ಲೋಕದ ಕಣ್ಣು / ಶ್ರೀಲಂಕೆಯಲ್ಲಿ ಸೀತಾನ್ವೇಷಣ – ಡಾ.ಕೆ.ಎಸ್. ಚೈತ್ರಾ
ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾದ ಮಹಾಕಾವ್ಯ ರಾಮಾಯಣ. ಶ್ರೀಲಂಕಾದಲ್ಲಿಯೂ ರಾಮಾಯಣ ಪ್ರಚಲಿತವಾಗಿದೆ. ಆದರೆ ಅಲ್ಲಿ ರಾವಣನೆಂದರೆ ದುಷ್ಟನಲ್ಲ; ಬದಲಿಗೆ ಅತ್ಯುತ್ತಮ ರಾಜ, ಅದ್ಭುತ ವೈಣಿಕ, ಮಹಾ ಶಿವಭಕ್ತ, ನುರಿತ ಆರ್ಯುವೇದ ವೈದ್ಯ ಹೀಗೆ ಬಹುಮುಖಿ ಪ್ರತಿಭೆಯ ಜನಪ್ರಿಯ ನಾಯಕ. ಹಾಗಿದ್ದರೆ ರಾವಣ ಸೀತೆಯನ್ನು ಅಪಹರಿಸಿದ್ದು? ಸೀತಾಪಹರಣವನ್ನು ಜನ ಅಲ್ಲಗಳೆಯುವುದಿಲ್ಲ. ತನ್ನ ಸಹೋದರಿಗಾದ ಅಪಮಾನವನ್ನು ತೀರಿಸಲು ರಾವಣ, ಪ್ರತೀಕಾರವಾಗಿ ಸೀತೆಯನ್ನು ಅಪಹರಿಸಿದ. ಅದು ಧರ್ಮದ ದೃಷ್ಟಿಯಿಂದಲೂ ಸರಿ. ಹಾಗಾಗಿಯೇ ಆತ ಸೀತೆಯನ್ನು ಬಲಾತ್ಕರಿಸಲಿಲ್ಲ ಎಂಬುದು ಅವರ ವಾದ. ಅದನ್ನು ಸಂಪೂರ್ಣವಾಗಿ ನಿರಾಕರಿಸಲೂ ಸಾಧ್ಯವಿಲ್ಲ!
ಮಧ್ಯಾಹ್ನ ಊಟ ಮಾಡಿ ವಿಮಾನ ಏರಿ ಸೀಟಿನ ಬೆಲ್ಟ್ ಬಿಗಿದು ಕುಳಿತಾಗಿತ್ತು. ಹೊಟ್ಟೆ ಭಾರವಾಗಿ, ಏಸಿ ತಂಪಿಗೆ ಕಣ್ಣಿಗೆ ಜೊಂಪು ಹತ್ತುವಾಗಲೇ ಇಳಿಯುವ ಸೂಚನೆ ಬಂದಾಗಿತ್ತು. ನಮ್ಮ ಬೆಂಗಳೂರಿನಿಂದ ಶ್ರೀಲಂಕಾದ ಕೊಲೊಂಬೋಗೆ ಕೇವಲ ಎರಡು ತಾಸಿನ ಪಯಣ. ಕೆಳಗಿಳಿದರೆ ಕಣ್ಣಿಗೆ ಬಿದ್ದದ್ದು ಕೇರಳವನ್ನು ಹೋಲುವ ಪರಿಸರ; ಕಿವಿಗೆ ಬಿದ್ದದ್ದು ತಮಿಳು! ವಾತಾವರಣ- ಭಾಷೆ- ಜನ ಚಹರೆ ಯಾವುದೂ ಬೇರೆ ದೇಶಕ್ಕೆ ಹೋದ ಹಾಗೆ ಅನ್ನಿಸಲೇ ಇಲ್ಲ. ಏರ್‍ಪೋರ್ಟಿನಲ್ಲೇ ಬೇರೆ ಬೇರೆ ಪ್ರವಾಸಿ ಕಂಪನಿಗಳ ಏಜೆಂಟರು ‘ರಾಮಾಯಣ ಟೂರ್- ಹನಿಮೂನ್ ಪ್ಯಾಕೇಜ್- ಅಡ್ವೆಂಚರ್ ಟ್ರಿಪ್’ ಹೀಗೆ ಬೋರ್ಡ್ ಹೊತ್ತು ಕಾಯುತ್ತಿದ್ದರು. ನಮ್ಮದು ಇದ್ಯಾವುದೂ ಅಲ್ಲದ ಮನಸ್ಸಿಗೆ ಬಂದ ಕಡೆ ಹೋಗುವ ಅಲೆಮಾರಿ ಪ್ಯಾಕೇಜ್! ಆದರೂ ರಾವಣನ ನಾಡು ಎಂಬ ಹೆಸರಿನ ಆಕರ್ಷಣೆ ಜತೆ ನಮ್ಮ ಸೀತೆ ಇದ್ದಿರಬಹುದೇ, ಸಾಕ್ಷಿಗಳಿವೆಯೇ ಎಂಬ ಕುತೂಹಲ ಇದ್ದದ್ದಂತೂ ನಿಜವೇ.
ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾದ ಮಹಾಕಾವ್ಯ ರಾಮಾಯಣ. ಪುರುಷೋತ್ತಮ ಶ್ರೀರಾಮ ಒಳಿತಿನ ಸಂಕೇತವಾದರೆ, ಅಸುರ ರಾವಣ ಕೆಡುಕಿನ ಪ್ರತಿನಿಧಿ. ಕಡೆಯಲ್ಲಿ ದುಷ್ಟಶಕ್ತಿಯ ಮೇಲೆ ಶಿಷ್ಟಶಕ್ತಿ ಜಯ ಗಳಿಸಿ ಸುಖಾಂತ್ಯ ಎಂಬುದು ಭಾರತೀಯರ ನಂಬಿಕೆ. ಹಾಗಾಗಿಯೇ ರಾಮಾಯಣದಲ್ಲಿ ನಮಗೆ ರಾಮ ನಾಯಕ, ಲಂಕಾಧಿಪತಿ ರಾವಣ ಖಳನಾಯಕ. ಅಂದಿನ ಲಂಕೆಯೇ ಇಂದಿನ ನಮ್ಮ ನೆರೆರಾಷ್ಟ್ರ ಶ್ರೀಲಂಕಾ ಎನ್ನಲಾಗುತ್ತದೆ. ಶ್ರೀಲಂಕಾದಲ್ಲಿಯೂ ರಾಮಾಯಣ ಪ್ರಚಲಿತವಾಗಿದೆ. ಆದರೆ ಅಲ್ಲಿ ರಾವಣನೆಂದರೆ ದುಷ್ಟನಲ್ಲ; ಬದಲಿಗೆ ಅತ್ಯುತ್ತಮ ರಾಜ, ಅದ್ಭುತ ವೈಣಿಕ, ಮಹಾ ಶಿವಭಕ್ತ, ಪ್ರಸಿದ್ಧ ಪಂಡಿತ, ನುರಿತ ಆರ್ಯುವೇದ ವೈದ್ಯ ಹೀಗೆ ಬಹುಮುಖಿ ಪ್ರತಿಭೆಯ ಜನಪ್ರಿಯ ನಾಯಕ. ಹಾಗಿದ್ದರೆ ರಾವಣ ಸೀತೆಯನ್ನು ಅಪಹರಿಸಿದ್ದು? ಸೀತಾಪಹರಣವನ್ನು ಜನ ಅಲ್ಲಗಳೆಯುವುದಿಲ್ಲ. ಆದರೆ ಅದಕ್ಕೆ ಮುಖ್ಯವಾಗಿ ಲಕ್ಷ್ಮಣನನ್ನು ದೂಷಿಸುತ್ತಾರೆ. ಲಂಕೆಯ ರಾಜಕುಮಾರಿ ಶೂರ್ಪನಖಿಗೆ ಮೋಹ ಉಂಟಾಗಿ ಅವರನ್ನು ಸಮೀಪಿಸಿದಳು. ಅವಳನ್ನು ನಿರಾಕರಿಸಿದ್ದು ಸರಿ; ಆದರೆ ಆಕೆಯನ್ನು ವಿರೂಪಗೊಳಿಸಿದ್ದು ತಪ್ಪು. ತನ್ನ ಸಹೋದರಿಗಾದ ಅಪಮಾನವನ್ನು ತೀರಿಸಲು, ಆ ಮೂಲಕ ಪ್ರಜೆಗಳ ರಕ್ಷಣೆ ತನ್ನ ಕರ್ತವ್ಯ ಎಂದು ಭಾವಿಸಿದ ರಾಜ ರಾವಣ, ಪ್ರತೀಕಾರವಾಗಿ ಸೀತೆಯನ್ನು ಅಪಹರಿಸಿದ. ಅದು ಧರ್ಮದ ದೃಷ್ಟಿಯಿಂದಲೂ ಸರಿ. ಹಾಗಾಗಿಯೇ ಆತ ಸೀತೆಯನ್ನು ಬಲಾತ್ಕರಿಸಲಿಲ್ಲ ಎಂಬುದು ಅವರ ವಾದ. ಅದನ್ನು ಸಂಪೂರ್ಣವಾಗಿ ನಿರಾಕರಿಸಲೂ ಸಾಧ್ಯವಿಲ್ಲ! ಹೀಗೆ ರಾವಣನ ನಾಡಾದ ಲಂಕೆಯಲ್ಲಿ ಸೀತೆ ಬಂಧಿಯಾಗಿ ಹನ್ನೊಂದು ತಿಂಗಳ ಕಾಲ ಇದ್ದಳು ಎನ್ನಲಾಗುತ್ತದೆ. ಐತಿಹಾಸಿಕವೋ, ಕಾಲ್ಪನಿಕವೋ ಒಟ್ಟು ಐವತ್ತು ಸ್ಥಳಗಳನ್ನು ರಾಮಾಯಣದ ಕತೆ ನಡೆದದ್ದು ಎಂದು ಗುರುತಿಸಲಾಗಿದ್ದು ಇವು ಜನಪ್ರಿಯ ಪ್ರವಾಸೀ ತಾಣಗಳಾಗಿವೆ. ನನಗೆ ಅವು ಸೀತೆಯ ಪಯಣದ ಗುರುತುಗಳು ಎಂಬ ಕಾರಣಕ್ಕಾಗಿ ಮುಖ್ಯವೆನಿಸಿದವು.
ಸೀತಾ ಕೊಥುವಾ – ಸೀತೆಯನ್ನು ಅಪಹರಿಸಿ ಆಕಾಶಮಾರ್ಗವಾಗಿ ಪುಷ್ಪಕ ವಿಮಾನದ ಮೂಲಕ ಲಂಕೆಗೆ ಕರೆಬಂದ ರಾವಣ ಇಳಿದದ್ದು ವೆರಗಂಟೋಟ ಎಂಬಲ್ಲಿ (ಸಿಂಹಳೀ; ವಿಮಾನ ಇಳಿಯುವ ಸ್ಥಳ). ವಿಜ್ಞಾನ-ತಂತ್ರಜ್ಞಾನ ಕುರಿತು ಅಪಾರ ಆಸಕ್ತಿ ಮತ್ತು ಅನುಭವ ಹೊಂದಿದ್ದ ರಾವಣ, ಆ ಕಾಲದಲ್ಲಿಯೇ ಲಂಕೆಯಲ್ಲಿ ಆರು ವಿಮಾನ ನಿಲ್ದಾಣಗಳನ್ನು ಹೊಂದಿದ್ದ ಎನ್ನಲಾಗಿದೆ! ಇಲ್ಲಿನ ಲಂಕಾಪುರದಲ್ಲಿ ರಾಣಿ ಮಂಡೋದರಿ ವಾಸವಾಗಿದ್ದಳು. ಜಲಪಾತ, ನದಿ-ಹಳ್ಳ, ಬಗೆಬಗೆಯ ಹೂವು, ಗಿಡ, ಮರಗಳ ಸುಂದರ ಸ್ಥಳದಲ್ಲಿ ಆಕೆಯ ಭವ್ಯ ಅರಮನೆಯಿತ್ತು. ಸೀತೆಯನ್ನು, ರಾವಣ ಮೊದಲು ಇಲ್ಲಿಯೇ ಇಟ್ಟಿದ್ದನಂತೆ. ನಂತರ ಮಂಡೋದರಿ ಇದಕ್ಕೆ ಒಪ್ಪದ ಕಾರಣ ಅಶೋಕ ವಾಟಿಕಾಕ್ಕೆ ಸ್ಥಳಾಂತರಿಸಿದ ಎನ್ನಲಾಗುತ್ತದೆ. ರಾಕ್ಷಸಿ, ದೇವಿ ಅಥವಾ ಹುಲುಮಾನವ ಯಾರಾದರೂ ಹೆಣ್ಣು ತಾನೇ? ಪತಿ ಮೋಹಗೊಂಡು ಹೊತ್ತುತಂದ ಹೆಣ್ಣನ್ನು ತನ್ನ ಅರಮನೆಯಲ್ಲಿ ಇಟ್ಟುಕೊಳ್ಳಲು ಹೇಗೆ ತಾನೇ ಒಪ್ಪಿಯಾಳು ಎನಿಸಿತು ನನಗೆ! ಆದರೂ ಸ್ವಲ್ಪ ಕಾಲ ಸೀತೆ ಇದ್ದುದ್ದರಿಂದ ಸೀತೆಯ ಕೋಟೆ ಎಂಬ ಹೆಸರು. ಕ್ಯಾಂಡಿಯಿಂದ ಅರವತ್ತಾರು ಕಿಮೀ ದೂರದಲಿ ್ಲ ಗುರುಲುಪೋತಾ ಹಳ್ಳಿಯಿಂದ ಅಂಕುಡೊಂಕಿನ ತಿರುವಿನ ನಂತರ ಇರುವ ರಮ್ಯ ತಾಣವಿದು.
ಕೊಂಡ ಕಲೈ – (ಅಸ್ತವ್ಯಸ್ತ ಕೂದಲು–ತಮಿಳು) ಮಂಡೋದರಿ ಒಪ್ಪದ ಕಾರಣ ಸೀತೆಯನ್ನು ಅಶೋಕವನಕ್ಕೆ ಮತ್ತೆ ವಿಮಾನದಲ್ಲಿ ಕರೆದೊಯ್ದ ರಾವಣ. ಆ ವೇಗ ಮತ್ತು ರಭಸಕ್ಕೆ ಸೀತೆಯ ಮುಡಿ ಬಿಚ್ಚಿ, ಕೂದಲು ಚೆಲ್ಲಾಪಿಲ್ಲಿಯಾಯಿತು. ಅದೇ ನೆನಪಿಗೆ, ಈಗಲೂ ಮುಡಿಕಟ್ಟದೇ ಹಾಗೇ ಕೂದಲನ್ನು ಬಿಡುವ ಸಂಪ್ರದಾಯವನ್ನು ಈ ಹಳ್ಳಿಯಲ್ಲಿ ಪಾಲಿಸುವವರು ಅನೇಕರಿದ್ದಾರೆ. ಇದಲ್ಲದೇ ಪ್ರಯಾಣದ ಆಯಾಸ ಪರಿಹರಿಸಲು ರಾವಣ ಸೀತೆಗೆ ಪೌಷ್ಟಿಕವಾದ ಅನ್ನದ ಮುದ್ದೆ (ಗೂಲಿ) ನೀಡಿದ್ದ, ಆದರೆ ಸೀತೆ ಅವುಗಳನ್ನು ಬೇಡವೆಂದು ಕೆಳಕ್ಕೆ ಒಗೆದಳು. ಪುಷ್ಪಕ ವಿಮಾನ ಚಲಿಸಿದ್ದು ಎಂದು ಹೇಳಲಾಗುವ ಮಾರ್ಗದಲ್ಲಿ ಈ ಗೂಲಿಗಳನ್ನು ಹೋಲುವ ವಸ್ತುಗಳನ್ನು ಸ್ಥಳೀಯರು ತೋರಿಸುತ್ತಾರೆ. ಸೀತೆ ಮುಟ್ಟಿದ್ದರಿಂದ ಇವು ಅದೃಷ್ಟದ ಸಂಕೇತ. ಮಕ್ಕಳಿಗೆ ಅನಾರೋಗ್ಯವಾದಾಗ ಇದನ್ನು ತೇಯ್ದು ನೀಡಲಾಗುತ್ತದೆ. ರೈತರು ತಮ್ಮ ಮನೆಯಲ್ಲಿ ಇವನ್ನು ಇಟ್ಟು ಪೂಜಿಸುತ್ತಾರೆ. ಧನ, ಧಾನ್ಯ ಎಲ್ಲವೂ ಹೆಚ್ಚುತ್ತದೆ ಎಂಬ ಬಲವಾದ ನಂಬಿಕೆ ಇದೆ. ಆಶ್ಚರ್ಯವೆಂದರೆ ಈ ಗೂಲಿಗಳು ಬೇರೆಲ್ಲೂ ಕಂಡುಬರುವುದಿಲ್ಲ. ಇದಲ್ಲದೇ ಟೋಕಿಯೋದಲ್ಲಿ ನಡೆದ ಕಾರ್ಬನ್‍ಡೇಟಿಂಗ್ ಪರೀಕ್ಷೆಯಲ್ಲಿ ಇವು ಐದು ಸಾವಿರ ವರ್ಷಗಳಿಗಿಂತ ಹಳೆಯದ್ದೆಂದು ತಿಳಿದುಬಂದಿದೆ.
ಸೀತಾ ಕಣ್ಣೀರ ಕೊಳ – ರಾವಣನ ವಿಮಾನ ಮಾರ್ಗದಲಿ ಕಂಡು ಬರುವ ಕೊಳ, ಕಣ್ಣೀರ ಹನಿಯ ಆಕಾರದಲ್ಲಿದೆ. ಸೀತೆಯ ಕಣ್ಣೀರ ಹನಿಗಳೇ ಈ ಕೊಳದ ನೀರು ಎನ್ನಲಾಗುತ್ತದೆ. ಎಂಥದ್ದೇ ಬರ-ಕ್ಷಾಮದ ಸನ್ನಿವೇಶದಲ್ಲೂ , ಸುತ್ತಮುತ್ತಲಿನ ನದಿಗಳು ಬತ್ತಿದಾಗಲೂ ಇದು ಇದುವರೆಗೂ ಬತ್ತಿಲ್ಲ ಎಂಬುದನ್ನು ಹೆಮ್ಮೆಯಿಂದ ಬಣ್ಣಿಸಲಾಗುತ್ತದೆ. ಜಲಮೂಲ ಸಮೃದ್ಧವಾಗಿದೆ ಎಂಬುದು ಸಂತೋಷದ ವಿಷಯವೇ ಆದರೂ ನನಗೆ ದೌರ್ಜನ್ಯಕ್ಕೊಳಗಾದ ಹೆಣ್ಣಿನ ಕಣ್ಣೀರು ಇಂದಿಗೂ ಬತ್ತಿಲ್ಲ ಎಂಬುದಕ್ಕೆ ರೂಪಕವಾಗಿ ಈ ಕೊಳ ಕಂಡಿತು.
ಅಶೋಕ ವಾಟಿಕಾ – ತದನಂತರ ರಾವಣ ಸೀತೆಯನ್ನು ಕರೆತಂದದ್ದು ಅಶೋಕವನಕ್ಕೆ ಅಥವಾ ಈಗಿನ ಹಕ್ಗಲ ಉದ್ಯಾನವನ. ಇಲ್ಲಿಯೇ ಸೀತೆ ಬಂಧಿಯಾಗಿದ್ದಳು. ಇದೇ ವನದಲ್ಲಿ ಹನುಮಂತ, ರಾಮನ ಆಣತಿಯಂತೆ ಮೊದಲ ಬಾರಿ ಸೀತಾಮಾತೆಯನ್ನು ಭೇಟಿಮಾಡಿ ಆಕೆಗೆ ರಾಮನ ಮುದ್ರಿಕೆಯನ್ನು ತಲುಪಿಸಿದ್ದು ಎನ್ನಲಾಗುತ್ತದೆ .ಶ್ರೀಲಂಕಾದಲ್ಲಿ ಈ ಪ್ರದೇಶದಲ್ಲಿ ಮಾತ್ರ ಅಶೋಕ ಮರಗಳು ಕಂಡುಬರುತ್ತವೆ. ಇದರ ಹೂವುಗಳಿಗೆ ಸೀತಾ ಹೂವು ಎಂದು ಕರೆಯುತ್ತಾರೆ. ಈ ಹೂವನ್ನು ಸೂಕ್ಷ್ಮವಾಗಿ ಗಮನಿಸಿದಾಗ ದಳ, ರೇಕು, ಕೇಸರ ಎಲ್ಲವೂ ಸೇರಿ ಬಿಲ್ಲನ್ನು ಹಿಡಿದ ಯೋಧನನ್ನು ಹೋಲುತ್ತವೆ. ಸೀತೆ, ರಾಮನ ಧ್ಯಾನದಲ್ಲಿದ್ದಾಗ ಮೂಡಿದ ಹೂವು ಎಂದು ಇದಕ್ಕೆ ವಿಶೇಷ ಸ್ಥಾನವಿದೆ. ಈಗಿಲ್ಲಿ ಅಶೋಕ ಮರಗಳು ಹೆಚ್ಚಿಲ್ಲ, ಆದರೆ ನೂರಾರು ಬಗೆಯ ಗಿಡ ಪ್ರಬೇಧಗಳಿದ್ದು ಹೂವು-ಚಿಟ್ಟೆಗಳಿಂದ ಕೂಡಿ ನಯನಮನೋಹರವಾಗಿದೆ. ಬೆಳಕಿನ ನಗರಎಂದೇ ಪ್ರಸಿದ್ಧವಾದ ನುವಾರಾಎಲಿಯಾದಿಂದ ಹದಿನಾರು ಕಿಮೀ ದೂರದಲ್ಲಿದೆ.

ಸೀತಾ ಅಮ್ಮನ್ ದೇಗುಲ; ಈ ಉದ್ಯಾನವನದ ಎದುರಿನಲ್ಲೇ ಹೊಳೆಯೊಂದು ಹರಿಯುತ್ತಿದ್ದು ಇದು ಸೀತೆ ಸ್ನಾನ ಮಾಡುತ್ತಿದ್ದ ಸ್ಥಳ ಎಂದು ನಂಬಲಾಗಿದೆ. ಇಲ್ಲಿನ ದೇಗುಲ ಸೀತೆಮಾತೆಯನ್ನು ಪೂಜಿಸುವ ಜಗತ್ತಿನ ಕೆಲವೇ ಕೆಲವು ದೇಗುಲಗಳಲ್ಲಿ ಪ್ರಮುಖವಾದದ್ದು.ಈ ಹೊಳೆಯ ನೀರು ಕಂದು ಬಣ್ಣದ್ದಾಗಿದ್ದು, ರಾಮನನ್ನು ಧ್ಯಾನಿಸುತ್ತಾ ಸೀತೆ ಸುರಿಸುತ್ತಿದ್ದ ಕಣ್ಣೀರು ಬೆರೆತು ಈ ಬಣ್ಣ ಎಂಬುದು ಸ್ಥಳೀಯರು ಹೇಳುತ್ತಾರೆ. ಹೊಳೆಯ ಮೇಲಿರುವ ಬಂಡೆಯಲ್ಲಿ ಸಣ್ಣ -ದೊಡ್ಡ ಕುಳಿಗಳಿದ್ದು ಇವು ಹನುಮಂತನ ಪಾದದ ಗುರುತು ಎಂದು ಪೂಜಿಸಲಾಗುತ್ತದೆ.
ದಿವುರುಂಪೊಲ : ರಾವಣ ಅಳಿದ, ರಾಮ ವಿಜಯಿಯಾದ. ಸೀತೆ ಬಂಧಮುಕ್ತೆಯಾದಳು, ಆದರೆ ರಾಮ ಆಕೆಯನ್ನು ಸ್ವೀಕರಿಸಲು ಅಗ್ನಿಪರೀಕ್ಷೆಗೆ ಒಳಗಾಗಿ ಪಾವಿತ್ರ್ಯತೆ ನಿರೂಪಿಸಬೇಕೆಂದ. ಸೀತೆ ಅಗ್ನಿಯೊಳಗೆ ಪ್ರವೇಶಿಸುತ್ತಿದ್ದಂತೆ ಅಗ್ನಿದೇವ ಪ್ರತ್ಯಕ್ಷನಾಗಿ ರಾಮನಿಗೆ ಈಕೆ ಪರಿಶುದ್ಧಳು ಎಂದು ಒಪ್ಪಿಸಿದ.ಇದು ತನ್ನ ಸಲುವಾಗಿ ಅಲ್ಲ, ಜಗತ್ತಿಗೇ ಆಕೆಯ ಮಹಿಮೆ ಅರಿವಾಗುವ ಸಲುವಾಗಿ ಎಂದು ರಾಮ ಸ್ಪಷ್ಟನೆ ನೀಡಿದ. ರಾಮಾಯಣದ ಈ ಪ್ರಸಂಗ ನಡೆದದ್ದು ದಿವುರುಂಪೊಲದಲ್ಲಿ ( ಪ್ರಮಾಣದ ಕಟ್ಟೆ).ಇಂದಿಗೂ ಪ್ರಮಾಣಗಳನ್ನು ಪರಿಶೀಲಿಸುವ ನ್ಯಾಯ ಸ್ಥಾನವಾಗಿ ಈ ಸ್ಥಳ ಪ್ರಸಿದ್ಧಿ ಹೊಂದಿದೆ. ಈ ಸ್ಥಳ, ಸೀತೆಯಿದ್ದ ಅಶೋಕವಾಟಿಕಾದಿಂದ (ಸೀತಾಎಲಿಯಾ) ಹದಿನೈದು ಕಿಮೀ ದೂರದಲ್ಲಿದೆ.
ಹೀಗೆ ಸೀತಾಪಹರಣ ನಡೆದ ಮಾರ್ಗದಿಂದ ಆರಂಭವಾಗಿ ಮತ್ತೆ ರಾಮನನ್ನು ಆಕೆ ಸೇರುವುದರೊಂದಿಗೆ ನಮ್ಮ ಸೀತಾನ್ವೇಷಣ ಕೊನೆಯಾಗಿತ್ತು.ರಾಮ ಭಾರತದಲ್ಲಿ ನಾಯಕನಾದರೆ, ಶ್ರೀಲಂಕೆಯಲ್ಲಿ ರಾವಣ. ಆದರೆ ಈ ನಾಯಕರ ಕತೆಯನ್ನು, ಉದಾತ್ತ ಗುಣಗಳನ್ನು ಬಿಂಬಿಸಲು ಬಳಸಲ್ಪಡುವವರು ಸೀತೆ, ಮಂಡೋದರಿ, ಶೂರ್ಪನಖಿ ಎಂಬ ಮಹಿಳೆಯರು. ಮದುವೆ, ವನವಾಸ, ಅಪಹರಣ ಎಲ್ಲದರಲ್ಲೂ ಪರಿಸ್ಥಿತಿಯ ಕೈಗೊಂಬೆ ಸೀತೆ. ರಾವಣನಿಂದ ಒಂದು ಕಾಳು ಅನ್ನವನ್ನೂ ಸ್ವೀಕರಿಸದ ಸೀತೆ, ರಾಮನ ಬಗ್ಗೆ ಅಚಲ ನಂಬಿಕೆಯಿಂದ ದಿನ ಸವೆಸಿದಳು.ಆದರೂ ಲೋಕಕ್ಕೆ ನಿರೂಪಿಸುವ ಸಲುವಾಗಿ ಆಕೆ ಅಗ್ನಿ ಪರೀಕ್ಷೆಗೆ ಒಳಗಾಗಬೇಕಾಯಿತು. ಅದು ಕಣ್ಣಿಗೆ ಕಂಡ ಪರೀಕ್ಷೆ. ಆದರೆ ಅವಳದ್ದು ನಿತ್ಯವೂ ಅಗ್ನಿಕುಂಡದೊಳಗಿನ ಬದುಕೇ! ಆಕೆಯಷ್ಟೇ ಅಲ್ಲ,ಈಗಲೂ ಲೋಕವನ್ನು ಮೆಚ್ಚಿಸುವ ಹೆಸರಿನಲ್ಲಿ ನಿತ್ಯವೂ ಸೀತೆಯರ ಅಗ್ನಿಪರೀಕ್ಷೆಗಳು ನಡೆಯುತ್ತಲೇ ಇವೆ. ಗೋಡೆಗಳ ಮೇಲೆ ಪಟಗಳಲ್ಲಿ, ರಾಮನ ಪಕ್ಕ ನಿಂತ ಆದರ್ಶ ಸತಿ ಸೀತೆ ಮಾತ್ರ ಎಲ್ಲವನ್ನೂ ಅರಿತು ನಸುನಗುತ್ತಲೇ ಇದ್ದಾಳೆ !!

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಚೈತ್ರ ಅವರ ಪ್ರವಾಸ ಕುತೂಹಲದಿಂದ ಕೂಡಿದೆ. ಅಲ್ಲಿನ ರಾಮಾಯಣದ ಕುರುಹುಗಳು, ಜನರ ನಂಬಿಕೆ, ಆಚರಣೆ, ರಾವಣನ ಕುರಿತ ಅಭಿಮಾನ ಎಲ್ಲ ಹೊಸ ಆಯಾಮ ನೀಡಿದರೂ ಸೀತೆ ಪೂಜಿತಳು. ರಾಮ?
ಮಂಡೋದರಿ ಮತ್ತು ಶೂರ್ಪನಖಿ ಕುರಿತ ನಿಲುವು?ಅವರ ಕುರಿತ ನಂಬಿಕೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರೆ ಚೆನ್ನಾಗಿತ್ತು.
ಸಬಿಹಾ ಭೂಮಿಗೌಡ