Uncategorizedಸಾಧನಕೇರಿ

ಸಂದರ್ಶನ/ ಹಲವು ಪ್ರಥಮಗಳ ಮಹಿಳಾ ವಿಜ್ಞಾನಿ ಪ್ರೊ. ಸಾವಿತ್ರಿ- ನೇಮಿಚಂದ್ರ

ನಮ್ಮ ನಡುವಿನ ಓರ್ವ ಶ್ರೇಷ್ಠ ವಿಜ್ಞಾನಿ ಪ್ರೊ. ಎಚ್.ಎಸ್. ಸಾವಿತ್ರಿ ಅವರ ಜೀವನಯಾನವೆಂದರೆ ವಿಜ್ಞಾನದಲ್ಲಿ ಮತ್ತು ಸಮಾಜದಲ್ಲಿ ಮಹಿಳೆಗೆ ದೊರಕಿದ ತಾರತಮ್ಯದ ಅನುಭವಗಳ ಕಥನವೂ ಆಗಿದೆ. ಆದರೆ ಅವೆಲ್ಲವನ್ನೂ ಮೀರಿ ಸಾಧನೆಯ ಶಿಖರಗಳನ್ನು ಏರಿದ ಅವರ ದೃಢತೆ, ಕ್ರಿಯಾಶೀಲತೆ ಎಲ್ಲವೂ ಎಲ್ಲ ಪೀಳಿಗೆಗಳ ಯುವತಿಯರಿಗೆ ಮಾರ್ಗದರ್ಶಕ ಮಾದರಿಯಾಗಿವೆ.


ಕಳೆದ ಶತಮಾನ, ವೈಜ್ಞಾನಿಕ ಯುಗದಲ್ಲಿ ನಾವು ಬದುಕುತ್ತಿದ್ದರೂ, ವಿಜ್ಞಾನ ರಂಗದಲ್ಲಿ ಮಹಿಳೆಯರ ಸಂಖ್ಯೆ ಅತಿ ಸಣ್ಣದಿತ್ತು. ಇತ್ತೀಚಿನ ವರ್ಷಗಳಲ್ಲಿ ಆ ಸಂಖ್ಯೆ ಹೆಚ್ಚಿರುವುದು ಸಮಾಧಾನದ ವಿಷಯವಾದರೂ, ಮಹಿಳೆ ವಿಜ್ಞಾನ ರಂಗದಲ್ಲಿ ಇಂದಿಗೂ ಅಲ್ಪಸಂಖ್ಯಾತಳೆ. ಶೇಕಡಾ 25ರಿಂದ 30ರಷ್ಟು ವಿಜ್ಞಾನದ ಪಿಎಚ್.ಡಿ. ಪದವಿಗಳು ಮಹಿಳೆಯರಿಗೆ ಇಂದು ದೊರೆಯುತ್ತಿದ್ದರೂ, ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳಾದ ‘ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಯನ್ಸ್’, ‘ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್’ ಮತ್ತು ‘ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಗಳಲ್ಲಿ ಫ್ಯಾಕಲ್ಟಿ ಸ್ಥಾನದಲ್ಲಿರುವ ಮಹಿಳೆಯರ ಸಂಖ್ಯೆ ಕೇವಲ 10-12% ಮಾತ್ರ. ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲೂ, ವಿಜ್ಞಾನ ರಂಗದಲ್ಲಿ ಮಹಿಳೆ ಅಲ್ಪಸಂಖ್ಯಾತಳು. ಇಂತಹ ಸ್ಥಿತಿಗೆ ಕಾರಣ ಮಹಿಳೆಯ ಬೌದ್ಧಿಕ ಅಸಮರ್ಥತೆಯಲ್ಲ, ಸಮಾಜದ ಪೂರ್ವಗ್ರಹ ಮಹಿಳೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ರಂಗಗಳಿಂದ ದೂರವಿಟ್ಟಿದೆ. ಪ್ರವೇಶ ಕೊಟ್ಟಾಗಲೂ, ಆಕೆ ವೃತ್ತಿಯಲ್ಲಿ ಮೇಲೇರದಂತೆ ಅಡ್ಡಿಯಾಗಿದೆ.

ಪ್ರೊ. ಎಚ್.ಎಸ್. ಸಾವಿತ್ರಿಯವರು ದಿನಾಂಕ 18 ಮಾರ್ಚ್ 1951ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಅವರು ಜೆ.ಸಿ.ಬೋಸ್ ಫೆಲೋ ಆಗಿದ್ದಾರೆ. ‘ಜೆ.ಸಿ.ಬೋಸ್ ರಾಷ್ಟ್ರೀಯ ಫೆಲೋಶಿಪ್’ ಸಕ್ರಿಯವಾಗಿರುವ ವಿಜ್ಞಾನಿಗಳ ಅಸಾಧಾರಣ ಸಂಶೋಧನಾ ಕಾರ್ಯವನ್ನು ಗುರುತಿಸಿ, ಬಹಳಷ್ಟು ಆಯ್ಕೆ ಮಾಡಿ, ವಿಜ್ಞಾನಿಗಳಿಗಷ್ಟೆ ನೀಡುವಂತಹುದು. ಪ್ರೊ. ಎಚ್.ಎಸ್. ಸಾವಿತ್ರಿ ಅವರಿಗೆ ಇಸವಿ 1991ರಲ್ಲಿ ‘ಸೊಸೈಟಿ ಆಫ್ ಬಯಾಲಜಿಕಲ್ ಕೆಮಿಸ್ಟ್’ ನೀಡುವ ‘ಪಿ.ಎಸ್. ಶರ್ಮ ಮೆಮೊರಿಯಲ್ ಪ್ರಶಸ್ತಿ’ ಲಭಿಸಿದೆ. ಇವರು ‘ಇಂಡಿಯನ್ ಅಕಾಡೆಮಿ ಆಫ್ ಸಯನ್ಸಸ್’, ‘ನ್ಯಾಷನಲ್ ಅಕಾಡೆಮಿ ಆಫ್ ಸಯನ್ಸ್‍ಸ್’ ಮತ್ತು ‘ಇಂಡಿಯನ್ ನ್ಯಾಷನಲ್ ಸಯನ್ಸಸ್ ಅಕಾಡೆಮಿ’ಯ ಫೆಲೋ ಕೂಡಾ ಆಗಿದ್ದಾರೆ. ಇಸವಿ 2010ರಲ್ಲಿ ಐಐಎಸ್ಸಿಯ ‘ಅಲುಮ್ನೈ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರಿಸರ್ಚ್’ ಗಳಿಸಿದ್ದಾರೆ. ಇದಲ್ಲದೆ, ಇಸವಿ 2011ರಲ್ಲಿ ಇಂಡಿಯನ್ ಸಯನ್ಸ್ ಕಾಂಗ್ರೆಸ್‍ನಲ್ಲಿ, ‘ಎಕ್ಸಲೆನ್ಸ್ ಇನ್ ಸೈಯನ್ಸ್ ಅಂಡ್ ಟೆಕ್ನಾಲಜಿ’ ಪ್ರಶಸ್ತಿಯನ್ನು ಪ್ರಧಾನ ಮಂತ್ರಿಗಳಿಂದ ಸ್ವೀಕರಿಸಿದ್ದಾರೆ.

ಭೇಟಿಯಾಗಿ ಸಂದರ್ಶನ ಮಾಡಬೇಕು ಎಂದು ಕೇಳಿಕೊಂಡಾಗ, ತಾವೀಗ ಮಗಳ ಮನೆಯಲ್ಲಿ ಕೆಲಸಮಯ ಇರುವುದಾಗಿ ಹೇಳಿ, ಗಿರಿನಗರದ ವಿಳಾಸವನ್ನು ಕೊಟ್ಟರು. ಅಲ್ಲಿಗೆ ತಲುಪಿದಾಗ ಗೇಟು ತೆಗೆಯುತ್ತಿದ್ದಂತೆಯೇ, ಡಾ. ಎಚ್.ಎಸ್. ಸಾವಿತ್ರಿ ಅವರು, ಅವರ ಮಗಳು ಡಾ. ರಶ್ಮಿ ಎಸ್. ಮೂರ್ತಿ ಮತ್ತು ಅವರ ಪುಟ್ಟ ಮೊಮ್ಮಗಳು ಮುಗುಳ್ನಗೆಯಿಂದ ಸ್ವಾಗತಿಸಿದರು. ಅವರೊಡನೆಯ ದೀರ್ಘ ಸಂದರ್ಶನ ಇಲ್ಲಿದೆ:

ಸಂದರ್ಶಕಿ : ನಮಸ್ಕಾರ ಮೇಡಂ.

ಡಾ. ಸಾವಿತ್ರಿ: ನಮಸ್ಕಾರ.

ಸಂ : ಮೇಡಂ, ಮಹಿಳೆಯರಿಗೆ ವಿಜ್ಞಾನ ರಂಗಕ್ಕೆ ಪ್ರವೇಶ ಪುರುಷ ಪೂರ್ವಗ್ರಹದ ಕಾರಣವಾಗಿ, ಸದಾಕಾಲಕ್ಕೂ ಕಷ್ಟದ್ದಾಗಿತ್ತು. ನಮ್ಮ ‘ಭಾರತೀಯ ವಿಜ್ಞಾನ ಸಂಸ್ಥೆ’ಗೆ ಸರ್ ಸಿ.ವಿ. ರಾಮನ್ ಅವರು 1933ರಲ್ಲಿ ಮೊಟ್ಟ ಮೊದಲ ಭಾರತೀಯ ನಿರ್ದೇಶಕರಾಗಿ ಬಂದಿದ್ದರು. ನೊಬೆಲ್ ಪ್ರಶಸ್ತಿ ಪಡೆದ ಹೆಮ್ಮೆಯ ಭಾರತೀಯ ವಿಜ್ಞಾನಿ ಸರ್ ಸಿವಿ ರಾಮನ್ ಅವರು ಕೂಡಾ, ಮಹಿಳಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಕ್ಕೆ ಕಟ್ಟಾ ವಿರೋಧಿಯಾಗಿದ್ದರು. ಬಾಂಬೆ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ಪ್ರಥಮ ರ್ಯಾಂಕ್ ಪಡೆದ ಕಮಲಾ ಸೊಹಾನಿ (ಆಗ ಕಮಲಾ ಭಾಗವತ್ ಆಗಿದ್ದರು) ಅವರು, ಮುಂದಿನ ಸಂಶೋಧನಾ ಕಾರ್ಯಕ್ಕೆ ಬೆಂಗಳೂರಿನ ವಿಜ್ಞಾನ ಮಂದಿರದಲ್ಲಿ ತಮಗೆ ಪ್ರವೇಶ ಸಿಗುವುದು ಸುಲಭ ಎಂದು ಭಾವಿಸಿದ್ದರು. ಆದರೆ ಅವರ ಅರ್ಜಿಯನ್ನು ರಾಮನ್, ಮಹಿಳೆ ಎಂಬ ಏಕೈಕ ಕಾರಣಕ್ಕೆ ತಿರಸ್ಕರಿಸಿದರು. ಕಮಲಾ ಅವರು, ರಾಮನ್ ಅವರ ಕಚೇರಿಯ ಎದುರು ಸತ್ಯಾಗ್ರಹ ಹೂಡಿ, ಕಡೆಗೂ ಪ್ರವೇಶ ದೊರಕಿಸಿಕೊಂಡರು. ಆದರೆ ಅವರ ಮೇಲೆ ಹೇರಿದ್ದ ನೂರೊಂದು ನಿರ್ಬಂಧಗಳಿಂದ ರೋಸಿ ಹೋದ ಕಮಲಾ, ಮುಂದೆ ‘ಕೇಂಬ್ರಿಡ್ಜ್ ವಿಶ್ವವಿದ್ಯಾಲಯ’ಕ್ಕೆ ಹೋಗಿ ಪಿಎಚ್.ಡಿ. ಪಡೆದರು. ವಿಜ್ಞಾನದಲ್ಲಿ ಮೊದಲಿಗೆ ಪಿಎಚ್.ಡಿ. ಪಡೆದ ಭಾರತೀಯ ಮಹಿಳೆ ಆದರು. ಕಮಲಾ ಸೊಹಾನಿ 1933ರಲ್ಲಿ ಸತ್ಯಾಗ್ರಹ ಹೂಡಿ ಪ್ರವೇಶ ಪಡೆದ ‘ಬಯೋಕೆಮಿಸ್ಟ್ರಿ’ ವಿಭಾಗಕ್ಕೆ, ನೀವು ಸುಮಾರು ನಾಲ್ಕು ದಶಕಗಳ ನಂತರ ಪ್ರವೇಶ ಪಡೆದಿರಿ. ವಿಜ್ಞಾನ ಸಂಸ್ಥೆಯಲ್ಲಿ ಲಿಂಗ ತಾರತಮ್ಯ ಒಂದಿಷ್ಟು ಬದಲಾಗಿತ್ತೆ? ನಿಮಗೆ ಅಲ್ಲಿ ದೊರೆತ ಸ್ವಾಗತ ಹೇಗಿ ತ್ತು?

ಡಾ. ಸಾವಿತ್ರಿ: ಖಂಡಿತಾ ಬದಲಾಗಿತ್ತು. ನಮ್ಮ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಸಾಧಾರಣವಾಗಿ ಹೆಚ್ಚು ಜನ ಮಹಿಳೆಯರು ಪಿಎಚ್.ಡಿ.ಗೆ ಅಪ್ಲೈ ಮಾಡಿಕೊಳ್ತಾ ಇದ್ದರು. ನಾನು ಸೇರಿದ ವರ್ಷವೇ, ನಾಲ್ಕು ಜನ ಹುಡುಗಿಯರನ್ನು ಪಿಎಚ್.ಡಿ.ಗೆ ಆಯ್ಕೆ ಮಾಡಿದ್ದರು. ನಾನು ಸೇರಿದಾಗಿನಿಂದಲೂ ನೋಡಿದ್ದೇನೆ, ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ವಿಭಾಗಕ್ಕೆ ಸೇರಿದ್ದಾರೆ. ಕೆಲವೊಮ್ಮೆ ಕೆಲವು ಫಾಕಲ್ಟಿ ಮೆಂಬರ್ಸ್ ಮಹಿಳೆಯರನ್ನು ಪ್ರಿಫರ್ ಮಾಡುತ್ತಿರಲಿಲ್ಲ. ಆದರೆ ಮುಕ್ಕಾಲು ಜನ ಪ್ರಾಧ್ಯಾಪಕರು, ‘ಓಪನ್ ಮೈಂಡ್’ ಇದ್ದವರು. ‘ಹುಡುಗರಾಗಲೀ, ಹುಡುಗಿಯರಾಗಲಿ ಪರವಾಗಿಲ್ಲ ನಾವು ತರಪೇತು ನೀಡುತ್ತೇವೆ’ ಅಂದವರು. ಕೆಲವರು ಮಾತ್ರ, ‘ಹೆಣ್ಣು ಮಕ್ಕಳು ರಜೆ ಹೋಗಿ ಬಿಡಬಹುದು’ ಎಂದು ಏನೋ ಕಾರಣಕ್ಕೆ ಬೇಡ ಅನ್ನುತ್ತಿದ್ದರು.

ಸಂ : ಅಂತೂ ಇಸವಿ 1972ರಲ್ಲಿ ನೀವು ಸೇರುವ ಹೊತ್ತಿಗೆ ಪರಿಸ್ಥಿತಿ ಒಂದಿಷ್ಟು ಸುಧಾರಿಸಿತ್ತು. ಮೇಡಂ, 1972ರಿಂದ ಸ್ವಲ್ಪ ಹಿಂದೆ ಹೋಗೋಣ. ಆ ಕಾಲದಲ್ಲಿ ಹೆಣ್ಣು ಮಕ್ಕಳು ವಿಜ್ಞಾನ ತೆಗೆದುಕೊಳ್ಳುವುದೇ ಅಪರೂಪವಿತ್ತು. ಅಂತಹ ಪ್ರೋತ್ಸಾಹ ಅವರಿಗೆ ಇರಲಿಲ್ಲ. ಹೀಗಿರುವಾಗ ನಿಮ್ಮ ಮನೆಯ ವಾತಾವರಣ ಹೇಗಿತ್ತು? ವಿಜ್ಞಾನ ಓದಲು ಹೇಗೆ ಅದು ಪೂರಕವಾಯಿತು?

ಡಾ. ಸಾವಿತ್ರಿ: ತುಂಬಾ ಒಳ್ಳೆಯ ಕುಟುಂಬದಲ್ಲಿ ಜನಿಸಿದ್ದು ನನ್ನ ಅದೃಷ್ಟ. ನನ್ನ ತಂದೆ ತಾಯಿ ಎಲ್ಲಿಲ್ಲದ ಪ್ರೋತ್ಸಾಹ ನೀಡಿದರು. ನನ್ನ ತಂದೆ ಎಚ್.ಎಸ್. ಸುಬ್ಬರಾವ್ ಅವರು ಸಣ್ಣ ಬಿಸಿನೆಸ್ ಮಾಡಿಕೊಂಡಿದ್ದವರು. ತಾಯಿ ಲಲಿತಮ್ಮ ವಾರಣಾಸಿಯಿಂದ ಬಂದವರು. ನಾವು ನಾಲ್ಕು ಹೆಣ್ಣು ಮಕ್ಕಳು ಮತ್ತು ನಮಗೆ ಒಬ್ಬ ಹಿರಿಯಣ್ಣ. ಆತನನ್ನು ಇಂಜಿನಿಯರಿಂಗ್‍ಗೆ ಸೇರಿಸಿದ್ದರು. ನನ್ನ ಹಿರಿಯಕ್ಕ ಡಾಕ್ಟರ್ ಓದಲು ಬಯಸಿದಳು. ನನ್ನ ಇಬ್ಬರು ಹಿರಿಯಕ್ಕಂದಿರು ‘ಬೆಂಗಳೂರ್ ಮೆಡಿಕಲ್ ಕಾಲೇಜ್’ನಲ್ಲಿ ಮೆರಿಟ್‍ನಿಂದ ಸೀಟು ತೆಗೆದುಕೊಂಡು ಎಂ.ಬಿ.ಬಿ.ಎಸ್. ಮಾಡಿದರು.

ಸಂ : ಇಬ್ಬರು ಹೆಣ್ಣು ಮಕ್ಕಳನ್ನು ಡಾಕ್ಟರ್ ಓದಿಸುವುದು ಸುಲಭ ಇದ್ದಿರಲಿಕ್ಕಿಲ್ಲ...

ಡಾ. ಸಾವಿತ್ರಿ: ನಿಜ, ನನ್ನ ತಂದೆಗೆ ಅಂತಹ ಆರ್ಥಿಕ ಬಲ ಇರಲಿಲ್ಲ. ತುಂಬಾ ಯೋಚನೆ ಮಾಡಿದರು. ಮೆಡಿಕಲ್ ಪುಸ್ತಕಗಳಿಗೇ ಬೆಲೆ ಜಾಸ್ತಿ ಇತ್ತು. ಮತ್ತೆ ಕೋರ್ಸ್ ಫೀ ಬೇರೆ ಇದೆ. ‘ಹೇಗಪ್ಪಾ ಓದಿಸೋದು?’ ಅಂತಾ ತುಂಬಾ ಯೋಚನೆ ಆಗಿತ್ತು. ಆಗ ನಮ್ಮ ತಂದೆಯ ಚಿಕ್ಕಪ್ಪ ಡಾ.ಎಚ್.ಕೃಷ್ಣಮೂರ್ತಿ ಅಂತಾ ಇದ್ದಾರೆ. ಅವರು ಕಣ್ಣಿನ ಡಾಕ್ಟರ್, ಆಪ್ತಮಾಲಜಿಸ್ಟ್, ‘ಪ್ರಭಾ ಐ ಕ್ಲಿನಿಕ್’ ಅವರದು. ಅವರು ನಮ್ಮ ತಂದೆಯವರಿಗೆ ತುಂಬಾ ಹತ್ತಿರದವರು. ಅವರು ಮನೆಗೇ ಬಂದು ‘ಯೋಚನೆ ಮಾಡಬೇಡ, ಮಗಳನ್ನು ಡಾಕ್ಟರ್ ಓದಿಸಿಯೇ ಓದಿಸು. ನನ್ನ ಮಗ ಈಗಷ್ಟೆ ಎಂ.ಬಿ.ಬಿ.ಎಸ್. ಮುಗಿಸಿದ್ದಾನೆ. ಅವನ ಪುಸ್ತಕಗಳು ಎಲ್ಲಾ ಇವೆ, ಅವನ್ನು ಕೊಡ್ತೇನಿ. ಹೊಸ ಪುಸ್ತಕ ಕೊಳ್ಳುವ ಅಗತ್ಯವಿಲ್ಲ. ಫೀಸ್ ಕಟ್ಟೋದಕ್ಕೆ ಲೋನ್ ಸ್ಕಾಲರ್‍ಶಿಪ್ ತೆಗೆದುಕೊಳ್ಳಲಿ, ಕೆಲಸ ಸಿಕ್ಕಿದ ಮೇಲೆ ತೀರಿಸಬಹುದು. ಖಂಡಿತಾ ಸಿಕ್ಕಿರುವ ಸೀಟು ಬಿಡಬೇಡ’ ಎಂದು ಒತ್ತಿ ಹೇಳಿದರು. ಎರಡನೇ ಅಕ್ಕ ಹಿರಿಯಕ್ಕನಿಗಿಂತ ಎರಡು ವರ್ಷಕ್ಕೆ ಚಿಕ್ಕವಳು. ಇಬ್ಬರೂ ಸದಾ ಜೊತೆಗೇ ಇರುತ್ತಾ ಇದ್ದರು. ಆಕೇನೂ ‘ನಾನೂ ಎಂ.ಬಿ.ಬಿ.ಎಸ್. ಮಾಡಬೇಕು’ ಅಂದಳು. ಹಟ ಕಟ್ಟಿ ಓದಿ, ಮೆರಿಟ್ ಸೀಟ್ ಪಡೆದಳು. ಅಕ್ಕ ಓದಿದ ಪುಸ್ತಕಗಳು ಈಕೆಗೆ ಬಂದವು. ತಂದೆಯವರು ಇಬ್ಬರನ್ನೂ ಡಾಕ್ಟರ್ ಓದಿಸಿದರು. ಇಬ್ಬರೂ ವೈದ್ಯರಾಗಿ ತುಂಬಾ ಯಶಸ್ವಿಯಾದರು.

ಸಂ : ನಿಮ್ಮ ಅಕ್ಕಂದಿರ ಹೆಸರು?

ಡಾ. ಸಾವಿತ್ರಿ: ದೊಡ್ಡಕ್ಕ ಉಮಾ, ಎರಡನೇ ಅಕ್ಕ ವಿಜಯಲಕ್ಷ್ಮಿ. ಉಮಾ ನಂತರ ಅಮೆರಿಕಗೆ ಹೋದಳು. ಅಲ್ಲಿ ‘ಆಬ್‍ಸ್ಟಟ್ರಿಷನ್ ಅಂಡ್ ಗೈನಕಾಲಜಿ’ಯಲ್ಲಿ ಎಂ.ಡಿ. ಮಾಡಿದಳು. ತನ್ನದೇ ‘ಪ್ರೈವೇಟ್ ಕ್ಲಿನಿಕ್’ ನಡೆಸಿದಳು. ಇನ್ನೊಬ್ಬ ಅಕ್ಕ ವಿಜಯಲಕ್ಷ್ಮಿಗೆ ಎಂ.ಬಿ.ಬಿ.ಎಸ್ ಆದ ತಕ್ಷಣ ಮದುವೆ ಆಯಿತು. ಅವಳಿ-ಜವಳಿ ಮಕ್ಕಳಿಗೆ ಗರ್ಭ ಧರಿಸಿದ ಸಮಯದಲ್ಲಿ, ಆಕೆ ‘ಗೈನಕಾಲಜಿ’ಯಲ್ಲಿ ಎಂ.ಡಿ. ಮಾಡಿದಳು! ಅವಳ ಪತಿ ತುಂಬ ಪ್ರೋತ್ಸಾಹ ಕೊಟ್ಟರು. ನಮ್ಮ ತಾಯಿ ಎಲ್ಲಿಲ್ಲದ ಹಾಗೆ ಮಗಳಿಗೆ ಬೆಂಬಲ ನೀಡಿದರು. ಸದಾ ಲೈಬ್ರರಿಗೆ ಹೋಗಿ ಓದಲು ಅನುಕೂಲ ಮಾಡಿಕೊಟ್ಟರು.

ಸಂ : ನಿಮ್ಮ ತಾಯಿಯವರು ಓದಿದ್ದರಾ?

ಡಾ. ಸಾವಿತ್ರಿ: ಅವರು ಎಸ್.ಎಸ್.ಎಲ್.ಸಿ.ವರೆಗೆ ಓದಿದ್ದರು. ಅವರು ವಾರಣಾಸಿಯಲ್ಲಿ ಇದ್ದವರು. ಹಾಗಾಗಿ ಹಿಂದಿ ತುಂಬಾ ಚೆನ್ನಾಗಿ ಬರುತ್ತಾ ಇತ್ತು. ‘ಹಿಂದಿ ವಿಶಾರದ’ನೂ ಮಾಡಿಕೊಂಡಿದ್ದರು. ತುಂಬಾ ಮಲ್ಟಿಟಾಸ್ಕಿಂಗ್ ಸಾಮಥ್ರ್ಯ ಆಕೆಯದು. ತುಂಬಾ ಪ್ರತಿಭಾವಂತರು. ಹೊಲಿಗೆ, ನಿಟ್ಟಿಂಗ್ ಏನೆಲ್ಲ ಬಲ್ಲವರು. ಏನೇ ಅಡಿಗೆ ಬೇಕಿರಲಿ, ಎಲ್ಲವನ್ನೂ ಮನೆಯಲ್ಲಿಯೇ ಮಾಡುತ್ತಿದ್ದರು. ಯಾವ ಕೆಲಸವನ್ನೇ ಆಗಲಿ, ಬಹಳ ಆಸಕ್ತಿಯಿಂದ ಆಸ್ಥೆಯಿಂದ ಮಾಡೋರು. ನಾವು ಮಾಡುವ ಯಾವುದೇ ಕೆಲಸದಲ್ಲಿ ಆಳವಾದ ಇನ್‍ವಾಲ್ವ್‍ಮೆಂಟ್, ನಮಗೆಲ್ಲ ನಮ್ಮ ತಾಯಿಯಿಂದಲೇ ಬಂದದ್ದು. ಸದಾ ಯಾವುದಾದರೂ ಕೆಲಸದಲ್ಲಿ ತೊಡಗಿರುತ್ತಿದ್ದರು. ನಾನೆಂದೂ ಅಮ್ಮನನ್ನು ಮಧ್ಯಾಹ್ನ ಮಲಗಿದ್ದು, ವಿಶ್ರಾಂತಿ ತೆಗೆದುಕೊಂಡದ್ದು ನೋಡಿಲ್ಲ. ನಾವೆಲ್ಲ ಮಕ್ಕಳು ನಮ್ಮಮ್ಮನ ಹೆಜ್ಜೆಗಳನ್ನೇ ಹಿಂಬಾಲಿಸಿದೆವು.

ಸಂ : ಅವರು ವಾರಣಾಸಿಯಲ್ಲಿ ಏಕೆ ಇದ್ದರು?

ಡಾ.ಸಾವಿತ್ರಿ: ಅವರ ತಂದೆ ಅಲ್ಲಿ ಒಂದು ಸಣ್ಣ ಹೊಟೆಲ್ ಇಟ್ಟುಕೊಂಡಿದ್ದರು. ತುಂಬಾ ಬಡತನ ಇಲ್ಲಿತ್ತು. ಹಾಗಾಗಿ ಸಂಸಾರ ಸಾಗಿಸಲು, ಅಮ್ಮನ ತಂದೆ ವಾರಣಾಸಿಗೆ ಹೋಗಿ ಈ ಚಿಕ್ಕ ‘ದಕ್ಷಿಣ ಭಾರತ’ದ ಹೋಟೆಲ್ ಇಟ್ಟುಕೊಂಡರು.

ಸಂ : ಅಂತಹ ಆರ್ಥಿಕ ಮುಗ್ಗಟ್ಟು ಇದ್ದರೂ, ಬಡತನ ನಿಮಗಾರಿಗೂ ಅಡ್ಡಿ ಆಗಲಿಲ್ಲ. ಕಾರಣ ಅಪ್ಪ ಅಮ್ಮ ಇಬ್ಬರಿಗೂ ಹೆಣ್ಣು ಮಕ್ಕಳನ್ನೂ ಓದಿಸಬೇಕು ಎಂಬ ಛಲವಿತ್ತು.

ಡಾ.ಸಾವಿತ್ರಿ: ಖಂಡಿತಾ ನಿಜ. ನನ್ನಮ್ಮನ ಬದುಕಿನ ಉದ್ದೇಶವೇ ‘ತನ್ನ ಹೆಣ್ಣು ಮಕ್ಕಳು ಗಂಡು ಮಕ್ಕಳಷ್ಟೇ ಓದಬೇಕು, ಅವರ ಕಾಲ ಮೇಲೆ ನಿಂತುಕೊಳ್ಳಬೇಕು’ ಎಂಬುದಾಗಿತ್ತು. ಯಾವ ಗಂಡನ ಮುಂದೂ ದುಡ್ಡು ಬೇಕು ಅಂತಾ ಕೈ ಚಾಚಬಾರದು. ಸ್ವತಂತ್ರವಾಗಿ ಇರಬೇಕು. ಮಕ್ಕಳು ಮದುವೆ ಆಗಬೇಕು. ಆದರೆ ಮದುವೆಗೆ ಮೊದಲು ಆರ್ಥಿಕವಾಗಿ ಹೆಣ್ಣುಮಕ್ಕಳು ಸ್ವತಂತ್ರವಾಗಿರಬೇಕು ಎಂಬ ವಿಚಾರಗಳು ಆಗಿನ ಕಾಲದಲ್ಲಿಯೇ ಆಕೆಯಲ್ಲಿ ತುಂಬಾ ದೃಢವಾಗಿದ್ದವು. ಏನೇ ಕಾರಣಕ್ಕೂ ಹೆಣ್ಣು ಮಕ್ಕಳು ಓದದೇ ಇರಬಾರದು, ಕೆಲಸಕ್ಕೆ ಹೋಗದೇ ಇರಬಾರದು. ಓದಬೇಕು, ಓದಿದ್ದನ್ನು ಬಳಸಿಕೊಂಡು ದುಡಿಯಬೇಕು. ಓದಿದ್ದನ್ನು ವ್ಯರ್ಥ ಮಾಡಬಾರದು.

ಸಂ : ಇಂತಹ ಪೂರಕ ಪರಿಸರ ನಿಮ್ಮ ಪೀಳಿಗೆಯ ಎಲ್ಲ ಹೆಣ್ಣು ಮಕ್ಕಳಿಗೂ ಸುಲಭವಾಗಿ ಲಭ್ಯವಿರಲಿಲ್ಲ. ‘ಹೋಮ್ಲಿ ಗರ್ಲ್’ ಬೇಕು ಎನ್ನುತ್ತಿದ್ದ ಆ ಕಾಲದಲ್ಲಿ, ‘ಹೆಣ್ಣು ಮಕ್ಕಳು ಹೆಚ್ಚು ಓದಿದರೆ, ಗಂಡು ಸಿಗೋಲ್ಲ’ ಎಂಬ ಆತಂಕ ಇತ್ತು.

ಡಾ. ಸಾವಿತ್ರಿ: ನನ್ನಮ್ಮ ತುಂಬ ಸ್ವತಂತ್ರ ಮನೋಭಾವದವರು. ಕುಟುಂಬ ದೊಡ್ಡದಿತ್ತು. ನಮ್ಮ ತಂದೆಯವರಿಗೆ ಐದು ಜನ ತಮ್ಮಂದಿರು, ಮೂವರು ತಂಗಿಯರು. ಹಿರಿಯ ಮಗನಾಗಿ ಅವರ ಹೆಗಲ ಮೇಲೆ ಮನೆಯ ಭಾರವಿತ್ತು. ಆರ್ಥಿಕ ಮುಗ್ಗಟ್ಟಿತ್ತು. ಖರ್ಚು ಬಹಳವಿತ್ತು. ‘ಅದಕ್ಕೆ ದುಡ್ಡು ಕೊಡಿ, ಇದಕ್ಕೆ ಕೊಡಿ’ ಅಂತ ಗಂಡನನ್ನು ಕೇಳಬೇಕಿತ್ತು. ಅವರ ಹತ್ತಿರ ಹಣ ಇರುತ್ತಿರಲಿಲ್ಲ. ಆದರೆ ಕುಟುಂಬ ನಡೆಸಬೇಕು. ಆಗ ಅವರ ಮನಸ್ಸಿಗೆ, ‘ಅರೆ ನಾನೂ ದುಡಿಯುವಂತಿದ್ದರೆ ಮನೆಗೆ ಸಹಾಯವಾಗುತ್ತಿತ್ತು’ ಅನಿಸುತ್ತಿತ್ತು. ಹಾಗಾಗಿ ‘ನನ್ನ ಮಕ್ಕಳು ಓದಬೇಕು, ಕೆಲಸಮಾಡಬೇಕು. ಎರಡೂ ಮುಖ್ಯ’ ಎನ್ನುವುದು ಅವರ ಮನಸ್ಸಿಗೆ ಗಟ್ಟಿಯಾಗಿ ಬಂದಿತ್ತು.

ಸಂ : ನಿಮ್ಮ ಇಬ್ಬರು ಅಕ್ಕಂದಿರು ಡಾಕ್ಟರ್ ಆದರು. ನೀವು ವೈದ್ಯರಾಗದೆ ವಿಜ್ಞಾನಿ ಆದದ್ದು ಹೇಗೆ?

ಡಾ. ಸಾವಿತ್ರಿ: ನಾನು ಅವರಿಬ್ಬರೂ ಆ ದಪ್ಪ ದಪ್ಪ ಮೆಡಿಕಲ್ ಪುಸ್ತಕಗಳನ್ನು ಓದಿ ಮೆಮೊರೈಸ್ ಮಾಡುವುದನ್ನು ನೋಡುತ್ತಿದ್ದೆ. ನನಗೆ ಅಷ್ಟೆಲ್ಲ ಜ್ಞಾಪಕ ಇಟ್ಟುಕೊಳ್ಳುವುದರತ್ತ ಆಸಕ್ತಿ ಮೂಡಲಿಲ್ಲ. ಬೇರೆ ಏನಾದರೂ ನಾನು ಮಾಡಬೇಕು ಅನಿಸಿತ್ತು. ಆಗ ತಾನೆ ಆನರ್ಸ್ ಶುರುವಾಗಿತ್ತು. ವಿಜ್ಞಾನ ತೆಗೆದುಕೊಳ್ಳುತ್ತೇನೆ ಅಂದೆ.

ಸಂ : ಅಲ್ಲಿಯವರೆಗೆ ಆನರ್ಸ್ ಇರಲಿಲ್ಲವೆ?

ಡಾ. ಸಾವಿತ್ರಿ: ಇಲ್ಲ, ಬಿ.ಎಸ್ಸಿ. ಮಾತ್ರ ಇತ್ತು. ಆ ವರ್ಷ ಬಿ.ಎಸ್ಸಿ. (ಆನರ್ಸ್) ಆರಂಭವಾಯಿತು. ಪಿ.ಯು.ಸಿಯಲ್ಲಿ ಮೊದಲ 10 ರ್ಯಾಂಕ್ ಪಡೆದವರು ಆನರ್ಸ್‍ಗೆ ಬಂದಿದ್ದರು. ಅಷ್ಟು ಆನರ್ಸ್ ಕೋರ್ಸ್ ಪ್ರತಿಷ್ಠಿತವಾಗಿತ್ತು. ಕೋರ್ಸ್ ಕೂಡಾ ತುಂಬಾ ಚೆನ್ನಾಗಿತ್ತು. ಎರಡು ವರ್ಷ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರಗಳ ಜೊತೆಯಲ್ಲಿ ಭಾಷೆಗಳೂ ಇದ್ದವು. ಕೊನೇ ವರ್ಷ, ನಾನು ಕೆಮಿಸ್ಟ್ರಿ ತೆಗೆದುಕೊಂಡದ್ದರಿಂದ ರಸಾಯನಶಾಸ್ತ್ರ ಇತ್ತು. ಬಿ.ಎಸ್ಸಿ. (ಆನರ್ಸ್) ಮಾಡಿ, ಸೆಂಟ್ರಲ್ ಕಾಲೇಜಿಗೆ ರಸಾಯನಶಾಸ್ತ್ರದ ಎಂ.ಎಸ್ಸಿ.ಗೆ ಸೇರಿದೆ. ರಸಾಯನಶಾಸ್ತ್ರದ ಟೀಚಿಂಗ್ ತುಂಬಾ ಚೆನ್ನಾಗಿತ್ತು, ನನಗೆ ಆ ವಿಷಯದ ಬಗ್ಗೆ ಆಸಕ್ತಿಯೂ ಹೆಚ್ಚಿತ್ತು.

ಸಂ : ಅದಕ್ಕೆ ಮೊದಲು ನಿಮ್ಮ ವಿದ್ಯಾಭ್ಯಾಸ ಎಲ್ಲಿ ನಡೆದಿತ್ತು?

ಡಾ. ಸಾವಿತ್ರಿ: ನಮ್ಮ ಮನೆ ಚಾಮರಾಜಪೇಟೆಯಲ್ಲಿತ್ತು, ಬಾಡಿಗೆಯ ಮನೆ. ಪ್ರಾಥಮಿಕ ವಿದ್ಯಾಭ್ಯಾಸ ‘ಶಾರದಾ ಸ್ತ್ರೀ ಸಮಾಜ’ದಲ್ಲಿ ನಡೆದಿತ್ತು. ನಂತರ ಮಿಡಲ್ ಸ್ಕೂಲ್ ಅಲ್ಲೇ ಹತ್ತಿರದಲ್ಲಿ ಇರುವ ‘ಸೇಂಟ್ ತೆರೇಸಾ ಕಾನ್ವೆಂಟ್’ನಲ್ಲಿ ನಡೆಯಿತು. ಹೈಸ್ಕೂಲಿಗೆ ‘ಮಹಾರಾಷ್ಟ್ರ ಮಹಿಳಾ ವಿದ್ಯಾಲಯ’ಕ್ಕೆ ಸೇರಿದೆ. ಒಂದು ವರ್ಷದ ಅಂದಿನ ಪಿ.ಯು.ಸಿ.ಯನ್ನು ‘ನ್ಯಾಷನಲ್ ಕಾಲೇಜ್’ನಲ್ಲಿ ಓದಿದೆ.

ಸಂ : ನಾನು ತುಮಕೂರಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ, ಹೆಣ್ಣು ಮಕ್ಕಳಿಗೆ ‘ಗೃಹವಿಜ್ಞಾನ’ ಹೇಳಿಕೊಡೋರು, ಗಂಡು ಮಕ್ಕಳಿಗೆ ‘ಸಾಮಾನ್ಯ ವಿಜ್ಞಾನ’. ನಿಮ್ಮ ಬಹಳಷ್ಟು ಆರಂಭಿಕ ವಿದ್ಯಾಭ್ಯಾಸ ಹೆಣ್ಣು ಮಕ್ಕಳ ಶಾಲೆಯಲ್ಲಿಯೇ ನಡೆದಿದೆ. ಹಾಗಾಗಿ ನಿಮಗೆ ಇಂತಹ ಲಿಂಗ ತಾರತಮ್ಯದ ರೀತಿಗಳು ಅನುಭವಕ್ಕೆ ಬರಲಿಲ್ಲ ಅಲ್ಲವೆ?

ಡಾ. ಸಾವಿತ್ರಿ: ನಮಗೂ ಮಿಡಲ್ ಸ್ಕೂಲ್‍ನಲ್ಲಿ ಗೃಹವಿಜ್ಞಾನ ಇತ್ತು. ಆದರೆ ಹೈಸ್ಕೂಲ್‍ನಲ್ಲಿ ಜನರಲ್ ಸಯನ್ಸ್.

ಸಂ : ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್ಸಿ. ಮುಗಿಸಿ ನೀವು ಐಐಎಸ್ಸಿಗೆ ಸೇರಿದಾಗ, ಕಿಣ್ವಶಾಸ್ತ್ರದಲ್ಲಿ ತಜ್ಞರಾದ ಪ್ರೊ. ಎನ್. ಅಪ್ಪಾಜಿ ರಾವ್ ಅವರು ನಿಮ್ಮ ಸಂಶೋಧನೆಗೆ ಮಾರ್ಗದರ್ಶಿಗಳಾದರು…

ಡಾ. ಸಾವಿತ್ರಿ: ಹೌದು, ಅದು ನನ್ನ ಬದುಕಿನ ಮಹತ್ತರದ ತಿರುವು. ಓರ್ವ ಹೆಸರಾಂತ ವಿಜ್ಞಾನಿ ಮತ್ತು ಅಪರೂಪದ ಹೃದಯವಂತಿಕೆಯ ಮನುಷ್ಯರವರು. ಸಹೋದ್ಯೋಗಿಗಳೊಡನೆ ಅವರು ಕರುಣೆಯಿಂದ ವರ್ತಿಸುವ ಉದಾರ ಗುಣ, ವಿಜ್ಞಾನದತ್ತಲ ಅವರ ಉತ್ಕಟ ಆಸ್ಥೆ ನಮಗೆಲ್ಲ ಅನುಕರಿಸುವಂತಹ ಆದರ್ಶವಾಯಿತು.

ಸಂ : ಪ್ರೊ. ಅಪ್ಪಾಜಿರಾವ್ ಅವರು ನಿಮಗೆ ಹೇಳಿದ ಕಿಣ್ವಗಳನ್ನು ಕುರಿತ ಮೊದಲ ಪ್ರಯೋಗ, ಮೊದಲ ಬಾರಿಗೇ ಯಶಸ್ವಿಯಾಗಿತ್ತು. ‘ಈ ಹಿಂದೆ ಅದೇ ಪ್ರಯೋಗವನ್ನು ಅನೇಕ ತಿಂಗಳು ಮಾಡಿ ಸೋತವರಿದ್ದರು’ ಎಂದು ನಿಮಗೆ ತಿಳಿಸಿದಾಗ ‘ಓಹ್ ನನ್ನದು ಕೇವಲ ಬಿಗಿನರ್ಸ್ ಲಕ್’ ಎಂದಿದ್ದಿರಿ. ಆದರೆ ಮೇಡಂ, ‘ಅದೃಷ್ಟ’ ಕೂಡಾ ಪರಿಶ್ರಮ ಮತ್ತು ಪ್ರತಿಭೆಯನ್ನು ಹಿಂಬಾಲಿಸುತ್ತದೆ. ನಿಮ್ಮ ತಜ್ಞತೆಯ ರಂಗದಲ್ಲಿ ಸಂಶೋಧನೆ, ಬಹಳಷ್ಟು ಸ್ವಯಂ-ಕಲಿಕೆಯನ್ನೂ ಬೇಡುತ್ತಿತ್ತು ಅಲ್ಲವೆ?

ಡಾ.ಸಾವಿತ್ರಿ: ನಿಜ, ಗ್ರಂಥಾಲಯಕ್ಕೆ ಬರುವ ಹೊಸ ವೈಜ್ಞಾನಿಕ ಪತ್ರಿಕೆಗಳನ್ನು ಸದಾ ಪರಾಮರ್ಶಿಸುವುದು ನನ್ನ ಅಭ್ಯಾಸವಾಯಿತು, ಅಗತ್ಯವೂ ಆಗಿತ್ತು.

ಸಂ : ಐಐಎಸ್ಸಿಯಲ್ಲಿಯೇ ನಿಮಗೆ ಎಂ.ಆರ್.ಎನ್. ಮೂರ್ತಿ ಅವರ ಪರಿಚಯವಾಯಿತು.

ಡಾ. ಸಾವಿತ್ರಿ: ಹೌದು, ಮದ್ರಾಸ್ ಐ.ಐ.ಟಿ.ಯಲ್ಲಿ ಎಂ.ಎಸ್ಸಿ ಪದವಿ ಪಡೆದು, ಐ.ಐ.ಎಸ್ಸಿ.ಯಲ್ಲಿಯೇ ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನೆಗೆ ತೊಡಗಿದ್ದರು. ನಮ್ಮ ಕಮ್ಯುನಿಟಿ ಚಿಕ್ಕದಿದೆ. ಹಾಗಾಗಿ ಹಿರಿಯರು ಗೊತ್ತು ಮಾಡಿದರು. ಇಸವಿ 1976ರಲ್ಲಿ ನಮ್ಮ ವಿವಾಹವಾಯಿತು.

ಸಂ : ನೀವು ಮದುವೆಯಾದಾಗ ನಿಮ್ಮ ಥೀಸೀಸ್ ಇನ್ನೂ ಸಬ್‍ಮಿಟ್ ಆಗಿರಲಿಲ್ಲ. ಮದುವೆಯಾದ ಮೇಲೆ ಇವೆಲ್ಲ ಹೇಗೆ ನಿಭಾಯಿಸಿದಿರಿ. ನೀವು ಮದುವೆಯಾದ ವರ್ಷವೇ ಮಗ ಹುಟ್ಟಿದ್ದ, ಆ ಗರ್ಭಾವಸ್ಥೆಯಲ್ಲಿ…

ಡಾ. ಸಾವಿತ್ರಿ: ನನಗಿದ್ದ ಅಡ್ವಾಂಟೇಜ್ ಅಂದರೆ, ನನ್ನ ಪತಿ ಕೂಡಾ ಅದೇ ಅವಸ್ಥೆಯಲ್ಲಿ ಇದ್ದರು. ಅವರದೂ ಥೀಸೀಸ್ ಇನ್ನೂ ಸಬ್‍ಮಿಟ್ ಆಗಿರಲಿಲ್ಲ. ಅವರು ನನ್ನ ಪರಿಸ್ಥಿತಿಯನ್ನು ಚೆನ್ನಾಗಿಯೇ ಅರ್ಥಮಾಡಿದ್ದರು. ನಾವಿಬ್ಬರೂ ಸಂಶೋಧನೆಯ ಕೆಲಸವನ್ನು ಮುಗಿಸಿದ್ದೆವು. ಆದರೆ ಥೀಸೀಸ್ ಬರೆಯುವುದು, ಅದನ್ನು ಟೈಪ್ ಮಾಡಿಸಿ, ಸೈಕ್ಲೋಸ್ಟೈಲ್ ಮಾಡಿಸಿ ಸಬ್‍ಮಿಟ್ ಮಾಡುವುದೇನೂ ಆ ಕಾಲದಲ್ಲಿ ಕಡಮೆ ಕೆಲಸವಾಗಿರಲಿಲ್ಲ. ಕಂಪ್ಯೂಟರ್ ಇಲ್ಲದ ಕಾಲ ಅದು. ಮಲ್ಲೇಶ್ವರಂನಲ್ಲಿ ಶೇಷಾದ್ರಿ ಅನ್ನೋರಿದ್ದರು, ಐಐಎಸ್ಸಿಯ ಬಹಳಷ್ಟು ಥೀಸೀಸ್‍ಗಳನ್ನು ಅವರೇ ಟೈಪ್ ಮಾಡಿದ್ದು. ಅವರು ಗಿನ್ನೀಸ್ ರೆಕಾರ್ಡೇ ಮಾಡಿದ್ದಾರೆ. ನಾವು ಕೈಯಲ್ಲಿ ಬರೆದದ್ದನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಅವರು ಟೈಪ್ ಮಾಡುತ್ತಿದ್ದರು. ಅವರಿಗೆ ಇಂಗ್ಲಿಷ್ ಭಾಷೆಯ ಮೇಲೆ ಒಳ್ಳೆ ಹಿಡಿತ ಇತ್ತು. ನಾವು ಬರೆದದ್ದರಲ್ಲಿ ಏನಾದರೂ ಭಾಷಾದೋಷ ಇದ್ದರೆ, ಅದನ್ನು ಸರಿ ಪಡಿಸಿಕೊಂಡು ಟೈಪ್ ಮಾಡುತ್ತಿದ್ದರು. ಅದು ಜೆರಾಕ್ಸ್ ಕಾಲವಲ್ಲ. ಹಾಗಾಗಿ ಸ್ಟೆನ್ಸಿಲ್ ಕಟಿಂಗ್ ಮಾಡಬೇಕಿತ್ತು. ಅದರಲ್ಲೇನಾದರೂ ತಪ್ಪಾದರೆ, ಕರೆಕ್ಟ್ ಮಾಡುವುದು ಕಷ್ಟದ ಕೆಲಸವೆ. ತಪ್ಪಿಲ್ಲದೆ ಟೈಪ್ ಮಾಡುವುದೇನೂ ಸುಲಭದ ಕೆಲಸವಲ್ಲ. ಹಾಗಾಗಿಯೇ ಅವರು ತುಂಬಾ ಸ್ಟ್ರಿಕ್ಟ್ ಇದ್ದರು. ಸರಿಯಾದ ಸ್ಕ್ರಿಪ್ಟ್ ತೆಗೆದುಕೊಂಡು ಬನ್ನಿ ಅನ್ನೋರು. ಹಾಗೆಂದೇ ಕೈಬರಹದ ನಮ್ಮ ಸ್ಕ್ರಿಪ್ಟ್ ಅನ್ನು ಪರ್ಫೆಕ್ಟ್ ಮಾಡಿಕೊಂಡು ಹೋಗಬೇಕಿತ್ತು.

ಸಂ : ಇದೆಲ್ಲ ಮದುವೆಯಾದ ಮೇಲೆ ಮಾಡಿದ್ದು...

ಡಾ. ಸಾವಿತ್ರಿ: ಹೌದು. ದಿನಾ ಮಲ್ಲೇಶ್ವರಂಗೆ ನಡೆದು ಹೋಗಿ, ಅಲ್ಲಿ ಶೇಷಾದ್ರಿ ಅವರೊಡನೆ ಕುಳಿತುಕೊಂಡು ಮಾಡುತ್ತಿದ್ದದ್ದು. ಅವರೋ ತುಂಬಾ ಬಿಜಿ. ನಾಲ್ಕು-ಐದು ಥೀಸೀಸ್ ಒಟ್ಟಿಗೇ ಮಾಡುತ್ತಾ ಇರುತ್ತಿದ್ದರು. ಪ್ರತಿದಿನ ನಮಗೂ ಒಂದೆರಡು ಗಂಟೆ ಸಮಯ ಕೊಡುತ್ತಿದ್ದರು. ಆ ಎರಡು ಗಂಟೆಯಲ್ಲಿ ನಾವು ಸರಿಯಾದ ಪರಿಪೂರ್ಣವಾದ ಸ್ಕ್ರಿಪ್ಟ್ ತೆಗೆದುಕೊಂಡು ಹೋಗದಿದ್ದರೆ, ನಮ್ಮ ಸಮಯವೂ ವ್ಯರ್ಥ ಅವರದೂ ವ್ಯರ್ಥವಾಗುತ್ತದೆ. ಕೆಲವೊಮ್ಮೆ ಹಸ್ತಾಕ್ಷರ ಗೊತ್ತಾಗುತ್ತಿರಲಿಲ್ಲ. ವಿಜ್ಞಾನದ ವಿಷಯಗಳೂ ಕ್ಲಿಷ್ಟವಿರುತ್ತಿದ್ದವು. ಪಕ್ಕದಲ್ಲಿ ಕುಳಿತು ಡಿಕ್ಟೇಟ್ ಮಾಡುತ್ತಿದ್ದೆವು.

ಸಂ : ನೀವು ವಿವಾಹವಾದ ವರ್ಷವೇ ಡಿಸೆಂಬರ್ 9ನೇ ತಾರೀಖು ಡಾಕ್ಟರಲ್ ಮಹಾಪ್ರಬಂಧವನ್ನು ಸಬ್‍ಮಿಟ್ ಮಾಡಿದ್ದಿರಿ; 20 ಡಿಸೆಂಬರ್ ನಿಮ್ಮ ಮಗ ಹುಟ್ಟಿದ್ದ! ತವರು ಮತ್ತು ಅತ್ತೆ ಮನೆಯ ಪ್ರೋತ್ಸಾಹ, ಸಹಕಾರದಿಂದ ನಿಮಗೆ ಮದುವೆ ಮತ್ತು ಮಕ್ಕಳು ಹೊರೆಯಾಗಲಿಲ್ಲ ಅಲ್ಲವೆ?

ಡಾ. ಸಾವಿತ್ರಿ: ಅದು ನಿಜ, ಇಬ್ಬರು ಮಕ್ಕಳು ಹುಟ್ಟಿದಾಗಲೂ, ಎರಡು ತಿಂಗಳ ಹೆರಿಗೆ ರಜೆ ಮುಗಿಸಿ ನಾನು ಸಂಶೋಧನೆಗೆ ಹಿಂತಿರುಗಿದ್ದೆ.

ಸಂ : ಅದಕ್ಕೆ ನಿಮ್ಮ ಮನೆಯವರ ಬೆಂಬಲ ಸಾಕಷ್ಟಿರಬೇಕು. ನಿಮ್ಮವರು ಮನೆಯಲ್ಲಿ ಸಹಕಾರ ನೀಡುತ್ತಿದ್ದರೆ?

ಡಾ. ಸಾವಿತ್ರಿ: ನನ್ನ ಅತ್ತೆ ಮಾವನವರು ಜೊತೆಯಲ್ಲಿಯೇ ಇದ್ದರು. ಅದರಿಂದ ತುಂಬಾ ಸಹಾಯವಾಯಿತು. ನಮ್ಮ ಅತ್ತೆಯವರಿಗೀಗ 92 ವರ್ಷ. ಇಂದು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು, ಇಬ್ಬರೂ ಮನೆಯ ಕೆಲಸ ಕಲಿತುಕೊಳ್ಳಬೇಕಿದೆ. ಕಾಲ ಬದಲಾಗಿದೆ. ಬರೀ ಹೆಣ್ಣು ಮಕ್ಕಳೇ ಮನೆಕೆಲಸ ಮಾಡಬೇಕು ಎಂದು ನಿರೀಕ್ಷಿಸುವುದು ಸರಿ ಅಲ್ಲ. ಹಿಂದಿನ ಸಂಪ್ರದಾಯದಲ್ಲಿ ಬೆಳೆದ ಗಂಡು ಮಕ್ಕಳು ‘ನಾನು ಕೆಲಸಕ್ಕೆ ಹೋಗ್ತಾ ಇದ್ದೀನಿ, ನಾನು ಮನೆಗೆಲಸ ಮಾಡೋಲ್ಲ’ ಅನ್ನುತ್ತಾರೆ. ಹೆಣ್ಣು ಮಕ್ಕಳೂ ಕೆಲಸಕ್ಕೆ ಹೋಗುತ್ತಿರುವುದರಿಂದ ಅವರೊಬ್ಬರ ಮೇಲೆ ಎಲ್ಲಾ ಮನೆಗೆಲಸ ಬಿದ್ದಾಗ, ಬಹಳಷ್ಟು ಬಾರಿ ಗಂಡ ಹೆಂಡತಿಯ ನಡುವಿನ ಬಿರುಕಿಗೆ ಇದೇ ಕಾರಣ ಆಗುತ್ತದೆ. ಇಂದು ಗಂಡ ಮಕ್ಕಳೂ ಮನೆಗೆಲಸ ಮಾಡಬೇಕು ಅನ್ನುವ ಮನೋಭಾವ ಬರುತ್ತಿರುವುದು ಒಳ್ಳೆಯದಾಗಿದೆ.

ಸಂ : ನಿಮ್ಮ ಕಾಲದಲ್ಲಿ ಅದನ್ನು ನಿರೀಕ್ಷಿಸುವಂತಿರಲಿಲ್ಲ.

ಡಾ.ಸಾವಿತ್ರಿ: ಹೌದು. ನಾನು ಮತ್ತು ನನ್ನ ಪತಿ ಇಬ್ಬರೂ, ಒಂದೇ ಬಗೆಯ ಜವಾಬ್ದಾರಿ ಹೊತ್ತ ಕೆಲಸಕ್ಕೆ ಹೋಗುತ್ತಿದ್ದರೂ, ಮನೆಯ ಜವಾಬ್ದಾರಿ ನನ್ನ ಮೇಲೆ ಬೀಳುತ್ತಿತ್ತು. ಮಾವನವರು ಹೊರಗಿನ ಸಾಮಾನು ತರುವರು, ಅತ್ತೆಯವರು ಅಡಿಗೆ ಮಾಡುತ್ತಿದ್ದರು. ಅವರ ಬೆಂಬಲ ನನಗಿತ್ತು. ಆದರೆ ಮನೆಗೆ ಅತಿಥಿಗಳು ಬಂದರು ಅಂದರೆ ಬಹಳಷ್ಟು ಕೆಲಸಗಳು ನನ್ನ ಮೇಲಿರುತ್ತಿದ್ದವು. ಇನ್ನೂ ಹಲವಾರು ಮನೆಗೆಲಸಗಳು ನನ್ನ ಮೇಲಿತ್ತು. ನಮ್ಮ ಪಿತೃಪ್ರಧಾನ ಸಮಾಜದಲ್ಲಿ ನಾವು ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದಾಗ, ಮಗಳು, ಹೆಂಡತಿ, ಸೊಸೆ, ತಾಯಿ ಈ ಎಲ್ಲ ಪಾತ್ರಗಳನ್ನು ವಹಿಸಬೇಕಾಗುತ್ತದೆ. ತಂದೆಯಾದವರ ಜವಾಬ್ದಾರಿ ಹೊರಗಡೆ ಕರೆದುಕೊಂಡು ಹೋಗೋದು, ಪಾಠ ಹೇಳಿಕೊಡೋದು. ಇನ್ನೇನಾದರೂ ನಾವು ಹೇಳಿದ ಕೆಲಸ ಮಾಡುವುದು, ಅಷ್ಟಕ್ಕೆ ಮುಗಿಯುತ್ತದೆ. ಅಂದರೆ ಅವರಾಗಿಯೇ ತೋಚಿಕೊಂಡು ಮಾಡೋದಲ್ಲ, ನಾವು ಹೇಳಿ ಮಾಡಿಸಬೇಕು (ನಗು).

ಸಂ : ಹೌದು, ಹೌದು ಹೇಳಿ ಹೇಳಿ ಮಾಡಿಸಬೇಕು. ಅದು ಅವರದೇ ಕೆಲಸ ಅಂತ ಬಗೆಯೋದಿಲ್ಲ, ನಮಗೇನೋ ಉಪಕಾರ ಮಾಡಿದ ಹಾಗೆ ಇರುತ್ತದೆ (ನಗು).

ಡಾ.ಸಾವಿತ್ರಿ: ಕೇಳಿ ಮಾಡಿಸಿಕೊಳ್ಳಬಹುದು. ನಮ್ಮ ಮನೆಯವರು ಯಾವತ್ತೂ ‘ಮಾಡೋಲ್ಲ’ ಅಂದಿಲ್ಲ. ಆದರೆ ಸ್ವಾಭಾವಿಕವಾಗಿಯೇ ಬರುವುದಿಲ್ಲ. ಹೇಳಿದರೆ ಮಾಡುತ್ತಾರೆ. ಹೇಳದಿದ್ದರೆ, ‘ನಾನು ಆರಾಮ ಕುಳಿತು ಪುಸ್ತಕ ಓದುತ್ತೇನೆ’ ಅನ್ನಬಹುದು.

ಸಂ : ಹೆಣ್ಣು ಮಕ್ಕಳಿಗೆ ಉದ್ಯೋಗ ಮಾಡಿ ಬಂದರೂ, ‘ನಾನು ಪುಸ್ತಕ ಹಿಡಿದು ಕೂರುತ್ತೇನೆ’ ಅನ್ನೋ ಸವಲತ್ತು ಸುಲಭವಾಗಿ ದಕ್ಕುವುದಿಲ್ಲ.

ಡಾ.ಸಾವಿತ್ರಿ: ಹೌದು, ಹೆಣ್ಣು ಮಕ್ಕಳಿಗೆ ಹಾಗೆ ಮಾಡಲು ಆಗುವುದಿಲ್ಲ. ಆದರೆ ನಾವು ಸ್ಪರ್ಧೆಗೆ ಇಳಿದು ‘ನಾವೂ ಅವರಂತೆಯೇ ಮಾಡುತ್ತೇವೆ’ ಎಂದು ಹೊರಟರೆ, ಕೌಟುಂಬಿಕ ಸಂಬಂಧಗಳು ಉಳಿಯುವುದಿಲ್ಲ. ನಾವು ನಮ್ಮ ರೋಲ್ಸ್ ಅರ್ಥ ಮಾಡಿಕೊಂಡು ಮಾಡಲೇ ಬೇಕಾಗುತ್ತದೆ.

ಸಂ : ಇದು ಒಂದು ರೀತಿ ಹೆಣ್ಣು ಮಕ್ಕಳು ಮಾಡುತ್ತಿರುವ ತ್ಯಾಗ ಅನಿಸಿತ್ತೆ?

ಡಾ. ಸಾವಿತ್ರಿ: ಇಲ್ಲ, ಇದು ನನ್ನ ಜವಾಬ್ದಾರಿ ಅನಿಸಿತು. ನನ್ನೆಲ್ಲ ಪಾತ್ರಗಳನ್ನು ನಾನು ಸರಿಯಾಗಿ ನಿರ್ವಹಿಸಬೇಕು, ನನ್ನ ವಿಜ್ಞಾನಿಯ ಪಾತ್ರವನ್ನು, ಹೆಂಡತಿಯ ಪಾತ್ರವನ್ನು, ಮಗಳು, ಸೊಸೆ, ತಾಯಿಯ ಪಾತ್ರಗಳನ್ನು…

ಸಂ : ಅಂದರೆ, ಹೆಣ್ಣು ಮಕ್ಕಳು ‘ಸೂಪರ್ ವುಮನ್’ ಆಗಬೇಕು ಎಂದು ನಿಮ್ಮ ಅಭಿಪ್ರಾಯವೆ?

ಡಾ.ಸಾವಿತ್ರಿ: ಹೆಣ್ಣು ಮಕ್ಕಳಿಗೆ ಸ್ವಾಭಾವಿಕವಾಗಿ ‘ಮಲ್ಟಿಟಾಸ್ಕಿಂಗ್’ ಬಂದಿದೆ. ಹಲವು ಕೆಲಸಗಳನ್ನು ಒಟ್ಟಿಗೇ ಆಕೆ ಮಾಡಬಲ್ಲಳು. ಒಂದು ವೈಜ್ಞಾನಿಕ ಲೇಖನದಲ್ಲಿ ಹೆಣ್ಣು ಮತ್ತು ಗಂಡುಗಳ ಮಿದುಳಿನ ‘ನ್ಯೂರೋನಲ್ ನೆಟ್‍ವರ್ಕ್’ ಅನ್ನು ಅನಲೈಸ್ ಮಾಡಿದ್ದರು. ನಮಗೆ ಹೆಣ್ಣು ಮಕ್ಕಳಿಗೆ ಇದೂ ಮಾಡುವುದು, ಅದೂ ಮಾಡುವುದು ಸ್ವಾಭಾವಿಕವಾಗಿ ಬರುತ್ತದೆ. ನಮಗೆ ಕಷ್ಟವೇ ಆಗುವುದಿಲ್ಲ.

ಸಂ : ಈ ಮಾತನ್ನು ಹೇಳಿ ಮನೆಯ ಕೆಲಸವನ್ನು ಹೇರುವುದು ನೋಡಿದ್ದೇನೆ. ಆದರೆ ಅದೇ ಆಕೆಯ ಮಲ್ಟಿಟಾಸ್ಕಿಂಗ್ ಸಾಮಥ್ರ್ಯವನ್ನು ಗುರುತಿಸಿ ಉದ್ಯೋಗದ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಹುದ್ದೆಯನ್ನು, ಹೆಚ್ಚಿನ ಜವಾಬ್ದಾರಿಯನ್ನು, ಬಡ್ತಿಯನ್ನು ನೀಡುವುದು ನೋಡಿಲ್ಲ. ಆದರೆ ನೀವು ಹೇಳುವುದು ನಿಜ, ಎಡ ಮತ್ತು ಬಲ ಮಿದುಲುಗಳ ನಡುವಿನ ಜೋಡಣೆ ಹೆಣ್ಣು ಮಕ್ಕಳಲ್ಲಿ ಹೆಚ್ಚಿದೆ ಎನ್ನುತ್ತಾರೆ. ಆದರೆ ಹೆಣ್ಣು ಮಕ್ಕಳನ್ನು ‘ಸೂಪರ್ ವುಮನ್’ ಆಗಿ ನಿರೀಕ್ಷಿಸುತ್ತಿದ್ದಾರೆ. ಮೊದಲು ಹೆಣ್ಣು ಮಕ್ಕಳು ಮನೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದರು, ಪುರುಷರು ಹೊರಗಿನ ಕೆಲಸ ಮಾಡುತ್ತಿದ್ದರು. ಅವರಿಬ್ಬರ ಕಾರ್ಯರಂಗ ಬೇರೆ ಬೇರೆಯಾಗಿತ್ತು. ಈಗ ಹೆಣ್ಣು ಮಕ್ಕಳು ಹೊರಗಿನ ಕೆಲಸವನ್ನು ಮಾಡುತ್ತಾರೆ. ಆದರೆ ಆತ ಮನೆಯ ಕೆಲಸ ಮಾಡಲು ಸಿದ್ಧ ಇರುವುದಿಲ್ಲ. ನಿಮ್ಮ ಪೀಳಿಗೆಯ ಹೆಣ್ಣುಮಕ್ಕಳು, ನಾನು ನಿಮಗಿಂತ 8 ವರ್ಷಕ್ಕಷ್ಟೆ ಚಿಕ್ಕವಳು; ಹಾಗಾಗಿ ನನ್ನ ಪೀಳಿಗೆಯ ಹೆಣ್ಣು ಮಕ್ಕಳು ಕೂಡಾ, ಹೊರಗೂ, ಒಳಗೂ ದುಡಿದು ದಣಿದರು. ಆದರೆ ಇಂದಿನ ಹೆಣ್ಣು ಮಕ್ಕಳು ಸಮಾನತೆಯ ಸಮಾಜವನ್ನು ಬೇಡುತ್ತಾರೆ. ತಾನು ಹೊರಗಿನದನ್ನು ಕಲಿತು ಮಾಡುವಾಗ, ಆತ ಒಳಗಿನದನ್ನು ಕಲಿತು ಮಾಡಲಾರ ಏಕೆ ಎಂದು ಪ್ರಶ್ನಿಸುವುದು ನ್ಯಾಯವಿದೆಯಲ್ಲವೆ?

ಡಾ.ಸಾವಿತ್ರಿ: ಅದು ನಿಧಾನವಾಗಿ ಪರಿವರ್ತನೆ ಆಗಬೇಕಿದೆ. ಸ್ಪರ್ಧೆಗಿಳಿದರೆ ಆಗುವುದಿಲ್ಲ. ಪ್ರೀತಿಯಿಂದ ಬದಲಾವಣೆ ಮೂಡುವಂತೆ ಮಾಡಬೇಕು.

ಸಂ : ಇದು ನಾವು ಗಂಡುಮಕ್ಕಳನ್ನು ಬೆಳೆಸುವ ರೀತಿಯಿಂದಲೇ ಆರಂಭ ಆಗಬೇಕಲ್ಲವೆ?

ಡಾ. ಸಾವಿತ್ರಿ: ಖಂಡಿತಾ. ಗಂಡು ಮಕ್ಕಳು ಹೆಣ್ಣು ಮಕ್ಕಳು ಇಬ್ಬರಿಗೂ, ತಾಯಿ ತಂದೆಯರು ಮನೆಗೆಲಸ ಅಭ್ಯಾಸ ಆಗುವ ಹಾಗೆ ಬೆಳೆಸಬೇಕು. ಅವು ‘ಲೈಫ್ ಸ್ಕಿಲ್’ ಎಂದು ಕಲಿಸಬೇಕು. ಅದನ್ನ ಮೊದಲಿನಿಂದಲೇ ಕಲಿಸಬೇಕು. ಇಲ್ಲದಿದ್ದರೆ ನಂತರ ಸಮಸ್ಯೆಯಾಗುತ್ತೆ ದೊಡ್ಡವರಾದ ಮೇಲೆ, ಗಂಡು ಮಕ್ಕಳಿಗೆ ಮದುವೆಯಾದ ಮೇಲೆ. ಆಗ ಕಲಿತುಕೊಳ್ಳೋದು ಕಷ್ಟ ಆಗುತ್ತೆ. ಹಾಗೊಮ್ಮೆ ಅವರು ಕಲಿತುಕೊಂಡಿಲ್ಲ ಅಂದರೆ, ಮದುವೆಯಾದ ಹೆಣ್ಣು ಮಕ್ಕಳು ಅವರ ಪ್ರೊಫೆಷನ್ ಗೋಲ್ ಅನ್ನು ಸಾಧಿಸಬೇಕು ಎಂದಿದ್ದರೆ, ಯಾವುದಾದರೂ ಪರ್ಯಾಯವನ್ನು ಕಂಡುಕೊಳ್ಳಬೇಕಿದೆ. ಮಕ್ಕಳನ್ನು ನೋಡಿಕೊಳ್ಳಲು ನ್ಯಾನಿ, ಬೇಬಿ ಸಿಟ್ಟರ್, ಡೇ ಕೇರ್ ಸೆಂಟರ್; ಅಡಿಗೆ ಮಾಡಲು, ಮನೆಯ ಆದಷ್ಟು ಕೆಲಸಗಳನ್ನು ಮಾಡಲು ಓರ್ವ ಸಹಾಯಕಿ. ಮೊದಲೆಲ್ಲ ಅತ್ತೆ ಮಾವನವರು ಇರುತ್ತಾ ಇದ್ದರು. ಅವರು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾ ಇದ್ದರು, ಮನೆಯ ಎಷ್ಟೋ ಕೆಲಸಗಳು ಸಲೀಸಾಗಿ ನಡೆದು ಹೋಗುತ್ತಿದ್ದವು. ನಮಗೂ ಸಹನೆ ಇತ್ತು. ಅತ್ತೆ ಮಾವ ಹೇಗೆ ನೋಡಿಕೊಂಡರೂ ಪರವಾಗಿಲ್ಲ ಎಂದು. ನಮ್ಮ ಮಕ್ಕಳು ಸುರಕ್ಷಿತವಾಗಿ ಅಜ್ಜ ಅಜ್ಜಿಯ ಜೊತೆ ಇದ್ದಾರೆ ಎಂಬುದೇ ಸಮಾಧಾನದ ವಿಷಯವಾಗಿತ್ತು. ಈಗಿನ ತಂದೆ ತಾಯಿಯರಿಗೆ, ತಮ್ಮ ಮಕ್ಕಳು ಅವರದೇ ವಿಧಾನಗಳಲ್ಲಿ ಬೆಳೆಯಬೇಕು ಎಂಬ ಅಭಿಲಾಶೆ ಇರುತ್ತದೆ. ಅದಕ್ಕೂ, ಅಜ್ಜ ಅಜ್ಜಿ ಬೆಳೆಸುವ ವಿಧಾನಕ್ಕೂ ವ್ಯತ್ಯಾಸಗಳಿರುತ್ತದೆ. ಜೊತೆಗೆ ಅತ್ತೆ ಮಾವ ಜೊತೆಯಲ್ಲಿ ಇಲ್ಲದಿರಬಹುದು, ಬೇರೆ ಊರಿನಲ್ಲಿರಬಹುದು. ಇಂತಹ ಸ್ಥಿತಿಯಲ್ಲಿ ಹೆಣ್ಣು ತನ್ನ ಉದ್ಯೋಗದಲ್ಲಿ ಬಲವಾಗಿ ಮುಂದಕ್ಕೆ ಹೋಗಬೇಕು ಎಂದು ಬಯಸಿದರೆ, ಪರ್ಯಾಯವನ್ನು ಕಂಡುಕೊಳ್ಳಬೇಕು.

ಸಂ : ನಿಮ್ಮ ಅತ್ತೆಯವರಿಗೆ ನೀವು ಸಂಶೋಧನೆ ಮಾಡುತ್ತಾ ಇರುವುದರ ಬಗ್ಗೆ ಗೌರವ ಇತ್ತ್ತೆ? ಪ್ರೋತ್ಸಾಹ ನೀಡುತ್ತಿದ್ದರೆ?

ಡಾ.ಸಾವಿತ್ರಿ: ತುಂಬಾನೇ ಇತ್ತು. ತುಂಬಾನೇ ಪ್ರೋತ್ಸಾಹ ಕೊಟ್ಟರು. ಇಬ್ಬರಿಗೂ ತುಂಬಾ ಹೆಮ್ಮೆ ಇತ್ತು. ನನಗೂ ನನ್ನ ಪತಿಗೂ ನಾವು ಇನ್‍ಸ್ಟಿಟ್ಯೂಟ್‍ಗೆ ಹೋಗುವಾಗ ಅವರೇ ಊಟ ಕಟ್ಟಿಕೊಡುತ್ತಿದ್ದರು. ನನ್ನ ತಂದೆ ತಾಯಿಯರ ಬೆಂಬಲ ಕೂಡಾ ನನ್ನ ಬೆನ್ನಿಗೆ ಯಾವಾಗಲೂ ಇತ್ತು. ನನ್ನ ಬದುಕಿನ ಎಲ್ಲ ಹಂತದಲ್ಲಿ ಅವರು ನನಗೆ ಎಲ್ಲಿಲ್ಲದ ಬೆಂಬಲ ಕೊಟ್ಟಿದ್ದಾರೆ.

ಸಂ : ನಿಮ್ಮ ತಂಗಿ ಏನು ಓದಿದರು?

ಡಾ.ಸಾವಿತ್ರಿ: ಆಕೆ ಸ್ಟಾಟಿಸ್ಟಿಕ್ಸ್‍ನಲ್ಲಿ ಎಂ.ಎಸ್ಸಿ ಮಾಡಿ ಪಿ.ಎಚ್.ಡಿ ಮಾಡಿ ಈಗ ಅಮೆರಿಕದಲ್ಲಿ ಇದ್ದಾಳೆ.

ಸಂ : ಮೇಡಂ, ಇಬ್ಬರು ಹೆಣ್ಣು ಮಕ್ಕಳು ಎಂ.ಬಿ.ಬಿ.ಎಸ್, ಎಂ.ಡಿ. ಇನ್ನಿಬ್ಬರು ಪಿ.ಎಚ್.ಡಿ! ನಿಮ್ಮ ತಾಯಿ ತಂದೆಯರಿಗೆ ದೊಡ್ಡ ಸಲ್ಯೂಟ್ ಮಾಡಬೇಕು; ಅಷ್ಟೇ ಛಲ ಹಿಡಿದು ಓದಿದ ಮಕ್ಕಳಿಗೂ. ಮೇಡಂ, ಇಸವಿ 1977ರಲ್ಲಿ ನಿಮಗೂ ನಿಮ್ಮ ಪತಿಗೂ ಪಿ.ಎಚ್.ಡಿ. ಪದವಿ ದೊರೆಯಿತು. ಅದೇ ವರ್ಷ ನೀವಿಬ್ಬರೂ ಅಮೆರಿಕದ ‘ಪಡ್ರ್ಯೂ ವಿಶ್ವವಿದ್ಯಾಲಯ’ದಲ್ಲಿ ನಾಲ್ಕು ವರ್ಷಗಳ ‘ಪೋಸ್ಟ್ ಡಾಕ್ಟರಲ್’ ಸಂಶೋಧನೆ ಮಾಡಲು ತೆರಳಿದಿರಿ. ಅಲ್ಲಿ ನೀವು ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರೊ. ಎ. ಲೈಟ್ ಅವರೊಡನೆ ‘ಪ್ರೋಟೀನ್ ಕೆಮಿಸ್ಟ್ರಿ’ ಮತ್ತು ಪ್ರೊ. ಮೈಖಲ್ ರಾಸ್‍ಮನ್ ಅವರೊಡನೆ ‘ಸಸ್ಯಗಳ ವೈರಾಲಜಿ’ಯನ್ನು ಕುರಿತು ಸಂಶೋಧನೆ ನಡೆಸಿ, ಈ ಕ್ಷೇತ್ರದಲ್ಲಿ ತಜ್ಞತೆಯನ್ನು ಗಳಿಸಿ, 1981ರಲ್ಲಿ ಐ.ಐ.ಎಸ್ಸಿಯ ಅದೇ ಬಯೋಕೆಮಿಸ್ಟ್ರಿ ವಿಭಾಗಕ್ಕೆ ಬಂದು ಸೇರಿದಿರಿ. ನೀವು ಯಾವ ಹುದ್ದೆಗೆ ಬಂದು ಸೇರಿದಿರಿ?

ಡಾ.ಸಾವಿತ್ರಿ: ಹೊರಗಡೆ ದೇಶದಿಂದ ಬರುವವರಿಗೆ ಸಿ.ಎಸ್.ಐ.ಆರ್.ನವರು ‘ಪೂಲ್ ಆಫೀಸರ್’ ಎಂಬ ಸ್ಥಾನಕ್ಕೆ ಕರೆದಿದ್ದರು. ಅದಕ್ಕೆ ಅರ್ಜಿ ಹಾಕಿಕೊಂಡೆ, ನನಗೆ ಸಿಕ್ಕಿತು. ನಾನು ನನ್ನ ಪಿ.ಎಚ್.ಡಿ ಗೈಡ್ ಪ್ರೊ. ಅಪ್ಪಾಜಿ ರಾವ್ ಅವರಿಗೆ ಬರೆದಿದ್ದೆ, ‘ನಾವು ಭಾರತಕ್ಕೆ ಹಿಂತಿರುಗಬೇಕು ಅಂತ ಇದ್ದೀವಿ. ನಿಮ್ಮ ಜೊತೆಗೆ ಕೆಲಸ ಮಾಡಬಹುದಾ?’ ಎಂದು ಕೇಳಿದ್ದೆ. ಅವರು ತಕ್ಷಣ ಒಪ್ಪಿದ್ದರು. ಹಾಗಾಗಿ ನಾನು ಸಿ.ಎಸ್.ಐ.ಆರ್. ಪೂಲ್ ಆಫೀಸರ್ ಆಗಿ ಅದೇ ಬಯೋಕೆಮಿಸ್ಟ್ರಿ ವಿಭಾಗವನ್ನು ಪ್ರೊ. ಅಪ್ಪಾಜಿ ರಾವ್‍ರೊಡನೆ ಸೇರಿದೆ.

ಸಂ : ನಿಮ್ಮ ಪತಿ?

ಡಾ.ಸಾವಿತ್ರಿ: ಅವರು ಭೌತಶಾಸ್ತ್ರ ವಿಭಾಗದಲ್ಲಿ ಬಂದು ಸೇರಿದರು.

ಸಂ : ಅವರೂ ಸಿ.ಎಸ್.ಐ.ಆರ್. ಪೂಲ್ ಆಫೀಸರ್ ಆಗಿ ಸೇರಿದರೆ?

ಡಾ. ಸಾವಿತ್ರಿ: ಇಲ್ಲ, ಟಾಟಾ ಇನ್‍ಸ್ಟಿಟ್ಯೂಟ್‍ನವರೇ ಸೀನಿಯರ್ ರಿಸರ್ಚ್ ಫೆಲೋ ಅಂತ ಪೊಸಿಷನ್ ಇತ್ತು ಅದನ್ನು ಕೊಟ್ಟರು, ಮುಂದೆ ಅವರನ್ನು ಫ್ಯಾಕಲ್ಟಿ ಆಗಿ ತೆಗೆದುಕೊಳ್ಳುವ ಉದ್ದೇಶದಿಂದ. ಅವರು ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಿ ಆರ್ಗಾನಿಕ್ ಕೆಮಿಸ್ಟ್ರಿಯಲ್ಲಿ ಕ್ರಿಸ್ಟಲಾಗ್ರಫಿಯಲ್ಲಿ ಪಿಎಚ್.ಡಿ. ಮಾಡಿದ್ದರು.

ಸಂ : ಅವರದು ಅಂತರ್‍ಶಿಸ್ತೀಯ ವಿಷಯದ ಸಂಶೋಧನೆಯಾಗಿತ್ತು.

ಡಾ.ಸಾವಿತ್ರಿ: ಹೌದು. ಅಲ್ಲಿ ಪರ್ಡೂನಲ್ಲಿ ಮ್ಯಾಕ್ರೊ ಮಾಲಿಕ್ಯುಲಾರ್ ಕ್ರಿಸ್ಟಲಾಗ್ರಫಿ ಮಾಡಿದರು. ಹಾಗಾಗಿ ಅವರದು ಬಯಾಲಜಿ, ಫಿಸಿಕ್ಸ್ ಎರಡೂ ಆಗಿತ್ತು. ಆಗ ಪ್ರೊ. ರಾಮಸೇಶನ್ ಐಐಎಸ್ಸಿಯ ನಿರ್ದೇಶಕರಾಗಿದ್ದರು. ಅವರು ಭೌತವಿಜ್ಞಾನಿ, ಅವರೂ ಕೂಡಾ ಕ್ರಿಸ್ಟಲಾಗ್ರಫಿಯಲ್ಲಿ ಕೆಲಸ ಮಾಡಿದವರು. ಹಾಗಾಗಿ ಮೂರ್ತಿ ಅವರನ್ನು ನಿರ್ದೇಶಕರು ಫಿಸಿಕ್ಸ್ ಡಿಪಾರ್ಟ್‍ಮೆಂಟಿನಲ್ಲಿ ಹಾಕಿದರು. ತಮ್ಮ ಸಂಶೋಧನೆಗೆ ‘ವೈರಸ್ ಮತ್ತು ಪ್ರೋಟೀನ್ಸ್ ಶುದ್ಧೀಕರಿಸುವ ಸಲಕರಣೆಗಳು ಬೇಕು’ ಎಂದು ಕೇಳಿದಾಗ, ಅವರನ್ನು ‘ಮಾಲಿಕ್ಯುಲರ್ ಬಯೋಫಿಸಿಕ್ಸ್’ ವಿಭಾಗಕ್ಕೆ ವರ್ಗಾಯಿಸಿದರು. ಅಲ್ಲಿಯೂ ಸ್ವಲ್ಪ ವರ್ಷ ತಾತ್ಕಾಲಿಕವಾಗಿಯೇ ಮುಂದುವರೆದರು. ಆಮೇಲೆ ಎರಡೂವರೆ-ಮೂರು ವರ್ಷದ ನಂತರ ಅವರಿಗೆ ಫ್ಯಾಕಲ್ಟಿ ಪೊಸಿಷನ್ ಸಿಕ್ಕಿತು.

ಸಂ : ನೀವು ಪೂಲ್ ಆಫೀಸರ್ ಆಗಿ ಎಷ್ಟು ವರ್ಷ ಇರಬೇಕಾಯಿತು, ಫ್ಯಾಕಲ್ಟಿ ಆಗುವ ಮೊದಲು?

ಡಾ.ಸಾವಿತ್ರಿ: ನಾನು ಮೂರು ವರ್ಷ ಸಿ.ಎಸ್.ಐ.ಆರ್. ಪೂಲ್ ಆಫೀಸರ್ ಆಗಿ ಇದ್ದೆ. ನಂತರ ಐದು ವರ್ಷ ಯು.ಜಿ.ಸಿ. ರಿಸರ್ಚ್ ಸೈಂಟಿಸ್ಟ್ ಸ್ಥಾನಕ್ಕೆ ಜಾಹಿರಾತು ಬಂದಿತ್ತು. ಅದಕ್ಕೆ ಸೇರಿಕೊಂಡೆ. ಅದು 5 ವರ್ಷದ ಕಾಂಟ್ರಾಕ್ಟ್. ಈ ಯುಜಿಸಿ ರಿಸರ್ಚ್ ಸೈಂಟಿಸ್ಟ್ ಸ್ಥಾನದಲ್ಲಿ ನಾಲ್ಕು ವರ್ಷ ಕೆಲಸ ಮಾಡಿದೆ.

ಸಂ : ಅಂದರೆ ನೀವು ಪ್ರತಿಷ್ಠಿತ ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ಸಸ್ಯ ವೈರಾಲಜಿಯಂತಹ ಮುಂಚೂಣಿಯ ವಿಷಯದಲ್ಲಿ ತಜ್ಞತೆ ಪಡೆದು ಬಂದರೂ, ಫ್ಯಾಕಲ್ಟಿ ಸ್ಥಾನಕ್ಕೆ ಬರಲು ಏಳೆಂಟು ವರ್ಷಗಳೇ ಹಿಡಿಸಿದವು. ಇದಕ್ಕೆ ನೀವು ಮಹಿಳೆ ಎಂಬ ಪೂರ್ವಾಗ್ರಹ 1980ರ ದಶಕದಲ್ಲಿಯೂ ಕೆಲಸ ಮಾಡುತ್ತಿತ್ತು ಅನಿಸುವುದಿಲ್ಲವೆ?

ಡಾ.ಸಾವಿತ್ರಿ: ಸ್ವಲ್ಪ ಮಟ್ಟಿಗೆ ಇದ್ದೇ ಇರುತ್ತೆ. ಜೊತೆಗೆ ನನ್ನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ನಾನು ಸೇರಿಕೊಳ್ಳುವ ಮೊದಲು 20 ಜನ ಫ್ಯಾಕಲ್ಟಿ ಇದ್ದರು. ಅವರೆಲ್ಲ ಪುರುಷರೆ, ಯಾರೂ ಹೆಣ್ಣುಮಕ್ಕಳು ಫ್ಯಾಕಲ್ಟಿ ಆಗಿರಲಿಲ್ಲ.

ಸಂ : 20 ಜನ ಫ್ಯಾಕಲ್ಟಿ? ಅಷ್ಟೂ ಜನ ಪುರುಷರು?

ಡಾ.ಸಾವಿತ್ರಿ: ಹೌದು, ಪುರುಷರು.

ಸಂ : ಒಬ್ಬರೇ ಒಬ್ಬರೂ ಮಹಿಳೆಯರು ಇರಲಿಲ್ಲ ಎಂದರೆ ಅಚ್ಚರಿ ಅಲ್ಲವೆ? ಅದರಲ್ಲೂ ಬಯೋಕೆಮಿಸ್ಟ್ರಿಗೆ ಸಾಕಷ್ಟು ಜನ ಹೆಣ್ಣುಮಕ್ಕಳು ಪ್ರವೇಶ ಪಡೆಯುತ್ತಾರೆ.

ಡಾ.ಸಾವಿತ್ರಿ: ನಾನು ಸೇರಿಕೊಂಡ ವರ್ಷವೇ ನಾಲ್ಕು ಜನ ಮಹಿಳೆಯರು ಸೇರಿಕೊಂಡಿದ್ದರು.

ಸಂ : ಪಿಎಚ್.ಡಿ. ಮಾಡಲು ಅಷ್ಟು ಮಹಿಳೆಯರು ಈ ವಿಭಾಗ ಸೇರಿಕೊಂಡಿದ್ದಾರೆ. ಆದರೂ, ಒಬ್ಬರೇ ಒಬ್ಬರು ಮಹಿಳಾ ಫ್ಯಾಕಲ್ಟಿ ಇಲ್ಲ ಅಂದರೆ, ಲಿಂಗ ತಾರತಮ್ಯ ಸಿ.ವಿ. ರಾಮನ್ ಅವರ ಕಾಲಕ್ಕೆ ಮುಗಿಯಲಿಲ್ಲ ಅಂತ ಸ್ಪಷ್ಟವಾಗುತ್ತದೆ.

ಡಾ.ಸಾವಿತ್ರಿ: ನಿಜ, ಇಟ್ ವಾಸ್ ಪ್ರಿವೆಲೆಂಟ್.

ಸಂ : ಇದನ್ನು ಎಲ್ಲ ರಂಗದಲ್ಲಿಯೂ ನೋಡುತ್ತೇವೆ. ನಮ್ಮ ಇಂಜಿನಿಯರಿಂಗ್ ರಂಗದಲ್ಲಿ, ನಮಗಿಂತ ಮೊದಲೇ ಇಂಜಿನಿಯರ್ ಆಗಿ ಸೇರಿದ ಮಹಿಳೆಯರಿದ್ದರು. 1940ರಲ್ಲಿ ಆರಂಭವಾದ ನಮ್ಮ ವಿಮಾನ ಕಾರ್ಖಾನೆಯಲ್ಲಿ, ನಾವು ಇಬ್ಬರು ಮಹಿಳೆಯರು ಜಿ.ಎಮ್. ಹುದ್ದೆಗೆ ಏರಲು, ಏಳು ದಶಕಗಳು ಬೇಕಾಯಿತು. ಎಲ್ಲ ರಂಗದಲ್ಲಿಯೂ ಉದ್ಯೋಗಸ್ಥ ಮಹಿಳೆಯರಿಗೆ ಮೇಲೆ ಏರುವಲ್ಲಿ ಲಿಂಗ ತಾರತಮ್ಯದ ಮನೋಭಾವ ಅತಿ ಸೂಕ್ಷ್ಮವಾಗಿ, ಕೆಲವೊಮ್ಮೆ ತೀರಾ ನೇರವಾಗಿಯೇ ಅನುಭವಕ್ಕೆ ಬರುತ್ತದೆ.

ಡಾ.ಸಾವಿತ್ರಿ: ನಮ್ಮ ಬಯೋಕೆಮಿಸ್ಟ್ರಿ ಡಿಪಾರ್ಟ್‍ಮೆಂಟಿನಲ್ಲಿ, 1989ರಲ್ಲಿ ಸೇರಿದ ನಾನೇ, ಮೊಟ್ಟ ಮೊದಲ ಮಹಿಳಾ ಫ್ಯಾಕಲ್ಟಿ. ಮತ್ತೆ ನಾನೇ ಸಹಜವಾಗಿ ಮೊಟ್ಟ ಮೊದಲ ಮಹಿಳಾ ಛೇರ್‍ಮನ್ ಆದೆ ಬಯೋಕೆಮಿಸ್ಟ್ರಿ ವಿಭಾಗಕ್ಕೆ. ಛೇರ್‍ಮನ್ ಸ್ಥಾನ ಹಿರಿಯ ಪ್ರಾಧ್ಯಾಪಕರಿಗೆ ರೊಟೇಶನ್ ಮೇಲೆ ಬರುತ್ತದೆ.

ಸಂ : ಮಹಿಳಾ ಫ್ಯಾಕಲ್ಟಿಯೇ ಇಲ್ಲದಿದ್ದರೆ, ಮಹಿಳಾ ಛೇರ್‍ಮನ್ ಬರಲು ಎಲ್ಲಿ ಸಾಧ್ಯ?

ಡಾ.ಸಾವಿತ್ರಿ: ನಮ್ಮ ವಿಭಾಗದ ನೂರು ವರ್ಷಗಳ ಇತಿಹಾಸದಲ್ಲಿ ನಾನೊಬ್ಬಳೇ ಮಹಿಳಾ ಛೇರ್ಮನ್.

ಸಂ : ಅದೇ ತುಂಬಾ ಶೋಚನೀಯ ವಿಷಯ ಅಲ್ಲವೆ? ನೂರು ವರ್ಷ ಇತಿಹಾಸ ಇರುವ ವಿಭಾಗದಲ್ಲಿ ಒಬ್ಬರೇ ಒಬ್ಬ ಮಹಿಳಾ ಛೇರ್ಮನ್! ಇನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ 113 ವರ್ಷಗಳ ಇತಿಹಾಸ ಇದೆ. ನೀವು ಒಬ್ಬೊಬ್ಬರೇ ಮಹಿಳೆಯರು ಇದ್ದಾಗ, ಹೋರಾಡುವುದೂ ಕಷ್ಟ, ನಿಮ್ಮ ದನಿ ಇತರರಿಗೆ ಕೇಳುವುದೂ ಕಡಿಮೆ. ಪರಿವರ್ತನೆಗೆ ಮಹಿಳೆಯರ ಒಂದಿಷ್ಟು ಸಂಖ್ಯೆ ಬೇಕು, ಕ್ರಿಟಿಕಲ್ ಮಾಸ್.

ಡಾ.ಸಾವಿತ್ರಿ: ನಿಜ, ತುಂಬಾನೇ ಕಷ್ಟ ಆಗಿತ್ತು ಆಗ. ಹೆಣ್ಣು ಮಕ್ಕಳು ಹ್ಯಾವ್ ಟು ಫೈಟ್ ದಿ ಆಡ್ಸ್. ಎಲ್ಲ ಅಡೆತಡೆಗಳನ್ನು ದಾಟಿ ಹೋರಾಡಬೇಕು. ನಾನು ಸೇರಿಕೊಂಡಾಗ, ಫ್ಯಾಕಲ್ಟಿ ಸ್ಥಾನಕ್ಕೆ ಅರ್ಜಿ ಹಾಕಿದಾಗ, ವಿಭಾಗದವರೇ ಮೊದಲು ಸ್ಕ್ರೀನ್ ಮಾಡುತ್ತಾರೆ. ‘ಏಕೆ ಈ ಅರ್ಜಿನ ಮುಂದಕ್ಕೆ External Committeeಗೆ ಫಾರ್ವಡ್ ಮಾಡಬೇಕು?’ ಎಂದು ಎಷ್ಟೋ ಜನರ ವಿರೋಧ ಇತ್ತು. ಪ್ರೊ. ಅಪ್ಪಾಜಿ ರಾವ್ ಅವರು ಇದ್ದ ಕಾರಣ ಅವರು ವಾದಿಸಿ, ಮುಂದೆ ‘External Committee’ ಏನು ಮಾಡುತ್ತದೆ ಗೊತ್ತಿಲ್ಲ, ಆದರೆ ನಮ್ಮ ವಿಭಾಗದಿಂದ ಈ ಅರ್ಜಿಯನ್ನು ತೆಗೆದು ಹಾಕಬಾರದು ಎಂದರು.

ಸಂ : ಅವರು ನಿಮ್ಮ ಪ್ರತಿಭೆ, ಸಾಮಥ್ರ್ಯ ಬಲ್ಲವರಿದ್ದರು. ಅಂತಹ ಸಮಾನ ಅವಕಾಶ ಕೊಡಲು ಬಯಸಿದ ಪ್ರೊಫೆಸರ್ ಇದ್ದರೂ ಕೂಡಾ, ನಿಮಗೆ ಫ್ಯಾಕಲ್ಟಿ ಸ್ಥಾನ ಸಿಗಲು ಏಳು ವರ್ಷ ಕಾಯಬೇಕಾಯಿತು. ಮೇಡಂ, ವಿದೇಶದಿಂದ ಇಲ್ಲಿಗೆ ಬಂದು ಸಂಶೋಧನೆಗೆ ತೊಡಗಿದಾಗ ನಿಮಗೆ ಎದುರಾದ ಇತರ ಸವಾಲುಗಳೇನು?

ಡಾ.ಸಾವಿತ್ರಿ: ನಾವು ಹೊರಗೆ ವಿದೇಶದಲ್ಲಿ ಸಂಶೋಧನೆ ಮಾಡಿ ಬಂದಾಗ, ಇಲ್ಲಿ ಅದೇ ಲೆವೆಲ್‍ನ ಸಂಶೋಧನೆ ಮುಂದುವರೆಸಲು ಕಷ್ಟವಾಗುತ್ತಿತ್ತು. ಕಾರಣ ನಮ್ಮ ಪ್ರಯೋಗಶಾಲೆಗಳು, ಸಲಕರಣೆಗಳು, ತಾಂತ್ರಿಕ ಅನುಕೂಲಗಳು ಸುಮಾರು 20-30 ವರ್ಷದಷ್ಟು ಆಗ ಹಿಂದಿತ್ತು. ಈಗ ಆ ಅಂತರ ಇಲ್ಲ. ಹಾಗಾಗಿ ನಾವು ತುಂಬಾ ಕಷ್ಟದಿಂದ ನಮ್ಮದೇ ಹೊಸ ವಿಧಾನಗಳನ್ನು ಕಂಡುಕೊಂಡು ತಾಂತ್ರಿಕ ಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತಿತ್ತು. ಹಾಗಿದ್ದರೂ ಚೆನ್ನಾಗಿಯೇ ನಾವು ಸಂಶೋಧನಾ ಪೇಪರ್ಸ್ ಪ್ರಕಟಿಸಿದೆವು.

ಸಂ : ಹಾಗೆಂದೇ ನಿಮಗೆ ಮೊದಲ ಆದ್ಯತೆ ಸಿಗಬೇಕಿತ್ತಲ್ಲವೆ?

ಡಾ. ಸಾವಿತ್ರಿ: ಕೆಲವು ಸಂಶೋಧನಾ ಕ್ಷೇತ್ರಗಳನ್ನು, ಕೆಲವರು ಪ್ರಿಫರ್ ಮಾಡಬಹುದು, ಬೆಂಬಲಿಸಬಹುದು. ಮಹಿಳೆ ಅನ್ನುವುದೇ ಅಲ್ಲದೆ, ಬೇರೆ ಕಾರಣಗಳೂ ಇರುತ್ತವೆ.

ಸಂ : ಮೇಡಂ, 20 ಜನ ಪುರುಷರೇ ಫ್ಯಾಕಲ್ಟಿ, 1989ರವರೆಗೂ ಒಬ್ಬರೇ ಒಬ್ಬ ಮಹಿಳೆಯನ್ನು ಫ್ಯಾಕಲ್ಟಿ ಸ್ಥಾನಕ್ಕೆ ತೆಗೆದುಕೊಂಡಿಲ್ಲ ಅಂದರೂ ‘ಮಹಿಳೆ ಎನ್ನುವುದು ಕಾರಣ ಆಗಿರಲಾರದು’ ಅನ್ನುತ್ತಿದ್ದೀರಿ. ನನಗೆ ನಂಬಲು ಅಸಾಧ್ಯವಾಗಿದೆ. ಮುಂದೆ ‘External Committee’ ನಿಮ್ಮನ್ನು ಆರಿಸಿತು ಅಲ್ಲವೆ?

ಡಾ.ಸಾವಿತ್ರಿ: ‘External Committee’ ಯಲ್ಲಿ ನನ್ನ ಸಂದರ್ಶನದ ಸಮಯದಲ್ಲಿ ಪ್ರೊ. ಸಿ.ಎನ್.ಆರ್. ರಾವ್ ಅವರು ಆಗ ಐಐಎಸ್ಸಿಯ ನಿರ್ದೇಶಕರಾಗಿ ಇದ್ದರು. ಆ ಸಂದರ್ಶನ ನನಗೆ ಈಗಲೂ ಚೆನ್ನಾಗಿ ನೆನಪಿದೆ. ಹೊರಗಿನ ಎಕ್ಸ್‍ಟರ್ನಲ್ ಮೆಂಬರ್ಸ್ ತುಂಬಾ ಬೆಂಬಲ ಕೊಟ್ಟರು.

ಸಂ : ಅವರು ಯಾವ ಯೂನಿವರ್ಸಿಟಿ, ಸಂಸ್ಥೆಯಿಂದ ಬಂದಿದ್ದರು?

ಡಾ.ಸಾವಿತ್ರಿ: ಒಬ್ಬರು ಜಾಧವ್‍ಪುರ್ ಯೂನಿವರ್ಸಿಟಿಯಿಂದ. ಅಮರ್ ಬಾಧುರಿ ಅಂತ ಅವರ ಹೆಸರು. ಇನ್ನೊಬ್ಬರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಎಲ್.ಕೆ.ರಾಮಚಂದ್ರನ್ ಅಂತ. ಅದೃಷ್ಟಕ್ಕೆ ನಮ್ಮ ಸಂಶೋಧನಾ ಕ್ಷೇತ್ರದ ತಜ್ಞರನ್ನೇ ಹುಡುಕಿ ಈ ಹೊರಗಿನ ಎಕ್ಸ್‍ಟರ್ನಲ್ ಕಮಿಟಿ ಸದಸ್ಯರಾಗಿ ಆರಿಸಿರುತ್ತಾರೆ. ಈ ಇಬ್ಬರಿಗೂ ನನ್ನ ಸಂಶೋಧನೆಯ ಕ್ಷೇತ್ರ ತಿಳಿದಿತ್ತು, ನನ್ನ ಸಂಶೋಧನೆಯ ಮೌಲ್ಯ ಏನೆಂದು ಅರಿವಿತ್ತು. ಹಾಗಾಗಿ ಅವರು ನನ್ನ ಕ್ಯಾಂಡಿಡೇಚರ್ ಅನ್ನು ಬೆಂಬಲಿಸಿದರು. ನಾನು ಫ್ಯಾಕಲ್ಟಿಯಾಗಿ ಆಯ್ಕೆ ಆದೆ.

ಸಂ : ನೀವು 20 ಜನ ಪುರುಷ ಫ್ಯಾಕಲ್ಟಿಯ ಗುಂಪಿಗೆ ಏಕಮಾತ್ರ ಮಹಿಳೆಯಾಗಿ ಬಂದು ಸೇರಿದಾಗ ಎಂತಹ ಸವಾಲುಗಳು ಇದ್ದವು?

ಡಾ.ಸಾವಿತ್ರಿ: ನಮ್ಮ ದೈನಂದಿನ ಕೆಲಸದಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರದಲ್ಲಿ ‘ಯು ಆರ್ ಬಾಸ್ ಆಫ್ ಯುವರ್ ಓನ್ ಲ್ಯಾಬ್’. ಯಾವ ತರಹದ ಇನ್‍ಟಫೆರೆನ್ಸ್ ಇರಲಿಲ್ಲ. ನಿಮ್ಮ ಬೆಳವಣಿಗೆ ನಿಮ್ಮ ಸಾಮಥ್ರ್ಯದ ಮೇಲಿದೆ. ನೀವು ಮಾಡುವ ಸಂಶೋಧನೆ, ಫಂಡ್ಸ್ ರೈಸ್ ಮಾಡಿದ್ದರ ಮೇಲೆ ಅವಲಂಬಿತವಿದೆ. ಏನಂದ್ರೆ ಸಂಶೋಧನೆಗೆ, ಪ್ರಯೋಗಶಾಲೆಗೆ ತುಂಬಾ ಹಣ ಬೇಕಾಗುತ್ತದೆ. ವಿದ್ಯಾರ್ಥಿಗಳನ್ನು ಸಂಶೋಧನೆಗೆ ತೆಗೆದುಕೊಳ್ಳುವುದು ಒಂದೇ ಅಲ್ಲ, ಅವರಿಗೆ ಬೇಕಾದ ಸಲಕರಣೆ, ಕನ್‍ಸ್ಯೂಮೆಬಲ್ಸ್ ಎಲ್ಲಕ್ಕೂ ಹಣ ಬೇಕು.

ಸಂ : ಫಂಡ್ಸ್ ಎಲ್ಲಿಂದ ರೈಸ್ ಮಾಡಬೇಕು? ವಿಜ್ಞಾನ ಸಂಸ್ಥೆಯೇ ಸಂಶೋಧನೆಗೆ ಹಣ ಕೊಡುವುದಿಲ್ಲವೆ?

ಡಾ.ಸಾವಿತ್ರಿ: ಇಲ್ಲ, ಫಂಡಿಂಗ್ ತುಂಬಾ ಕಡಿಮೆ. ಸಾಧಾರಣವಾಗಿ ನಾವು ಪ್ರಾಜೆಕ್ಟ್ ಪ್ರೊಪೋಸಲ್ ಬರೆದು, ಸೈನ್ಸ್ ಅಂಡ್ ಟೆಕ್ನಾಲಜಿ, ಸಿ.ಎಸ್.ಐರ್, ಬಯೋಟೆಕ್ನಾಲಜಿ ಹೀಗೆ ಹಲವು ಕಡೆಗೆ ಕಳುಹಿಸಬೇಕು. ಫಂಡ್ಸ್ ರೈಸ್ ಆದಾಗ, ಹೆಚ್ಚು ವಿದ್ಯಾರ್ಥಿಗಳು ಸಂಶೋಧನೆಗೆ ಬರಲು ಸಾಧ್ಯವಾಗುತ್ತದೆ. ವಿಜ್ಞಾನ ಸಂಸ್ಥೆ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡುತ್ತದೆ. ಒಬ್ಬೊಬ್ಬ ಫ್ಯಾಕಲ್ಟಿಗೆ ಒಂದು ಸಮಯದಲ್ಲಿ 4ರಿಂದ 5 ಸಂಶೋಧನಾ ವಿದ್ಯಾರ್ಥಿಗಳು ಇರುತ್ತಾರೆ. ಅವರಿಗೆ ಸಂಸ್ಥೆಯ ಸ್ಕಾಲರ್‍ಶಿಪ್ ಬರುತ್ತದೆ. ಆದರೆ ಸ್ಕಾಲರ್‍ಶಿಪ್ ಒಂದೇ ಅಲ್ಲವಲ್ಲ. ಒಳ್ಳೆಯ ಸಂಶೋಧನೆ ಮಾಡಬೇಕು ಎಂದರೆ ಸಲಕರಣೆಗಳು, ಹಣ ಬೇಕಾಗುತ್ತದೆ. ಹಾಗಾಗಿ ನಿಮ್ಮ ಸಾಮಥ್ರ್ಯದಲ್ಲಿ ಪ್ರಯೋಗಶಾಲೆಯನ್ನು ದೊಡ್ಡದು ಮಾಡುತ್ತಾ ಬೆಳೆಸುತ್ತೀರಿ. ವಿದ್ಯಾರ್ಥಿಗಳಲ್ಲದೆ, ರಿಸರ್ಚ್ ಅಸಿಸ್ಟೆಂಟ್ಸ್, ರಿಸರ್ಚ್ ಅಸೋಸಿಯೇಟ್ಸ್ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಸಂ : ನಿಮಗೆ ಈ ಫಂಡ್ಸ್ ರೈಸ್ ಮಾಡುವುದು ಕಷ್ಟವಾಗಲಿಲ್ಲವೆ?

ಡಾ.ಸಾವಿತ್ರಿ: ಇಲ್ಲ. ಆದರೆ ಮೊದಲ ಬಾರಿಗೆ ಪ್ರೊಪೋಸ್ ಮಾಡಿದ ನನ್ನ ಪ್ರಾಜೆಕ್ಟ್ ರಿಜೆಕ್ಟ್ ಆಗಿತ್ತು. ಕಾರಣ, ನಾನು ‘ಸಸ್ಯಗಳ ವೈರಾಲಜಿ’ ಕುರಿತು ಸಂಶೋಧನಾ ಪ್ರಾಜೆಕ್ಟ್ ಪ್ರೊಪೋಸಲ್ ಕಳುಹಿಸಿದ್ದೆ. ಈ ಕ್ಷೇತ್ರದಲ್ಲಿ ತಜ್ಞರು ಕಡಮೆ ಇದ್ದಾರೆ. ‘ಎವ್ಯಾಲ್ಯುಯೇಶನ್ ಕಮಿಟಿ’ಯಲ್ಲಿ ಪ್ಲಾಂಟ್ ವೈರಾಲಜಿ ತಜ್ಞರು ಯಾರೂ ಇರಲಿಲ್ಲ, ಅವರಿಗೆ ನನ್ನ ಪ್ರಾಜೆಕ್ಟ್ ಅರ್ಥವಾಗಲಿಲ್ಲ. ನನಗೆ ಕೊಟ್ಟ ಫೀಡ್‍ಬ್ಯಾಕ್ ‘ಈಕೆ ವೈರಾಲಜಿಸ್ಟ್ ಅಲ್ಲ, ಬಯೋಕೆಮಿಸ್ಟ್ ಆದವರು ವೈರಾಲಜಿ ಹೇಗೆ ಮಾಡಲು ಸಾಧ್ಯ?’ ಎಂದು ನಿರಾಕರಿಸಿದ್ದರು! ವೈರಾಲಜಿಯೇ ಬಯೋಕೆಮಿಸ್ಟ್ರಿ. ಬಯೋಕೆಮಿಸ್ಟ್ರಿಯ ಸ್ಪೆಷಲೈಸೇಷನ್ ವೈರಾಲಜಿ. ಇಂತಹದ್ದು ನಡೆಯುತ್ತಲೇ ಇರುತ್ತದೆ. ಒಮ್ಮೆ ಈ ಒಂದು ವಿಶ್ವವಿದ್ಯಾಲಯದ ವೈರಾಲಜಿ ವಿಭಾಗಕ್ಕೆ ಫ್ಯಾಕಲ್ಟಿ ರೆಕ್ರೂಟ್‍ಮೆಂಟ್‍ಗೆ ನಾನು ಹೋಗಿದ್ದೆ. ಒಳ್ಳೆಯ ಕ್ಯಾಂಡಿಡೇಟ್ ಅನ್ನು ನಾವು ತಜ್ಞರ ಸಮಿತಿ ಆಯ್ಕೆ ಮಾಡಿದ್ದೆವು. ಆದರೆ ಅದನ್ನು ವಿಶ್ವವಿದ್ಯಾಲಯ ರದ್ದು ಮಾಡಿತು. ಕಾರಣ ಆತನಿಗೆ ವೈರಾಲಜಿಯಲ್ಲಿ ಎಂ.ಎಸ್ಸಿ. ಇಲ್ಲ ಎಂದು. ಅವರು ರಿಸರ್ಚ್ ಯಾವ ಕ್ಷೇತ್ರದಲ್ಲಿ ಮಾಡ್ತಾ ಇದ್ದಾರೆ, ವೈರಾಲಜಿಗೆ ಸಂಬಂಧಿಸಿದೆ ಎಂದು ನೋಡಿ ನಾವು ಆಯ್ಕೆ ಮಾಡಿದಾಗ, ಹಿಂದೆ ಅವರು ಎಂ.ಎಸ್ಸಿ. ‘ವೈರಾಲಜಿ’ಯಲ್ಲಿ ಮಾಡಿಲ್ಲ ಎನ್ನುವುದು ಸರಿ ಇರಲಿಲ್ಲ. ಅದರಲ್ಲೂ ಈಗ ಎಲ್ಲ ರಂಗಗಳೂ ಮರ್ಜ್ ಆಗುತ್ತಿವೆ. ಹೀಗಿರುವಾಗ, ಕ್ಯಾಂಡಿಡೇಟ್ ಮಾಡಿರುವ ಸಂಶೋಧನಾ ಅನುಭವ, ಕ್ಷೇತ್ರ ನೋಡದೆ, ಬೇಸಿಕ್ ಎಂ.ಎಸ್ಸಿ. ಡಿಗ್ರಿಯಲ್ಲಿ ಏನಿತ್ತೋ ಅದೇ ವಿಭಾಗಕ್ಕೆ ಹೋಗಬೇಕು ಎನ್ನುವುದು ತಪ್ಪು ಅಭಿಪ್ರಾಯ.

ಸಂ : ಎಂ.ಎಸ್ಸಿ. ಹಂತದಲ್ಲಿ ಸ್ವಲ್ಪ ಬ್ರಾಡ್ ಬೇಸ್ ಇರುವ ಅಗತ್ಯ ಇರುತ್ತದೆ ಅಲ್ಲವೆ?

ಡಾ.ಸಾವಿತ್ರಿ: ಹೌದು. ಖಂಡಿತಾ.

ಸಂ : ಈಗ ಪಿಯುಸಿ ಹಂತದಲ್ಲಿಯೇ ಸೂಪರ್ ಸ್ಪೆಷಲೈಸೇಷನ್ ಆಗ್ತಾ ಇದೆ. ಮೊದಲೆಲ್ಲ ನಮಗೆ ಗಣಿತ, ಜೀವಶಾಸ್ತ್ರ, ಭೌತಶಾಸ್ತ್ರ ಮತ್ತು ರಸಾಯಶಾಸ್ತ್ರ ವಿಜ್ಞಾನ ಶಾಖೆಗೆ ಹೋಗುವ ಪ್ರತಿಯೊಬ್ಬರಿಗೂ ಅಗತ್ಯ ಎಂದು ಕಲಿಸುತ್ತಿದ್ದರು. ನಾವೂ ಓದುತ್ತಿದ್ದೆವು. ಈಗ ಇಂಜಿನಿಯರಿಂಗ್‍ಗೆ ಹೋಗುವವರಿಗೆ ಜೀವಶಾಸ್ತ್ರ ಏಕೆ ಎಂದು ಪಿಯುಸಿಯಿಂದಲೇ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್‍ಗೆ ಹೋಗುವ ಅವಕಾಶಗಳನ್ನು ತಂದಿದ್ದಾರೆ. ಇದರ ಪ್ರಭಾವ ನಂತರ ನೋಡುತ್ತೇವೆ. ಜೀವಶಾಸ್ತ್ರದ ಓದು ನಮಗೆ ನಮ್ಮ ಆರೋಗ್ಯದಂತಹ ವಿಷಯದಲ್ಲಿ ಒಂದಿಷ್ಟು ಮೂಲಭೂತ ಜ್ಞಾನವನ್ನು ನೀಡುತ್ತಿತ್ತು. ಜೊತೆಗೆ ಇಂದು ಪ್ರತಿ ರಂಗವೂ ಇಂಟರ್‍ಡಿಸಿಪ್ಲಿನರಿ ಆಗುತ್ತಿದೆ. ಈ ಹಂತದಲ್ಲಿ ವಿವಿಧ ಜ್ಞಾನಶಾಖೆಗಳ ಅರಿವು ಒಳ್ಳೆಯದಲ್ಲವೆ?

ಡಾ.ಸಾವಿತ್ರಿ: ಒಬ್ಬ ಇಂಜಿನಿಯರಿಗೂ ಮುಂದೆ ಜೀವಶಾಸ್ತ್ರದ ವಿಷಯದಲ್ಲಿ ಏನಾದರೂ ಮಾಡುವ ಆಸಕ್ತಿ ಮೂಡಬಹುದು. ಒಂದಿಷ್ಟು ಬ್ರಾಡ್ ಬೇಸ್ ಪಿಯುಸಿ ಹಂತದಲ್ಲಿಯೂ ಬೇಕು. ಕೇವಲ ಕಂಪ್ಯೂಟರ್ಸ್ ಕಲಿಸಿದರೆ ಸಾಲದು.

ಸಂ : ನೀವು 1989ರಲ್ಲಿ ಫ್ಯಾಕಲ್ಟಿ ಆದಿರಿ. ನೀವು ಜೀವರಸಾಯನ ಶಾಸ್ತ್ರದ ವಿಭಾಗಕ್ಕೆ ಛೇರ್ಮನ್ ಆಗಿದ್ದು ಯಾವಾಗ?

ಡಾ.ಸಾವಿತ್ರಿ: ಹಾಂ, 2009 ಇರಬೇಕು. ಐದು ವರ್ಷ ನಾನು ಹೆಡ್ ಅಂಡ್ ಛೇರ್ಮನ್ ಆಗಿದ್ದೆ. ಇದು ಸೀನಿಯಾರಿಟಿ ಮತ್ತು ರೊಟೇಶನ್ ಮೇಲೆ, 3 ವರ್ಷದ ಟರ್ಮ್. ನನ್ನ 3 ವರ್ಷ ಮುಗಿದಾಗ, ‘ನೀವೇ ಮುಂದುವರೆಯಿರಿ’ ಎಂದು ನಿರ್ದೇಶಕರು ಕೇಳಿದರು, ಹಾಗೆಯೇ ಎರಡು ವರ್ಷ ಮುಂದುವರೆದೆ. ಛೇರ್ಮನ್ ಆದರೆ ಆಡಳಿತದ ನೂರೊಂದು ಜವಾಬ್ದಾರಿಗಳಿರುತ್ತವೆ, ತಲೆನೋವುಗಳು ಇರುತ್ತವೆ. ಸಂಶೋಧನೆಗೆ ಸಮಯ ಕಡಮೆ ಆಗುತ್ತದೆ. ಕೆಲವೊಮ್ಮೆ ನಿಮ್ಮ ನಂತರದ ಸೀನಿಯರ್ ಫ್ಯಾಕಲ್ಟಿ ಮುಂದೆ ಬರಲಿಲ್ಲ ಎಂದರೆ, ನೀವೇ ಮುಂದುವರೆಯಿರಿ ಅನ್ನುತ್ತಾರೆ.

ಸಂ : ನೀವು ಛೇರ್ಮನ್ ಆದಾಗಲೇ ಪ್ರಯೋಗಶಾಲೆ ಹೊಸ ಕಟ್ಟಡಕ್ಕೆ ಸ್ಥಳಾಂತರವಾಯಿತು… ಅದೆಲ್ಲವೂ ಸಾಕಷ್ಟು ಅಡ್ಮಿನಿಸ್ಟ್ರೇಷನ್ ಕೌಶಲವನ್ನು ಬೇಡುವಂತಹ ಜವಾಬ್ದಾರಿಗಳು. ನೀವು ಬಯೋಕೆಮಿಸ್ಟ್ರಿ ವಿಭಾಗಕ್ಕೆ ಮೊಟ್ಟ ಮೊದಲ ಮಹಿಳಾ ಫ್ಯಾಕಲ್ಟಿ. ನೀವು ಇರುವಂತೆಯೇ, ನಿಮ್ಮ ನಂತರ ಎರಡನೆಯ ಮಹಿಳಾ ಫ್ಯಾಕಲ್ಟಿ ಈ 33 ವರ್ಷಗಳಲ್ಲಿ ಬಂದರಾ?

ಡಾ.ಸಾವಿತ್ರಿ: ಹೌದು, ಡಾ. ಅಂಜಲಿ ಕರಾಂಡೆ ಅಂತ. ಆಕೆ ನನಗಿಂತ ಮುಂಚೆ ‘ಸೀನಿಯರ್ ಸೈಂಟಿಫಿಕ್ ಆಫೀಸರ್’ ಆಗಿ ಸೇರಿದ್ದರು. ‘ಟಿಷ್ಯೂ ಕಲ್ಚರ್’ ಸೌಲಭ್ಯಗಳನ್ನು ಸೆಟ್ ಅಪ್ ಮಾಡಿದ್ದರು.

ಸಂ : ಅವರು ಫ್ಯಾಕಲ್ಟಿ ಆಮೇಲೆ ಆದರಾ?

ಡಾ.ಸಾವಿತ್ರಿ: ಅವರು ಸೀನಿಯರ್ ಸೈಂಟಿಫಿಕ್ ಆಫೀಸರ್ ಆಗಿ ಸೇರಿದ್ದರು. ನಂತರ ರೆಗ್ಯುಲರ್ ಫ್ಯಾಕಲ್ಟಿ ಆಗಿ ಪ್ಯಾರ¯ಲ್ ಟ್ರಾನ್ಸ್‍ಫರ್ ಮೇಲೆ ಬಂದಿದ್ದರು.

ಸಂ : ಇನ್ನು ಯಾರಾರು ಮಹಿಳಾ ಫ್ಯಾಕಲ್ಟಿ ಇದ್ದಾರೆ ಮೇಡಂ?

ಡಾ.ಸಾವಿತ್ರಿ: ಡಾ. ಶಿಖಾ ಲಲೋರಯಾ ಅನ್ನುವವರು ಫ್ಯಾಕಲ್ಟಿಯಾಗಿ ಬಂದರು. ಆಕೆ ಈಗ ಪ್ರೊಫೆಸರ್ ಸ್ಥಾನದಲ್ಲಿದ್ದಾರೆ. ನಾಗಸುಮ ಚಂದ್ರ ಅಂತಾ. ಆಕೆ ನನ್ನ ಚೇರ್ಮನ್‍ಶಿಪ್ ಸಮಯದಲ್ಲಿಯೇ ಬಂದರು. ಆದರೆ ಆಕೆಯದು ಪ್ಯಾರಲಲ್ ಟ್ರಾನ್ಸ್‍ಫರ್, ‘ಬಯೋ ಇನ್‍ಫಾರ್ಮಟಿಕ್ಸ್’ನಲ್ಲಿ ಇದ್ದರು.

ಸಂ : ಅಂದರೆ ಮೇಡಂ, 101 ವರ್ಷಗಳ ಇತಿಹಾಸ ಇರುವ ವಿಭಾಗದಲ್ಲಿ ನಾಲ್ಕೇ ಜನ ಇಲ್ಲಿಯವರೆಗೆ ಮಹಿಳಾ ಫ್ಯಾಕಲ್ಟಿಗಳು! ವಿಜ್ಞಾನ ರಂಗದಲ್ಲಿ ಮಹಿಳೆಯರು ಎದುರಿಸುವ ತಾರತಮ್ಯವನ್ನು ಢಾಳಾಗಿ ಇದು ತೋರಿಸುತ್ತದೆ.

ಡಾ.ಸಾವಿತ್ರಿ: ನಾನು ಇಸವಿ 2016ರಲ್ಲಿ ನಿವೃತ್ತಳಾದೆ. ಅಂಜಲಿ ಕರಾಂಡೆ ಕೂಡಾ ನಿವೃತ್ತರಾದರು. ನನ್ನ ಅನೇಕ ಸಹೋದ್ಯೋಗಿ ಫ್ಯಾಕಲ್ಟಿ ಕೂಡ ನಿವೃತ್ತರಾದರು. ಹಾಗಾಗಿ ನಾಲ್ಕು ಅಪಾಯಿಂಟ್‍ಮೆಂಟ್ ಮಾಡಿದ್ದಾರೆ.

ಸಂ : ಆ ನಾಲ್ವರಲ್ಲಿ ಮಹಿಳೆಯರು ಇದ್ದಾರೆಯೆ?

ಡಾ.ಸಾವಿತ್ರಿ: ಇಲ್ಲ ನಾಲ್ಕೂ ಜನರು ಪುರುಷರೆ. ನನಗೆ ಗೊತ್ತಿಲ್ಲ, ಯಾರದರೂ ಮಹಿಳೆ ರೈಟ್ ಟೈಮ್‍ನಲ್ಲಿ ರೈಟ್ ಪ್ಲೇಸ್‍ನಲ್ಲಿ ಇದ್ದರೋ ಇಲ್ಲವೋ. ಆದರೆ ವಸ್ತುಸ್ಥಿತಿ ಇದು.

ಸಂ : ಮೇಡಂ, ಹೆಣ್ಣು ಮಕ್ಕಳಿಗೆ ವಿಜ್ಞಾನ ಓದಲು ಮನೆಯಲ್ಲಿ ಪ್ರೋತ್ಸಾಹ ಸಿಕ್ಕರೂ, ಹೊರಗಿನ ಸಮಾಜದಲ್ಲಿ, ಆಕೆ ದುಡಿಯಬೇಕಾದ ಔದ್ಯೋಗಿಕ ರಂಗದಲ್ಲಿ ಬಹಳಷ್ಟು ಸುಧಾರಣೆ ಆಗಬೇಕಿದೆ.

ಡಾ.ಸಾವಿತ್ರಿ: ಆದರೆ ನಾವು ‘ಅಯ್ಯೋ ಈ ವಾತಾವರಣ ಸರಿ ಇಲ್ಲ, ಜನ ನನ್ನ ಸಂಶೋಧನೆಯನ್ನು ಸಾಮಥ್ರ್ಯವನ್ನು ಗುರುತಿಸಲಿಲ್ಲ’ ಎಂದು ಇನ್ನೊಬ್ಬರ ಮೇಲೆ ತಪ್ಪು ಹಾಕಿಕೊಂಡು ಕುಳಿತುಕೊಂಡರೆ, ನಾವು ಎಲ್ಲಿರುತ್ತೇವೋ, ಅಲ್ಲೇ ಉಳಿದು ಬಿಡುತ್ತೇವೆ.

ಸಂ : ವ್ಯವಸ್ಥೆಯಲ್ಲಿ ಇರುವ ತಪ್ಪನ್ನು ಸರಿ ಪಡಿಸಲು ಹೋರಾಡಬೇಕಲ್ಲವೆ? ಆದರೆ ನಾವು ಅಲ್ಪಸಂಖ್ಯಾತರಿದ್ದಾಗ, ಅಥವಾ ನಿಮ್ಮಂತೆ ಏಕಾಂಗಿ ಮಹಿಳೆ ಆಗಿದ್ದಾಗ ದನಿ ಕೇಳುವುದು ಕಷ್ಟ. ಕೆಲವೊಮ್ಮೆ ಹೆಣ್ಣು ಮಕ್ಕಳು ತಮ್ಮ ಕಾರ್ಯಕ್ಷೇತ್ರದಲ್ಲಿ ಒಂದು ಶೌಚಾಲಯಕ್ಕೂ ಹೋರಾಡಬೇಕಾಗುತ್ತದೆ. ನನ್ನ ಕ್ಷೇತ್ರದಲ್ಲಿಯೂ ‘ಹೆಣ್ಣುಮಕ್ಕಳು ಒಬ್ಬರೇ ಪ್ರಯಾಣ ಮಾಡೋಕಾಗೋಲ್ಲ, ಫೀಲ್ಡ್ ಟ್ರಯಲ್ಸ್‍ಗೆ ಹೋಗಲಾರರು’ ಎಂಬೆಲ್ಲ ಯೋಚನೆಗಳನ್ನು ಇಟ್ಟುಕೊಂಡಿದ್ದರು. ನನ್ನ ಪೀಳಿಗೆಯ ಮಹಿಳಾ ಇಂಜಿನಿಯರ್‍ಗಳು ಅಂತಹ ಒಂದೊಂದು ಮಿಥ್ಯೆಯನ್ನೂ ಮುರಿದೆವು. ಎಲ್ಲ ಕೆಲಸಕ್ಕೂ ಮುಂದಾದೆವು. ಅದರಿಂದ ಮುಂದಿನ ಪೀಳಿಗೆಯ ಮಹಿಳಾ ಇಂಜಿನಿಯರುಗಳಿಗೆ ಒಂದಿಷ್ಟು ದಾರಿ ಸುಗಮವಾಯಿತು. ಈ ಬಗೆಯ ಹೋರಾಟಗಳು ಅಗತ್ಯ ಅಲ್ಲವೆ?

ಡಾ.ಸಾವಿತ್ರಿ: ಖಂಡಿತಾ ಅಗತ್ಯ. ನಮ್ಮ ಸ್ಥಾನವನ್ನು ನಾವು ದೃಢ ಪಡಿಸಬೇಕು. ‘ವಿ ಆರ್ ಹಿಯರ್’ ಎಂದು ತೋರಿಸಬೇಕು.

ಸಂ : ಎಲ್ಲೆಲ್ಲಿ ಲಿಂಗ ತಾರತಮ್ಯದ ವಿಷಯ ಕಾಣುತ್ತದೆಯೋ ಅದನ್ನು ನಾವು ಪಾಯಿಂಟ್ ಔಟ್ ಮಾಡಬೇಕಾಗುತ್ತದೆ. ಅದಕ್ಕವರು ಕುರುಡಾಗಿರುವ ಸಾಧ್ಯತೆಯೇ ಹೆಚ್ಚು. ಆದರೆ ನಮ್ಮ ಮುಂದಿನ ಪೀಳಿಗೆಗೆ ಹಾದಿ ತೆರೆಯಬೇಕು ಎಂದರೆ, ಇದು ಅಗತ್ಯ ಅಲ್ಲವೆ ಮೇಡಂ?

ಡಾ.ಸಾವಿತ್ರಿ: ಖಂಡಿತಾ. ಹಾಗೂ ಸಮಾನ ಸಾಮಥ್ರ್ಯ ಇರುವ ಮಹಿಳೆಯರು ಇದ್ದಾರೆ ಎಂದಾಗ, ಅವರನ್ನು ನಾವು ಗುರುತಿಸಬೇಕು. ನನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗಲೂ ಇದನ್ನೇ ಹೇಳಿದೆ. ಹೆಣ್ಣು ಮಕ್ಕಳ ಸಾಧನೆಯನ್ನು ಗುರುತಿಸುವ ಪ್ರಯತ್ನ ಮಾಡಬೇಕು. ನಮ್ಮಲ್ಲಿ ಏನಾಗುತ್ತದೆ, ಹೆಣ್ಣು ಮಕ್ಕಳು ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಅವರಾಗಿ ಅವರು ಹೇಳಿಕೊಳ್ಳುವುದಿಲ್ಲ.

ಸಂ : ಹೌದು, 66 ವರ್ಷಗಳ ಇತಿಹಾಸದಲ್ಲಿ, ಪ್ರಥಮ ಬಾರಿಗೆ ಓರ್ವ ಮಹಿಳಾ ವಿಜ್ಞಾನಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದದ್ದು. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯದತ್ತ ಗಮನ ಹರಿಸಿ, ಅಲ್ಲಿ ಸುಧಾರಣೆ ಆಗಿದೆ. ಆದರೆ ಲಿಂಗಾಧಾರಿತ ನ್ಯಾಯ ದೊರೆತೇ ಇಲ್ಲ. ಜನಸಂಖ್ಯೆಯಲ್ಲಿ ಶೇಖಡಾ 50ರಷ್ಟು ಇರುವ ಮಹಿಳೆಯರಿಗೆ ಈ ಪ್ರಶಸ್ತಿ ಕೆಲವು ವರ್ಷಗಳು 5%, 10% ಅಷ್ಟೇ ದೊರೆತಿರುವುದು. ಅಪರೂಪಕ್ಕೆ 20-25% ದೊರೆತಿದೆ.

ಡಾ.ಸಾವಿತ್ರಿ: ನೋಡಿ, ಮೊದಲು ನಾವು ವಿಜ್ಞಾನಿಗಳು ಎಂದು ಗುರುತಿಸಬೇಕು, ಹೆಣ್ಣು ಅಥವಾ ಗಂಡು ಅನ್ನುವುದಲ್ಲ. ವಿಜ್ಞಾನ ರಂಗದಲ್ಲಿ ಎರಡು ವೇಕೆನ್ಸಿ ಇದೆ ಅಂದುಕೊಳ್ಳಿ. ಎರಡಕ್ಕೂ ಪುರುಷರನ್ನು ತೆಗೆದುಕೊಂಡರೆ ಯಾರೂ ಹುಬ್ಬೇರಿಸುವುದಿಲ್ಲ, ತೀರಾ ಸಹಜ ಸ್ವಾಭಾವಿಕ ಎಂದು ಭಾವಿಸುತ್ತಾರೆ. ಅದು ಸರಿ ಅಲ್ಲ ಅಂತ ಅವರಿಗೆ ಅನಿಸುವುದಿಲ್ಲ. ಆದರೆ ಒಬ್ಬ ಮಹಿಳೆಯನ್ನು ತೆಗೆದುಕೊಂಡಾಗ, ಏನೋ ಉದಾರ ಮನಸ್ಸಿನಿಂದ ಉಪಕಾರ ಮಾಡಿದ ಹಾಗೆ ಭಾವಿಸುತ್ತಾರೆ. ಇನ್ನು ಇಬ್ಬರೂ ಮಹಿಳೆಯರನ್ನು ತೆಗೆದುಕೊಂಡ ಸಂದರ್ಭಗಳೇ ಬಂದಿಲ್ಲ. ಏಕೆ ಅಂದರೆ ಈ ಕಮಿಟಿಗಳಲ್ಲಿ ಎಲ್ಲಾ ಗಂಡಸರೇ ಕೂತಿರುತ್ತಾರೆ. ನನ್ನ ಪ್ರಶ್ನೆ ಒಂದು ವರ್ಷ ಎರಡೂ ಸಮರ್ಥ ಮಹಿಳೆಯರ ಅರ್ಜಿ ಬಂದಿದ್ದರೆ, ಇಬ್ಬರೂ ಮಹಿಳೆಯರನ್ನೇ ತೆಗೆದುಕೊಳ್ಳಬಾರದು ಏಕೆ? ಅಂತಹ ಸಂದರ್ಭದಲ್ಲಿ 50% ಅಂತ ಅಪ್ಲೈ ಮಾಡುತ್ತಾರೆ. ಬಹಳಷ್ಟು ಪರಿವರ್ತನೆ ಆಗಬೇಕು, ಕಮಿಟಿ ಸದಸ್ಯರ ಹಂತದಿಂದ ಮೇಲೆ ಆಲ್ ದಿ ವೇ ಪರಿವರ್ತನೆ ಆಗಬೇಕು. ಉದಾಹರಣೆಗೆ ಡೈರೆಕ್ಟರ್ ಲೆವೆಲ್‍ನಲ್ಲಿ…

ಸಂ : ವಿಜ್ಞಾನ ಸಂಸ್ಥೆಗೆ 110 ವರ್ಷಗಳು ಮೀರಿದರೂ, ಒಬ್ಬರೇ ಒಬ್ಬ ಮಹಿಳೆ ನಿರ್ದೇಶಕಳಾಗಿಲ್ಲ.

ಡಾ.ಸಾವಿತ್ರಿ: ಯಾವುದೇ ಸಂಸ್ಥೆ ತೆಗೆದುಕೊಳ್ಳಿ, ಮಹಿಳೆಯರಿಗೆ ಮೇಲಿನ ಹಂತಕ್ಕೆ ಹೋಗಲು ಬೇಕಾದಷ್ಟು ಅಡೆತಡೆಗಳು ಇರುತ್ತವೆ.

ಸಂ : ನಿಜ ಮೇಡಂ, 100 ವರ್ಷ ದಾಟಿರುವ ಮೈಸೂರು ವಿಶ್ವವಿದ್ಯಾಲಯಲ್ಲಿ ಕೂಡಾ ಡಾ. ನಿಂಗಮ್ಮ ಸಿ. ಬೆತ್ಸರ್ ಒಬ್ಬರೇ ಮಹಿಳಾ ಕುಲಪತಿಗಳಾಗಿದ್ದು.

ಡಾ.ಸಾವಿತ್ರಿ: ಅವುಗಳನ್ನೆಲ್ಲ ದಾಟಿಕೊಂಡು ಬರಬೇಕು. ರೈಟ್ ಟೈಮ್, ರೈಟ್ ಪ್ಲೇಸ್ ಇರಬೇಕು.

ಸಂ : ಮೇಡಂ, ರೈಟ್ ಟೈಮ್, ರೈಟ್ ಪ್ಲೇಸ್ ಇದ್ದರೂ, ತಾರತಮ್ಯದ ಮನೋಭಾವ ಇದ್ದಾಗ ‘ರೈಟ್ ಜೆಂಡರ್ ಅಲ್ಲ’ ಅಂತ ಪಕ್ಕಕ್ಕೆ ಸರಿಸುತ್ತಾರೆ.

ಡಾ.ಸಾವಿತ್ರಿ: ಹೌದು, ಪರಿವರ್ತನೆ ಬೇಕಿದೆ.

ಸಂ : ಕೆಲವು ಇತ್ತೀಚಿನ ದಿನಗಳಲ್ಲಿ ಹೊಸ ಕಾನೂನು ಕಾಯಿದೆಗಳು ಮಹಿಳೆಯರ ಅಗತ್ಯವನ್ನು ಗುರುತಿಸಿವೆ. ‘ಕಂಪನಿ ಆಕ್ಟ್ 2013’ ಕಂಪನಿಗಳ ಬೋರ್ಡ್‍ನಲ್ಲಿ ಒಬ್ಬ ಮಹಿಳೆಯಾದರೂ ಇರಬೇಕು ಎಂಬ ನಿಯಮವನ್ನು ತಂದಿದೆ. ಇದು ಮಹಿಳೆಯರ ಉದ್ಧಾರಕ್ಕೆ ಅಲ್ಲ, ಕಂಪನಿಗಳ ಉದ್ಧಾರಕ್ಕೆ, ಕಂಪನಿಗಳ ಕ್ಷೇಮಕ್ಕೆ. ‘ಸತ್ಯಮ್ ಸ್ಕಾಮ್’ ನಂತರ ಬಂದ ಆಕ್ಟ್ ಇದು. ‘ಜೆಂಡರ್ ಡೈವರ್ಸಿಟಿ’ ಇರುವ ಬೋರ್ಡ್‍ಗಳ ಕಂಪನಿಗಳು ಉತ್ತಮವಾಗಿ ನಿರ್ವಹಿಸುತ್ತವೆ ಎಂದು ತಿಳಿದು ಬಂದಿದೆ. ಈ ಹೊಸ ಕಾಯಿದೆಯಿಂದ, ಹತ್ತು ವರ್ಷಗಳಲ್ಲಿ, ಬೋರ್ಡ್‍ನಲ್ಲಿ ಮಹಿಳೆಯರ ಉಪಸ್ಥಿತಿ ಇರುವ ದೊಡ್ಡ ಕಂಪನಿಗಳ ಸಂಖ್ಯೆ, ಇಸವಿ 2011ರಲ್ಲಿ ಕೇವಲ 4.5% ಇದ್ದದ್ದು, ಇಸವಿ 2021ರಲ್ಲಿ 17.3%ಗೆ ಏರಿದೆ. ಇದು ಗ್ಲೋಬಲ್ ಆವರೇಜ್‍ಗಿಂದ ಸಾಕಷ್ಟು ಕಡಮೆ ಇದೆ. ಆದರೂ ಬೋರ್ಡ್‍ನಲ್ಲಿ ಮಹಿಳೆಯರ ಪ್ರವೇಶ ಸಾಧ್ಯವಾಗಿರುವುದು ಒಳ್ಳೆಯ ಸುಧಾರಣೆ. ಇದೇ ಬಗೆಯಲ್ಲಿ ಅಕಡೆಮಿಕ್ ಕ್ಷೇತ್ರದಲ್ಲಿಯೂ ಬಹುಶಃ ಕೆಲವು ಮಹಿಳಾ ಪರ ಕಾಯಿದೆ ಕಾನೂನುಗಳು ಬೇಕಿವೆ.

ಡಾ.ಸಾವಿತ್ರಿ: ಮೇಲಿಂದ ಅಂತಹ ಪರಿವರ್ತನೆ ಆದರೆ, ಅದು ಕೆಳಗೂ ಅವಕಾಶಗಳನ್ನು ಕಲ್ಪಿಸುತ್ತದೆ. ಎಲ್ಲಾ ಹಂತಗಳಲ್ಲಿಯೂ ಪರಿವರ್ತನೆ ಆಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರನ್ನು ತರುವ ಪ್ರಯತ್ನ ಆಗಬೇಕು, ಅದು ರಾಜಕೀಯ ರಂಗವಾಗಬಹುದು, ಆಡಳಿತ ರಂಗವಾಗಬಹುದು, ಯಾವುದೇ ರಂಗದಲ್ಲಿ ‘ಡಿಸಿಷನ್ ಮೇಕಿಂಗ್ ಬಾಡಿ’ ಯಾವುದಿದೆಯೋ ಅಲ್ಲೆಲ್ಲ ಪ್ರಯತ್ನಪೂರ್ವಕವಾಗಿ ಮಹಿಳೆಯರನ್ನು ಇನ್‍ಕ್ಲೂಡ್ ಮಾಡಬೇಕು.

ಸಂ : ಈ ಮೂಲಕ ಲಿಂಗಾಧಾರಿತ ನ್ಯಾಯ ಎಲ್ಲ ರಂಗದಲ್ಲಿಯೂ ಸಾಧ್ಯವಾಗುತ್ತದೆ.

ಡಾ.ಸಾವಿತ್ರಿ: ಅದರ ಬಗ್ಗೆ ಎರಡನೇ ಮಾತಿಲ್ಲ, ಜೆಂಡರ್ ಜಸ್ಟಿಸ್ ಬೇಕು. ಅಷ್ಟೇ ಅಲ್ಲ ಅಂತ ಅವಕಾಶಗಳು ದೊರೆತು ಮೇಲೆ ಬಂದ ಮಹಿಳೆಯರೂ ಕೂಡಾ, ಪ್ರಜ್ಞಾಪೂರ್ವಕವಾಗಿ ಕಾಂಟ್ರಿಬ್ಯೂಟ್ ಮಾಡಬೇಕು. ಜೊತೆಗೆ ಯಾರಾರು ಸಮರ್ಥ ಮಹಿಳೆಯರು ತÀಮ್ಮ ರಂಗದಲ್ಲಿ ಇದ್ದಾರೆ, ಅವರನ್ನು ಯಾವ ಸ್ಥಾನಕ್ಕೆ ರೆಕಮಂಡ್ ಮಾಡಬಹುದು ಎಂಬುದನ್ನೂ ಅವರು ಗಮನಿಸಬೇಕು. ಅವರವರ ಕ್ಷೇತ್ರಗಳಲ್ಲಿ ಮಹಿಳೆಯರು ಬಿಟ್ಟು ಹೋಗದಂತೆ ನೋಡಿಕೊಳ್ಳುವಂತಹ ಪ್ರಜ್ಞಾವಂತ ಪುರುಷರು ಬೇಕು.

ಸಂ : ಮೇಡಂ, 60 ವರ್ಷಗಳಿಗೆ ಮೀರಿದ ಇತಿಹಾಸವಿರುವ ಭಟ್ನಾಗರ್ ಪ್ರಶಸ್ತಿಯನ್ನೇ ತೆಗೆದುಕೊಳ್ಳಿ, ಇಷ್ಟೆಲ್ಲ ವರ್ಷಗಳಲ್ಲಿ 500ಕ್ಕೆ ಮೀರಿದ ಸಂಖ್ಯೆಯಲ್ಲಿ ಪುರುಷರಿಗೆ ಪ್ರಶಸ್ತಿ ಬಂದಿದೆ, ಮಹಿಳೆಯ ಸಂಖ್ಯೆ 19 ಏನೋ ಇದ್ದಾರೆ. ಅಂದರೆ ಶೇಕಡಾ 5% ಕೂಡ ಇಲ್ಲ. ನಿಮ್ಮ ಪತಿಗೆ ಇಸವಿ 1993ರಲ್ಲಿ ಭಟ್ನಾಗರ್ ಪ್ರಶಸ್ತಿ ಬಂದಿತು. ನಿಮ್ಮ ಹೆಸರನ್ನು ಯಾರೂ ಸೂಚಿಸಲಿಲ್ಲವೆ?

ಡಾ.ಸಾವಿತ್ರಿ: ಅದರ ಮರುವರ್ಷ ನನ್ನ ಹೆಸರು ಕೇಳಿಬಂದಿತು ಎಂದು ಕೇಳಿದ್ದೇನೆ. ‘ಅರೆ ಹೋದ ವರ್ಷ ಆಕೆಯ ಗಂಡನಿಗೆ ಕೊಟ್ಟಿದ್ದೇವೆ, ಮತ್ತೆ ಈಕೆಗೂ ಕೊಡುವುದು ಏಕೆ?’ ಎಂಬಂತಹ ಚರ್ಚೆಗಳು ನಡೆದವು ಎಂದು ಕೇಳಿದೆ.

ಸಂ : ಗಂಡನಿಗೆ ಕೊಟ್ಟರೆ ಹೆಂಡತಿಗೇಕೆ, ಆಕೆಯನ್ನು ಗಂಡನೊಡನೆ ಗುರುತಿಸುತ್ತಾರೆ. ಓರ್ವ ವಿಜ್ಞಾನಿಯಾಗಿ ಮೇಲೇರಿರುವ ನಿಮ್ಮ ಈ ರಂಗದ ಕೊಡುಗೆ ಗೌಣವಾಗುತ್ತದೆ. ನಮ್ಮ ಕಾರ್ಖಾನೆಯಲ್ಲಿ ಸಹೋದ್ಯೋಗಿ ದಂಪತಿಗಳಿದ್ದರು. ಇಬ್ಬರೂ ಪ್ರತಿಭಾವಂತರು ಮತ್ತು ಪರಿಶ್ರಮಿಗಳು. ಅನೇಕ ವರ್ಷ ಇಬ್ಬರಿಗೂ ಜೊತೆಯಾಗಿಯೇ ಬಡ್ತಿ ಬಂದಿತ್ತು. ಆದರೆ ಮೇಲಿನ ಜೆನರಲ್ ಮ್ಯಾನೇಜರ್ ಹಂತ ಬಂದಾಗ, ಗಂಡನಿಗೆ ಮೂರು ವರ್ಷಕ್ಕೆ ದೊರೆಯಿತು, ಹೆಂಡತಿ 6 ವರ್ಷ ಕಾಯಬೇಕಾಯಿತು.

ಡಾ.ಸಾವಿತ್ರಿ: ಹೌದು, ಆಕೆಯನ್ನು ಆಕೆಯ ಕೊಡುಗೆಗಾಗಿ ಗುರುತಿಸಬೇಕಿದೆ.

ಸಂ : ಮತ್ತೆ ನಾವು ಅದೇ ಪ್ರಶ್ನೆಗೆ ಬರುತ್ತೇವೆ, ನೀವು ಹೇಳಿದಂತೆ ‘ಡಿಸಿಷನ್ ಮೇಕಿಂಗ್’ ತಂಡಗಳಲ್ಲಿ ಮಹಿಳೆಯರು ಬೇಕಿದ್ದಾರೆ. ಅದು ರೆಕ್ರೂಟ್‍ಮೆಂಟ್ ಕಮಿಟಿ ಆಗಲಿ, ರಾಜ್ಯೋತ್ಸವ ಸಮಿತಿ ಆಗಲಿ, ಭಟ್ನಾಗರ್ ಸಮಿತಿ ಆಗಲಿ, ನೊಬೆಲ್ ಕಮಿಟಿಯೇ ಆಗಲಿ, ಅಲ್ಲಿ ಮಹಿಳೆಯರ ಉಪಸ್ಥಿತಿ ಬೇಕು. ನೊಬೆಲ್ ಪ್ರಶಸ್ತಿ ಪಡೆದ ಮಹಿಳಾ ವಿಜ್ಞಾನಿಗಳು ಕೂಡಾ ಅಲ್ಪಸಂಖ್ಯಾತರು, ನೊಬೆಲ್ ವಂಚಿತ ಮಹಿಳಾ ವಿಜ್ಞಾನಿಗಳು ಅನೇಕರಿದ್ದಾರೆ. ರೇಡಿಯಂ ಸಂಶೋಧನೆಯ ನೊಬೆಲ್ ಪ್ರಶಸ್ತಿಗೆ ಪಿಯರಿಯ ಹೆಸರು ಸೂಚಿಸಿ, ರೇಡಿಯಂ ಮಹಾಮಾತೆ ಮೇರಿಕ್ಯೂರಿಯ ಹೆಸರನ್ನೇ ‘ಫ್ರೆಂಚ್ ಅಕಾಡೆಮಿ ಆಫ್ ಸೈನ್ಸ್‍ಸ್’ ಮಹಿಳೆ ಎಂಬ ಕಾರಣಕ್ಕೆ ಬಿಟ್ಟು ಬಿಟ್ಟಿತ್ತು. ಆ ವಿಷಯ ಪಿಯರ್ ಕ್ಯೂರಿಗೆ ತಿಳಿದು ಬಂದು ‘ವಿಕಿರಣಶೀಲತೆಯ ಸಂಶೋಧನೆಯಲ್ಲಿ ಮೇರಿ ಕ್ಯೂರಿಯ ಪ್ರಮುಖ ಪಾತ್ರವನ್ನು ಪರಿಗಣಸದೆ ಇದ್ದರೆ ಅದಕ್ಕಿಂತ ಹೆಚ್ಚಿನ ವಿಪರೀತವಿರಲಾರದು’ ಎಂದು ಪತ್ರ ಬರೆದು ತಮಗೊಬ್ಬರಿಗೆ ಕೊಡುವ ನೊಬೆಲ್ ತಾವು ಸ್ವೀಕರಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದರು. ಇದರ ನಂತರವೇ ನೊಬೆಲ್ ಪ್ರಶಸ್ತಿಗೆ ಮೇರಿ ಕ್ಯೂರಿಯ ಹೆಸರನ್ನು ಸೂಚಿಸಲಾದದ್ದು. ಕಮಿಟಿಗಳಲ್ಲಿ ನಮಗೆ ಪಿಯರ್ ಕ್ಯೂರಿಯಂತಹ ಪ್ರಜ್ಞಾವಂತ ಪುರುಷರೂ ಬೇಕು.

ಡಾ.ಸಾವಿತ್ರಿ: ನಿಜ.

ಸಂ : ನೀವು ನಿಮ್ಮ ಸಾಂಸಾರಿಕ ಜೀವನ, ಸಂಶೋಧನೆಯ ಬದುಕು ಇವೆರಡನ್ನು ಸಮತೂಗಿಸುವಾಗ ಎದುರಾದ ಸವಾಲುಗಳು ಯಾವುವು?

ಡಾ.ಸಾವಿತ್ರಿ: ಮನೆಯಲ್ಲಿದ್ದಾಗ ನಾನು ಮಗಳು, ಹೆಂಡತಿ, ಸೊಸೆ, ತಾಯಿ ಎಲ್ಲ. ಆ ಪಾತ್ರಗಳತ್ತ ಕೇಂದ್ರೀಕರಿಸುತ್ತಿದ್ದೆ. ಆದರೆ ಕೆಲಸಕ್ಕೆ ಹೋದ ತಕ್ಷಣ, ನಾನು ವಿಜ್ಞಾನಿ ಮಾತ್ರ, ಮನೆಯ ವಿಷಯಗಳನ್ನು ತಾಪತ್ರಯಗಳನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದೆ. ಅಲ್ಲಿ ಹೋದ ಮೇಲೆ ‘ಅಯ್ಯೋ 5 ಗಂಟೆಗೆ ಮನೆಗೆ ಓಡಬೇಕು’ ಅಂದುಕೊಳ್ಳುತ್ತಿರಲಿಲ್ಲ. ಎಷ್ಟು ಸಮಯದವರೆಗೂ ನನ್ನ ಉಪಸ್ಥಿತಿ ವಿಭಾಗದಲ್ಲಿ ಬೇಕೋ, ನನ್ನ ಜವಾಬ್ದಾರಿಯನ್ನು ನಿರ್ವಹಿಸಲು ಇರುತ್ತಿದ್ದೆ. ನಿಮ್ಮ ಕೆಲಸಕ್ಕೆ ನಿಮ್ಮ ಪ್ರೆಸೆನ್ಸ್ ಎಲ್ಲಿಯವರೆಗೂ ಅಗತ್ಯವೋ ಆವಶ್ಯಕವೋ ಅಲ್ಲಿಯವರೆಗೂ ಇರಬೇಕು. ಆಮೇಲೆ ಮನೆಗೆ ಬಂದು ನನ್ನ ಪಾತ್ರವನ್ನು ಬದಲಿಸಿಕೊಳ್ಳುತ್ತಿದ್ದೆ. ಇದೆಲ್ಲಕ್ಕೂ ಮನೆಯವರ ಸಹಕಾರವೂ ಬೇಕು.

ಸಂ : ನಿಮ್ಮ ಪತಿಯೂ ವಿಜ್ಞಾನಿಯಾದ ಕಾರಣ ಅವರಿಗೆ ನಿಮ್ಮ ಜವಾಬ್ದಾರಿಗಳು ಅರ್ಥವಾಗುತ್ತಿದ್ದವು.

ಡಾ.ಸಾವಿತ್ರಿ: ಹೌದು. ನಮ್ಮ ಸಂಪ್ರದಾಯಸ್ಥ ಮನೆಗಳಲ್ಲಿ ಬೇಕಾದಷ್ಟು ಫಂಕ್ಷನ್ಸ್ ನಡೀತಲೇ ಇರುತ್ತವೆ. ಹಬ್ಬಗಳು, ಮದುವೆ, ಮುಂಜಿ ಅಂತೆಲ್ಲ ಬರುತ್ತಲೇ ಇರುತ್ತವೆ. ಯಾವುದಕ್ಕೂ ‘ನೀನು ಬರಲೇ ಬೇಕು, ಇದಕ್ಕೂ ಇರು, ಅದಕ್ಕೂ ಇರು, ರಜೆ ಹಾಕು’ ಎಂದು ಬಲವಂತಿಸಲಿಲ್ಲ. ನನ್ನ ಪತಿ ‘ಬರಲ್ಲ ಅವಳು, ಇರಲ್ಲ’ ಎಂದು ಸ್ಟ್ರಿಕ್ಟ್ ಆಗಿ ನನಗಿಂತ ಮೊದಲು ಅವರೇ ಹೇಳಿಬಿಡುತ್ತಿದ್ದರು. ಹಾಗಾಗಿ ಎಲ್ಲರೂ ಅದನ್ನು ಅರ್ಥ ಮಾಡಿಕೊಂಡರು. ಅವರಿಗೆ ನನ್ನ ಕೆಲಸದ ಬಗ್ಗೆ ಗೌರವ ಇತ್ತು, ನನ್ನ ಜವಾಬ್ದಾರಿಗಳು ಅವರಿಗೆ ತಿಳಿದ ಕಾರಣ ನನಗೆ ನಿಭಾಯಿಸುವುದು ಅಷ್ಟು ಕಷ್ಟವಾಗಲಿಲ್ಲ. ಶನಿವಾರ, ಭಾನುವಾರ ‘ನಾನು ಕೆಲಸಕ್ಕೆ ಹೋಗುತ್ತೇನೆ’ ಅಂದರೂ ಯಾರೂ ಗೊಣಗುತ್ತಿರಲಿಲ್ಲ,ಅರ್ಥ ಮಾಡಿಕೊಳ್ಳುತ್ತಿದ್ದರು.

ಸಂ : ನಿಮ್ಮ ಮಗನನ್ನು ಬೆಳೆಸುವಾಗ ಪ್ರಜ್ಞಾಪೂರ್ವಕ ನಿಮ್ಮ ಪ್ರಯತ್ನ ಏನಾದರೂ ಇತ್ತೆ? ಆತ ವಿವಾಹವಾಗುವ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಉದ್ಯೋಗಸ್ಥರೇ ಆಗಿರುತ್ತಾರೆ ಎಂದು ನಿಮಗೆ ತಿಳಿದಿತ್ತು.

ಡಾ.ಸಾವಿತ್ರಿ: ಹೌದು, ಕಾನ್ಷಿಯಸ್ ಎಫರ್ಟ್ ಹಾಕಿದೆವು. ಉದಾಹರಣೆಗೆ ಊಟಕ್ಕೆ ಕುಳಿತಾಗ ಟೇಬಲ್ ಒರೆಸಿಕೊಡುವುದು, ಮಗಳೇ ಮಾಡಬೇಕು ಎಂದಲ್ಲ, ಅವನೂ ಮಾಡಬೇಕು ಅಂತ. ಮನೆಗೆ ಬೇಕಾದÀ ಸಮಾನುಗಳನ್ನು ಅಜ್ಜನೊಡನೆ ಹೋಗಿ ತರುವುದು. ಅಜ್ಜಿ ಹೇಳಿದ ಕೆಲಸವನ್ನೆಲ್ಲ ಮಾಡುವುದು. ಎಲ್ಲ ಗೃಹಕೃತ್ಯಗಳಲ್ಲಿ ಮಗನನ್ನೂ ಮೊದಲಿಂದ ತೊಡಗಿಸಿದ್ದೆವು. ಅವನೂ ತುಂಬಾ ಒಳ್ಳೆಯ ಮಗನೆ, ಮಕ್ಕಳಿಬ್ಬರೂ ಕೆಲಸಗಳು ಏನೇ ಇರಲಿ, ಸದಾ ಮಾಡಲು ಸಿದ್ಧ ಇರುತ್ತಿದ್ದರು.

ಸಂ : ಈಗ ಅವರು ಏನು ಮಾಡುತ್ತಿದ್ದಾರೆ?

ಡಾ.ಸಾವಿತ್ರಿ: ನನ್ನ ಮಗ ಡಾ. ಚಂದ್ರ ಆರ್. ಮೂರ್ತಿ, ಪಿಎಚ್.ಡಿ. ಮಾಡಿ ಐಐಎಸ್ಸಿಯ ‘ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಇಂಜಿನಿಯರಿಂಗ್’ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾನೆ. ಸೊಸೆ ‘ಬ್ಯಾಂಗಳೂರ್ ಮೆಡಿಕಲ್ ಕಾಲೇಜ್’ನಲ್ಲಿ ಡಿ.ಎಮ್. ಮಾಡಿ, ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಲಿಸ್ಟ್ ಆಗಿದ್ದಾಳೆ.

ಸಂ : ಅವರದೂ ಅಷ್ಟೇ ಸವಾಲಿನಂತಹ ಕೆಲಸ. ನಿಮ್ಮ ಮುಂದಿನ ಪೀಳಿಗೆಯನ್ನು ಸಾಕಷ್ಟು ನೀವು ತಯಾರು ಮಾಡಿದಿರಿ.

ಡಾ.ಸಾವಿತ್ರಿ: ಹೌದು, ಅವರಿಗೆ ಒಂದು ಮಗು ಇದೆ. ನನ್ನ ಸೊಸೆಯದು ಬಹಳ ಒತ್ತಡದ ಕೆಲಸ. ನನ್ನ ಮಗನದಾದರೂ ಕೆಲವೊಮ್ಮೆ ಆನ್‍ಲೈನ್ ಮಾಡಬಹುದು. ಸೂಪರ್ ಸ್ಪೆಷಲೈಸೇಷನ್ ವೈದ್ಯಳಾಗಿ ನನ್ನ ಸೊಸೆಯದು ಚಾಲೆಂಜಿಂಗ್ ಜಾಬ್. ಅದನ್ನು ಮಗ ಅರ್ಥ ಮಾಡಿಕೊಳ್ಳುತ್ತಾನೆ, ಆತ ಒಂದು ಬಗೆಯಲ್ಲಿ ‘ಮಿಸ್ಟರ್ ಮಾಮ್’ ಪಾತ್ರ ವಹಿಸುತ್ತಾನೆ. ಡಾಕ್ಟರ್ ಕೆಲಸ ಆನ್‍ಲೈನ್ ಮಾಡೋಕಾಗೊಲ್ಲವಲ್ಲ. ಆದರೆ ಆಕೆಯೂ ತುಂಬಾನೇ ಸಹಕಾರ ಕೊಟ್ಟಿದ್ದಾಳೆ.

ಸಂ : ನಿಮ್ಮ ಮಗಳು?

ಡಾ.ಸಾವಿತ್ರಿ: ಮಗಳು ಸಹ ಮದುವೆಯಾದ ನಂತರವೇ ಡಿ.ಸಿ.ಎಚ್. ಮಾಡಿಕೊಂಡು, ಹನ್ನೊಂದು ವರ್ಷಗಳಿಂದ ಗಿರಿನಗರದಲ್ಲಿ ತನ್ನ ‘ರಾಘವ ಚೈಲ್ಡ್ ಕ್ಲಿನಿಕ್’ನಲ್ಲಿ ಬಿಡುವಿಲ್ಲದ ವೈದ್ಯಳಾಗಿದ್ದಾಳೆ. ಅವಳು ಸಹಾ ಮನೆ ಮತ್ತು ಮಕ್ಕಳನ್ನು ನಿಭಾಯಿಸುವುದರ ಜೊತೆಗೆ, ಒಬ್ಬ ಉತ್ತಮ ಪೀಡಿಯಾಟ್ರಿಷಿಯನ್ ಎಂದು ಹೆಸರು ಗಳಿಸಿದ್ದಾಳೆ. ಪೀಡಿಯಾಟ್ರಿಷಿಯನ್ ಆದ ಕಾರಣ ಸದಾ ಬಿಜಿ, ಆಕೆಗೆ ಇಬ್ಬರು ಚಿಕ್ಕ ಮಕ್ಕಳು.

ಸಂ : ಮೇಡಂ, ಸಂತೃಪ್ತಿಯ ಕೌಟುಂಬಿಕ ಜೀವನದೊಡನೆ ಯಶಸ್ವೀ ಸಂಶೋಧನಾ ಬದುಕನ್ನು ಸಮತೂಗಿಸಿ ಸಾಧಿಸಿರುವ ವಿಜ್ಞಾನಿ ನೀವು. ನಿಮ್ಮ ಉದಾಹರಣೆ ಪ್ರತಿಯೊಬ್ಬ ಹೆಣ್ಣು ಮಗುವಿಗೂ ಪ್ರೇರಣೆ ನೀಡುತ್ತದೆ. ತಾಯ್ತಂದೆಯರಿಗೂ ಲಿಂಗ ತಾರತಮ್ಯವಿಲ್ಲದೆ ಬೆಳೆಸಲು ಸ್ಫೂರ್ತಿಯಾಗಿದ್ದೀರಿ. ಸಮಾನತೆಯ ಸಂಸ್ಕøತಿಯನ್ನು, ಸಮಾಜವನ್ನು ಸೃಷ್ಟಿಸುವಲ್ಲಿ ನಿಮ್ಮಂಥವರ ಮಾದರಿ ಬೇಕಿದೆ. ನಿಮ್ಮ ಇಷ್ಟು ಸಮಯ ನನಗೆ ಕೊಟ್ಟಿರಿ, ಧನ್ಯವಾದಗಳು.ಡಾ. ಎಚ್.ಎಸ್. ಸಾವಿತ್ರಿ ಅವರ ಸಂಶೋಧನಾ ಕ್ಷೇತ್ರ

ಬೆಳೆ ಹಾನಿಗೆ ಬಹಳಷ್ಟು ಬಾರಿ ವೈರಸ್‍ಗಳು ಕಾರಣ. ಈ ವೈರಸ್‍ಗಳನ್ನು ನಿಯಂತ್ರಣ ಮಾಡುವ ತಂತ್ರವನ್ನು ಕಂಡು ಹಿಡಿಯಲು, ವೈರಸ್‍ನ ‘ಅಣು ರಚನೆ’ಯನ್ನು, ಗುಣಲಕ್ಷಣಗಳನ್ನು ತಿಳಿಯುವುದು ಅಗತ್ಯ. ಪ್ರೊ. ಎಚ್.ಎಸ್. ಸಾವಿತ್ರಿ, ‘ಸಸ್ಯಗಳ ವೈರಸ್’ಗಳನ್ನು ಕುರಿತು ಮುಂಚೂಣಿಯ ಪ್ರಥಮಾನ್ವೇಷಕ ಸಂಶೋಧನೆಗಳನ್ನು ನಡೆಸಿದರು. ಸ್ಥಳೀಯ ಸಸ್ಯಗಳಿಗೆ ತಗಲುವ ವೈರಸ್ ಅಧ್ಯಯನ ಸಾವಿತ್ರಿಯವರ ಸಂಶೋಧನೆಯ ಪ್ರಮುಖ ಭಾಗವಾಯಿತು. ಇಲ್ಲಿಯ ವೈರಸ್‍ಗಳು ಪ್ರಪಂಚದ ಇತರೆ ಭಾಗದ ವೈರಸ್‍ಗಳಿಗಿಂತ ಭಿನ್ನವಾಗಿರುತ್ತವೆ. ಕರ್ನಾಟಕದ ದೊಣ್ಣೆ ಮೆಣಸಿನ ಕಾಯಿಗೆ ಬಡಿಯುವ ವೈರಸ್, ಟೊಮ್ಯಾಟೋ ಎಲೆಗಳು ಸುರುಳಿಯಾಗುವಂತೆ ಮಾಡುವ ವೈರಸ್ ಇವೆಲ್ಲಕ್ಕೂ ವಿಶೇಷ ಲಕ್ಷಣಗಳಿವೆ. ಇವುಗಳಲ್ಲಿ ಅನೇಕ ವೈರಸ್‍ಗಳ ಸಂಪೂರ್ಣ ‘ಜೀನೋಮ್’ – ವಂಶಾವಳಿಯನ್ನು ಸಿದ್ಧಪಡಿಸಿದ ಸಾಧನೆ ಇವರದು. ಪ್ರಯೋಗಶಾಲೆಯಲ್ಲಿ ಕಂಡು ಹಿಡಿದ ಆರಂಭಿಕ ವೈರಸ್ ‘ಜೀನೋಮ್’ ಇವರದೆಂದರೆ ಉತ್ಪ್ರೇಕ್ಷೆಯಾಗಲಾರದು. ಇವರು ಕಿಣ್ವಗಳ ರಚನೆ ಮತ್ತು ಗುಣಲಕ್ಷಣಗಳ ಬಗ್ಗೆಯೂ ಬಹಳಷ್ಟು ಕೆಲಸ ಮಾಡಿದ್ದಾರೆ. ಇವರು 220ಕ್ಕೂ ಅಧಿಕ ಸಂಖ್ಯೆಯಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಸಸ್ಯಗಳಿಗೆ ತಗಲುವ ವೈರಸ್ ಅಧ್ಯಯನವಲ್ಲದೆ, ಪ್ರೊ. ಸಾವಿತ್ರಿ ಅವರು ಮನುಷ್ಯರ ವಂಶವಾಹಿಯನ್ನು ಕುರಿತೂ ಸಂಶೋಧನೆ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿರುವ ಹತ್ತಿರದ ಸಂಬಂಧಿಗಳಲ್ಲಿ ನಡೆಯುವ ಮದುವೆಗಳು, ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಇವರ ಸಂಶೋಧನಾ ತನಿಖೆಯ ಒಂದು ವಿಷಯವಾಗಿತ್ತು. ಒಂದು ದೊಡ್ಡ ಕುಟುಂಬವನ್ನು ಆರಿಸಿಕೊಂಡು ಮೂರು ಪೀಳಿಗೆಗಳ ಕುಟುಂಬದ ಸದಸ್ಯರ ವಂಶವಾಹಿಗಳು ಯಾವ ರೀತಿ ಸಂಬಂಧವನ್ನು ಹೊಂದಿವೆ ಎಂದು ಎರಡು ದಶಕಗಳಿಗೂ ಹಿಂದೆ ನಡೆಸಿದ ಇವರ ಅಧ್ಯಯನ, ಅತ್ಯಂತ ಕುತೂಹಲದ ಸಂಶೋಧನೆಯಾಗಿತ್ತು. ಪ್ರೊ. ಅಪ್ಪಾಜಿ ರಾವ್ ಅವರ ಒಡಗೂಡಿ ನಡೆಸಿದ ಸಂಶೋಧನೆ ಇದು. ಆ ಕುಟುಂಬದ ‘ವಂಶವಾಹಿ ನಕಾಶೆ’ಯನ್ನು ಇವರು ಸಿದ್ಧಪಡಿಸಿದರು. ಆ ಕುಟುಂಬದಲ್ಲಿ ಅನೇಕ ಪೀಳಿಗೆಗಳನ್ನು ಅಧ್ಯಯನ ಮಾಡಿ, ಕುಟುಂಬದ ಅತ್ಯಂತ ಹಿರಿಯನಲ್ಲಿದ್ದ ಕರುಳಿನ ಕ್ಯಾನ್ಸರಿಗೆ ಕಾರಣವಾದ ವಂಶವಾಹಿಯ ವಿಕೃತಿಯನ್ನು ಗುರುತಿಸಿದರು. ಈ ಕ್ಯಾನ್ಸರ್ ಕಾರಕ ವಂಶವಾಹಿಯ ವಿಕೃತಿ, ಯಾವ ಯಾವ ಪೀಳಿಗೆಯಲ್ಲಿ ಯಾರ ಯಾರಲ್ಲಿ ವ್ಯಕ್ತವಾಯಿತು, ಯಾರಲ್ಲಿ ಅದು ವ್ಯಕ್ತವಾಗದೆ ಸುಪ್ತವಾಗಿಯೇ ಉಳಿಯಿತು ಎಂಬುದನ್ನು ಅಧ್ಯಯನ ಮಾಡಿ ತಿಳಿಸಿದರು. ಮುಂದೆ ಕ್ಯಾನ್ಸರ್ ಬರುವ ಸಂಭವವಿದೆ ಎಂದು ಇಂದೇ ತಿಳಿಯುವುದಾದರೆ, ಅದಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದಿದೆ. ‘ಜೀನೋಮ್ ಮ್ಯಾಪಿಂಗ್’ – ಡಿಎನ್‍ಎ ಆಧಾರಿತ ಪರೀಕ್ಷೆಯ ಸಂಶೋಧನಾ ವಿಧಾನದ ಮೂಲಕ, ಕುಟುಂಬದಲ್ಲಿ ಬರುವಂತಹ ಕರುಳಿನ ಕ್ಯಾನ್ಸರ್‍ನ ಸಂಭವನೀಯತೆಯ ಮುನ್ನೆಚ್ಚರಿಕೆ ನೀಡಬಲ್ಲ ‘ಪ್ರಿಡಿಕ್ಟಿವ್ ಟೆಸ್ಟಿಂಗ್’ನ ಸಾಧ್ಯತೆಯನ್ನು ಇವರು ತೋರಿಸಿದ್ದರು.

***


.
ಬಾಕ್ಸ್ 1
ಡಾ. ಎಚ್.ಎಸ್. ಸಾವಿತ್ರಿ ಅವರ ಸಂಶೋಧನಾ ಕ್ಷೇತ್ರ

ಬೆಳೆ ಹಾನಿಗೆ ಬಹಳಷ್ಟು ಬಾರಿ ವೈರಸ್‍ಗಳು ಕಾರಣ. ಈ ವೈರಸ್‍ಗಳನ್ನು ನಿಯಂತ್ರಣ ಮಾಡುವ ತಂತ್ರವನ್ನು ಕಂಡು ಹಿಡಿಯಲು, ವೈರಸ್‍ನ ‘ಅಣು ರಚನೆ’ಯನ್ನು, ಗುಣಲಕ್ಷಣಗಳನ್ನು ತಿಳಿಯುವುದು ಅಗತ್ಯ. ಪ್ರೊ. ಎಚ್.ಎಸ್. ಸಾವಿತ್ರಿ, ‘ಸಸ್ಯಗಳ ವೈರಸ್’ಗಳನ್ನು ಕುರಿತು ಮುಂಚೂಣಿಯ ಪ್ರಥಮಾನ್ವೇಷಕ ಸಂಶೋಧನೆಗಳನ್ನು ನಡೆಸಿದರು. ಸ್ಥಳೀಯ ಸಸ್ಯಗಳಿಗೆ ತಗಲುವ ವೈರಸ್ ಅಧ್ಯಯನ ಸಾವಿತ್ರಿಯವರ ಸಂಶೋಧನೆಯ ಪ್ರಮುಖ ಭಾಗವಾಯಿತು. ಇಲ್ಲಿಯ ವೈರಸ್‍ಗಳು ಪ್ರಪಂಚದ ಇತರೆ ಭಾಗದ ವೈರಸ್‍ಗಳಿಗಿಂತ ಭಿನ್ನವಾಗಿರುತ್ತವೆ. ಕರ್ನಾಟಕದ ದೊಣ್ಣೆ ಮೆಣಸಿನ ಕಾಯಿಗೆ ಬಡಿಯುವ ವೈರಸ್, ಟೊಮ್ಯಾಟೋ ಎಲೆಗಳು ಸುರುಳಿಯಾಗುವಂತೆ ಮಾಡುವ ವೈರಸ್ ಇವೆಲ್ಲಕ್ಕೂ ವಿಶೇಷ ಲಕ್ಷಣಗಳಿವೆ. ಇವುಗಳಲ್ಲಿ ಅನೇಕ ವೈರಸ್‍ಗಳ ಸಂಪೂರ್ಣ ‘ಜೀನೋಮ್’ – ವಂಶಾವಳಿಯನ್ನು ಸಿದ್ಧಪಡಿಸಿದ ಸಾಧನೆ ಇವರದು. ಪ್ರಯೋಗಶಾಲೆಯಲ್ಲಿ ಕಂಡು ಹಿಡಿದ ಆರಂಭಿಕ ವೈರಸ್ ‘ಜೀನೋಮ್’ ಇವರದೆಂದರೆ ಉತ್ಪ್ರೇಕ್ಷೆಯಾಗಲಾರದು. ಇವರು ಕಿಣ್ವಗಳ ರಚನೆ ಮತ್ತು ಗುಣಲಕ್ಷಣಗಳ ಬಗ್ಗೆಯೂ ಬಹಳಷ್ಟು ಕೆಲಸ ಮಾಡಿದ್ದಾರೆ. ಇವರು 220ಕ್ಕೂ ಅಧಿಕ ಸಂಖ್ಯೆಯಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಸಸ್ಯಗಳಿಗೆ ತಗಲುವ ವೈರಸ್ ಅಧ್ಯಯನವಲ್ಲದೆ, ಪ್ರೊ. ಸಾವಿತ್ರಿ ಅವರು ಮನುಷ್ಯರ ವಂಶವಾಹಿಯನ್ನು ಕುರಿತೂ ಸಂಶೋಧನೆ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿರುವ ಹತ್ತಿರದ ಸಂಬಂಧಿಗಳಲ್ಲಿ ನಡೆಯುವ ಮದುವೆಗಳು, ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಇವರ ಸಂಶೋಧನಾ ತನಿಖೆಯ ಒಂದು ವಿಷಯವಾಗಿತ್ತು.

ಒಂದು ದೊಡ್ಡ ಕುಟುಂಬವನ್ನು ಆರಿಸಿಕೊಂಡು ಮೂರು ಪೀಳಿಗೆಗಳ ಕುಟುಂಬದ ಸದಸ್ಯರ ವಂಶವಾಹಿಗಳು ಯಾವ ರೀತಿ ಸಂಬಂಧವನ್ನು ಹೊಂದಿವೆ ಎಂದು ಎರಡು ದಶಕಗಳಿಗೂ ಹಿಂದೆ ನಡೆಸಿದ ಇವರ ಅಧ್ಯಯನ, ಅತ್ಯಂತ ಕುತೂಹಲದ ಸಂಶೋಧನೆಯಾಗಿತ್ತು. ಪ್ರೊ. ಅಪ್ಪಾಜಿ ರಾವ್ ಅವರ ಒಡಗೂಡಿ ನಡೆಸಿದ ಸಂಶೋಧನೆ ಇದು. ಆ ಕುಟುಂಬದ ‘ವಂಶವಾಹಿ ನಕಾಶೆ’ಯನ್ನು ಇವರು ಸಿದ್ಧಪಡಿಸಿದರು. ಆ ಕುಟುಂಬದಲ್ಲಿ ಅನೇಕ ಪೀಳಿಗೆಗಳನ್ನು ಅಧ್ಯಯನ ಮಾಡಿ, ಕುಟುಂಬದ ಅತ್ಯಂತ ಹಿರಿಯನಲ್ಲಿದ್ದ ಕರುಳಿನ ಕ್ಯಾನ್ಸರಿಗೆ ಕಾರಣವಾದ ವಂಶವಾಹಿಯ ವಿಕೃತಿಯನ್ನು ಗುರುತಿಸಿದರು. ಈ ಕ್ಯಾನ್ಸರ್ ಕಾರಕ ವಂಶವಾಹಿಯ ವಿಕೃತಿ, ಯಾವ ಯಾವ ಪೀಳಿಗೆಯಲ್ಲಿ ಯಾರ ಯಾರಲ್ಲಿ ವ್ಯಕ್ತವಾಯಿತು, ಯಾರಲ್ಲಿ ಅದು ವ್ಯಕ್ತವಾಗದೆ ಸುಪ್ತವಾಗಿಯೇ ಉಳಿಯಿತು ಎಂಬುದನ್ನು ಅಧ್ಯಯನ ಮಾಡಿ ತಿಳಿಸಿದರು. ಮುಂದೆ ಕ್ಯಾನ್ಸರ್ ಬರುವ ಸಂಭವವಿದೆ ಎಂದು ಇಂದೇ ತಿಳಿಯುವುದಾದರೆ, ಅದಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದಿದೆ. ‘ಜೀನೋಮ್ ಮ್ಯಾಪಿಂಗ್’ – ಡಿಎನ್‍ಎ ಆಧಾರಿತ ಪರೀಕ್ಷೆಯ ಸಂಶೋಧನಾ ವಿಧಾನದ ಮೂಲಕ, ಕುಟುಂಬದಲ್ಲಿ ಬರುವಂತಹ ಕರುಳಿನ ಕ್ಯಾನ್ಸರ್‍ನ ಸಂಭವನೀಯತೆಯ ಮುನ್ನೆಚ್ಚರಿಕೆ ನೀಡಬಲ್ಲ ‘ಪ್ರಿಡಿಕ್ಟಿವ್ ಟೆಸ್ಟಿಂಗ್’ನ ಸಾಧ್ಯತೆಯನ್ನು ಇವರು ತೋರಿಸಿದ್ದರು.

ಬಾಕ್ಸ್ 2

ಪ್ರೊ. ಎಚ್.ಎಸ್. ಸಾವಿತ್ರಿಯವರು ದಿನಾಂಕ 18 ಮಾರ್ಚ್ 1951ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಅವರು ಜೆ.ಸಿ.ಬೋಸ್ ಫೆಲೋ ಆಗಿದ್ದಾರೆ. ‘ಜೆ.ಸಿ.ಬೋಸ್ ರಾಷ್ಟ್ರೀಯ ಫೆಲೋಶಿಪ್’ ಸಕ್ರಿಯವಾಗಿರುವ ವಿಜ್ಞಾನಿಗಳ ಅಸಾಧಾರಣ ಸಂಶೋಧನಾ ಕಾರ್ಯವನ್ನು ಗುರುತಿಸಿ, ಬಹಳಷ್ಟು ಆಯ್ಕೆ ಮಾಡಿ, ವಿಜ್ಞಾನಿಗಳಿಗಷ್ಟೆ ನೀಡುವಂತಹುದು. ಪ್ರೊ. ಎಚ್.ಎಸ್. ಸಾವಿತ್ರಿ ಅವರಿಗೆ ಇಸವಿ 1991ರಲ್ಲಿ ‘ಸೊಸೈಟಿ ಆಫ್ ಬಯಾಲಜಿಕಲ್ ಕೆಮಿಸ್ಟ್’ ನೀಡುವ ‘ಪಿ.ಎಸ್. ಶರ್ಮ ಮೆಮೊರಿಯಲ್ ಪ್ರಶಸ್ತಿ’ ಲಭಿಸಿದೆÉ. ಇವರು ‘ಇಂಡಿಯನ್ ಅಕಾಡೆಮಿ ಆಫ್ ಸಯನ್ಸಸ್’, ‘ನ್ಯಾಷನಲ್ ಅಕಾಡೆಮಿ ಆಫ್ ಸಯನ್ಸ್‍ಸ್’ ಮತ್ತು ‘ಇಂಡಿಯನ್ ನ್ಯಾಷನಲ್ ಸಯನ್ಸಸ್ ಅಕಾಡೆಮಿ’ಯ ಫೆಲೋ ಕೂಡಾ ಆಗಿದ್ದಾರೆ. ಇಸವಿ 2010ರಲ್ಲಿ ಐಐಎಸ್ಸಿಯ ‘ಅಲುಮ್ನೈ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರಿಸರ್ಚ್’ ಗಳಿಸಿದ್ದಾರೆ. ಇದಲ್ಲದೆ, ಇಸವಿ 2011ರಲ್ಲಿ ಇಂಡಿಯನ್ ಸಯನ್ಸ್ ಕಾಂಗ್ರೆಸ್‍ನಲ್ಲಿ, ‘ಎಕ್ಸಲೆನ್ಸ್ ಇನ್ ಸೈಯನ್ಸ್ ಅಂಡ್ ಟೆಕ್ನಾಲಜಿ’ ಪ್ರಶಸ್ತಿಯನ್ನು ಪ್ರಧಾನ ಮಂತ್ರಿಗಳಿಂದ ಸ್ವೀಕರಿಸಿದ್ದಾರೆ.


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *