ಸಂಗೀತಲೋಕದಲ್ಲಿ ವಸಂತಕಾಲ!- ಆರ್. ಪೂರ್ಣಿಮಾ

ಯಾವ ಕ್ಷೇತ್ರದ `ಹಿಸ್ಟರಿ’ ಯನ್ನು ಪರಿಶೀಲಿಸಿದರೂ ಅಲ್ಲಿ ಮೇಲ್ನೋಟಕ್ಕೇ ಕಾಣುವುದು ಕಿಕ್ಕಿರಿದ `ಹಿಸ್ ಸ್ಟೋರಿ’ ಗಳು. ಎಲ್ಲಿವೆ `ಹರ್ ಸ್ಟೋರಿ’ ಗಳು ಎಂದು ನೀವುನಾವು ಕೆದಕಿಬೆದಕಿ ಹುಡುಕಬೇಕು. “ಪ್ರತಿಭೆಗೆ ಗಂಡು ಹೆಣ್ಣು ಎನ್ನುವ ವ್ಯತ್ಯಾಸ ಇರುವುದಿಲ್ಲ, ಅದೆಲ್ಲಾ ಲೆಕ್ಕಕ್ಕೇ ಬರುವುದಿಲ್ಲ” ಎಂದೆಲ್ಲಾ ಅನೇಕರು ಅದ್ಭುತ ಸತ್ಯ ಅನ್ನುವಂತೆ ಮಂಡಿಸುವ ವಾದವನ್ನು ನಾವು ಕೇಳುತ್ತಿರುತ್ತೇವೆ. ಆದರೆ ಪ್ರತಿಭೆಗೆ ಅವಕಾಶ ಮತ್ತು ಮನ್ನಣೆ ಕೊಡುವ ವಿಚಾರ ಬಂದಾಗ ಈ ಜೈವಿಕ ವ್ಯತ್ಯಾಸ ಮಾತ್ರವಲ್ಲ, ಸಾಮಾಜಿಕ ಹಿನ್ನೆಲೆಯ ವ್ಯತ್ಯಾಸವೂ ಲೆಕ್ಕಕ್ಕೆ ಬಂದೇ ಬರುತ್ತದೆ ಅನ್ನುವುದು ಎಲ್ಲ ಕಾಲದ ಶಾಶ್ವತ ಸತ್ಯ.
ಕಲೆ ಮತ್ತು ಸಾಹಿತ್ಯ ರಂಗದಲ್ಲಿ ಈ ತಾರತಮ್ಯ ಕುರಿತು ಕಾಲಕಾಲಕ್ಕೆ ಚರ್ಚೆಗಳು ನಡೆಯುತ್ತಲೇ ಇವೆ. ಸಂಗೀತ ಕ್ಷೇತ್ರದಲ್ಲಂತೂ ಕಲಾವಿದರ ಪ್ರತಿಭೆ ವಿಶಾಲ ವೇದಿಕೆಯ ಮೇಲೇ ಸಾಬೀತಾಗುತ್ತದಾದರೂ ಮೊದಲಿಗೆ ಹೆಣ್ಣುಮಕ್ಕಳಿಗೆ ವೇದಿಕೆ ಹತ್ತಲು ಅವಕಾಶ ಸಿಗಬೇಕಷ್ಟೆ. `ಹಾಡುಹಕ್ಕಿಗೆ ಬೇಕೇ ಬಿರುದು ಸನ್ಮಾನ?’ ಎಂದು ಎಷ್ಟೇ ಅಂದುಕೊಂಡರೂ ಪ್ರತಿಭೆಗೆ ಪುರಸ್ಕಾರವೂ ಪೆÇೀಷಕಾಂಶ. ಹಾಗಾಗಿ ಸಂಗೀತ ಕ್ಷೇತ್ರದಲ್ಲಿ ಈ ಹೊತ್ತು ಸುದ್ದಿಯಾಗಿರುವ ನಾಲ್ವರು ಕಲಾವಿದೆಯರ ಯಶಸ್ಸಿನ ಆಲಾಪನೆ, ಸಂಗೀತಾಭಿಮಾನಿಗಳ ಪಾಲಿಗೆ ಇಂಪಾಗಿ ಕೇಳುತ್ತಿದೆ. ಅಂತೂ ವಿದುಷಿಯರ ಸಾಧನೆಗೆ ಅರ್ಹ ಮನ್ನಣೆಗಳ ಅಮೃತವರ್ಷಿಣಿ!

ಕರ್ನಾಟಕದ ಮೂವರು ಸಂಗೀತ ಕಲಾವಿದೆಯರು ಈ ಬಾರಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಪಡೆದಿದ್ದಾರೆ. ಕರ್ನಾಟಕ ಸಂಗೀತದ ವೀಣಾವಾದಕಿ ಡಾ. ಸುಮಾ ಸುಧೀಂದ್ರ, ಗಾಯಕಿ ಎಂ.ಎಸ್. ಶೀಲಾ ಮತ್ತು ಹಿಂದೂಸ್ತಾನಿ ಸಂಗೀತದ ಗಾಯಕಿ ಲಲಿತ್ ಜೆ. ರಾವ್ ಇದಕ್ಕೆ ಪಾತ್ರರಾಗಿದ್ದಾರೆ. ಈ ಸಂತಸದ ಜೊತೆಗೆ ಮತ್ತೊಂದೂ ಸೇರಿಕೊಂಡಿದೆ. ಶತಮಾನ ಮೀರಿದ ಇತಿಹಾಸ ಇರುವ ಸಂಗೀತ ಸಂಸ್ಥೆಯಾದ ಬೆಂಗಳೂರು ಗಾಯನ ಸಮಾಜದ 49 ನೇ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಗಾಯಕಿ ಡಾ. ಟಿ.ಎಸ್. ಸತ್ಯವತಿ ಆಯ್ಕೆಯಾಗಿದ್ದಾರೆ. ಈ ನಾಲ್ವರು ಸಂಗೀತ ಕಲಾವಿದೆಯರ ಆರೋಹಣವನ್ನು ಹಾರ್ದಿಕವಾಗಿ ಅಭಿನಂದಿಸೋಣ.
ಬಾಲ್ಯದಲ್ಲೇ ಸಂಗೀತಾಭ್ಯಾಸ ಆರಂಭಿಸಿದ ವೀಣಾವಿದುಷಿ ಡಾ. ಸುಮಾ ಸುಧೀಂದ್ರ ಅವರ ಸಂಗೀತಯಾನ ಬಹಳ ವೈಶಿಷ್ಟ್ಯಪೂರ್ಣ. ಖ್ಯಾತ ವೈಣಿಕ ವೀಣೆ ರಾಜಾರಾಯರ ಮೈಸೂರು ಪರಂಪರೆ ಮತ್ತು ನಂತರ ಆಂಧ್ರದ ಪ್ರಸಿದ್ಧ ವೈಣಿಕ ಚಿಟ್ಟಿಬಾಬು ಅವರ ಪ್ರಯೋಗಶೀಲತೆ – ಈ ಇಬ್ಬರೂ ಗುರುಗಳ ಶಿಕ್ಷಣದ ಅತ್ಯುತ್ತಮ ಅಂಶಗಳನ್ನು ಹದವಾಗಿ ಹೊಂದಿಸಿ ಸುಮಾ ತಮ್ಮದೇ ಆದ ವಾದನಶೈಲಿಯನ್ನು ರೂಪಿಸಿಕೊಂಡರು. ವೀಣೆಯೊಂದಿಗೆ ವಿಶ್ವಸಂಚಾರ ಮಾಡುವುದಲ್ಲದೆ ಸಂಗೀತೋತ್ಸವಗಳ ಆಯೋಜನೆ, ಸಂಗೀತದ ಕಾರ್ಯಾಗಾರಗಳಲ್ಲಿ ತರಬೇತಿ, ಶಿಷ್ಯರಿಗೆ ಆಪ್ತ ಮತ್ತು ಆನ್ಲೈನ್ ಪಾಠ, ಸಂಗೀತ ಸಂಸ್ಥೆಗಳ ನೇತೃತ್ವ ಮುಂತಾದ ಹತ್ತುಹಲವು ಕೆಲಸಕಾರ್ಯಗಳನ್ನು ಮಾಡುವ ಸುಮಾ ಸುಧೀಂದ್ರ, ಮಹಿಳಾ ಕ್ರಿಯಾಶೀಲತೆಯ ಸುಮಧುರ ಪ್ರತೀಕ ಎನ್ನುವುದು ನಿಸ್ಸಂಶಯ.
ಪ್ರಸಿದ್ಧ ವಿದ್ವಾಂಸ ಆರ್.ಕೆ. ಶ್ರೀಕಂಠನ್ ಅವರು ಮುಕ್ಕಾಲು ಶತಮಾನಕ್ಕೂ ಹೆಚ್ಚುಕಾಲ ಆಸ್ಥೆಯಿಂದ ಪೆÇರೆದ ನಮ್ಮ ಸಂಗೀತ ಪರಂಪರೆಯ ಸಕಲ ಮೌಲ್ಯಗಳನ್ನೂ ಸಮರ್ಥವಾಗಿ ಪ್ರತಿನಿಧಿಸುವ ಕಲಾವಿದೆ ಎಂ.ಎಸ್. ಶೀಲಾ. ತಾಯಿ ವಿದುಷಿ ಎಂ.ಎನ್. ರತ್ನ ಅವರಿಂದ ಪಡೆದ ಸಂಗೀತದ ಅಭಿರುಚಿ ಮತ್ತು ಪ್ರತಿಭೆಯನ್ನು ಅಂಥ ಗುರುವಿನ ಮಾರ್ಗದರ್ಶನದಲ್ಲಿ ಅವರು ಬೇರೊಂದು ಆಯಾಮಕ್ಕೆ ವಿಸ್ತರಿಸಿಕೊಂಡರು.

ಸತತ ತರಬೇತಿ, ಕಛೇರಿಗಳು, ಅಪೂರ್ವ ಕೃತಿಗಳ ಪ್ರಸಾರ, ಸಂಗೀತ ಸಂಚಾರದ ಜೊತೆಗೆ ಅವರು ಶ್ರದ್ಧೆಯಿಂದ ಕೈಗೊಂಡ ಸಂಗೀತದ ಧ್ವನಿಮುದ್ರಣ ದಾಖಲೀಕರಣ ನಮ್ಮ ನಾಡಿಗೆ ಕೊಟ್ಟ ಅದ್ಭುತ ಕೊಡುಗೆ. ಮುನ್ನೂರಕ್ಕೂ ಹೆಚ್ಚು ಧ್ವನಿಮುದ್ರಿಕೆಗಳ ಮೂಲಕ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೆ ಕಾದಿರಿಸುವ ಅವರ ಪ್ರಯತ್ನ ಅವರ ಸಂಗೀತದಷ್ಟೇ ಆಪ್ಯಾಯಮಾನ.
ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಅಸಾಮಾನ್ಯ ಪರಂಪರೆಯಿದೆ. ಎಲ್ಲ ಘರಾಣೆಗಳಿಗೆ ಸೇರಿದ ಇಲ್ಲಿರುವ ಪ್ರತಿಭಾವಂತರು ತಮ್ಮ ಸಾಧನೆಯಿಂದ ದೇಶವಿದೇಶಗಳಲ್ಲಿ ಹೆಸರಾಗಿರುವುದು ಎಲ್ಲರಿಗೂ ಗೊತ್ತು. ಆಗ್ರಾ ಅತ್ರೌಳಿ ಘರಾಣೆಯ ವಿದುಷಿ ಡಾ. ಲಲಿತ್ ಜೆ. ರಾವ್ ಅವರ ಸಂಗೀತ ಪಯಣ ಹಲವು ವಿಸ್ಮಯಗಳಿಂದ ಕೂಡಿದೆ. ಇತ್ತ ಟಾಟಾ ಇನ್ಸ್ಟಿಟ್ಯೂಟ್ ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಉನ್ನತ ಶಿಕ್ಷಣ, ಅತ್ತ ಹಿಂದೂಸ್ತಾನಿ ಸಂಗೀತದ ಕಲಿಕೆ – ಇವೆರಡನ್ನೂ ಸಮಪ್ರೀತಿಯಿಂದ ನಿಭಾಯಿಸಿದ ಲಲಿತ್ ಅವರ ಮೇಧಾವಿತನ ಯಾವ ಕಾಲಕ್ಕೂ ಮಹಿಳೆಯರಿಗೆ ಮಾದರಿ. ಪಂಡಿತ ರಾಮರಾವ್ ನಾಯಕ್, ದಿನಕರ ಕಾಯ್ಕಿಣಿ, ಖಾದಿಮ್ ಹುಸೇನ್ ಖಾನ್ ಮೊದಲಾದ ದಿಗ್ಗಜರ ಬಳಿ ಕಲಿತ ಸಂಗೀತ ಕೊನೆಗೂ ಅವರನ್ನು ಇಂಜಿನಿಯರಿಂಗ್ ಬಿಡಿಸಿ ತನ್ನಲ್ಲೇ ಉಳಿಸಿಕೊಂಡಿತು.

ಕರ್ನಾಟಕ ಸಂಗೀತ ಮತ್ತು ಸಾಹಿತ್ಯದ ಪ್ರತಿಭಾವಂತ ವಿದುಷಿ ಟಿ.ಎಸ್. ಸತ್ಯವತಿ ಅವರು ಕೂಡ ಗುರುವರೇಣ್ಯ ಆರ್.ಕೆ. ಶ್ರೀಕಂಠನ್ ಅವರ ಶಿಷ್ಯತ್ವದಲ್ಲಿ ಅರಳಿದ ಪ್ರತಿಭಾಪುಷ್ಪ. ತಾಯಿಯ ಕಣ್ಭೆಳಕಿನಲ್ಲಿ ಚಿಕ್ಕಂದಿನಲ್ಲೇ ಸಂಗೀತ ಕಲಿತ ಅವರು ಅಕ್ಕ ವಿದುಷಿ ವಸಂತಮಾಧವಿ ಅವರ ನೆರಳಿನಲ್ಲೂ ಸಂಗೀತದ ಹಲವು ಸೂಕ್ಷ್ಮಗಳನ್ನು ಅರಿತರು. ದೇಶದಾದ್ಯಂತ ಸಂಗೀತ ಕಾರ್ಯಾಗಾರಗಳು, ಉಪನ್ಯಾಸಗಳು, ಕಾರ್ಯಕ್ರಮಗಳು ಎಲ್ಲವನ್ನೂ ನಿರ್ವಹಿಸುತ್ತ, ಹೊಸ ಉತ್ಸಾಹದಲ್ಲಿ ಅಪರೂಪದ ಕೃತಿಗಳನ್ನು ಕಲಿಯುತ್ತ, ಬೋಧಿಸುತ್ತ ಸತ್ಯವತಿ ಸಂಗೀತವನ್ನೇ ಅಕ್ಷರಶಃ ಉಸಿರಾಡುತ್ತಾರೆ. ಸಮ್ಮೇಳನಾಧ್ಯಕ್ಷರ ಪೀಠದಲ್ಲಿ ಕುಳಿತರೂ ಅವರ ಮನ, ಕಿರಿಯರಿಗೆ ಬೋಧಿಸುವ ಹೊಸ ವಿನ್ಯಾಸದ ಕಡೆ ಹೊರಳುತ್ತಿರುತ್ತದೆ.
ಕರ್ನಾಟಕದ ಈ ನಾಲ್ವರು ಕಲಾವಿದೆಯರಿಗೆ ಇಂಥ ಅತ್ಯುನ್ನತ ಗೌರವ ದೊರೆತಿರುವುದು ಬಹಳ ತಡವಾಯಿತು ಅನ್ನಿಸಿದರೆ ಅದು ಅವರ ತಪ್ಪಲ್ಲ! ಇವರೆಲ್ಲರ ಸೃಜನಶೀಲತೆ ಹಲವು ರೀತಿಗಳಲ್ಲಿ ವ್ಯಕ್ತವಾಗಿ, ಕಿರಿಯರಿಗೆ ಮಾರ್ಗದರ್ಶಿಯಾಗಿ ಇರುವುದು ಈ ನೆಲದ ಭಾಗ್ಯ.

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.