ವ್ಯಭಿಚಾರ ಅಪರಾಧವೇ ಅಥವಾ ಕೇವಲ ಅನೈತಿಕವೆ?- ಹೇಮಲತಾ ಮಹಿಷಿ

ಸಮಾಜ ಬದಲಾದಂತೆ ಈವರೆಗೆ ಒಪ್ಪಿತವಾಗಿದ್ದ ಅನೇಕ ವಿಷಯಗಳು ವಿವಾದಕ್ಕೊಳಗಾಗುತ್ತವೆ, ಪ್ರಶ್ನಾರ್ಹವಾಗುತ್ತವೆ. ಇಂದು ಸರ್ವೋಚ್ಚ ನ್ಯಾಯಾಲಯ ಅಂತಹ ಹಲವಾರು ವಿವಾದಗಳನ್ನು ಬಗೆಹರಿಸಬೇಕಿದೆ. ಅವುಗಳಲ್ಲಿ ಒಂದು ವಿವಾದವೆಂದರೆ, ವ್ಯಭಿಚಾರ ಅಪರಾಧವೇ ಅಥವಾ ಕೇವಲ ಅನೈತಿಕವೇ? ಅಪರಾಧವೆಂದಾದರೆ ಪುರುಷನು ಮಾತ್ರ ಅಪರಾಧಿಯೇ ಅಥವಾ ಮಹಿಳೆಯೂ ಅದರಲ್ಲಿ ಭಾಗಿಯಾಗುತ್ತಾಳೆಯೇ?

೧೮೬೦ರ ಬ್ರಿಟೀಶರ ಕಾಲದ ಭಾರತ ದಂಡ ಸಂಹಿತೆಯ ೪೯೭ನೇ ಕಲಂ ’ವ್ಯಭಿಚಾರ’ವನ್ನು ೫ ವರ್ಷಗಳವರೆಗೆ ಸೆರೆಮನೆ ವಾಸ/ ದಂಡ ಅಥವಾ ಎರಡನ್ನೂ ವಿಧಿಸಬಹುದಾದ ಒಂದು ಅಪರಾಧ ಎಂಬುದಾಗಿ ಘೋಷಿಸಿದೆ. ಆದರೆ, ಇದರಲ್ಲಿ ಪುರುಷನು ಮಾತ್ರ ಅಪರಾಧಿಯಾಗಿರುತ್ತಾನೆ. ಒಬ್ಬ ಪರಪುರುಷ, ಒಬ್ಬ ಮಹಿಳೆ ಇನ್ನೊಬ್ಬನ ಹೆಂಡತಿ ಎಂದು ತಿಳಿದಿದ್ದೂ, ಗಂಡನ ಒಪ್ಪಿಗೆ/ ಪರೋಕ್ಷ ಸಮ್ಮತಿ ಇಲ್ಲದೆ, ಆ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ವ್ಯಭಿಚಾರವೆನಿಸುತ್ತದೆ.  ಆದರೆ ಈ ಲೈಂಗಿಕ ಕ್ರಿಯೆ ‘ಅತ್ಯಾಚಾರ’ವಾಗಿರಬಾರದು. ಎಂದರೆ, ಅದಕ್ಕೆ ಆ ಮಹಿಳೆಯ ಒಪ್ಪಿಗೆ ಇರಬೇಕು. ಆದರೂ ವ್ಯಭಿಚಾರ ಅಪರಾಧದಲ್ಲಿ ಭಾಗಿಯಾದ ಮಹಿಳೆ ’ವ್ಯಭಿಚಾರ’ ಅಪರಾಧದಲ್ಲಿ ಅಪರಾಧಿಯೂ ಆಗುವುದಿಲ್ಲ; ದುಶ್ಪ್ರೇರಕಳೂ (Abettor) ಆಗುವುದಿಲ್ಲ. ಇದು ೪೯೭ನೇ ಕಲಂನ ಸಾರಾಂಶ.

     ಈ ಕಲಂ ಪುರುಷವಿರೋಧಿಯಾಗಿದೆ ಹಾಗೂ ಭಾರತ ಸಂವಿಧಾನದ ೧೪ನೇ ಅನುಚ್ಛೇದ (ಸಮಾನತೆಯ ತತ್ವ)ವನ್ನು ಉಲ್ಲಂಘಿಸುತ್ತದೆ ಎಂದು ಹಲವರು ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಈ ಪ್ರಕರಣಗಳ ವಿಚಾರಣೆ ಆರಂಭಿಸಿದ ಸರ್ವೋಚ್ಚ ನ್ಯಾಯಾಲಯ ಮಹಿಳೆಯರನ್ನು ಅಪರಾಧಿಗಳನ್ನಾಗಿ ಮಾಡುವುದಿಲ್ಲ, ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ, ಈ ಕಲಂ ಸಂವಿಧಾನದ ೧೪ನೇ ಕಲಂನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಪರಿಶೀಲಿಸುವುದಾಗಿ ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯವೇನಾದರೂ ಈ ಕಲಂ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂಬ ತೀರ್ಮಾನಕ್ಕೆ ಬಂದರೆ ಇಡೀ ೪೯೭ನೇ ಕಲಂನ್ನು ಸಂವಿಧಾನಬಾಹಿರವೆಂದು ಹೊಡೆದುಹಾಕುತ್ತದೆ, ಎಂದರೆ ಪುರುಷನು ಅಪರಾಧದಿಂದ ಮುಕ್ತನಾಗುತ್ತಾನೆ.

   ಇದರಲ್ಲಿ ಪ್ರತಿವಾದಿಯಾದ ಭಾರತ ಸರ್ಕಾರ ಈಗಾಗಲೇ ಈ ಕಲಂ ಕಾನೂನಿನಲ್ಲಿ ಇರಬೇಕು, ’ವ್ಯಭಿಚಾರ’ ಅಪರಾಧವಾಗಿ ಉಳಿಯಬೇಕು, ಇಲ್ಲವಾದರೆ ಸಮಾಜದಲ್ಲಿ ಅನೈತಿಕತೆಗೆ ಬೆಂಬಲ ಸಿಕ್ಕಂತಾಗುತ್ತದೆ, ಹಾಗೂ ವಿವಾಹದ ಪಾವಿತ್ರ್ಯತೆಗೆ ಧಕ್ಕೆಯುಂಟಾಗುತ್ತದೆ ಎಂದು ತನ್ನ ತಕರಾರು ಸಲ್ಲಿಸಿದೆ.

   ಇಲ್ಲಿ ಮಹಿಳೆಯರ ಪರವಾದ ತಕರಾರು/ ವಾದ ಬೇರೆ ರೀತಿಯದಾಗಿದೆ. ಈ ಕಲಂನಲ್ಲಿ ಮಹಿಳೆ ಅಪರಾಧಿಯಾಗುವುದಿಲ್ಲವಾದರೂ ಅದರ ಹಿಂದಿರುವ ತರ್ಕ, ವಿಚಾರ ಮಹಿಳಾ ವಿರೋಧಿಯಾಗಿದೆ. ಈ ಕಲಂ ಪ್ರಕಾರ ಮಹಿಳೆಗೆ ಸ್ವತಂತ್ರ ಅಸ್ತಿತ್ವವೇ ಇಲ್ಲ. ಮತ್ತೊಬ್ಬ ಪುರುಷ ತನ್ನ ಹೆಂಡತಿಯೊಂದಿಗೆ ತನ್ನ ಒಪ್ಪಿಗೆ ಇಲ್ಲದೇ ಲೈಂಗಿಕ ಸಂಬಂಧ ಮಾಡಿದ್ದಾನೆಂಬುದು ಅಪರಾಧದ ಮೂಲವಾದರೆ, ಅವನ ಒಪ್ಪಿಗೆ/ ಪರೋಕ್ಷ ಬೆಂಬಲದೊಂದಿಗೆ ಅದೇ ಕಾರ್ಯ ನಡೆದರೆ ಅದು ಅಪರಾಧವೆನಿಸುವುದಿಲ್ಲ. ಎಂದರೆ ಅವಳ ಇಷ-ಅನಿಷ್ಟಗಳಿಗೆ ಬೆಲೆಯೇ ಇಲ್ಲ, ಅವಳು ಕೇವಲ ಅವಳ ಗಂಡನ ವಶದಲ್ಲಿರುವ ಒಂದು ವಸ್ತು ಅಥವಾ ಪ್ರಾಣಿ. ಹಾಗಾಗಿ, ಈ ಕಲಂ ಸಂವಿಧಾನದ ೧೪(ಸಮಾನತೆ) ಮತ್ತು ೨೧(ಗೌರವವಾಗಿ ಬದುಕುವ ಹಕ್ಕು)ಕ್ಕೆ ವಿರುದ್ಧವಾಗಿದೆ ಎಂಬ ಅವರ ವಾದವನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪಿಕೊಂಡಿದೆ.

   ಇಲ್ಲಿರುವ ಇನ್ನೊಂದು ಅಂಶವನ್ನು ಯಾರೂ ಗಮನಿಸಿಲ್ಲ. ಈ ಕಲಂ ಪ್ರಕಾರ ಒಬ್ಬ ವಿವಾಹಿತ ಪುರುಷ ಇನ್ನೊಬ್ಬ ಮಹಿಳೆಯೊಂದಿಗೆ ವೈವಾಹಿಕ ಸಂಬಂಧದಾಚೆಗೆ ಲೈಂಗಿಕ ಸಂಬಂಧ ಮಾಡಿದರೂ ಅದು ಅವನ ಹೆಂಡತಿಯ ವಿಷಯದಲ್ಲಿ “ವ್ಯಬಿಚಾರ”ವೆನಿಸುವುದಿಲ್ಲ, ಅಪಚಾರವಾಗುವುದಿಲ್ಲ. ಅವನ ಹೆಂಡತಿಗೆ ಅವನ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವುದಕ್ಕೂ ಅವಕಾಶವಿಲ್ಲ. ಎಂದರೆ, ಪುರುಷನಿಗೆ ಮಾತ್ರ ತನ್ನ ಹೆಂಡತಿಯ ಸ್ನೇಹಿತನ ವಿರುದ್ಧ ಕ್ರಮಕೈಗೊಳ್ಳಲು ಅವಕಾಶವಿದೆಯೇ ವಿನಃ ಮಹಿಳೆಗೆ ಅದೇ ಕೆಲಸ ಮಾಡಿದ ತನ್ನ ಗಂಡನ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿಲ್ಲ. ಇದೆಂತಹ ಕಾನೂನು, ಇದೆಂತಹ ಸಮಾನತೆ?

   ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ’ವ್ಯಭಿಚಾರ’ವನ್ನು ಅಪರಾಧ ಮುಕ್ತವನ್ನಾಗಿ ಮಾಡುವುದಾಗಿ ಸೂಚನೆ ನೀಡಿದೆ. ವ್ಯಭಿಚಾರ ಒಂದು ಶಿಕ್ಷಾರ್ಹ ಅಪರಾಧವಾಗುವುದಿಲ್ಲವಾದರೂ ಅದಕ್ಕೆ ಸಿವಿಲ್ (ನಾಗರೀಕ) ಪರಿಣಾಮ ಇದ್ದೇ ಇರುತ್ತದೆ ಎಂದು ಹೇಳಿದೆ. ಸಿವಿಲ್ ಪರಿಣಾಮವೆಂದರೆ, ಗಂಡನಾಗಲಿ ಹೆಂಡತಿಯಾಗಲೀ ತನ್ನ ಸಂಗಾತಿಯ ವ್ಯಬಿಚಾರದ ಕಾರಣಕ್ಕಾಗಿ ವಿವಾಹ ವಿಚ್ಚೇದನ / ಪ್ರತ್ಯೇಕವಾಸದ ಆದೇಶವನ್ನು ನ್ಯಾಯಾಲಯದಿಂದ ಪಡೆಯಬಹುದು. ಹೆಂಡತಿಗೆ ಯಾವುದೇ ವರಮಾನವಿಲ್ಲದಿದ್ದಲ್ಲಿ ಜೀವನಾಂಶವನ್ನು ಕೇಳಬಹುದು, ಅವಳಿಗೆ ವರಮಾನವಿದ್ದವರೂ ತನ್ನೊಂದಿಗಿರುವ ಮಕ್ಕಳಿಗೆ ಜೀವನಾಂಶ ಕೇಳಬಹುದು.

   ಈ ಸಿವಿಲ್ ಪರಿಣಾಮಗಳು ಮುಖ್ಯವಾಗಿ ಮಹಿಳೆಗೆ ನ್ಯಾಯವನ್ನು ನೀಡುತ್ತದೆಯೆ? ಮೊದಲನೆಯದಾಗಿ, ವ್ಯಭಿಚಾರವನ್ನು ಸಾಬೀತುಪಡಿಸುವುದೇ ಕಷ್ಟ. ಎರಡನೆಯದಾಗಿ, ಹೆಂಡತಿಗೆ ಈ ಕಾರಣಕ್ಕಾಗಿ ವಿವಾಹ ವಿಚ್ಚೇದನೆಗೆ ಅರ್ಜಿ ಹಾಕಿದರೆ ಗಂಡನಿಗೆ ಪರಮಾನಂದವಾಗುತ್ತದೆ, ಹೆಂಡತಿ-ಮಕ್ಕಳನ್ನು ಬಿಟ್ಟು ತಾನು ಬಯಸಿದವಳೊಂದಿಗೆ ಇರಲು ಅನುಕೂಲವಾಗುತ್ತದೆ. ಹೆಂಡತಿಗೆ ವರಮಾನವಿದ್ದರೆ ಅವಳಿಗೆ ಜೀವನಾಂಶವೂ ಸಿಗುವುದಿಲ್ಲ. ವ್ಯಭಿಚಾರ ಅಪರಾಧವಲ್ಲವೆಂದಾದರೆ ಕುಟುಂಬ ಜೀವನ, ವೈವಾಹಿಕ ಸಂಬಂಧ ಅಸುರಕ್ಷತೆಗೆ ಒಳಗಾಗುತ್ತದೆಯೇ? ನಮ್ಮ ಸಮಾಜ ಇದಕ್ಕೆ ಸಿದ್ಧವಿದೆಯೇ? ವ್ಯಭಿಚಾರಿಯೂ ಆಗಿದ್ದು ವಿಚ್ಛೇದನವನ್ನೂ ವಿರೋಧಿಸಿದರೆ ಏನು ಮಾಡಬೇಕು? ನಾಗರೀಕ ರೀತಿಯಲ್ಲಿ ಗಂಡ-ಹೆಂಡತಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಬುದ್ಧರಾಗಿರಬೇಕಾಗುತ್ತದೆ, ಇಬ್ಬರಿಗೂ ಸಮಾನ ಪರಿಣಾಮ ಎದುರಿಸಬೇಕಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಇದರಿಂದ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಕಾಣಿಸುತ್ತದೆ.

ಕೊನೆಯದಾಗಿ ಟ್ರಿಪಲ್ ತಲ್ಲಾಕ್ ಕೊಡುವ ಗಂಡನಿಗೆ ಶಿಕ್ಷಿಸುವ ಕಾನೂನು ಮಾಡಬೇಕೆಂದಿರುವಾಗ “ವ್ಯಭಿಚಾರ” ಶಿಕ್ಷೆಯಿಂದ ಪಾರಾಗುತ್ತದೆ!

ಹೇಮಲತಾ ಮಹಿಷಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ವ್ಯಭಿಚಾರ ಅಪರಾಧವೇ ಅಥವಾ ಕೇವಲ ಅನೈತಿಕವೆ?- ಹೇಮಲತಾ ಮಹಿಷಿ

 • August 12, 2018 at 3:22 pm
  Permalink

  Nice article Hemalatha Mahishi Madam.
  Congratulations.
  Questions raised by you are worth pondering.
  These issues have to be addressed.
  Susheela

  Reply

Leave a Reply

Your email address will not be published. Required fields are marked *