FEATUREDಚಾವಡಿಸಂವಾದ

ಸಂವಾದ/ ಒಂದು ಕವನಕ್ಕೆ ಎಷ್ಟು ವಿಸ್ತರಣೆಗಳು!- ಲಲಿತಾ ಸಿದ್ಧಬಸವಯ್ಯ


ಎಮಿಲಿ ಡಿಕಿನ್ಸನ್ ರಚಿಸಿದ ಈ ಕವನವು ಈ ಎಲ್ಲಕ್ಕೂ ಒಂದು ಉದಾಹರಣೆಯಂತಿದೆ. ಇಲ್ಲಿ ಕವಿ ನೇರವಾಗಿ ಕ್ರಿಸ್ತನೊಂದಿಗೆ ಸಂಭಾಷಣೆಗೆ ತೊಡಗುತ್ತಾರೆ. ಎರಡೂ ಚರಣಗಳಲ್ಲಿ ಕ್ರಿಸ್ತನನ್ನು ಜೀಸಸ್ ಎಂದು ಹೆಸರಿಸಿ ಮಾತಿಗೆ ಆಹ್ವಾನಿಸುತ್ತ ಅವನಿಗೊಂದು ಸಂಗತಿಯನ್ನು ನಿವೇದಿಸಿಕೊಳ್ಳುತ್ತಾರೆ. ನಿವೇದನೆಗಿಂತ ಹೆಚ್ಚು ಆಗ್ರಹವೇ ಇಲ್ಲಿದೆ ಎಂದು ನನಗನ್ನಿಸಿದೆ. ಈ ಪದ್ಯದ ವಿಶ್ಲೇಷಕರು ಇದನ್ನು ಎಮಿಲಿಯವರ ಧಾರ್ಮಿಕ ನಂಬುಗೆಯನ್ನು ಪ್ರತಿಫಲಿಸುವ ಪ್ರಾರ್ಥನೆ ಎಂದರೂ ನನಗೆ ಇದು ದೇವರೊಂದಿಗೆ ಲೌಕಿಕಕ್ಕೆ ಮೀರಿದ ಮನಸ್ಸೊಂದು ನಡೆಸುವ ಮುಲಾಜಿಲ್ಲದ ಮಾತುಕತೆ ಎನಿಸಿದೆ. ಇದು ಎಮಿಲಿಯವರ ಕವನದ ಬಿಗಿ ಭಾಷಾಬಂಧದ ಫಲವೂ ಹೌದು.

ಜೀಸಸ್, ನಿನ್ನ ಶಿಲುಬೆ

ಜೀಸಸ್, ನಿನ್ನ ಶಿಲುಬೆ
ಅಣಿಗೊಳಿಸಿತು ನಿನ್ನನ್ನು
ಊಹಿಸಲು ಅಲ್ಲದ್ದನ್ನೂ

ಜೀಸಸ್, ನಿನ್ನೆರಡನೆಯ ಜನ್ಮ
ನೆನಪಿಸಿತು ನಿನಗೆ ಸ್ವರ್ಗದಲ್ಲೂ

ನಮ್ಮನ್ನು

Jesus! thy Crucifix

Jesus! thy Crucifix

Enable thee to guess

The Smaller size!

Jesus! thy second face

Mind thee in Paradise

Of ours!

=Emily Dickinson

ಎಮಿಲಿ ಡಿಕಿನ್ಸನ್ ರಚಿಸಿದ ಕ್ರಿಸ್ತನನ್ನು ಕುರಿತಾತ ಆರೇ ಸಾಲಿನ ಕಿರುಗವನ ಇದು. ಮೂರು ಮೂರು ಸಾಲಿನ ಎರಡು ಚರಣಗಳುಳ್ಳ ಈ ಕವನವು ಕ್ರಿಸ್ತನನ್ನು ಕುರಿತು ಇದುವರೆಗೆ ಬಂದಿರುವ ಹತ್ತು ಶ್ರೇಷ್ಠ ಇಂಗ್ಲಿಷ್ ಕವನಗಳಲ್ಲೊಂದು ಎಂದು ವಿಮರ್ಶಕರು ಪರಿಗಣಿಸುತ್ತಾರೆ.

ಎಮಿಲಿ ಧಾರ್ಮಿಕ ನಂಬುಗೆಯುಳ್ಳ ಕವಯಿತ್ರಿ, 1830 ರಿಂದ 1886 ರ ಅವಧಿಯಲ್ಲಿ ಬದುಕಿನ ಈ ಅಮೆರಿಕದ ಇಂಗ್ಲಿಷ್ ಕವಯಿತ್ರಿ ಪ್ರಚಾರದಿಂದ ಸಂಪೂರ್ಣವಾಗಿ ದೂರವುಳಿದಿದ್ದ ಏಕಾಂತ ಜೀವಿ. ಇಂದು ಇಂಗ್ಲಿಷ್ ಭಾಷೆಯ ಪ್ರಬುದ್ಧ ಕವಿ ಎಂದು ಪರಿಗಣಿತವಾಗಿರುವ ಎಮಿಲಿಯವರ ಒಂದು ಸಾವಿರದ ಎಂಟು ನೂರು ಕವನಗಳ ಪೈಕಿ ಅವರು ಬದುಕಿದ್ದಾಗ ಪ್ರಕಟವಾದದ್ದು ಕೇವಲ ಹನ್ನೆರಡು!! ಅವಿವಾಹಿತೆಯಾಗಿದ್ದ ಅವರು ತೀವ್ರ ಅನಾರೋಗ್ಯದಿಂದ ಕೇವಲ 55 ವರ್ಷದಲ್ಲಿ ಗತಿಸಿದ್ದರು.

ತೀಕ್ಷ್ಣ ಗ್ರಹಿಕೆ ಮತ್ತು ಸಂಕ್ಷಿಪ್ತ ಅಭಿವ್ಯಕ್ತಿ ಎಮಿಲಿ ಕಾವ್ಯದ ಮುಖ್ಯ ಚಹರೆ. ಆದಷ್ಟೂ ಪುಟ್ಟ ವಾಕ್ಯಗಳು, ಅನೇಕ ಕಡೆ ಪದಗಳ ಕ್ರಿಯಾ ಪ್ರತ್ಯಯಗಳನ್ನೂ ಕತ್ತರಿಸಿ ಬಳಸುವ ಮಿತಭಾಷಿತ್ವ, ಹಾಗೆ ಕತ್ತರಿಸಿದ ಪದಗಳಿಂದ ವಿಶೇಷ ಧ್ವನಿ ಹೊರಡಿಸುವ ಪ್ರತಿಭೆ, ಬಳಸುವ ಪ್ರತಿ ಚಿಹ್ನೆಗೂ ಮಹತ್ವ, ಮುಂತಾದುವು ಅವರ ಕವಿತೆಗಳ ವಿಶೇಷ.

ಮೇಲಿನ ಕವನವು ಈ ಎಲ್ಲಕ್ಕೂ ಒಂದು ಉದಾಹರಣೆಯಂತಿದೆ. ಇಲ್ಲಿ ಕವಿ ನೇರವಾಗಿ ಕ್ರಿಸ್ತನೊಂದಿಗೆ ಸಂಭಾಷಣೆಗೆ ತೊಡಗುತ್ತಾರೆ. ಎರಡೂ ಚರಣಗಳಲ್ಲಿ ಕ್ರಿಸ್ತನನ್ನು ಜೀಸಸ್ ಎಂದು ಹೆಸರಿಸಿ ಮಾತಿಗೆ ಆಹ್ವಾನಿಸುತ್ತ ಅವನಿಗೊಂದು ಸಂಗತಿಯನ್ನು ನಿವೇದಿಸಿಕೊಳ್ಳುತ್ತಾರೆ. ನಿವೇದನೆಗಿಂತ ಹೆಚ್ಚು ಆಗ್ರಹವೇ ಇಲ್ಲಿದೆ ಎಂದು ನನಗನ್ನಿಸಿದೆ.
ಈ ಪದ್ಯದ ವಿಶ್ಲೇಷಕರು ಇದನ್ನು ಎಮಿಲಿಯವರ ಧಾರ್ಮಿಕ ನಂಬುಗೆಯನ್ನು ಪ್ರತಿಫಲಿಸುವ ಪ್ರಾರ್ಥನೆ ಎಂದರೂ ನನಗೆ ಇದು ದೇವರೊಂದಿಗೆ ಲೌಕಿಕಕ್ಕೆ ಮೀರಿದ ಮನಸ್ಸೊಂದು ನಡೆಸುವ ಮುಲಾಜಿಲ್ಲದ ಮಾತುಕತೆ ಎನಿಸಿದೆ. ಇದು ಎಮಿಲಿಯವರ ಕವನದ ಬಿಗಿ ಭಾಷಾಬಂಧದ ಫಲವೂ ಹೌದು.

ಕವನದ ಮೊದಲ ಚರಣದಲ್ಲಿ ಕವಿ ಜೀಸಸ್‍ಗೆ ಹೇಳುವರು: ಜೀಸಸ್ ನೀನು ಅತಿ ಯಾತನಾಮಯವಾದ ಶಿಲುಬೆಯ ಶಿಕ್ಷೆ ಅನುಭವಿಸಿದ ಕಾರಣದಿಂದ ಜಗತ್ತಿನ ನರಜೀವಿಗಳ ಅಲ್ಪಾತಿಅಲ್ಪ ಯಾತನೆಗಳನ್ನೂ ಕಲ್ಪಿಸಿಕೊಳ್ಳಲು ನಿನಗೆ ಸಾಧ್ಯವಾಯಿತು.

ಎರಡನೆಯ ಚರಣದಲ್ಲಿ ಹೇಳುತ್ತಾರೆ: ಜೀಸಸ್, ಶಿಲುಬೆಯ ನಂತರದ ನಿನ್ನ ಪುನರುತ್ಥಾನ, ಆ ನಿನ್ನ ಎರಡನೆಯ ಜನ್ಮ, ಸ್ವರ್ಗದಲ್ಲಿ ನೀನು ನಮ್ಮನ್ನು ಅಂದರೆ ಈ ಲೋಕದ ನರರನ್ನು ನೆನಪಿಸಿಕೊಳ್ಳುವಂತೆ ಮಾಡಿತು.

ಇದನ್ನು ವಿಸ್ತರಿಸಿ ನೋಡೋಣ- ಶಿಲುಬೆಗೇರುವುದಕ್ಕೂ ಮಿಗಿಲಾದ ದೈಹಿಕ ಸಂಕಟ ಮನುಷ್ಟರಿಗೆ ಇನ್ನಿಲ್ಲ. ಜೀವಂತ ಮನುಷ್ಯನನ್ನು ಮರದ ಶಿಲುಬೆಯ ಕಟ್ಟಿನ ಮೇಲಿಟ್ಟು ಮೊಳೆ ಹೊಡೆದು ಅದನ್ನು ಮಣ್ಣಿನಲ್ಲಿ ನೆಟ್ಟು, ಆ ಮನುಷ್ಟ ನಿಧನಿಧಾನವಾಗಿ ರಕ್ತ ಬಸಿಯುತ್ತ ಸಾಯಲು ಬಿಡುವ ಕ್ರೌರ್ಯ, ಆ ನರಸಂಕಟವನ್ನು ನೆನೆದರೇ ಜೀವ ನಡುಗುತ್ತದೆ. ಅಂತಹ ಮಿತಿ ಮೀರಿದ ಕ್ರೌರ್ಯವನ್ನು ಉಂಡದ್ದರಿಂದ ಕ್ರಿಸ್ತನಿಗೆ ಲೋಕದಲ್ಲಿ ನರರ ಮೇಲಾಗುವ ಸಣ್ಣ ಸಣ್ಣ ಕ್ರೌರ್ಯಗಳನ್ನು ಅವರು ಅನುಭವಿಸುವ ಸಂಕಟಗಳನ್ನೂ ಊಹಿಸಿಕೊಳ್ಳಲು ಮತ್ತು ಅವರನ್ನು ಕರುಣೆಯಿಂದ ಕಾಣಲು ಸಾಧ್ಯವಾಯಿತೆಂಬುದು ಮೊದಲ ಚರಣದಲ್ಲಿ ಇರುವ ಕವಿಯ ಭಾವ.

ಎರಡನೆಯ ಚರಣದ ಸಾಲುಗಳನ್ನು ಅರ್ಥೈಸಿಕೊಳ್ಳಲು ಕೊಂಚ ಹಿನ್ನೆಲೆ ತಿಳಿಯುವುದು ಒಳಿತು. ಕ್ರಿಸ್ತನನ್ನು ಶಿಲುಬೆಗೇರಿಸಿದ್ದ ಶುಕ್ರವಾರ. ಶಿಲುಬೆಯ ಮೇಲೆ ಗತಿಸಿದ ಆತನನ್ನು ಇಳಿಸಿ ಗೋರಿಯೊಳಗಿಟ್ಟು ಮಣ್ಣು ಮಾಡಿದ್ದು ಶನಿವಾರ. ಮರುದಿನ ಭಾನುವಾರದಂದು ಆತನು ಗೋರಿಯಿಂದ ಸಶರೀರನಾಗಿ ಎದ್ದು ಅಲ್ಲಿದ್ದ ತನ್ನ ಅನುಯಾಯಿಗಳಿಗೆ ಕಾಣಿಸಿಕೊಂಡನು. ಅವರನ್ನು ಸಂತೈಸಿದ ಮೇಲೆ ಸ್ವರ್ಗಕ್ಕೆ ಹೋದನೆಂಬುದು ಕ್ರೈಸ್ತರ ನಂಬುಗೆ. ಇದನ್ನು ಅವರು ಪುನರುತ್ಥಾನ ಎಂದು ನಂಬುವರು; ನಮ್ಮ ಸನ್ನಿವೇಶದಲ್ಲಿ ಅವತಾರ ಎನ್ನಬಹುದೇನೋ.

ಕ್ರಿಸ್ತನು ಶಿಲುಬೆಗೇರಿದ ದಿನವನ್ನು Good Friday ಎಂದೂ ಗೋರಿಯಾದ ದಿನವನ್ನು Holy Saturday ಎಂದೂ ಪುನರುತ್ಥಾನದ ಮೂರನೆಯ ದಿನವನ್ನು Ester Sunday ಎಂದೂ ಆಚರಿಸುವರು. ಈ ಮೂರೂ ದಿನಗಳು ಸಾಮಾನ್ಯವಾಗಿ ಏಪ್ರಿಲ್ ತಿಂಗಳಿನಲ್ಲಿ ಸಂಭವಿಸುತ್ತವೆ. ಡಿಸೆಂಬರ್ 25 ನೆ ತಾರೀಕು ಮಾತ್ರ ಅವನು ಮೇರಿ ಮತ್ತು ಜೋಸೆಫ್‍ರ ಮಗನಾಗಿ ಜನಿಸಿದ ದಿನವಾಗಿದ್ದು, ಆ ದಿನವನ್ನು ಕ್ರಿಸ್ಮಸ್ ಹಬ್ಬವಾಗಿ ಆಚರಿಸುವರು.

ಸೆಕೆಂಡ್ ಫೇಸ್

ಈ ಸಾಂಸ್ಕøತಿಕ ಸಂಗತಿಗಳ ಪರಿಚಯದೊಂದಿಗೆ ಎರಡನೆಯ ಚರಣವನ್ನು ಅರ್ಥೈಸಿಕೊಳ್ಳಬೇಕು. ಎಮಿಲಿ ಈ ಕ್ರಿಸ್ತ ಪುನರುತ್ಥಾನವನ್ನು ಸೆಕೆಂಡ್ ಫೇಸ್ ಎಂದಿದ್ದಾರೆ. ಅವರು ಉದ್ದೇಶಪೂರ್ವಕವಾಗಿಯೇ ರಿಸರಕ್ಷನ್ ಪದವನ್ನು ಬಳಸಿಲ್ಲವೆಂದು ತೋರುತ್ತದೆ. ಹೀಗೆ ಶಿಲುಬೆ ಯಾತನೆಯ ನಂತರ ಮರುಹುಟ್ಟು ಪಡೆದು ಸ್ವರ್ಗವೇರಿದ ಕ್ರಿಸ್ತನ ಈ ಎರಡನೆಯ ಜನ್ಮವು ಆತನಿಗೆ ಭೂಮಿಯ ನರಮನುಷ್ಟರನ್ನು ಕರುಣೆಯಿಂದ, ಪ್ರೀತಿಯಿಂದ ನೆನೆಯುವಂತೆ ಮಾಡಿತು ಎಂಬುದು ಕವಿಯ ಭಾವ. ಹೀಗೆ ನೆನಯುವ ಫಲವೆಂದರೆ ಆತನ ಅನುಗ್ರಹ ಆತನ ಭಕ್ತರಿಗೆ ಪ್ರಾಪ್ತವಾಗುವುದು.

Emile Dickinson Museum

ಈ ವಿಶ್ಲೇಷಣೆಯ ಹೊರತಾಗಿ ಹೇಳುವುದಾದರೆ, ಎಮಿಲಿ ಈ ಕವನದ ಮೂಲಕ ತನ್ನ ನಂಬುಗೆಯ ದೇವನೊಂದಿಗೆ ಬಹು ಸಲುಗೆಯ ಸಂಭಾಷಣೆ ನಡೆಸುತ್ತಿದ್ದಾರೆ, ಆತನನ್ನು ಮೂದಲಿಸುತ್ತಲೇ ನರರ ಕೋಟಲೆಗಳನ್ನು ಅವನಿಗೆ ಅರುಹುತ್ತಿದ್ದಾರೆ ಎನಿಸುತ್ತದೆ- “ನೋಡು ಪ್ರಭುವೇ ನಿನ್ನ ಮೊದಲ ನರಜನ್ಮದಲ್ಲಿ ನೀನೇರಿದ ಶಿಲುಬೆ ನಿನ್ನದೇ ಸಹಮನುಷ್ಯರ ಅತಿ ಸಣ್ಣತನಗಳನ್ನು ನಿನಗೆ ತೋರಿಸಿತು. ಗತಿಸಿದ ಮೇಲೆ ನೀನು ಪಡೆದ ಎರಡನೆಯ ಸ್ವರ್ಗಜನ್ಮದಲ್ಲಿ ನಿನ್ನನ್ನು ಶಿಕ್ಷಿಸಿದ ಅದೇ ಭೂಲೋಕದಲ್ಲಿ, ನಿನ್ನ ಬೋಧನೆಗಳೇ ಒಂದು ಧರ್ಮವಾಗಿ ಬೆಳೆದು ನಿನ್ನನ್ನು ನಂಬಿ ಆರಾಧಿಸುವ ಭಕ್ತರು ಎಲ್ಲೆಲ್ಲೂ ತುಂಬಿದ್ದನ್ನು ಅರಿತೆ.”

ನೋಡು ಜೀಸಸ್ ಅತಿ ನೀಚತನವೂ ಅತಿ ದೊಡ್ಡತನವೂ ಎರಡೂ ಈ ಭೂಮಿಯ ಮೇಲೆ ಇವೆ. ಬಾ ಮತ್ತೆ ಇಂತಹ ಇಳೆಗೆ, ಸ್ವರ್ಗದಲ್ಲಿದ್ದುಬಿಟ್ಟರೆ ಆಗದು, ನಿನ್ನ ಭಕ್ತರ ಕೋಟಲೆಗಳನ್ನು ನೀಗಿಸು ಎಂದು ಕ್ರಿಸ್ತನನ್ನ ಕರೆದ ಹಾಗಿದೆ ಈ ಕವಿತೆ. ಕ್ರಿಸ್ತ ಲೋಕ ದ್ವೇಷವನ್ನು ತಾಳಲಿಲ್ಲ. ನರರ ಕಷ್ಟಗಳಿಗೆ ಆದಷ್ಟೂ ಸರಳ ಪರಿಹಾರ ಬೋಧಿಸುವುದು ಆತನ ಕಾಯಕ. ಆತನ ಬೋಧನೆಗಳನ್ನು ನಂಬುವ ಜನರು ಬಹುಸಂಖ್ಯೆಯ ಬಡವರೇ ಆಗಿದ್ದರು. ದೇಶಕಾಲದ ಭೇದವಿಲ್ಲದೆ ಸರಳ ಧರ್ಮಗಳನ್ನು ನಂಬುವ ಜನ ಎಲ್ಲೆಲ್ಲಿಯೂ ಬಡವರು, ಅವಿದ್ಯಾವಂತರೇ ಆಗಿರುತ್ತಾರೆ. ಈ ಬಲಹೀನರು ತಮ್ಮ ಬಳಿಗೇ ಬಂದು ಬೋಧಿಸುವ ವ್ಯಕ್ತಿಯನ್ನು ಪ್ರೀತಿಸಿ, ಅವನಲ್ಲಿ ತಮ್ಮ ಧಾರ್ಮಿಕ ನಾಯಕನನ್ನು ಕಾಣುತ್ತಾರೆ. ಇದು ಯಾವಾಗಲೂ ಬಲಶಾಲಿ ಗುಂಪಿಗೆ ಅಪಥ್ಯವಾದದ್ದೇ. ದೇವರು ಧರ್ಮ ಎರಡೂ ಕ್ಲಿಷ್ಟವಾದಷ್ಟೂ ಅವರಿಗೆ ಲಾಭ. ದುರ್ಬಲರನ್ನು ಅದರ ಗೋಜಲಿಗೆ ಸಿಕ್ಕಿಸಿ ತಮ್ಮ ಅಧೀನದಲ್ಲಿ ಇಟ್ಟುಕೊಳ್ಳುವುದು ಸುಲಭ. ಇದೇ ಕಾರಣಕ್ಕೆ ಕ್ರಿಸ್ತನು ಅಧಿಕಾರಸ್ಥರ ಕಣ್ಣಿನಲ್ಲೀ ಧರ್ಮದ್ರೋಹಿ ಆಗುತ್ತಾನೆ. ಕೇವಲ ತನ್ನ 37 ನೆಯ ವಯಸ್ಸಿನಲ್ಲಿ ಶಿಲುಬೆಗೇರುತ್ತಾನೆ.

ಕ್ರಿಸ್ತ ಗತಿಸಿ ಎರಡು ಸಾವಿರ ವರ್ಷಗಳ ಮೇಲಾಗಿದೆ. ಅವನ ಶಿಷ್ಯರು ಅದರ ಪ್ರಸಾರಕ್ಕೆ ಕೆಲಸ ಮಾಡಿದ್ದಾರೆ. ಎಲ್ಲ ತರಹದ ದೈವಾರಾಧನೆಗಳನ್ನು ನಡೆಸುವ ಜನ ಇದ್ದೇ ಇದ್ದಾರೆ. ಆದರೆ ಬೆಳಿಗ್ಗೆ ಎದ್ದು ಮೂಡಣದ ಸೂರ್ಯದೇವರಿಗೆ ನಮಿಸಿ ತನ್ನ ದೈವಾರಾಧನೆ ಮುಗಿಯಿತು ಎಂದುಕೊಳ್ಳುವ ರೈತ ಈಗಲೂ ಇದ್ದಾನೆ. ನಾವು ಯಾರಿಗೆ ಎಷ್ಟು ಬೆಲೆ ಕೊಡುತ್ತೇವೆ ಎನ್ನುವ ಬಹಳ ಮುಖ್ಯವಾದ ಪ್ರಶ್ನೆ ನಮ್ಮ ಮುಂದೆ ಇದೆ. ಎಮಿಲಿಯ ಕವಿತೆಯ ಭಾವ ಹೀಗೆ ಅರ್ಥವಿಸ್ತಾರಕ್ಕೆ ಯೋಗ್ಯವಾಗಿದೆ.

-ಲಲಿತಾ ಸಿದ್ಧಬಸವಯ್ಯ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *