ಪೂರ್ಣಕುಂಭಕ್ಕೆ ಕಾವ್ಯವಿರೋಧ
ಹೇಳಬೇಕಿತ್ತು ಅಂದೇ
ಇಂದೇಕೆ? ಅಂದೇ ಹೇಳಬೇಕಿತ್ತು ಎಂದೆಯಾ ತಂದೆ
ಕುಂಭ ಹಿಡಿದು ಮುಕಾಂಬೆಯಾಗಿ ಇರು ಎಂದಿರಿ
ಬಿರುಬಿಸಿಲಲೂ ಬರಿಗಾಲಲಿ ನಡೆ ಎಂದು ರಥವೇರಿದಿರಿ
ಹೇಳುವುದಾದರೂ ಹೇಗೆ? ಭೋಪರಾಕಿನ ಹೊರತು ಏನೂ ಕೇಳುವುದಿಲ್ಲ ನಿಮಗೆ
ಇಂದೇಕೆ, ಅಂದೇ ಹೇಳಬೇಕಿತ್ತು ಎಂದೆಯಾ ತಂದೆ
ಹುಷಾರ್ ಬಂದೀರಿ, ಪಟ್ಟಗತ್ತಿಗಳು ಕಾದಿವೆ ಎಂದಿರಿ
ಮೊಲೆಯೋನಿಗಳು ಸ್ರವಿಸುತಿವೆ ಗಿರಿಯೇರಬೇಡ ಎಂದಿರಿ
ಕಠುವಾದ ದೇವತೆ ಕಣ್ಣುಮುಚ್ಚಿ ಕಲ್ಲಾಗಿರುವಾಗ
ಇಗರ್ಜಿಯ ಗೋಡೆಕಲ್ಲುಗಳೂ ನನ್ನ ಶಿಲುಬೆಯಾಗಿರುವಾಗ
ಹೇಳುವುದಾದರೂ ಹೇಗೆ? ಬೆಂಕಿ ಬೆಳಕು ಫರಕು ತಿಳಿಯಲಿಲ್ಲ ನಮಗೆ
ಕೈದೀಪ ಕಿಚ್ಚಾಗಿ ಸುಡುವುದೆಂದರಿವಾಗಲಿಲ್ಲ ನಮಗೆ
ಕೆಂಪು ನಿಮ್ಮದು ಹಳದಿ ನಿಮ್ಮದು/
ಕೆಂಪು ಹಳದಿ ಬಣ್ಣಬಾವುಟಗಳೆಲ್ಲ ನಿಮದು
ಕೆಂಪು ನಿಮ್ಮದು ಹಳದಿ ನಿಮ್ಮದು/
ಕೆಂಪು ಹಳದಿ ಪೇಟ, ಶಾಲು, ತುರಾಯಿಗಳೆಲ್ಲ ನಿಮದು
ನೆಲ ನಮ್ಮದಲ್ಲ ನಾವು ನೆಲದವರು
ಗಡಿ ನಮಗಿಲ್ಲ ನಾವು ನುಡಿಯವರು
ತೇರು ನಮದಲ್ಲ ನಾವು ಕನ್ನಡಮ್ಮನ ಒಕ್ಕಲು
ಕಿತ್ತೂರಿನ ಕತ್ತಿ ಕಿತ್ತಿರಿ ದುರ್ಗದ ಒನಕೆ ಒಗೆದಿರಿ
ಬೆಳವಡಿಯ ಪತಾಕೆ ಸುಟ್ಟಿರಿ
ಇಂದೇಕೆ? ಅಂದೇ ಹೇಳಬೇಕಿತ್ತು ಎಂದರೆ
ಹೇಳುವುದಾದರೂ ಹೇಗೆ? ಎದೆ ನೆಲದ ಭಾಷೆ
ತಿಳಿಯುವುದೇ ಇಲ್ಲ ನಿಮಗೆ
ಅದೆಷ್ಟು ಹೆಣ್ಣುಗಳ ನೆತ್ತರ ಕುಡಿದಿದೆಯೋ ಈ ನೆಲ
ದಾಸವಾಳ ಇನ್ನೆಲ್ಲೂ ಇಲ್ಲದಷ್ಟು ಕೆಂಪಾಗಿ ಅರಳಿದೆ.
ಇಂದೇಕೆ ಅಂದೇ ಕೊಡಿಸಬಹುದಿತ್ತು ನ್ಯಾಯ ಎಂದೆಯಾ ತಂದೆ
ನ್ಯಾಯವೆಂದರೆ ಎದುರಿರುವವರ ಶಿಕ್ಷಿಸುವುದೇ?
ಮಾಗಿ ಕರುಣದ ಕೊನೆ ಹನಿಗಳನುದುರಿಸಿದೆ.
ಮೆಟ್ಟುವವರೆದುರೇ ತಲೆಯೆತ್ತಿ ಬೆಳೆಯುವುವೆವು ಗರಿಕೆಯಂತೆ
ಬಾಬಾ ಇದ್ದಾರೆ ನಮಗೆ ಬಾಪು ಇದ್ದಾರೆ ನಮಗೆ
ಸಾವಿತ್ರಿ ಇದ್ದಾಳೆ ನಮಗೆ ಕರುಣದ ಗುರು ಇದ್ದಾರೆ ನಮಗೆ
ಮಾತು ಕಸಿದೀರಿ ಮೌನ ಕಸಿಯಬಹುದೇ?
ಹಾಡು ನಿಲಿಸಿದಿರಿ ಎದೆಗವಿತೆ ಅಳಿಸಬಹುದೇ?
ದೀಪ ಕಸಿದಿರಿ ಬೆಳಕು ತಡೆಯಬಹುದೇ?
ಬರೆಯಲಿದ್ದೇವೆ ಪ್ರೀತಿಚಿತ್ತಾರ ಖಾಲಿ ಕುಂಭಗಳ ಮೇಲೆ
ತುಂಬಲಿದ್ದೇವೆ ಕುಂಭ ಹೊತ್ತ ಅಕ್ಕಂದಿರೆದೆಗಳಲಿ
ದಿಟದ ದಿಟ್ಟ ಕವಿತೆ
ಯಾರೆಂದರವರು ಮರ ಅಚಲವೆಂದು?
ಅದು ನಿಂತಲ್ಲೇ ಪ್ರತಿಕ್ಷಣ ನಡೆಯುವುದು
ಕೈಗೆಕೈ ಜೋಡಿಸಿ ಮೆರವಣಿಗೆ ಹೊರಡಲಿದ್ದೇವೆ ತಂದೆ
ಬಣ್ಣಬಾವುಟ ಪೇಟ ಹಾರ ತುರಾಯಿಗಳೆಲ್ಲ
ಇರಲಿ ನಿಮಗೆ. ನಾವು ಈ ನೆಲದ ಹೆಣ್ಣುಗಳು
ಅದೋ ನೋಡಿ, ಕೈಗೆ ಕೈಜೋಡಿಸಿ ಮೆರವಣಿಗೆ ಹೊರಟಿದ್ದೇವೆ.
ಧನ್ಯವಾದ ನಿಮಗೆ ಕೊಟ್ಟಿರುವ ಎಳ್ಳುಕಾಳಿಗೆ
ಕಸಿದುಕೊಂಡ ಕುಂಬಳಕ್ಕೆ
ಧನ್ಯವಾದ ನಿಮಗೆ ನಮ್ಮ ದಾರಿ ನಮಗೆ ತೋರಿಸಿದ್ದಕ್ಕೆ
ಧನ್ಯವಾದ ನಿಮಗೆ ನಮ್ಮ ದಾರಿಯೇನೆಂದು
ನಮಗೆ ನೆನಪಿಸಿದ್ದಕ್ಕೆ.
-ಎಚ್.ಎಸ್. ಅನುಪಮಾ
ಗಝಲ್
ಕುಂಬಾರ ಮಾಡಿದ ಪೂರ್ಣಕುಂಭವ
ಹೊತ್ತು ನಡೆದೆ ನಾನು ಸಖಿ
ಸಿಂಗಾರ ಮಾಡಿದ ಪುರುಷ ಜಂಭವ
ಹೊತ್ತು ನಡೆದೆ ನಾನು ಸಖಿ
ಹೊರುವುದಕ್ಕೂ ಹೆರುವುದಕ್ಕೂ
ನಾನೇ ಬೇಕು ಲೋಕಕೆ
ಗಂಗೆಯೇ ಇಲ್ಲದ ಅಕ್ಕಿಮಂಡಾಳದ
ಕುಂಭವ ಹೊತ್ತು ನಡೆದೆ ನಾನು ಸಖಿ
ಅಕ್ಷರವ ಹಂಚುವ ಕಸುಬುದಾರರು
ಪುಸ್ತಕ ಹಿಡಿದು ಮಾರಿದರು
ಅಕ್ಕ ನಡೆದ ಹಾದಿಯ ದಿಕ್ಕು ತಪ್ಪಿಸುವ
ಕುಂಭವ ಹೊತ್ತು ನಡೆದೆ ನಾನು ಸಖಿ
ಮನುವಾದ ಮುಗಿದಿಲ್ಲ ಇನ್ನೂ
ನಡೆದಿದೆ ಮೆರವಣಿಗೆ
ನನ್ನತನವೇ ಇಲ್ಲದ ಆಡಂಬರದ
ಕುಂಭವ ಹೊತ್ತು ನಡೆದೆ ನಾನು ಸಖಿ
ಗುಣವಂತಿ ದಾಚಿಯ ಧಿಕ್ಕಾರವಿದೆ
ನಿಮಗೆ ದೊರೆಗಳೆ
ಹೊಟ್ಟೆ ತುಂಬಿಸದ ರೆಟ್ಟೆಗೆ ಕಸುವಾಗದ
ನಿಮ್ಮ ಕುಂಭವ ಹೊತ್ತು ನಡೆದೆ ನಾನು ಸಖಿ.
-ದಾಕ್ಷಾಯಿಣಿ ವಿ. ಹುಡೇದ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.