FEATUREDಪುಸ್ತಕ ಸಮಯಸಾಹಿತ್ಯ ಸಂಪದ

 ಸಂವಿಧಾನದ ಕಾಲಾಳು –  ತೀಸ್ತಾ ಸೆತಲ್ವಾಡ್  

 “ಹೋರಾಟಕ್ಕೆ ಒಂದು ಉದಾಹರಣೆ ತೀಸ್ತಾ; ನಮ್ಮ ಪೀಳಿಗೆಗೆ ಮತ್ತು ಮುಂದಿನ ಪೀಳಿಗೆಗೂ ಕೂಡ . ಹಾಗೂ ಅವರ ಈ ಪುಸ್ತಕ ಆ ಹೋರಾಟಕ್ಕೆ ಒಂದು ಅಸ್ತ್ರ.” ಎಂದು  ತೀಸ್ತಾ ಸೆತಲ್ವಾಡ್ ಅವರ ‘ಫುಟ್ ಸೋಲ್ಡ್ಜರ್ ಆಫ್ ಕಾನ್‍ಸ್ಟಿಟ್ಯೂಷನ್’ ಕೃತಿಯನ್ನು ಕುರಿತು ನುಡಿಯುತ್ತಾರೆ, ಇಂದಿನ ಭರವಸೆಯ ಯುವ ನಾಯಕ ಕನ್ಹಯ್ಯ ಕುಮಾರ್. ಈ ಕೃತಿಯ ಕನ್ನಡ ಅನುವಾದ ‘ತೀಸ್ತಾ ಸೆತಲ್ವಾಡ್ ನೆನಪುಗಳು’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಯಿತು. ಅದನ್ನು ಕನ್ನಡಕ್ಕೆ ಅನುವಾದಿಸಿರುವವರು ಎಸ್.ಸತ್ಯಾ.

ಆತ್ಮ ಕಥಾನಕ ಶೈಲಿಯಲ್ಲಿರುವ  ಈ ಪುಸ್ತಕವು ತೀಸ್ತಾ ಅವರ ವೈಯಕ್ತಿಕ ಬದುಕಿನ ಬಗ್ಗೆ ಬೆಳಕು ಬೀರುವುದು ಕಡಿಮೆಯೇ. ಮೂಲತಃ ಗುಜರಾತಿ ಲಾಯರ್ ಗಳ  ಕುಟುಂಬದಲ್ಲಿ ಹುಟ್ಟಿದ ತೀಸ್ತಾ ಅವರ ಹಿರಿಯರು ಮುಂಬೈಗೆ ವಲಸಿಗರಾಗಿ ಹೋದವರು. ಭಾರತದ ಮೊದಲ ಅಟಾರ್ನಿ ಜನರಲ್ ಎಂ.ಸಿ. ಸೆತಲ್ವಾಡ್ ಅವರ ಮೊಮ್ಮಗಳಾದ ತೀಸ್ತಾ ಅವರಿಗೆ ನ್ಯಾಯಾಲಯದ ಮೇಲಿನ ಗಟ್ಟಿಯಾದ ನಂಬಿಕೆಯಿಂದಾಗಿಯೇ ತಮ್ಮ ಹೋರಾಟವನ್ನು ನ್ಯಾಯಾಲಯದ ಮೂಲಕವೇ ನಡೆಸಲು ಹೆಚ್ಚು ಒತ್ತುಕೊಡುತ್ತಾರೆ. “ರಾಜಸತ್ತೆಯು ಎಸಗುವ ಅನ್ಯಾಯಗಳಿಗೆ ನ್ಯಾಯ ಒದಗಿಸುವ ಒಂದೇ ದಾರಿ ನ್ಯಾಯಾಲಯ. ಯಾವುದೇ ಕಾನೂನು ಒಂದು ತತ್ವವನ್ನು ಆಧರಿಸಿರಬೇಕು. ಭಾರತದ ಸಂದರ್ಭದಲ್ಲಿ ಈ ತತ್ವವು, ಈ ತಾತ್ವಿಕ ಚೌಕಟ್ಟು ಸಂವಿಧಾನದ ಆಶಯಗಳೇ ಹೊರತು ಮತ್ತೇನೂ ಅಲ್ಲ” ಎನ್ನುವ ತೀಸ್ತಾ ಸಂವಿಧಾನದ ಆಶಯಗಳನ್ನು ಉಳಿಸುವ ತನ್ನ ಹೋರಾಟದಲ್ಲಿ ತಾನೊಬ್ಬ ಕಾಲಾಳು ಎಂದು ಕರೆದುಕೊಳ್ಳುತ್ತಾರೆ.
ಆಳವಾದ ಕಾನೂನಿನ ಬೇರುಗಳಿರುವ ಕುಟುಂಬದಲ್ಲಿ ಹುಟ್ಟಿದವರು ತೀಸ್ತಾ. ಅವರ ಮುತ್ತಾತ ಚಿಮನ್ ಲಾಲ್ ಸೆತಲ್ವಾಡ್ ಪ್ರಸಿದ್ಧ ವಕೀಲರಾಗಿದ್ದರು. ಅವರ ತಾತ ಮೋತಿಲಾಲ್ ಸೆತಲ್ವಾಡ್ ಭಾರತದ ಮೊದಲ ಅಟಾರ್ನಿ ಜನರಲ್ ಆಗಿದ್ದರು. ಅವರ ತಂದೆ ಅತುಲ್ ಸೆತಲ್ವಾಡ್ ಕೂಡ ಪ್ರಸಿದ್ಧ ವಕೀಲರಾಗಿದ್ದರು. ಆದ್ದರಿಂದ ಅವರ ಏಳನೆಯ ವಯಸ್ಸಿನವರೆಗೂ ಅವರೂ ವಕೀಲರಾಗುವ ಕನಸೇ ಕಾಣುತ್ತಿದ್ದರು.
1983ರಲ್ಲಿ ತತ್ವಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದ ನಂತರ ತೀಸ್ತಾ ‘ದಿ ಡೈಲಿ’ ಪತ್ರಿಕೆಗಾಗಿ ಬರೆಯುತ್ತಾ ಪತ್ರಕರ್ತೆಯಾಗಿ ವೃತ್ತಿಯನ್ನು ಆರಂಬಿಸುತ್ತಾರೆ. 1984ನೇ ಇಸವಿ ಭಾರತದ ಇತಿಹಾಸದಲ್ಲಿ ಹಲವು ಕಾರಣಗಳಿಗೆ ಮರೆಯಲಾಗದ ವರ್ಷ. ಹಾಗೆಯೇ ತೀಸ್ತಾ ಅವರ ಬದುಕಿನಲ್ಲಿಯೂ ಕೂಡ. 1984ರಲ್ಲಿ ಭಿವಂಡಿಯಲ್ಲಿ ನಡೆದ ಕೋಮು ಗಲಭೆಯ ಅನುಭವ ತೀಸ್ತಾ ಅವರ ಮನಃಪಟಲದ ಮೇಲೆ ಅಳಿಸಲಾರದ ಪರಿಣಾಮವನ್ನು ಉಂಟುಮಾಡಿತು. ಇದು ಸ್ಪಷ್ಟವಾಗಿ ತೀಸ್ತಾ ಅವರನ್ನು ಪತ್ರಕರ್ತೆಯಾಗಿ ರೂಪಿಸಿತಲ್ಲದೆ ಅವರ ಬದುಕಿನ ಗುರಿಯನ್ನು ನಿರ್ದೇಶಿಸಿತು. ಈ ಘಟನೆಗಳ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ತೀಸ್ತಾ ಅವರಿಗೆ ‘ದಿ ಡೈಲಿ’ ಪತ್ರಿಕೆಯಲ್ಲಿ ವಿಶೇಷ ಬಾತ್ಮೀದಾರರಾಗಿದ್ದ ಜಾವೇದ್ ಆನಂದ್ ಅವರ ಪರಿಚಯವಾಯಿತು. ಮುಂದೆ ಅದೇ ಸ್ನೇಹವಾಗಿ , 1993ರಲ್ಲಿ ಅವರು ಬಾಳ ಸಂಗಾತಿಯೂ ಆದರು.
1984ರಲ್ಲಿಯೇ ಭಾರತ ಸರ್ಕಾರವು ಅಮೃತಸರದ ಸ್ವರ್ಣಮಂದಿರದ ಹರ್ಮಿಂದರ್ ಸಿಂಗ್ ಸಂಕೀರ್ಣಕ್ಕೆಸೇನೆಯನ್ನು ಕಳುಹಿಸಿ ಆಪರೇಷನ್ ಬ್ಲೂ ಸ್ಟಾರ್ ನಡೆಸಿತು. ಇದರ ಪ್ರತಿಧ್ವನಿಯಾಗಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಇಬ್ಬರು ಸಿಖ್ ಕಾವಲು ಭಟರು ಅವರ ಮನೆಯ ಅಂಗಳದಲ್ಲಿಯೇ ಗುಂಡಿಕ್ಕಿ ಕೊಂದರು.  ಈ ಸಂದರ್ಭದಲ್ಲಿ ದೆಹಲಿ ಮತ್ತು ಭಾರತದ ಅನೇಕ ಸ್ಥಳಗಳಲ್ಲಿ ಇಡೀ ಸಿಖ್ ಸಮುದಾಯದ ಮೇಲೆ  ಹಿಂಸಾತ್ಮಕ ಹಲ್ಲೆಗಳು ನಡೆದು ನವೆಂಬರ್ 1ರಿಂದ 3ರವರೆಗೆ ಸುಮಾರು 3000 ಸಿಕ್ಖರು ಹತರಾದರು. ಇದೇ ವರ್ಷ ಡಿಸೆಂಬರ್ 2 ಮತ್ತು 3ರ ನಡುವೆ ಭೂಪಾಲ್‍ನ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಲ್ಲಿ ಅನಿಲ ಸೋರಿ ಅಪಘಾತ ಉಂಟಾಯಿತು. ಈ ಅವಘಡವು ಸಾವಿರಾರು ಜನರನ್ನು ಬಲಿತೆಗೆದುಕೊಂಡಿತು. 1984ರಲ್ಲಿ ನಡೆದ ಈ ನಾಲ್ಕೂ ಘಟನೆಗಳು ಸಾರ್ವಜನಿಕ ನೆನಪಿನ ಭಿತ್ತಿಯಲ್ಲಿ ಉಳಿದಿರುವಂತೆ ತೀಸ್ತಾ   ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿದ ಸಂಗತಿಗಳೂ ಆಗಿವೆ.
ಮುಂಬೈಯ ಭಿವಂಡಿ ಕೋಮು ಗಲಭೆಯ ಕೂಲಂಕುಷ ವರದಿಗಾರಿಕೆ ಮತ್ತು ಆ ಸಂದರ್ಭದಲ್ಲಿ ಅವರು ಕಣ್ಣೆದುರು ಕಂಡ ಹಿಂಸೆಯ ಅನುಭವ ಮತ್ತು ಅದಕ್ಕೆ ಸ್ಪಂದಿಸಿದ ಅವರ ಮನೋಭಾವ ಅವರಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತೆಯನ್ನು ಹುಟ್ಟಿಹಾಕಿತು. 1993ರ ವೇಳೆಗೆ ಮುಖ್ಯವಾಹಿನಿಯ ಸಮೂಹ ಮಾಧ್ಯಮಗಳು ಸಮಾಜದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ಬಿಂಬಿಸುವುದರಲ್ಲಿ ತೋರಿದ ರಂಜನೀಯತೆಯಿಂದ ತೀಸ್ತಾ ಮತ್ತು ಜಾವೇದ್ ಆ ಮಾಧ್ಯಮದ ಬಗ್ಗೆಯೇ ಭ್ರಮನಿರಸನಗೊಂಡರು. ಜಾವೇದ್ ‘ಸಂಡೇ ಅಬ್ಸರ್ವರ್’ ಪತ್ರಿಕೆಯಿಂದ ಮತ್ತು ತೀಸ್ತಾ ‘ಬಿಸಿನೆಸ್ ಇಂಡಿಯಾ’ ಪತ್ರಿಕೆಗೆ ರಾಜಿನಾಮೆ ನೀಡಿ  ಹೊರಬಂದರು.  ಇಬ್ಬರೂ ಒಟ್ಟಾಗಿ  ‘ಸಬ್ ರಂಗ್ ಕಮ್ಯೂನಿಕೇಷನ’  ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ‘ಕಮ್ಯೂನಲಿಸಂ ಕಾಂಬ್ಯಾಟ್’ ಪತ್ರಿಕೆಯನ್ನು ಆರಂಭಿಸಿದರು. ಹಾಗೆಯೇ ಮುಖ್ಯ ವಾಹಿನಿಯ ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದರು.
‘ಕಮ್ಯೂನಲಿಸಂ ಕಾಂಬ್ಯಾಟ್’ ಪತ್ರಿಕೆಯನ್ನು ಅರಂಭಿಸಿದ ನಂತರ 1992-93ರಲ್ಲಿ ಗುಜರಾತಿಗೆ ಹೆಚ್ಚು ಹೆಚ್ಚು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವರದಿ ಮಾಡಲು ಆರಂಭಿಸಿದರು. 2002ಕ್ಕೆ ಮುಂಚೆಯೇ ಗುಜರಾತಿನ ಕೋಮುವಾದಿ ರಾಜಕೀಯ ಕುರಿತು ಐದು ಮುಖಪುಟದ ಲೇಖನಗಳನ್ನು ಪ್ರಕಟಿಸಿದರು. ಆ ಲೇಖನಗಳ ಶೀರ್ಷಿಕೆಯು ಈ ರೀತಿ ಇವೆ: ಹಿಂದೂ ರಾಷ್ಟ್ರಕ್ಕೆ ಸ್ವಾಗತ, ಮತಾಂತರ, ಪೂರ್ವಾಗ್ರಹ ಕಲಿಸುವ ಪಠ್ಯ ಪುಸ್ತಕಗಳು, ಫ್ಯಾಸಿಸಂ ಜೊತೆಗೆ ಮುಖಾಮುಖಿ, ದೊಡ್ಡದಾಗಿ  ಬಾಯ್ದೆರೆದ ವಿಭಜನೆ. 2002ರ ಘಟನೆ ಅಚಾನಕ್ಕಾಗಿ ನಡೆದದ್ದಲ್ಲ. ಅಂತಹ ಒಂದು ಭೂಮಿಕೆ ಗುಜರಾತಿನಲ್ಲಿ ಹೇಗೆ ಸಿದ್ಧವಾಗಿತ್ತು, ಎಂಬುದನ್ನು ತಮ್ಮ ಲೇಖನಗಳಲ್ಲಿ ಪ್ರಸ್ತುತಪಡಿಸುತ್ತಾರೆ. 1995ರಲ್ಲಿ ಅವರು ಪ್ರಕಟಿಸಿದ ‘ಸರಕಾರದ ಕೃಪೆ ಇಲ್ಲದೆ ಯಾವ ಗಲಭೆಯೂ 24 ತಾಸುಗಳಿಗಿಂತ ಹೆಚ್ಚು ಕಾಲ ನಡೆಯಲು ಸಾಧ್ಯವೇ ಇಲ್ಲ’ ಎಂಬ ವಿಭೂತಿ ನಾರಾಯಣ ರೈ ಎಂಬ ಪೊಲೀಸ್ ಅಧಿಕಾರಿಯ ಸಂದರ್ಶನವನ್ನು ಭಾರತದ 34 ಪತ್ರಿಕೆಗಳು ಪ್ರಕಟಿಸಿದ್ದವು.
1999ರಲ್ಲಿ ಗುಜರಾತಿನ ಸಮಾಜ ವಿಜ್ಞಾನದ ಪುಸ್ತಕಗಳ ಪಠ್ಯವನ್ನು ವಿಶ್ಲೇಶಿಸಿ ಅವರು ಬರೆದ “ಹೌ ಟೆಕ್ಸ್ಟ್ ಬುಕ್ ಟೀಚ್ ಪ್ರಿಜುಡೀಸ್” ಲೇಖನ ಸಂಸತ್ತಿನ ಗಣ್ಯರ ಕಣ್ತೆರೆಸಿತು. ಈ ಪುಸ್ತಕಗಳನ್ನು ಅಧ್ಯಯನ ಮಾಡಲು ಸಂಸತ್ತು ಸಮಿತಿಯನ್ನು ರೂಪಿಸಿತು.  ಶಿಕ್ಷಣ ತಜ್ಞೆಯೂ ಆಗಿರುವ ತೀಸ್ತಾ ಅವರು, ಇತಿಹಾಸ ಮತ್ತು ಸಮಾಜ ವಿಜ್ಞಾನದ ಕಲಿಕೆಗೆ ಪೂರಕವಾದ ಬಹುತ್ವದ ತತ್ವಗಳನ್ನು ಒಳಗೊಂಡ ವಿನೂತನ ಕಲಿಕಾ ಪರಿಕರಗಳನ್ನು ರೂಪಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕಾನೂನಿನ ತರಬೇತಿಯನ್ನು ಪಡೆದಿರುವ ತೀಸ್ತಾ, 2002ರ ಗುಜರಾತ್ ಹತ್ಯಾಕಾಂಡದ ಘಟನೆಗಳ ಸತ್ಯಾಂಶಗಳನ್ನು ತನಿಖೆ ಮಾಡಲು ನ್ಯಾಯಮೂರ್ತಿಗಳಾದ ಕೃಷ್ಣ ಅಯ್ಯರ್, ಪಿ.ಬಿ. ಸಾವಂತ್ ಮತ್ತು ಹೊಸಬೆಟ್ಟು ಸುರೇಶ್ ಅವರುಗಳ ನೇತೃತ್ವದಲ್ಲಿ ರಚನೆ ಮಾಡಿದ್ದ ಕನ್ವಡ್ರ್ನ್ ಸಿಟಿಜನ್ಸ್ ಟ್ರಿಬ್ಯುನಲ್‍ನ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. 2002ರ ಏಪ್ರಿಲ್‍ನಲ್ಲಿ ಮುಂಬೈನ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (ಸಿಜೆಪಿ) ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸಾಮೂಹಿಕ ಗಲಭೆಗಳಿಗೆ ಬಲಿಯಾದ ಸಂತ್ರಸ್ಥರಿಗೆ ನಿರಂತರವಾಗಿ ಅತ್ಯುತ್ತಮ ದರ್ಜೆಯ ಕಾನೂನಿನ ನೆರವು ನೀಡುವುದು ಸಿಜೆಪಿಯ ಮೂಲ ಉದ್ದೇಶ. 2002ರ ಮಾರ್ಚ್ ಆರಂಭದಲ್ಲಿ ಗುಜರಾತ್ ತಲುಪಿ ಅಲ್ಲಿ ಪ್ರತಿದಿನ ಒಂದಿಲ್ಲೊಂದು ಜಿಲ್ಲೆಗೆ ಹೋಗಿ ಪರಿಹಾರ ಶಿಬಿರಗಳನ್ನು ಶೋಧಿಸುವುದು ಅವರ ನಿತ್ಯ ದಿನಚರಿಯಾಗಿಬಿಟ್ಟಿತು. 2002ರ ಗುಜರಾತ್‍ನಲ್ಲಿ ನರಹತ್ಯೆಯ ಸಮಗ್ರ ದರ್ಶನವನ್ನು ಅದರೊಳಗೆ ಹಾಸು ಹೊಕ್ಕಾಗಿರುವ ಹಿಂದುತ್ವದ ರಾಜಕೀಯವನ್ನು ತೀಸ್ತಾ ಸವಿವರವಾಗಿ ಈ ಕೃತಿಯಲ್ಲಿ ಬಿಚ್ಚಿಡುತ್ತಾರೆ.
ತೀಸ್ತಾ ನಡೆಸುತ್ತಿರುವ ಹೋರಾಟ ಇಂದು ಮಾನವತೆಯನ್ನು ಪ್ರೀತಿಸುತ್ತಿರುವ ಎಲ್ಲರ ಹೋರಾಟವಾಗಿದೆ. ಅವರು ಅದರ ಸ್ವರೂಪವನ್ನು ಬಿಚ್ಚಿಡುವ ರೀತಿಯೂ ಅಷ್ಟೇ ಮನೋಜ್ಞವಾಗಿದೆ: “ನಮ್ಮ ಮನೆಗಳಲ್ಲಿ, ಹೊರಗೆ ಬೀದಿಗಳಲ್ಲಿ ನಿಜ ಭಾರತದ ಆತ್ಮಕ್ಕಾಗಿ, ಹೃದಯಕ್ಕಾಗಿ ಯುದ್ಧವೇ ನಡೆಯುತ್ತಿದೆ. ಯಾರು ಗೆಲ್ಲುತ್ತಾರೆ ಗೊತ್ತಿಲ್ಲ. ಈ ಯುದ್ಧವನ್ನು ಮನೆಗಳಲ್ಲಿ, ಬೀದಿಗಳಲ್ಲಿ ಮಾತ್ರವಲ್ಲದೆ ಶಾಲಾ-ಕಾಲೇಜುಗಳ ತರಗತಿಗಳಲ್ಲಿ ನಡೆಸಬೇಕಿದೆ. ಇತಿಹಾಸ, ಸಂಸ್ಕೃತಿ, ಕಾವ್ಯ, ಸಂಗೀತ, ಸಾಹಿತ್ಯಗಳನ್ನು ಶಸ್ತ್ರಾಸ್ತ್ರಗಳಂತೆ ಮತ್ತು ಗುರಾಣಿಗಳಂತೆ ಬಳಸಬೇಕಿದೆ. ನಿತ್ಯ ಜೀವನದ ವಾಸ್ತವದಲ್ಲಿ ರಾಜಕೀಯ ಬದ್ಧತೆಯೊಂದಿಗೆ ನಡೆಯಬೇಕಿದೆ.”
ಕೊನೆಗೆ, ತೀಸ್ತಾ ನಮ್ಮ ದೇಶದ ಯುವಜನರಲ್ಲಿ ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತಾರೆ: “ದೇಶವನ್ನು ಆಕ್ರಮಿಸುತ್ತಿರುವ ದ್ವೇಷ ಮತ್ತು ಹಿಂಸೆಯನ್ನು ನಿರ್ಮೂಲನೆ ಮಾಡಲು, ಸಮಾನತೆಯನ್ನು ಬಿತ್ತಿ ಬೆಳೆಸಲು, ದಿನದ ಒಂದೆರಡು ಗಂಟೆಗಳನ್ನಾದರೂ ಕೊಡಬೇಕೆಂಬುದು, ಯುವಜನರಲ್ಲಿ ನನ್ನ ಆಗ್ರಹ.”
ಹೌದು. ತೀಸ್ತಾ ಬಯಸುವಂತೆ ಇನ್ನೂ ಹೆಚ್ಚು, ಹೆಚ್ಚು ಕಾಲಾಳುಗಳು ಸಂವಿಧಾನದ ಆಶಯಗಳನ್ನು ರಕ್ಷಿಸಲು ಬೇಕಾಗಿದ್ದಾರೆ. ಅದೇ ಈ ಪುಸ್ತಕದ ಆಶಯವೂ ಕೂಡ.

– ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *