ಸಂಗೀತದ ಮೂಲಕ ಜನರನ್ನು ತಲುಪಲು ಸಾಧ್ಯ : ಸುಮಂಗಲಾ

ಪ್ರತಿಭಟನಾ ಗೀತೆಗಳ ಸಂಗ್ರಹ ಮತ್ತು ಗಾಯನದಲ್ಲಿ ಹಲವಾರು ದಶಕಗಳಿಂದ ನಿರತರಾಗಿರುವ ಡಾ. ಸುಮಂಗಲಾ ದಾಮೋದರನ್ ನಮ್ಮ ಸಮುದಾಯ ಸಂಗೀತ ಪರಂಪರೆಯ ಒಂದು ಪ್ರಮುಖ ಧಾರೆಯನ್ನು ಮುಂದಿನ ತಲೆಮಾರುಗಳಿಗೆ ಪರಿಚಯಿಸುವ ಅರ್ಥಪೂರ್ಣ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇಎಂಎಸ್ ನಂಬೂದಿರಿಪಾದ್ ಅವರ ಮೊಮ್ಮಗಳಾದ ಅವರಿಗೆ ಅರ್ಥಶಾಸ್ತ್ರದ ಜೊತೆಗೆ ಜನಸಂಗೀತ ಮತ್ತು ರಂಗಭೂಮಿಯಲ್ಲಿ ಅತೀವ ಆಸಕ್ತಿ.

ಸಂದರ್ಶನ: ಗೀತಾ ಶ್ರೀನಿವಾಸನ್

 

ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದ `ಅಭಿವೃದ್ಧಿ ಅಧ್ಯಯನ ವಿಭಾಗ’ದಲ್ಲಿ ಅರ್ಥಶಾಸ್ತ್ರಜ್ಞೆಯಾಗಿರುವ ಡಾ. ಸುಮಂಗಲಾ ದಾಮೋದರನ್ ಪ್ರವೃತ್ತಿಯಲ್ಲಿ ಸಂಗೀತಗಾರ್ತಿ. ದೇಶದ ಎಲ್ಲ ಭಾಷೆಗಳಲ್ಲಿ ಕಂಡುಬರುವ ಪ್ರತಿಭಟನಾ ಗೀತೆಗಳ ಪರಂಪರೆಯ ಬಗ್ಗೆ ಅವರಿಗೆ ಎಲ್ಲಿಲ್ಲದ ಗೌರವ. ಅದರಿಂದಲೇ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ `ಸಂಸ್ಕೃತಿ ಮತ್ತು ಸೃಜನಶೀಲ ಅಭಿವ್ಯಕ್ತಿ ವಿಭಾಗ’ ರೂಪಿಸುವುದರಲ್ಲಿ ಅವರದು ಪ್ರಮುಖ ಪಾತ್ರ. ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ (ಇಪ್ಟಾ) ಕಟ್ಟಿಬೆಳೆಸಿದ ಪ್ರತಿಭಟನಾ ಸಂಗೀತದ ಅದ್ಭುತ ಪರಂಪರೆಯ ದಾಖಲೀಕರಣ ಬಹಳ ಮುಖ್ಯ ಎಂದು ಭಾವಿಸಿರುವ ಅವರು, ಅಂಥ ಗೀತೆಗಳ ಒಂದು ಆಲ್ಬಮ್ ಹೊರತಂದಿದ್ದಾರೆ. ಗಾಯಕಿ ಮತ್ತು ಗಿಟಾರ್ ವಾದಕಿಯಾಗಿರುವ ಸುಮಂಗಲಾ `ಪರ್ಚಮ್’ ತಂಡದೊಡನೆ ದೇಶವಿದೇಶಗಳಲ್ಲಿ ಪ್ರತಿಭಟನಾ ಗೀತೆಗಳ ಕಾರ್ಯಕ್ರಮ ನಡೆಸಿಕೊಡುತ್ತಾರೆ. ರಂಗಭೂಮಿಯಲ್ಲೂ ಕ್ರಿಯಾಶೀಲರಾಗಿ ಸಫ್ದರ್ ಹಷ್ಮಿ ಅವರ `ಜನ ನಾಟ್ಯ ಮಂಚ್’ ನಲ್ಲಿ ಪ್ರಮುಖ ಕಲಾವಿದೆಯಾಗಿದ್ದ ಅವರು, ಹಬೀಬ್ ತನ್ವೀರ್ ಮತ್ತು ಪ್ರಸನ್ನ ಅವರ ರಂಗಪ್ರಯೋಗಗಳಲ್ಲೂ ಭಾಗಿಯಾಗಿದ್ದಾರೆ. ಸಂಸ್ಕøತಿಯೂ ಜನರಾಜಕಾರಣದ ಪ್ರಮುಖ ಮಾಧ್ಯಮ ಎಂಬುದು ಅವರ ದೃಢವಾದ ನಂಬಿಕೆ. ಕೆಲಕಾಲದ ಹಿಂದೆ ಬೆಂಗಳೂರಿಗೆ ಬಂದಿದ್ದ ಡಾ. ಸುಮಂಗಲಾ ದಾಮೋದರನ್ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ :

ಪ್ರಶ್ನೆ : ನಿಮ್ಮ ಬಾಲ್ಯ, ವಿದ್ಯಾಭ್ಯಾಸ, ವೃತ್ತಿ, ಆಸಕ್ತಿ ಇವುಗಳ ಬಗ್ಗೆ ತಿಳಿಸಿ.

ಉತ್ತರ : ನಾನು ಬೆಳೆದದ್ದು ಮುಂಬೈ, ಹೈದರಾಬಾದ್, ತಿರುವನಂತಪುರ ಮತ್ತು ದೆಹಲಿಯಲ್ಲಿ. ನನ್ನ ಉನ್ನತ ಶಿಕ್ಷಣ ಮತ್ತು ಈಗ ಉದ್ಯೋಗ ದೆಹಲಿಯಲ್ಲೇ. ಆದರೂ ದಕ್ಷಿಣ ಭಾರತದ ಕಡೆಗೆ ನನಗೆ ಹೆಚ್ಚು ಸೆಳೆತ. ಮೊದಲು ಹವ್ಯಾಸವಾಗಿದ್ದ ಸಂಗೀತ ಈಗ ವೃತ್ತಿಯಾಗಿದೆ. ನಾನು ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಕಲಿತಿದ್ದೇನೆ. ಸಂಗೀತ ಮತ್ತು ರಾಜಕೀಯ, ಸಂಗೀತ ಮತ್ತು ಸಮಾಜ ಇವುಗಳ ನಡುವಿನ ಸಂಬಂಧವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸಂಗೀತದ ಮೂಲಕ ಸಾಮಾಜಿಕ ವಿಷಯಗಳನ್ನು ಜನರ ಅರಿವಿಗೆ ತರಬೇಕು ಎನ್ನುವುದು ನನ್ನ ಹೆಬ್ಬಯಕೆ.

ಪ್ರಶ್ನೆ : ನೀವು ಕೇರಳದ ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್. ನಂಬೂದಿರಿಪಾದ್ ಅವರ ಮೊಮ್ಮಗಳು. ನಿಮ್ಮ ಮೇಲೆ ಅವರ ಪ್ರಭಾವದ ಬಗ್ಗೆ ನಮಗೆ ಕುತೂಹಲ!

ಉತ್ತರ : ನಾನೀಗ ಕೈಗೊಂಡಿರುವ ಕಾರ್ಯವನ್ನು ನೋಡಲು ತಾತ ನಂಬೂದಿರಿಪಾದ್ ಇಂದು ನಮ್ಮೊಡನಿಲ್ಲ. ಅವರನ್ನು ತುಂಬಾ ಮಿಸ್ ಮಾಡ್ತೀನಿ. ಅವರಿದ್ದಿದ್ದರೆ ಇತಿಹಾಸ ಮತ್ತು ಸಂಗೀತದ ಬಗ್ಗೆ ನನಗೆ ಇನ್ನೂ ಎಷ್ಟೊಂದು ವಿಷಯಗಳನ್ನು ತಿಳಿಸಿಕೊಡುತ್ತಿದ್ದರು ಅಂದುಕೊಳ್ಳುತ್ತೇನೆ…

ಪ್ರಶ್ನೆ : ನೀವು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ – ಇಪ್ಟಾದ ಸಂಗೀತ ಪರಂಪರೆಯ ದಾಖಲೀಕರಣದಲ್ಲಿ ತೊಡಗಲು ಕಾರಣಗಳು ಮತ್ತು ಉದ್ದೇಶಗಳೇನು?

ಉತ್ತರ : ಹೌದು, ನಾನು ಬಹಳ ಆಸಕ್ತಿಯಿಂದ ಇಪ್ಟಾ ಮ್ಯೂಸಿಕ್ ಟ್ರೆಡಿಷನ್ ಅನ್ನು ದಾಖಲು ಮಾಡುವುದರಲ್ಲಿ ನಿರತಳಾಗಿದ್ದೇನೆ. ಇಪ್ಟಾ ಒಂದೇ ಅಲ್ಲ, ಅದರಂತೆಯೇ ಕೆಲಸ ಮಾಡುವ ಕೇರಳದ ಕೆಪಿಎಸಿ, ಆಂಧ್ರದ ಪ್ರಜಾನಾಟ್ಯ ಮಂಡಳಿ ಮುಂತಾದ ಸಂಸ್ಥೆಗಳ ಬಗ್ಗೆಯೂ ವಿಷಯ ಸಂಗ್ರಹಿಸುತ್ತಿದ್ದೇನೆ. ಈ ಎಲ್ಲ ಸಂಸ್ಥೆಗಳು 1940 – 50 ರ ದಶಕದಲ್ಲಿ ನೀಡಿರುವ ಸಂಗೀತಕ್ಕೆ ಸಂಬಂಧಿಸಿದ ಕೊಡುಗೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಈ ಕಾರ್ಯ ನಡೆಯುತ್ತಿರುವುದು ಇದೇ ಮೊದಲು. ರಾಜಕಾರಣದ ಜೊತೆಗೆ ಸಂಗೀತ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಸಾರಿ ಹೇಳುವ ವಿಶಿಷ್ಟ ಪ್ರಯತ್ನ ನಡೆದಿದೆ. ಪ್ರತಿಭಟನಾ ಸಂಗೀತಕ್ಕೆ ಚರಿತ್ರಾರ್ಹ ಪರಂಪರೆಯಿದೆ. ಈ ಹಾಡುಗಳೆಲ್ಲ ವಿಶಿಷ್ಟ ವರ್ಗಕ್ಕೆ ಸೇರಿದುವು. ಅದನ್ನು ತಿಳಿಯುವುದರಲ್ಲಿ ನನಗೆ ಆಸಕ್ತಿಯಿದೆ.

ಪ್ರಶ್ನೆ : ಪ್ರತಿಭಟನಾ ಸಂಗೀತ, ಆ ಹಾಡುಗಳ ಬಗ್ಗೆ ಇನ್ನಷ್ಟು ಹೇಳಿ…

ಉತ್ತರ : ಪ್ರತಿಭಟನಾ ಸಂಗೀತ ಬಹಳ ವಿಶಿಷ್ಟ… ಅನೇಕ ಹಾಡುಗಳು ನಾನಾ ಕಾರಣಗಳಿಗಾಗಿ ಜನರ ನೆನಪಿನಿಂದ ಮಾಸಿಹೋಗಿವೆ. ಅವುಗಳಿಗೆ ಮತ್ತೆ ಜೀವ ಕೊಡಬೇಕು ಎಂಬ ಭಾವನೆ ನನ್ನನ್ನು ಸದಾ ಕಾಡುತ್ತಿತ್ತು. 1980 ರ ಹೊತ್ತಿಗೆ ಅಳಿದುಳಿದ ಕೆಲವು ಹಾಡುಗಳನ್ನು ಸಂಗ್ರಹಿಸಿ, ಅವುಗಳನ್ನು ದೆಹಲಿಯ `ಪರ್ಚಮ್’ ಎಂಬ ಸಂಗೀತ ತಂಡದೊಂದಿಗೆ ಹಾಡಲಾರಂಭಿಸಿದೆ. ಆ ಕಾಲದಲ್ಲಿ ಇಪ್ಟಾ ಹಾಡುಗಳು ನನ್ನ ಗಮನ ಸೆಳೆದವು. ಅದರಲ್ಲೂ ಮಕ್ದಮ್ ಮೊಯುದ್ದೀನ್ ಅವರ “ಜಾನೇವಾಲೇ ಸಿಪಾಹೀಸೆ ಪೂಚೋ…” ಎಂಬ ಗೀತೆ ನನಗೆ ತುಂಬ ಹಿಡಿಸಿತು. ಸಫ್ದರ್ ಹಷ್ಮಿ ಈ ಹಾಡನ್ನು ನನಗೆ ಹಾಡಲು ಕಲಿಸಿದರು. 1984 ರಲ್ಲಿ ಸಿಖ್ಖರ ಗಲಭೆ ನಂತರ ಈ ಹಾಡು ಇನ್ನೂ ಅನೇಕರ ಮನಮುಟ್ಟಿತು. ಸಂಗೀತದ ಮಾಧುರ್ಯದ ಮೂಲಕ ಜನರನ್ನು ಮುಟ್ಟಲು ಸಾಧ್ಯ ಎಂಬ ನನ್ನ ನಂಬಿಕೆ ಮತ್ತಷ್ಟು ದೃಢವಾಯಿತು.

ಪ್ರಶ್ನೆ : ಇಪ್ಟಾ ಸದಸ್ಯರಿಂದ ಈ ಹಾಡುಗಳನ್ನು ಸಂಗ್ರಹಿಸುವಾಗಿನ ನಿಮ್ಮ ಅನುಭವದ ಬಗ್ಗೆ ಹೇಳಿ…

ಉತ್ತರ : ಇಂಥ ಹಾಡುಗಳನ್ನು ಇನ್ನೂ ಹೆಚ್ಚು ಸಂಗ್ರಹಿಸಬೇಕು, ಅವನ್ನು ಜನರಿಗೆ ಮುಟ್ಟಿಸಬೇಕು ಅನ್ನುವ ಆಸೆ ದಿನದಿನಕ್ಕೆ ಬಲವಾಗುತ್ತಿತ್ತು. ಆ ಹಾಡುಗಳನ್ನು ಬಲ್ಲವರನ್ನು ಭೇಟಿ ಮಾಡತೊಡಗಿದೆ. ಹಾಗೆ ಹೊರಟಾಗ, ಅವುಗಳನ್ನು ಬಲ್ಲ ಮೊದಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟವರು ಉತ್ಪಲ್‍ದತ್‍ರ ಮಗಳು ವಿಷ್ಣುಪ್ರಿಯ. ಅವರು ಜೆಎನ್‍ಯು ಸ್ಕೂಲ್ ಆಫ್ ಆಟ್ರ್ಸ್‍ನಲ್ಲಿ ಪೆÇ್ರಫೆಸರ್ ಆಗಿದ್ದಾರೆ. ಅವರ ಸಲಹೆಯ ಮೇರೆಗೆ ಕೊಲ್ಕತ್ತದಲ್ಲಿದ್ದ ಅವರ ತಾಯಿ ಶೋಭಾ ಸೇನ್ ಅವರನ್ನು ಭೇಟಿಯಾದೆ. ಎಂಬತ್ತರ ಇಳಿವಯಸ್ಸಿನಲ್ಲೂ ಅತ್ಯುತ್ತಮ ನಟಿಯಾಗಿರುವ ಶೋಭಾ ಅವರು ಅಂಥ ಹಾಡುಗಳ ಬಗ್ಗೆ ತಿಳಿಸಿ, ತಮ್ಮ ಪರಿಚಿತರಾದ ರೇಬಾ ರಾಯ್‍ಚೌಧರಿ, ಪ್ರೀತಿ ಬ್ಯಾನರ್ಜಿ ಮುಂತಾದವರನ್ನು ಭೇಟಿ ಮಾಡಿಸಿದರು. ಅವರೆಲ್ಲರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದವರು.

ಪ್ರಶ್ನೆ : ನಿಮಗೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಗೊತ್ತು. ನೀವು ಅಪೇರಾ ಹಾಡುಗಾರ್ತಿಯೂ ಆಗಿದ್ದೀರಿ. ನಿಮ್ಮ ಸಂಗೀತ ಪಯಣವನ್ನು ಕುರಿತು ಹೇಳಿ…

ಉತ್ತರ : ಹೌದು, ನಾನು ಕರ್ನಾಟಕ, ಹಿಂದೂಸ್ತಾನಿ ಸಂಗೀತ ಎರಡನ್ನೂ ಸಾಕಷ್ಟು ಕಲಿತಿದ್ದೇನೆ. ಹಾಗೆಯೇ ಅಪೇರಾ ಟೆಕ್ನಿಕ್‍ಗಳನ್ನೂ ಕಲಿತಿದ್ದೇನೆ. ಇವುಗಳೆಲ್ಲದರ ಮೂಲಕ ನಾನು ನನ್ನ ಧ್ವನಿಯ ಮಾಧುರ್ಯವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಯಿತು. ಚಿಕ್ಕವಳಿದ್ದಾಗ ಹೈದರಾಬಾದ್‍ನಲ್ಲಿ ಕರ್ನಾಟಕ ಸಂಗೀತವನ್ನು ಶ್ಯಾಮಾಶಾಸ್ತ್ರಿ ಅವರ ಬಳಿ, ತಿರುವನಂತಪುರದಲ್ಲಿ ಶಿವಶಂಕರ ಪಣಿಕ್ಕರ್ ಅವರ ಬಳಿ ಕಲಿತೆ. ಹಿಂದೂಸ್ತಾನಿ ಸಂಗೀತವನ್ನು ಸುಲೋಚನಾ ಬೃಹಸ್ಪತಿ ಅವರ ಶಿಷ್ಯೆ ಹೇಮಾ ಅವರ ಹತ್ತಿರ ಕಲಿತೆ.

ಪ್ರಶ್ನೆ : ನೀವು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೀರಿ. ಇಂದಿನ ಶಿಕ್ಷಕ – ವಿದ್ಯಾರ್ಥಿ ಸಂಬಂಧದ ಬಗ್ಗೆ ಏನು ಹೇಳುತ್ತೀರಿ?

ಉತ್ತರ : ಎರಡು ದಶಕಗಳಿಂದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತ ಎಕನಾಮಿಕ್ಸ್ ಕಲಿಸುತ್ತಿದ್ದೇನೆ. ಅದರ ಜೊತೆಗೆ ಸಂಗೀತವನ್ನೂ ಕಲಿಸುತ್ತಿದ್ದೇನೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಾಮಾಜಿಕ ನಡವಳಿಕೆ, ರೀತಿನೀತಿ ಅರಿತುಕೊಂಡು ಚೆನ್ನಾಗಿ ನಡೆದುಕೊಳ್ಳುತ್ತಾರೆ. ಅವರೊಂದಿಗಿನ ಸಂಬಂಧ ಹೃದಯಸ್ಪರ್ಶಿಯಾದದ್ದು. ಇದಲ್ಲದೆ ದಕ್ಷಿಣ ಆಫ್ರಿಕಾದ ಕೇಪ್‍ಟೌನ್‍ನಲ್ಲಿ ಆಟ್ರ್ಸ್ ಮತ್ತು ಸೋಷಿಯಲ್ ಸೈನ್ಸ್ ಕಲಿಸಲು ಪ್ರತಿವರ್ಷ ಹೋಗುತ್ತೇನೆ. ಪ್ರಪಂಚದ ವಿವಿಧ ಕಡೆಗಳಿಂದ ಅಲ್ಲಿಗೆ ವಿದ್ಯಾರ್ಥಿಗಳು ಬಂದಿರುತ್ತಾರೆ. ಅಲ್ಲಿ ಫಾರ್ಮಲ್ ಆದ ಗುರು ಶಿಷ್ಯ ಸಂಬಂಧ ಇರುವುದಿಲ್ಲವಾದರೂ ಉತ್ತಮವಾದ, ಪರಸ್ಪರ ವಿಚಾರ ವಿನಿಮಯ ಇರುತ್ತದೆ.

ಪ್ರಶ್ನೆ : ಯುವ ಜನಾಂಗಕ್ಕೆ ದೇಶಪ್ರೇಮದ ಬಗ್ಗೆ ಅರಿವು ಮೂಡಿಸಲು ನಿಮ್ಮ ಸಲಹೆ ಏನು?

ಉತ್ತರ : ದೇಶಭಕ್ತಿ, ದೇಶಪ್ರೇಮ ಇವುಗಳನ್ನು ಕುರಿತು ಮಾತನಾಡಬೇಕೆಂದರೆ, ಇಪ್ಟಾ ಸಂಗೀತ ಪರಂಪರೆ ಮೇಲೆ ಕೆಲಸ ಮಾಡಲಾರಂಭಿಸಿದಾಗ, ಈ ಹಾಡುಗಳನ್ನು ಕೇಳುವವರು ಯಾರಿರಬಹುದು ಎಂಬ ಯೋಚನೆ ಬರದೇ ಇರಲಿಲ್ಲ. ನಾನು ಕಲೆ ಹಾಕಿದ ಹಾಡುಗಳ ವಸ್ತು, ವಿಷಯವನ್ನು ಗಮನಿಸಿ ಅವುಗಳಲ್ಲಿ ಕೆಲವನ್ನು ನಾನು ಹಾಡಬಹುದು ಅನಿಸಿತು. ಆಗ ಮೊದಲಿಗೆ ನನ್ನೊಂದಿಗೆ ಕೈಜೋಡಿಸಿದರು ಗಿಟಾರಿಸ್ಟ್ ದೀಪಕ್. ನಾವಿಬ್ಬರೂ ಸೇರಿ ಕಾರ್ಯಕ್ರಮ ಕೊಡಲು ಆರಂಭಿಸಿದಾಗ, ಈ ನಲವತ್ತನೇ ಇಸವಿಯ ಹಾಡುಗಳನ್ನು ಕೇಳಲು ಯಾರು ಬರುತ್ತಾರೆ ಅಂದುಕೊಂಡೆವು. ಆಶ್ಚರ್ಯವೆಂದರೆ, ನಮ್ಮ ಎಲ್ಲಾ ಕೇಳುಗರೂ ಯುವಜನರಾಗಿದ್ದರು. ಸಂಗೀತದ ಮಾಧುರ್ಯ, ಅರ್ಥಪೂರ್ಣ ಸಾಹಿತ್ಯ ಅವರನ್ನು ಸೆಳೆದಿತ್ತು.

ಪ್ರಶ್ನೆ : ನಿಮ್ಮ ಸಂಶೋಧನಾ ಕಾರ್ಯದ ಬಗ್ಗೆ ಹೇಳಿ…

ಉತ್ತರ : ವಿಶ್ವದ ವಿವಿಧ ದೇಶಗಳಲ್ಲಿರುವ ನನ್ನ ಸಹೋದ್ಯೋಗಿಗಳ ಜೊತೆಗೂಡಿ ಭಾರತ, ಉತ್ತರ ಆಫ್ರಿಕಾ, ದಕ್ಷಿಣ ಸ್ಪೇನ್, ಪಶ್ಚಿಮ ಏಷ್ಯಾ ಮುಂತಾದ ಕಡೆಗಳಲ್ಲಿ ಸಂಗೀತ ಹೇಗೆ ವಿವಿಧ ಸಂಸ್ಕøತಿಗಳನ್ನು ಬೆಸೆದಿದೆ ಎಂಬದನ್ನು ತಿಳಿಯುವ ಪ್ರಯತ್ನ ನಡೆಯುತ್ತಿದೆ. ಆ ಸಂಗೀತಕ್ಕಿರುವ ಐತಿಹಾಸಿಕ ಹಿನ್ನೆಲೆ ಅಧ್ಯಯನ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ಅರಿತುಕೊಂಡ ಮತ್ತೊಂದು ಮಹತ್ವದ ವಿಷಯವೆಂದರೆ, ಈ ಹಾಡುಗಳನ್ನು ಬೆಳಕಿಗೆ ತಂದವರು ಹೆಂಗಸರು, ಅದರಲ್ಲೂ ಜೀತದಾಳುಗಳಾಗಿ ದುಡಿಯುತ್ತಿದ್ದ ಹೆಂಗಸರು…

ಪ್ರಶ್ನೆ : ನೀವು ಮರೆಯಲಾಗದ ಘಟನೆ ಇದೆಯೇ?

ಉತ್ತರ : ನನ್ನ ಸಂಶೋಧನಾ ಕೆಲಸದ ಸಮಯದಲ್ಲಿ ಸ್ವತಂತ್ರತಾ ಪ್ರಕಾಶ್ ಎಂಬ ಮಹಿಳೆಯನ್ನು ಭೇಟಿಯಾದೆ. ಅವರು 1940 ರ ಪಂಜಾಬ್ ಲಾಹೋರ್‌ನ  ಕಲಾವಿದೆ ಮತ್ತು ಹಾಡುಗಾರ್ತಿ. ಬಂಗಾಳ ಪ್ರವಾಹದ ಸಮಯದಲ್ಲಿ ಪಂಜಾಬಿನ ರೈತರ ಜೊತೆಗೂಡಿ ಸ್ವಾತಂತ್ರ್ಯ ಸಂಗ್ರಾಮದ ಗೀತೆಗಳನ್ನು ಹಾಡುತ್ತಿದ್ದರು. ಅವರನ್ನು ಸಂದರ್ಶನ ಮಾಡುವ ಹೊತ್ತಿಗೆ ಅವರಿಗೆ ತುಂಬಾ ವಯಸ್ಸಾಗಿತ್ತು. ಒಂದು ವಿಭಿನ್ನ ಗೀತೆಯ ಸಾಹಿತ್ಯವನ್ನು ಅವರು ನನಗೆ ಕೊಟ್ಟರು. ಅದನ್ನು ಹೆಸರಾಂತ ಸೂಫಿ ಗಾಯಕ ಡಾ. ಮದನ್‍ಗೋಪಾಲ್ ಅವರಿಗೆ ತೋರಿಸಿದಾಗ, ಅದು ಪಂಜಾಬಿನ ಹೀಲಿಂಗ್ ಗೀತೆ ಎಂದು ಹೇಳಿದರು. ಅದನ್ನು ಹಾಡಲು ಸಹಾಯ ಮಾಡಿದರು. 2009 ರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಒಂದು ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಅದನ್ನು ನಮ್ಮ ತಂಡದೊಡನೆ ಹಾಡಿ ಪ್ರಸ್ತುತ ಪಡಿಸಿದೆ. ಆ ಸಾಹಿತ್ಯದ ಬಗ್ಗೆ ಮಾತನಾಡಿದಾಗ, ಸಭೆಯಲ್ಲಿದ್ದ ಲಾಹೋರಿನ ಕೆಲವರು ಅಚ್ಚರಿ ವ್ಯಕ್ತಪಡಿಸಿ, ತಮ್ಮ ನೆಲದ ಗೀತೆಯನ್ನು ಕೇಳಿ ಆನಂದಿಸಿದರು. ಹಾಗೂ ಆ ಮಹಿಳೆ ಕೆಲ ಸಮಯದ ಹಿಂದೆ ತೀರಿಕೊಂಡರು ಎಂದರು. ಆ ಘಟನೆ ನಾನೆಂದೂ ಮರೆಯಲಾರೆ. ಆಕೆ ಬದುಕಿದ್ದಾಗಲೇ ಅವರ ಹಾಡನ್ನು ಹಾಡಿದ್ದರೆ ಚೆನ್ನಾಗಿತ್ತು ಎಂದು ಅನ್ನಿಸಿ ತುಂಬಾ ದುಃಖವಾಯಿತು.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *