ರಶಸ್ತಿ ದೊರೆಯಿತು. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿದ ಕನ್ನಡ ಸಾಹಿತ್ಯ ಪರಿಷತ್ತಿನಿಂದ, 1970 ವರ್ಷದಲ್ಲಿ ಜರುಗಿದ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸನ್ಮಾನ ಏರ್ಪಟ್ಟಿತು. 1972 ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ 47ನೆಯ ಕನ್ನಡ ಸಾಹಿತ್ಯ ಸಮ್ಮೇಳನ (1970) ದಲ್ಲಿ ಮಹಿಳಾ ಗೋಷ್ಠಿಯ ಅಧ್ಯಕ್ಷತೆ, ಧರ್ಮಸ್ಥಳದಲ್ಲಿ ನಡೆದ ವಾರ್ಷಿಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಡ್ಯದಲ್ಲಿ ನಡೆದ ಲೇಖಕಿಯರ ಸಂಘದ ಸಮ್ಮೇಳಾನಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ವಾಣಿಯವರಿಗೆ ಸಂದವು.

1976 ರಲ್ಲಿ ಪತಿ ನಂಜುಂಡಯ್ಯನವರು ಅಪಘಾತದಲ್ಲಿ ಮರಣ ಹೊಂದಿದ್ದು, 1984 ರಲ್ಲಿ ಮಗ ಕೆನಡಾದಲ್ಲಿ ಅಕಾಲ ಮೃತ್ಯವಿಗೊಳಗಾಗಿ ಚಿತಾಭಸ್ಮವನ್ನೂ ಮಾತ್ರ ನೋಡಬೇಕಾಗಿ ಬಂದ ಸಂದರ್ಭದ ಕೊರಗಿನಿಂದ ವಾಣಿಯವರ ಆರೋಗ್ಯದ ಮೇಲೆ ಪರಿಣಾಮ ಉಂಟಾಯಿತು. ಪಾರ್ಶ್ವವಾಯು ಪೀಡಿತರಾದ ಅವರು ಫೆಬ್ರವರಿ 14, 1988ರಂದು ಈ ಲೋಕದಿಂದ ದೂರವಾದರು. ( ಮೂಲ: www.sallapa.com)

Photo – “ಎರಡು ಕನಸು” ಚಿತ್ರೀಕರಣದ ಸಂದರ್ಭದಲ್ಲಿ ಲೇಖಕಿ ವಾಣಿ (ಬಲತುದಿ), ಡಾ. ರಾಜ್ ಕುಮಾರ್ ಮತ್ತು ಕಲ್ಪನಾ.

-ತಿರು ಶ್ರೀಧರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಸಾಧನಕೇರಿ/ ಸಹಜ ಸುಂದರ ಕಾದಂಬರಿಗಳನ್ನು ಕೊಟ್ಟ ವಾಣಿ – ತಿರು ಶ್ರೀಧರ

  • ಸಿ. ಎನ್. ರಾಮಚಂದ್ರನ್

    ಪ್ರಿಯ ಡಾ. ಪೂರ್ಣಿಮಾ ಅವರಿಗೆ: ನಮಸ್ಕಾರ. ನೆನ್ನೆ ನೀವು ಕೊಟ್ಟ ’ಹಿತೈಷಿಣಿ’ ಜಾಲತಾಣವನ್ನು ನೋಡಿ, ಸಂತಸದಿಂದ ಪ್ರತಿಕ್ರಿಯಿಸುತ್ತಿದ್ದೇನೆ. ಈ ಸಂಚಿಕೆಯಲ್ಲಿರುವ ಕೆಲವು ಲೇಖನಗಳನ್ನು ಓದಿದೆ: “ಸ್ವಾತಂತ್ರ್ಯಕ್ಕಾಗಿ . . . ಮಹಿಳೆಯರು” ಲೇಖನ ಸಕಾಲಿಕವಾಗಿದೆ, ನಾವು ಯಾರೂ ಮರೆಯಬಾರದ ಮಾಹಿತಿಯನ್ನು ಕೊಡುತ್ತದೆ (ಬೇಗಂ ಹಜ಼ರತ್ ಮಹಲ್, ಮಾತಂಗಿನಿ ಹಜ್ರಾ ಇವರುಗಳ ಹೆಸರನ್ನೇ ನಾನು ಕೇಳಿರಲಿಲ್ಲ); ವಾಣಿಯವರನ್ನು ಕುರಿತ ಲೇಖನ ಚೆನ್ನಾಗಿದೆ (ಆದರೆ ಲೇಖಕರು ವಾಣಿಯವರ “ಮೊಗ್ಗಿನ ಜಡೆ” ಕಾದಂಬರಿಯನ್ನು ಪ್ರಸ್ತಾಪಿಸಬೇಕಿತ್ತು; ಇದು ಕನ್ನಡದಲ್ಲಿ ಮೊದಲ ಮನೋವೈಜ್ಞಾನಿಕ ಕಾದಂಬರಿ –Transvestism ಕುರಿತದ್ದು; ತ್ರಿವೇಣಿಯವರಿಗೆ ಮನೋವೈಜ್ಞಾನಿಕ ಕಾದಂಬರಿಗಳನ್ನು ಬರೆಯಲು ಈ ಕಾದಂಬರಿ ಪ್ರೇರಣೆ ನೀಡಿತು), “ಕೊರೋನ ನೋವು” ತುಂಬಾ ಅರ್ಥಪೂರ್ಣವಾದ, ಮನಕಲಕುವ ಲೇಖನ. ಇತರ ಲೇಖನಗಳನ್ನು ಬರುವ ದಿನಗಳಲ್ಲಿ ಓದುತ್ತೇನೆ. ಒಟ್ಟಿನಲ್ಲಿ, ’ಹಿತೈಷಿಣಿ’ ಗಂಭೀರ ಹಾಗೂ ಉಪಯುಕ್ತ ಅಂತರ್ಜಾಲ ತಾಣ. ನನ್ನ ಗಮನಕ್ಕೆ ತಂದುದಕ್ಕೆ ನಿಮಗೆ ಕೃತಜ್ಞ. ರಾಮಚಂದ್ರನ್

    Reply

Leave a Reply

Your email address will not be published. Required fields are marked *