ಶ್ರಾವಣದ ಮಳೆ- ಶ್ರೀದೇವಿ ಕಳಸದ

ಹುಯ್ಯೆಂದು ರಾಶಿ ಟಿಸಿಲೊಡೆದ
ಹುಲ್ಲ ಮಧ್ಯೆ ತ್ರಿದಳ ಆಯ್ದಂತೆ
…ಈಗೀಗ ಮಾತೆಂದರೆ.

ತಿರುಗಿದ ಯಾವ ದೇಶವೂ
ಇಷ್ಟು ಲೆಕ್ಕಾಚಾರ ಕಲಿಸಿರಲಿಲ್ಲವಲ್ಲ?
ನಿನಗಿಂತ ಜಿಪುಣಿ‌‌ ನಾ, ಸವೆಕಲನ್ನೇ ಸೋದಾಹರಿಸುವೆ;
ನಾಣ್ಯದ ‌ಎರಡು ಮುಖಗಳು ಎಂದಿಗೂ ಬೇರೆಯೇ ,
ಆದರೂ
ಕಾಯ್ದ ಬೆನ್ನ ಪರಿಮಳದ ಸತ್ಯ ಒಂದೇ!

ನಿನ್ನ ಮಂಡಲದೊಳಗೆ ತೊಡಿಸಿದ ಶಬ್ದದೀಕ್ಷೆ
ಕಳಚಲೇಬೇಕೆಂದು ನೀಲಕಡಲೊಳಗಿಳಿದೆ,
ಬಿಚ್ಚಿದ ಮುಟ್ಟಿಗೆಯೊಳಗಿಂದ ಒಂದೊಂದೇ
ಆಳಕ್ಕಿಳಿದವು.
ಜಲಚರಗಳು ನುಂಗಿ ನೊಣೆದು ಪುಡಿಗಟ್ಟಿದರೆ ಸಾಕೆಂದು
ದಂಡೆಗೆ ಮರಳಿದರೆ ಮರಳೇ ಕಾಲುಗಳ ನುಂಗಿತು
ಬಿಡಿಸಿಕೊಂಡು ಇನ್ನೇನು ಓಡಬೇಕು
ಒಂದೊಂದೇ ಶಬ್ದಗಳು ಮರಳಿ ನನ್ನ ಬೆರಳಿಗೇ!

ಕುಣಿದರೆ ಕೊನರಬೇಕು ಇಲ್ಲಾ
ಕೆಂಗಣ್ಣು ಮೂಡಬೇಕು
ಗೆಜ್ಜೆ ಕಟ್ಟದೆ ಹೆಜ್ಜೆ ಹಾಕಿದೆ, ಕಾಷ್ಠ ಕಾಷ್ಠ ಹೊಸೆದುಮೈ
ಕೆನ್ನಾಲಗೆಯು ಕತ್ತಲಗಂಟಲ ಸೀಳಿಸೀಳಿ
ನಸುಕೇ ಹರಿಯಿತು
ಬೆಚ್ಚಬೂದಿಗೂ ಸಕ್ಕರೆ ನಿದ್ದೆ.
ಮಮತೆಯಿಂದ ಬೆರಳಾಡಿಸಿದೆ ಹೊಳಪೇರಿಸಿಕೊಂಡು
ಪುಟಿದೆದ್ದ ಮತ್ತವೇ ಶಬ್ದಗಳು!

ಸುಂಯ್ಗುಡುವ ಗಾಳಿಯೊಳಗೆ ಕಣಕಣವೂ ಹಾರಿ ಜಗವೇ ಬುಗುರಿಯಾದಾಗ ಈ ಶಬ್ದಗಳಿಗೆಲ್ಲಿ ಉಳಿಗಾಲ?
ಗಹಗಹಿಸಿ ನಕ್ಕೆ, ಒಳಗೊಳಗೆ ಅತ್ತೆ
ಪ್ರತಿಧ್ವನಿ ಪ್ರದಕ್ಷಿಣೆ ಪ್ರತಿಧ್ವನಿ ಪ್ರದಕ್ಷಿಣೆ,
ವೃತ್ತದೊಳಗಿದ್ದಿದ್ದು ಸಾಕ್ಷಾತ್ ನಾನೇ…

ಉರುಳಿಹೊರಳಾಡಿ ತುದಿಮುಗಿದ ಬೆಟ್ಟವೊಂದರ
ಬಗಲಿಗೆ ಜೋತುಬಿದ್ದು ಆಳಕಣಿವೆಯನ್ನೊಮ್ಮೆ ತೋರಿಸಿದೆ
-ಶಬ್ದಗಳ ಕತ್ತುಬಡಿದು ಮಮಕಾರ ಒತ್ತಿಹಿಡಿದು.
ಗುರುತ್ವಾಕರ್ಷಣೆಗೆ ಯಾರ ಹಂಗು?
ಯಾರೋ ತೋಡಿಟ್ಟ ಗುಂಡಿಯನ್ನು
ಇನ್ನ್ಯಾರೋ ಮುಚ್ಚುತ್ತಿದ್ದರು
ಕಣ್ಣಮಣ್ಣ ಸರಿಸಲು ನೋಡಿದೆ
ಕೈಗಳಿಗೆ ಹಸಿರಮೊಳಕೆ
ಶಬ್ದಗಳೀಗ ಹಗೂರಹತ್ತಿ.

ಬೇಸೂರ ಕಳಚಿದ ಶಬ್ದಗಳೀಗ ನಿಸೂರ,
ಹಾರಿ ಹಾರಿ ಬೆಳ್ಳನೆಯ ಹೂವ್ವಾಗಿ
ಕಪ್ಪನೆಯ ಹಾವಾಗಿ
ಗಿಣಿ ಕಚ್ಚಿದ ಕೊನೆಯ ಮಾವಾಗಿ
ಹಾಲೊಸರಿದ ಮೊಲೆಯಾಗಿ
ಬಾಗಿ ತೂಗಿ ತೂಗಿ ಬಾಗಿ
ಗುಂಗಿಯ ಹುಳುವಾಗಿ ಹರಿಸಿದ ಗಂಗೆಯ
ಆಕಾಶರಾಯನೆದೆಯ ತುಂಬ ರಾಗಗಳ ಮಾಲೆ…

ಶ್ರೀದೇವಿ ಕಳಸದ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *