ಸಾಧನಕೇರಿ/ ನೆಲದ ತಾಯಿಗೆ ನಮಸ್ಕಾರ- ಜಗದೀಶ್ ಕೊಪ್ಪ
ಜಾಗತೀಕರಣದ ನೆಪದಲ್ಲಿ ತೃತೀಯ ರಾಷ್ಟ್ರಗಳನ್ನು ಕೊಳ್ಳೆ ಹೊಡೆಯಲು ನಿಂತ ಬಹುರಾಷ್ಟ್ರೀಯ ಕಂಪನಿಗಳು ಕನಸಿನಲ್ಲೂ ಬೆಚ್ಚಿಬೀಳಬಹುದಾದ ಹೆಸರು ವಂದನಾ ಶಿವ. ಕೃಷಿಯ ಪಾರಂಪರಿಕ ಹಕ್ಕುಗಳನ್ನು ಕಂಪನಿಗಳಿಂದ ರಕ್ಷಿಸುವುದು ಬದುಕಿನ ಪರಮ ಗುರಿ ಎಂಬಂತೆ ಹೋರಾಡುತ್ತಿರುವ ಅವರು, ಕೃಷಿ ಜಗತ್ತಿನಿಂದ ಮಹಿಳೆಯರನ್ನು ಹೊರಗಿಟ್ಟ ನಂತರ ಆಗಿರುವ ಮತ್ತು ಆಗುತ್ತಿರುವ ದುರಂತ ಕಥನಗಳನ್ನು ಜಗತ್ತಿಗೆ ಮನಮುಟ್ಟುವಂತೆ ವಿವರಿಸುತ್ತಿದ್ದಾರೆ.
ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ/ಕಟ್ಟಕಡೆಯ ನದಿಗೆ ವಿಷವಿಕ್ಕಿದ ನಂತರ/ ಕಟ್ಟಕಡೆಯ ಮೀನನ್ನು ಹಿಡಿದ ನಂತರ /ಆಗಷ್ಟೇ ನಿನಗೆ ಗೊತ್ತಾಗುತ್ತದೆ,/ಹಣವನ್ನು ತಿನ್ನಲಾಗುವುದಿಲ್ಲ ಎಂದು. ( ವಂದನಾ ಶಿವ ಅವರ ಕೃತಿಯಿಂದ) ಡಾ.ವಂದನಾ ಶಿವ ಎಂಬ ಹೆಸರು ಜನಸಾಮಾನ್ಯರಿಗೆ ಅಪರಿಚಿತವಾದರೂ ಪರಿಸರಪ್ರಿಯರಿಗೆ ಮತ್ತು ಸುಸ್ಥಿರ ಕೃಷಿಯಲ್ಲಿ ಪ್ರೀತಿ ಇರುವ ಎಲ್ಲರಿಗೂ ಪ್ರಿಯವಾದ ಹೆಸರು. ಜಾಗತೀಕರಣದ ನೆಪದಲ್ಲಿ ತೃತೀಯ ರಾಷ್ಟ್ರಗಳನ್ನು ಕೊಳ್ಳೆ ಹೊಡೆಯಲು ನಿಂತ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಅವುಗಳ ಮಾಲೀಕರು ಕನಸಿಲ್ಲೂ ಬೆಚ್ಚಿಬೀಳಬಹುದಾದ ಜಾಗತಿಕ ಮಟ್ಟದಲ್ಲಿ ಸದಾ ಚಾಲ್ತಿಯಲ್ಲಿರುವ ಹೆಸರು.
ತಮ್ಮ ಮಾರುಕಟ್ಟೆಯ ವಿಸ್ತರಣೆಗೋಸ್ಕರ ವಿಶ್ವ ವಾಣಿಜ್ಯ ಮಂಡಳಿಯನ್ನು ಹುಟ್ಟು ಹಾಕಿ ದೇಶ-ದೇಶಗಳ ಗಡಿರೇಖೆಯನ್ನು ಅಳಿಸಿ ಹಾಕುವುದರ ಮೂಲಕ ಮಾರುಕಟ್ಟೆಯ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವ ಮುಂದುವರಿದ ರಾಷ್ಟ್ರಗಳ ಮುಖವಾಡವನ್ನು ಕಳಚಿ ಹಾಕುತ್ತಾ, ಕಳೆದ ಮೂರು ದಶಕಗಳಿಗಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಗತ್ತನ್ನು ಸುತ್ತುವ ವಂದನಾ ಶಿವ ಅವರ ಹೋರಾಟವನ್ನು ಹತ್ತಿರದಿಂದ ಗಮನಿಸಿದ ನನಗೆ, ತಾಯಿಕೋಳಿಯೊಂದು ರಣ ಹದ್ದುಗಳಿಂದ ತನ್ನ ಮರಿಗಳನ್ನು ಕಾಪಾಡಿಕೊಳ್ಳಲು ನಡೆಸುವ ಹೋರಾಟ ನೆನಪಿಗೆ ಬರುತ್ತದೆ. ( ೧೮ ವರ್ಷದ ಹಿಂದೆ ಜಾಗತೀಕರಣ ಕುರಿತ ನನ್ನ ಅಧ್ಯಯನದ ಸಂದರ್ಭದಲ್ಲಿ ಭೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಇವರ ಬಳಿ ಡೆಹರಾಡುನ್ ಮತ್ತು ದೆಹಲಿಯಲ್ಲಿ ಪಾಠ ಹೇಳಿಸಿಕೊಂಡಿದ್ದೆ. ) ಭಾರತ ಮತ್ತು ಅಫ್ರಿಕಾ ಸೇರಿದಂತೆ ಕೃಷಿಯ ಪಾರಂಪರಿಕ ಹಕ್ಕುಗಳನ್ನು ಬಹುರಾಷ್ರೀಯ ಕಂಪನಿಗಳಿಂದ ರಕ್ಷಿಸುವುದು ನನ್ನ ಬದುಕಿನ ಪರಮ ಗುರಿ ಎಂಬಂತೆ ಹೋರಾಡುತ್ತಿರುವ ವಂದನಾ ಶಿವ, ಕೃಷಿ ಜಗತ್ತಿನಿಂದ ಮಹಿಳೆಯರನ್ನು ಹೊರಗಿಟ್ಟ ನಂತರ ಆಗಿರುವ ಮತ್ತು ಆಗುತ್ತಿರುವ ದುರಂತ ಕಥನಗಳನ್ನು ಜಗತ್ತಿಗೆ ಮನಮುಟ್ಟುವಂತೆ ವಿವರಿಸುತ್ತಿದ್ದಾರೆ.
ಬೀಜ ಸ್ವಾತಂತ್ರ‍್ಯ ವೆಂಬುದು ಜಗತ್ತಿನ ರೈತರ ಜನ್ಮಸಿದ್ಧ ಹಕ್ಕು ಎಂಬುದನ್ನು ಪ್ರತಿಪಾದಿಸಿ ನಮ್ಮ ಬೀಜ ಸ್ವಾತಂತ್ರ‍್ಯವನ್ನು ಕಸಿದ ಮಾನ್ಸಂಟೊ, ಕಾರ್ಗಿಲ್ ಮುಂತಾದ ಕಂಪನಿಗಳ ಕಳ್ಳತನವನ್ನು ಜಗತ್ತಿಗೆ ಅನಾವರಣಗೊಳಿಸಿದ ಕೀರ್ತಿ ಡಾ. ವಂದನಾಶಿವಗೆ ಸಲ್ಲುತ್ತದೆ. ಇವರು ಬರೆದಿರುವ ಸ್ಟೋಲನ್ ಹಾರ್ವೆಸ್ಟ್ ( ಕದ್ದ ಫಸಲು) ಭಯೋ ಪೈರಸಿ ( ಜೈವಿಕ ನಕಲು) ಕೃತಿಗಳು ಹಾಗೂ ವೈಲೆನ್ಸ್ ಇನ್ ದ ಗ್ರೀನ್ ರೆವ್ಯುಲೂಷನ್ ( ಹಸಿರು ಕ್ರಾಂತಿಯಲ್ಲಿನ ಹಿಂಸೆ) ಹಾಗೂ ಮೊನೊಕಲ್ಷರ್ ಇನ್ ದ ಮೈಂಡ್ ( ಮನಸ್ಸಿನೊಳಗಿನ ಏಕರೂಪಿ ಸಂಸ್ಕೃತಿ) , ವಾಟರ್ ವಾರ್ಸ್ ( ನೀರಿನ ಯುದ್ಧಗಳು) ಇವೆಲ್ಲವೂ ಜಾಗತಿಕ ಕೃಷಿಲೋಕದ ಸಂಕಟಗಳನ್ನು ವಿವರಿಸುವ ಅಧ್ಯಯನಗಳು.
