ಸಮಜಾಯಿಷಿ -ಬೀನಾ ಶಿವಪ್ರಸಾದ
ಯತ್ರ ನಾರ್ಯಸ್ತು ಪೂಜ್ಯಂತೇ
ರಮಂತೇ ತತ್ರ ದೇವತಾಃ
ಎಲ್ಲಿ ನಾರಿ ಪೂಜೆಗೊಳಪಡುವಳೋ
ಅಲ್ಲಿ ದೇವತೆಗಳು ನೆಲೆಸುವರು,
ಹೆಣ್ಣಾದ ಕಾಮಧೇನುವಿನೊಳಗೆ
ಮುಕ್ಕೋಟಿ ದೇವರು ನೆಲೆಸಿರುವರು
ಆದರೂ ದೇವ ಮಂದಿರದೊಳಗೆ
ನಾರಿ ಹೆಜ್ಜೆ ಇಟ್ಟರೆ
ದೇವ ಅಪವಿತ್ರ.
ನಿನ್ನೆ ಬೀಡಿ ಸಿಗರೇಟ್ ಸೇದಿ
ಮದ್ಯದ ನಶೆಯಲ್ಲಿ ತೇಲಿದವ
ನಾಳೆ ದೇವಮಂದಿರದ ಒಳಗೆ.
ಆಗಲೂ ದೇವ ಪವಿತ್ರನಾಗೇ ಇರುವ
ಆದರೆ ನಿನ್ನೆ ನೀನೆ ನೀಡಿದ
ನೈಸರ್ಗಿಕ ಕ್ರಿಯೆಯಿಂದ ಬಳಲಿದ
ಹೆಣ್ಣು ನಾಳೆ ದೇವಮಂದಿರದೊಳಗೆ
ಹೋದರೆ ದೇವ ಅಪವಿತ್ರ.
ಸಮಜಾಯಿಷಿ ನೀಡುತ್ತಿಲ್ಲ ಹೆಣ್ಣೇ
ಸಹನಾಮೂರ್ತಿಯಾದ ನೀನು
ಭಾವನೆಗಳಿಗೆ ಬೆಲೆಕೊಡುವ ನೀನು
ಕಟ್ಟುಪಾಡನ್ನೂ ಅನುಸರಿಸಿ
ಒಳಹೊಕ್ಕಿದ್ದರೆ ಮಾತ್ರ
ಛೇ! ದೇವರನಾಡಿನ ದೇವನ ಜೊತೆಗೆ
ಒಲಿಯದ ಮಾನವನೂ ಒಲಿಯುತ್ತಿದ್ದನೇನೋ!
-ಬೀನಾ ಶಿವಪ್ರಸಾದ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.