ಸಾಧನಕೇರಿ/ ಗಗನದೀಪ್ ಕಾಂಗ್‍ಗೆ ರಾಯಲ್ ಸೊಸೈಟಿ ಗೌರವ – ಡಾ. ವೈ.ಸಿ. ಕಮಲ
ಮೂರೂವರೆ ಶತಮಾನಗಳ ಇತಿಹಾಸವಿರುವ ರಾಯಲ್ ಸೊಸೈಟಿಯ ಸದಸ್ಯತ್ವದ ಗೌರವ ಪಡೆದ ಸಾಧಕರಲ್ಲಿ ಮಹಿಳೆಯರ ಪಾಲು ಹೆಚ್ಚೇನಿಲ್ಲ. ಈ ಅತ್ಯುನ್ನತ ಮನ್ನಣೆ ಪಡೆದ ಭಾರತದ ಮೊದಲ ಮಹಿಳೆಯಾದ ಡಾ. ಗಗನದೀಪ್ ಕಾಂಗ್ ಅವರು ವೈದ್ಯವಿಜ್ಞಾನದಲ್ಲಿ ಅವಿರತ ಸಾಧನೆ ಮಾಡಿದ್ದಾರೆ. ರಾಯಲ್ ಸೊಸೈಟಿಯ ಗೌರವ ಪಡೆದ ಅವರ ಮೇರುವ್ಯಕ್ತಿತ್ವ ಯುವಜನಾಂಗಕ್ಕೆ ಸ್ಫೂರ್ತಿದಾಯಕ.
ಲಂಡನ್‍ನ ರಾಯಲ್ ಸೊಸೈಟಿ ಈ ವರ್ಷದ ಏಪ್ರಿಲ್ 16 ರಂದು ವಿಜ್ಞಾನ ಕ್ಷೇತ್ರಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದ 51 ಜನರಿಗೆ ತನ್ನ ಸದಸ್ಯತ್ವ ನೀಡಿ ಗೌರವಿಸಿತು. ಈ ಗೌರವ ಪಡೆದವರಲ್ಲಿ ಆರು ಮಂದಿ ಭಾರತೀಯರಿದ್ದಾರೆ. ಅವರಲ್ಲಿ ಮಹಿಳಾ ವೈದ್ಯವಿಜ್ಞಾನಿಯಾದ ಡಾ. ಗಗನದೀಪ್ ಕಾಂಗ್ ಅವರದು ಅನುಪಮ ಸಾಧನೆ.
ಮೂಲಭೂತ ವಿಜ್ಞಾನವು ವ್ಯಕ್ತಿಗತ ನೆಲೆಯಿಂದ ಸಾಂಸ್ಥಿಕ ನೆಲೆಗೆ ಸ್ಥಿತ್ಯಂತರಗೊಳ್ಳುವ ಸನ್ನಿವೇಶದಲ್ಲಿ ಪ್ರಾರಂಭವಾದ ಸಂಸ್ಥೆಯೇ `ರಾಯಲ್ ಸೊಸೈಟಿ’ (28 ನವೆಂಬರ್ 1680). ಸಂಸ್ಥೆ ಪ್ರಾರಂಭವಾದ 360 ವರ್ಷಗಳ ನಂತರ ಪ್ರಪ್ರಥಮವಾಗಿ ಸದಸ್ಯತ್ವ ಪಡೆದ ಭಾರತೀಯ ಮಹಿಳೆ ಎಂಬ ಗೌರವವೂ ಇದರೊಂದಿಗೆ ಸೇರಿತು ಎನ್ನುವುದು ಗಗನದೀಪ್ ಅವರ ಹೆಗ್ಗಳಿಕೆ.
ಎರಡು ವರ್ಷಗಳ ಹಿಂದೆ ವೈದ್ಯಕೀಯ ಕ್ಷೇತ್ರದ ಯುವ ಅನ್ವೇಷಕರ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು “ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗಬೇಕು ಎಂದು ನಿರ್ಧರಿಸಿದರೆ, ಮೊದಲು ನಿಮ್ಮ ಸೋಲುಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಹೇಳಿದ್ದರು. ಗಗನದೀಪ್ ಅವರ ಸಾಧನೆಯ ಹಾದಿಯಲ್ಲಿ ಬೆಳಕು ಬೀರಿದ ದೀಪ ಇದೇ ಎಂಬುದನ್ನು ಗಮನಿಸಬಹುದು.
“ಬಾಲ್ಯದಲ್ಲಿ ಅಜ್ಜಿ ಮನೆಯಲ್ಲಿ ಬೆಳೆದ ನಾನು ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಮುಂದೆ ಅಪ್ಪಅಮ್ಮ ನನ್ನನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸಿದರು. ಅಲ್ಲಿ ಹತ್ತರಲ್ಲಿ ಏಳು ವಿಷಯಗಳಲ್ಲಿ ನಪಾಸಾಗಿದ್ದೆ. ತಂದೆಗೆ ವರ್ಗವಾದ ಊರುಗಳಿಗೆ ಹೋಗುತ್ತಾ ಹನ್ನೆರಡು ವರ್ಷಗಳಲ್ಲಿ ಹತ್ತು ಶಾಲೆ ಬದಲಾಯಿಸಬೇಕಾಯಿತು” ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.
ಗಗನದೀಪ್ ಮುಂದೆ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂಡಿ ಮತ್ತು ಪಿಎಚ್‍ಡಿ ಪಡೆದರು. ಉದರಸಂಬಂಧಿ ಕಾಯಿಲೆಗಳ ತಜ್ಞರಾಗಿ ರೂಪುಗೊಂಡರು. ಪಿಎಚ್‍ಡಿ ಅಧ್ಯಯನದ ನಂತರ ಬ್ರಿಟನ್‍ನಲ್ಲಿ ಉನ್ನತ ಅಧ್ಯಯನ ನಡೆಸಿದ ಅವರು `ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಪೆಥಾಲಜಿಸ್ಟ್ಸ್’ ಗೌರವ ಪಡೆದು ಭಾರತಕ್ಕೆ ಮರಳಿ, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್‍ನಲ್ಲಿ ಸೇವೆ ಮುಂದುವರೆಸಿದರು. ಆಮೇಲೆ ಫರೀದಾಬಾದ್‍ನಲ್ಲಿರುವ `ಟ್ರಾನ್ಸ್‍ಲೇಷನಲ್ ಹೆಲ್ತ್ ಅಂಡ್ ಟೆಕ್ನಾಲಜಿ ಇನ್‍ಸ್ಟಿಟ್ಯೂಟ್’ ನ ನಿರ್ದೇಶಕಿಯಾಗಿದ್ದಾರೆ.
ಆಹಾರವು ಮನುಷ್ಯನಿಗೆ ಚೈತನ್ಯವನ್ನು ಒದಗಿಸುವ ಮೂಲ. ಆಹಾರದ ಪಚನಕ್ರಿಯೆಯಲ್ಲಿ ಜಠರದ ಪಾತ್ರ ಪ್ರಮುಖವಾದುದು. ಮಾನವನ ದೈಹಿಕ- ಮಾನಸಿಕ ಆರೋಗ್ಯ ಮುಂದುವರೆದು ಸದೃಢ ಯುವಜನಾಂಗ ಮತ್ತು ದೇಶದ ಆರೋಗ್ಯವಂತ ಪ್ರಜೆಗಳ ನಿರ್ಮಾಣದಲ್ಲಿ ಜಠರದ ಪಾತ್ರವೇ ನಿರ್ಣಾಯಕ ಎಂದು ಡಾ. ಗಗನದೀಪ್ ಪ್ರತಿಪಾದಿಸುತ್ತಾರೆ. ಅಲ್ಲದೆ, ಮಕ್ಕಳಿಗೆ ಸಂಬಂಧಿಸಿದಂತೆ ಜಠರ ಮೂಲದ ಕಾಯಿಲೆಗಳ ಬಗ್ಗೆ ವಿಶೇಷ ಅಧ್ಯಯನವನ್ನು ನಡೆಸಿ, ಈ ಸಮಸ್ಯೆಯ ಪರಿಹಾರಕ್ಕೆ ಅಗತ್ಯವಾದ ಲಸಿಕೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
“ಡಾ. ಕಾಂಗ್ ಅವರು ಮಕ್ಕಳಲ್ಲಿ ಜಠರ ಸಂಬಂಧಿ ಸೋಂಕುಗಳು ಮತ್ತು ಅವುಗಳಿಂದ ಭೌತಿಕ ಬೆಳವಣಿಗೆ ಮತ್ತು ಗ್ರಹಿಕೆಯ ಮೇಲಾಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರು ಭಾರತದಲ್ಲಿ ರೋಗನಿರೋಧ ಕ್ಷೇತ್ರದಲ್ಲಿ ಪ್ರಬುದ್ಧ ಸಂಶೋಧಕರ ಪಡೆಯೊಂದನ್ನು ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವ ಅಧ್ಯಾಪಕರಿಗೆ `ಟ್ರಾನ್ಸ್‍ಲೇಷನಲ್ ಔಷಧ ಕ್ಷೇತ್ರದಲ್ಲಿ ಸಮರ್ಥ ತರಬೇತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಆ ಮೂಲಕ ಅವರನ್ನು ಕ್ಲಿನಿಕಲ್ ರಿಸರ್ಚ್‍ನಲ್ಲಿ ತೊಡಗುವಂತೆ ಮಾಡಿದ್ದಾರೆ” ಎಂದು ರಾಯಲ್ ಸೊಸೈಟಿಯು ಅವರನ್ನು ಶ್ಲಾಘಿಸಿದೆ.
ಗಗನದೀಪ್ ಕಾಂಗ್ ಅವರು ತಮ್ಮ ಕ್ಷೇತ್ರದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಿದ್ದಾರೆ. ಅವರು ಅಧ್ಯಕ್ಷತೆ ವಹಿಸಿರುವ ಸಮ್ಮೇಳನಗಳೂ ಹಲವಾರಿವೆ. ಹಲವಾರು ವೈದ್ಯಕೀಯ ನಿಯತಕಾಲಿಕೆಗಳ ಸಂಪಾದಕಿಯಾಗಿ, ಇನ್ನೂ ಹಲವಾರು ನಿಯತಕಾಲಿಕೆಗಳ ಸಂಪಾದಕೀಯ ಸಮಿತಿಯ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಪ್ರಮುಖ ಪಾತ್ರ ವಹಿಸಿರುವ ವೈದ್ಯಕೀಯ ಸಂಸ್ಥೆಗಳೇ ದೊಡ್ಡ ಪಟ್ಟಿಯಾಗುವಷ್ಟಿವೆ. ಒಬ್ಬ ಮಹಿಳೆ ಇಷ್ಟೊಂದನ್ನು ಸಾಧಿಸಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಅವರೇ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದಾರೆ:
“ಮಹಿಳೆಯರು ಸಾಧನೆ ಮಾಡಲು ಖಂಡಿತ ಸಾಧ್ಯವಿದೆ. ಅವರು ತಮ್ಮ ಕೌಶಲ್ಯ ಮತ್ತು ಶಕ್ತಿಯಲ್ಲಿ ನಂಬಿಕೆ ಇಡಬೇಕು. ಅವರನ್ನು ತುಳಿಯುವ ಶಕ್ತಿಗಳು ಸದಾ ಕೆಲಸ ಮಾಡುತ್ತಿರುತ್ತವೆ. ಆದರೆ ಅವನ್ನು ಮೆಟ್ಟಿನಿಂತು ಮುನ್ನಡೆಯುವ ಮನೋಸ್ಥೈರ್ಯ ಇರಬೇಕು. ಅವಮಾನಗಳಿಗೆ ಕುಗ್ಗದೆ ಮುಂದುವರಿಯಬೇಕು. ಇದು ಸಾಧ್ಯವಾಗಬೇಕಾದರೆ ಶಿಕ್ಷಣ ಮತ್ತು ಉದ್ಯೋಗದ ಪಾತ್ರ ಬಹಳ ಮುಖ್ಯ. ಆಕೆ ಆರ್ಥಿಕ ಸಬಲತೆ ಪಡೆದ ನಂತರ ಒಂದಷ್ಟು ಹಣವನ್ನು ತನ್ನ ಅನುಕೂಲಕ್ಕೂ ಬಳಸಲು ಕಲಿಯಬೇಕು. ತನ್ನ ಸ್ನೇಹಿತರ, ಬಂಧುಗಳ ಸಹಕಾರ ಕೋರಲು ನಾಚಿಕೆ, ಅಂಜಿಕೆ ಬಿಡಬೇಕು. ತನ್ನ ಉನ್ನತಿಯ ದಾರಿಯನ್ನು ತಾನೇ ಕಂಡುಕೊಳ್ಳಬೇಕು.”
ಜಲಂಧರ್ ಮೂಲದ ಗಗನದೀಪ್ ಅವರ ಕುಟುಂಬದಲ್ಲಿ ಹಲವರು ಕೇಂದ್ರ ಸರ್ಕಾರ ಮತ್ತು ಸೇನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ದೇಶಸೇವೆಯ ಹಂಬಲ ಬಾಲ್ಯದಿಂದಲೂ ಅಂತರ್ಯಾಮಿಯಾಗಿ ಇತ್ತಂತೆ. ಆದ್ದರಿಂದಲೇ ವಿದೇಶದಲ್ಲಿ ಉನ್ನತ ವ್ಯಾಸಂಗದ ನಂತರ ಮರಳಿ ಭಾರತಕ್ಕೆ ಬಂದು ಸಂಶೋಧನೆಯಲ್ಲಿ ತೊಡಗಲು ಅವರಿಗೆ ಏನೂ ಕಷ್ಟವಾಗಲಿಲ್ಲವಂತೆ. ವೈದ್ಯವಿಜ್ಞಾನಕ್ಕೆ ಅವರ ಕೊಡುಗೆಯನ್ನು ಗುರುತಿಸಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಮನ್ನಣೆಗಳು ಅವರನ್ನು ಅರಸಿ ಬಂದಿವೆ. ಅವೆಲ್ಲಕ್ಕೂ ಕಳಶವಿಟ್ಟಂತೆ ಈಗ ‘ರಾಯಲ್ ಸೊಸೈಟಿ’ಯ ಗೌರವ ದೊರಕಿದೆ. ಭಾರತೀಯ ಮಹಿಳೆಯ ಸಾಧನೆಯನ್ನು ಸೊಸೈಟಿ ಮೊದಲಬಾರಿಗೆ ಗುರುತಿಸಿದೆ.
1660ರಲ್ಲಿ ಪ್ರಾರಂಭವಾದ ಸೊಸೈಟಿಯು ಮೂಲವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಅದು ತನ್ನ ವೆಬ್‍ಸೈಟ್‍ನಲ್ಲಿ ಹೇಳಿಕೊಂಡಿರುವಂತೆ “ಆಧುನಿಕ ವಿಜ್ಞಾನದ ಇತಿಹಾಸವು ರಾಯಲ್ ಸೊಸೈಟಿಯ ಇತಿಹಾಸವೇ ಆಗಿದೆ.” ಕುದುರೆಯ ಮೇಲೆ ಬಂದು ಪ್ರಾತ್ಯಕ್ಷಿಕೆಗಳ ಮೂಲಕ ವಿಜ್ಞಾನ ಉಪನ್ಯಾಸಗಳನ್ನು ನೀಡುತ್ತಿದ್ದ ಮೈಕೇಲ್ ಫ್ಯಾರಡೆಯನ್ನು ಸೊಸೈಟಿ ಮೆಚ್ಚುಗೆಯಿಂದ ನೆನೆಯುತ್ತದೆ. ಐಸಾಕ್ ನ್ಯೂಟನ್, ಆಲ್ಟರ್ಟ್ ಐನ್‍ಸ್ಟೀನ್ ಮೊದಲಾದ ಮಹಾಮಹಿಮರು ಸೊಸೈಟಿಯ ಗೌರವ ಪಡೆದಿದ್ದಾರೆ. ಭಾರತದ ಜಗದೀಶ್ ಚಂದ್ರ ಬೋಸ್, ಸಿ.ವಿ. ರಾಮನ್, ಸತ್ಯೇಂದ್ರನಾಥ ಬೋಸ್, ಮೇಘನಾದ ಸಹಾ, ಕೆ.ಎಸ್. ಕೃಷ್ಣನ್, ಹೋಮಿ ಜಹಂಗೀರ್ ಭಾಭಾ ಮುಂತಾದ ಅತಿರಥ ಮಹಾರಥರು ರಾಯಲ್ ಸೊಸೈಟಿಯ ಗೌರವ ಸದಸ್ಯತ್ವ ಪಡೆದಿದ್ದಾರೆ. ಆ ನಕ್ಷತ್ರಪುಂಜದಲ್ಲಿ ಈಗ ಗಗನದೀಪ್ ಕಾಂಗ್ ಅವರೂ ಮಿನುಗುತ್ತಿದ್ದಾರೆ. ಆ ಕಾರಣದಿಂದಲೇ ಇದು ಬಹಳ ಮಹತ್ವದ ಸಂಗತಿಯಾಗಿದೆ.
ರಾಯಲ್ ಸೊಸೈಟಿ ಪ್ರಾರಂಭದಿಂದ ಇಲ್ಲಿಯವರೆಗೆ ಸುಮಾರು 8000 ಸಾಧಕರಿಗೆ ಸದಸ್ಯತ್ವ ನೀಡಲಾಗಿದೆ. ಇವರಲ್ಲಿ ಸುಮಾರು 280 ಜನ ನೊಬೆಲ್ ಪ್ರಶಸ್ತಿ ಪಡೆದವರಿದ್ದಾರೆ. ಸೊಸೈಟಿಗೆ ಮಹಿಳೆಯರ ಪ್ರವೇಶ ಎಂದಿಗೂ ಸುಲಭವಾಗಿರಲಿಲ್ಲ. ಈ ನಿಟ್ಟಿನಲ್ಲಿ ವಿಜ್ಞಾನಿ ಡಾರತಿ ಹಾಡ್‍ಕಿನ್ ಅವರನ್ನು ನಾವು ನೆನಯಲೇಬೇಕು. “ನೊಬೆಲ್ ಪ್ರಶಸ್ತಿ ಸಿಗಬಹುದು, ರಾಯಲ್ ಸೊಸೈಟಿಯ ಗೌರವ ಸಿಗುವುದು ಕಷ್ಟ’ ಎಂದೇ ಅವರಿಗೆ ಹೇಳಲಾಗಿತ್ತು. ಆದರೆ ಅವರು ಮಹಿಳಾ ವಿಜ್ಞಾನಿಗಳನ್ನು ಕೂಡಿಸಿಕೊಂಡು ಒಂದು ಅಭಿಯಾನವನ್ನು ಆರಂಭಿಸಿದರು. ಅದು ಯಶಸ್ವಿಯಾಗಿ ಮೊದಲು ಕಾಥಲಿನ್ ಲೊನ್ಸ್‍ಡೇಲ್ ಅವರಿಗೆ ನಂತರ ಡಾರತಿ ಹಾಡ್‍ಕಿನ್ ಅವರಿಗೆ ರಾಯಲ್ ಸೊಸೈಟಿ ಸದಸ್ಯತ್ವ ದೊರಕಿತು. ಡಾರತಿ ಅವರಿಗೆ 1964 ರಲ್ಲಿ ನೊಬೆಲ್ ಪ್ರಶಸ್ತಿಯೂ ಸಿಕ್ಕಿತು. ಹಲವಾರು ಬಾರಿ ಬೆಂಗಳೂರಿಗೆ ಭೇಟಿ ನೀಡಿರುವ ಡಾರತಿ ಅವರು ಬಸವನಗುಡಿ ನ್ಯಾಷನಲ್ ಕಾಲೇಜಿನ ಬೆಂಗಳೂರು ವಿಜ್ಞಾನ ವೇದಿಕೆಯಲ್ಲೂ ಉಪನ್ಯಾಸ ನೀಡಿದ್ದಾರೆ.
ಅಡೆತಡೆಗಳನ್ನು ಮೀರಿ ಏಕಾಗ್ರತೆ, ಶ್ರಮಶ್ರದ್ಧೆಗಳಿಂದ ಸಾಧನೆ ಮಾಡುವ ಮಹಿಳೆಯರ ಗಟ್ಟಿತನಕ್ಕೆ ಡಾ. ಗಗನದೀಪ್ ಕಾಂಗ್ ಅವರು ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ. ಇವರಿಗೆ ಸಿಕ್ಕ ಗೌರವಕ್ಕೆ ಇಡೀ ದೇಶ ಹೆಮ್ಮೆ ಪಡುತ್ತದೆ.
-ಡಾ. ವೈ.ಸಿ. ಕಮಲ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.