ಈ ಕಾರಣಕ್ಕಾಗಿ ಭಾರತದ ಪರಿಸರ ಮತ್ತು ಕೃಷಿ ಜಗತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶದ ಉದ್ಯೋಗದ ಆಮಷವನ್ನು ನಿರಾಕರಿಸಿ, ಡೆಹರಾಡೂನ್ ನಲ್ಲಿ ನೆಲೆ ನಿಂತರು. ಗಿರಿಧಾಮದ ಹೊರ ವಲಯದಲ್ಲಿ ಕಣಿವೆಯೊಂದರ ಬಳಿ ಐದು ಎಕರೆ ಪ್ರದೇಶವನ್ನು ಖರೀದಿಸಿ, ೧೯೮೨ ರಲ್ಲಿ “ಫೌಂಡೇಷನ್ ಪಾರ್ ಸೈನ್ಸ್, ಟೆಕ್ನಾಲಜಿ ಅಂಡ್ ಎಕಾಲಾಜಿ ‘ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ೧೯೯೧ ರಲ್ಲಿ ಇದೇ ಸ್ಥಳದಲ್ಲಿ “ ನವಧಾನ್ಯ ಟ್ರಸ್ಟ್’ ಎಂಬ ಸಂಸ್ಥೆಯನ್ನು ಆರಂಭಿಸಿ, ತೃತೀಯ ಜಗತ್ತಿನ ಎಲ್ಲಾ ರಾಷ್ಟ್ರಗಳ ಪಾರಂಪರಿಕವಾಗಿ ಕೃಷಿಯಲ್ಲಿ ಬಳಕೆ ಮಾಡುತ್ತಾ ಬಂದಿದ್ದ ಬೀಜಗಳನ್ನು ಸಂರಕ್ಷಿಸುವ ಕಾರ್ಯ ಕೈಗೊಂಡರು. ಈಗ ಆಫ್ರಿಕಾ ರಾಷ್ರಗಳ ಮೆಕ್ಕೆಜೋಳ, ಅನೇಕ ಕಿರಿಧಾನ್ಯಗಳು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚಿನ ವಿವಿಧ ಆಹಾರ ಬೆಳೆಗಳನ್ನು ರಕ್ಷಿಸಿ ಇಡಲಾಗಿದೆ. ಜೊತೆಗೆ ಇತ್ತೀಚೆಗೆ ದೆಹಲಿಯಲ್ಲಿ ಕಚೇರಿ ತೆರೆಯಲಾಗಿದ್ದು ಸಾವಯವ ಕೃಷಿ ಕುರಿತು ಪ್ರಚಾರಾಂದೋಲನವನ್ನು ಕೈಗೊಳ್ಳಲಾಗುತ್ತಿದೆ.

ಮೂಲತಃ ಭೌತಶಾಸ್ತ್ರದ ವಿಜ್ಙಾನಿಯಾದ ಡಾ. ವಂದನಾ ಶಿವ , ಕೃಷಿ ಜಗತ್ತಿನತ್ತ ಮುಖಮಾಡಿದ್ದು ಈ ನೆಲದ ಪುಣ್ಯವೆಂದೇ ಭಾವಿಸಬೇಕು. ೧೯೫೨ ರ ನವಂಬರ್ ೫ ರಂದು ಡೆಹರಾಡೂನ್ ಗಿರಿಧಾಮದಲ್ಲಿ ಅರಣ್ಯಾಧಿಕಾರಿಯ ಮಗಳಾಗಿ ಜನಿಸಿದ ವಂದನಾ ಬಾಲ್ಯದ ಶಿಕ್ಷಣವನ್ನು ನೈನಿತಾಲ್ ನ ಸೆಂಟ್ ಮೇರಿ ಕಾನ್ವೆಂಟ್ ನಂತರ ದೆಹರಾಡೂನಿನ ಜೀಸಸ್- ಮೇರಿ ಶಾಲೆಯಲ್ಲಿ ಪೂರೈಸಿದರು. ನಂತರ ಚಂಡಿಗಡದಲ್ಲಿ ಪದವಿ ಹಾಗೂ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಕೆನಡಾದಲ್ಲಿ “ಪೌಂಡೇಶನ್ ಆಫ್ ಕ್ವಾಂಟಂ ಥಿಯರಿ” ವಿಷಯ ಕುರಿತು ಪಿಹೆಚ್.ಡಿ. ಮುಗಿಸಿದರು. ಹಿಮಾಲಯದ ತಪ್ಪಲಲ್ಲಿ ಬೆಳೆದು ಕೃಷಿಗೆ ಬೆನ್ನೆಲುಬಾಗಿದ್ದ ಅಲ್ಲಿನ ಮಹಿಳೆಯರ ಕಷ್ಟಗಳನ್ನು ಸ್ವತಃ ಕಣ್ಣಾರೆ ನೋಡಿದ್ದ ವಂದನಾ ಅವರಿಗೆ ವಿದ್ಯಾಭ್ಯಾಸ ಮುಗಿಸುತ್ತಿದ್ದ ವೇಳೆಗೆ ಆರಂಭವಾದ ಚಿಪ್ಕೊ ( ಅಪ್ಪಿಕೊ) ಚಳವಳಿ ಸೂಜಿಗಲ್ಲಿನಂತೆ ಸೆಳೆಯಿತು. ಹಿಮಾಲಯದ ತಪ್ಪಲಿನ ಮರಗಳು ಗುತ್ತಿಗೆದಾರರ ಕೊಡಲಿಗೆ ಬಲಿಯಾಗಿ ನೆಲಕ್ಕೆ ಉರುಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ಅವುಗಳ ಉಳಿಸಿದ ಪರಿ ವಂದನಾ ಶಿವ ಅವರ ಮೇಲೆ ತೀವ್ರ ಪರಿಣಾಮ ಬೀರಿತು.
ನಮ್ಮದೇಶದಿಂದ ಕದ್ದ ಬಸುಮತಿ ಅಕ್ಕಿಯ ತಳಿಗಳು ಮತ್ತು ಅರಿಶಿನದ ಮೇಲೆ ಅಮೇರಿಕಾ ದ ಬಹುರಾಷ್ಟ್ರೀಯ ಕಂಪನಿಗಳು ಪಡೆದುಕೊಂಡಿದ್ದ ಪೇಟೆಂಟ್ ಹಕ್ಕಿನ ವಿರುದ್ಧ ಅಂತರಾಷ್ಟ್ರೀಯ ನ್ಯಾಯಲಯದಲ್ಲಿ ದಾವೆ ಹೂಡಿ ಗೆದ್ದ ಕೀರ್ತಿ ಇವರದು. ಹತ್ತು ವರ್ಷಗಳ ವರ್ಷದ ಹಿಂದೆ ಇವರು ಆಫ್ರಿಕಾ ರಾಷ್ಟ್ರಗಳಲ್ಲಿ ತಿರುಗಾಟ ನಡೆಸಿ, ಮಳೆಯ ಅಭಾವ ಮತ್ತು ಬರಗಾಲದಲ್ಲೂ ಬೆಳೆಯುವ ಅನೇಕ ಜೋಳದ ಬೀಜಗಳನ್ನು ಸಂಗ್ರಹಿಸುವುದರ ಜೊತೆಗೆ ನಮ್ಮ ಅಪರೂಪದ ಕೆಲವು ತಳಿಗಳ ಬೀಜಗಳನ್ನು ಅವರಿಗೆ ನೀಡಿ ಆಫ್ರಿಕಾ ಖಂಡದ ಮೆಕ್ಕೆ ಜೋಳದ ಬೀಜಗಳನ್ನು ಭಾರತಕ್ಕೆ ತಂದಿದ್ದರು.
ಈ ಸಂದರ್ಭದಲ್ಲಿ ವಿಶ್ವ ವಾಣಿಜ್ಯ ಮಂಡಳಿಯಲ್ಲಿ ಇವರ ಮೇಲೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ದೂರು ದಾಖಲಿಸಿದ್ದವು. ಈ ಸಂದರ್ಭದಲ್ಲಿ ಪಶ್ಚಿಮದ ಜಗತ್ತಿಗೆ ಮುಟ್ಟಿನೋಡಿಕೊಳ್ಳುವಂತೆ ವಂದನಾ ಶಿವ ಉತ್ತರ ನೀಡಿದ್ದರು. “ಬೀಜ ವಿನಿಮಯ ಪದ್ಧತಿಯು ತೃತೀಯ ಜಗತ್ತಿನ ರಾಷ್ಟ್ರಗಳ ಸಂಸ್ಕೃತಿ. ಇಲ್ಲಿ ಬೀಜಗಳು ಮಾರಾಟದ ಸರಕಲ್ಲ, ಅದು ತೃತೀಯ ಜಗತ್ತಿನ ಜ್ಞಾನ ಪರಂಪರೆಯ ಶಿಸ್ತುಗಳಲ್ಲಿ ಒಂದು. ಜ್ಞಾನವನ್ನು ಯಾರೂ ಬೇಕಾದರೂ ಹಂಚಿಕೊಳ್ಳಬಹುದು. ಇದಕ್ಕೆ ಬಹುರಾಷ್ಟ್ರೀಯ ಕಂಪನಿಗಳೆಂಬ ದೊಣ್ಣೆ ನಾಯಕರ ಅನುಮತಿ ಬೇಕಾಗಿಲ್ಲ” ಎಂದು ಮರ್ಮಕ್ಕೆ ತಾಗುವಂತೆ ಹೇಳಿದ್ದರು.
ಇವೊತ್ತಿಗೂ ತಿಂಗಳಿಗೆ ಇಪ್ಪತ್ತು ದಿನ ಜಗತ್ತಿನ ಯಾವುದಾದರೊಂದು ರಾಷ್ಟ್ರದ ವಿ.ವಿ.ಯಲ್ಲಿ ಉಪನ್ಯಾಸ ಮಾಡುತ್ತಾ, ಇಲ್ಲವೆ ಜೈವಿಕ ತಂತ್ರಜ್ಞಾನದ ಕೃಷಿ ಮತ್ತು ಕುಲಾಂತರಿ ತಳಿಗಳ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳಿಗೆ ಕೈ ಜೋಡಿಸುತ್ತಾ ದಣಿವರಿಯದ ತಾಯಿಯ ಹಾಗೆ ಬದುಕುತ್ತಿರುವ ವಂದನಾ ಶಿವರನ್ನು ನಾನು, “ಧ್ವನಿಯಿಲ್ಲದವರ ತಾಯಿ” ಎಂದು ಕರೆಯಲು ಇಚ್ಚಿಸುತ್ತೇನೆ. ಈವರೆಗೆ ನೊಬಲ್ ಪ್ರಶಸ್ತಿಯೊಂದನ್ನು ಹೊರತು ಪಡಿಸಿ ಜಗತ್ತಿನ ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ೧೯೯೩ರಲ್ಲಿ ಲೈವ್ಲಿಹುಡ್ ಪ್ರಶಸ್ತಿ, ೧೯೯೫ ರಲ್ಲಿ ವಿಶ್ವಸಂಸ್ಥೆಯ ಗ್ಲೋಬಲ್ ೫೦೦ ಪ್ರಶಸ್ತಿ, ೧೯೯೭ ರಲ್ಲಿ ಡೆನ್ಮಾರ್ಕ್ ರಾಷ್ಟ್ರದ ಗೋಲ್ಡನ್ ಪ್ಲಾಂಟ್ ಪ್ರಶಸ್ತಿ, ೧೯೯೮ ರಲ್ಲಿ ಥೈಲಾಂಡ್ ರಾಣಿಯವರಿಂದ ವಿಶೇಷ ಪ್ರಶಸ್ತಿ, ಮತ್ತು ಜಗತ್ತಿನ ಮಹಿಳಾ ಚಳವಳಿಗೆ ನೀಡಿದ ಸ್ಪೇನ್ ಸರ್ಕಾರದ ಅಲ್ಪನ್ಯೂ ಕೆಮಿನ್ ಪ್ರಶಸ್ತಿ ಲಭ್ಯವಾಗಿವೆ. ಜಾಗತಿಕ ಕೃಷಿಲೋಕದಲ್ಲಿ ಘಟಿಸುತ್ತಿರುವ ವಂಚನೆಗಳ ಕುರಿತಂತೆ ಇವರು ಬರೆಯುತ್ತಿರುವ ಅನೇಕ ಲೇಖನಗಳು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ನಿಯತವಾಗಿ ಪ್ರಕಟಗೊಳ್ಳುತ್ತಿವೆ. ಇತ್ತೀಚೆಗೆ ಇವರು ಬರೆದ “ಡಿವೈಡಿಂಗ್ ಇಂಡಿಯ “ ಎೆಂಬ ಕೃತಿ ಭಾರತದ ಎಲ್ಲಾ ರಂಗಗಳ ( ಸಾಮಾಜಿಕ, ರಾಜಕೀಯ, ಧಾರ್ಮಿಕ ವಲಯ) ಹುಳುಕುಗಳತ್ತ ಬೊಟ್ಟು ಮಾಡಿ ತೋರಿಸುತ್ತದೆ. ( ಗಾಂಧಿ ವಿಚಾರಧಾರೆ ಮತ್ತು ಅಭಿವೃದ್ಧಿಯ ಆತಂಕಗಳು ಕೃತಿಯ ಒಂದು ಅಧ್ಯಾಯ)

–ಜಗದೀಶ್ ಕೊಪ್ಪ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.