ಸಮತೋಲನ ಎಂಬ ಸೂತ್ರ, ಸಮಾನತೆ ಎಂಬ ಮಂತ್ರ

`ಬ್ಯಾಲೆನ್ಸ್ ಫಾರ್ ಬೆಟರ್’ ಎಂಬುದು ಈ ವರ್ಷದ ಅಂತಾರಾಷ್ತ್ರೀಯ ಮಹಿಳಾ ವರ್ಷದ ಘೋಷವಾಕ್ಯ. ಜಗತ್ತಿನ ಎಲ್ಲ ವಲಯಗಳಲ್ಲಿ ಸಮಾನತೆಯ ಅರಿವು ಮೂಡಬೇಕು, ಪ್ರಜ್ಞಾಪೂರ್ವಕ ಪ್ರಯತ್ನಗಳು ನಡೆಯಬೇಕು, ಮನುಷ್ಯರ ಬದುಕು ಹಸನಾಗಬೇಕು ಎನ್ನುವುದು ಈ ಘೋಷವಾಕ್ಯದ ಆಶಯ.

ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಪುರುಷರು ಮತ್ತು ಮಹಿಳೆಯರಿಗೆ ಎಲ್ಲ ಅವಕಾಶಗಳಲ್ಲಿ ಸಮತೋಲನ, ಸಮಾನತೆಯ ಸೂತ್ರ ಅನುಸರಿಸಬೇಕು, ಇಬ್ಬರನ್ನೂ ಸಮಾನವಾಗಿ ಒಳಗೊಳ್ಳಬೇಕು. ಸಮಾನತೆಯ ನೆಲೆಯಲ್ಲಿ ಯೋಚಿಸಬೇಕು, ಬದಲಾವಣೆಗಾಗಿ ಶ್ರಮಿಸಬೇಕು. ಇದರಿಂದ ಜಗತ್ತು ಇನ್ನಷ್ಟು ಚೆನ್ನಾಗುತ್ತದೆ. ಮಾರ್ಚ್ 8 ರ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಪ್ರತಿವರ್ಷವೂ ಒಂದು ಘೋಷವಾಕ್ಯ ಇರುತ್ತದೆ. ಅದನ್ನು ಅನುಸರಿಸಲು ಮತ್ತು ಸಾಧಿಸಲು ಎಲ್ಲರ ಗಮನ ಕೇಂದ್ರೀಕೃತವಾಗಬೇಕು ಎನ್ನುವುದು ಇದರ ಉದ್ದೇಶ. ಈ ಬಾರಿ `ಬ್ಯಾಲೆನ್ಸ್ ಫಾರ್ ಬೆಟರ್’ ಎಂಬುದೇ ಘೋಷವಾಕ್ಯ. 

ಕಂಪೆನಿಗಳ ಬೋರ್ಡ್ ರೂಮ್‍ಗಳಲ್ಲಿ, ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ, ಮಾಧ್ಯಮದ ವಸ್ತುವೈವಿಧ್ಯದಲ್ಲಿ, ಉದ್ಯೋಗ ಸಿಬ್ಬಂದಿಯಲ್ಲಿ, ಕ್ರೀಡೆ, ಸಂಸ್ಕøತಿಗಳಿಗೆ ನೀಡುವ ಪೆÇ್ರೀತ್ಸಾಹದಲ್ಲಿ, ರಾಜಕೀಯ ಪ್ರಾತಿನಿಧ್ಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟು ಬ್ಯಾಲೆನ್ಸ್ ಮಾಡಬೇಕು. ಹೀಗೆ ಪ್ರಜ್ಞಾಪೂರ್ವಕವಾಗಿ ಲಿಂಗಸಮಾನತೆಗೆ ಗಮನ ಹರಿಸಿದರೆ, ನಿರ್ದಿಷ್ಟ ಕ್ರಮಗಳನ್ನು ಕೈಗೊಂಡರೆ, ಜಗತ್ತಿನ ಏರುಪೇರು ಕಡಿಮೆ ಆಗುತ್ತದೆ. 2030 ರ ಹೊತ್ತಿಗೆ 50 -50 ಗುರಿಸಾಧನೆಗೆ ದಾರಿಯಾಗುತ್ತದೆ ಎಂಬ ಆಶಯ ಇದರ ಹಿಂದಿದೆ.

ಜಗತ್ತಿನಲ್ಲಿ ತಾಂತ್ರಿಕತೆ ಶರವೇಗದಲ್ಲಿ ಮುನ್ನುಗ್ಗುತ್ತಿರುವಂತೆ, ಅಪಾರ ಅವಕಾಶಗಳನ್ನು ಸೃಷ್ಟಿಸುತ್ತಿರುವಂತೆ ಭಾಸವಾಗುತ್ತದೆ. ಆದರೆ, ಲಿಂಗಭೇದದ ನೆಲೆಯಲ್ಲಿ ಡಿಜಿಟಲ್ ಡಿವೈಡ್ ಇನ್ನಷ್ಟು ಹೆಚ್ಚುವ ಸೂಚನೆಗಳು ಕಾಣುತ್ತಿವೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ, ವಿನ್ಯಾಸಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತುಂಬಾ ಕಡಿಮೆಯಿದೆ. ಸಮಾಜದಲ್ಲಿ ಪರಿವರ್ತನೆ ತರುವ ಲಿಂಗಸೂಕ್ಷ್ಮತೆಯುಳ್ಳ ಸಂಶೋಧನೆ ನಡೆಯಲು ಇದರಿಂದ ಸಾಧ್ಯವಾಗುತ್ತಿಲ್ಲ. ಭವಿಷ್ಯದ ಸಮಾಜದಲ್ಲಿ ಮಹಿಳೆಯರನ್ನೂ ಒಳಗೊಳ್ಳುವಂತೆ ತಾಂತ್ರಿಕ ಪ್ರಗತಿಗೆ ಒತ್ತು ಸಿಗುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ನೆಲೆಯಲ್ಲಿ ತಮ್ಮ ಕೆಲಸದ ಸ್ಥಳದಲ್ಲಿ ಇದನ್ನು ಇದಕ್ಕೆ ಗಮನ ಹರಿಸಬೇಕು. ಏಕೆಂದರೆ, ಲಿಂಗಸಮಾನತೆಯೇ ಬದಲಾವಣೆಯ ಅಡಿಪಾಯ, ಲಿಂಗಸಂವೇದನೆಯೇ ಪ್ರಗತಿಯ ನೆಲೆಗಟ್ಟು, ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕು ಎಂದು ಕೈಗಾರಿಕೆಗಳು, ಉದ್ಯಮಗಳು, ಸರ್ಕಾರಗಳಿಗೆ ಈ ಘೋಷವಾಕ್ಯ ಕೂಗಿ ಹೇಳುತ್ತಿದೆ. 

ಜಗತ್ತಿನ ಎಲ್ಲ ವಲಯಗಳಲ್ಲಿ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವುದು, ಪುರುಷ ಪಕ್ಷಪಾತವನ್ನು ಪ್ರಶ್ನಿಸುವುದು, ಆಲೋಚನೆ- ವರ್ತನೆಗಳನ್ನು ತಿದ್ದಿಕೊಳ್ಳುವುದು, ಮಹಿಳೆಯರ ಸಾಧನೆಗಳನ್ನು ಗೌರವಿಸುವುದು, ಹಳೆಯಕಾಲದ ಮಾದರಿಗಳನ್ನು ಮಾರ್ಪಡಿಸುವುದು, ಪ್ರೇರಣೆಗಳನ್ನು ಹೆಚ್ಚಿಸುವುದು ಮತ್ತು ಇವೆಲ್ಲವನ್ನೂ ಗಂಡುಹೆಣ್ಣು ಭೇದಭಾವವಿಲ್ಲದೆ ಪ್ರಸಾರ ಮಾಡುವುದು ಬಹಳ ಮುಖ್ಯ ಎಂದು ಅಂತಾರಾಷ್ತ್ರೀಯ ಮಹಿಳಾದಿನದ ಉತ್ಸಾಹಿಗಳು ಹೇಳಿದ್ದಾರೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *