ಸಾಕಿನ್ನು ಸೈರಣೆ- ಡಾ. ವಿಜಯಾ

ಒಂದು ಕಾಲದ ಬಿಗಿ ಚೌಕಟ್ಟನ್ನು ಈಗ ಬಿಡಿಸಿಕೊಂಡು ಹೊರ ಬರುತ್ತಿರುವ ಯುವ ಕಲಾವಿದೆಯರಿಗೆ ಹಿರಿಯ ಕಲಾವಿದೆಯರು ಸಾಥ್ ಕೊಡಬೇಕು. ಯಾವ ಹುತ್ತ ಕೆದರವುದೋ ಎಂದು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಎಲ್ಲರ ಬೆಂಬಲಕ್ಕೂ ನಿಂತು ನ್ಯಾಯ ದೊರಕಿಸುವುದು ಇನ್ನಾದರೂ ಸಾಧ್ಯವಾಗಬೇಕು.

 

ಮೌನವೇ ಆಭರಣ ಎಂದು ಸೂಚಿಸಲಾದ ಮಾತಿಗೆ ತಲೆದೂಗಿ ಅನಿವಾರ್ಯ ಮೌನಕ್ಕೆ ಶರಣಾಗುವುದು ಸ್ತ್ರೀ ಲೋಕದಲ್ಲಿಯ ಸಾಮಾನ್ಯ ನೋಟ. ದುಡಿಯುವ ಪರಿಸರದಲ್ಲಿ ಅದು ಮನೆಯೋ ಕಚೇರಿಯೋ ಮತ್ತೊಂದೋ ಅವಳು ಹೆಚ್ಚು ಮೂಕಳಾಗುತ್ತಾಳೆ. ಮೇಲು ನೋಟಕ್ಕೆ ವಾಚಾಳಿಯಂತೆ, ದಿಟ್ಟೆಯಂತೆ ಕಾಣುವವರೂ ಕೂಡಾ ಅವನ್ನೆಲ್ಲ ಕವಚವಾಗಿ ಬಳಸಿಕೊಳ್ಳುತ್ತ ವಾಸ್ತವಕ್ಕೆ ಮೌನದ ಮುಸುಕು ಹಾಕುವುದೇ ಹೆಚ್ಚು. ಆದರೆ ಕಾಲದಿಂದ ನಡೆದು ಬಂದ ಮಹಿಳಾ ಹೋರಾಟಗಳ ಫಲವಾಗಿ ಈಚೆಗೆ `ಮೂಕಂ ಕರೋತಿ ವಾಚಾಲಂ’ ಆಗುವ ಸಮಯ ಯಾವ `ದೈವ ಕೃಪೆ’ಯ ಆಶ್ರಯ ಇಲ್ಲದೆಯೂ ಈಚಿನ ದಿನಗಳಲ್ಲಿ ಸಾಧ್ಯವಾಗತೊಡಗಿದೆ. ಅದರಿಂದಲೇ ಅಸೂಯಾಪರರಿಂದ ಅವಳು ಮತ್ತಷ್ಟು ಹಿಂಸೆಯನ್ನು ಅನುಭವಿಸುವಂತಾಗಿದೆ.

ಅನಿವಾರ್ಯ ಕಾರಣಕ್ಕೆ ಸ್ತ್ರೀಯರು ಒಪ್ಪಿಸಿಕೊಂಡ ಅನೇಕ ಕ್ಷೇತ್ರಗಳಿವೆ. ಕಲೆಯ ಕ್ಷೇತ್ರ ಅದರಲ್ಲೂ ಚಲನಚಿತ್ರ ಕ್ಷೇತ್ರದ ಕಲಾವಿದೆಯರ ಮೌನಕ್ಕೆ ಬಹು ದೀರ್ಘ ಇತಿಹಾಸವಿದೆ. ಅಬ್ಬರದ ಪ್ರಚಾರ, ಹಣ, ಕೀರ್ತಿ ಎಲ್ಲ ಇದ್ದಂತೆ ಕಂಡರೂ ಅದರ ಜೊತೆಗೇ ಬಿರುಗಾಳಿಯಂತೆ ಸುತ್ತಿಕೊಳ್ಳುವ ಗಾಸಿಪ್‍ಗಳು-ಚಾರಿತ್ರ್ಯವಧೆಯ ಪ್ರಮಾಣ ಬಹಳ ದೊಡ್ಡದು.

ಇವರೂ ಈಗ ಮೌನ ಮುರಿದು, ಅನಿವಾರ್ಯಗಳನ್ನು ದಾಟಿ ಮಾತಾಡುತ್ತಿರುವುದು ಕಾಲದಿಂದಲೂ ಈ ಕಲಾಲೋಕವನ್ನು ಗಮನಿಸುತ್ತ ಬಂದ ನನ್ನಂಥವರಿಗೆ ಬಹುದೊಡ್ಡ ಅಚ್ಚರಿ! ಆದರೆ ಸಂತೋಷ ತರುವ ಸಂಗತಿಯಾಗಿದೆ.

ಕಳೆದ ವರ್ಷ ಮಲಯಾಳ ಚಿತ್ರರಂಗದಲ್ಲಿಯ ಕಲಾವಿದೆಯೊಬ್ಬರು ಸುದ್ದಿ ಮಾಡಿದರು. ಆ ಕಾವು ಇನ್ನೂ ತಣಿದಿಲ್ಲ. ಹೋರಾಟ ಮುಂದುವರೆದಿದೆ. ಜನಪ್ರಿಯ ಖಳನಾಯಕ ಪ್ರಾತ್ರಧಾರಿಯೊಬ್ಬ ಯಾವುದೋ ದ್ವೇಷದಿಂದ (ಪ್ರಾಯಶ: ಆತನೊಂದಿಗೆ ಸಹಕರಿಸಿಲ್ಲ) ನಾಯಕ ನಟಿಯೊಬ್ಬರನ್ನು ಬಾಡಿಗೆ ಗೂಂಡಾಗಳನ್ನಿಟ್ಟು ಅಪಹರಿಸಿದರು. ಆಕೆಯನ್ನು ಕಾರಿನಲ್ಲೇ ಲೈಂಗಿಕವಾಗಿ ಹಿಂಸಿಸಿದರು. ಆ ಕಲಾವಿದೆ ಈ ಬಗ್ಗೆ ಠಾಣೆಯಲ್ಲಿ ದೂರುಕೊಟ್ಟರು. ಖಳನಾಯಕ ತನ್ನನ್ನು ಯಾರೂ ಮುಟ್ಟಲಾರರೆಂದೇ ಭಾವಿಸಿದ್ದ. ಸಾಮಾನ್ಯವಾಗಿ ನಡೆಯುವಂತೆ ಕಲಾವಿದೆಯುು ಪ್ರಸಂಗವನ್ನು ಮುಚ್ಚಿಡದೆ ಮಾತನಾಡತೊಡಗಿದ್ದು, ಮತ್ತಷ್ಟು ಸಹ ಕಲಾವಿದೆಯರು ಆಕೆಯನ್ನು ಬೆಂಬಲಿಸಿದ್ದು ವಿಶೇಷ ಸಂಚಲವನ್ನುಂಟುಮಾಡಿತು.

ಇದು ಒಂದು ಅನಿರೀಕ್ಷಿತ ಹಾಗೂ ಚಿತ್ರೋದ್ಯಮಕ್ಕೆ ಆಘಾತ ತಂದ ಘಟನೆ. ಇನ್ನಿತರ ಮಹಿಳೆಯರ ಬೆಂಬಲವೂ ದೊರೆತು ಅವರದೇ ಒಂದು ಸಂಘಟನೆ ವಿಮೆನ್ಸ್ ಸಿನಿಮಾ ಕಲೆಕ್ಟಿವ್ (WCC) ಕೂಡಾ ಪ್ರಾರಂಭವಾಯಿತು. ಆಕೆಯ ದನಿಗೆ ದನಿಗೂಡಿಸಿದವರಲ್ಲಿ ಮತ್ತೂ ಕೆಲವು ರಾಜ್ಯಗಳ ಕಲಾವಿದೆಯರೂ ಸೇರಿದ್ದು ವಿಶೇಷ, ಹಾಗೆ ದನಿ ಎತ್ತಿದವರಲ್ಲಿ ಬಹುತೇಕರು ಈಚಿನವರು. ಹಳೆಯ ತಲೆಮಾರಿನವರು ಸ್ವರವೆತ್ತಿದಂತಿಲ್ಲ! ಅವರಿನ್ನೂ ಮೌನ ಕಣಿವೆಯಿಂದ ಹೊರ ಬಂದಿಲ್ಲ, ನಾಳಿನ ದಿನಗಳಲ್ಲಿ ಅವರೂ ಯೋಚಿಸಿ ಹೊರಬಂದರೆ ಕಲೆಯ ಕ್ಷೇತ್ರದಲ್ಲಿ ದುಡಿದ ಮಹಿಳೆಯ ಶೋಷಣೆಯನ್ನು ತಡೆಯುವ ಪ್ರಯತ್ನಗಳು ಗಟ್ಟಿಯಾಗುತ್ತವೆ, ಹಾಗಾಗಬೇಕು; ಆಗಲಿ.

ಕಲಾವಿದೆಯರು ಸ್ವರವೆತ್ತಿದ ಮೇಲೆ ಜನಪ್ರಿಯನೂ ಪ್ರಭಾವಶಾಲಿಯೂ ಆದ ಆ ಖಳನಟನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಯಿತು. ಈ ಹಂತದಲ್ಲಿ ಮಲೆಯಾಳ ಚಿತ್ರ ಕಾಲವಿದರ ಸಂಘಟನೆ AMMA (ಅಸೇಸಿಯೋಷನ್ ಆಫ್ ಮಲೆಯಾಳಂ ಮೂವೀ ಆರ್ಟಿಸ್ವ್) ದಿಂದ ದಿಲೀಪ್ ಎಂಬ ಹೆಸರಿನ ಆ ಖಳನಟನನ್ನು ಉಚ್ಛಾಟಿಸಲಾಯಿತು.

ಕೆಲವೇ ದಿನದಲ್ಲಿ ಆ ನಟ ಬೈಲ್ ಮೇಲೆ ಹೊರಬಂದರು. ಅಮ್ಮ ಸಂಸ್ಥೆ ಮತ್ತೆ ಆತನನ್ನು ಆದರಿಸಿ ಒಳಗೆ ಕರೆದು ಕೊಂಡಿತು. ಈ ಬಗ್ಗೆ ಪುನಃ ವಿವಾದಗಳು, ಪ್ರತಿಭಟನೆ ಪ್ರಾರಂಭವಾಯಿತು. ನಮ್ಮ ಕರ್ನಾಟಕದಲ್ಲೂ ಹೊಸದಾಗಿ ಪ್ರಾರಂಭ ಆಗಿರುವ FIRE ಸಂಸ್ಥೆ ಹಾಗೂ ನಟ ಚೇತನ್ ಮತ್ತು ಸಂಗಡಿಗರ ನೇತೃತ್ವದ ಸಂಘಟನೆ AMMA ಸಂಸ್ಥೆಗೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆದವು.

ರಾಷ್ಟ್ರಾದ್ಯಂತ ಮಹಿಳೆಯರ ರಕ್ಷಣೆ, ಲಿಂಗ ಸಮಾನತೆಯ ಕುರಿತು, ದುಡಿಯುವ ಸ್ಥಳದಲ್ಲಿ ರಕ್ಷಣೆ, ಆರೋಗ್ಯಕರ ವಾತಾವರಣ ಕೊಡಬೇಕೆಂಬ ಚರ್ಚೆಗಳಾಗುತ್ತಿರುವಾಗ ಮಹಿಳೆಯನ್ನು ಅಪಹರಿಸಿ, ಹಿಂಸೆ ಮಾಡಿದ ಆರೋಪ ಹೊತ್ತು ಜೈಲಿಗೆ ಹೋಗಿ ಬಂದವರನ್ನು, ಅಮಾನತು ರದ್ದುಗೊಳಿಸಿ ಪುನಃ (Reinstate) ಒಳಗೆ ಕರೆದುಕೊಂಡದ್ದು ಸರಿಯಲ್ಲವೆಂದೂ ಆತ ಅಪರಾಧಿಯಲ್ಲವೆಂದು ಸಾಬೀತಾಗುವವರೆಗೆ ಅಮಾನತ್ತಿನಲ್ಲಿಡಬೇಕೆಂದೂ ತಿಳಿಸುವ ಪತ್ರಕ್ಕೆ ಸುಮಾರು 50ಕ್ಕೂ ಹೆಚ್ಚು ಕರ್ನಾಟಕದ ಪ್ರಜ್ಞಾವಂತ ಕಲಾವಿದರು ಸಹಿ ಹಾಕಿದ್ದರು. [ಈಗಲೂ ನಮ್ಮ ಹಿರಿಯ ಕಲಾವಿದೆ/ದರು ಮೌನ ಮುರಿಯಲಿಲ್ಲ, ಗಮನಿಸಿ]

ನನ್ನ ದೀರ್ಘಕಾಲದ ಚಿತ್ರರಂಗದ ಒಡನಾಟದಲ್ಲಿ ಈ ರೀತಿ ಪ್ರತಿರೋಧಿಸಿದ ಹೆಣ್ಣುಗಳು ಇಲ್ಲ. ಹಾಗೆ ದೌರ್ಜನ್ಯಕ್ಕೆ ಒಳಗಾದವರನ್ನು ಬೆಂಬಲಿಸಿದವರನ್ನು ಕಾಣೆ. (ಒಳಗೊಳಗೇ ನಡೆದ ಒಂದೆರಡು ಅಪವಾದಗಳಿರಬಹುದು). ಆದರೆ ಈಗ ಚೇತನ್, ಶೃತಿ ಹರಿಹರನ್, ಕವಿತಾ ಲಂಕೇಶ್ ಮೊದಲಾದ ಕಿರಿಯರ ಪಡೆ ದಿಟ್ಟ ಹೆಜ್ಜೆ ಇಡುತ್ತಿರುವುದು. ಸಂತೋಷ, ಭರವಸೆ ತಂದಿದೆ.

ಆಂಧ್ರ, ತಮಿಳು ನಾಡು ಮೊದಲಾದ ಮತ್ತಷ್ಟು ರಾಜ್ಯಗಳು ಈ ಪ್ರತಿರೋಧವನ್ನು ಬೆಂಬಲಿಸಿದವು.

AMMA ಸಂಸ್ಥೆಯ ಕಾರ್ಯದರ್ಶಿಯು ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಲ್ಲದೆ, ಆ ಕಲಾವಿದನನ್ನು ಒಳ ತೆಗೆದುಕೊಳ್ಳಲು ಅವರ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತವಿತ್ತೆಂದೂ ಬೈಲಾನಲ್ಲಿ ಆರೋಪಿಯ ಮೇಲೆ ಕ್ರಮ ತೆಗೆದುಕೊಳ್ಳುವ ಅವಕಾಶ ಇಲ್ಲವೆಂದೂ ಉತ್ತರಿಸಿದರು.

ಆ ಸರ್ವಸದಸ್ಯರ ಸಭೆಯಲ್ಲಿ ಪ್ರತಿಭಟಿಸಿದ್ದ ಕಲಾವಿದೆಯರು ಹಾಜರಿರಲ್ಲವಾದ್ದರಿಂದ ಅದು ಸರ್ವಾನುಮತವಾಗಲಿಲ್ಲ ಮತ್ತು ಮತ್ತೆ ಪ್ರತಿಭಟನೆ ಪ್ರಾರಂಭವಾಯಿತು. ನೋಂದಾಯಿತ ಸಂಸ್ಥೆಗಳಲ್ಲಿ ಅಪರಾಧಿಗಳನ್ನು ಕಾಪಾಡಲೆಂದೇ ಕೆಲವು ಬೈಲಾಗಳಿವೆ.

ನಮ್ಮ ಕರ್ನಾಟಕದ ಸಾಹಿತ್ಯ ಸಂಸ್ಥೆಯೊಂದರಲ್ಲಿ ಅಧಿಕಾರದಲ್ಲಿರುವ ವ್ಯಕ್ತಿಯೊಬ್ಬರು ತಾನು ದುಡಿವ ಸಂಸ್ಥೆಯಿಂದ ಹಣದ ದುರುಪಯೋಗದ ಕಾರಣ ಅಮಾನತ್ತಾಗಿದ್ದಲ್ಲದೆ, ಹೆಣ್ಣು ಮಗಳೊಬ್ಬಳನ್ನು ಮೋಸ ಮಾಡಿ ಬಳಸಿಕೊಂಡ ಬಗ್ಗೆ ಪತ್ರಿಕೆ, ವಾಹಿನಿಗಳು ದಿನಗಟ್ಟಲೆ ಪ್ರಸಾರ ಮಾಡಿದರೂ ಆತನನ್ನು ಹೊರಹಾಕಲು ಆಗಲಿಲ್ಲ. ಆ ಸಂಸ್ಥೆಯನ್ನು ಪ್ರಶ್ನಿಸಿದ ನನಗೆ ಕೊಟ್ಟ ಉತ್ತರ ಬೈಲಾದಲ್ಲಿ ಆರೋಪಿಯನ್ನು ಅಪರಾಧಿ ಎಂದು ಸಾಬೀತಾಗದೆ ತೆಗೆಯುವಂತಿಲ್ಲ ಎಂದು! ಅವರ ಅನುಕೂಲಕ್ಕೆ ತುರ್ತು ಸರ್ವಸದಸ್ಯರ ಸಭೆ ಕರೆದು ಬೈಲಾ ತಿದ್ದುಪಡಿ ಮಾಡುತ್ತಾರೆ. ಹಾಗೆ ಈ ನಿಯಮವನ್ನು ಕನಿಷ್ಠ ಅಪರಾಧಿಯಲ್ಲ ಎಂದು ಸಾಬೀತಾಗುವವರೆಗೆ ಚಟುವಟಿಕೆಗಳಲ್ಲಿ ಭಾಗವಹಿಸದ ಹಾಗೆ ತಿದ್ದುಪಡಿ ಮಾಡಲು ಮನಸ್ಸು ಮಾಡುವುದಿಲ್ಲ!!

ಇಂಥ ನೂರಾರು ಪ್ರಸಂಗಗಳಿವೆ. ಹಣ ಬಲವಿದ್ದವರು ಎಲ್ಲದರಿಂದ ಬಚಾವಾಗಬಲ್ಲರು.

ಆದರೆ ಮಲಯಾಳ ಚಿತ್ರರಂಗದ `ಅಮ್ಮ’ ಸಂಸ್ಥೆಯ ಅಧ್ಯಕ್ಷರಾದ ಹಿರಿಯ ಕಲಾವಿದ ಮೋಹನ್ ಲಾಲ್ ಅವರು ಮನಸ್ಸು ಬದಲಾಯಿಸಿ ಸಹ ಕಲಾವಿದ ಮಮ್ಮೂಟಿ ಅವರೊಂದಿಗೆ ಚರ್ಚೆ ಮಾಡಿ ಪ್ರತಿಭಟಿಸುವವರ ಒತ್ತಾಯವನ್ನು ಪರಿಗಣಿಸಿ ಈಗ ಆ ಕಲಾವಿದನನ್ನು ಸಂಸ್ಥೆಯಿಂದ ದೂರ ಇಟ್ಟಿದ್ದಾರೆ!

ಈ ಪ್ರಸಂಗದಲ್ಲಿ ಮುಖ್ಯವೆನಿಸಿದ್ದು ವರ್ತಮಾನದ ಕಲಾವಿದೆಯರು ಮೌನ ಮುರಿದಿದ್ದಾರೆ. ಅವರು ಯಾವ ಅಪಪ್ರಚಾರ, ಗಾಸಿಪ್‍ಗಳಿಗೆ ಸೊಪ್ಪು ಹಾಕದೆ, ಯಾವ ಚೌಕಟ್ಟಿನ ಒಳಗೂ ಬಂಧಿಯಾಗದೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಅವರನ್ನು ಲಿಂಗಭೇದವಿಲ್ಲದೆ ಬೆಂಬಲಿಸುವ ಪುರಷರೂ ಇದ್ದಾರೆ. ಅಂಥವರನ್ನು ಬೆಂಬಲಿಸಲು ಕೇವಲ ಚಿತ್ರರಂಗವಲ್ಲ ಎಲ್ಲ ವಲಯದ ಸ್ತ್ರೀ-ಪುರುಷರೂ ದನಿಗೂಡಿಸಬೇಕು.

ಚಿತ್ರರಂಗದಲ್ಲಿ ಅನೇಕ ಒಳ ಒಪ್ಪಂದಗಳಿರುತ್ತವೆ. ಕಲಾವಿದೆ ಎಲ್ಲವನ್ನೂ ಮೌನವಾಗಿ ಒಪ್ಪಿಕೊಂಡು ದುಡಿಯುತ್ತಾಳೆ. ಒಂದು ಕಾಲದ ಬಿಗಿ ಚೌಕಟ್ಟನ್ನು ಈಗ ಬಿಡಿಸಿಕೊಂಡು ಹೊರ ಬರುತ್ತಿರುವ ಯುವ ಕಲಾವಿದೆಯರಿಗೆ ಹಿರಿಯ ಕಲಾವಿದೆಯರು ಸಾಥ್ ಕೊಡಬೇಕು. ಯಾವ ಹುತ್ತ ಕೆದರವುದೋ ಎಂದು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಎಲ್ಲರ ಬೆಂಬಲಕ್ಕೂ ನಿಂತು ನ್ಯಾಯ ದೊರಕಿಸುವುದು ಇನ್ನಾದರೂ ಸಾಧ್ಯವಾಗಬೇಕು.

ಅವರವರ ಕ್ಷೇತ್ರ, ಅವರವರೇ ನೋಡಿಕೊಳ್ಳಲಿ ಎನ್ನದೇ ಎಲ್ಲ ವಲಯಗಳೂ ಒಗ್ಗಟ್ಟಾಗಿ ಸ್ವರಕ್ಕೆ ಸ್ವರ ಕೂಡಿಸಿ, ಕೈಗೆ ಕೈ ಜೋಡಿಸಿದಾಗಲೇ ಎಲ್ಲ ದಿಕ್ಕಿನಲ್ಲೂ ಸ್ತ್ರೀ ಎಂಬ ಕಾರಣಕ್ಕೇ ಹಣ, ಹೆಸರು, ದೇಹ, ಮನಸ್ಸು, ಬದುಕು ಎಲ್ಲದರ ಮೇಲೂ ದಾಳಿ ಮಾಡಲು ಪ್ರಯತ್ನಿಸುವ ಪ್ರಬಲ ಶತೃವನ್ನು ಹಿಮ್ಮೆಟ್ಟಿಸಿ, ಸಾಧ್ಯವಾದರೆ ಸತ್ಯದ ಅರಿವು ಮೂಡಿಸಿ ಜೊತೆಯಲ್ಲಿ ಹೆಜ್ಜೆ ಹಾಕುವಂತೆ ಮಾಡಲು ಸಾಧ್ಯ. ನಮ್ಮ ಪ್ರತಿ ಹೆಜ್ಜೆ, ಆಲೋಚನೆ, ಗುರಿ ಇತ್ತಲೇ ಇರುವಂತಾಗಲಿ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *