Latestಜಗದಗಲ

ಸಮಾನ ಅವಕಾಶಕ್ಕೆ ಯುರೋಪ್‌ ಮಹಿಳೆಯರ ಆಂದೋಲನ

ಜಗತ್ತಿನ ಇತರ ಖಂಡಗಳಿಗೆ ಹೋಲಿಸಿದಲ್ಲಿ ಮಹಿಳಾ ಸ್ವಾತಂತ್ರ್ಯ, ಮಹಿಳಾ ಹಕ್ಕುಗಳ ವಿಚಾರದಲ್ಲಿ ಯೂರೋಪ್‌ ಬಹುಪಾಲು ಸಮಾನತೆ ಸಾಧಿಸಿದೆ. ಆದರೆ, ಆರ್ಥಿಕ, ರಾಜಕೀಯ ಮತ್ತು ನೀತಿ ನಿರೂಪಣೆಯಲ್ಲಿ ಸಮಾನ ಅವಕಾಶಕ್ಕಾಗಿ ಅಲ್ಲಿನ ಮಹಿಳೆಯರು ಈಗ ದೊಡ್ಡ ಆಂದೋಲನ ನಡೆಸುತ್ತಿದ್ದಾರೆ 

ಚರಿತ್ರೆ ಮತ್ತು ಭೂಗೋಳ ಓದಿದವರಿಗೆಲ್ಲ ಯೂರೋಪ್‍ಖಂಡ ಗೊತ್ತೇ ಇರುತ್ತದೆ. ಈ ಯೂರೋಪ್‍ಖಂಡದ 28 ದೇಶಗಳು ಒಗ್ಗೂಡಿ “ಯೂರೋಪಿಯನ್‌ ಯೂನಿಯನ್” – ಐರೋಪ್ಯ ಒಕ್ಕೂಟ ರಚನೆಯಾಗಿರುವುದೂ ತಿಳಿದಿರುತ್ತದೆ. ಇದೊಂದು ರಾಜಕೀಯ ಮತ್ತು ಆರ್ಥಿಕ ಹಿನ್ನೆಲೆಯ ಒಕ್ಕೂಟ. ಇನ್ನೂ ಕೆಲವು ದೇಶಗಳು ಈ ಒಕ್ಕೂಟಕ್ಕೆ ಸೇರಲು ಕಾದುಕೊಂಡಿವೆ. ಈ 28 ದೇಶಗಳ ಪೈಕಿ 19 ದೇಶಗಳಲ್ಲಿ “ಯೂರೋ” ಎಂಬ ಸಮಾನ ಕರೆನ್ಸಿ ಚಲಾವಣೆಯಲ್ಲಿದೆ. ವ್ಯಾಪಾರ, ಕೃಷಿ, ಮಾರುಕಟ್ಟೆ, ಪ್ರವಾಸ ನೀತಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸಮಾನ ಕಾನೂನು, ನೀತಿ ನಿಯಮಗಳನ್ನು ಈ ಒಕ್ಕೂಟದ ದೇಶಗಳು ಅನುಸರಿಸುತ್ತವೆ. ಒಕ್ಕೂಟದ ಸದಸ್ಯ ದೇಶವಾದ ಬೆಲ್ಜಿಯಂನ ಬ್ರಸೆಲ್ಸ್ ನಗರದಲ್ಲಿಒಕ್ಕೂಟದ ಪ್ರಧಾನ ಕಚೇರಿ ಇದೆ. 28 ದೇಶಗಳನ್ನು ಒಳಗೊಂಡಿದ್ದರೂ ಈ ಐರೋಪ್ಯಒಕ್ಕೂಟದ ಒಟ್ಟು ಜನಸಂಖ್ಯೆ, ನಮ್ಮ ಭಾರತ ದೇಶದ ಜನಸಂಖ್ಯೆಯ ಅರ್ಧದಷ್ಟೂ ಇಲ್ಲ.

ಯೂರೋಪ್‍ನ ಹಲವಾರು ದೇಶಗಳಲ್ಲಿ ಐವತ್ತುಅರವತ್ತು ವರ್ಷಗಳ ಹಿಂದೆ ಮಹಿಳೆಯರಿಗೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಕೊಡುವ ಮಾತೇ ಇರಲಿಲ್ಲ. ಬರೀ ಪುರುಷರು ಚುನಾವಣೆ, ಮತದಾನ ಮಾಡಿಕೊಂಡು ತಮಗೆ ಬೇಕಾದ ಪುರುಷ ಸರ್ಕಾರವನ್ನು ಆರಿಸಿಕೊಳ್ಳುತ್ತಿದ್ದರು. ಮಹಿಳೆಯರಿಗೆ ಏನು ಸಿಗಬೇಕಾದರೂ “ಕೊಡುವ-ನೀಡುವದಾತ”ರು ಇರಬೇಕಲ್ಲ! ಕ್ರಮೇಣ ಯೂರೋಪ್‍ನ ಬಹುಪಾಲು ದೇಶಗಳ ಪುರುಷ ರಾಜಕಾರಣಿಗಳು ಮಹಿಳೆಯರಿಗೆ ಅವಕಾಶ ಕೊಟ್ಟರು. ಆದರೆ ಸ್ವಿಟ್ಸರ್ಲೆಂಡ್‍ನಂಥ ದೇಶ ಬಹಳ ಸತಾಯಿಸಿ ಅಂತೂ 1971ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೊಟ್ಟಿತು. ಕೊಟ್ಟ ಮೇಲೂ ಆ ದೇಶದ ಒಂದು ಪ್ರಾಂತ್ಯ ನಾನು ಮಾತ್ರ ಕೊಡುವುದಿಲ್ಲ ಎಂದು ಬಹಳ ತಕರಾರು ಮಾಡಿತು. 1990ರಲ್ಲಿ ಈ ಕ್ಯಾತೆ ಬಗೆಹರಿದು, ಚುನಾವಣಾ ರಾಜಕೀಯದಲ್ಲಿ ಮತದಾನ ಮತ್ತು ಸ್ಪರ್ಧೆಗಳಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಕೊಟ್ಟ ಯೂರೋಪ್‍ನ ದೇಶಗಳ ಪೈಕಿ ಸ್ವಿಟ್ಸರ್ಲೆಂಡೇ ಕೊನೆಯ ದೇಶವಾಯಿತು. ಮಿಕ್ಕ ದೇಶಗಳ ಮಹಿಳೆಯರು ಅದಕ್ಕಿಂತ ಮುಂಚೆ ಚುನಾವಣೆಯಲ್ಲಿ ಮತದಾನ ಮಾಡುವ ಮತ್ತು ಸ್ಪರ್ಧಿಸುವ ಹಕ್ಕು ಪಡೆದುಕೊಂಡಿದ್ದರು. ಆದರೆ ಈಗ ರಾಜಕಾರಣದಲ್ಲಿ ಲಿಂಗಸಮಾನತೆ ಸಾಧಿಸುವ ವಿಷಯದಲ್ಲಿ ಸ್ವಿಟ್ಸರ್ಲೆಂಡ್ ಕೂಡಾ ಮುಂದಾಗಿದೆ. ಆದರೆ, ಇವೆಲ್ಲ ಸಮಾನತೆಯ ದಾರಿಯಲ್ಲಿಇಡುವ ಒಂದೆರಡು ಹೆಜ್ಜೆಗಳಷ್ಟೆ. ಚುನಾವಣೆಯಲ್ಲಿ ಸ್ಪರ್ಧೆ ಮತ್ತು ಮತದಾನಕ್ಕೆ ಸಮಾನ ಅವಕಾಶ ಕೊಟ್ಟ ಮಾತ್ರಕ್ಕೆ ರಾಜಕೀಯ ಅಧಿಕಾರದಲ್ಲಿ ಸಮಾನ ಅವಕಾಶ ತಾನಾಗಿ ಸಿಕ್ಕಿಬಿಡುವುದಿಲ್ಲ. ಅದಕ್ಕೆ ಪ್ರಜ್ಞಾಪೂರ್ವಕ ರಾಜಕೀಯ ನಿರ್ಧಾರಗಳು ಬೇಕು.

ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿಐರೋಪ್ಯ ಒಕ್ಕೂಟದ ಸ್ಪೇನ್‍ ಈಗ ಜಗತ್ತಿಗೇ ಒಂದು ಅಪೂರ್ವ ಮಾದರಿಯಾಗಿ ಹೊಳೆಯುತ್ತಿದೆ. ಕೆಲವು ತಿಂಗಳ ಹಿಂದೆ ಅಲ್ಲಿ ಸಮಾಜವಾದಿ ರಾಜಕಾರಣಿ ಪೆಡ್ರೋ ಸಾಂಚೆಝ್ ಸರ್ಕಾರ ರಚಿಸಿದಾಗ 17 ಜನರ ಮಂತ್ರಿ ಮಂಡಲದಲ್ಲಿ 11 ಜನ ಮಹಿಳಾ ರಾಜಕಾರಣಿಗಳಿಗೆ ಮಂತ್ರಿ ಪದವಿ ಕೊಟ್ಟು ಪ್ರಮುಖ ಖಾತೆಗಳ ಜವಾಬ್ದಾರಿ ನೀಡಿದ್ದಾರೆ. ಈ ವರ್ಷದ ಮಾರ್ಚ್ 8 ರಂದು ಸ್ಪೇನ್‍ನಲ್ಲಿ ಶೋಷಣೆಯಿಂದ ಬಿಡುಗಡೆ ಮತ್ತು ಸಮಾನ ಅವಕಾಶಗಳಿಗಾಗಿ ಆಗ್ರಹಿಸಿ ಬೃಹತ್ ಪ್ರದರ್ಶನ ನಡೆಸಿದ್ದರು. ತಮ್ಮ ಸಚಿವ ಸಂಪುಟ ಆ ಬೇಡಿಕೆಯ ಈಡೇರಿಸಲಿದೆ ಎಂಬ ಭರವಸೆಯನ್ನು, ಆಶಾಭಾವವನ್ನು ಸಾಂಚೆಝ್ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ದೇಶದಲ್ಲಿ ಕೂಡ ರಾಜಕೀಯ ಅಧಿಕಾರದಲ್ಲಿ ಮಹಿಳೆಯರು ಎದ್ದು ಕಾಣುತ್ತಾರೆ. ಅಲ್ಲಿನ 22 ಸಚಿವರ ಸಂಪುಟದಲ್ಲಿ 11 ಮಂದಿ ಮಹಿಳೆಯರು ಅವಕಾಶ ಪಡೆದಿದ್ದಾರೆ.

ಈಗ ಐರೋಪ್ಯ ಒಕ್ಕೂಟದ ಎಲ್ಲ ದೇಶಗಳ ರಾಜಕಾರಣದಲ್ಲಿ ಮಹಿಳೆಯರಿಗೆ ಇನ್ನಷ್ಟು ಪ್ರಾಧಾನ್ಯ, ಮತ್ತಷ್ಟು ಪ್ರಾತಿನಿಧ್ಯ ಸಿಗಬೇಕು ಎಂಬ ವಿಚಾರದಲ್ಲಿ ನಡೆಯುತ್ತಿರುವ ಆಗ್ರಹ ಮತ್ತು ಆಂದೋಲನ ಇಡೀ ಜಗತ್ತಿನ ಗಮನ ಸೆಳೆಯುತ್ತಿವೆ. ಐರೋಪ್ಯ ಒಕ್ಕೂಟದ ಹಲವಾರು ದೇಶಗಳಲ್ಲಿ ಮಹಿಳೆಯರು ಅಧ್ಯಕ್ಷ ಅಥವಾ ಪ್ರಧಾನಿ ಪದವಿಗಳನ್ನು ಅರ್ಹತೆಯಿಂದ ಈಗಾಗಲೇ ಪಡೆದುಕೊಂಡಿದ್ದಾರೆ. ಆದರೆ ಸಮಾನತೆಯ ಗುರಿ ಸಾಧನೆಗೆ ಇದು ಏನೇನೂ ಸಾಲದು. ರಾಜಕಾರಣ, ಆಡಳಿತ, ನೀತಿ ನಿರ್ಧಾರಕ ಶಕ್ತಿ ಕೇಂದ್ರಗಳ ವಿಹಂಗಮ ನೋಟದಲ್ಲಿ ಪುರುಷ ಪ್ರಾಬಲ್ಯವೇ ಎದ್ದು ಕಾಣುತ್ತಿದೆ.

ಈ ಅಸಮಾನತೆ ನಿವಾರಣೆಯಾಗಿ ಎಲ್ಲ ಹಂತಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸ್ಥಾನಮಾನ ದೊರಕಬೇಕು ಎಂದು ಆಗ್ರಹಿಸುವ “50-50 ಚಳವಳಿ” ಈಗ ಬಲ ಪಡೆಯುತ್ತಿದೆ. ಎಲ್ಲ ವಲಯಗಳಲ್ಲಿ ಶೇ. 50 ಅಂದರೆ, ಸಮಾನ ಪಾಲುದಾರಿಕೆ ಮಹಿಳೆಯರಿಗೆ ದೊರೆಯಬೇಕು ಎಂಬ ಈ ರಾಜಕೀಯ, ಸಾಮಾಜಿಕ ಮತ್ತು ವೈಚಾರಿಕ ಚಳವಳಿಯ ಮುಂಚೂಣಿಯಲ್ಲಿರುವುದು “ಯೂರೋಪಿಯನ್ ವಿಮೆನ್ಸ್ ಲಾಬಿ” (ಯುಡಬ್ಲ್ಯುಎಲ್) ಎಂಬ ಪ್ರಬಲ ಮಹಿಳಾ ಸಂಘಟನೆ. ಇದರ ಪ್ರಧಾನ ಕಚೇರಿ ಕೂಡ ಬ್ರಸೆಲ್ಸ್‌ನಲ್ಲಿದೆ. “ಅಧಿಕಾರವನ್ನು (ಮತ್ತೆ) ರೂಪಿಸುವ ಸಮಯ ಬಂದಿದೆ” ಎಂದು ಈ ಸಂಘಟನೆ ಉದ್ಘೋಷಿಸಿತು. “50/50: ಮಹಿಳೆಯರು ಯೂರೋಪ್‍ಗಾಗಿ, ಯೂರೋಪ್ ಮಹಿಳೆಯರಿಗಾಗಿ” ಎಂಬ ಹಕ್ಕೊತ್ತಾಯದ ಅರ್ಜಿಯನ್ನು ಯುಡಬ್ಲ್ಯುಎಲ್‍ ಎಲ್ಲರ ಮುಂದೆ ಮಂಡಿಸಿ ಎಲ್ಲರೂ ಇದಕ್ಕೆ ಸಹಿ ಹಾಕಿ ರಾಜಕಾರಣಿಗಳನ್ನು ಆಗ್ರಹಿಸಬೇಕೆಂದು ಕರೆ ನೀಡಿತು.

ಯೂರೋಪಿಯನ್ ವಿಮೆನ್ಸ್ ಲಾಬಿ ಒಂದು ಬೃಹತ್ ಮಹಿಳಾ ಸಂಘಟನೆಯಾಗಿದ್ದು, ಅದರಲ್ಲಿ ಐರೋಪ್ಯ ಒಕ್ಕೂಟದ ದೇಶಗಳ ಸುಮಾರು ಎರಡು ಸಾವಿರ ಮಹಿಳಾ ಸಂಘ ಸಂಸ್ಥೆಗಳು ಸೇರಿಕೊಂಡಿವೆ. ಕೌನ್ಸಿಲ್‍ ಆಫ್ ಯೂರೋಪ್, ಯುನೆಸ್ಕೋ, ಮಹಿಳೆಯರ ಸ್ಥಾನಮಾನ ಕುರಿತ ವಿಶ್ವಸಂಸ್ಥೆಯ ಆಯೋಗ ಮುಂತಾದ ಅತೀ ಪ್ರಮುಖ ನೆಲೆಗಳಲ್ಲಿ ಯುಡಬ್ಲ್ಯುಎಲ್‍ಕಾರ್ಯನಿರ್ವಹಿಸುತ್ತದೆ. ಮಹಿಳಾ ಸಮಾನತೆಗೆ ಆಗ್ರಹ, ಮಹಿಳಾ ಸಂಕುಲದಲ್ಲಿ ವೈವಿಧ್ಯತೆಯ ರಕ್ಷಣೆ, ಮಹಿಳೆಯರ ಮಾನವ ಹಕ್ಕುಗಳ ರಕ್ಷಣೆ ಸೇರಿ ಹಲವಾರು ಧ್ಯೇಯಗಳ ಸಾಧನೆಗೆ ಅದು ಶ್ರಮಿಸುತ್ತಿದೆ. ಎಲ್ಲ ಸರ್ಕಾರಗಳ ಕಾನೂನು, ನೀತಿ ನಿಯಮಗಳ ನಿರೂಪಣೆಯಲ್ಲಿ ಮಹಿಳೆಯರಿಗೆ ಪಾಲು ಸಿಗಬೇಕು, ಮಹಿಳೆಯರ ಮೇಲಿನ ಎಲ್ಲ ಬಗೆಯ ಹಿಂಸೆ ಕೊನೆಗೊಳ್ಳಬೇಕು, ಲೈಂಗಿಕತೆ ಮತ್ತು ಗರ್ಭಧಾರಣೆ ವಿಚಾರಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನುಅವರಿಗೆ ಕೊಡಬೇಕು ಎಂದು ಅದು ಹೋರಾಡುತ್ತಿದೆ. ಒಟ್ಟಿನಲ್ಲಿ ಮಹಿಳೆಯರನ್ನು ಯಾವ ವಿಚಾರದಲ್ಲೂಅಂಚಿಗೆ ಸರಿಸದೆ ಅವರು ಮುಖ್ಯವಾಹಿನಿಯಲ್ಲೇ ಪಾತ್ರವಹಿಸಬೇಕು ಎನ್ನುವುದು ಯುಡಬ್ಲ್ಯುಎಲ್‍ನ ಆಗ್ರಹ. ಐರೋಪ್ಯ ಒಕ್ಕೂಟದ ರಾಜಕಾರಣದಲ್ಲಿ, ಆರ್ಥಿಕ ವಲಯದಲ್ಲಿ ಮತ್ತುಎಲ್ಲ ಸಾಮಾಜಿಕ ವ್ಯವಹಾರಗಳಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನ ಪಾಲು ಪಡೆಯಬೇಕು ಎನ್ನುವುದು ಅದರ ಮುಖ್ಯ ಆಶಯ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *