ಸದ್ದಿಲ್ಲದೇ ಬರುವ ಗರ್ಭಗೊರಳಿನ ಕ್ಯಾನ್ಸರ್-ಡಾ. ಉಷಾ ವಿಕ್ರಾಂತ್
ಕ್ಯಾನ್ಸರ್ ಎಂಬ ಪದವೇ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತದೆ. ಆದರೆ ಮಹಿಳೆಯರಲ್ಲಿ ಇತ್ತೀಚಿನ ವರ್ಷಗಳಲ್ಲಿ ಗರ್ಭಗೊರಳಿನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಎಲ್ಲ ವಯೋಮಾನಗಳ ಮಹಿಳೆಯರೂ ಈ ರೋಗಕ್ಕೆ ತುತ್ತಾಗುವ ಸಂಭವವಿರುವುದು ಹೆಚ್ಚಿನ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಗರ್ಭಗೊರಳಿನ ಕ್ಯಾನ್ಸರ್ ಗೆ ಕಾರಣಗಳೇನು?
ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಹೆಚ್ ಪಿ ವಿ) ಸೋಂಕು ಈ ಕ್ಯಾನ್ಸರ್ ಗೆ ಪ್ರಮುಖ ಕಾರಣ. ಹೆಚ್ ಪಿ ವಿ ಲೈಂಗಿಕ ಚಟುವಟಿಕೆಯ ಮೂಲಕವೇ ಹರಡುತ್ತದೆ. ಶೇ 80 ರಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಸೋಂಕಿಗೆ ಒಳಗಾಗಿರುತ್ತಾರೆ. ಆದರೆ ಅವರ ದೇಹದಲ್ಲಿರುವ ರೋಗನಿರೋಧಕ ಶಕ್ತಿಯಿಂದಾಗಿ ವೈರಸ್ ತನ್ನಿಂದ ತಾನೇ ನಾಶವಾಗುತ್ತದೆ. ಪದೇ ಪದೇ ಸೋಂಕಿಗೆ ತುತ್ತಾಗುತ್ತಿದ್ದರೆ ಮಾತ್ರ ಅದು ಕ್ಯಾನ್ಸರ್ ಆಗಿ ಮಾರ್ಪಡುತ್ತದೆ.
ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದು ಹೆಚ್ ಪಿ ವಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಇಂತಹ ಮಹಿಳೆಯರಿಗೆ ವಿವಿಧ ಬಗೆಯ ವೈರಸ್ ಸೋಂಕು ತಗಲುವ ಸಾಧ್ಯತೆ ಇದೆ. ಜನನಾಂಗದ ಹರ್ಪಿಸ್ ಹಾಗೂ ಕ್ಲಮೈಡಿಯ ಸೋಂಕಿಗೆ ತುತ್ತಾಗಿರುವ ಮಹಿಳೆಯರಿಗೆ ಹೆಚ್ಚಾಗಿ ಗರ್ಭಗೊರಳಿನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಜನನ ನಿಯಂತ್ರಕ ಮಾತ್ರೆಗಳನ್ನು ಸೇವಿಸುವ ಮಹಿಳೆಯರು ಗರ್ಭಗೊರಳಿನ ಕ್ಯಾನ್ಸರ್ ಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಏಕೆಂದರೆ ಈ ಮಾತ್ರೆಗಳಲ್ಲಿರುವ ಹಾರ್ಮೋನ್ ಗಳು ವೈರಸ್ ಬೆಳವಣಿಗೆಗೆ ಉತ್ತೇಜನಕಾರಿಯಾದ ವಾತಾವರಣವನ್ನು ಸೃಷ್ಟಿಸುತ್ತವೆ.
ಚಿಕ್ಕ ವಯಸ್ಸಲ್ಲೇ ಮದುವೆಯಾಗುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಮತ್ತು ಹೆರಿಗೆಯಾಗುವುದು ಕೂಡ ಗರ್ಭಗೊರಳಿನ ಕ್ಯಾನ್ಸರ್ ಗೆ ಎಡೆಮಾಡಿಕೊಡುವ ಸಂಭವವಿದೆ.
ಗರ್ಭಗೊರಳಿನ ಕ್ಯಾನ್ಸರ್ ನ ಲಕ್ಷಣಗಳೇನು?
ಆರಂಭಿಕ ಹಂತದಲ್ಲಿ ಕ್ಯಾನ್ಸರ್ ನ ಯಾವ ಸೂಚನೆಯೂ ದೊರೆಯುವುದಿಲ್ಲ. ಕ್ಯಾನ್ಸರ್ ಬಂದ ನಂತರ ಯೋನಿಸ್ರಾವ ಹೆಚ್ಚುತ್ತದೆ ಹಾಗೂ ರಕ್ತಮಯವಾಗಿದ್ದು ದುರ್ವಾಸನೆಯಿಂದ ಕೂಡಿರುತ್ತದೆ. ಎರಡು ಋತುಚಕ್ರಗಳ ನಡುವೆ ಮತ್ತು ಲೈಂಗಿಕ ಕ್ರಿಯೆಯ ನಂತರ ರಕ್ತಸ್ರಾವವಾಗುವುದು, ಜನನಾಂಗದಲ್ಲಿ ನೋವು, ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳು.
ಮುನ್ನೆಚ್ಚರಿಕೆಯ ಕ್ರಮಗಳು
ವಿಶ್ವ ಆರೋಗ್ಯ ಸಂಸ್ಥೆ ಹದಿಹರೆಯದ ಹೆಣ್ಣು ಮಕ್ಕಳಿಗೆ ಹೆಚ್ ಪಿ ವಿ ನಿರೋಧಕ ಲಸಿಕೆ ಹಾಕುವಂತೆ ಸಲಹೆ ನೀಡಿದೆ. 25 ರಿಂದ 65 ವರ್ಷದ ಒಳಗಿನ ಮಹಿಳೆಯರು ಒಮ್ಮೆಯಾದರೂ ಪ್ರಾಥಮಿಕ ಹೆಚ್ ಪಿ ವಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಗರ್ಭಗೊರಳಿನ ಕ್ಯಾನ್ಸರ್ ಲಕ್ಷಣಗಳು ಆರಂಭಿಕ ಹಂತದಲ್ಲಿ ಪ್ರಕಟವಾಗದೆ ಇರುವುದರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಒಳಿತು.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.