FEATUREDಸಾಧನಕೇರಿ

ಸಾಧನಕೇರಿ / ನಿರ್ಭೀತ ಲೇಖಕಿ ರಂಗನಾಯಕಮ್ಮ – ಡಾ. ಎಚ್.ಎಸ್. ಅನುಪಮಾ

ರಾಮ ಮತ್ತು ರಾಮಾಯಣ ಹಿಂದೆಂದಿಗಿಂತ ಹೆಚ್ಚು ರಾಜಕಾರಣದ ಭಾಗವಾಗಿರುವ ಇಂದು ಇಂಥ ಮಾತನ್ನು ಹೇಳಿ ಅರಗಿಸಿಕೊಳ್ಳುವುದು ಸುಲಭವಿಲ್ಲ. ಅಂದು ೧೯೭೩ರಲ್ಲಿಯೂ ಅಷ್ಟೇ, ಇದೇ ವಾತಾವರಣವಿದ್ದಿತು. ಆದರೆ ಯಾವ ಇಸವಿಯಲ್ಲೂ, ಎಂಥ ಕಷ್ಟಕಾಲದಲ್ಲೂ ದಿಟ್ಟದನಿಗಳು ಎದೆಯ ಮಾತನ್ನು ಹೇಳಲು ಅಂಜಲಾರವು. ಅಂಥ ಒಂದು ನಿರ್ಭೀತ ದನಿ ತೆಲುಗಿನ ತೆಲುಗಿನ ಕ್ರಾಂತಿಕಾರಿ ಲೇಖಕಿ ರಂಗನಾಯಕಮ್ಮ ಅವರದು. ಅವರ ಬಿಡುಬೀಸಾದ ಬರವಣಿಗೆ, ವಿಚಾರಗಳಿಗೆ ಬಂದ ವಿರೋಧವೇನೂ ಕಡಿಮೆಯದಲ್ಲ. ಈಗವರಿಗೆ ೮೩ರ ಇಳಿಹರೆಯ. ಆದರೆ ರಂಗನಾಯಕಮ್ಮ ವಿರೋಧಕ್ಕೆ ಹೆದರಿ ದನಿಯನ್ನು ತಗ್ಗಿಸಿಕೊಂಡವರಲ್ಲ.

ಬಹುತೇಕ ಭಾರತೀಯರಿಗೆ ರಾಮಾಯಣ ಎನ್ನುವುದು ಒಪ್ಪಿ, ಆರಾಧಿಸುವ ಪವಿತ್ರ ಕಥನ. ನೀತಿನಿರೂಪಣೆಯ ದಿನನಿತ್ಯದ ಮಾತುಗಳಲ್ಲಿ ಹಾಸುಹೊಕ್ಕಾಗಿರುವ ಸಾಮಾನ್ಯ ಜ್ಞಾನ. ಚಾರಿತ್ರಿಕ ದಾಖಲೆಯೋ ಎನ್ನುವಂತೆ ಜನಮಾನಸದಲ್ಲಿ ನೆಲೆಸಿರುವ, ಓದುವವರ ಭಾವಕ್ಕೆ ತಕ್ಕಂತೆ ಅಪಾರ ಅರ್ಥವಿಸ್ತಾರಗಳನ್ನು ಒದಗಿಸುವ ಆಕರ. ರಾಮಾಯಣವನ್ನು ಕಲ್ಪವೃಕ್ಷ ಎಂದು ಕವಿಪುಂಗವರು ಹಾಡಿದರು. ಓದುಬರಹವಿರದವರ ಚಿಂತನೆಗಳೊಳಗೂ ಅದು ಹಾಸುಹೊಕ್ಕಾಯಿತು. ಅದಕ್ಕಿರುವಷ್ಟು ಜನಪ್ರಿಯತೆ, ವಿಭಿನ್ನ ಓದುಗಳು, ಜನಪದ ಆವೃತ್ತಿಗಳು ಬೇರಾವ ವೇದಪುರಾಣ ಶಾಸ್ತ್ರಗ್ರಂಥಗಳಿಗೂ ಇಲ್ಲ ಎನ್ನಬಹುದು.

ಕಲ್ಪವೃಕ್ಷವೆನಿಸಿಕೊಂಡ ಅಂಥ ರಾಮಾಯಣವನ್ನು ಗಂಡನಿಂದ ದೂರವಾಗಿದ್ದ ಮೂರು ಮಕ್ಕಳ ತಾಯಿಯೊಬ್ಬಳು ‘ರಾಮಾಯಣ ವಿಷವೃಕ್ಷ’ ಎಂದು ಕರೆದರೆ? ಒಂದಲ್ಲ, ಎರಡಲ್ಲ ೭೦೦ ಪುಟಗಳ ಮೂರು ಸಂಪುಟಗಳಲ್ಲಿ ಅದರ ಪ್ರತಿ ಸಾಲು, ಪ್ರತಿ ಪಾತ್ರ, ಪ್ರತಿ ಘಟನೆಗಳನ್ನೂ ವಿಶ್ಲೇಷಿಸಿ ನಮ್ಮ ಇಂದಿನ ಕೇಡುಗಳ ಮೂಲಕಾರಣ ಅಲ್ಲಿದೆ ಎಂದು ತೋರಿಸತೊಡಗಿದರೆ? ಆಳಿಸಿಕೊಳ್ಳುವವರ ವಿರುದ್ಧವಿರುವ ಆಳುವವನನ್ನು, ಕೆಳಜಾತಿಗಳ ವಿರುದ್ಧವಿರುವ ಮೇಲ್ಜಾತಿಯವರನ್ನು, ಅರಣ್ಯವಾಸಿಗಳ ವಿರುದ್ಧವಿರುವ ನಗರ ಸಮುದಾಯವನ್ನು, ಹೆಣ್ಣಿನ ವಿರುದ್ಧವಿರುವ ಗಂಡನ್ನು, ಮಕ್ಕಳ ಮೇಲಿನ ತಂದೆಯ ನಿಯಂತ್ರಣವನ್ನು, ತಮ್ಮಂದಿರ ಮೇಲೆ ಅಣ್ಣನ ನಿಯಂತ್ರಣವನ್ನು ಎತ್ತಿ ಹಿಡಿಯುವುದರಿಂದ ರಾಮಾಯಣ ಅನ್ಯಾಯದ ಸಂಸ್ಕೃತಿಯಾಗಿದ್ದು ಅದನ್ನು ವಿರೋಧಿಸಬೇಕು ಎಂದು ಬರೆದರೆ? ಸಮಾಜ ಬೆಚ್ಚಿಬಿದ್ದೀತು. ರೊಚ್ಚಿಗೆದ್ದು ಬರೆದವರನ್ನು ಹೊಡೆದು ಹಾಕೀತು. ಎಂಥ ಕಷ್ಟಕಾಲದಲ್ಲೂ ದಿಟ್ಟದನಿಗಳು ಎದೆಯ ಮಾತನ್ನು ಹೇಳಲು ಅಂಜಲಾರವು. ಅಂಥ ಒಂದು ನಿರ್ಭೀತ ದನಿ ತೆಲುಗಿನ ಕ್ರಾಂತಿಕಾರಿ ಲೇಖಕಿ ರಂಗನಾಯಕಮ್ಮ ಅವರದು.

೧೨ ಕಾದಂಬರಿ, ೫ ನೀಳ್ಗತೆಗಳು, ೧೦ ಕಥಾ ಸಂಕಲನಗಳು, ೧೫ ದೀರ್ಘ ಪ್ರಬಂಧಗಳು, ೪ ಲೇಖನ ಸಂಗ್ರಹಗಳು, ೨ ಪ್ರಶ್ನೋತ್ತರ ಹೊತ್ತಗೆಗಳು, ಇಂಗ್ಲಿಷ್ನಿಂದ ೨ ಹೊತ್ತಗೆಗಳ ಅನುವಾದ, ೩ ಇಂಗ್ಲಿಷ್ ಕಾದಂಬರಿಗಳ ರೂಪಾಂತರ, ೩ ಸಂಪುಟಗಳ ರಾಮಾಯಣ ವಿಷವೃಕ್ಷಂ, ಮೂರು ಸಂಪುಟಗಳ ಮಾರ್ಕ್ಸ್ ನ ದಾಸ್ ಕ್ಯಾಪಿಟಲ್ ಮುಂತಾಗಿ ಒಟ್ಟು ೫೫ ಪುಸ್ತಕಗಳನ್ನು ಬರೆದ ದಣಿವರಿಯದ ಲೇಖಕಿ ರಂಗನಾಯಕಮ್ಮ. ಅವರು ಬರೆದ ಬಹುಚರ್ಚಿತ ಪುಸ್ತಕ ‘ರಾಮಾಯಣ ವಿಷವೃಕ್ಷಂ’ ಹಲವು ಭಾಷೆಗಳಿಗೆ ಅನುವಾದಗೊಂಡಿದ್ದು ಇಂದಿಗೂ ಒಂದಾದ ಮೇಲೊಂದು ಮರುಮುದ್ರಣಗಳನ್ನು ಕಾಣುತ್ತಲೇ ಇದೆ. ೮೩ರ ಇಳಿಹರೆಯದಲ್ಲೂ ಅವರು ಬರಹದಲ್ಲಿ ಕ್ರಿಯಾಶೀಲರಾಗಿದ್ದಾರೆ. ಎಷ್ಟೇ ವಿರೋಧ, ಬೆದರಿಕೆ ಬಂದರೂ ಸರಿಯೆನಿಸಿದ ಒಂದಕ್ಷರವನ್ನೂ ತೆಗೆಯದೆ ಮುದ್ರಣದಿಂದ ಮುದ್ರಣಕ್ಕೆ ತಮ್ಮ ಹೊತ್ತಗೆಗಳನ್ನು ನವೀಕರಿಸುತ್ತ, ಹೊಸ ಸಂಗತಿಗಳನ್ನು ಸೇರಿಸುತ್ತ ಸಾಗಿದ್ದಾರೆ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಬೊಮ್ಮಿಡಿ ಎಂಬ ಹಳ್ಳಿಯಲ್ಲಿ ೧೯೩೯ರಲ್ಲಿ ಲಕ್ಷ್ಮಿನರಸಮ್ಮ ಮತ್ತು ಲಕ್ಷ್ಮಿಸತ್ಯನಾರಾಯಣಯ್ಯ ಅವರ ಮಗಳಾಗಿ ರಂಗನಾಯಕಮ್ಮ ಹುಟ್ಟಿದರು. ಅವರಿಗೆ ಒಬ್ಬ ಅಕ್ಕ, ಅಣ್ಣ, ನಾಲ್ವರು ತಂಗಿಯರಿದ್ದರು. ತಾಲೂಕು ಕೇಂದ್ರ ತಾಡೆಪಲ್ಲಿಗುಡೆಯಲ್ಲಿ ಅವರ ತಂದೆ ತಮ್ಮ ಸಮುದಾಯಕ್ಕೆ ಸೀಮಿತವಾದ ಪದ್ಮನಾಯಕ ಎಂಬ ಪತ್ರಿಕೆ ನಡೆಸುತ್ತಿದ್ದರು. ಅವರದೇ ಆದ ಸಣ್ಣ ಮುದ್ರಣಾಲಯವೂ ಇತ್ತು. ೧೯೫೬ರಲ್ಲಿ ರಂಗನಾಯಕಮ್ಮ ಅವರ ಕುಟುಂಬ ತೀವ್ರ ಹಣದ ಬಿಕ್ಕಟ್ಟು ಎದುರಿಸಿ ಹಳ್ಳಿಗೆ ಹಿಂದಿರುಗಿತು. ಎಸ್ಸೆಲ್ಸಿ ಮುಗಿಸಿದ ಹುಡುಗಿಯ ಓದು ಮೊಟಕುಗೊಂಡಿತು. ತಾನು ಓದಲೇಬೇಕೆಂದು ಹುಡುಗಿ ಉಪವಾಸ ಕುಳಿತಳು. ಕೊನೆಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪರೀಕ್ಷೆಯನ್ನು ಮನೆಯಿಂದಲೇ ಕಟ್ಟಿದಳು. ನಿಘಂಟಿನ ಸಹಾಯದಿಂದ ಹಿಂದಿ ಕಲಿತು ನಾಲ್ಕು ಹಂತದ ಪರೀಕ್ಷೆ ಪಾಸು ಮಾಡಿದಳು.


ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಬೊಮ್ಮಿಡಿ ಎಂಬ ಹಳ್ಳಿಯಲ್ಲಿ ೧೯೩೯ರಲ್ಲಿ ಲಕ್ಷ್ಮಿನರಸಮ್ಮ ಮತ್ತು ಲಕ್ಷ್ಮಿಸತ್ಯನಾರಾಯಣಯ್ಯ ಅವರ ಮಗಳಾಗಿ ರಂಗನಾಯಕಮ್ಮ ಹುಟ್ಟಿದರು. ಅವರಿಗೆ ಒಬ್ಬ ಅಕ್ಕ, ಅಣ್ಣ, ನಾಲ್ವರು ತಂಗಿಯರಿದ್ದರು. ತಾಲೂಕು ಕೇಂದ್ರ ತಾಡೆಪಲ್ಲಿಗುಡೆಯಲ್ಲಿ ಅವರ ತಂದೆ ತಮ್ಮ ಸಮುದಾಯಕ್ಕೆ ಸೀಮಿತವಾದ ಪದ್ಮನಾಯಕ ಎಂಬ ಪತ್ರಿಕೆ ನಡೆಸುತ್ತಿದ್ದರು. ಅವರದೇ ಆದ ಸಣ್ಣ ಮುದ್ರಣಾಲಯವೂ ಇತ್ತು. ೧೯೫೬ರಲ್ಲಿ ರಂಗನಾಯಕಮ್ಮ ಅವರ ಕುಟುಂಬ ತೀವ್ರ ಹಣದ ಬಿಕ್ಕಟ್ಟು ಎದುರಿಸಿ ಹಳ್ಳಿಗೆ ಹಿಂದಿರುಗಿತು. ಎಸ್ಸೆಲ್ಸಿ ಮುಗಿಸಿದ ಹುಡುಗಿಯ ಓದು ಮೊಟಕುಗೊಂಡಿತು. ತಾನು ಓದಲೇಬೇಕೆಂದು ಹುಡುಗಿ ಉಪವಾಸ ಕುಳಿತಳು. ಕೊನೆಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪರೀಕ್ಷೆಯನ್ನು ಮನೆಯಿಂದಲೇ ಕಟ್ಟಿದಳು. ನಿಘಂಟಿನ ಸಹಾಯದಿಂದ ಹಿಂದಿ ಕಲಿತು ನಾಲ್ಕು ಹಂತದ ಪರೀಕ್ಷೆ ಪಾಸು ಮಾಡಿದಳು.

ರಂಗನಾಯಕಮ್ಮ ಬಾಲ್ಯದಲ್ಲಿ ದೈವಭಕ್ತಳು. ಏನನ್ನಾದರೂ ಬರೆಯುವ ಮುನ್ನ, ಕೆಲಸ ಆರಂಭ ಮಾಡುವ ಮುನ್ನ ಅಂಗೈಮೇಲೆ ಬೆರಳಿಂದ ಶ್ರೀರಾಮ ಎಂದು ಬರೆದುಕೊಂಡು ಅದನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದಳು. ಪಠ್ಯದ ಓದಿನ ಜೊತೆಗೆ ಕೈಗೆ ಸಿಕ್ಕಿದ್ದನ್ನೆಲ್ಲ ಓದುವ ಹವ್ಯಾಸದ ರಂಗನಾಯಕಮ್ಮನಿಗೆ ಒಮ್ಮೆ ಸಮಾಜ ಸುಧಾರಕ ವೀರೇಶಲಿಂಗಂ ಅವರ ಬರಹ ಓದಲು ಸಿಕ್ಕಿತು. ಮತ್ತಷ್ಟು ಅವರ ಬರಹಗಳನ್ನು ಓದಿದ ಮೇಲೆ ಹುಡುಗಿಯ ಯೋಚನೆಗಳು ಬದಲಾತಗತೊಡಗಿದವು. ವೀರೇಶಲಿಂಗಂ ವಿಚಾರವಾದಿಯಾಗಿದ್ದರೂ ನಾಸ್ತಿಕರಾಗಿರಲಿಲ್ಲ, ಅವರು ಏಕದೇವೋಪಾಸನೆಯನ್ನು ಬೋಧಿಸುತ್ತಿದ್ದರು. ಆದರೆ ಅವರನ್ನು ಓದಿದ ಹುಡುಗಿ ನಾಸ್ತಿಕಳಾಗಿ ರೂಪಾಂತರಗೊಳ್ಳತೊಡಗಿದಳು. ಓದಿನ ಜೊತೆಜೊತೆಗೆ ಬರವಣಿಗೆಯ ಒತ್ತಡವೂ ಜೋರಾಯಿತು. ಬರೆದದ್ದೆಲ್ಲ ತನ್ನ ತಂದೆ ಹೊರತರುತ್ತಿದ್ದ ನಿಯತಕಾಲಿಕದಲ್ಲೇ ಪ್ರಕಟವಾಗುತ್ತಿತ್ತು. ಮೊದಲು ಬರೆದವೆಲ್ಲ ರಾಜಕುಮಾರ, ರಾಜಕುಮಾರಿ, ರಾಕ್ಷಸ, ಭೂತ, ದೇವಾನುದೇವತೆಗಳ ಕತೆಗಳೇ ಆಗಿದ್ದವು. ಹುಡುಗಿ ಬರೆದ ಮೊದಲ ಸಾಮಾಜಿಕ ಕತೆ ‘ಪಾರ್ವತಮ್ಮ’ ತೆಲುಗು ಸ್ವಾತಂತ್ರ್ಯ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಸಂಬಂಧದಲ್ಲೇ ಮದುವೆಯಾಗುವುದು ಸರಿಯಲ್ಲವೆಂದು ಹೇಳುವ ಕತೆ ಅದು.

೧೯೫೮ರಲ್ಲಿ ಮನೆಯವರು ನೋಡಿದ ವರನೊಡನೆ ಸಾಂಪ್ರದಾಯಿಕ ವಿವಾಹವಾಯಿತು. ಅದೊಂದು ಏಳುಬೀಳಿನ ಸಂಘರ್ಷದ ದಾಂಪತ್ಯ. ಅಷ್ಟಾದರೂ ಬರಹ ಕಾಯಕ ಒಂದೇಸಮ ಮುಂದುವರೆಸಿದರು. ಬರೆದಿದ್ದೆಲ್ಲ ಪತ್ರಿಕೆಗಳಲ್ಲಿ ಪ್ರಕಟವಾದವು. ಕೂಡಲೇ ಪುಸ್ತಕಗಳೂ ಆದವು. ರಂಗನಾಯಕಮ್ಮ ತಎಲುಗಿನ ಜನಪ್ರಿಯ ಕತೆಗಾರ್ತಿಯೆನಿಸಿಕೊಂಡರು. ೧೯೬೨-೬೩ರಲ್ಲಿ ಆಂಧ್ರಪ್ರಭಾ ಪತ್ರಿಕೆಯಲ್ಲಿ ಬಲಿಪೀಠಂ ಧಾರಾವಾಹಿ ಪ್ರಕಟವಾಯಿತು. ಪುಸ್ತಕ ರೂಪದಲ್ಲಿ ಬಂದಾಗ ೧೯೬೫ರಲ್ಲಿ ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂತು.

ದಾಂಪತ್ಯದ ಸಂಘರ್ಷ ವೈಚಾರಿಕ ಓದಿನ ಕಡೆಗೆ ಎಳೆಯಿತು. ಅದರ ಪ್ರಭಾವವು ಕತೆ, ಕಾದಂಬರಿಗಳಲ್ಲಿ ಕಾಣತೊಡಗಿತು. ಸ್ತ್ರೀ, ಚಡುವುಕನ್ನ ಕಮಲಾ, ಕೃಷ್ಣವೇಣಿ ಮೊದಲಾದ ದಿಟ್ಟ ಹೆಣ್ಣು ಪಾತ್ರಗಳಿರುವ ಕಾದಂಬರಿಗಳನ್ನು ಬರೆದರು. ಬದುಕಿನ ಹೊರದಾರಿಗಳನ್ನು ಅವರು ಸೃಷ್ಟಿಸಿದ ಪಾತ್ರಗಳೇ ತೋರಿಸಿಕೊಟ್ಟವು. ೧೯೭೦ರಲ್ಲಿ ಇಬ್ಬರು ಮಗಂದಿರು, ಒಬ್ಬ ಮಗಳು ಹುಟ್ಟಿದ ಬಳಿಕ ಒಟ್ಟಿಗಿರಲು ಸಾಧ್ಯವಾಗದೇ ಗಂಡನಿಂದ ಬೇರೆಯಾದರು. ಕಮ್ಯುನಿಸಂ

ರಂಗನಾಯಕಮ್ಮ ಅವರ ವಿಶೇಷತೆಯೆಂದರೆ ಮಹಿಳಾ ಸ್ವಾತಂತ್ರ್ಯದ ಬಗೆಗೆ ತಮ್ಮ ಪ್ರತಿಪಾದನೆಗಳ ಹಾಗೆಯೇ ತಾವೂ ಸ್ವಾಯತ್ತವಾಗಿ ಬದುಕಿದ್ದು. ೩೧ ವರ್ಷಕ್ಕೆ ಮೂರು ಮಕ್ಕಳೊಡನೆ ಏಕಾಂಗಿಯಾದ ಅವರು ಮರುಮದುವೆಯ ಯೋಚನೆ ಮಾಡಲಿಲ್ಲ. ಕೆಲಸಮಯದ ಬಳಿಕ ತಮಗಿಂತ ೧೦ ವರ್ಷ ಕಿರಿಯ ವ್ಯಕ್ತಿಯೊಡನೆ ‘ಜೊತೆವಾಸ’ದ ಸಂಬಂಧ ಹೊಂದಿದರು. ಮದುವೆಯ ಮೊದಲು ತಮ್ಮ ಹೆಸರನ್ನು ತವರಿನ ಸರ್ನೇಮ್ ಜೊತೆಗೆ ದಡ್ಡನಾಲ ರಂಗನಾಯಕಮ್ಮ ಎಂದು ಬರೆದುಕೊಳ್ಳುತ್ತಿದ್ದರು. ಮದುವೆಯ ಬಳಿಕ ಗಂಡನ ಮನೆಯ ಸರ್ನೇಮ್ ಆದ ಮುಪ್ಪಾಲ ರಂಗನಾಯಕಮ್ಮ ಎಂದು ಮಾಡಿಕೊಂಡಿದ್ದರು. ಗಂಡನಿಂದ ಬೇರೆಯಾದ ಬಳಿಕ ಎರಡನ್ನೂ ಬಿಟ್ಟು ಕೇವಲ ರಂಗನಾಯಕಮ್ಮ ಎಂದಷ್ಟೇ ಉಳಿಸಿಕೊಂಡರು. ಇವೆಲ್ಲ ಸಣ್ಣ ವಿಷಯಗಳೆನಿಸಿದರೂ ತಮ್ಮ ಬರಹದ ಆಶಯಗಳಂತೆ ಮಾದರಿಯಾಗಿ ಬದುಕಲೆತ್ನಿಸಿದ ರಂಗನಾಯಕಮ್ಮ ವಿಶಿಷ್ಟರಾಗಿ ನಿಲ್ಲುತ್ತಾರೆ.

ಹೋರಾಟ, ಚಳವಳಿಗಳ ನಂಟು

ಸಮಸಮಾಜ ಬಯಸುವ ಕಮ್ಯುನಿಸ್ಟ್ ಸಿದ್ಧಾಂತದಡಿ ನಾನಾ ಹೋರಾಟ, ಚಳವಳಿಗಳು ನಡೆದ ನೆಲ ಆಂಧ್ರಪ್ರದೇಶ. ವಿಚ್ಛೇದನದ ಬಳಿಕ ೧೯೭೩ರ ಹೊತ್ತಿಗೆ ರಂಗನಾಯಕಮ್ಮ ಅವರಿಗೆ ಪರಿಚಯವಾಯಿತು. ೧೯೭೪ರಲ್ಲಿ ಮಾರ್ಕ್ಸಿಸ್ಟ್ ಲೆನಿನಿಸ್ಟ್ ಎಂದು ಕರೆದುಕೊಳ್ಳುತ್ತಿದ್ದ ನಾಗಿರೆಡ್ಡಿಯವರ ಗುಂಪಿನ ಕಾರ್ಯಕರ್ತರು ಭೇಟಿಯಾದರು. ಅವರ ವಿಚಾರ ಒಪ್ಪಿತವೆನಿಸಿ ಕೈ ಜೋಡಿಸಿದರು. ಆ ನಂಟು ಅವರ ಬದುಕಿನ, ಬರವಣಿಗೆಯ ದಿಕ್ಕನ್ನೇ ಬದಲಿಸಿತು.

ವಿಜಯವಾಡದ ವಿಶ್ವನಾಥ ಸತ್ಯನಾರಾಯಣ ಬರೆದ ರಾಮಾಯಣ ಕಲ್ಪವೃಕ್ಷಂ ತೆಲುಗಿನ ಜನಪ್ರಿಯ ಪುಸ್ತಕ. ಅದಕ್ಕೆ ತಿರುಗೇಟೋ ಎಂಬಂತೆ ವಾಲ್ಮೀಕಿ ರಾಮಾಯಣವನ್ನೇ ಆಧರಿಸಿ ರಾಮಾಯಣದ ಮಾರ್ಕ್ಸ್ವಾದಿ ವಿಮರ್ಶೆ ‘ರಾಮಾಯಣ ವಿಷವೃಕ್ಷಂ’ ಅನ್ನು ರಂಗನಾಯಕಮ್ಮ ಬರೆಯತೊಡಗಿದರು. ಮೂರು ಸಂಪುಟಗಳಲ್ಲಿ ಪ್ರಕಟವಾದಾಗ ತೆಲುಗು ಸಾಹಿತ್ಯ ಲೋಕದಲ್ಲಿ ಸ್ಫೋಟಕ ಪರಿಣಾಮವನ್ನುಂಟುಮಾಡಿತು. ರಂಗನಾಯಕಮ್ಮ ಬಡಪೆಟ್ಟಿಗೆ ಹೆದರಲಿಲ್ಲ. ತಮ್ಮ ವಿಮರ್ಶೆಗೆ ಮೂಲ ಸಂಸ್ಕೃತದ ಆಧಾರ ಒದಗಿಸಲು ೬೦೦ಕ್ಕಿಂತ ಹೆಚ್ಚು ಅಡಿಟಿಪ್ಪಣಿಗಳನ್ನು ಕೊಟ್ಟಿದ್ದರು. ಮೂಲ ವಾಲ್ಮೀಕಿ ರಾಮಾಯಣದ ಸಂಸ್ಕೃತ ಆವೃತ್ತಿಯ ಜೊತೆಗೆ ತೆಲುಗಿನಲ್ಲಿ ಅದಕ್ಕೆ ಬಂದ ‘ಪ್ರತಿ ಪದಾರ್ಥ’, ತಾತ್ಪರ್ಯ (ಸಾರಾಂಶ), ಟೀಕಾ, ವಿಮರ್ಶೆಗಳನ್ನು ಆಧರಿಸಿದ್ದರು. ದೀರ್ಘ ಮುನ್ನುಡಿ, ಹಿನ್ನುಡಿಗಳನ್ನು ತಾವೇ ಬರೆದರು. ಮೊದಲ ಸಂಪುಟಕ್ಕೆ ಬರೆದ ಪ್ರಸ್ತಾವನೆ ೧೭೫ ಪುಟಗಳಷ್ಟಿದೆ. ಆರಂಭದ ಸಾಮುದಾಯಿಕ ಬದುಕಿನ ಮಾನವ ಸಮಾಜವು ನಿರಂಕುಶಾಧಿಪತ್ಯದತ್ತ ಜಾರುತ್ತಿದ್ದ ಅವಧಿಯಾಗಿ ರಾಮಾಯಣ ಕಾಲವನ್ನು ಗುರುತಿಸಿದ ರಂಗನಾಯಕಮ್ಮ, ಹೇಗೆ ದುಡಿಯುವ ವರ್ಗವನ್ನು ದಮನಿಸಿ ರಾಜಸತ್ತೆಗಳು ಬೆಳೆದವು ಎನ್ನುವುದನ್ನು ರಾಮಾಯಣದ ವಿಶ್ಲೇಷಣೆಯ ಮೂಲಕ ವಿವರವಾಗಿ ದಾಖಲಿಸಿದರು. ಅವರ ಮುನ್ನುಡಿ ಓದಿಯೇ ಎಷ್ಟೋ ಜನ ಮಾರ್ಕ್ಸ್ ವಾದದ ಕಡೆ ಚಲಿಸಿದೆವೆಂದು ಪತ್ರ ಬರೆದರು. ಮೂರು ಸಂಪುಗಳು ೧೯೭೪, ೧೯೭೫, ೧೯೭೬ರಲ್ಲಿ ಪ್ರಕಟವಾಗಿ ಸಾಹಿತ್ಯಲೋಕ, ಮಹಿಳಾವಾದಿಗಳು, ಸಾಮಾಜಿಕ ಹೋರಾಟಗಾರರ ನಡುವೆ ಭಾರೀ ಜನಪ್ರಿಯತೆ ಗಳಿಸಿದವು. ಸಹಜವಾಗಿ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾದವು. ಲೇಖಕಿಯು ಪುರುಷ ದ್ವೇಷಿ, ಸಂಪ್ರದಾಯ ವಿರೋಧಿ, ಬ್ರಾಹ್ಮಣ ದ್ವೇಷಿ ಮುಂತಾದ ಹಣೆಪಟ್ಟಿ ಪಡೆದುಕೊಂಡರು.

ಕಾರ್ಲ್ ಮಾರ್ಕ್ಸ್ ನನ್ನು ತಮ್ಮ ಆದರ್ಶ ಸಿದ್ಧಾಂತ ಪ್ರತಿಪಾದಿಸಿದ ವ್ಯಕ್ತಿಯೆಂದು ಗೌರವಿಸುತ್ತಿದ್ದ ರಂಗನಾಯಕಮ್ಮ ಒಂದಾದಮೇಲೊಂದು ಮಾರ್ಕ್ಸ್ ವಾದದ ಪುಸ್ತಕಗಳನ್ನು ಓದಿದರು. ಅರ್ಥವಾಗದ, ಕಬ್ಬಿಣದ ಕಡಲೆಯಂತಿದ್ದ ವಿಚಾರಗಳನ್ನು ಮತ್ತೆಮತ್ತೆ ಓದಿ ಅದರ ಛಾಯೆಯಲ್ಲಿ ತಮ್ಮ ಚಿಂತನೆಗಳನ್ನು ಹರಿತಗೊಳಿಸಿಕೊಂಡರು. ಎಲ್ಲ ಸಮಸ್ಯೆಗಳಿಗೂ ಮಾರ್ಕ್ಸ್ ವಾದದಲ್ಲೇ ಪರಿಹಾರ ಇರುವಂತೆ ಕಾಣಿಸತೊಡಗಿತು. ಅದೇವೇಳೆಗೆ ತಾವು ಅರಿತ ಮಾರ್ಕ್ಸ್ ವಾದಕ್ಕೂ, ಮಾರ್ಕ್ಸ್ ವಾದಿಗಳ ಬದುಕಿಗೂ ಅಜಗಜಾಂತರ ವ್ಯತ್ಯಾಸ ಇದೆಯೆನಿಸತೊಡಗಿತು. ಸಮಾಜದ ವೈರುಧ್ಯಗಳನ್ನು ವಿಶ್ಲೇಷಿಸಿ ಮಾರ್ಕ್ಸ್ ವಾದಿ ಸಂಘಟನೆಗಳು ಕಟ್ಟುತ್ತಿರುವ ಹೋರಾಟದಲ್ಲಿ ಏನೋ ಲೋಪವಿದೆ ಎನಿಸಿತು. ಹಾಗೆಂದು ನೇರವಾಗಿ ಸಭೆಗಳಲ್ಲಿ ಚರ್ಚಿಸಿದರು. ನಮ್ಮೊಳಗಿನ ಬೂರ್ಶ್ವಾತನವನ್ನು ನೀಗಿಕೊಳ್ಳುವ ಬಗೆಗೆ ಹೋರಾಟಗಾರರು ಯೋಚಿಸಬೇಕೆಂದು ಸೂಚಿಸಿದರು. ಅದು ಅವರ ಗುಂಪಿಗೆ ಅಪಥ್ಯವಾಯಿತು. ತುರ್ತುಪರಿಸ್ಥಿತಿಯ ವೇಳೆ ಗುಂಪಿನ ನಾಯಕ ನಾಗಿರೆಡ್ಡಿ ತೀರಿಕೊಂಡರು. ಮಿಕ್ಕವರೆಲ್ಲ ೧೯೭೮ರಲ್ಲಿ ‘ಜನಸಾಹಿತಿ’ ಎಂಬ ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆ ಆರಂಭ ಮಾಡಿದರು.

ದಾಸ್ ಕ್ಯಾಪಿಟಲ್ ಅತ್ಯಂತ ಶ್ರೇಷ್ಠ ವಿಚಾರಗಳನ್ನು ಹೊಂದಿದ್ದರೂ ಜನಸಾಮಾನ್ಯರಿಗೆ ಅದನ್ನು ತಿಳಿಸುವಲ್ಲಿ ನಾವು ಮಾರ್ಕ್ಸ್ ವಾದಿಗಳು ಸೋತಿದ್ದೇವೆ ಎಂದು ಅವರಿಗೆ ಅನಿಸಿತು. ಸಾಮಾನ್ಯ ಜನರಿರಲಿ, ಮಾರ್ಕ್ಸ್ ವಾದಿ ಸಂಘಟನೆಯ ನಾಯಕರೂ ದಾಸ್ ಕ್ಯಾಪಿಟಲ್ ಓದಿಲ್ಲ ಎನ್ನುವುದು ಗಮನಕ್ಕೆ ಬಂತು. ಕ್ಯಾಪಿಟಲ್ ಅನ್ನು ಸರಳವಾಗಿ ಅರ್ಥವಾಗುವಂತೆ ಬರೆಯಬೇಕೆಂಬ ಪ್ರಯತ್ನ ಆರಂಭಿಸಿದಾಗ ಅವರ ಸಂಘಟನೆ ಒಪ್ಪಲಿಲ್ಲ. ಕೇಂದ್ರ ನಾಯಕತ್ವದ ಒಪ್ಪಿಗೆ ಪಡೆಯಬೇಕು; ಪುಸ್ತಕದ ಕೆಲಸವನ್ನು ಒಬ್ಬರ ಹೆಸರಿನಲ್ಲಲ್ಲ, ಒಂದು ತಂಡವಾಗಿ ಮಾಡಬೇಕು ಎಂದು ನಕಾರ ಸೂಚಿಸಿತು. ಕ್ಯಾಪಿಟಲ್ ಅನ್ನು ಓದಿ ಬರೆಯಲು ಕೇಂದ್ರನಾಯಕರನ್ನು ಏಕೆ ಕೇಳಬೇಕು ಎಂದು ರಂಗನಾಯಕಮ್ಮ ಬಂಡೆದ್ದು ತಮ್ಮಷ್ಟಕ್ಕೆ ತಾವು ಓದಿ ಬರೆಯತೊಡಗಿದರು. ಕೆಲ ಕಾಲದ ಬಳಿಕ ಯಾಕೋ ತನ್ನನ್ನು ಮೂಲೆಗುಂಪು ಮಾಡುವ, ಒಂದು ಗುಂಪಿನೊಂದಿಗೆ ಗುರುತಿಸುವ ಗುಂಪುಗಾರಿಕೆ ಇರುವುದನ್ನು ಗಮನಿಸಿದರು. ಕೂಡಲೇ ಸಂಘಟನೆಯಿಂದ ಹೊರಬಂದರು. ‘ಜನಸಾಹಿತಿ’ಯನ್ನೇಕೆ ಬಿಟ್ಟೆ ಎಂದೂ ಬರೆದುಕೊಂಡರು. ೧೯೭೭ರಿಂದ ೧೯೭೯ರವರೆಗೆ ಪ್ರಜಾಸಾಹಿತಿ ಎಂಬ ಸಾಹಿತ್ಯಿಕ ಮಾಸಿಕದ ಸಂಪಾದಕಿಯಾದರು. ಯಾವುದೇ ಸಂಘಟನೆ, ಪಕ್ಷ ಸೇರದೇ ಸ್ವತಂತ್ರ ಮಾರ್ಕ್ಸ್ವಾದಿಯಾಗಿ ಲೋಕಸಮಸ್ತವನ್ನೂ ಅರ್ಥೈಸತೊಡಗಿದರು. ಮೂರು ಸಂಪುಟಗಳಲ್ಲಿ ಮಾರ್ಕ್ಸ್ ನ ದಾಸ್ ಕ್ಯಾಪಿಟಲ್ ಕುರಿತ ಹೊತ್ತಗೆಗಳನ್ನು ತಾವೇ ಪ್ರಕಟಿಸಿದರು. ಅವು ಅತ್ಯಂತ ಸರಳವಾಗಿ ಮಾರ್ಕ್ಸ್ ವಾದವನ್ನು ಜನಸಾಮಾನ್ಯರಿಗೆ ತಲುಪಿಸಿದವು. ಅವೆಷ್ಟು ಜನಪ್ರಿಯವಾದವೆಂದರೆ ತೆಲುಗಿನಿಂದ ಇಂಗ್ಲೀಷಿಗೆ ಅನುವಾದಗೊಂಡವು.

೧೯೮೦ರ ಸಮಯ. ಅದು ಯಂಡಮೂರಿ ವೀರೇಂದ್ರನಾಥ್ ಜನಪ್ರಿಯ ಸಾಹಿತಿಯಾಗಿದ್ದ ಕಾಲ. ಅವರ ತುಳಸೀದಳ ಎಂಬ ಧಾರಾವಾಹಿ ಎಲ್ಲೆಡೆ ಮನೆಮಾತಾಗಿತ್ತು. ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದವಾಗಿ ಸಿನಿಮಾ ಕೂಡಾ ಬಂದಿತು. ಭಾನಾಮತಿ, ಮಾಟ, ಮಂತ್ರ, ಭೂತ ಮೊದಲಾದ ಮೂಢನಂಬಿಕೆಗಳೆಂದು ಪರಿಗಣಿಸಲ್ಪಟ್ಟ ಆಚರಣೆಗಳನ್ನು ರೋಚಕವಾಗಿ ಹೆಣೆದ ಕಾದಂಬರಿಗೆ ವೈದ್ಯರೂ, ಲೇಖಕರೂ ಆಗಿದ್ದ ಕೊಮ್ಮೂರಿ ವೇಣುಗೋಪಾಲ ರಾವ್ ಮುನ್ನುಡಿ ಬರೆದು ಹೊಗಳಿ ಅಟ್ಟಕ್ಕೇರಿಸಿದರು. ಆಂಧ್ರಪ್ರಭಾ ಪತ್ರಿಕೆಯ ರವಿವಾರದ ಸಂಚಿಕೆಯಲ್ಲಿ ಆ ಜನಪ್ರಿಯ ಕಾದಂಬರಿಯ ಅವಗುಣಗಳ ಬಗೆಗೆ ನಿರಂತರವಾಗಿ ರಂಗನಾಯಕಮ್ಮ ಪ್ರಹಾರ ಮಾಡಿದರು. ವೈದ್ಯರಾಗಿಯೂ ಜನಸಾಮಾನ್ಯರಲ್ಲಿ ಮೂಢನಂಬಿಕೆ ಬಿತ್ತುವ ಸಾಹಿತ್ಯದ ಬಗೆಗೆ ಮೆಚ್ಚಿಗೆಯ ನುಡಿ ಬರೆದ ಕೊಮ್ಮೂರಿಯವರನ್ನು ತೀಕ್ಷ್ಣ ಟೀಕೆಗೆ ಗುರಿ ಮಾಡಿದರು. ಇದೊಂದು ದೀರ್ಘ ಕಾನೂನು ಸಮರಕ್ಕೆ ನಾಂದಿ ಹಾಡಿತು.

ವಿಚಾರಣೆಯ ವೇಳೆ ನ್ಯಾಯಾಧೀಶರು ರಾಮಾಯಣ ವಿಷವೃಕ್ಷಂ ಬರೆದಾಕೆ ಇದೇ ರಂಗನಾಯಕಮ್ಮನೇ ಎಂದು ಕೇಳಿ ಮುಂದುವರೆಯುತ್ತಿದ್ದರು. ಬಹುಪಾಲು ನ್ಯಾಯಾಧೀಶರು ಅವರ ಬಗೆಗೆ ಋಣಾತ್ಮಕ ಅಭಿಪ್ರಾಯ ಹೊಂದಿ ಸರಸರನೆ ಅವರ ವಿರುದ್ಧವಾಗಿ ತೀರ್ಪು ಕೊಡುತ್ತಿದ್ದರು. ವಿಚಾರಣೆಯು ನಾಸ್ತಿಕತೆ ವರ್ಸಸ್ ಸಂಪ್ರದಾಯಶೀಲತೆಯ ವಾಗ್ಯುದ್ಧದಲ್ಲಿ ಮುಗಿಯುತ್ತಿತ್ತು. ಆದರೆ ರಂಗನಾಯಕಮ್ಮ ಪಟ್ಟುಗಳನ್ನು ಸುಲಭಕ್ಕೆ ಸಡಿಲಿಸಲಿಲ್ಲ. ಸುಪ್ರೀಂಕೋರ್ಟಿನ ತನಕ ಹೋದರು. ಅಲ್ಲಿಯೂ ಪೂರ್ಣ ನ್ಯಾಯ ಸಿಗುವ ಭರವಸೆಯಿಲ್ಲದಾಗ ಅದುವರೆಗಿನ ಕೋರ್ಟ್ ವಿಚಾರಣೆಯ ಆಗುಹೋಗು ಹಾಗೂ ತನ್ನ ವಿಮರ್ಶೆಗಳನ್ನು ಸೇರಿಸಿ ಒಂದು ಪುಸ್ತಕ ಪ್ರಕಟಿಸಿದರು. ೨೦೦೮ರಲ್ಲಿ ಮುನ್ನುಡಿ ಬರೆದ ವೈದ್ಯರು ತೀರಿಕೊಂಡ ಬಳಿಕ ಕೋರ್ಟು ಆ ಪ್ರಕರಣದ ವಿಚಾರಣೆಯನ್ನೇ ನಿಲ್ಲಿಸಿತು.

ಅವರ ಬಿಡುಬೀಸಾದ ಬರವಣಿಗೆ, ವಿಚಾರಗಳಿಗೆ ಬಂದ ವಿರೋಧವೇನೂ ಕಡಿಮೆಯದಲ್ಲ. ಆದರೆ ರಂಗನಾಯಕಮ್ಮ ವಿರೋಧಕ್ಕೆ ಹೆದರಿ ದನಿಯನ್ನು ತಗ್ಗಿಸಿಕೊಂಡವರಲ್ಲ. ಪತ್ರಕ್ಕೆ ಪ್ರತಿಪತ್ರ, ಪ್ರಶ್ನೆಗೆ ಉತ್ತರ, ಆರೋಪಕ್ಕೆ ಸ್ಪಷ್ಟೀಕರಣ, ವಿವಾದಕ್ಕೆ ವಿವರಣೆ – ಯಾವ ಗಾಳಿಮಾತೂ ಹಾಗೆಯೇ ಹಾರಿಹೋಗಲು ಬಿಡದೆ ಎಲ್ಲಕ್ಕೂ ಲಿಖಿತವಾಗಿ ಉತ್ತರಿಸಿ ತಾರ್ಕಿಕ ಅಂತ್ಯ ಮುಟ್ಟಿಸಿದರು. ಅಷ್ಟೇ ಅಲ್ಲ, ವಾಗ್ವಾದಗಳನ್ನು ಪುಸ್ತಕವಾಗಿ ಪ್ರಕಟಿಸಿದರು.

ದ್ವಂದ್ವಗಳಿಗೆ ಉತ್ತರ

ಅಂಬೇಡ್ಕರ್ ಜನ್ಮಶತಮಾನೋತ್ಸವದ ಬಳಿಕ ಅವರ ಪುಸ್ತಕಗಳನ್ನು ಆಮೂಲಾಗ್ರವಾಗಿ ಓದಿದರು. ತನಗೆ ಏಳುತ್ತಿದ್ದ ಎಷ್ಟೋ ದ್ವಂದ್ವಗಳಿಗೆ ಅವರಲ್ಲಿ ಉತ್ತರವಿದ್ದಂತೆ ತೋರಿತು. ಅಂಬೇಡ್ಕರರ ಬಗೆಗೆ ಅಪಾರ ಗೌರವ ಬೆಳೆಯಿತು. ಆದರೆ ದಲಿತರ ಸಮಸ್ಯೆಗಳಿಗೆ ಬುದ್ಧನಷ್ಟೇ ಪರಿಹಾರವಾಗಲಾರ; ಅಂಬೇಡ್ಕರರಷ್ಟೇ ಆದರೂ ಸಾಲದು; ಮಾರ್ಕ್ಸ್ ಬೇಕೇಬೇಕು ಎಂದು ಭಾವಿಸಿದರು. ಅಂಬೇಡ್ಕರ್-ಬುದ್ಧರ ಜೊತೆ ಮಾರ್ಕ್ಸ್ ವಾದವೂ ಸೇರಿದರೆ ದಲಿತೋದ್ಧಾರವಾಗುತ್ತದೆ ಎಂಬ ಬರಹ ಬರೆದು ಸಾಕಷ್ಟು ಟೀಕೆಗೆ ಗುರಿಯಾದರು. ಅಂಬೇಡ್ಕರ್ವಾದಿಗಳು, ಮಾರ್ಕ್ಸ್ ವಾದಿಗಳ ನಂತರ ಪ್ರಕರಣವೊಂದರಲ್ಲಿ ಆಂಧ್ರದ ಸ್ತ್ರೀವಾದಿಗಳು ತಳೆದ ನಿಲುವನ್ನು ಬೂರ್ಶ್ವಾ ಎಂದು ಜರೆದು ಅವರಿಂದಲೂ ಟೀಕೆ, ವಿಮರ್ಶೆಗಳನ್ನು ಸ್ವೀಕರಿಸಿದರು. ಹೀಗೆ ಸಮಾಜದ ಹಲವೆಂಟು ವಿಷಯಗಳ ಬಗೆಗೆ ತಮ್ಮ ಅಭಿಪ್ರಾಯವನ್ನು ನಿಖರವಾಗಿ, ನೇರವಾಗಿ ತಿಳಿಸುತ್ತಿದ್ದ ಅವರು ಪ್ರಜಾಸಾಹಿತಿ, ಪ್ರಜಾತಂತ್ರ, ಆಂಧ್ರಜ್ಯೋತಿಗಳಲ್ಲಿ ಪ್ರಶ್ನೋತ್ತರ ರೂಪದಲ್ಲಿ ಎಲ್ಲಾ ವಿಷಯಗಳ ಬಗೆಗೂ ಉತ್ತರಿಸುತ್ತಿದ್ದರು. ಪ್ರಶ್ನೋತ್ತರಗಳನ್ನೂ ಎರಡು ಸಂಪುಟಗಳಲ್ಲಿ ಪ್ರಕಟಿಸಿದರು.

ಇಂದಿಗೂ ಕೊಂಚ ವಿರಾಮ ದೊರೆತದ್ದೇ ತಮ್ಮ ಹಳೆಯ ಬರಹಗಳನ್ನು ಪರಿಶೀಲಿಸುತ್ತಾರೆ. ಜನರಿಗೀಗ ನಿರುಪಯೋಗಿ ಎಂದು ಹಿಂದೆ ಬರೆದ ತಮ್ಮ ಹಲವಾರು ಕತೆಗಳನ್ನು, ಕೃಷ್ಣವೇಣಿ ಕಾದಂಬರಿಯನ್ನೂ ಹಿಂದೆಗೆದುಕೊಂಡಿದ್ದಾರೆ. ರಾಮಾಯಣ ಓದಿದಂತೆ ಮಹಾಭಾರತವನ್ನೂ ಓದತೊಡಗಿ ೨೦೧೫ರಲ್ಲಿ ‘ಇದಂಡಿ ಮಹಾಭಾರತಮು’ ಬಂತು. ೨೦೧೬ರಲ್ಲಿ ವೇದಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಯೋಚನೆ ಸರ್ಕಾರಕ್ಕಿದೆಯೆಂದು ತಿಳಿದದ್ದೇ ವೇದಗಳನ್ನು ಓದತೊಡಗಿದರು. ಅವುಗಳಲ್ಲೇನಿದೆ, ಇಲ್ಲ ಎಂದು ಅಭಿಪ್ರಾಯ, ಟೀಕೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರು.

ಹೀಗೆ ನಿರಂತರವಾಗಿ ಓದು, ಬರೆಹದಲ್ಲಿ ತೊಡಗಿರುವ ಅವರು ಆತ್ಮಚರಿತ್ರೆ ಬರೆಯಬೇಕು ಎಂದು ಓದುಗರು ಒತ್ತಾಯಿಸಿದರೂ ನಿರಾಕರಿಸಿದರು. ತಮ್ಮ ಕತೆ, ಕಾದಂಬರಿ, ಬರಹಗಳಲ್ಲಿ ಆತ್ಮವೃತ್ತಾಂತವು ಆಗೀಗ ಸುಳಿದು ಹೋಗಿರುವುದರಿಂದ ಮತ್ತೆ ಬರೆಯುವ ಅಗತ್ಯ ಇಲ್ಲ ಎನ್ನುವುದು ಅವರ ಅಭಿಪ್ರಾಯ. ಗೆಳತಿಯೊಬ್ಬಳಿಗೆ ತಮ್ಮ ದಾಂಪತ್ಯದ ಸಂಘರ್ಷಗಳ ಒಳಹೊರಗುಗಳನ್ನು ಪ್ರಸ್ತಾಪಿಸಿ ಬರೆದ ಪತ್ರಗಳನ್ನು ‘ಆತ್ಮಚರಿತ್ರಾತ್ಮಕ ವಿವರಗಳುಳ್ಳ ಪತ್ರಗಳು’ ಎಂಬ ಹೆಸರಿನಲ್ಲಿ ತಾವೇ ಪ್ರಕಟಿಸಿದರು.
ತಮ್ಮ ಹೆಚ್ಚಿನ ಪುಸ್ತಕಗಳನ್ನು `ಸ್ವೀಟ್ ಹೋಂ ಪಬ್ಲಿಕೇಷನ್ಸ್’ ಎಂಬ ತಮ್ಮ ಪ್ರಕಟಣಾ ಸಂಸ್ಥೆಯಿಂದಲೇ ಪ್ರಕಟಿಸಿದ್ದಾರೆ. ಯಾವ ಪ್ರಶಸ್ತಿಯನ್ನೂ ತೆಗೆದುಕೊಳ್ಳಲಾರೆ ಎಂದು ಘೋಷಿಸಿಕೊಂಡಿದ್ದಾರೆ.
ಇದು ರಂಗನಾಯಕಮ್ಮ. ಈಗವರಿಗೆ ೮೩ರ ಇಳಿಹರೆಯ.

ಈ ಭೂಮಿ ಮೇಲಿನ ಜೀವ ಅಜೀವರ ನಡುವೆ ಭೇದ, ತಾರತಮ್ಯ ಇರಕೂಡದು; ಎಲ್ಲರೂ ಎಲ್ಲವನ್ನು ಹಂಚಿಕೊಂಡು ಸಮರಾಗಿ ಘನತೆಯ ಬಾಳು ನಡೆಸುವಂತಹ ಸಮಾಜ ಬರಬೇಕು ಎಂಬ ಉದಾತ್ತ ಕನಸಿನ ಕಮ್ಯುನಿಸ್ಟ್ ಸಿದ್ಧಾಂತ ದುಡಿಯುವ ವರ್ಗಕ್ಕೆ, ಶೋಷಿತರಿಗೆ, ಮಾನವೀಯ ಮನಸ್ಸುಗಳಿಗೆ ಉದಾತ್ತವೆನಿಸುತ್ತದೆ. ಆದರೆ ಬಂಡವಾಳ ಹೂಡುವವರಿಗೆ, ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಅಳೆಯುವವರಿಗೆ ಅದು ಇಷ್ಟವೇ ಆಗುವುದಿಲ್ಲ. ಈಗಂತೂ ವಿಶ್ವಾದ್ಯಂತ ಎಡ, ಕಮ್ಯುನಿಸ್ಟ್ ಚಿಂತನೆ ಎಂದರೆ ಸಮಾಜದ್ರೋಹಿ, ದೈವವಿರೋಧಿ, ರಾಷ್ಟ್ರದ್ರೋಹಿ ಚಿಂತನೆ ಎಂದು ಬಿಂಬಿಸುವಲ್ಲಿ ಬಂಡವಾಳಶಾಹಿಗಳು ಮತ್ತವರ ಏಜೆಂಟರಾದ ಆಳುವ ಸರ್ಕಾರಗಳು ಯಶಸ್ವಿಯಾಗಿವೆ. ಅಂಥದರ ನಡುವೆ ಎಡ ಸಿದ್ಧಾಂತವನ್ನೇ ಗಟ್ಟಿಯಾಗಿ ನಂಬಿದ ರಂಗನಾಯಕಮ್ಮ ಯಾವ ಅಳುಕಿಲ್ಲದೆ ಅದರಂತೆ ಬದುಕುತ್ತ, ಅದರಲ್ಲಿ ಭರವಸೆ ಇಟ್ಟುಕೊಳ್ಳಿ ಎಂದು ಮುಂದಿನ ತಲೆಮಾರುಗಳಿಗೆ ಹೇಳುತ್ತ ಸಮಾನತೆಯ ಕನಸಿನ ಕೊಂಡಿಯಾಗಿದ್ದಾರೆ. ನಾಳೆಯ ನೆಮ್ಮದಿಯ ಬಗೆಗೆ ಲೋಕವನ್ನು ಎಚ್ಚರಿಸುತ್ತಲೇ ಇದ್ದಾರೆ.
ನ್ಯಾಯದ ಕಣ್ಣು ತೆರೆದುಕೊಂಡ ಆ ಹೆಣ್ಣು ಜೀವಕ್ಕೆ, ಲೋಕವನ್ನೂ ಬೆಳಕಿನೆಡೆಗೆ ಒಯ್ಯುತ್ತಿರುವ ಆ ಜೀವಕ್ಕೆ ಶರಣು ಶರಣು. (ಧನ್ಯವಾದಗಳು : ಭೂಮಿ ಬಳಗ ಬ್ಲಾಗ್)


ಡಾ. ಎಚ್.ಎಸ್. ಅನುಪಮಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *