ಸಾಧನಕೇರಿ/ ನಮ್ಮ ದೇಹ ನಮ್ಮ ವಿಧಿಯಲ್ಲ – ನೇಮಿಚಂದ್ರ

ಭಾರತದ ಸಶಸ್ತ್ರ ಸೇನೆ ಇಸವಿ 1992ರಲ್ಲಿ ಮಹಿಳೆಯರಿಗೆ ಬಾಗಿಲು ತೆರೆದರೂ, ಅವರು ಹುದ್ದೆಯಲ್ಲಿ ಮೇಲೇರದಂತೆ, ಕಮಾಂಡರ್ ಸ್ಥಾನಕ್ಕೆ ಬಾರದಂತೆ ತಡೆ ಹಾಕಿತ್ತು. 28 ವರ್ಷಗಳ ನಂತರ, ದಿನಾಂಕ 17 ಫೆಬ್ರವರಿ 2020ರಂದು ಸುಪ್ರೀಂ ಕೋರ್ಟ್ ‘ಕಮಾಂಡ್ ಹುದ್ದೆಗಳ ನಾಯಕತ್ವ ಸ್ಥಾನಕ್ಕೆ ಮಹಿಳೆಯರಿಗೂ ಅವಕಾಶವಿರಬೇಕು’ ಎಂದು ತೀರ್ಪು ನೀಡಿದೆ.

ಭೂಸೇನೆಯ ಮುಖ್ಯಸ್ಥರಾದ ಜೆನರಲ್ ಮನೋಜ್ ನಾರವನೆ ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸಿ ‘ಈ ತೀರ್ಪು ಮಹಿಳೆಯರ ಕಾಯಂ ಸೇವೆಯನ್ನು ಕುರಿತು ಸ್ಪಷ್ಟತೆಯನ್ನು ನೀಡಿದೆ, ಮುನ್ನಡೆಯಲು ಬೇಕಾದ ಹಾದಿಯನ್ನು ಸಕ್ರಿಯಗೊಳಿಸಿದೆ. ಭೂಸೇನೆಯಲ್ಲಿ ಲಿಂಗ ತಾರತಮ್ಯವಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳಿವೆ’ ಎಂದು ದಿನಾಂಕ 20 ಫೆಬ್ರವರಿ 2020ರಂದು ಮಾಧ್ಯಮಗಳಿಗೆ ತಿಳಿಸಿರುವುದು ಸಮಾಧಾನದ ವಿಷಯ. ‘ಭಾರತೀಯ ಭೂಸೇನೆ ಜಾತಿ, ಧರ್ಮ, ಲಿಂಗದ ಮೇಲೆ ಯೋಧರನ್ನು ತಾರತಮ್ಯದ ದೃಷ್ಟಿಯಿಂದ ನೋಡುವುದಿಲ್ಲ. ಭೂಸೇನೆಯ ಪ್ರತಿಯೊಬ್ಬರಿಗೂ ದೇಶಕ್ಕೆ ಸೇವೆ ಸಲ್ಲಿಸುವ ಮತ್ತು ತಮ್ಮ ವೃತ್ತಿಯಲ್ಲಿ ಮೇಲೇರುವ ಸಮಾನ ಅವಕಾಶವಿದೆ ಎಂದು ನಾನು ಭರವಸೆ ನೀಡುತ್ತೇನೆ’ ಎಂದಿದ್ದಾರೆ.

  • * *

1980ರ ದಶಕದ ಆರಂಭ. ನಾನು ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದ ಸಮಯ. ನೌಕಾಸೇನೆಯ ಅಧಿಕಾರಿಗಳು ನೇಮಕಾತಿಗೆಂದು ನಮ್ಮ ಕಾಲೇಜಿಗೆ ಬಂದಿದ್ದರು. ಕುತೂಹಲದಿಂದ ನಾನು ಹೋಗಿ ಕುಳಿತು ಕೊಂಡಿದ್ದೆ. ಸೇನೆಯ ಸಾಹಸದ ಬದುಕನ್ನು ಸ್ವಾರಸ್ಯಕರವಾಗಿ ವಿವರಿಸಿದ ಅಧಿಕಾರಿ, ‘ಸೇನೆಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಸೇನೆಯ ಧೀರೋದಾತ್ತ ಬದುಕು ಏನಿದ್ದರೂ ಪುರುಷರಿಗೆ ಮಾತ್ರ’ ಎಂದು ಖಂಡಿತವಾಗಿ ನುಡಿದು ನನ್ನನ್ನು ಹೊರಗಟ್ಟಿದ್ದರು.

ಇಸವಿ 1992ರಲ್ಲಿ ಸಶಸ್ತ್ರ ಸೇನೆ ಮಹಿಳೆಯರಿಗೆ ಬಾಗಿಲು ತೆರೆದಾಗ, ಉತ್ಸಾಹದಿಂದ ‘ಅಚಲ’ ಪತ್ರಿಕೆಯಲ್ಲಿ ಬರೆದಿದ್ದೆ. ಅಲ್ಲಿಂದಾಚೆಗೆ ಸೇನೆಯಲ್ಲಿಯ ಮಹಿಳೆಯರ ಅನುಭವಗಳು ನನಗೆ ಸದಾ ಆಸಕ್ತಿಯ ವಿಷಯವಾಯಿತು. ಮೂರೂವರೆ ದಶಕಗಳ ಹಿಂದೆ ಎಚ್.ಎ.ಎಲ್.ಗೆ ಸೇರಿದ ನಾನು, ನನ್ನ ವೃತ್ತಿ ಜೀವನದ ಬಹಳಷ್ಟು ಸಮಯವನ್ನು ಭೂಸೇನೆ, ವಾಯುಸೇನೆ, ನೌಕಾಪಡೆ, ತಟರಕ್ಷದಳದ ಒಡನಾಟದಲ್ಲಿ ಕಳೆದ ಕಾರಣ, ಸೇನೆಯಲ್ಲಿ ಮೆಲ್ಲನೆ ಕಂಡ ಬದಲಾವಣೆಗಳನ್ನೂ ಕುತೂಹಲದಿಂದ ವೀಕ್ಷಿಸಿದ್ದೆ.

1992ರಲ್ಲಿ ಮಹಿಳೆಯರನ್ನು ಸಶಸ್ತ್ರ ಪಡೆಗೆ ಸೇರಿಸಿಕೊಳ್ಳಲು ಸರ್ಕಾರ ನಿರ್ಧರಿಸಿತು. ಮಹಿಳೆಯರು ತಮ್ಮ ಅರ್ಹತೆಯಿಂದ ‘ಸರ್ವಿಸ್ ಸೆಲೆಕ್ಷನ್ ಬೋರ್ಡಿ’ನ ಮೂಲಕ ಆಯ್ಕೆಯಾದರು. ಈ ಮಹಿಳೆಯರಿಗೆ ಐದರಿಂದ ಏಳು ವರ್ಷಗಳ ಸೇವಾ ಸಮಯವನ್ನು ನೀಡಿದ್ದರು. ಕೊನೆಯ ವರ್ಷದಲ್ಲಿ ಮಹಿಳೆಯರ ಕಾರ್ಯ-ಕೌಶಲವನ್ನು ನೋಡಿ, ಸೇನೆಯ ಅವಶ್ಯಕತೆಗೆ ಅನುಸಾರವಾಗಿ ಸೇವಾವಧಿಯನ್ನು ಹೆಚ್ಚಿಸುವುದಾಗಿ ಹೇಳಿದ್ದರು. ಕಾಯಂ ಕೂಡ ಮಾಡುವ ಸಾಧ್ಯತೆಯನ್ನು ತಿಳಿಸಿದ್ದರು.

ಆದರೆ ಈ ಮಹಿಳೆಯರು ಹುದ್ದೆಯಲ್ಲಿ ಮೇಲೇರದಂತೆ ಅಡೆತಡೆಗಳು ಒಡ್ಡಿ ನಿಂತವು. ಕಮಾಂಡರ್ ಸ್ಥಾನಕ್ಕೆ ಬಾರದಂತೆ ತಡೆ ಹಾಕಿತ್ತು. ಭೂಸೇನೆಯ ಎಸ್.ಎಸ್.ಸಿ. (ಶಾರ್ಟ್ ಸರ್ವಿಸ್ ಕಮಿಷನ್) ಮಹಿಳಾ ಅಧಿಕಾರಿಗಳು ಕಾಯಂ ಸೇವೆಯ ಅವಕಾಶ (ಪರ್ಮನೆಂಟ್ ಕಮಿಷನ್) ಮತ್ತು ಭೂಸೇನೆಯಲ್ಲಿ ಸಮಾನ ಅವಕಾಶಗಳನ್ನು ಬೇಡಿ ಇಸವಿ 2003ರಲ್ಲಿ ದೆಹಲಿ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿದರು. ಮಹಿಳೆಯರನ್ನು ಸೇನೆಯಲ್ಲಿ ಕಮಾಂಡರ್ ಮುಂತಾದ ಕಾಯಂ ಸೇವೆಯ ಹುದ್ದೆಗಳಿಗೂ ನೇಮಕ ಮಾಡಬೇಕು ಎಂದು ಇಸವಿ 2010ರಲ್ಲಿ ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು. ಇಂತಹ ಜವಾಬ್ದಾರಿಯನ್ನು ಮಹಿಳೆಯರಿಗೆ ನೀಡಲಾಗದು ಎಂದು ವಾದಿಸಿ, ಸರ್ಕಾರವು ಆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತು. ಹತ್ತು ವರ್ಷಗಳ ನಂತರ ಈಗ, ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ, ಈ ಚಾರಿತ್ರಿಕ ತೀರ್ಪು ಸ್ವಾಗತಾರ್ಹ. ಸ್ತ್ರೀ ಸಬಲೀಕರಣ ಮತ್ತು ಸಮಾನತೆಯ ಹಾದಿಯಲ್ಲಿ ಇಟ್ಟ ಗುರುತರ ಹೆಜ್ಜೆ ಇದು.

ಮಹಿಳೆಯರಿಗೆ ಸ್ಥಾನ ನಿರಾಕರಿಸಲು ಸರ್ಕಾರ ನೀಡಿದ್ದ ಕಾರಣಗಳೇನು ಗೊತ್ತೆ?

‘ಕಮಾಂಡರ್ ಹುದ್ದೆಗಳಿಗೆ ಮಹಿಳೆಯರು ಸೂಕ್ತರಲ್ಲ. ಯಾಕೆಂದರೆ, ಸೇನೆಯ ಪ್ರಮುಖ ಹುದ್ದೆಗಳಲ್ಲಿ ಪುರುಷರೇ ಇರುತ್ತಾರೆ. ಮಹಿಳಾ ಅಧಿಕಾರಿಯ ಆದೇಶವನ್ನು ಪಾಲಿಸುವ ರೀತಿಯಲ್ಲಿ ಸೇನಾ ಪಡೆಗಳು ಇನ್ನೂ ಮಾನಸಿಕವಾಗಿ ಸಿದ್ಧವಾಗಿಲ್ಲ’.

ಈ ವಿವರಣೆ ಹೇಗಿದೆ ನೋಡಿ. ಪುರುಷರ ಮಿತಿಗೆ ಮಹಿಳೆಯರಿಗೆ ಶಿಕ್ಷೆ. ಇದು ಸರಕಾರ ಕೊಟ್ಟ ಲಿಖಿತ ವಿವರಣೆ! ಕಾನೂನು ಮಿತಿ ಇಲ್ಲದೆಯೂ, ಲಿಖಿತವಾಗಿ ನೀಡದಿದ್ದರೂ, ಮಿಲಿಟರಿ ಇರಲಿ ಬಹಳಷ್ಟು ಸಿವಿಲ್ ರಂಗಗಳಲ್ಲಿ ಕೂಡಾ ಮಹಿಳೆಯರು ತಮ್ಮ ಹುದ್ದೆಯಲ್ಲಿ ಕಮಾಂಡ್ ಮಾಡುವ ಸ್ಥಾನಗಳಿಗೆ ಬಡ್ತಿಯಾಗದೆ ಇರಲು ಕಾರಣ ಮಹಿಳೆಯರಲ್ಲಿ ಇರುವ ಕುಂದು ಕೊರೆತೆಗಳಲ್ಲ. ಇಂತಹುದೇ ಆದ ಪುರುಷ ಪ್ರಧಾನ ಮೈಂಡ್‍ಸೆಟ್.

ಇದರಾಚೆಗೂ ಸರಕಾರ ನೀಡಿದ ವಿವರಣೆ ಏನಿತ್ತು ಗೊತ್ತೆ?

‘ಮಹಿಳೆ ಮತ್ತು ಪುರುಷರ ದೈಹಿಕ ಸ್ಥಿತಿಯು ವಿಭಿನ್ನವಾಗಿದೆ. ಆದ್ದರಿಂದ ಮಹಿಳೆ ಮತ್ತು ಪುರುಷ ಅಧಿಕಾರಿಯನ್ನು ಸಮಾನವಾಗಿ ಪರಿಗಣಿಸಲು ಸಾಧ್ಯವಾಗದು’.

ಹೆಣ್ಣು ಮತ್ತು ಗಂಡಿನ ನಡುವೆ ದೈಹಿಕ ವ್ಯತ್ಯಾಸಗಳು ಇವೆ. ಆದರೆ ಅವು ವ್ಯತ್ಯಾಸಗಳು ಮಾತ್ರ, ಹೆಚ್ಚುಗಾರಿಕೆಗಳಲ್ಲ. ಕೇವಲ ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸಗಳಿಲ್ಲ, ಗಂಡು ಗಂಡಿನ ನಡುವೆಯೂ, ಹೆಣ್ಣು ಹೆಣ್ಣಿನ ನಡುವೆಯೂ ವ್ಯತ್ಯಾಸಗಳಿವೆ. ಆದರೆ ಈ ವ್ಯತ್ಯಾಸಗಳು, ವಿಭಜನೆಯ/ವಿಂಗಡನೆಯ ಗೆರೆಗಳಾಗಬಾರದು. ಕರ್ಣಂ ಮಲ್ಲೇಶ್ವರಿ ಎತ್ತಿದಷ್ಟು ತೂಕವನ್ನು ನಮ್ಮ ಮನೆಯ ಎಷ್ಟು ಜನ ಸಾಮಾನ್ಯ ಗಂಡಸರು ಎತ್ತಬಲ್ಲರು ಹೇಳಿ? ಅವಕಾಶ ಮತ್ತು ತರಪೇತು, ಆತ್ಮಸ್ಥೈರ್ಯ ಮತ್ತು ಪ್ರೋತ್ಸಾಹ ಪವಾಡವನ್ನು ಮಾಡಬಲ್ಲದು.

ಹೀಗಿದ್ದೂ ಬಹಳ ಹಿಂದೆಯೇ ‘ಅನಾಟಮಿ ಈಸ್ ಡೆಸ್ಟಿನಿ’ ಎಂದು ಸಾರಿದ್ದ ಪುರುಷ ವಿಜ್ಞಾನಿಗಳ ಮಾತನ್ನು ಅಧಿಕಾರದಲ್ಲಿರುವ ಬಹಳಷ್ಟು ಪುರುಷರು ಇಂದಿಗೂ ಬಲವಾಗಿ ನಂಬಿದ್ದಾರೆ.

ನನ್ನ ದೇಹ ನನ್ನ ವಿಧಿಯಲ್ಲ

ಮಹಿಳೆ ‘ತನ್ನ ದೇಹ ತನ್ನ ವಿಧಿಯಲ್ಲ’ ಎಂದು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಬಂದಿದ್ದಾಳೆ.

‘ದೇಹ ರಚನೆಯೇ ಭವಿಷ್ಯವನ್ನು ನಿರ್ಧರಿಸುತ್ತದೆ – ನಿಮ್ಮ ದೇಹವೇ ನಿಮ್ಮ ವಿಧಿ’ – ಅನಾಟಮಿ ಈಸ್ ಡೆಸ್ಟಿನಿ ಎಂದು ಫ್ರಾಯ್ಡ್ ಸಾರಿದ್ದ. ಫ್ರಾಯ್ಡ್ ‘ಸ್ತ್ರೀ ಮನಃಶಾಸ್ತ್ರ’ವನ್ನು (ಫೆಮಿನೈನ್ ಸೈಕಾಲಜಿ) ‘ಪುರುಷ ಮನಃಶಾಸ್ತ್ರದ ದೋಷಯುಕ್ತ ರೂಪಾಂತರ’ ಎಂದು ಭಾವಿಸಿದ್ದ. ಫ್ರಾಯ್ಡ್‍ನ ‘ಸ್ತ್ರೀ ಮನಃಶಾಸ್ತ್ರ’ವನ್ನು ಕುರಿತಾದ ಸಿದ್ಧಾಂತಗಳನ್ನು ತಿರಸ್ಕರಿಸಿದ ಮೊಟ್ಟಮೊದಲ ವಿಜ್ಞಾನಿ ಕಾರೆನ್ ಹಾರ್ನಿ. ಫ್ರಾಯ್ಡ್‍ನ ಈ ಸಿದ್ಧಾಂತಗಳನ್ನು ‘ಪುರುಷ ಮನಃಶಾಸ್ತ್ರ’ದ ನ್ಯೂನತೆ ಎಂದು ಕಾರೆನ್ ಸಾಧಿಸಿದಳು. ಫ್ರಾಯ್ಡ್‍ನ ತತ್ತ್ವಗಳನ್ನು ಪ್ರಶಂಸಿಸಿದ ಈಕೆಗೆ ಪುರುಷ ಪ್ರಧಾನ ಸಮಾಜ ಮತ್ತು ಸಂಸ್ಕøತಿಯೇ ಮಹಿಳೆಯರ ಮಾನಸಿಕ ರೋಗಗಳಿಗೆ ಕಾರಣವಿರಬೇಕು ಅನಿಸಿತು. ಇಂಥಾ ಅಭಿಪ್ರಾಯಗಳಿಂದಾಗಿ ಕಾರೆನ್‍ಳನ್ನು ‘ನ್ಯೂಯಾರ್ಕ್ ಮನೋವಿಶ್ಲೇಷಣಾ ಸಂಸ್ಥೆ’ಯಿಂದ ಹೊರ ಹಾಕಿದರು. ಜೀವನೋಪಾಯವನ್ನು ಕಳೆದುಕೊಳ್ಳಬೇಕಾಗಿ ಬಂದರೂ ಕಾರೆನ್ ಹಿಂಜರಿಯಲಿಲ್ಲ. ಧೃತಿಗೆಡದೆ ತನ್ನದೇ ಆದ ಮನೋವಿಶ್ಲೇಷಣಾ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾದಳು. ಮನೋವಿಶ್ಲೇಷಣಾ ತಜ್ಞಳಾಗಿ ಅಮೆರಿಕಾದ ಮಾನಸಿಕ ರೋಗ ಚಿಕಿತ್ಸೆಯನ್ನು (ಸೈಕೋಥೆರಪಿ) ಪ್ರಭಾವಿಸಿದ ಪ್ರಮುಖ ವಿಜ್ಞಾನಿ ಈಕೆ. ‘ಮನುಷ್ಯನಲ್ಲಿ ಬದಲಾಗುವ ಮತ್ತು ಬೆಳೆಯುವ ಶಕ್ತಿ ಇದೆ’ ಎಂದು ಬಲವಾಗಿ ಪ್ರತಿಪಾದಿಸಿದ ಮನಃಶಾಸ್ತ್ರಜ್ಞೆ ಇಕೆ.

1922ರಲ್ಲಿಯೇ ಫ್ರಾಯ್ಡನ ಪ್ರಸಿದ್ಧ ‘ಪೆನಿಸ್ ಎನ್ವಿ’ ಸಿದ್ಧಾಂತವನ್ನು ಕಟುವಾಗಿ ಟೀಕಿಸಿದ ಕಾರೆನ್ ‘ಸ್ತ್ರೀ ಮನಃಶಾಸ್ತ್ರ’ ಗಂಡಸರ ಆಸೆಗಳನ್ನು ಬಿಂಬಿಸುತ್ತದೆ. ‘ಮಹಿಳೆಯರು ಹೇಗಿರಬೇಕೆಂದು ಪುರುಷರು ಬಯಸುತ್ತಾರೋ, ಹೇಗಿರಬೇಕೆಂದು ಹಕ್ಕಿನಿಂದ ಕೇಳುತ್ತಾರೋ, ಹಾಗಿರುವಂತೆ ತಮ್ಮನ್ನು ತಾವು ನೋಡಲು ಮಹಿಳೆಯರು ಪ್ರಯತ್ನಿಸುತ್ತಾರೆ. ಪುರುಷರು, ಮಹಿಳೆಯರನ್ನು ಹಳಿಯುವಲ್ಲಿ ಹೆಚ್ಚು ಕಾತುರವಾಗಿರುವಂತೆ ಕಾಣುತ್ತದೆ’ ಎಂದು ಕಾರೆನ್ ಹೇಳಿದ್ದಳು. ‘ಪುರುಷರ ಶಿಶ್ನವನ್ನು ಮಹಿಳೆಯರು ಅಸೂಯೆಯಿಂದ ಕಾಣುವುದಿಲ್ಲ. ಈ ಸಮಾಜದಲ್ಲಿ ಪುರುಷನಿಗಿರುವ ಮೇಲುದರ್ಜೆಯ ಸ್ಥಾನವನ್ನು ಅಸೂಯೆಯಿಂದ ನೋಡುತ್ತಾರೆ’ ಎಂದಳು. ‘ತಮ್ಮ ಇಷ್ಟ ಬಂದ ಆಸಕ್ತಿಯ ವಿಷಯವನ್ನು ಆಯ್ದುಕೊಂಡು ಯಾರ ತಡೆಯಿಲ್ಲದೆ ಮುಕ್ತವಾಗಿ ಮಾಡಬಲ್ಲ ಪುರುಷನ ಸ್ವಾತಂತ್ರ್ಯವನ್ನು ಮಹಿಳೆಯರು ಈರ್ಷ್ಯೆಯಿಂದ ನೋಡುತ್ತಾರೆ’ ಎಂದು ವಿವರಿಸಿದಳು. ಆಕೆಯ ವಿಚಾರಗಳು ಹಿಟ್ಲರನ ಜರ್ಮನಿಯಲ್ಲಿ ಜನಪ್ರಿಯವಿರಲಿಲ್ಲ. ಜರ್ಮನಿ ಇರಲಿ, ಇಲ್ಲಿ ಅಮೆರಿಕಾದಲ್ಲಿ ಕೂಡ ಆಕೆಯ ವಿಚಾರಗಳನ್ನು ಒಪ್ಪಲು ಯಾರೂ ಸಿದ್ಧವಿರಲಿಲ್ಲ. ಹಿಟ್ಲರನ ನಾಜಿ ಜರ್ಮನಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸದ ಕಾರೆನ್ 1932ರಲ್ಲಿ ಅಮೆರಿಕಗೆ ಬಂದು ‘ಶಿಕಾಗೋ ಮನೋವಿಶ್ಲೇಷಣಾ ಸಂಸ್ಥೆ’ಗೆ ಸೇರ್ಪಡೆಯಾಗಿದ್ದಳು.

ಫ್ರಾಯ್ಡನ ಪ್ರಕಾರ ವ್ಯಕ್ತಿಯ ವರ್ತನೆ ಮತ್ತು ಸ್ವಭಾವ ಆಳವೂ, ಬದಲಾಯಸಿಸಲು ಕಷ್ಟಸಾಧ್ಯವೂ ಆಗಿತ್ತು. ಮನುಷ್ಯರ ಗುಣ, ಸ್ವಭಾವವನ್ನು ಕುರಿತಂತೆ ಫ್ರಾಯ್ಡನ ಈ ನಿರಾಶಾದಾಯಕ ಸಿದ್ಧಾಂತಗಳಿಗೆ ಕಾರೆನ್ ಸವಾಲೆಸೆದಳು. ‘ವ್ಯಕ್ತಿಯ ವರ್ತನೆಯನ್ನು ಬದಲಾಯಿಸಬಹುದು’ ಎಂಬುದಷ್ಟೇ ಅಲ್ಲ ‘ಆತನ ವರ್ತನೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು’ ಎಂಬಂಥ ಹಾರ್ನಿಯ ಹೊಸ ಸಿದ್ಧಾಂತಗಳು ಅಲ್ಲಿಯವರೆಗೂ ಸ್ಥಗಿತಗೊಂಡ ವಿಚಾರಗಳಿಗೆ ಚಾಲನೆಯನ್ನು ನೀಡಿದವು. ಹಾರ್ನಿಯು ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಟ್ಟಳು. ಮನುಷ್ಯನು ತನ್ನ ಸ್ವಭಾವವನ್ನು ಬದಲಾಯಿಸಿಕೊಳ್ಳಬಲ್ಲನೆಂದು ಹಾರ್ನಿ ಬಲವಾಗಿ ನಂಬಿದ್ದಳು.

ಮನೋಬೇನೆಗೆ ಬಲಿಯಾದ ವ್ಯಕ್ತಿ ಪರಿಸ್ಥಿತಿಯ ಬಗ್ಗೆ ತನ್ನ ಭಾವನೆಗಳನ್ನು ಬದಲಾಯಿಸಿ ಕೊಳ್ಳಬಲ್ಲನೆಂದು ಆಕೆ ತಿಳಿದಿದ್ದಳು. ಆದ್ದರಿಂದಲೇ ಮನೋಬೇನೆಗಳನ್ನು ಮನೋವಿಶ್ಲೇಷಣಾ ಚಿಕಿತ್ಸೆಯ ಮೂಲಕ ಗುಣಪಡಿಸಬಹುದೆಂದು ಸ್ಪಷ್ಟವಾಗಿ ತಿಳಿಸಿದಳು. ಆರೋಗ್ಯಕರವಾದ ವಾತಾವರಣವು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಾಯಕ ಮತ್ತು ಆರೋಗ್ಯಕರ ಪರಿಸರ ಪ್ರಕ್ಷುಬ್ಧ ಪರಿಸ್ಥಿತಿಗಳನ್ನು ಎದುರಿಸಲು ನೆರವಾಗುತ್ತದೆ ಎಂಬ ಹಾರ್ನಿಯ ವಿಚಾರಗಳು ಸಾಮಾನ್ಯ ಜನರಿಗೂ ಅರ್ಥವಾಗುವಷ್ಟು ಸರಳವಿದ್ದವು. ಶ್ರಿಸಾಮಾನ್ಯರೂ ತಮ್ಮ ಪರಿಸರವನ್ನು ಆರೋಗ್ಯಪೂರ್ಣ ಮಾಡುವಲ್ಲಿ ಪಾತ್ರ ವಹಿಸಲು ಸಾಧ್ಯವಿತ್ತು. ಹತಾಶೆಯ ಬದಲು ಆಶಾವಾದವನ್ನು ಹಾರ್ನಿಯ ವಿಚಾರಗಳು ಮೂಡಿಸಿದ್ದವು. ಅಸಹಾಯಕತೆಯ ಬದಲು ‘ಬದಲಾಗಬಹುದು, ಬದಲಾಯಿಸಬಹುದು, ಇವೆಲ್ಲವೂ ಸಾಧ್ಯ’ವೆಂಬ ಭರವಸೆಯನ್ನು ಹಾರ್ನಿ ಪ್ರತಿಪಾದಿಸಿದ್ದಳು.

ಕಾರೆನ್ ಹಾರ್ನಿಯ ಮಹತ್ವದ ಕೃತಿ ‘ಫೆಮಿನೈನ್ ಸೈಕಾಲಜಿ’ ಎಂಬುದು. ಸ್ತ್ರೀ ಪುರುಷರ ನಡುವಿನ ಭಿನ್ನ ವರ್ತನೆಗೆ ಸಂಸ್ಕøತಿ ಹೇಗೆ ಕಾರಣವಾಗುತ್ತದೆಂದು ಇಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾಳೆ. ಸ್ತ್ರೀತ್ವ ಮತ್ತು ಪುರುಷತ್ವದ ಕಲ್ಪನೆ ಹೇಗೆ ಸಂಸ್ಕøತಿಯಿಂದ ಸಂಸ್ಕøತಿಗೆ ಬೇರೆಯಾಗಿವೆ ಎಂದೂ ಅವಲೋಕಿಸಿದ್ದಾಳೆ.

1939ರಲ್ಲಿ ಆಕೆ ಬರೆದ ‘ನ್ಯೂ ವೇಸ್ ಇನ್ ಸೈಕೋಅನಲಿಸಿಸ್’ ಫ್ರಾಯ್ಡನ ಸಿದ್ಧಾಂತಗಳನ್ನು ಪುನರ್ ವಿಮರ್ಶಿಸಿದ್ದವು. ಪುನರ್ ವಿಶ್ಲೇಷಿಸಿದ್ದವು. ಇದರಿಂದ ದೊಡ್ಡ ಕೋಲಾಹಲವೇ ಎದ್ದು, 1941ರಲ್ಲಿ ಕಾರೆನ್, ‘ನ್ಯೂಯಾರ್ಕ್ ಮನೋವಿಶ್ಲೇಷಣಾ ಸಂಸ್ಥೆ’ಯಿಂದ ಹೊರಬರಬೇಕಾಯಿತು. ಅದೆ ವರ್ಷ ಕಾರೆನ್ ‘ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‍ಮೆಂಟ್ ಆಫ್ ಸೈಕೋ ಅನಲಿಸಿಸ್’ ಮತ್ತು ‘ಅಮೆರಿಕನ್ ಇನ್ಸ್‍ಟಿಟ್ಯೂಟ್ ಆಫ್ ಸೈಕೋಅನಲಿಸಿಸ್’ ಸಂಸ್ಥೆಗಳನ್ನು ಸ್ಥಾಪಿಸಿದಳು. ಅಷ್ಟೇ ಅಲ್ಲ ‘ಅಮೆರಿಕನ್ ಜರ್ನಲ್ ಆಫ್ ಸೈಕೋ ಅನಲಿಸಿಸ್’ ಪತ್ರಿಕೆಯ ಸಂಪಾದಕಳಾದಳು.
* * *
ಇಸವಿ 2003ರಿಂದಲೂ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ ಸೇನೆಯ ಮಹಿಳೆಯರನ್ನು ನಾವು ಇಂದು ತುಂಬು ಹೃದಯದಿಂದ ಶ್ಲಾಘಿಸೋಣ. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವುದರಿಂದ ಸೇನೆಗೆ ಲಾಭವಿದೆ ಮತ್ತು ದೇಶಕ್ಕೆ ರಕ್ಷಣೆಯಿದೆ.

ಶತಮಾನಗಳಿಂದ ಒಂದು ಜಾತಿ, ಒಂದು ವರ್ಗ, ಒಂದು ಬಣ್ಣ, ಒಂದು ಲಿಂಗದ ಜನರಿಗೆ ಅವಕಾಶಗಳನ್ನು ನೀಡದೆ, ಅವರಲ್ಲಿ ತಮ್ಮ ಸಾಮಥ್ರ್ಯದ ಬಗ್ಗೆ ಕೀಳರಿಮೆ ತಾರಲು ದುಡಿದ ತಾರತಮ್ಯದ ಪ್ರಧಾನ ಸಂಸ್ಕøತಿಯೇ ಇಂದು ಕೂಡಾ ಮುಂದುವರೆದಿರುವುದು ವಿಷಾದದ ಸಂಗತಿ. ಮಹಿಳೆಯರು ತಮಗೆ ಹಕ್ಕಿನಿಂದ ಬರಬೇಕಿದ್ದ ಹುದ್ದೆ, ಬಡ್ತಿಗಳನ್ನು ಕೋರ್ಟಿನ ಮೆಟ್ಟಿಲು ಏರಿ, ದಶಕದ ಹೋರಾಟದಲ್ಲಿ ಪಡೆಯಬೇಕಾಯಿತು ಎಂಬುದು ಮತ್ತಷ್ಟು ಶೋಚನೀಯ. ಇಂತಹ ವಿವರಣೆಗಳನ್ನು ಕೊಟ್ಟ ಸರಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು ಎಂಬುದು ಮಾತ್ರ ಸಮಾಧಾನದ ವಿಷಯ.

ದೈಹಿಕ ವ್ಯತ್ಯಾಸಗಳನ್ನೇ ಆಧಾರವಾಗಿಟ್ಟುಕೊಂಡ ಜನಾಂಗೀಯ ಹತ್ಯೆಗಳಿಂದ ವಿಶ್ವದ ಇತಿಹಾಸ ಕೆಂಪಾಗಿದೆ. ಹುಟ್ಟಿನಿಂದಲೇ ಒಂದು ಗುಂಪು ಕೀಳು, ದುರ್ಬಲರು, ಬುದ್ಧಿಹೀನರು ಎಂಬ ವಾದಗಳು ಮತ್ತೆ ಮತ್ತೆ ನಮಗೆ ಎದುರಾಗುತ್ತವೆ. ಯಾರದೋ ಲಾಭಕ್ಕೆ, ಲೋಭಕ್ಕೆ ದುಡಿಯುತ್ತಿರುತ್ತವೆ. ನಾವು ಮತ್ತೆ ಮತ್ತೆ ತಾರತಮ್ಯದ ವರ್ತನೆಗೆ ಬಳಸಿಕೊಳ್ಳುವ ಈ ವಾದಗಳನ್ನು ಕೆಡವಿ ಹಾಕಬೇಕಿದೆ. ಈಗ ಕೆಲವು ತಿಂಗಳ ಹಿಂದೆ ನನಗೆ ಪ್ರಸಿದ್ಧ ಮಹನೀಯರೊಬ್ಬರು ‘ಒಂದು ಭೂಗೋಳಿಕ ಪ್ರದೇಶದ ಕಪ್ಪು ಜನರು ಬುದ್ಧಿಹೀನರು’ ಎಂದು ವಾದಿಸುವ ಪುಸ್ತಕದ ಹಸ್ತ ಪ್ರತಿಯನ್ನು ಕಳುಹಿಸಿದರು. ಫೋನ್‍ನಲ್ಲಿ ಕೂಡಾ ವಾದಿಸಿದರು. ಕಟುವಾಗಿ ನಾನು ಉತ್ತರಿಸಬೇಕಾಯಿತು. ಸಮಾನತೆಯ, ಮಾನವೀಯತೆಯ ಸಮಾಜವನ್ನು ಸೃಷ್ಟಿಸುವುದು ಮಾತ್ರವಲ್ಲ, ಅಂತಹ ಸಮಾಜವನ್ನು ಸಸ್ಟೇನ್ ಮಾಡಿಕೊಂಡು ಮುಂದುವರೆಸಲು ನಾವು ಸದಾ ಜಾಗೃತವಾಗಿರಬೇಕು.

ಮಹಾಯುದ್ಧಗಳಲ್ಲಿ ಮಹಿಳೆ

ಯುದ್ಧರಂಗಕ್ಕೆ ಮಹಿಳೆ ಹೊಸಬಳಲ್ಲ. ಪೌರುಷದ ಸಂಕೇತವಾಗಿ ದಂಡೆತ್ತಿ ಹೋಗದಿದ್ದರೂ, ದೇಶದ ರಕ್ಷಣೆಗೆ ಮುನ್ನುಗ್ಗಿದ ಮಹಿಳೆಯರು ಎಲ್ಲ ಕಾಲದಲ್ಲಿಯೂ ಇದ್ದರು.

1918ರಲ್ಲಿಯೇ ‘ರಾಯಲ್ ಏರ್ ಫೋರ್ಸ್’ನ ಮಹಿಳಾ ಪಡೆ ರೂಪುಗೊಂಡಿತ್ತು. 32,000 ಮಹಿಳೆಯರು ಈ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 1920ರಲ್ಲಿ ಮಹಿಳೆಯರಿಗೆ ಸೇನೆಯಲ್ಲಿ ಪ್ರವೇಶ ಕೂಡದು ಎಂಬ ನೀತಿ ತಂದು, ಈ ಪಡೆಯನ್ನು ತೆಗೆದು ಹಾಕಲಾಗಿತ್ತು. 1938ರ ಹೊತ್ತಿಗೆ ಎರಡನೇ ಮಹಾಯುದ್ಧದ ಮೋಡಗಳು ಕವಿದಾಗ, ಐರೋಪ್ಯ ದೇಶಗಳು ತಮ್ಮ ನೀತಿಯನ್ನು ಬದಲಿಸಿ, ತಟ್ಟನೆ ಮಹಿಳೆಯರಿಗೆ ಬಾಗಿಲು ತೆರೆದವು. ಅದಾಗ ವಾಯುಸೇನೆಯಲ್ಲಿ 2000 ಇದ್ದ ಮಹಿಳೆಯರ ಸಂಖ್ಯೆ 1943ರ ಹೊತ್ತಿಗೆ 1,82,000ಕ್ಕೆ ಏರಿತ್ತು! ಈ ಮಹಿಳಾ ಸೇನೆ ಬ್ರಿಟನ್ನಿನ ವಾಯುಸೇನೆಯ ಬಹುಮುಖ್ಯ ಭಾಗವಾಗಿತ್ತು. ಇವರಲ್ಲಿ ಅನೇಕರಿಗೆ ವೀರತನದ ‘ಸೇನೆಯ ಪದಕ’ಗಳನ್ನು ಕೊಟ್ಟು ಗೌರವಿಸಿದ್ದರು.

ಎರಡನೇ ಮಹಾಯುದ್ಧದಲ್ಲಿ ಪುರುಷರ ಸಮಕ್ಕೆ ನಿಂತು ಹೋರಾಡಿದ ಮಹಿಳೆಯರಿದ್ದರು. ಕೇವಲ ಹವ್ಯಾಸಕ್ಕೆ ವಿಮಾನ ಹಾರಾಟವನ್ನು ಕಲಿತ ಮಹಿಳೆಯರು ಮಹಾಯುದ್ಧಗಳ ಭಾರೀ ಸರಮೇಧದಲ್ಲಿ, ಪುರುಷ ಚಾಲಕರು ದೊಡ್ಡ ಸಂಖ್ಯೆಯಲ್ಲಿ ಮೃತರಾದಾಗ, ಯಾವುದೆ ಮಿಲಿಟರಿ ತರಪೇತಿಲ್ಲದೆ ಯುದ್ಧರಂಗಕ್ಕೆ ಧುಮುಕಿದರು.

1942ರಲ್ಲಿ ಸೋವಿಯತ್ ಒಕ್ಕೂಟದಲ್ಲಿ ಮೂರು ಮಹಿಳಾ ಪಡೆಗಳು ಸಿದ್ಧವಾಗಿದ್ದವು. ನೇರವಾಗಿ ಯುದ್ಧದ ತರಬೇತು, ಅನುಭವಗಳಿಲ್ಲದೆಯೂ ದೇಶದ ತುರ್ತು ಸಮಯದಲ್ಲಿ ಯುದ್ಧರಂಗಕ್ಕೆ ಧುಮುಕಿದ ಈ ಮಹಿಳಾ ಪಡೆಗಳು ಎಲ್ಲಿಲ್ಲದ ಸಾಹಸ ತೋರಿದವು. ಮೇಜರ್ ಎವ್ದೋಕಿಯ ಬೆರ್‍ಶಾನ್‍ಸ್ಕಯಳ ರೆಜಿಮೆಂಟ್ 24,000 ಹೊರದಾಳಿಗಳಲ್ಲಿ ಹಾರಾಡಿ, 23,000 ಟನ್ ಬಾಂಬನ್ನು ಶತ್ರುಗಳ ಮೇಲೆ ಒಗೆದಿತ್ತು.

ಆದರೆ ಇತಿಹಾಸದ ಪುಟಗಳಲ್ಲಿ ಮಹಿಳೆಯ ಧೈರ್ಯ, ಸಾಹಸ ಅದೃಶ್ಯವಾಗಿದೆ. ಪುರುಷ ಪ್ರಧಾನ ವಿಚಾರಗಳಿಗೆ ಸವಾಲೆಸೆಯುವ ಆಕೆಯ ಸಾಧನೆಗಳೆಲ್ಲ ಸಾಮೂಹಿಕ ಮರೆವಿನ ವಸ್ತುವಾಗುತ್ತದೆ. ಇತಿಹಾಸದ ಪುಟಗಳಲ್ಲಿ ಅಳಿಸಿ ಹೋಗಿದ್ದ ಮಹಿಳಾ ಚರಿತ್ರೆಯನ್ನು ಅಗೆದು ತೆಗೆಯುತ್ತಲೇ ಇರಬೇಕು.

ಸುಭಾಷ್ ಚಂದ್ರ ಬೋಸ್ ಅವರ ‘ಆಜಾದ್ ಹಿಂದ್ ಫೌಜ್’ ಸೇರಿ ‘ಝಾನ್ಸಿ ರಾಣಿ ರೆಜಿಮೆಂಟ್’ ಎಂಬ ಮಹಿಳೆಯರ ಸೇನೆಯನ್ನೇ ಕಟ್ಟಿ ದೇಶದ ಸ್ವಾತಂತ್ರಕ್ಕೆ ಹೋರಾಡಿದ ಕ್ಯಾಪ್ಟನ್ ಲಕ್ಷ್ಮಿ ಸೆಹಗಾಲ್‍ರಂತಹ ವೀರ ಮಹಿಳೆಯರನ್ನು ನಾವು ಮರೆಯಲು ಸಾಧ್ಯವೆ?

ನೇಮಿಚಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *