ಸಿನಿಮಾತು/‘ಶಕುಂತಲಾ ದೇವಿ’ – ನಂಬದಿದ್ದರೂ ಹೇರಿದ ಸ್ತ್ರೀವಾದ -ನೇಮಿಚಂದ್ರ
ಅನು ಮೆನನ್ ಅವರ ‘ಶಕುಂತಲಾ ದೇವಿ’ಯನ್ನು ಕುರಿತ ಬಯೋಪಿಕ್-ಚಲನಚಿತ್ರ ‘ಅಮೆಜಾನ್ ಪ್ರೈಮ್ ವೀಡಿಯೋ’ದಲ್ಲಿ ಇದೀಗ ಬಿಡುಗಡೆಯಾಗಿದೆ. ಒಂದು ಕಾಲಕ್ಕೆ ಕಂಪ್ಯೂಟರಿನ ವೇಗವನ್ನೂ ಮೀರಿಸಿ ಗಣಿತದ ಸಮಸ್ಯೆಗಳನ್ನು ಬಿಡಿಸಿದ ಶಕುಂತಲಾ ದೇವಿಯ ಬಗ್ಗೆ ಸಹಜ ಕುತೂಹಲದಲ್ಲಿ, ಬಿಡದೆ ಈ ಚಲನಚಿತ್ರವನ್ನು ನೋಡಿದೆ. ನೋಡಿ ದಿಗ್ಮೂಢಳಾದೆ. ಆರಂಭದಲ್ಲಿಯೇ ಇದು ‘ಮಗಳು ಅನುಪಮಾ ಬ್ಯಾನರ್ಜಿಯ ದೃಷ್ಟಿಕೋನದ್ದು’ ಎಂದು ಸ್ಪಷ್ಟ ಪಡಿಸಿದ್ದರೂ, ಇಷ್ಟೊಂದು ಏಕಮುಖವಾದ ಕತೆಯನ್ನು ನಿರೀಕ್ಷಿಸಿರಲಿಲ್ಲ.
‘ಮಾನವ ಗಣಕ ಯಂತ್ರ’ ಎಂದೇ ಪ್ರಸಿದ್ಧವಾದ ಗಿನ್ನೀಸ್ ದಾಖಲೆ ಹೊಂದಿದ ಶಕುಂತಲಾ ದೇವಿಯ ಬಗ್ಗೆ ನಮಗೆ ಅಗಾಧ ಕುತೂಹಲವಷ್ಟೆ ಅಲ್ಲ ಹೆಮ್ಮೆ ಕೂಡ. ‘ಹೆಣ್ಣುಮಕ್ಕಳಿಗೆ ಗಣಿತದ ಸಾಮರ್ಥ್ಯವಿಲ್ಲ. ಎಡ ಮಿದುಲಿನ ಸಾಮರ್ಥ್ಯಗಳಾದ ಲಾಜಿಕ್, ಅನಲಿಸಿಸ್ ಇವೆಲ್ಲ ಮಹಿಳೆಯರಲ್ಲಿ ಕಡಮೆ’ ಎಂಬೆಲ್ಲ ಮಾತುಗಳನ್ನು ಕೇಳಿಯೇ ಬೆಳೆದ ನಮಗೆ ಈ ‘ಮ್ಯಾಥೆಮ್ಯಾಟಿಕಲ್ ಪ್ರಾಡಿಜಿ’ ಸ್ತ್ರೀ ಸಾಮರ್ಥ್ಯದ ಒಂದು ಅದ್ಭುತ ಉದಾಹರಣೆಯಾಗಿದ್ದರು. ಸಂಖ್ಯೆಗಳೊಡನೆಯ ತಮ್ಮ ಸಹಜ ಪ್ರತಿಭೆಯನ್ನು, ತಮ್ಮ ಅಗಾಧ ಶ್ರಮ, ಸತತ ಅಭ್ಯಾಸದ ಬಲದಿಂದ ಇಡೀ ಜಗತ್ತಿನ ಎದುರು ಪ್ರದರ್ಶನಕ್ಕೆ ಇಟ್ಟವರು ಶಕುಂತಲಾ ದೇವಿ.
13 ಅಂಕಿಗಳ ಒಂದು ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದೂ ನಮಗೆ ಕಷ್ಟ. ಅಂತಹುದರಲ್ಲಿ 13 ಅಂಕಿಗಳ ಸಂಖ್ಯೆಯನ್ನು 13 ಅಂಕಿಯ ಸಂಖ್ಯೆಯಿಂದ ಗುಣಿಸಿ ಉತ್ತರವನ್ನು ತಟ್ಟನೆ ನೀಡಿದ ಸಾಮಥ್ರ್ಯ ಅವರದಾಗಿತ್ತು. ಇಸವಿ 1977ರಲ್ಲಿ ಶಕುಂತಳಾ ದೇವಿ 201 ಅಂಕಿಗಳ ಸಂಖ್ಯೆಯ 23ನೇ ರೂಟ್ ಅನ್ನು 50 ಸೆಕೆಂಡಿನಲ್ಲಿ ಗುಣಿಸಿ ಹೇಳಿದ್ದರು. ಗಣಕ ಯಂತ್ರ 62 ಸೆಕೆಂಡನ್ನು ತೆಗೆದುಕೊಂಡಿತ್ತು! ಯಾರನ್ನೂ ಬೆರಗುಗೊಳಿಸುವ ಅಪರೂಪದ ಗಣಿತದ ಕೌತುಕದ ಪ್ರತಿಭೆ ಅವರದು.
ಒಮ್ಮೆ ಶಕುಂತಲಾ ದೇವಿ ಟೊರೆಂಟೋಗೆ ಭೇಟಿಕೊಟ್ಟ ಸಮಯ, ‘ಅಪ್ಪರ್ ಕ್ಯಾನಡಿಯನ್ ಕಾಲೇಜಿ’ನ ಗಣಿತ ವಿಭಾಗದ ಮುಖ್ಯಸ್ಥರಾದ ರೋಜೆರ್ ಶಕುಂತಲಾಗೆ ಒಂಬತ್ತು ಅಂಕಿಗಳಿದ್ದ ಸಂಖ್ಯೆಯ ಕ್ಯೂಬ್ ರೂಟ್ ಅನ್ನು ಕೇಳಿದರು. ಶಕುಂತಲಾ ತಕ್ಷಣವೇ ಉತ್ತರಿಸಿದ್ದರು. ಬಹುಶಃ 20 ಅಥವಾ 30 ಸೆಕೆಂಡ್ ಹಿಡಿಸಿರಬಹುದು. ಕ್ಯಾಲುಕಲೇಟರ್ ಕೈಯಲ್ಲಿ ಹಿಡಿದು ಕುಳಿತಿದ್ದ ರೋಜರ್ ಬೆರಗಾದರು. ನಿರೂಪಕ ಅವರನ್ನು ‘ನೀವು ಕಂಪ್ಯೂಟರ್ ಇಲ್ಲದೆ ಇದೇ ಸಮಸ್ಯೆಯನ್ನು ಬಿಡಿಸಬೇಕಿದ್ದರೆ ಹೇಗೆ ಬಿಡಿಸುತ್ತಿದ್ದಿರಿ? ಅದಕ್ಕೆ ಎಷ್ಟು ಸಮಯ ಹಿಡಿಸುತ್ತಿತ್ತು?’ ಎಂದು ಕೇಳಿದ. ಅವರು ಹೇಳಿದರು, ‘ಇದನ್ನು ಕಂಪ್ಯೂಟರ್ ಇಲ್ಲದೆ ಬಿಡಿಸಬೇಕು ಎಂದರೆ ಟ್ರಯಲ್ ಅಂಡ್ ಎರರ್ ವಿಧಾನದಲ್ಲಿ, ಮೂರು ಮೂರು ಅಂಕಿಯ ಗುಂಪುಗಳಾಗಿ ವಿಂಗಡಿಸಿಕೊಂಡು, ಬುದ್ಧಿವಂತ ಊಹೆಗಳನ್ನು ಮಾಡುತ್ತಾ ಬಿಡಿಸುತ್ತೇವೆ. ಇದಕ್ಕೆ ಬಹಳಷ್ಟು ಸಮಯ ಹಿಡಿಸುತ್ತದೆ. ಅತಿ ಬುದ್ಧಿವಂತನಿಗೂ ಹಲವು ನಿಮಿಷಗಳು ಖಂಡಿತಾ ಬೇಕಾಗುತ್ತದೆ’ ಎಂದರು. ಇಂತೆಲ್ಲಾ ಶಕುಂತಲಾ ಅವರನ್ನು ಕುರಿತ ವರದಿಗಳು, ದಾಖಲೆಗಳು, ಅವರು ನೀಡಿದ ಸಂದರ್ಶನಗಳು ಅವರ ಅದ್ಭುತ ಪ್ರತಿಭೆಯನ್ನು ಮತ್ತು ಸಾರ್ವಜನಿಕ ಬದುಕನ್ನು ನಮಗೆ ತಿಳಿಸಿದ್ದವು. ಆದರೆ ಅವರ ವೈಯಕ್ತಿಕ ಬದುಕಿನ ಹೋರಾಟವೇನಿತ್ತು, ಅದರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಈ ಚಿತ್ರವನ್ನು ನೋಡಿದ ಮೇಲೆ, ಅದು ಇಷ್ಟು ರೋಚಕವಿತ್ತೆ ಎಂಬ ಪ್ರಶ್ನೆ ನಮ್ಮೆದುರು ಮೂಡುತ್ತದೆ. ಇಬ್ಬರು ಮಾತ್ರ ಈ ಪ್ರಶ್ನೆಗೆ ಉತ್ತರ ನೀಡಬಲ್ಲರು. ಒಬ್ಬರು ಶಕುಂತಲಾ, ಇನ್ನೊಬ್ಬರು ಅವರ ಮಗಳು ಅನುಪಮಾ. ಶಕುಂತಲಾ ಈಗಿಲ್ಲ. ನಮ್ಮೆದುರು ಬಹುಶಃ ತೆರೆದಿಟ್ಟಿರುವುದು ಅರ್ಧ ಸತ್ಯ ಮಾತ್ರ. ಗಮನಿಸಬೇಕಿರುವುದು,
ಎಲ್ಲ ‘ಚೈಲ್ಡ್ ಪ್ರಾಡಿಜಿ’ಗಳು ಬೆಳೆದಂತೆ ಪ್ರಸಿದ್ಧರಾಗಿಲ್ಲ. ಅದಕ್ಕೆ ಬೇಕಾದ ಶ್ರಮ, ಅಭ್ಯಾಸ, ಅವಕಾಶಗಳು, ಬೆಂಬಲ, ಬದುಕಿನ ಸವಾಲುಗಳನ್ನು ಎದುರಿಸುವ ತಾಕತ್ತು, ದೃಢ ಸಂಕಲ್ಪ – ಇವು ಎಲ್ಲರಿಂದಲೂ ಸುಲಭ ಸಾಧ್ಯವಲ್ಲ. ಹಾಗೆಂದೇ ಶಕುಂತಲಾ ಅವರು ತಮ್ಮ ಗಣಿತದ ಪ್ರತಿಭೆಯನ್ನು ಉಳಿಸಿಕೊಂಡು ಬೆಳೆದ ಪರಿ ಅಪೂರ್ವವಾದದ್ದು.
ಈ ಚಿತ್ರಕ್ಕೆ ಮೊದಲು ನಮಗೆ ಶಕುಂತಲಾ ಬಗ್ಗೆ ತಿಳಿದಿದ್ದ ಮಾಹಿತಿಗಳು ಹೀಗಿವೆ:
ಶಕುಂತಲಾ ಬೆಂಗಳೂರಿನ ಗವಿಪುರಂನ ಬಡಗಲ್ಲಿಯೊಂದರಲ್ಲಿ ಬಡ ಬ್ರಾಹ್ಮಣ ಕುಟುಂಬದಲ್ಲಿ ಇಸವಿ 1929ರಲ್ಲಿ ಜನಿಸಿದರು. ಅಜ್ಜ (ತಾಯಿಯ ತಂದೆ) ಜ್ಯೋತಿಷ್ಯದಲ್ಲಿ ಪಾರಂಗತರು, ಆದರೆ ತಂದೆ ಸರ್ಕಸ್‍ನಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಡಿನ ಆಟಗಳನ್ನು, ಟ್ರಿಕ್‍ಗಳನ್ನು ಹೇಳಿಕೊಡುವಾಗ, ಎಳೆಯ ವಯಸ್ಸಿಗೇ ಶಕುಂತಲಾಗೆ ಸಂಖ್ಯೆಗಳನ್ನು ಕುರಿತು ಇರುವ ಸಾಮರ್ಥ್ಯವನ್ನು, ಅಗಾಧ ನೆನಪಿನ ಶಕ್ತಿಯನ್ನು ತಂದೆ ಗುರುತಿಸಿದರು. ಶಕುಂತಲಾ ಇನ್ನೂ ಐದಾರು ವರ್ಷದ ಮಗುವಾಗಿದ್ದಾಗಲೇ, ತಂದೆ ಆಕೆಯನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಕರೆದೊಯ್ದು ಪ್ರದರ್ಶನ ನೀಡಿದ್ದರು. ಅಲ್ಲಿಂದ ಮುಂದೆ ಅವರ ಬಾಲ್ಯವೆಲ್ಲವೂ ಗಣಿತದ ಪ್ರದರ್ಶನವಾಯಿತು. ಬಹುಶಃ ಎಲ್ಲ ಮಕ್ಕಳ ಸರಳ ಸಾಧಾರಣ ಬಾಲ್ಯ ಅವರಿಗೆ ಸಿಗಲಿಲ್ಲ. ಕುಟುಂಬದ ಆರ್ಥಿಕ ಜವಾಬ್ದಾರಿ ಅವರ ಮೇಲೆ ಬಿತ್ತು. ಆದರೆ ಈ ಕಾರಣಕ್ಕೆ ಅವರು ತಂದೆಯನ್ನು, ತಾಯಿಯನ್ನು ಚಿತ್ರದಲ್ಲಿ ತೋರಿಸಿದ ಮಟ್ಟಕ್ಕೆ ದ್ವೇಷಿಸುತ್ತಿದ್ದರೆ, ಪ್ರಬುದ್ಧ ವಯಸ್ಸಿಗೆ ಬಂದ ಮೇಲೂ ದ್ವೇಷಿಸಿದರೆ, ಇಲ್ಲ ಅವರ ಪರಿಸ್ಥಿತಿಯನ್ನು, ಬಡತನದ ಅಸಹಾಯಕತೆಗಳನ್ನು ಬೆಳೆದಂತೆ ಅರ್ಥ ಮಾಡಿಕೊಂಡಿದ್ದರೆ – ಸ್ಪಷ್ಟ ಪುರಾವೆಗಳಿಲ್ಲ.
ಶಕುಂತಲಾ ಬಹಳ ಸಂತಸದಿಂದ, ಹೆಮ್ಮೆಯಿಂದ, ಚಾತುರ್ಯದಿಂದ ತಮ್ಮ ಗಣಿತದ ಪ್ರದರ್ಶನಗಳನ್ನು ನೀಡುವುದನ್ನು ವೀಡಿಯೋಗಳಲ್ಲಿ ನಾವು ಕಾಣುತ್ತೇವೆ. ಒಳ್ಳೆಯ ಹಾಸ್ಯ ಪ್ರವೃತ್ತಿಯ ಶಕುಂತಲಾ, ಉತ್ತಮ ವಾಗ್ಮಿ. ಸಾರ್ವಜನಿಕ ವೇದಿಕೆಗಳಲ್ಲಿ ಮಿಂಚಿದ ಈ ವ್ಯಕ್ತಿ, ಒಮ್ಮೆ ಇಂದಿರಾ ಗಾಂಧಿಯ ವಿರುದ್ಧ ನಿಂತು ಚುನಾವಣೆಯಲ್ಲಿ ಸೋತಿದ್ದರು ಕೂಡಾ. ಆದರೆ ಶಕುಂತಲಾ ಅವರ ಬದುಕು ಚಿತ್ರದಲ್ಲಿ ಪ್ರದರ್ಶಿಸಿರುವಷ್ಟು ವರ್ಣರಂಜಿತವಿತ್ತೆ ಎಂಬುದು ಪ್ರಶ್ನೆ. ಉದಾಹರಣೆಗೆ ಚಿತ್ರದಲ್ಲಿ ಶಕುಂತಲಾ ಓರ್ವ ಯುವಕನೊಡನೆ ಪ್ರೀತಿಯ ಸಂಬಂಧದಲ್ಲಿದ್ದಾಳೆ, ಮದುವೆಯ ಕನಸು ಕಾಣುತ್ತಿದ್ದಾಳೆ. ಆದರೆ ಆತ ಬೇರೆಡೆಯಲ್ಲಿ ಮದುವೆಯಾಗುವುದು ತಿಳಿದು ಬರುತ್ತದೆ. ತಕ್ಷಣ ಬಂದೂಕಿನಿಂದ ಆತನತ್ತ ಗುಂಡು ಹಾರಿಸುತ್ತಾಳೆ. ಆತ ಸಾಯುವುದಿಲ್ಲ, ಆದರೆ ಆತನ ಕಿವಿ ಎಗರಿ ಹೋಗುತ್ತದೆ. ಮುಂದಿನ ಸೀನ್, ಹಡಗಿನ ಒಂದು ಚಿತ್ರ. ಮರು ದೃಶ್ಯ ಶಕುಂತಲಾ ಲಂಡನ್‍ನಲ್ಲಿದ್ದಾಳೆ. ಬರೀ ಪುರುಷರೇ ಇದ್ದ ‘ತಾರಾಬಾಯಿ ಗೆಸ್ಟ್ ಹೌಸ್’ಗೆ ಬಂದಿಳಿದಿದ್ದಾಳೆ. ಎಂದೂ ಗೆಸ್ಟ್ ಹೌಸ್‍ನಲ್ಲಿ ಹೆಂಗಸು ಬಂದು ತಂಗಿದ್ದನ್ನು ನೋಡಿಲ್ಲದ ಅಲ್ಲಿಯ ಪರುಷರು ಪ್ರಶ್ನಿಸಿದಾಗ, ಶಕುಂತಲಾ ‘ನಾನು ನನ್ನ ಅತೀತದಿಂದ ಓಡಿ ಬಂದೆ, ನಾನೊಬ್ಬನನ್ನು ಶೂಟ್ ಮಾಡಿದೆ’ ಎನ್ನುತ್ತಾಳೆ.
ಈ ಇಡೀ ಚಿತ್ರ ಇಂತಹುದೇ ಬಿಡಿ ಬಿಡಿಯಾದ ರೋಚಕ ಘಟನೆಗಳನ್ನು ತೋರುವುದರಿಂದ, ಕತೆಯ ಕೊಂಡಿಗಳು ಕಳಚಿವೆ, ಕತೆಯ ನಿರಂತರತೆಗೆ ಧಕ್ಕೆ ಬಂದಿದೆ. ಶಕುಂತಲಾ ಶೂಟ್ ಮಾಡಿದ ಮೇಲೆ ಭಾರತದಿಂದ ಲಂಡನ್ನಿಗೆ ಹೇಗೆ ಬಂದು ಇಳಿದರು ಎಂದು ಚಿತ್ರ ಹೇಳುವುದಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ, ಇಸವಿ 1944ರಲ್ಲಿ ಶಕುಂತಲಾ ಅವರನ್ನು ಆಕೆಯ ತಂದೆ ಲಂಡನ್ನಿಗೆ ಪ್ರದರ್ಶನ ನೀಡಲು ಕರೆದೊಯ್ದಿದ್ದರು.
ಇಡೀ ಚಿತ್ರದಲ್ಲಿ ಸ್ತ್ರೀವಾದ ಬಲವಂತವಾಗಿ ಮೇಲೆ ಹೊದಿಸಿದ ಹೊದಿಕೆಯಂತೆ, ಮೇಲೆ ಹೇರಿದ ಹೊರೆಯಂತಿದೆಯೇ ಹೊರತು, ಅದು ಚಿತ್ರದ ಅಂತರ್ ದನಿಯಾಗಿಲ್ಲ. ಶಕುಂತಲಾ ದೇವಿಯ ಬದುಕು ಮತ್ತು ಸಾಧನೆಯನ್ನು, ಆ ಅಸಾಧಾರಣ ಬದುಕಿನ ಸವಾಲುಗಳನ್ನು ನೋಡುವ ಸ್ತ್ರೀವಾದಿ ದೃಷ್ಟಿಕೋನದ ಸೂಕ್ಷ್ಮತೆಯನ್ನು ಈ ಚಿತ್ರ ಹೊಂದಿಲ್ಲ. ಚಿತ್ರದ ಮೂಲ ಸ್ವರ ಶಕುಂತಲಾರತ್ತ ದೂರಿನದಾಗಿಯೇ ಧ್ವನಿಸುತ್ತದೆ. ಇಂದಿಗೂ ಆಕೆಯ ಬದುಕಿನ ಸಂಘರ್ಷಗಳನ್ನು ವಿವೇಚಿಸದೆ, ಆಕೆಯ ಬದುಕಿನ ಕೆಲವು ನಿಜವೋ, ಕಾಲ್ಪನಿಕವೋ ಆದ ವಿಷಯಗಳಿಗೆ ದುರ್ಬೀನು ಹಿಡಿದ ದೃಷ್ಟಿಕೋನವಾಗಿದೆ. ತಾಯಿಯ ಪ್ರಸಿದ್ಧಿಯನ್ನು ದ್ವೇಷಿಸುವ, ಆಕೆಯನ್ನು ನಿರಾಕರಿಸುವ ಓರ್ವ ಮಗಳ ಮೂಲ ದೃಷ್ಟಿಕೋನವೇ ಚಿತ್ರದ ಪೂರಾ ಹರಿದು ಬಂದಂತಿದೆ. ಕಡೆಯ ಕ್ಷಣದಲ್ಲಿ ಒಂದು ನಾಟಕೀಯ ತಿರುವು, ಮಗಳಿಗೆ ತಾನು ತಾಯಾದೊಡನೆ ತತ್ತಕ್ಷಣದ ಜ್ಞಾನೋದಯ, ‘ನನ್ನ ಅಮ್ಮನ ಬಗ್ಗೆ ನನಗೆ ಹೆಮ್ಮೆ’ ಎಂಬ ಒಂದು ಸಾಲಿನ ಮುಕ್ತಾಯ. ಆದರೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದು ಬಿಡುವುದು, ಅಲ್ಲಿಯವರೆಗೂ ಉದ್ದಕ್ಕೂ ಕಡೆದಿಟ್ಟ ಶಕುಂತಲಾ ಅವರ ಹಟಮಾರಿ ಹೆಣ್ಣಿನ ಚಿತ್ರ. ಪತಿ-ಪತ್ನಿಯದಾಗಲಿ, ತಾಯಿ-ಮಗಳದಾಗಲಿ, ಸಹಜ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲಾರದ ಅಹಂಕಾರದ ಹೆಣ್ಣಿನ ಚಿತ್ರ.
ಶಾಲೆ, ಕಾಲೇಜು ಸಂಸ್ಥೆಗಳಿಗೆ ಪುಟ್ಟ ಮಗಳನ್ನು ಕರೆದೊಯ್ದು ಪ್ರದರ್ಶನ ನೀಡುವ ತಂದೆಯನ್ನು ತೋರಿಸುತ್ತಾ ಈ ಚಲನಚಿತ್ರ ಆರಂಭವಾಗುತ್ತದೆ. ಪತಿಯ ವಿರುದ್ಧ ಏನೊಂದೂ ಮಾತನಾಡದ ತಾಯಿಯನ್ನು ತೋರಿಸುತ್ತದೆ. ಹಣದ ಅಭಾವದಿಂದ ಸಾಯುವ ಅಕ್ಕನನ್ನು ತೋರಿಸುತ್ತದೆ. ಪ್ರೀತಿಯ ಪ್ರಕರಣವನ್ನು ತೋರಿ, ತಟ್ಟೆಂದು ಲಂಡನ್‍ಗೆ ಹಾರುತ್ತದೆ. ಅಲ್ಲಿ ಹ್ಯಾವಿಯರ್ ಎಂಬ ವ್ಯಕ್ತಿಯ ಬೆಂಬಲ ಆಕೆಯನ್ನು ಬೆಳೆಸುತ್ತದೆ. ಮತ್ತೊಂದು ಪ್ರೀತಿಯ ಪ್ರಕರಣ, ಇಡೀ ಯೂರೋಪಿನ ದೇಶಗಳಲ್ಲಿ ಪ್ರದರ್ಶನಗಳು, ಆದರೆ ಹ್ಯಾವಿಯರ್ ಆಕೆಯನ್ನು ಬಿಟ್ಟು ತನ್ನ ದೇಶಕ್ಕೆ ಮರಳುತ್ತಾನೆ.
ಮರುಗಳಿಗೆ ಬಾಂಬೆಯಲ್ಲಿ ಇಸವಿ 1968ರಲ್ಲಿ ಪಾರ್ಟಿಯೊಂದರಲ್ಲಿ ಶುದ್ಧ ಅಪರಿಚಿತ ಪರಿತೋಷ್ ಬ್ಯಾನರ್ಜಿಗೆ ಶಕುಂತಲಾ ಚೀಟಿ ಕಳುಹಿಸುವುದನ್ನು ಚಿತ್ರ ತೋರಿಸುತ್ತದೆ. ಮರುದೃಶ್ಯ ವಿಚ್ಛೇದಿತ ಬ್ಯಾನರ್ಜಿಯೊಡನೆ ಶಕುಂತಲಾ ಕಲಕತ್ತೆಗೆ ಬಂದಿದ್ದಾಳೆ. ಅಗಾಧವಾಗಿ ಹಣವನ್ನು ಗಳಿಸಿರುವ ಶಕುಂತಲಾ ಹಿಂದಿನ ದಿನವೇ ಪಾರ್ಟಿ ಸ್ಟ್ರೀಟ್‍ನಲ್ಲಿ ಅತ್ಯಂತÀ ದುಬಾರಿಯ ಮನೆಯನ್ನು ಕೊಂಡಿದ್ದಾಳೆ. ‘ನನಗೆ ನಿನ್ನಂತಹ ಬುದ್ಧಿವಂತ ಸುಂದರ ಗಂಡಸಿನಿಂದ ಮಗು ಬೇಕು’ ಎನ್ನುತ್ತಾಳೆ. ಬ್ಯಾನರ್ಜಿ ‘ಇಗೋ ಮದುವೆಯಾಗೋಣ’ ಎಂದಾಗ, ‘ಅರೆ ನಾನು ಒಂದು ಮಗು ಬೇಕು ಎಂದೆ, ಗಂಡ ಬೇಕು ಎನ್ನಲಿಲ್ಲ’ ಎನ್ನುತ್ತಾಳೆ. ವಿವಾಹವಾಗಿದೆ, ಮಗುವಾಗಿದೆ. ಮಗುವಿನೊಡನೆ ಮನೆಯಲ್ಲಿ ಕಟ್ಟಿಬಿದ್ದ ಎಲ್ಲ ಉದ್ಯೋಗಸ್ಥ ಮಹಿಳೆಯರ ಮನದ ಚಡಪಡಿಕೆ ಶಕುಂತಲಾದೂ ಕೂಡಾ. ಮತ್ತೆ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಲು ತೊಡಗುತ್ತಾಳೆ. ಗಂಡನಿಗೆ ‘ನಿನ್ನ ಕೆಲಸ ಬಿಟ್ಟು ನನ್ನೊಡನೆ ಬಾ’ ಎಂದು ಹಕ್ಕಿನಿಂದ ಕೇಳುತ್ತಾಳೆ. ‘ನೀನೇ ದೇಶ ವಿದೇಶ ಸುತ್ತುವ ಕೆಲಸದಲ್ಲಿ ಇದ್ದರೆ, ನಾನು ನಿನ್ನ ಹಿಂದೆ ಬರಬೇಕೆಂದು ನಿರೀಕ್ಷಿಸುತ್ತಿದ್ದೆ’ ಎಂಬ ಸ್ತ್ರೀವಾದಿ ವಾಕ್ಯವನ್ನು ಇಲ್ಲಿ ತೂರಿ ಬಿಡುತ್ತಾರೆ. ಮಗಳನ್ನು ಗಂಡನೊಡನೆ ಮನೆಯಲ್ಲಿ ಬಿಟ್ಟು ಹೋಗದೆ, ತನ್ನೊಡನೆ ಎಳೆದುಕೊಂಡು ಅಲೆಯುವ ಹಟಮಾರಿತನವನ್ನು ಚಿತ್ರ ತೋರಿಸುತ್ತದೆ. ಸ್ಥಿರವಾದ ಒಂದು ಮನೆ, ಒಂದು ಶಾಲೆಯನ್ನು ಬಯಸುವ ಮಗಳು, ತಾಯಿಯನ್ನು, ಆಕೆಯ ಪ್ರಸಿದ್ಧಿಯನ್ನು ದ್ವೇಷಿಸುತ್ತಾಳೆ. ‘ಎಲ್ಲರ ಅಮ್ಮಂದಿರ ತರಹ ನೀನು ಏಕೆ ಇಲ್ಲ?’ ಮಗಳ ಪ್ರಶ್ನೆ. ಎಲ್ಲರ ಅಮ್ಮಂದಿರ ತರಹ ಮನೆಯಲ್ಲಿ ಉಳಿದು, ಅಡಿಗೆ ಮಾಡಿ ಗಂಡ-ಮಕ್ಕಳ ಸುತ್ತಲೇ ತಮ್ಮ ಇಡೀ ಬದುಕನ್ನು ಸುತ್ತಿಡದೆ, ತನ್ನ ಉದ್ಯೋಗವನ್ನು ಮುಂದುವರೆಸಿ, ಅದರೊಡನೆಯೇ ತಾಯ್ತನವನ್ನು ಅನುಭವಿಸಲು ಬಯಸುವ ಬಹುಪಾಲು ಹೆಣ್ಣುಗಳಿಗೆ ಕುಟುಂಬ ಮತ್ತು ಸಮಾಜ ಕೇಳುವ ಪ್ರಶ್ನೆ ಇದು. ಮುಂದೆ ಬೋರ್ಡಿಂಗ್ ಶಾಲೆಯ ಒಂದು ಅರ್ಧ ಸೀನ್ ಕಾಣಿಸುತ್ತದೆ. ಎಲ್ಲವೂ ಬಿಡಿ ಬಿಡಿಯಾದ ದೃಶ್ಯಗಳಾದ ಕಾರಣ ಶಕುಂತಲಾ ಮತ್ತು ಆಕೆಯ ಮಗಳ ಬದುಕಿನಲ್ಲಿ ನಿಜವಾಗಿ ನಡೆದದ್ದೇನು ಎಂದು ಸ್ಪಷ್ಟ ಚಿತ್ರ ಮೂಡುವುದೇ ಇಲ್ಲ.
ಆದರೆ ಶಕುಂತಲಾ ಅವರ ವ್ಯಕ್ತಿತ್ವ ಎಷ್ಟು ಒರಟಾಗಿ ಮೂಡಿ ಬಂದಿದೆ ಎಂದರೆ ಆಕೆ ಹೇಳುವುದೇನೂ ಸ್ತ್ರೀವಾದಿ ದನಿಯಾಗಿ ಕೇಳಿ ಬರುವುದಿಲ್ಲ. ಗಂಡನಿಂದ ಮಗಳನ್ನು ಕಿತ್ತುಕೊಂಡು ಹೊರಟ ಹಟಮಾರಿ ಹೆಣ್ಣಿನ ಚಿತ್ರಣ. ತನ್ನ ಪ್ರಸಿದ್ಧಿ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸುವ ತಾಯಿಯ ಚಿತ್ರಣ. ಚಿತ್ರ ಗಂಡನನ್ನು ವಿಚ್ಛೇದಿಸಲು, ಒಂಟಿ ತಾಯಿಯಾಗಿ ಮಗಳನ್ನು ತನ್ನೊಡನೆ ಕರೆದೊಯ್ಯಲು, ಶಕುಂತಲಾ ಅವರಿಗೆ ಬೇರೆ ಕಾರಣಗಳು ಇದ್ದಿರಬಹುದೆ ಎಂದು ಸಣ್ಣದಾಗಿ ಕೂಡಾ ಸೂಚಿಸುವುದಿಲ್ಲ. ಚಿತ್ರ ಮುಂದುವರೆದು ಮಗಳಿಗೆ ವಿವಾಹವಾದ ಬಳಿಕವೂ ‘ಡಿವೋರ್ಸ್ ಹಿಮ್’, ‘ಒಂದು ಬೇಬಿ ಮಾಡಿಕೋ ಸಾಕು’ ಎನ್ನುವ ಬೇಜವಾಬ್ದಾರಿ ಅಮ್ಮನ ಚಿತ್ರವನ್ನು ನೀಡುತ್ತದೆ.
ಪ್ರಸಿದ್ಧರ ಮಕ್ಕಳಿಗೆ ಸದಾ ಪ್ರಸಿದ್ಧಿಯ ನೆರಳಲ್ಲಿ ಬದುಕುವ ಸವಾಲು ಇರುತ್ತದೆ. ಆದರೆ ಆ ಪ್ರಸಿದ್ಧಿಯ ಲಾಭಗಳಂತೆಯೇ, ಈ ಸವಾಲುಗಳನ್ನೂ ಬಾಲ್ಯದಲ್ಲಿ ಅಲ್ಲದಿದ್ದರೂ ಬೆಳೆದಂತೆ ಪ್ರಜ್ಞಾವಂತ ಮಕ್ಕಳು ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮದೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ಪ್ರತಿಭಾವಂತ ತಾಯಿಯ ಮಕ್ಕಳು ಸ್ವತಃ ಪ್ರಸಿದ್ಧರಾಗಬೇಕಿಲ್ಲ. ತಮ್ಮ ಬಗ್ಗೆ ದೃಢ ಆತ್ಮವಿಶ್ವಾಸವಿದ್ದರೆ ಅವರು ತಾಯಿಯ ಪ್ರಸಿದ್ಧಿಯನ್ನು ದ್ವೇಷಿಸುವುದಿಲ್ಲ.
ಇಲ್ಲಿ, ‘ಪುವರ್ ಮೀ. ಬಾಲ್ಯದಿಂದಲೇ ನಾನು ಹಣ ಗಳಿಸಬೇಕಾಯಿತು’ ಎಂದು ಅನುಕಂಪವನ್ನು ಬೇಡುವ ಪಾತ್ರವಾಗಿ ಶಕುಂತಲಾ ದೇವಿಯನ್ನು ಮೂಡಿಸುವ ಪ್ರಯತ್ನವಿದ್ದರೂ, ಕಡೆಯಲ್ಲಿ ಅದೆಲ್ಲವೂ, ‘ಪುವರ್ ಮೀ, ನಾನು ಪ್ರಸಿದ್ಧಳ ಮಗಳು, ಎಷ್ಟೆಲ್ಲ ಅನುಭವಿಸಿದೆ’ ಎಂಬ ಮಗಳ ದನಿಯೇ ಗಟ್ಟಿಯಾಗಿ ಗೋಚರಿಸುತ್ತದೆ.
ಅಮ್ಮ ಮನೆಯಲ್ಲಿ ಇಲ್ಲದಿದ್ದರೆ, ಅಡಿಗೆ ಮಾಡಿ ಬಡಿಸದಿದ್ದರೆ ನಮ್ಮ ಸಮಾಜದಲ್ಲಿ ಆಕೆ ಒಳ್ಳೆಯ ತಾಯಿ ಅಲ್ಲವೇ ಅಲ್ಲ. ತಾಯ್ತನದ ಹೊಸ ನಿರ್ವಚನವನ್ನು ನಾವಿನ್ನೂ ಶೋಧಿಸಿಲ್ಲ. ಇಂದಿಗೂ ತಾಯ್ತನದ ಹೊರೆ ಅಮ್ಮಂದಿರ ಮೇಲೆ ಬೀಳುತ್ತದೆ. ತಂದೆಯಿಂದ ಅಗಾಧ ನಿರೀಕ್ಷೆಗಳಿರುವುದಿಲ್ಲ. ಆತ ಅಲ್ಲೆಲ್ಲೋ ಗಲ್ಫ್‍ನಲ್ಲಿದ್ದು ಎರಡು ವರ್ಷಕ್ಕೆ ಒಮ್ಮೆ ಬಂದರೂ ಆತನ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಕುಟುಂಬ ಮತ್ತು ಸಮಾಜ. ಅಷ್ಟೇ ಕರುಣೆಯನ್ನು, ಉದ್ಯೋಗಸ್ಥ ಮಹಿಳೆಯತ್ತ, ಅದರಲ್ಲಿಯೂ ಮನೆಯಿಂದ ಹಲವು ದಿನವೋ, ತಿಂಗಳೋ, ವರ್ಷವೋ ದೂರವಿರಬೇಕಾದ ಉದ್ಯೋಗಸ್ಥ ಮಹಿಳೆಯತ್ತ, ಆಕೆಯ ಉದ್ಯೋಗ ಮತ್ತು ಕುಟುಂಬವನ್ನು ತೂಗಿಸುವ ಯತ್ನದತ್ತ ಸಹಾನುಭೂತಿಯನ್ನು ತೋರಿಸುವುದಿಲ್ಲ. ಅವಳ ಪ್ರಯತ್ನವೆಲ್ಲವೂ ಹಣದ ಹಪಹಪಿಯಾಗಿ, ಪ್ರಸಿದ್ಧಿ ಸ್ವಪ್ರತಿಷ್ಠೆಯ ಕಾರ್ಯಗಳಾಗಿ ಅರ್ಥೈಸಲ್ಪಡುತ್ತವೆÉ. ತಾಯಾದ ಹೆಣ್ಣಿಗೆ ಮಹತ್ವಾಕಾಂಕ್ಷೆ ಇದ್ದರಂತೂ, ಅದು ಘೋರ ಅಪರಾಧವಾಗುತ್ತದೆ. ಆಕೆ ತಾನು ‘ಒಳ್ಳೆಯ ತಾಯಿ ಆಗಲಿಲ್ಲ’ ಎಂಬ ಆಪಾದನೆಯ ಅಡಿಯಲ್ಲಿ ಅಪರಾಧಿ ಪ್ರಜ್ಞೆಯೊಂದಿಗೆ ನಿರಂತರ ನರಳ ಬೇಕಾಗುತ್ತದೆ. ಅಚ್ಚರಿ ಎಂದರೆ, ಅನೇಕ ಬಾರಿ ಪ್ರಸಿದ್ಧ ಉದ್ಯೋಗಸ್ಥ ತಾಯಿಯನ್ನು ಅವರ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳೇ ರೆಸಿಸ್ಟ್ ಮಾಡುತ್ತಾರೆ. ಬಹಳ ಹಿಂದೆ, ಸುಪ್ರಸಿದ್ಧ ಮಹಿಳಾ ಐಪಿಎಸ್ ಅಧಿಕಾರಿಯನ್ನು ಇಡೀ ಜಗತ್ತು ಹಾಡಿ ಹೊಗಳುವಾಗ, ಪತ್ರಿಕೆಯೊಂದು ಆಕೆಯ ಮಗಳನ್ನು ಸಂದರ್ಶಿಸಿತ್ತು. ಆಕೆ ‘ನಾನು ನನ್ನ ಅಮ್ಮನಂತೆ ಆಗಲು ಬಯಸುವುದಿಲ್ಲ. ನಾನು ಒಳ್ಳೆಯ ತಾಯಿ, ಗೃಹಿಣಿಯಾಗಲು ಬಯಸುತ್ತೇನೆ’ ಎಂಬರ್ಥದ ಮಾತುಗಳನ್ನು ಹೇಳಿದ್ದಳು.
ಈ ಚಲನಚಿತ್ರದಲ್ಲಿ, ಶಕುಂತಲಾ ದೇವಿ ‘ಸಲಿಂಗಕಾಮಿ’ಗಳನ್ನು ಕುರಿತು ಬರೆದ ಪುಸ್ತಕದ ಒಂದು ಸಮಾರಂಭದ ದೃಶ್ಯವಿದೆ. ಸಮಾರಂಭದಲ್ಲಿ ಮಗಳೂ ಇದ್ದಾಳೆ. ನಿರೂಪಕಿ ‘ಈ ಪುಸ್ತಕ ಬರೆಯಲು ಕಾರಣ ಏನು?’ ಎಂದು ಕೇಳಿದಾಗ, ಶಕುಂತಲಾ ‘ತನ್ನ ಮಾಜಿ ಪತಿ ಹೋಮೋಸೆಕ್ಷುಯಲ್ ಆಗಿದ್ದರು’ ಎಂದು ಸುಳ್ಳೇ ಹೇಳಿಕೆ ನೀಡಿದಂತೆ ಚಿತ್ರಿತವಾಗಿದೆ. ಇದು ಮಗಳು ತಮಗೆ ಹೇಳಿದ್ದೆಂದು ಅನು ಮೆನನ್ ಒಂದು ಕಡೆ ತಿಳಿಸಿದ್ದಾರೆ.
ಶಕುಂತಲಾ ದೇವಿ ಈ ಪುಸ್ತಕ ‘ದಿ ವಲ್ರ್ಡ್ ಆಫ್ ಹೋಮೊಸೆಕ್ಷುಯಲ್ಸ್’ ಬರೆದದ್ದು ಇಸವಿ 1977ರಷ್ಟು ಹಿಂದೆ. ಮುಂದಿನ 41 ವರ್ಷಗಳು ಬೇಕಾಯಿತು, ಭಾರತದಲ್ಲಿ ಕಾನೂನು ರೀತಿ ಸಲಿಂಗಕಾಮವನ್ನು ‘ಡಿಕ್ರಿಮಿನಲೈಸ್’ ಮಾಡಿ ಒಪ್ಪಿಕೊಳ್ಳಲು. ಆಕೆ ತನ್ನ ಕಾಲದಿಂದ ಎಷ್ಟು ಮುಂದಿದ್ದಳು ಎಂದು ಊಹಿಸಬಹುದು. ಈ ಪುಸ್ತಕದಲ್ಲಿ ಆಕೆ ಸಲಿಂಗಕಾಮಿಗಳನ್ನು ಕುರಿತು ತುಂಬು ಅಂತಃಕರಣದಿಂದ, ಅವರ ಹಕ್ಕುಗಳಿಗಾಗಿ ಒತ್ತಾಯಿಸಿ ಬರೆದಿದ್ದಾರೆ. ಆಕೆ ಈ ಪುಸ್ತಕ್ಕಾಗಿ ಸಾಕಷ್ಟು ಸಂದರ್ಶನಗಳನ್ನು ಮಾಡಿದ್ದಳು, ಅಧ್ಯಯನ ಶೋಧನೆಯಲ್ಲಿ ತೊಡಗಿದ್ದರು. ಸಲಿಂಗಕಾಮಿಗಳ ಜಗತ್ತನ್ನು ಹತ್ತಿರದಿಂದ ನೋಡಿದ ಒಳನೋಟಗಳು ಇಲ್ಲಿವೆ. ಸಲಿಂಗರ ಹಕ್ಕುಗಳಿಗಾಗಿ ಒತ್ತಾಯಿಸಿದ, ಅವರ ನೋವಿನ ಸ್ಥಿತಿಯತ್ತ, ಸಮಸ್ಯೆಗಳತ್ತ ಗಮನ ಸೆಳೆಯಲು ಪ್ರಯತ್ನಿಸಿದ ಪುಸ್ತಕ ಇದು. ಆಗಿನ್ನೂ ಅವರು ಪತಿಯಿಂದ ವಿಚ್ಛೇದಿತರಾಗಿರಲಿಲ್ಲ. ಮತ್ತು ಮಗಳಿಗೆ ಆಗ ಕೇವಲ 7 ವರ್ಷ.
ಚಿತ್ರದಲ್ಲಿ ತೋರಿಸಿರುವುದು 7 ವರ್ಷದ ಬಾಲೆಯನ್ನಲ್ಲ, ಬೆಳೆದ ಕಿಶೋರಿಯನ್ನು. ತಂದೆಯನ್ನು ಹೋಗಿ ಕೇಳುವ ವಯಸ್ಸಿನ ಹುಡುಗಿಯನ್ನು. ಈ ಒಂದು ದೃಶ್ಯವೇ ಚಿತ್ರ ಹೇಳುತ್ತಿರುವ ಕತೆಯೆಲ್ಲ ವಾಸ್ತವವಲ್ಲ ಎಂದು ತೋರಿಸುತ್ತದೆ. ನಿಜ, ಚಲನಚಿತ್ರದ ಆರಂಭದಲ್ಲಿಯೇ ‘ಈ ಚಿತ್ರ ನಿಜವಾದ ಘಟನೆಗಳಿಂದ ಸ್ಫೂರ್ತಿಗೊಂಡಿದೆ. ಆದರೆ ಇದು ವರದಿಚಿತ್ರವಾಗಲಿ ಯಾರದೇ ಜೀವನ ಚಿತ್ರವಾಗಲಿ ಅಹುದೆಂದು ಘೋಷಿಸುವುದಿಲ್ಲ. ಸೃಜನಾತ್ಮಕ ಸ್ವಾತಂತ್ರ್ಯವನ್ನು ತೆಗೆದುಕೊಂಡು ಚಿತ್ರಿಸಿ ಕೆಲವು ಸತ್ಯ ಘಟನೆಗಳ ನಾಟಕೀಯ ಆವೃತ್ತಿ ಮಾಡಲಾಗಿದೆ’ ಎಂಬೆಲ್ಲ ಕಾನೂನಿನ ಕತ್ತರಿಗೆ ಸಿಕ್ಕಿ ಕೊಳ್ಳದಂತಹ ಮಾಮೂಲಿ ಘೋಷಣೆಗಳಿವೆ. ಆದರೆ ಚಲನಚಿತ್ರದಂತಹ ಶಕ್ತ ಮಾಧ್ಯಮದಲ್ಲಿ, ವಿದ್ಯಾ ಬಾಲನ್ ಅವರಂತಹ ಪ್ರತಿಭಾವಂತ ಕಲಾವಿದೆಯ ನಟನೆಯಲ್ಲಿ ಇಲ್ಲಿ ಮೂಡಿಸಿರುವ ಪಾತ್ರವೇ ‘ಶಕುಂತಲಾ ದೇವಿ’ಯಾಗಿ ಪ್ರೇಕ್ಷಕರಲ್ಲಿ ಉಳಿದು ಬಇಡುವುದು ದೊಡ್ಡ ದುರಂತ.
ಈ ಪುಸ್ತಕದಲ್ಲಿ ಶಕುಂತಲಾ ದೇವಿ ‘ನಾನು ಸಲಿಂಗಿಯಲ್ಲ. ಆದರೆ ಮನುಷ್ಯಳು’ ಎನ್ನುತ್ತಾರೆ. ‘ನಮ್ಮ ಸಮಾಜದಲ್ಲಿ ಬಹಳಷ್ಟು ಅಪಾರ್ಥವಾಗಿರುವ ಅಲ್ಪ ಸಂಖ್ಯಾತ ಸಹ ಮಾನವರು, ಸಮಾಜ ಅರ್ಥ ಮಾಡಿಕೊಳ್ಳದ ಕಾರಣವಾಗಿ ತಮ್ಮ ನಿಜವಾದ ವ್ಯಕ್ತಿತ್ವವನ್ನು ಬಚ್ಚಿಟ್ಟು ಬದುಕುವ ದಾರುಣ ಸ್ಥಿತಿ ಇದೆ. ಇದು ಬದಲಾಗಬೇಕೆಂದು ಇಚ್ಛಿಸಿ ನಾನು ಬರೆಯುತ್ತಿದ್ದೇನೆ’ ಎನ್ನುತ್ತಾರೆ. ಬಹುಸಂಖ್ಯಾತರಂತೆ ಇಲ್ಲದ ಸಲಿಂಗಿಗಳನ್ನು ಕುರಿತು ಇರುವಂತಹ ಸಮಾಜದ ನಿಷ್ಕರುಣ ಧೋರಣೆಯನ್ನು ಅವರು ಬದಲಿಸಲು ಬಯಸಿದ್ದರು.
ಇಸವಿ 2001ರಲ್ಲಿ ವಿಸ್ಮಿತ ಗುಪ್ತಾ-ಸ್ಮಿತ್ ಅವರು ‘ಫಾರ್ ಸ್ಟ್ರೈಟ್ಸ್ ಓನ್ಲಿ’ ಎಂಬ ವರದಿ ಚಿತ್ರವನ್ನು ಅನೇಕ ಸಲಿಂಗಿ ಸ್ತ್ರೀ ಪುರುಷರನ್ನು ಸಂದರ್ಶಿಸಿ ಹೊರತಂದರು. ಅದರಲ್ಲಿ ಓರ್ವ ವ್ಯಕ್ತಿ ‘ಹಿಂದಿನ ವರ್ಷ ಶ್ರೀಲಂಕದಲ್ಲಿ ಒಂದು ಲೆಸ್ಬಿಯನ್ ಕಾನ್‍ಫರೆನ್ಸ್ ಏರ್ಪಡಿಸಲು ಅನುಮತಿ ಕೇಳಿದಾಗ, ಭಾಗವಹಿಸುವವರ ಮೇಲೆ ಅತ್ಯಾಚಾರದ ಉಗ್ರ ಬೆದರಿಕೆ ಹಾಕಿದ ಜನರಿದ್ದರು. ಇಂತಹ ಬೆದರಿಕೆಯ ವಿರುದ್ಧ ದೂರು ಸಲ್ಲಿಸಿದಾಗ, ‘ಸಲಿಂಗಿಯರ ಮೇಲೆ ಆಕ್ರಮಣ ನ್ಯಾಯಸಮ್ಮತವಾದದ್ದು’ ಎಂದು ತೀರ್ಪು ನೀಡಿ, ದೂರು ದಾಖಲಿಸಿದವರಿಗೇ ದಂಡ ವಿಧಿಸಿದರು’ ಎಂದು ಹೇಳಿದ್ದಾರೆ. ಕೇವಲ 20 ವರ್ಷಗಳ ಹಿಂದೆ ಕೂಡಾ ಸಲಿಂಗಿಗಳ ಬದುಕು ಸಮಾಜದಲ್ಲಿ ಎಷ್ಟು ಅಸುರಕ್ಷಿತವಿತ್ತು, ಹಿಂಸೆಯ ಬೆದರಿಕೆಯಲ್ಲಿ ಯಾವ ಸಲಿಂಗಿಯೂ ಬಹಿರಂಗವಾಗಿ ತನ್ನ ಗುರುತನ್ನು ಹೇಳಲು ಅಸಾಧ್ಯವಾಗಿತ್ತು, ಈ ಕಾರಣಕ್ಕೇ ಸಮಾಜಕ್ಕಾಗಿ ಮದುವೆಯಾಗುವ ಒತ್ತಡದ ಸ್ಥಿತಿ ಇತ್ತು ಎಂದು ಸ್ಪಷ್ಟವಾಗಿ ಈ ಚಿತ್ರ ತೋರಿಸುತ್ತದೆ. ಹೀಗಿರುವಾಗ 43 ವರ್ಷಗಳ ಹಿಂದೆ ಶಕುಂತಲಾ ಏಕಾಏಕಿ ಈ ವಿಷಯದ ಬಗ್ಗೆ ಹಣ ಮಾಡಲು ಪುಸ್ತಕ ಬರೆದರು, ಗಂಡನನ್ನು ಸಲಿಂಗಿಯೆಂದು ಸುಳ್ಳು ಸುಳ್ಳೇ ಘೋಷಿಸಿದರು ಎಂದರೆ, ನಂಬಿಕೆ ಬರುವುದಿಲ್ಲ. ಅಂದಿನ ಸಮಾಜದಲ್ಲಿ ಆಕೆ ಇಂತಹ ವಿಷಯವನ್ನು ಬರೆಯುವುದು ಎಷ್ಟು ಸವಾಲಿನದಾಗಿತ್ತು, ಅಪಾಯದ್ದು ಕೂಡಾ ಎಂದು ಗಮನಿಸಬೇಕು. ಈ ವರದಿ ಚಿತ್ರದಲ್ಲಿ ಶಕುಂತಲಾ ಅವರು ‘ತನ್ನ ಪತಿ ಸಲಿಂಗಕಾಮಿಯಾಗಿದ್ದರೆಂದೂ, ಅದು ತನ್ನ ಮತ್ತು ತನ್ನ ಮಗುವಿನ ಜೀವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು’ ಎನ್ನುತ್ತಾರೆ. ಇದೇ ಕಾರಣ ಆಕೆಗೆ ಸಲಿಂಗಿ ಸಮುದಾಯದ ಬಗ್ಗೆ ಆಸಕ್ತಿ ಮೂಡಿ ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಿ ಸ್ವಂತ ಅಧ್ಯಯನಕ್ಕೆ ಇಳಿದರೆಂದು ಹೇಳುತ್ತಾರೆ. ‘ಸಮಾಜ ಸಲಿಂಗರನ್ನು ಸ್ವೀಕರಿಸಿದ್ದರೆ, ಅವರಿಗೆ ತಮ್ಮ ಗುರುತನ್ನು ಬಚ್ಚಿಟ್ಟು ಮದುವೆಯಾಗುವ ಸಾಮಾಜಿಕ ಹಾಗೂ ಕೌಟುಂಬಿಕ ಒತ್ತಾಯಗಳು ಇರುತ್ತಿರಲಿಲ್ಲ. ಸಲಿಂಗರ ಮಾನವ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳದೆ ಅವರ ಯಾತನೆ ಕೊನೆಯಾಗದು. ಇದೇ ಈ ಪುಸ್ತಕ ಬರೆಯಲು ಕಾರಣವಾಯಿತು’ ಎನ್ನುತ್ತಾರೆ.
* * *
ಒಟ್ಟಿನಲ್ಲಿ ಈ ಚಿತ್ರ ಓರ್ವ ಅಪೂರ್ವ ಪ್ರತಿಭೆಯ, ಮಹತ್ವಾಕಾಂಕ್ಷೆಯ, ಸ್ವತಂತ್ರ ಚಿಂತನೆಯ ಮಹಿಳೆಯ ಅಸಾಧಾರಣ ಬದುಕಿನ ಪಯಣವಾಗಿ ಕಾಣುವುದಿಲ್ಲ. ಉದ್ಯೋಗ ಮತ್ತು ತಾಯ್ತನದ ನಡುವೆ ಸಮತೋಲನಕ್ಕೆ ಹೆಣಗುವ ಬಹಳಷ್ಟು ಹೆಣ್ಣುಮಕ್ಕಳ ಕಥನವಾಗುವುದಿಲ್ಲ. ಸ್ವಂತ ಕಾಲಿನ ಮೇಲೆ ನಿಂತ ಆತ್ಮನಿರ್ಭರ ಹೆಣ್ಣಿನ ಬದುಕಿನ ಸವಾಲುಗಳಾಗಿಯೂ ಕಾಣುವುದಿಲ್ಲ. ಓರ್ವ ಮೊಂಡು ಹಟಮಾರಿ ತಾಯಿಯಾಗಿ ಶಕುಂತಲಾ ದೇವಿ ಚಿತ್ರಿತವಾಗಿದ್ದಾಳೆ. ಇಲ್ಲೊಂದು ದೃಶ್ಯವಿದೆ, ಶಕುಂತಲಾ ದೇವಿ ಭಾವೀ ಅಳಿಯ ಅಭಯ್‍ನನ್ನು ಶಾಪಿಂಗ್‍ಗೆ ಕರೆ ತಂದಿದ್ದಾಳೆ. ಅವರ ನಡುವಿನ ಸಂಭಾಷಣೆಯನ್ನು ಗಮನಿಸಿ:
ಆತನಿಗೆ ದುಬಾರಿ ಉಡುಪುಗಳನ್ನು ಕೊಳ್ಳಲು ಒತ್ತಾಯಿಸುತ್ತಾ ಶಕುಂತಲಾ,
‘ಹೆದರಬೇಡ, ನನ್ನ ಬಳಿ ತುಂಬಾ ಹಣವಿದೆ’ ಎನ್ನುತ್ತಾಳೆ
‘ಆಂಟಿ ನಾನು ಮಧ್ಯಮ ವರ್ಗದವನು’ ಎನ್ನುತ್ತಾನೆ ಅಭಯ್.
‘ವಿವಾಹವಾಗಿ ಲಂಡನ್‍ಗೆ ನೀನು ಶಿಫ್ಟ್ ಆದಾಗ ಮಿಡಲ್ ಕ್ಲಾಸ್ ಆಗಿ ಉಳಿಯುವುದಿಲ್ಲ. ನಿನ್ನ ಉದ್ಯಮವನ್ನು ನಾನು ಬೇರೊಂದೇ ಎತ್ತರಕ್ಕೆ ಕೊಂಡೊಯ್ಯುವೆ’ ಎಂದು ಕೊಚ್ಚಿಕೊಳ್ಳುವಂತೆ, ಯಾರೇ ಸ್ವಾಭಿಮಾನಿ ವ್ಯಕ್ತಿಗೆ ಮುಜುಗರವಾಗುವಂತೆÉ ಶಕುಂತಲಾ ಹೇಳುತ್ತಾಳೆ.
‘ನಾನು ಲಂಡನ್‍ಗೆ ಶಿಫ್ಟ್ ಆಗುತ್ತಿಲ್ಲ’ ಅಭಯ್ ಹೇಳುತ್ತಾನೆ.
‘ಅರೆ ದೂರದಂತರದ ಮದುವೆ ಕಷ್ಟ’ ಎನ್ನುತ್ತಾಳೆ ಶಕುಂತಲಾ! ಮಗಳು ತನ್ನೊಡನೆ ಮದುವೆಯಾದ ಮೇಲೂ ಇರುತ್ತಾಳೆ ಎಂಬುದನ್ನು ಗಟ್ಟಿಯಾಗಿ ನಂಬಿದ ಹೆಡ್ಡಳಾಗಿ ಪ್ರೇಕ್ಷಕರಿಗೆ ಕಂಡರೆ ಅಚ್ಚರಿಯಲ್ಲ.
‘ಅನು ಬೆಂಗಳೂರಿಗೆ ಬರುತ್ತಾಳೆ ಆಂಟಿ’ ಅಭಯ್ ಹೇಳುತ್ತಾನೆ.
‘ಅನುವಿನ ಜೀವನ ಲಂಡನ್ನಿನಲ್ಲಿ ನನ್ನೊಡನೆ ಇದೆ’ ಎಂದು ಮೊಂಡು ಹಟದಲ್ಲಿ, ಅಹಂಕಾರದಲ್ಲಿ ಗಡುಸಾಗಿ ಹೇಳುತ್ತಾಳೆ.
‘ಮದುವೆಯಾದ ನಂತರ ನನ್ನೊಡನೆ ಅವಳ ಜೀವನ’ ಎಂದು ಆರ್ತನಾಗಿ ಹೇಳುವ ಅಭಯ್‍ಗೆ,
‘ನಾನು ಅನು ಇಲ್ಲದೆ ಬದುಕಲಾರೆ’ ಎಂದು ಒಂದಿಷ್ಟೂ ಸೂಕ್ಷ್ಮತೆ ಇಲ್ಲದ ಸ್ವಾರ್ಥಿ ತಾಯಿಯಂತೆ ಮೊಂಡು ಹಟದಲ್ಲಿ ಹೇಳುತ್ತಾಳೆ.
‘ಇದು ಸರ್ವ ಸಾಧಾರಣವಾದದ್ದು, ಇದು ನಾರ್ಮಲ್ ಆಂಟಿ. ಮಗಳನ್ನು ನೀವು ಈ ರೀತಿ ಜೈಲಲ್ಲಿ ಇಡಲಾರಿರಿ’ ಎಂದು ಅಭಯ್ ಹೇಳಿದಾಗ, ಶಕುಂತಲಾ ರೇಗಿ ಆಸ್ಫೋಟಿಸುತ್ತಾಳೆ.
‘ಇದು ನಾರ್ಮಲ್ ಏನು? ಹುಡುಗನ ಅಮ್ಮ, ಸೊಸೆ ತನ್ನೊಡನೆ ಬಂದು ಬದುಕಬೇಕು ಎಂದು ಬಯಸುವುದು ನಾರ್ಮಲ್. ಹುಡುಗಿಯ ತಾಯಿ, ಅಳಿಯ ತನ್ನೊಡನೆ ಬಂದು ಬದುಕಬೇಕು ಎಂಬುದು ಮಗಳನ್ನು ಜೈಲಿನಲ್ಲಿ ಹಾಕಿದಂತೆಯೇ?’ ಗುಡುಗುತ್ತಾಳೆ. ಅಭಯ್ ರೋಸಿ ಹೋಗಿ,
‘ನಾವು ನಿಮ್ಮ ಜೊತೆಯಲ್ಲೂ ಇರುವುದಿಲ್ಲ, ನನ್ನ ತಾಯ್ತಂದೆಯರ ಜೊತೆಯಲ್ಲೂ ಇರುವುದಿಲ್ಲ, ನಾವು ನಮ್ಮದೇ ಮನೆಯಲ್ಲಿ ಇರುತ್ತೇವೆ’ ಎನ್ನುತ್ತಾನೆ.
‘ಅನು ನನ್ನನ್ನು ಬಿಟ್ಟು ಬೆಂಗಳೂರಿಗೆ ಬರುವುದಿಲ್ಲ’ ಎಂದು ಶಕುಂತಲಾ ಖಡಾಖಂಡಿತವಾಗಿ ಘೋಷಿಸುತ್ತಾಳೆ. ಮಗಳ ತನ್ನತ್ತಲ ಅಗಾಧ ಅಸಮಾಧಾನವನ್ನು ಅರಿಯದಷ್ಟು ಶಕುಂತಲಾ ದಡ್ಡಳಿದ್ದಳೆ, ಇಂತಹ ಹಟಮಾರಿತನವನ್ನು ಸಾಧಿಸಿದ್ದಳೆ ಪ್ರಶ್ನೆ ಮೂಡುತ್ತದೆ.
‘ಅವಳನ್ನು ಕೇಳಿ, ಅವಳಿಗೇನು ಬೇಕು? ಅನು ನನ್ನನ್ನು ಪ್ರೀತಿಸುತ್ತಾಳೆ. ನಾನು ಅವಳನ್ನು ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ’ ಅಭಯ್ ಹೇಳುತ್ತಾನೆ.
‘ಅವಳನ್ನು ಎಲ್ಲಕ್ಕಿಂತಲೂ ಹೆಚ್ಚು ಪ್ರೀತಿಸುವೆಯೇನು? ಅವಳಿಗಾಗಿ ಏನು ಮಾಡಿರುವೆ? ಇದು ನಿನ್ನಲ್ಲಿ ಇದೆಯೇನು?’ ಶಕುಂತಲಾ ಸೆರಗು ಸರಿಸಿ ತನ್ನ ಸಿಸೇರಿಯನ್ ಹೊಲಿಗೆಯನ್ನು ಅಭಯ್‍ಗೆ ತೋರಿಸುವ ದೃಶ್ಯ ಶಕುಂತಲಾ ಅವರ ವ್ಯಕ್ತಿತ್ವವನ್ನು ಅತ್ಯಂತ ಕ್ರೂಡ್ ಆಗಿ, ಒರಟಾಗಿ ಬಿತ್ತರಿಸುತ್ತದೆ.
ಮೇಲಿನ ಶಕುಂತಲಾ ಅವರ ಮಾತುಗಳು ಸ್ತ್ರೀವಾದಿ ದೃಷ್ಟಿಕೋನವಾಗಿ ಕಾಣುವುದಿಲ್ಲ. ಮಗಳ ಇಂಗಿತವನ್ನು ಅರಿಯದ, ಮಗಳನ್ನು ತನ್ನ ಸ್ವಾರ್ಥಕ್ಕೆ ಹಿಡಿದಿಟ್ಟುಕೊಂಡ ಸೂಕ್ಷ್ಮತೆಯಿಲ್ಲದ ಹಟದ ತಾಯಿಯ ಚಿತ್ರವಾಗಿದೆ.
ಚಿತ್ರ ‘21 ಏಪ್ರಿಲ್ 2013ರಂದು ಶಕುಂತಲಾ ದೇವಿ ತೀರಿಕೊಂಡರು. ಅವರ ಮಗಳು ಅನುಪಮಾ ಆಕೆಯ ಬಗಲಲ್ಲಿ ಇದ್ದರು’ ಎಂದು ಹೇಳುತ್ತದೆ. ಲಂಡನ್‍ನಲ್ಲಿ ವಾಸವಾಗಿರುವ ಮಗಳು ಬಗಲಲ್ಲಿ ಇದ್ದಳೋ ಇಲ್ಲವೋ ತಿಳಿಯದು. ಆದರೆ ಶಕುಂತಲಾ ದೇವಿ ಸತ್ತ ಸುದ್ದಿಯನ್ನು ಸುದ್ದಿ ಪತ್ರಿಕೆಗಳಿಗೆ ತಿಳಿಸಿದವರು ‘ಶಕುಂತಲಾ ದೇವಿ ಎಜುಕೇಶನಲ್ ಪಬ್ಲಿಕ್ ಟ್ರಸ್ಟ್’ನವರು. ಆಕೆಯ ಸಾವು ಸುದ್ದಿಯಾಗುವುದಕ್ಕಿಂತಾ ಹೆಚ್ಚಾಗಿ, ಸಾವಿನ ನಂತರ ಮಗಳು ತಾಯಿಯ ಮರಣಶಾಸನವನ್ನು (ವಿಲ್) ಕುರಿತು ಕೋರ್ಟಿನ ಮೆಟ್ಟಿಲು ಹತ್ತಿ, ಆಕೆಯ ಏಕೈಕ ಸಂತಾನವಾದ ತನಗೇ ಆಕೆಯ ಎಲ್ಲ ಆಸ್ತಿ ಬರಬೇಕೆಂದು ವ್ಯಾಜ್ಯ ಹೂಡಿದ್ದು, ಸುದ್ದಿಯಾಗಿತ್ತು. ಬಾಲ್ಯದಿಂದಲೇ ಆರಂಭಿಸಿ, ಬದುಕಿಡೀ ದುಡಿದ ಶಕುಂತಲಾ ದೇವಿ ಹಲವು ದೇಶಗಳಲ್ಲಿ ಅಪಾರವಾದ ಚಿರ ಮತ್ತು ಚರ ಆಸ್ತಿಯನ್ನು ಮಾಡಿದ್ದರು. ಕೋಟಿ ಕೋಟಿಗಳ ಬೆಲೆಯ ಆಸ್ತಿಗಳವು. ಇಸವಿ 2012ರಲ್ಲಿ ಅವರು ವಿಲ್ ಬರೆದು ಚಾಮರಾಜ ಪೇಟೆಯ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಅದನ್ನು ರಿಜಿಸ್ಟರ್ ಕೂಡಾ ಮಾಡಿದ್ದರು. ಆ ವಿಲ್‍ನಲ್ಲಿ ತಮ್ಮ ಈ ಎಲ್ಲ ಆಸ್ತಿಯನ್ನು ತಮ್ಮ ಟ್ರಸ್ಟ್‍ಗೆ ಬರೆದಿದ್ದರು. ಆಕೆಯ ಟ್ರಸ್ಟ್ ಬಡ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಉದ್ದೇಶದ್ದಾಗಿತ್ತು.
ದುರಂತವೆಂದರೆ, ಪ್ರಸಿದ್ಧರಿಗೆ, ಪ್ರಧಾನಿಗಳಿಗೆ ಜ್ಯೋತಿಷ್ಯ ನೋಡಿ ಭವಿಷ್ಯ ಹೇಳುತ್ತಿದ್ದ ಶಕುಂತಲಾ ದೇವಿಯವರಿಗೆ ಬಹುಶ: ತಾವು ಚುನಾವಣೆಯಲ್ಲಿ ಚಿಂತಾಜನಕವಾಗಿ ಸೋಲುತ್ತೇನೆ ಎಂದು ಗೊತ್ತಿರಲಿಲ್ಲ. ಹಾಗೆಯೇ ತನ್ನ ಮರಣದ ಏಳು ವರ್ಷದ ನಂತರ ತಮ್ಮನ್ನು ಕುರಿತು ಒಂದು ವರ್ಣರಂಜಿತ ಬಯೋಪಿಕ್ ಹೊರಬರುತ್ತದೆ ಎಂದೂ ಬಹುಶಃ ತಿಳಿದಿರಲಿಲ್ಲ. ತಿಳಿದಿದ್ದರೆ, ತಮ್ಮ ಆತ್ಮಚರಿತ್ರೆಯನ್ನು ತಮ್ಮ ದೃಷ್ಟಿಯಿಂದ ಒಂದಿಷ್ಟಾದರೂ ಬರೆದಿಟ್ಟು ಹೋಗುತ್ತಿದ್ದರು.
ಅಂದಹಾಗೆ ಅನೇಕ ಬಾರಿ ನಾವು ಕಾಣುತ್ತೇವೆ, ಉದ್ಯೋಗಸ್ಥ ತಾಯಿಯನ್ನು ದ್ವೇಷಿಸುವ ಬಹಳಷ್ಟು ಮಕ್ಕಳು ಆಕೆಯ ಹಣ ಮತ್ತು ಆಸ್ತಿಪಾಸ್ತಿಯನ್ನೇನೂ ದ್ವೇಷಿಸುವುದಿಲ್ಲ
ಈ ಚಲನಚಿತ್ರ ನೋಡಿದಾಗ ಏಕೋ, ವಾಟ್ಸನ್ ತನ್ನ ‘ಡಬಲ್ ಹೆಲಿಕ್ಸ್’ ಪುಸ್ತಕದಲ್ಲಿ ಮೂಡಿಸಿದ ಮಹಿಳಾ ವಿಜ್ಞಾನಿ ರೋಸಲಿಂಡ್ ಫ್ರಾಂಕ್ಲಿನ್‍ಳ ಚಿತ್ರಣ ನೆನಪಾಯಿತು. ಅದಾಗಲೆ ಮೃತಳಾಗಿದ್ದ ರೋಸಲಿಂಡಳನ್ನು ಹಟಮಾರಿ ಹೆಣ್ಣಾಗಿ, ಕೆಟ್ಟ ರೀತಿಯಲ್ಲಿ ಚಿತ್ರಿಸಿದ್ದ. ಆಕೆಯ ವೇಷಭೂಷಣವನ್ನು ಟೀಕಿಸುತ್ತಾ ‘ಹೆಣ್ತನವೊಂದೂ ಕಾಣದ ಸಿಡುಕಿನ ಸ್ತ್ರೀವಾದಿಯಾಗಿ’ ಬಣ್ಣಿಸಿದ್ದ. ಅದರಲ್ಲಿಯೂ ಆತನೆಲ್ಲ ನೊಬೆಲ್ ಪ್ರಶಸ್ತಿ ಪಡೆದ ಸಂಶೋಧನೆ ‘ರೋಸಲಿಂಡಳು ಕಟು ಪರಿಶ್ರಮದಲ್ಲಿ ವಿಕಾಸಗೊಳಿಸಿ ತೆಗೆದ ಕ್ಷ-ಕಿರಣ ವಿವರ್ತನಾ ಚಿತ್ರಗಳ ಮೇಲೆ ಮತ್ತು ದತ್ತಾಂಶಗಳ ಮೇಲೆ ಆಧರಿಸಿತ್ತು, ಹಾಗೂ ಅವೆಲ್ಲವನ್ನೂ ಆಕೆಗೆ ಗೊತ್ತಿಲ್ಲದಂತೆ ಆತ ಪಡೆದಿದ್ದ’ ಎಂಬುದು ಕೂಡಾ ವಾಟ್ಸನ್‍ನಲ್ಲಿ ರೋಸಲಿಂಡ್‍ಳ ಬಗ್ಗೆ ಗೌರವ ಮೂಡಿಸಿರಲಿಲ್ಲ. ಮುಂದೊಮ್ಮೆ ರೋಸಲಿಂಡಳ ಜೀವನ ಚರಿತ್ರೆಯನ್ನು ಅಗಾಧ ಶೋಧನೆಯ ನಂತರ ತೆರೆದಿಟ್ಟ ಆನ್ ಸೈರ್ ‘ಆತನ ಈ ಪುಸ್ತಕದ ತುಂಬಾ ಅತಿ ಸೂಕ್ಷ್ಮ ಸುಳ್ಳುಗಳು ಒಂದಕ್ಕೊಂದು ಹೆಣೆದುಕೊಂಡು ನಿರ್ದಿಷ್ಟ ದಿಕ್ಕಿನತ್ತ ಸಾಗುತ್ತವೆ. ಅವೆಲ್ಲವೂ ನಿಜವಲ್ಲದ, ವಿಜ್ಞಾನಿ ರೋಸಲಿಂಡ್‍ಗೆ ಯಾವ ರೀತಿಯೂ ಹೊಂದದ ಹಟಮಾರಿ ‘ರೋಸಿ’ಯ ಕಾಲ್ಪನಿಕ ಪಾತ್ರವನ್ನು ಸೃಷ್ಟಿಸುತ್ತವೆ’ ಎಂದು ಹೇಳಿದಳು.
ದಿಟವಾದ ಶಕುಂತಲಾ ದೇವಿ ಅವರ ಜೀವನ ಚಿತ್ರಕ್ಕೆ ನಾವಿನ್ನೂ ಕಾಯಬೇಕಿದೆ.
ನೇಮಿಚಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ತುಂಬಾ ಒಳನೋಟಗಳನ್ನು ನೀಡುವ ಬರೆಹ… ನೇಮಿಚಂದ್ರ ಅವರಿಗೆ ವಂದನೆಗಳು….