ಸತ್ಯವತಿಯ ಇಳಾಭಾರತ….

ಮೈಸೂರಿನ ಕರ್ನಾಟಕ ಪೋಲೀಸ್ ಅಕಾಡೆಮಿಯಲ್ಲಿ ಮಹಿಳಾ ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲರಾಗಿರುವ ಧರಣಿ ದೇವಿ ಮಾಲಗತ್ತಿ ಕನ್ನಡದ ಪ್ರಗತಿಪರ ಲೇಖಕಿ. ಕವನ, ಕಥೆ, ವಿಮರ್ಶೆ, ಅನುವಾದ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸಿದ್ದಾರೆ. 1995ರಲ್ಲಿ ಬಂದ ಬ್ರೆಡ್ ಜಾಮ್ ಕವನ ಸಂಕಲನ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. 20 ವರ್ಷಗಳ ಹಿಂದೆ ಬರೆದ ‘ಭಾರತೀಯತೆ ಮತ್ತು ಸ್ತ್ರೀವಾದ’ ಕೃತಿ ಹಲವು ಪುರಸ್ಕಾರಗಳಿಗೆ ಪಾತ್ರವಾಗಿದೆ.

ನಾಲ್ಕು ವರ್ಷಗಳ ಹಿಂದೆ ಭಾಮಿನಿ ಷಟ್ಪದಿಯಲ್ಲಿ ಅವರು ರಚಿಸಿರುವ ಮಹಾಕಾವ್ಯ ‘ಇಳಾ ಭಾರತಂ’ ಸಹ ಮಹತ್ವದ ಕೃತಿ. ವ್ಯಾಸನ ತಾಯಿ ಸತ್ಯವತಿ ನಿರೂಪಣೆ ಮಾಡುವ ಮಹಾಭಾರತದ ಕಥೆ ಇಲ್ಲಿದೆ. ಬಹುತೇಕ ಎಲ್ಲ ಪಾತ್ರಗಳನ್ನೂ ಸ್ತ್ರೀ ದೃಷ್ಟಿಕೋನದಿಂದಲೇ ಬರೆಯಲಾಗಿದೆ.

’ಇಳಾಭಾರತಂ’ ಕುರಿತಾಗಿ ಪತ್ರಕರ್ತೆ ಗೀತಾ ಶ್ರೀನಿವಾಸನ್, ಧರಣಿದೇವಿ ಅವರೊಂದಿಗೆ ಮಾತನಾಡಿದ ವಿವರಗಳು ಇಲ್ಲಿವೆ.

ಪ್ರ:  ’ಇಳಾಭಾರತಂ’ನಲ್ಲಿ ನೀವು ಮಹಾಭಾರತವನ್ನು ಸತ್ಯವತಿ ದೃಷ್ಟಿಕೋನದಿಂದ ನೋಡಿದ್ದೀರಲ್ಲ..

ಉ: ‘ಯಾವುದೇ ಮಹಾಕಾವ್ಯ ತಗೋಳ್ಳಿ, ಕಥೆ ಹೇಳೋನು ಒಬ್ಬ ಪುರುಷ ಇರ್ತಾನೆ, ಕೇಳೋನು ಸಹ ಪುರುಷನೇ. ಹೆಣ್ಣು ಕಥೆ ಹೇಳ್ತಾಳೆ ಅನ್ನೋದನ್ನ ಮರೆತಿದೀವಿ. ಹಾಗಾಗಿ ಅದನ್ನ ಮುನ್ನೆಲೆಗೆ ತಂದು ನೋಡೋಣ ಅನ್ನಿಸಿತು. ಮತ್ತೆ, ನಮ್ಮಲ್ಲಿ ಕಥೆ ಹೇಳುವ ಕ್ರಮ ಇದ್ದಿದ್ದು ಹೆಣ್ಣು ಮಕ್ಕಳಲ್ಲೇ. ಅಜ್ಜಿ ಕಥೆ ಹೇಳ್ತಾರೆ, ತಾಯಿ ಹೇಳ್ತಾಳೆ, ಗಂಡಸರಲ್ಲ. ಹಾಗಿದ್ದರೂ ಸಹ ಬರವಣಿಗೆಯಲ್ಲಿ ಆ ಪರಂಪರೆ ಉಳ್ಕೊಂಡು ಬಂದಿಲ್ಲ.
ನಿರೂಪಣೆಗೆ ಸತ್ಯವತಿಯನ್ನ ಆಯ್ಕೆ ಮಾಡ್ಕೊಂಡೆ ಯಾಕೆ ಅಂದ್ರೆ, ಆಕೆ ತುಂಬಾ ಮಾಗಿದ ಹೆಣ್ಣುಮಗಳು. ಹೆಣ್ಣಿನ ಬದುಕಿನ ಬೇರೆಬೇರೆ ಸ್ಥಿತಿಗಳನ್ನ ನೋಡಿದವಳು. ಜಾತಿಯಲ್ಲಿರತಕ್ಕಂಥ ತಾರತಮ್ಯವನ್ನು ನೋಡಿದವಳು, ಮದುವೆಗೆ ಮುಂಚೆ ಒಂದು ಮಗುವನ್ನು ಪಡೆದುಕೊಂಡವಳು, ಮುಂದೆ ತನ್ನ ಸೊಸೆಯರ ನಿಯೋಗಕ್ಕೆ ಸಾಕ್ಷಿಯಾದವಳು, ಹೀಗೆ, ಹೆಣ್ಣಿನ ಬದುಕಿನ ಎಲ್ಲ ವಿಸ್ತಾರಗಳನ್ನೂ ನೋಡಿದವಳು. ಮೇಲಾಗಿ, ಆಕೆ, ವ್ಯಾಸನ ತಾಯಿ. ನಮ್ಮ ಮಹಾಭಾರತ ಕಥೆ ವ್ಯಾಸ ಪ್ರಣಿತ. ವ್ಯಾಸ ಹೇಳಿದ ಕಥೆ ಹೀಗಿದ್ದರೆ, ವ್ಯಾಸನ ತಾಯಿ ಹೇಳಿದ ಕಥೆ ಇನ್ನೆಷ್ಟು ಚೆನ್ನಾಗಿದ್ದೀತು ಅಂತ ನನಗನ್ನಿಸಿ, ಆ ರೀತಿ ಹೇಳಬೇಕೆನ್ನಿಸಿತು.

ಪ್ರ: ಈ ಮಹಾಕಾವ್ಯವನ್ನು ಇಳಾಭಾರತಂ ಅಂತ ಕರೆಯಲು ಕಾರಣ ?

ಉ: ಇಳಾ ಅನ್ನಕ್ಕೆ ಅರ್ಥ ಭೂಮಿ ಅಂತ. ಭೂಮಿಯೇ ಮಹಿಳೆ ಅನ್ನೋ ರೀತಿಯಲ್ಲಿ ಶಿಷ್ಟರು, ಜನಪದರು ಎಲ್ಲರೂ ಭೂಮಿಗೆ ಸಾಕಷ್ಟು ಗೌರವ ಕೊಡ್ತಾ ಬಂದಿದಾರೆ. ಇಳೆ ನಮ್ಮ ಸಮಸ್ತ ಮಹಿಳೆಯರ ಪ್ರತಿನಿಧಿಯಾಗಿ ಕಾಣಿಸ್ತಾಳೆ.
ಇದರಲ್ಲೊಂದು ಪಾತ್ರ ಇದೆ ’ಇಳಾ’ ಅಂತ, ತುಂಬಾ ಜನ ಇಳಾ ಪಾತ್ರವೇ ಕೇಂದ್ರಬಿಂದುವಾ ಅಂತ ಕೇಳ್ತಾರೆ. ಅದು ಹಾಗಲ್ಲ, 14 ಅಧ್ಯಾಯಗಳನ್ನ ಮಾಡಿಕೊಂಡಿದೀನಿ. ಚರ್ತುದಶ ಅಯನಗಳು ಅಂತ ಕರೆದಿದೀನಿ. ಅದರಲ್ಲಿ ಬರುವ ಒಂದು ಪಾತ್ರ ಇಳಾ ಅಷ್ಟೇ. ಈ ಪಾತ್ರದ ಮೂಲಕ ಟ್ರಾನ್ಸ್‌ಜೆಂಡರ್‌ಗಳಿಗೆ
ಒಂದು ಮಾತು ಹೇಳ್ತೀನಿ, ಗಂಡಿನ ಆತ್ಮವನ್ನ ಅವಿಸಿಟ್ಟುಕೊಂಡ ಒಂದು ಸ್ತ್ರೀ ದೇಹ ಅಂತ, ಮೇನಕೆ ಬಗ್ಗೆ ಬರೆಯುವಾಗ ಸೆಕ್ಸ್ ವರ್ಕರ್ಸ್ ಸಮಸ್ಯೆಗಳನ್ನ ತಂದಿದೀನಿ. ಊರ್ವಶಿಯನ್ನು ರೂಪದರ್ಶಿಯಾಗಿ ಚಿತ್ರಿಸಿ ರೂಪದರ್ಶಿಯರ ಬಗ್ಗೆ ಹೇಳಿದೀನಿ. ಹೀಗೆ, 14 ಭಾಗಗಳಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ಕೇಂದ್ರ ಪಾತ್ರ ಬರುತ್ತೆ. ಒಂದೊಂದು ಗಂಡು ಪಾತ್ರದ ಸುತ್ತ ಕೆಲವು ಸ್ತ್ರೀ ಪಾತ್ರಗಳು ಬರತ್ತವೆ, ಅವರನ್ನು ಹೇಗೆ ನಡೆಸಿಕೊಂಡರು, ಆ ಮಹಿಳಾ ಪಾತ್ರಗಳು ಹೇಗೆ ಶಕ್ತಿಯುತವಾಗಿ ನಡೆದುಕೊಂಡವು ಎನ್ನೋದನ್ನ ವಿವರಿಸಿದಿನಿ.

ಪ್ರ: ಕಥಾವಸ್ತುವಿನ ಹಿನ್ನೆಲೆ ಬಗ್ಗೆ ಹೇಳಿ….

ಉ: ಮಹಾಭಾರತದಲ್ಲಿ ನಾವು ಮೂರು ಭಾಗಗಳನ್ನ ಗುರುತಿಸುತ್ತೀವಿ. ಪೂರ್ವ ಭಾರತ, ಭಾರತ ಮತ್ತು ಉತ್ತರ ಭಾರತ ಅಂತ. ನಮಗೆ ಕುಮಾರವ್ಯಾಸ ಭಾರತ ಕೇಳಿ ಅಭ್ಯಾಸ ಆಗಿದೆ. ಕುಮಾರವ್ಯಾಸ ಸ್ಪರ್ಶಿಸಿರುವುದು ಮಧ್ಯಭಾರತ. ಅದರ ನಂತರ ಎಂಟು ಪರ್ವಗಳನ್ನು ತಿಮ್ಮಣ್ಣ ಕವಿ ಬರೆದ ಅನ್ನೋ ವದಂತಿಯಿದೆ.

ಇಳಾಭಾರತದಲ್ಲಿ ಮಹಾಭಾರತದ ಕಥೆಗಿಂತ ಪೂರ್ವಭಾರತದ ಕಥೆಯಿದೆ. ಒಂದು ಲೆಕ್ಕದಲ್ಲಿ ಇದು ಚಂದ್ರವಂಶದ ಕಥೆ. ಈ ಕಥೆ ಪ್ರಾರಂಭವಾಗೋದು ಚಂದ್ರ ಹೇಗೆ ಹುಟ್ಟಿದ, ಚಂದ್ರವಂಶ ಎಲ್ಲಿಂದ ಹುಟ್ತು, ಅನ್ನೋದರಿಂದ ಪ್ರಾರಂಭ ಆಗತ್ತೆ. ಕಥೆಯ ನಿರೂಪಣೆ ಪ್ರಾರಂಭವಾಗೋದು ಸತ್ಯವತಿ ಮೂಲಕ. ಸತ್ಯವತಿ ಕಥೇನ ಫ್ಲಾಷ್‍ಬ್ಯಾಕ್ ತಂತ್ರದಲ್ಲಿ ಹೇಳ್ಕೊಂಡು ಹೋಗ್ತಾಳೆ. ಕಥೆಯನ್ನ ಪಾಂಡವರು ಕೌರವರು ಯುವಕರಾಗುವವರೆಗೆ ಹೇಳ್ತಾಳೆ.
ಕುಮಾರವ್ಯಾಸ ಒಂದು ಸಲ ಬರೆದ ಮೇಲೆ ಬೇರೆ ಯಾರೂ ಏನೂ ಬರೆಯಕ್ಕೆ ಬಾಕಿ ಉಳಿದೇ ಇಲ್ಲ. ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಣೆ ಮಾಡಬಹುದು ಅಷ್ಟೇ ಅಂತ ನನಗೆ ಅನ್ನಿಸತ್ತೆ. ಮಹಾಭಾರತದಲ್ಲಿ ದ್ರೌಪದಿ, ಗಾಂಧಾರಿ ಹೊರತಾಗಿಯೂ ಅನೇಕ ಶಕ್ತಿಯುತವಾದ ಮಹಿಳಾ ಪಾತ್ರಗಳು ಬರತ್ವೆ. ಈ ಪಾತ್ರಗಳೆಲ್ಲಾ ಚರ್ಚೆಗೆ ಒಳಗಾಗದ ಪಾತ್ರಗಳು. ಚಂದ್ರವಂಶದ ಆರಂಭದಿಂದ ಬರುವ ಪಾತ್ರಗಳು. ಈ ಹಿನ್ನೆಲೆಯಲ್ಲಿ, ಮಹಿಳೆಯರನ್ನು ಹೇಗೆ ನೋಡಲಾಗಿತ್ತು ಅಂತ ಹೇಳುವ ಪ್ರಯತ್ನ ಮಾಡಿದೀನಿ. ಅದೇ ರೀತಿ, ಪುರುಷ ಪಾತ್ರಗಳೂ ಕೂಡ, ಆ ಸಂದರ್ಭದಲ್ಲಿ ಹೇಗೆ ವರ್ತಿಸಿದರು, ಹೇಗೆ ವರ್ತಿಸಬಹುದಾಗಿತ್ತು ಅಂತ ಕೂಡ ಹೇಳಿದೀನಿ. ಇಲ್ಲಿ ಕೆಟ್ಟ ಪಾತ್ರ ಅನ್ನುವಂತಹದು ಏನೂ ಇಲ್ಲ. ಒಂದು ಸಮಾನ ದೂರ ಇಟ್ಕೊಂಡು ವಸ್ತುನಿಷ್ಠವಾಗಿ ಹೇಳೋದಕ್ಕೆ ಸಾಧ್ಯ ಅಂತ ಅಂದುಕೊಂಡೆ.

ಪ್ರ: ಈ ಕಾವ್ಯರಚನೆ ಪ್ರಾರಂಭಿಸಲು ಪ್ರೇರಣೆ ಹೇಗಾಯ್ತು?

ಉ: ತುಂಬಾ ಹಿಂದೆ, 1992ರಲ್ಲಿ ತರಂಗದಲ್ಲಿ ‘ಯುಗದ ತೆರೆಯ ಹಿಂದೆ’ ಎಂಬ ಒಂದು ಕಥೆ ಬರೆದಿದ್ದೆ. ಆ ಕತೆಗೆ ತುಂಬಾ ಪ್ರತಿಕ್ರಿಯೆಗಳು ಬಂದುವು. ಇದೇ ಕಥಾವಸ್ತು. ಇದನ್ನು ವಿಸ್ತರಿಸಿ ಬರಿಯಿರಿ ಕಥಾವಸ್ತು ಚೆನ್ನಾಗಿದೆ ಅಂತ. ಕಾವ್ಯದಲ್ಲಿ ಬರೆಯಬಹುದು ಅನ್ನಿಸಿತು. ಅದಕ್ಕೆ ಪೂರಕವಾಗಿ ಬೇರೆ ಬೇರೆ ಕಥೆಗಳನ್ನ ಓದಕ್ಕೆ ಶುರುಮಾಡ್ದೆ. ಎಲ್ಲೆಲ್ಲಿ ಏನೇನು ವಿಸ್ತರಿಸಿಕೊಳ್ಳಬಹುದು ಅಂತ ಒಂದು ಚೌಕಟ್ಟು ಮಾಡಿಕೊಂಡಿದ್ದಾಯ್ತು. ತಂತ್ರ ಏನನ್ನು ಬಳಸಿಕೊಳ್ಳಬಹುದು ಅಂತ ನಿರ್ಣಯ ಮಾಡಿಕೊಂಡೆ. ಎಲ್ಲವನ್ನೂ ಸತ್ಯವತಿ ಹೇಳಿದ ಹಾಗೆ ಹೇಳಕ್ಕೆ ಬರಲ್ಲ, ಅವಳು ಕಥೆ ಹೇಳುವಾಗ ಅನೇಕ ಉಪಕಥೆಗಳು ಬರುತ್ತವೆ, ಅವುಗಳನ್ನ ಹೇಳಬೇಕಾಗುತ್ತದೆ. ಅದನ್ನ ಲೆಕ್ಕ ಮಾಡಿಕೊಂಡೆ.

ಪ್ರ: ಭಾಮಿನಿ ಷಟ್ಪದಿಯಲ್ಲಿ ರಚಿಸಲು ಕಾರಣ?
ಉ: ಭಾಮಿನಿ ಷಟ್ಪದಿ ನನಗೆ ತುಂಬಾ ಇಷ್ಟವಾದುದು. ಕುಮಾರವ್ಯಾಸ ಭಾರತ ಹೆಚ್ಚು ಕಡಿಮೆ ವಾರದಲ್ಲಿ 3-4 ಸಲವಾದರೂ ಕೇಳುವ ಅಭ್ಯಾಸ ನನಗೆ. ನಮ್ಮಲ್ಲಿ ಭಾಷೆಗಳಿಗೆ ಸಂಬಂಧಪಟ್ಟ  ಹಾಗೆ ಎರಡು ವರ್ಗಗಳಿವೆ- ಚಾಕ್ಷುಷ ಮತ್ತು ಶ್ರವಣ ಅಂತ. ಕಣ್ಣಲ್ಲಿ ಓದುವುದು ಚಾಕ್ಷುಷ, ಕಿವಿಯಲ್ಲಿ ಕೇಳುವುದು ಶ್ರವಣ ಅಂತ ಹೇಳಿ. ಕುಮಾರವ್ಯಾಸ ಭಾರತ ಕೇಳಿ ಕೇಳಿ ನನಗೆ ಅಭ್ಯಾಸವಾಗಿತ್ತು. ಅಕ್ಷರ ಬರೆಯಲು ಕಲಿಯುವ ವೇಳೆಗಾಗಲೇ ಕೆಲವು ಪದ್ಯಗಳ ಸಾಲುಗಳು ಗೊತ್ತಿತ್ತು. ಅದರಿಂದ ಬರೆಯಲು ಸುಲಭ ಅನ್ನಿಸ್ತು ನನಗೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಸತ್ಯವತಿಯ ಇಳಾಭಾರತ….

Leave a Reply

Your email address will not be published. Required fields are marked *