ಸಂಸಾರ ಬಂಧ – ಜಿ.ಎಸ್.ಸುಶೀಲಾದೇವಿ. ಆರ್. ರಾವ್
ಪ್ರಾಜೆಕ್ಟ್ ಮುಗಿದ ನಿರಾಳತೆಯಲ್ಲಿ ಕಂಪನಿಯಿಂದ ಹೊರಬಂದು ಎಲ್ಲರೂ ಮೆಟ್ಟಿಲಿಳಿಯುತ್ತಿದ್ದಾಗ,
ಧರಿತ್ರಿ “ಸಧ್ಯ ಮುಗೀತಪ್ಪ ನಾನ್ ನಿನ್ನೆನೇ ಹೇಳಿದ್ದೆ ಹೋಟೆಲ್ ಶಿರೀನ್ನಲ್ಲಿ ಪಾರ್ಟಿ. ತಲೆಭಾರ ಇಳಿಸ್ಕೋಬೇಕು, ಬನ್ನಿ ಹೋಗೋಣ” ಎಂದಾಗ, ಜ್ಯೋತ್ಸ್ನಾ, ಕ್ಯಾಥರೀನ್, ದಿವ್ಯ ಅವಳೊಡನೆ ಹೆಜ್ಜೆ ಹಾಕಿದರು. “ಮೇಡಂ, ನಮ್ಮನ್ನ ಕರಿಯಲ್ಲೇನ್ರೀ?” ಅಂತ ಶರತ್ ನಕ್ಕ. “ಯಾವಾಗ್ಲೂ ನನ್ ಹೆಂಡ್ತಿ ಹಿಂಗೆ, ಮಗ ಹಂಗೆ… ಡ್ರಿಂಕ್ಸ್ ಬೇಡ ರಮ್ಯಾ ಬೇಜಾರಾಗ್ತಾಳೆ ಅಂತ ಹೊಡ್ಕೋತೀರಿ. ನೀವ್ಯಾಕ್ರೀ ನಮ್ಜೊತೆ ಬರ್ತೀರಿ?” ಧರಿತ್ರಿ ಸಿಡುಕಿದಳು.
“ನಾನ್ ಬರಲ್ಲ ಧರಿತ್ರೀ, ಮಗೂಗೆ ಹುಷಾರಿಲ್ಲ ಅತ್ತೆ ಕೈಲಾಗಲ್ಲ” ಅಂದವಳೇ ಹತ್ತಿರ ಬಂದ ಆಟೋ ಹತ್ತಿದ ಮೀರಾಳತ್ತ ನೋಡಿ, “ ಹೋಗ್ ಹೋಗೇ… ನಿಂಗೊಬ್ಳಿಗೇ ಇರೋದು ಸಂಸಾರ ಏ ಕಾತೀ, ಆ ಕಡೆ ಏಕೆ ಹೋಗ್ತೀ? ಬಾರೇ ನಮ್ಜೊತೆ” ಅಂತ ಕೂಗಿದಳು ಧರಿತ್ರಿ.
“ಸಾರಿ ಧರಿತ್ರಿ ನಾನ್ ಬರಲ್ಲ”
“ ಯಾಕೇ ನಿನ್ ಪಾರ್ಟ್ನರ್ ಏನಾದರೂ ಅಂದ್ನಾ? ಅದ್ಯಾರೋ ಆಯಿ ಇದಾಳೆ ಮಕ್ಳನ್ನ ನೋಡ್ಕಳಕ್ಕೆ ಅಂದಿದ್ಯಲ್ಲ ನಡೀ ನೀನಿಲ್ದಿದ್ರೆ ಖುಷೀನೇ ಇರಲ್ಲ.”
“ ನಂಗೆ ಮೂಡಿಲ್ಲ ಬರಲ್ಲ. ಯಾರೇನೂ ಅಂದಿಲ್ಲ. ಮನೇಲಿರೋದು ನಾನೊಬ್ಳೇ. ಎಲ್ರೂ ಊರಿಗೆ ಹೋಗಿದಾರೆ” ಎಂದವಳು ಧರಿತ್ರಿಯ ಸಿಡುಕು ಮಾತಿನತ್ತ ಗಮನವನ್ನೇ ಕೊಡದೆ ಗಾಡಿ ಸ್ಟಾರ್ಟ್ ಮಾಡಿದಳು. ದಾರಿಯಲ್ಲಿ ಸಿಕ್ಕ ಹೋಟಲಲ್ಲಿ ಒಂದಿಷ್ಟು ಪಾರ್ಸಲ್ ಕಟ್ಟಿಸಿಕೊಂಡು ಫ್ಲಾಟ್ ತಲುಪಿದಾಗ ಏಳು ಗಂಟೆ. ಕಾತ್ಯಾಯಿನಿಯ ದೇಹಕ್ಕೆ ದಣಿವಾಗಿದ್ದರೂ ಮನಸ್ಸು ಉಲ್ಲಸಿತವಾಗಿತ್ತು. ತಾನೂ ಧರಿತ್ರಿಯಂತೆ ಯಾರನ್ನೂ ಕೇರ್ ಮಾಡದೆ ಪಾರ್ಟಿ, ಮೋಜು ಅಂತ ತಿರುಗಾಡಿದವಳೇ. ಅವರೆಲ್ಲರಂತೆ ಸಂಸಾರದ ಜಂಜಾಟ ಬೇಡ ಅಂತ ಲಿವಿಂಗ್ ಟುಗೆದರ್ ಸಂಬಂಧ ಇರಿಸಿಕೊಂಡು ಅವನ ಪಾಡಿಗೆ ಅವ… ನನ್ನ ಪಾಡಿಗೆ ನಾನು ತಿರುಗಿ ಒಟ್ಟಿಗೆ ಇದ್ದು ಖುಷಿಯ ಬದುಕು ಕಟ್ಟಿಕೊಂಡವಳು ತಾನು. ಆದರೆ… ಈಗ? ತುಟಿಯರಳಿಸಿ ನಕ್ಕಳು. ನಾಳೆ ಉಡುವ ಸೀರೆ, ಒಡವೆ ಆರಿಸಿ ಎತ್ತಿಟ್ಟು ಸೋಫಾದಲ್ಲಿ ಒರಗಿದಳು. ಮಕ್ಕಳ ಗಲಾಟೆ, ಆಯಿಯ ಗದರುವಿಕೆ, ಅರವಿಂದನ ಮೆಲುಮಾತು ಯಾವುದೂ ಇಲ್ಲದೆ ಮನೆ ಭಣ ಭಣ ಎನಿಸಿತು. ಮೀಟಿಂಗ್ ಮುಗಿದಾಗಲೇ ಅರವಿಂದನ ಫೋನ್ ಬಂದಿತ್ತು. “ಆಯಿ ಜೊತೆಗೆ ನನ್ನ ಇಬ್ಬರು ಸೋದರ ಮಾವಂದಿರು, ಒಬ್ಬ ಅತ್ತೆ ಬರ್ತಿದ್ದಾರೆ. ಕೆನಡಾದಲ್ಲಿರೋ ಅಣ್ಣ ತಿಂಗಳ ನಂತರ ಬರ್ತಾನಂತೆ. ನಾವು ಧಾರವಾಡದಿಂದ ಹೊರಟು ಬೆಳಿಗ್ಗೆ ಸುಮಾರು 7 ಗಂಟೆ ಹೊತ್ತಿಗೆ ಬರ್ತೀವಿ”
ಅರವಿಂದ . . . . ಮನಸ್ಸು ಉಲ್ಲಸಿತವಾಯಿತು.
ಫೋನ್ ರಿಂಗಾಗಿ ಎತ್ತಿದಳು. ಅಮ್ಮನ ಫೋನ್ “ಗುರಲಿಂಗಜ್ಜಿ ಶರಣಜ್ಜಿಯನ್ನು ಜೊತೆಗೆ ಕರ್ಕೊಂಡು ಅಮ್ಮನ ಮನೆಗೆ ಬಂದಿದ್ದಾರಂತೆ. ಕಾರ್ನಲ್ಲಿ ಹೊರಡ್ತಿದೀವಿ. ಬೆಳಿಗ್ಗೆ ಹೊತ್ತಿಗೆ ಬರ್ತೀವಿ”
ಕಾತ್ಯಾಯಿನಿಗೆ ಖುಷಿಯಾಯಿತು. ಅಮ್ಮನಿಗಿಂತ ಶರಣಜ್ಜಿ ಗುರುಲಿಂಗಜ್ಜಿ ನನಗೆ ಆತ್ಮೀಯರು. ಗುರುಲಿಂಗಜ್ಜಿಗೆ 90 ರ ಪ್ರಾಯ, ಶರಣಜ್ಜಿಗೆ 70 ರ ಪ್ರಾಯ.
“ ಪುಟ್ಟೀ, ಮದ್ವೆ ಮಾಡ್ಕಳೇ, ನಿಂಗೆ ಒಳ್ಳೇ ಗಂಡ ಸಿಗ್ಲಿ ಅಂತ ದ್ಯಾವ್ರನ್ನ ಕೇಳ್ತೀನಿ” ಅಂತ ಗುರುಲಿಂಗಜ್ಜಿ ಪದೇ ಪದೇ ಹೇಳ್ತಿತ್ತು.
ಅಮ್ಮ ಮಂಜುಳ ಸರ್ಕಾರಿ ಹೈಸ್ಕೂಲಿನ ಸೈನ್ಸ್ ಟೀಚರ್. ಆ ಕಾಲಕ್ಕೆ ಕ್ರಾಂತಿಕಾರಿ. ಕೆಲಸಕ್ಕೆ ಸೇರಿದಾಗ ತನ್ನ ಕೊಲೀಗ್ ದಯಾನಂದ ಭಂಡಾರಿಯನ್ನು ಪ್ರೀತಿಸಿದಳಂತೆ. ತಾಯಿಯ ಸ0ನ್ಯಾಸಿ ಜೀವನ, ಅವಳ ನೋವು, ಸಂಕಟ ಕಂಡವಳಿಗೆ ತನಗೊಂದು ಪ್ರೀತಿಯ ಬದುಕು ಬೇಕು ಅನ್ನಿಸಿತ್ತು. ಒಂದು ವರ್ಷ ಎಲ್ಲ ಸರಿ ಇತ್ತಂತೆ. ನಾನು ಹುಟ್ಟಿದೆನಂತೆ. ನನಗೂ ಇಲ್ಲ, ನಿನಗೂ ಇಲ್ಲ ಕೂಸಿಗೆ ಹಸಿರು ಕಣ್ಣು ಹೇಗೆ ಬಂತು ಎಂದನಂತೆ. ನಿನ್ನ ನಡತೆಯೇ ಸರಿ ಇಲ್ಲ ಎಂದನಂತೆ. ಅನುಮಾನ ರೋಗ ಶುರುವಾಯಿತು. ಯಾರೊಡನೆ ಮಾತಾಡಿದರೂ, ಜೊತೆಗೆ ನಾಲ್ಕು ಹೆಜ್ಜೆ ಹಾಕಿದರೂ ತೀವ್ರ ಅಸಹನೆ, ಚುಚ್ಚು ಮಾತು. ಆಗಾಗ ಕದ್ದು ಮುಚ್ಚಿ ಹಿಂಬಾಲಿಸಿ ಪರೀಕ್ಷಿಸತೊಡಗಿದಾಗ ಅಮ್ಮನಿಗೆ ಹಿಂಸೆ ಎನಿಸಿತಂತೆ. ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಕೂಸಿನ ಬಗ್ಗೆ ದ್ವೇಷ. ಅದು ನನ್ನದಲ್ಲ ಎಂಬ ವಾದ. ಅಮ್ಮ ಡಿ.ಎನ್.ಎ ಪರೀಕ್ಷೆ ಮಾಡಿಸೋಣ ಎಂದಳಂತೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಅದು ಹಾದರದ ಕೂಸು ಎಂದು ಅಬ್ಬರಿಸಿದನಂತೆ. ಕೊನೆ ಕೊನೆಗೆ ಊಟಕ್ಕೆ ವಿಷ ಹಾಕಿದ್ದೀ ಎಂಬ ಆರೋಪ. ಕೂಸಿನ ತಂದೆ ಯಾರು ಹೇಳು ಎಂಬ ಒತ್ತಾಯ. ಅಮ್ಮ ರೋಸಿ ಮನೋವೈದ್ಯರಲ್ಲಿಗೆ ಹೋಗೋಣ ಎಂದಳಂತೆ. ನನಗೆ ಹುಚ್ಚಿಲ್ಲ ನಿನ್ನಂತ ನಡತೆಗೆಟ್ಟವಳ ಜೊತೆಗೆ ಬದುಕಲಾರೆ ಎಂದನಂತೆ. ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನವಾಯಿತು. ಆತ ಕೂಸಿನ ತಂಟೆಗೆ ಬರದೆ ತನ್ನೂರು ಕರಾವಳಿಯ ಕಡೆಗೆ ವರ್ಗ ಮಾಡಿಸಿಕೊಂಡು ಹೋದನಂತೆ.
2 ವರ್ಷದ ಕೂಸಿನ ಜೊತೆಗೆ ಅಮ್ಮ ಒಂಟಿಯಾಗಿ ಬದುಕುತ್ತಿದ್ದಳು. ಆಗ ಪರಿಚಯವಾದವರು ಪಂಚಾಕ್ಷರಯ್ಯ. ಪೋಸ್ಟಲ್ ಅಸಿಸ್ಟಂಟ್ ಆದ ಆತ ಅನಾಥನಾಗಿ ಮಠದಲ್ಲಿ ಬೆಳೆದರಂತೆ. ಅಮ್ಮನ ಬಗ್ಗೆ ಎಲ್ಲ ಗೊತ್ತಿದ್ದೂ ಒಪ್ಪಿ ಅವಳನ್ನು ಲಗ್ನವಾದರಂತೆ. ಅಮ್ಮನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದರು. ನನ್ನನ್ನು ಒಪ್ಪಲಿಲ್ಲ. ಮೊದಮೊದಲು ನಿರ್ಲಕ್ಷ್ಯ, ನಂತರ ಅಸಹನೆಯಾಗಿ, ಸಿಡಿಮಿಡಿಯಾಗಿ ತನ್ನ ಚಂದದ ಸಂಸಾರ ಹಾಳಾದೀತೆಂದು ಹೆದರಿ ಅಮ್ಮ ನಾಲ್ಕು ವರ್ಷದ ಮಗುವನ್ನು ಬೋರ್ಡಿಂಗ್ ಸ್ಕೂಲಿಗೆ ಸೇರಿಸಿದಳಂತೆ. ಅದೂ ದೂರದ ಬೇರೆ ಊರಲ್ಲಿ. ರಜೆ ಬಂದಾಗ ಶರಣಜ್ಜಿಯ ಮನೆಗೆ ಬರುತ್ತಿದ್ದೆ. ಅಮ್ಮ ಅಲ್ಲಿಗೆ ಬರಬೇಕಾದಾಗ ತನ್ನಿರವು ಬೇಡವೆನಿಸಿ ಆಕೆಯ ಅಜ್ಜಿ ಗುರುಲಿಂಗವ್ವನ ಮನೆಗೆ ಕಳಿಸುತ್ತಿದ್ದಳು. ತನ್ನ ಚಂದದ ಸಂಸಾರಕ್ಕೆ ಮಗಳ ನೆರಳು ಬೀಳದಂತೆ ನೋಡಿಕೊಂಡಳು.
ಶರಣಜ್ಜಿ, ಗುರುಲಿಂಗಜ್ಜಿ ಇಬ್ಬರೂ ನನ್ನನ್ನು ಎದೆಗೆ ಅವಚಿಕೊಂಡು ಪ್ರೀತಿ ತೋರಿಸಿದರು.
ಶರಣಜ್ಜಿ ತನ್ನ ತಲೆಸವರಿ ಪ್ರೀತಿಯಿಂದ ಹೇಳಿದ್ದರು. “ಎಷ್ಷು ಬೇಕಾದರೂ ಓದು ಮಗಾ, ನಾನು ಓದಿಸ್ತೀನಿ. ನೀನು ಓದಿ ಚಂದಾಗಿ ಬದುಕಬೇಕು” ಎಂದು ಆಕೆ ಎಲ್ಲ ಖರ್ಚಿನ ಹೊಣೆ ಹೊತ್ತಳು. ಶಿವೂ ಮಾಮನ ಬೆಂಬಲವೂ ಇತ್ತು.
ಶರಣಜ್ಜಿಯ ನೋವಿನ ಕಥೆ. 16 ರ ವಯಸ್ಸಿಗೆ ಲಗ್ನ, 30ರ ಹರೆಯದ ಆಕೆಯ ಗಂಡನಿಗೆ ಆಧ್ಯಾತ್ಮದ ಹುಚ್ಚು. ವೈರಾಗ್ಯ, ಸ0ನ್ಯಾಸದ ಹಂಬಲ.
ಹಿರೇಮಠದ ರುದ್ರಯ್ಯನವರಿಗೆ ಚಿಂತೆಯಾಯಿತು. ಇರುವ ಒಬ್ಬನೇ ಮಗ ಸ0ನ್ಯಾಸಿಯಾದರೆ ಮನೆತನದ ಗತಿ ಏನು? ಹೇರಳ ಆಸ್ತಿ ಇದೆ. ಯಾರು ನೋಡಿಕೊಳ್ಳಬೇಕು. ನಾನು ಇನ್ನೆಷ್ಟು ಕಾಲ ಇದ್ದೇನು? ಮಗ ಸದಾಶಿವಯ್ಯನನ್ನು ಅತ್ತು ಕರೆದು ಒಪ್ಪಿಸಿ ಶರಣಮ್ಮನೊಂದಿಗೆ ಲಗ್ನ ಮಾಡಿಸಿದ್ದರಂತೆ. ಪ್ರೀತಿ, ಮಾತು ಏನೂ ಇಲ್ಲದ ಸಂಸಾರವಂತೆ. ಜೊಚ್ಚಿಲು ಮಗಳಾದಾಗ, ‘ಅಯ್ಯೋ ಮಗ ಆಗಬಾರದಿತ್ತೇ ನನಗೆ ಬಂಧನದಿಂದ ಬಿಡುಗಡೆ ಆಗ್ತಿತ್ತು’ ಅಂದರಂತೆ. ಅದಾದ ವರ್ಷಕ್ಕೆ ಹೆಂಡತಿ ಪುನಃ ಬಸಿರಿ. ಈ ಬಾರಿ ಮಗ ಹುಟ್ಟಿದ ಸುದ್ದಿ ಕೇಳಿ ಕೂಸಿನ ಮಕವನ್ನೂ ನೋಡದೆ ಅಂದು ರಾತ್ರಿಯೇ ಬುದ್ಧನಂತೆ ಮನೆ ಬಿಟ್ಟು ಹೋದರಂತೆ. ಮತ್ತೆಂದೂ ಆತನ ಸುದ್ದಿ ತಿಳಿಯಲೇ ಇಲ್ಲ. ರುದ್ರಯ್ಯ, ಗೌರಮ್ಮ ಅತ್ತರೂ ಮನಿತನ ಉಳೀತು, ಆಸ್ತಿಗೆ ವಾರಸುದಾರ ಹುಟ್ಟಿದ ಅಂತ ಹಿಗ್ಗಿದರಂತೆ. 19ರ ಪ್ರಾಯದಲ್ಲಿ ಒಂಟಿಯಾದ ಶರಣಮ್ಮ ಎಲ್ಲ ಆಸೆ ನುಂಗಿ ವಿರಾಗಿಣಿಯಾಗಿ ಬದುಕಬೇಕಾಯ್ತು. ಕಾಮನೆಗಳನ್ನು ಹತ್ತಿಕ್ಕಲಾರದೆ ಅತ್ತರಂತೆ, ತಣ್ಣೀರು ಸುರಿದುಕೊಂಡರಂತೆ. ಆಕೆಗೆ ಬಲವಂತದ ಸ0ನ್ಯಾಸ ಸಹಿಸಲಾಗಲಿಲ್ಲವಂತೆ. ಮಗಳು ಅವಳ ಬದುಕು ಅವಳೇ ಕಟ್ಟಿಕೊಂಡಳು. ಮೊದಲ ಮದುವೆ ಮುರಿದು ಮಂಜುಳ 2ನೇ ಲಗ್ನವಾದಾಗ ಶರಣಮ್ಮ ತನ್ನ ಮಗಳ ಬದುಕು ತನ್ನಂತಾಗಲಿಲ್ಲವಲ್ಲ ಎಂದು ಒಪ್ಪಿ ಹರಸಿದರಂತೆ. ಮಗ ಓದಿದರೂ ಊರಲ್ಲೇ ಕೃಷಿಕನಾಗಿ ಉಳಿದ. ಹೇರಳ ಆಸ್ತಿ ಇತ್ತು, ಬಡವರ ಮನೆಯ ಹುಡುಗಿ ಸೊಸೆಯಾಗಿ ಬಂದಳು.
ತನ್ನ ಇವತ್ತಿನ ಸಾಫ್ಟ್ವೇರ್ ಇಂಜಿನಿಯರಿಂಗ್ ಪದವಿ, ಕೈತುಂಬ ಸಂಬಳದ ಉದ್ಯೋಗ ಎಲ್ಲದಕ್ಕೂ ಶರಣಜ್ಜಿ ಕಾರಣ.
ಅಮ್ಮ ಮಂಜುಳ ಆಗಾಗ ಸಿಗುತ್ತಿದ್ದಳು. ಆಕೆ ಪ್ರೀತಿಯಿಂದ ಮಾತಾಡಿದರೂ ತನಗದು ಕೃತಕ ಎನ್ನಿಸುತ್ತಿತ್ತು. ಆಕೆಯ ಗಂಡ, ಇಬ್ಬರು ಮಕ್ಕಳು ತನಗೆಂದಿಗೂ ಭೇಟಿ ಆಗಲೇ ಇಲ್ಲ.
ಇನ್ನು ಅಮ್ಮನ ಅಜ್ಜಿ ಗುರುಲಿಂಗವ್ವನದು ಹೋರಾಟದ ಬದುಕು. ಅಪ್ಪ ಅವ್ವನ್ನ ಕಳಕಂಡು ಸೋದರತ್ತೆಯ ಮನೆಯಲ್ಲಿ ಯಾರಿಗೂ ಬೇಡದವಳಾಗಿ ಬೆಳೆದಳಂತೆ. ಅತ್ತೆ ಶಿವಪುರದ ರೈತ ಮಹದೇವಪ್ಪನಿಗೆ ಕೊಟ್ಟು ಲಗ್ನ ಮಾಡಿ ಕೈ ತೊಳೆದುಕೊಂಡಳಂತೆ. ಗಂಡ ಸಕಲ ಕಲಾವಲ್ಲಭ, ಯಾರೂ ಹೆಣ್ಣು ಕೊಡಲು ಒಪ್ಪಿರಲಿಲ್ಲ. ಹೊಡೆತ, ಬಡಿತ, ಗೋಳಾಟದ ಬದುಕು. ಆಸ್ತಿ ಸಾಕಷ್ಟಿದ್ದರೂ ಗಂಡನ ದುಂದುಗಾರಿಕೆ, ದುಶ್ಚಟಗಳಿಂದ ಬಡತನದ ಬದುಕು. ಹಿರಿಯ ಮಗಳು ಶರಣವ್ವ, ನಂತರ ಲೋಕೇಶ, ಪರಮೇಶ ಹುಟ್ಟಿದರು. ಮಗಳು ಶರಣವ್ವನ್ನ ಖರ್ಚೇ ಇಲ್ಲದ ಮದುವೆ ಅಂತ ಹಿರೇಮಠದವರ ಮನೆಗೆ ಕೊಟ್ಟನಂತೆ. ಲಗ್ನದ ಖರ್ಚು ಗಂಡಿನವರದ್ದೇ, ಹಣ ಉಳಿಸಿದ ಖುಷಿ ಮಹದೇವಪ್ಪನಿಗೆ.
ಗುರುಲಿಂಗಜ್ಜಿಗೆ ನಲವತ್ತರ ಪ್ರಾಯವಿದ್ದಾಗ ಮಹದೇವಪ್ಪ ಅರ್ಧ ಆಸ್ತಿ ಮಾರಾಟ ಮಾಡಿದನಂತೆ. ಆಕೆ ಎದೆ ಎದೆ ಬಡಿದುಕೊಂಡು ಅತ್ತರೆ ಕೇಳುವವರೇ ಇರಲಿಲ್ಲ. ಮರುವರ್ಷವೇ ಉಳಿದರ್ಧ ಆಸ್ತಿ ಊರಿನ ಹಿರೇಗೌಡರಿಗೆ ಮಾರಾಟ ಮಾಡುವ ಪ್ರಯತ್ನ ನಡೆದಿದ್ದಾಗ ಆಕೆ ಸಿಡಿದೆದ್ದಳು. ಮೈ ತುಂಬ ಸಾಲ ಅದೆ, ತೀರಿಸಬೇಕು ಕೇಳಲು ನೀನ್ಯಾರೆ? ಅಂದನಂತೆ ಗಂಡ. ಅದು ಮನೆತನದ ಪಿತ್ರಾರ್ಜಿತ ಆಸ್ತಿ. ಹೆಂಡತಿ, ಇಬ್ಬರು ಮಕ್ಕಳು ಸೈನ್ ಹಾಕಿಲ್ಲ. ನಮ್ಮ ಬದುಕಿಗೆ ಏನೂ ಉಳಿದಿಲ್ಲ ಅಂತ ಕೋರ್ಟಿಗೆ ಹೋದಳಂತೆ.
ಪೇಟೆಯಲ್ಲೊಂದು ಮನೆ ಮಾಡಿ ಅಲ್ಲೊಂದು ಹೆಣ್ಣಿನ ಜೊತೆ ಬದುಕುತ್ತಿದ್ದ ಗಂಡ ಸಾಯಂಬೀಳ ಹೊಡೆದ. ಜಗ್ಗದೆ ಕೋರ್ಟಿಗೆ ಹೋಗಿ ತನ್ನ ಚೂರುಪಾರು ಚಿನ್ನ ಮಾರಿ ಕೇಸಿನ ಖರ್ಚು ಭರಿಸಿದಳಂತೆ. ಕೊನೆಗೂ ಕೋರ್ಟು ಆಸ್ತಿಯಲ್ಲಿ ಹಿರೇಗೌಡರ ಸಾಲ ತೀರಿ ಉಳಿದ 18 ಎಕರೆ ಇವರ ವಶಕ್ಕೆ ಕೊಡಿಸಿತಂತೆ. ಗಂಡನನ್ನು ಮೂಲೆಗೊತ್ತರಿಸಿ ತಾನೇ ನಿಂತು ಸಾಗುವಳಿ ಮಾಡಿಸಿ ತನ್ನ ಮಕ್ಕಳಿಗೆ ಬದುಕು ಕೊಟ್ಟಳಂತೆ. ಆಕೆ ಆವೇಶದಿಂದ ತನ್ನ ಬದುಕಿನ ಕಥೆ ಹೇಳಿದಾಗ ಕಾತ್ಯಾಯಿನಿ ಮೆಚ್ಚಿಕೊಂಡಿದ್ದಳು. ಅಂತಹ ಇಬ್ಬರು ಅಜ್ಜಿಯರೇ ತನಗೆ ಬದುಕು ಕೊಟ್ಟವರು. ನಾಳೆ ಅವರಿಬ್ಬರೂ ಬರ್ತಿದ್ದಾರೆ, ನಾಳೆ ನನ್ನ ರಿಜಿಸ್ಟರ್ ಲಗ್ನಕ್ಕೆ ಸಹಿ ಹಾಕ್ತಾರೆ ಅದಕ್ಕಿಂತ ಹೆಚ್ಚಿನದು ಇನ್ನೇನು ಬೇಕು? ಕಾತ್ಯಾಯಿನಿ ಖುಷಿಯಾದಳು.
ಉಂಡು ಕಾಟ್ ಮೇಲೆ ಉರುಳುತ್ತಿದ್ದಂತೆ ಪುನಃ ಅರವಿಂದನ ಫೋನು, “ನಾಳೆ 10 ಗಂಟೆಗೆಲ್ಲ ರೆಡಿಯಾಗಬೇಕು, ಇಬ್ಬರು ಸೋದರ ಮಾವಂದಿರು, ಇಬ್ಬರು ಅತ್ತೆಯರು ಬರಲೊಪ್ಪಿದ್ದಾರೆ, ನಿನ್ನಮ್ಮ ಬರ್ತಿದ್ದಾರೆಯೇ?” ಎಂದೆಲ್ಲಾ ವಿಚಾರಿಸಿಕೊಂಡ.
ತನ್ನ ಓದು ಮುಗಿದು ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿ, ಕೈ ತುಂಬ ಸಂಬಳ ಬರತೊಡಗಿದಾಗ ಆಕೆ ಸ್ವತಂತ್ರಳಾಗಿದ್ದಳು. ಅಮ್ಮನ ಅನಾದರ, ತನ್ನ ಅನಾಥ ಬದುಕು, ಇಬ್ಬರು ಅಜ್ಜಿಯರ ನೋವಿನ ಬದುಕು ಎಲ್ಲ ನೋಡಿದ ತನಗೆ ಯಾರ ಬಂಧನವೂ ಇಲ್ಲದ ಬದುಕು ಬೇಕು ಅನ್ನಿಸಿಬಿಟ್ಟಿತ್ತು. ಲಗ್ನವೆಂದರೆ ಕೈಗೆ ಕೋಳ ಹಾಕಿದಂತೆ, ಯಾರೋ ಬಂದು ಗಂಡನೆಂದು ಅಧಿಕಾರ ಚಲಾಯಿಸಿ ತಾನು ಗುಲಾಮಳಂತೆ ಬದುಕಬೇಕೇಕೆ? ಲಗ್ನವಾದ ಹೆಣ್ಣು ಅಸಹಾಯಕಳಾಗುತ್ತಾಳೆ. ಅವಳ ದೇಹ, ಹಣ, ಮನಸ್ಸು ಯಾವುದೂ ಅವಳದಾಗಿ ಉಳಿಯೋದಿಲ್ಲ ಎಂಬ ಧರಿತ್ರಿಯ ವಾದ ಸರಿ ಎನ್ನಿಸಿತ್ತು. ಹಾಗಾಗಿ ತಾನು ಲಗ್ನದ ಬಂಧನವನ್ನು ತಿರಸ್ಕರಿಸಿದ್ದಳು.
ಲಗ್ನವೇ ಬೇಡ, ಒಲಿದವನೊಡನೆ ಸಹಜೀವನ ಸರಿ ಇಲ್ಲವಾದರೆ, ಯಾವ ಹಂಗೂ ಇಲ್ಲದೆ ದೂರ ಸರಿದರಾಯಿತು. ತನ್ನ ಜೊತೆಯ ಧರಿತ್ರಿ, ಜ್ಯೋತ್ಸ್ನಾ, ಲಾಸ್ಯ, ಕತ್ರೀನಾ ಎಲ್ಲರೂ ತನ್ನಂತೆಯೇ ‘ಲಿವಿಂಗ್ ಟು ಗೆದರ್’ ಬದುಕನ್ನೇ ಆರಿಸಿಕೊಂಡವರು. ಲಗ್ನವಾಗಿದ್ದ ಮೀರಾ, ಶ್ರದ್ಧಾ, ವಿಭಾರಿಗೆ ಆಫೀಸ್ ಕೆಲಸದ ನಂತರ ಮನೆಯಲ್ಲೂ ದುಡಿತ, ಎಲ್ಲ ಹೊಣೆ ಹೊರಲಾರದೆ ಅವರು ಸೋಲುತ್ತಿದ್ದರೆ ತಮ್ಮದು ಹಾಯಾದ ಬದುಕು ಎನಿಸುತ್ತಿತ್ತು. ಜಂಜಾಟವಿಲ್ಲದ ಬದುಕು ಖುಷಿಕೊಟ್ಟಿತ್ತು.
ಆಗ ತನ್ನ ಬದುಕಿಗೆ ಬಂದವ ಬಿಜಾಪುರದ ಪ್ರಭುದೇವ. ರಸಿಕ, ಮಾತುಗಾರ. ಕುಡಿತ, ಪಾರ್ಟಿ, ತಿರುಗಾಟ, ಪ್ರವಾಸ, ಶಾಪಿಂಗ್ ಎಂದೆಲ್ಲಾ ಸಂಬಳದ ಹಣವನ್ನು ಯಾವ ಹೊಣೆಯೂ ಇಲ್ಲದೆ ಖರ್ಚು ಮಾಡುವ ಸುಖ. ಪ್ರಭುದೇವನೂ ಅವಳಂತೆಯೇ ಮೋಜಿನ ಬದುಕಿಗೆ ಖುಷಿಪಟ್ಟವ, ಆರೇ ತಿಂಗಳಲ್ಲಿ ಆತ ಊರಿಗೆಂದು ಹೋದವ ಅಪ್ಪ, ಅಮ್ಮ ಹೇಳಿದ ಹುಡುಗಿಗೆ ತಾಳಿಕಟ್ಟಿ ಮನೆಮಾಡಿ ಏನೂ ಅರಿಯದವನಂತೆ ಸಂಸಾರ ನಡೆಸತೊಡಗಿದ. ಅವಳಿಗೊಂದು ಮಾತೂ ಹೇಳದೆ ಅವಳಿಂದ ದೂರವಾದ.
ನಂತರ ಬಂದವ ಕರಾವಳಿಯ ಸಂಜೀವ ಪೂಜಾರಿ ನಿಜಕ್ಕೂ ಬದುಕು ಚಂದವಿತ್ತು, ತಾನೂ ಖುಷಿಯಾಗಿದ್ದಳು. ಸಂಜೀವ ಅವಳೊಡನೆ ಪ್ರೀತಿಯಿಂದಿದ್ದ, ಸಂಜೀವನ ಹುಟ್ಟುಹಬ್ಬಕ್ಕೆ ಚಂದದ ಉಡುಗೊರೆ ತಂದಿಟ್ಟು ಸಿಹಿಅಡಿಗೆ ಮಾಡಿ ಕಾದಿದ್ದಳು, ಆತ ಬರಲೇ ಇಲ್ಲ. ಮರುದಿನ ಸಂಜೆ ಬಂದವ, ‘ನಿನ್ನೆ ನನ್ನೂರಿನ ಮೀರಾ ಮನೇಲಿ ಮೀನಿನ ಊಟವಿತ್ತು’ ಹೋಗಿದ್ದೆ ಎಂದ. ‘ನಾ ಕಾದಿದ್ದೆ, ಸಿಹಿ ಅಡಿಗೆ ಮಾಡಿದ್ದೆ, ಉಡುಗೊರೆ ತಂದಿಟ್ಟು ಕಾದೆ, ಫೋನ್ ಮಾಡಿದರೂ ಎತ್ತಲಿಲ್ಲ, ನನಗೇಕೆ ಹೇಳಲಿಲ್ಲ’ ಎಂದವಳು ರೇಗಿದರೆ,
“ಯಾಕೆ ಹೇಳಬೇಕು? ನೀನೇನು ನನ್ನ ಹೆಂಡತಿಯೇ?” ಎಂದ ಕಪಾಳಕ್ಕೆ ಒದ್ದಂತಾಗಿ ಅವಳು ನಾಲ್ಕಾರು ದಿನ ಮೌನವಾಗಿದ್ದಳು. ಅವನೇ ತಗ್ಗಿ ಪುನಃ ಒಂದಾದರು, ಬದುಕು ಖುಷಿಯಾಗಿತ್ತು.
ಒಮ್ಮೆ ತಲೆನೋವೆಂದು ರಜೆ ಹಾಕಿ ಮನೆಯತ್ತ ಬರುತ್ತಿದ್ದಳು. ಮನೆಯ ಮುಂದೆ ಫೋನ್ ಮಾಡುತ್ತಿದ್ದ ಸಂಜೀವ ಕಾಣಿಸಿದ, ತಾನು ಮರೆಯಾಗಿ ನಿಂತಿದ್ದಳು.
“ಇಲ್ಲ ಕಣೋ ನಾನು ಶಾಲಿನೀನೇ ಲಗ್ನ ಆಗೋದು, ಆಕೆ ನನ್ನ ಜೀವ, ಅವಳ ಓದು ಮುಗೀಲಿ ಅಂತ ಕಾದಿದ್ದೀನಿ. ಅಲ್ಲೀವರೆಗೆ ಯಾಕೆ ಉಪವಾಸ ಇರಬೇಕು ಅಂತ ಈ ಲಿವಿಂಗ್ ಟು ಗೆದರ್ ಸಂಬಂಧ ಅಷ್ಟೇ. ಥೂ, ಇಂತಾ ಹೆಣ್ಣನ್ನು ಲಗ್ನ ಆಗ್ತಾರೆಯಾ? ಪಾರ್ಟಿ, ಮೋಜು, ಮಜ ಅಷ್ಟೇ ಬದುಕು ಅಂತ ತಿಳಿದಿದ್ದಾಳೆ. ಅವಳಿಗೆ ನಾನೂ ಅಷ್ಟೇ, ಇನ್ನೊಬ್ಬನೂ ಅಷ್ಟೇ… ಶಿ ಈಸ್ ಎ ಬಿಚ್. . . .” ಸಂಜೀವನ ದನಿಯಲ್ಲಿ ತಿರಸ್ಕಾರ ತುಂಬಿತ್ತು.
ಅವಳಿಗೆ ತೀರ ಬೇಜಾರೆನಿಸಿ ಅಲ್ಲಿಂದಲೇ ಹಿಂತಿರುಗಿ ಧರಿತ್ರಿಯ ಪ್ಲಾಟಿಗೆ ಹೋಗಿದ್ದಳು. ಅವಳ ಪಾರ್ಟನರ್ ಒಬ್ಬನೇ ಇದ್ದ. ಧರಿತ್ರಿ ಊರಿಗೆ ಹೋಗಿದ್ದಾಳೆ. ‘ನಮ್ಮದೇನು ಲಗ್ನವೇ… ಬಾ ಊಟಿಗೆ ಹೋಗೋಣ’ ಅಂದ, ಬೇಡವೆನ್ನಿಸಿ ರಜೆ ಹಾಕಿ ಶರಣಜ್ಜಿಯ ಊರಿಗೆ ಹೋಗಿದ್ದಳು. ‘ಕಾತ್ಯಾಯಿನಿ, ಹುಷಾರಿಲ್ವ ಮಗಾ’ ಅಂದಿದ್ದಳು ಅಜ್ಜಿ. ತಲೆ ಸಿಡಿತ ರಜೆ ಹಾಕಿ ಬಂದಿದೀನಿ ಅಂದವಳು ನಾಲ್ಕಾರು ದಿನ ಅಲ್ಲಿದ್ದಳು.
ವಾಪಸ್ ಬಂದವಳೇ ಬೇರೊಂದು ಫ್ಲಾಟನ್ನು ಲೀಜಿಗೆ ಹಾಕಿಕೊಂಡು ಸಂಜೀವನಿಗೊಂದು ಮಾತೂ ಹೇಳದೆ ತನ್ನ ಸಾಮಾನೆಲ್ಲ ಸಾಗಿಸಿದಳು. ತನಗ್ಯಾರೂ ಇಲ್ಲ. ತಾನು ಅನಾಥೆ. ತನಗೂ ಅಪ್ಪ, ಒಡಹುಟ್ಟಿದವರು ಎಲ್ಲ ಇದ್ದಿದ್ದರೆ ಚನ್ನಾಗಿರುತ್ತಿತ್ತು ಅಂತ ಕಣ್ಣೀರು ಹಾಕಿದಳು. ಅಮ್ಮ ತನ್ನ ಪಾಲಿಗೆ ಇದ್ದೂ ಇಲ್ಲದಂತೆ ಅನ್ನಿಸಿ ಬಿಕ್ಕಿದ್ದಳು. ಗಂಭೀರೆಯಾಗಿ ಬಿಟ್ಟಳು. ಯಾಕೋ ಪಾರ್ಟಿ, ತಿರುಗಾಟ ಏನೂ ಬೇಡವೆನ್ನಿಸಿ ಕೆಲಸ ಮುಗಿಸಿ ಸೀದ ಫ್ಲಾಟಿಗೆ ಬಂದು ಸೇರುತ್ತಿದ್ದಳು. ಯಾರ ಜೊತೆಯೂ ಬೇಡ ಒಂಟಿಯಾಗಿಯೇ ಇದ್ದು ಬಿಡುವ ಹಟ ತನ್ನಲ್ಲಿ ಮೂಡಿತ್ತು.
3-4 ತಿಂಗಳು ಕಳೆದಿರಬಹುದು. ಅಕ್ಕಪಕ್ಕದ ಫ್ಲಾಟಿನ ಕೆಲವರನ್ನು ಮಾತಾಡಿಸಿದರೂ ತನ್ನ ಬಿಗುವಿನಲ್ಲೇ ಇದ್ದಳು. ಒಮ್ಮೆಲೇ ತೀವ್ರ ಜ್ವರ ಬಂದು ತಾನು ಅರೆ ನಿದ್ದೆ, ಅರೆ ಎಚ್ಚರದಲ್ಲಿ ಬಿದ್ದುಕೊಂಡಿದ್ದಳು. ಕಂಪನಿಗೆ ಫೋನ್ ಮಾಡಿ ವಿಷಯ ತಿಳಿಸಿ ರಜೆ ಹಾಕಿದಳು. ಧರಿತ್ರಿ, ಜ್ಯೋತ್ಸ್ನಾ… ಹಲವಾರು ಗೆಳತಿಯರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಳು. ಒಬ್ಬರೂ ಬರಲಿಲ್ಲ. ಅಮ್ಮ ಫೋನೇ ಎತ್ತಲಿಲ್ಲ. ಪುನಃ ಪುನಃ ಮಾಡಿದಾಗ ಪರೀಕ್ಷೆ ನಡೀತಾ ಇದೆ, ಬರಲಾಗಲ್ಲ ಆಸ್ಪತ್ರೆಗೆ ಅಡ್ಮಿಟ್ ಆಗು ಎಂದಳು. ಏಳಲೂ ತ್ರಾಣವಿಲ್ಲ, ಇದ್ದ ಬ್ರೆಡ್, ಬಿಸ್ಕತ್ ಎಲ್ಲ ತಿಂದು ಖಾಲಿ ತಿನ್ನಲೇನೂ ಇಲ್ಲದೆ ಕಂಗಾಲಾಗಿ ಗಳಗಳ ಅತ್ತಿದ್ದಳು. ತೂರಾಡುತ್ತ ನಡೆದು ಪಕ್ಕದ ಫ್ಲಾಟಿನ ಬಾಗಿಲು ಬಡಿದಿದ್ದಳು. ಆಗ ಒಳಬಂದು ಆಕೆಯನ್ನು ಮಲಗಿಸಿ ಡಾಕ್ಟರನ್ನು ಕರೆತಂದವನು ಪಕ್ಕದ ಫ್ಲಾಟಿನ ಅರವಿಂದ ಜೋಶಿ, ಟೈಫಾಯಿಡ್ ತಿಂಗಳುಗಟ್ಟಲೆ ಕಾಡಿತು. ಅರವಿಂದ ಗೆಳೆಯನಂತೆ ಎಲ್ಲ ಹೊಣೆ ಹೊತ್ತ, ಗಂಜಿ ಕಾಸಿದ, ವಿಧಿ ಇಲ್ಲದೆ ಹೆಣ್ಣುಮಕ್ಕಳು ಮಾಡಬೇಕಾದ ಕೆಲಸವನ್ನೂ ತಾನೇ ಮಾಡಿದ. ನಿಧಾನಕ್ಕೆ ಅವಳ ಎಲ್ಲ ಕಥೆ ತಿಳಿದು ಅವಳೊಡನೆ ಬದುಕುವ ನಿರ್ಧಾರ ಮಾಡಿದ. ತಾನು ಲಗ್ನ ನಿರಾಕರಿಸಿದಾಗ ಅದಕ್ಕೂ ಒಪ್ಪಿದ ಬದುಕು ಚೆನ್ನಾಗಿತ್ತು. ಅರವಿಂದ ಒಳ್ಳೆಯವ ಪ್ರೀತಿಯಿಂದ ನೋಡಿಕೊಂಡ. ಆತ ಪಾರ್ಟಿ, ಮೋಜು, ಮಜ ಮಾಡಲು ಇಚ್ಚಿಸಲಿಲ್ಲ. ಆದರೆ ತನಗ್ಯಾವ ಕಟ್ಟುನಿಟ್ಟು ಹಾಕಲಿಲ್ಲ. ಆದರೆ ಒಮ್ಮೆಲೇ ಹೌಹಾರುವ ಸ್ಥಿತಿ ತನ್ನದಾಯಿತು. ತಾನು ಲೆಕ್ಕ ತಪ್ಪಿ ಗರ್ಭಿಣಿ ಎಂದು ಗೊತ್ತಾದಾಗ ಕಂಗಾಲಾದಳು. ಗಾಬರಿಯಾಗಿ ‘ಇದೆಲ್ಲ ಬೇಡ, ತೆಗೆಸಿಬಿಡ್ತೇನೆ’ ಅಂದಳು. ಬೇಡ ಅಂದ ಅರವಿಂದ. ಆ ಮಗುವನ್ನು ನನಗೆ ಕೊಡು ನಾನು ಸಾಕ್ತೇನೆ ಎಂದು ಅಂಗಲಾಚಿದ, ಎಲ್ಲ ಜವಾಬ್ದಾರಿ ನನಗಿರಲಿ ಎಂದ.
ಆಗ ಬಂದವರು ಅವನ ತಾಯಿ ಗೋದಾವರಿ ಆಯಿ. ಆಯಿ ತನಗೆ ತಾಯಿಯ ಪ್ರೀತಿ ಕೊಟ್ಟಳು. ಹೆತ್ತ ಮಗಳಂತೆ ನೋಡಿಕೊಂಡಿದ್ದಳು. ಹುಟ್ಟಿದ್ದು ಅವಳಿ-ಜವಳಿ ದಿಶಾ, ನಿಶಾ. ಆಯಿ ಮಕ್ಕಳ, ಮನೆಯ ಜವಾಬ್ದಾರಿ ಹೊತ್ತರು. ಅರವಿಂದ ಪ್ರೀತಿಯ ಧಾರೆ ಹರಿಸಿದ.
ಪುನಃ ಕೆಲಸಕ್ಕೆ ಸೇರಿದಾಗ ಯಾರೂ ಬೇಡವೆನ್ನಲಿಲ್ಲ.
ಅರವಿಂದನದ್ದೂ ನೋವಿನ ಕಥೆ, ಆತ ಮರಾಠೀ ಬ್ರಾಹ್ಮಣ. ಪುಣೆಯ ಹತ್ತಿರದ ಹಳ್ಳಿಯೊಂದರಲ್ಲಿ ಆತನ ತಂದೆ ನಾರಾಯಣ ಜೋಶಿ ಪುರೋಹಿತರು, ಆಸ್ತಿವಂತರು. ಅವರ ಜೀವದ ಗೆಳೆಯ ಪಾಂಡುರಂಗ ದೇಶಪಾಂಡೆ, ನಿನ್ನ ಮಗ ನನ್ನ ಮಗಳು ಲಗ್ನವಾಗಲಿ ಎಂದು ಮಕ್ಕಳು ಚಿಕ್ಕವರಿದ್ದಾಗಲೇ ತೀರ್ಮಾನಿಸಿದ್ದರಂತೆ. ಅರವಿಂದ ಇಂಗ್ಲೀಷ್ ಎಂ.ಎ. ಮುಗಿಸಿ ಧಾರವಾಡದ ಖಾಸಗಿ ಕಾಲೇಜೊಂದರಲ್ಲಿ ಕೆಲಸಕ್ಕೆ ಸೇರಿದ ಮೇಲೆ ಲಗ್ನದ ಮಾತೆತ್ತಿದರಂತೆ. ಬಿ.ಕಾಂ. ಮುಗಿಸಿದ ಮಗಳು ಗೀತಾಳನ್ನು ಲಗ್ನ ಮಾಡಿಕೊಟ್ಟರಂತೆ. ಧಾರವಾಡದಲ್ಲಿ ಹೊಸ ಸಂಸಾರ ಹೂಡಿಯಾಯಿತು. ಗೀತಾ ಮಂಕಾಗಿದ್ದಳಂತೆ. ಹತ್ತಿರ ಬಂದರೆ ಸಿಡುಕುತ್ತಿದ್ದಳಂತೆ, ಸ್ವಲ್ಪ ದಿನ ಸರಿಹೋದೀತು ಎಂದು ಅರವಿಂದ ತಾಳ್ಮೆಯಿಂದ ಇದ್ದು ಪತ್ನಿಯ ಮೇಲೆ ಪ್ರೀತಿ ತೋರಿಸಿದನಂತೆ. ಒಡವೆ, ಸೀರೆ ತಂದುಕೊಟ್ಟನಂತೆ, ಪ್ರೀತಿಯಿಂದ ಆಕೆಯನ್ನು ಗೆಲ್ಲಲು ಪ್ರಯತ್ನಿಸಿದನಂತೆ. ತಿಂಗಳು ಕಳೆಯುತ್ತಿದ್ದಂತೆ ಒಮ್ಮೆಲೇ ಗೀತಾ ನಾಪತ್ತೆಯಾದಳಂತೆ. ಗಾಬರಿಯಾಗಿ ಆತ ಊರಿಗೆ ಬಂದರೆ ಆಕೆ ತವರಿಗೆ ಬಂದು ನಂತರ ತನ್ನ ಪ್ರಿಯಕರನೊಡನೆ ಸಂಸಾರ ಆರಂಭಿಸಿದ್ದಳಂತೆ. ಊರೆಲ್ಲಾ ಗಲಾಟೆ ಆಗಿ ಪಂಚಾಯ್ತಿ ಆಯ್ತಂತೆ. ಗೀತಾ ಹೆದರದೆ ‘ಆತ ಗಂಡಸೇ ಅಲ್ಲ, ಷಂಡ ಒಮ್ಮೆಯೂ ನನ್ನ ಹೆಣ್ತನ ಅನುಭವಿಸಲು ಅವನಿಂದಾಗಲಿಲ್ಲ. ಷಂಡನೊಡನೆ ಬದುಕಲಾರೆ. ನಾನು ಉಪ್ಪು, ಖಾರ ಉಂಡ ಜೀವ. ಆತ ನಿಜಕ್ಕೂ ಷಂಡ’ ಎಂದು ಆಕೆ ವಾದಿಸಿದಾಗ ನೆರೆದ ಜನ ನಂಬಿದರಂತೆ. ಅರವಿಂದನಿಗೆ ಅವಮಾನವಾಯ್ತು, ಅವಳ ತಂದೆ ಮಗಳ ಸಂಬಂಧ ಹರಿದುಕೊಂಡರಂತೆ, ಅರವಿಂದನ ತಂದೆಗೆ ಹೃದಯಾಘಾತವಾಗಿ ಸತ್ತರಂತೆ.
ಅರವಿಂದನ ಸೋದರ ಮಾವಂದಿರು ಅವನ ಲಗ್ನಕ್ಕೆ ಪ್ರಯತ್ನಿಸಿದರಂತೆ. ಮೊದಲ ಮದುವೆ ಅವನು ಷಂಡ ಎಂಬ ಕಾರಣಕ್ಕೆ ಮುರಿಯಿತು ಎಂಬ ಸುದ್ದಿ ಹಬ್ಬಿ ಕೂಡಿ ಬರಲಿದ್ದ ಸಂಬಂಧಗಳೂ ಮುರಿದವಂತೆ.
ಧಾರವಾಡದಲ್ಲಿರಲಾಗದೆ ಅರವಿಂದ ತನ್ನ ಸೋದರಮಾವನ ಸಹಾಯದಿಂದ ಬೆಂಗಳೂರಿನ ಖಾಸಗೀ ಕಾಲೇಜ್ನಲ್ಲಿ ಲೆಕ್ಷರರ್ ಆಗಿ ಕೆಲಸಕ್ಕೆ ಸೇರಿ ಒಂಟಿಯಾಗಿ ಬದುಕತೊಡಗಿದ. ಆತ ಓದು, ಅಧ್ಯಯನ, ಸಂಶೋಧನೆಯಲ್ಲಿ ತನ್ನ ನೋವು ಮರೆತ. ಗೀತಾ ಕೊಟ್ಟ ಆಘಾತದಿಂದ ಆತ ಬೇಗ ಚೇತರಿಸಿಕೊಳ್ಳಲಿಲ್ಲ. ಬಹಳ ಕಾಲ ಒಬ್ಬನೇ ಇದ್ದ. ತನ್ನ ಮೂವತ್ತೆಂಟನೇ ಪ್ರಾಯದಲ್ಲಿ ಅನಿರೀಕ್ಷಿತವಾಗಿ ತನ್ನ ಬದುಕಿಗೆ ಬಂದ. ಆಯಿಗೆ ‘ಗೀತಾ ಮೊದಲೇ ಒಬ್ಬನನ್ನು ಪ್ರೀತಿಸಿದ್ದಳು, ಲಗ್ನ ಬಲವಂತವಾಗಿ ಆಯಿತು, ಅದಕ್ಕೇ ಹೀಗೆ ಮಾಡಿ ತನ್ನ ಪ್ರಿಯಕರನನ್ನು ಸೇರಿದಳು’ ಅಂತ ಯಾರೋ ಹೇಳಿದರಂತೆ. ಆಕೆಯಿತ್ತ ಆಘಾತದಿಂದ ಹೊರಬಂದು ತನ್ನನ್ನು ಪ್ರೀತಿಸಿದ, ತನ್ನ ಮಕ್ಕಳ ತಂದೆಯಾದ, ತನಗೆಂದೂ ಯಾವ ಒತ್ತಾಯವನ್ನೂ ಮಾಡಲಿಲ್ಲ, ತನ್ನ ಹಣವನ್ನೂ ಮುಟ್ಟಲಿಲ್ಲ.
70ರ ಪ್ರಾಯದ ಗೋದಾವರಿ ಆಯಿ ತನಗೆ ಪ್ರೀತಿ ಕೊಟ್ಟರು. ಆಯಿ ಹುಟ್ಟಿದ್ದು ಧಾರವಾಡದ ದೇಶಪಾಂಡೆ ಮನೆತನದಲ್ಲಿ. ತಂದೆ ದಾಮೋದರ ದೇಶಪಾಂಡೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಕಾಂಗ್ರೆಸ್ನಿಂದ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರಂತೆ, ತುಂಬ ಪ್ರಗತಿಪರರು. ಎಲ್ಲ ಜಾತಿ ಎಲ್ಲ ಧರ್ಮದ ಜನರಲ್ಲೂ ಬೆರೆಯುತ್ತಿದ್ದರಂತೆ. ಆಯಿ ಆಕೆಯ ಇಬ್ಬರು ತಮ್ಮಂದಿರು ತಂದೆಯಿಂದ ಪ್ರಭಾವಿತರಾಗಿ ಎಲ್ಲರೊಡನೆ ಬೆರೆತು ಬೆಳೆದರು. ಆಯಿ ತಕ್ಕಮಟ್ಟಿಗೆ ಓದಿ ಆಧುನಿಕತೆ ಮೈಗೂಡಿಸಿಕೊಂಡಿದ್ದರು. ಅಂತಹ ತಂದೆ ತನ್ನನ್ನು ಪರಮ ಸಂಪ್ರದಾಯಸ್ಥರಾದ ಜೋಶಿ ಮನೆತನಕ್ಕೆ ಏಕೆ ಲಗ್ನ ಮಾಡಿಕೊಟ್ಟರು ಎಂದು ಇಂದಿಗೂ ಆಕೆಗೆ ಅರ್ಥವಾಗಿಲ್ಲವಂತೆ. ಮನೆಯ ಪೂಜೆ ಪುರಸ್ಕಾರ, ಅತೀ ಮಡಿವಂತಿಕೆ ಆಯಿಗೆ ಉಸಿರುಗಟ್ಟಿಸಿತ್ತಂತೆ. ಪುಣ್ಯಕ್ಕೆ ಅತ್ತೆ ಒಳ್ಳೆಯವರು, ಗಂಡ ಸಾಧು ಸ್ವಭಾವದವರು. ಹೊರಗಾದಾಗ ಅಸ್ಪೃಷ್ಯರಂತೆ ದೂರ ಕೂಡುವ ಮತ್ತು ಮಡಿ, ಪೂಜೆ, ಉಪವಾಸ ಮಾಡುವ ಅನಿವಾರ್ಯತೆಗೊಳಗಾಗಿ ಒದ್ದಾಡಿದರಂತೆ.
ಆಯಿಗೆ ಚೊಚ್ಚಿಲು ಮಗಳು ಅನಿತಾ ಹುಟ್ಟಿದಳಂತೆ. ನಂತರ ಅನಂತ, ಅಚ್ಯುತ, ಅರವಿಂದ ಮೂವರು ಗಂಡು ಮಕ್ಕಳು. ಅನಿತಾ ತುಂಬ ಚಂದವಿದ್ದಳಂತೆ. ತುಂಬ ಚೆನ್ನಾಗಿ ಹಾಡುತ್ತಿದ್ದಳಂತೆ. 18ರ ಪ್ರಾಯದಲ್ಲಿ ಆಯಿ ಇಷ್ಟು ಬೇಗ ಬೇಡ ಎಂದು ಹಠ ಮಾಡಿದರೂ ಕೇಳದೆ ಆಕೆಯ ಅತ್ತೆ, ಮಾವ, ಗಂಡ ಅನಿತಾಳ ಲಗ್ನವನ್ನು ಸುದರ್ಶನ ಪುಣೇಕರನೊಡನೆ ಮಾಡಿದರಂತೆ. ಆರು ತಿಂಗಳಷ್ಟೇ ಸಂಸಾರ, ಪ್ರವಾಸ ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸುದರ್ಶನ ಸತ್ತ. ಮೊದಲೇ ಸಂಪ್ರದಾಯಸ್ಥ ಪುರೋಹಿತರ ಮನೆ. ಮಗನನ್ನು ನುಂಗಿದ ಪಾಪಿ ಎಂದು ಕೊಟ್ಟ ಮನೆ ದೂರ ಸರಿದು ತವರೇ ಶಾಶ್ವತವಾಯಿತು. ಚಿಕ್ಕ ಪ್ರಾಯದ ಚಂದದ ಹುಡುಗಿ ಹಾದಿ ತಪ್ಪಿದರೆ ಮನೆತನದ ಮರ್ಯಾದೆ ಹಾಳು ಎಂದು ಕೇಶಮುಂಡನ ಮಾಡಿಸಲು ನಿರ್ಧರಿಸಿದರು. ಅನಿತ ಅತ್ತಳಂತೆ, ಆಯಿ ಹಾರಾಡಿ ಪ್ರತಿಭಟಿಸಿದರು. ತಲೆಕೂದಲು ತೆಗೆಸಲೇಬೇಕು ಎಂದು ಪಟ್ಟುಹಿಡಿದು ಅರವಿಂದನ ಅಜ್ಜ, ಅಜ್ಜಿ, ಅಪ್ಪ ಕ್ಷೌರಿಕನನ್ನು ಕರೆತಂದರಂತೆ. ಮಗಳನ್ನು ಮಹಡಿಯಿಂದ ಎಳೆದು ತರಲು ಹೋದಾಗ ಬಿಳೀ ಸೀರೆ ಉಟ್ಟು ಗೋದಾವರಿ ಆಯಿ ಕ್ಷೌರಿಕನ ಮುಂದೆ ತಲೆತಗ್ಗಿಸಿಕೂತರು.
“ಏಳೇ, ನೀನು ಮುತ್ತೈದೆ” ಎಂದು ಅವರು ಚೀರಿದಾಗ.
“ನಾನು ಮದುವೆ, ಮಕ್ಕಳು, ಸಂಸಾರ ಎಲ್ಲ ಕಂಡಿದ್ದೇನೆ, ಇನ್ನು ಸನ್ಯಾಸಿಯಾಗಿ ಬದುಕಬಲ್ಲೆ, ನನ್ನ ತಲೆ ಬೋಳಿಸಿಯೇ ನನ್ನ ಮಗಳ ತಂಟೆಗೆ ಹೋಗಿ ಎಂದು ಆಕೆ ಪಟ್ಟು ಹಿಡಿದರಂತೆ. ಕೊನೆಗೆ ಅನಿತಾ ಸಕೇಶಿಯಾಗಿ ಬದುಕಲಿ. ಅವಳು ಹಾದಿ ತಪ್ಪಿದರೆ ತಾಯಿಯೇ ಹೊಣೆ ಎಂದು ತೀರ್ಮಾನವಾಯ್ತು. ಆದರೆ ತಿಂಗಳೊಳಗೇ ಅನಿತಾ ನೇಣು ಹಾಕಿಕೊಂಡಳಂತೆ.
‘ಒಪ್ಪತ್ತೂಟ ವೈಧವ್ಯದ ನಿಯಮಗಳನ್ನು ಪಾಲಿಸಲಾರೆ. ಗಂಡಿಗೆ ಹೆಂಡತಿ ಸತ್ತರೆ ಮರುಮದುವೆ ಮಾಡುತ್ತೀರಿ. ಹೆಣ್ಣಿಗೇಕೆ ಇಂಥ ಬದುಕು? ಜೀವಮಾನವಿಡೀ ಕಾಮನೆಗಳನ್ನು ನುಂಗಿ ಸನ್ಯಾಸಿಯಾಗಿ ಬದುಕಲಾರೆ. ನನಗೊಂದು ಜೀವನ ಕೊಡದ ನಿಮಗೆ ಧಿಕ್ಕಾರ’ ಎಂದು ಡೆತ್ನೋಟ್ ಬರೆದಿಟ್ಟಿದ್ದಳಂತೆ. ಆಯಿಗೆ ಅಂದು ಬದುಕೇ ಹೇಸಿಗೆ ಎನ್ನಿಸಿಬಿಟ್ಟಿತ್ತಂತೆ. ಆಯಿಯ ಅತ್ತೆ, ಮಾವ ಸತ್ತ ಮೇಲೆ ಹಿರಿಯ ಮಗ ಅನಂತಜೋಶಿ ಡಾಕ್ಟರ್ ಆಗಿ ಕೆನಡಾಕ್ಕೆ ಹೋದವ ಅಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ಗುಜರಾತಿನ ಮೈಥಿಲಿ ಬೆನ್ಳನ್ನು ಲಗ್ನವಾದರಂತೆ.
“ಮೈಥಿಲಿ ಮೇಲ್ಜಾತಿಯವಳಲ್ಲ, ನೀವು ಅನಿತಾಳನ್ನು ಕೊಂದಿರಿ ನನ್ನ ಬದುಕು ನನ್ನದು, ನನಗಿಷ್ಟ ಬಂದಂತೆ ಬದುಕುವೆ” ಎಂದು ತಿಳಿಸಿ ಕೆನಡಾದಲ್ಲೇ ನೆಲೆಸಿದರಂತೆ. ತಂದೆ ಅವನಿಗೆ ಹಿಡಿ ಶಾಪ ಹಾಕಿದರೆ ಆಯಿ ಒಪ್ಪಿ ಹರಸಿದರಂತೆ.
ಎರಡನೇ ಮಗ ಅಚ್ಯುತ ಜೋಶಿ ಸಂಪ್ರದಾಯಸ್ಥ ಪುರೋಹಿತರ ಒಬ್ಬಳೇ ಮಗಳನ್ನು ಲಗ್ನವಾದ. ತಂದೆ ನಾರಾಯಣ ಜೋಶಿ ಸತ್ತ ಮೇಲೆ ಅತ್ತೆ ಮಾವರನ್ನು ಮನೆಗೇ ಕರೆತಂದ. ವೈಧವ್ಯದ ಹೀನಾಯ, ಮಡಿವಂತಿಕೆಯ ವಾತಾವರಣದಲ್ಲಿ ಸಕೇಶಿಗೆ ಸಿಗುವ ಸ್ಥಾನಮಾನ ಆಯಿಯನ್ನು ರೊಚ್ಚಿಗೆಬ್ಬಿಸಿತು. ಮಗ ಬೇಡಿದರೂ ಕೇಳದೆ ಮನೆ ತೊರೆದು ತವರಿಗೆ ಬಂದು ತಮ್ಮನ ಸಂಸಾರದೊಡನೆ ಇದ್ದರಂತೆ. ಹಾಗಾಗಿ ಅರವಿಂದ ಕರೆದಾಗ ಬಂದು ತಮ್ಮೊಡನೆ ಇದ್ದಾರೆ. ಆಯಿ ಇದನ್ನೆಲ್ಲ ಹೇಳುತ್ತ ಬಿಕ್ಕಿಬಿಕ್ಕಿ ಅತ್ತಿದ್ದರು. ನಿನ್ನಲ್ಲಿ ಅನಿತಾಳನ್ನ ಕಾಣ್ತಿದ್ದೇನೆ ಅಂದಿದ್ದರು. ಅನಿತಾಳಿಗೆ ತೋರಿಸುವಂತದೇ ಪ್ರೀತಿ ತನಗೆ ತೋರಿಸಿದ್ದಾರೆ, ಆಯಿ ಅಪ್ಪಟ ಚಿನ್ನ.
ಮಕ್ಕಳಿಗೆ 2 ವರ್ಷ ತುಂಬಿದಾಗ ತನ್ನನ್ನು ಕರೆದು ಹೇಳಿದ್ದರು, “ಮಗೂ, ನೀನು ಹೇಗಾದರೂ ಇರು ಬೇಡವೆನ್ನುವುದಿಲ್ಲ, ಆದರೆ ಮಕ್ಕಳು ಶಾಲೆಗೆ ಸೇರುವಾಗ ತಂದೆಯ ಹೆಸರು ಬೇಕು. ಅವರು ಕೀಳರಿಮೆ ಇಲ್ಲದೆ ಸಮಾಜದಲ್ಲಿ ಬದುಕಬೇಕು. ಅರವಿಂದ ನಿನ್ನನ್ನು ಶೋಷಿಸಲಾರ. ಲಗ್ನವಾಗಿರಿ. ಮಕ್ಕಳಿಗೆ ತಂದೆ, ತಾಯಿ ಸಮಾಜದಲ್ಲಿ ಸ್ಥಾನಮಾನ ಸಿಗುತ್ತೆ. ನಿನಗೂ ಪ್ರೀತಿಯ ಭದ್ರಬದುಕು ಸಿಗುತ್ತೆ. ಯೋಚಿಸು ಒತ್ತಾಯವಿಲ್ಲ” ಎಂದರು. ಅರವಿಂದ ಸುಮ್ಮನಿದ್ದ. “ಆಯೀ, ನೀವು ನನಗೆ ಹೆತ್ತತಾಯಿಯ ಪ್ರೀತಿ ಕೊಟ್ಟಿದ್ದೀರಿ. ನಿಮ್ಮ ಮಗ ಅಪ್ಪಟ ಚಿನ್ನ, ನಿಮ್ಮ ಮಗನೊಡನೆ ನಾನು ಜೀವಮಾನವಿಡೀ ಸಂತೋಷವಾಗಿ ಬದುಕಬಲ್ಲೆ ಲಗ್ನವಾಗ್ತೇನೆ” ಎಂದು ಒಪ್ಪಿಕೊಂಡೆ.
ಮನೆದೇವರ ಪೂಜೆ ಮುಗಿಸಿ ಆಯಿಯ ತಮ್ಮಂದಿರನ್ನು ಕರೆತರುವುದಾಗಿ ಹೋಗಿದ್ದಾರೆ, ನಾಳೆ ಬರ್ತಾರೆ ಎಲ್ಲರ ಹರಕೆಯೊಡನೆ ಅರವಿಂದನೊಡನೆ ನನ್ನ ಬದುಕು.
ತನಗರಿವಿಲ್ಲದೆಯೇ ಕಾತ್ಯಾಯಿನಿಗೆ ನಿದ್ದೆ ಬಂತು. ಬೆಳಿಗ್ಗೆ ಎದ್ದು ತಲೆಸ್ನಾನ ಮಾಡಿ ಹೊರಬಂದಾಗ ಕರೆಗಂಟೆ ಬಾರಿಸಿತು. ಆಯಿ, ಅರವಿಂದ, ಬಂಧುಗಳು, ದಿಶಾ, ನಿಶಾ ಒಳಬಂದರು. ತುಸು ಹೊತ್ತಿನಲ್ಲೇ ಅಮ್ಮ, ಇಬ್ಬರು ಅಜ್ಜಿಯರು ಬಂದು ಮನೆ ತುಂಬಿಕೊಂಡಿತು. ಜೊತೆಗೆ ಮನಸ್ಸೂ… ತುಂಬಿಕೊಂಡಿತು.
ಜಿ.ಎಸ್.ಸುಶೀಲಾದೇವಿ. ಆರ್. ರಾವ್

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.