ವ್ಯಕ್ತಿಚಿತ್ರ/ ಸಕಾರಾತ್ಮಕ ಸಂಕೇತ ಸುಕ್ರಜ್ಜಿ – ಅಕ್ಷತಾ ಕೃಷ್ಣಮೂರ್ತಿ
ಹಾಲಕ್ಕಿಗಳ ಕಡುಬಡತನದ ಕುಟುಂಬದಲ್ಲಿ ಜನಿಸಿದ ಸುಕ್ರಜ್ಜಿ ಶಾಲೆಯ ಮೆಟ್ಟಿಲು ತುಳಿದವರಲ್ಲ. ಬದುಕಿನ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ, ಸಹನೆ, ಅಕ್ಕರೆ, ಪ್ರೀತಿ, ವಿಶ್ವಾಸ, ಮುಗ್ಧತೆಯ ಪ್ರತೀಕದಂತೆ ಬದುಕಿ ದ್ದಾರೆ. ಎತ್ತರವಿದ್ದರೂ ಮನಸ್ಸಿಗೆ ಹತ್ತಿರವಾಗುವುದು ಹೇಗೆ ಎಂಬುದನ್ನು ಇವರಿಂದ ತಿಳಿಯಬೇಕು. ಸೋಲೆಂಬುದು, ಕಷ್ಟವೆಂಬುದು ಅಲ್ಪವಿರಾಮ ಎಂದು ತೋರಿಸಿ ಸುಕ್ರಜ್ಜಿ ನಮ್ಮ ಕಣ್ಮುಂದೆ ಇಂದು ನಗುತ್ತಿದ್ದಾರೆ.
ಸುಕ್ರಿ ಬೊಮ್ಮ ಗೌಡ ಹೆಸರಿನ ನಮ್ಮೆಲ್ಲರ ಪ್ರೀತಿಯ ಸುಕ್ರಜ್ಜಿಯವರನ್ನು ನಾಡು ದೇಶ ಗುರುತಿಸುತ್ತದೆ. ಬಡಗೇರಿಯ ಸುಕ್ರಜ್ಜಿ ತನ್ನ ಘನ ವ್ಯಕ್ತಿತ್ವದಿಂದ ಜಗದ ಮನ ಗೆದ್ದವರು. ನಮ್ಮೂರಿಗೆ ಸಮೀಪವಿರುವ ಸುಕ್ರಜ್ಜಿಯವರಿಗೆ ‘ಪದ್ಮಶ್ರೀ’ ಬಂದಾಗ ಇಡೀ ಊರಿಗೆ ಊರೆ, ನಾಡಿಗೆ ನಾಡೆ ಸಂಭ್ರಮ ಹಂಚಿಕೊಂಡಿತ್ತು.
ಹಾಲಕ್ಕಿಗಳ ನೆಲ ಸಂಸ್ಕøತಿಯಾಗಿರುವ ಜನಪದ ಹಾಡು ಅವರ ಜೀವನದ ಅನುಭವ ಕಥನ ಕೂಡ ಆಗಿದೆ. ಕಡುಬಡತನದ ಕುಟುಂಬದಲ್ಲಿ ಜನಿಸಿದ ಸುಕ್ರಜ್ಜಿಯವರು ಶಾಲೆಯ ಮೆಟ್ಟಿಲು ತುಳಿದವರಲ್ಲ. ತನ್ನ ಕೇರಿಯ ಮಕ್ಕಳೊಂದಿಗೆ ಸಗಣಿಯನ್ನು ಹೆಕ್ಕುವುದು, ಕಟ್ಟಿಗೆ ತರುವುದು, ಸೊಪ್ಪು ತರುವುದು, ಹುಲ್ಲು ಕೊಯ್ಯುವುದು, ಗದ್ದೆ ಕೆಲಸ ಮಾಡುವುದು, ಕೆಲಸ ಮುಗಿದ ನಂತರ ಗದ್ದೆ ಬಯಲಿನಲ್ಲಿ ಆಟವಾಡುವುದು, ಆಡುತ್ತ ಆಡುತ್ತ ಹಾಡು ಹೇಳುವುದು. ಸಮೃದ್ಧ ಬಾಲ್ಯದಾಟ ಇದ್ದರೂ ಕೂಡ ಮನೆಯಲ್ಲಿ ಒಮ್ಮೊಮ್ಮೆ ಊಟಕ್ಕೂ ತತ್ವಾರ ಪಡುವ ಕಾಲ ಅದು’ ಎಂದು ಸುಕ್ರಜ್ಜಿ ನೆನಪಿಸಿಕೊಳ್ಳುತ್ತಾರೆ.
ಸುಕ್ರಜ್ಜಿಯ ಕಷ್ಟ ತವರಿನಲ್ಲಿ ಮುಗಿಯಲಿಲ್ಲ. ವಯಸ್ಸಿನಲ್ಲಿ ಹಿರಿಯವನಾದ ಬೊಮ್ಮಗೌಡರನ್ನು ಮದುವೆಯಾದ ನಂತರವೂ ಮುಂದುವರಿಯಿತು. ಬದುಕಿನ ಸಮಸ್ಯೆಗಳನ್ನು ಸುಕ್ರಜ್ಜಿ ಧೈರ್ಯವಾಗಿ ಎದುರಿಸಿದರು. ಸುಕ್ರಜ್ಜಿಯ ನಿರ್ಧಾರಗಳಿಗೆ ಬೊಮ್ಮ ಗೌಡರು ಬೆಂಬಲ ಕೊಡುತ್ತಿದ್ದರು ಎಂಬುದನ್ನು ಬಡಗೇರಿಯ ಹಾಗೂ ಭಾವಿಕೇರಿ ಊರಿನ ಆಪ್ತರು ಹೇಳುತ್ತಾರೆ. ಹಾಗೆಯೇ ಸುಕ್ರಜ್ಜಿ ಕೂಡ ಪಾಲಿಗೆ ಬಂದುದ್ದನ್ನು ಪಂಚಾಮೃತವೆಂದು ಸ್ವೀಕರಿಸುವ ಗುಣ ಹೊಂದಿದವರು. ಇಂದಿಗೂ ಕೂಡ ಅದೇ ಸಹನೆ, ಅಕ್ಕರೆ, ಪ್ರೀತಿ, ವಿಶ್ವಾಸ, ಮುಗ್ಧತೆಯ ಪ್ರತೀಕದಂತೆ ಅವರ ಬದುಕಿದೆ. ಎತ್ತರವಿದ್ದರೂ ಮನಸ್ಸಿಗೆ ಹತ್ತಿರವಾಗುವುದು ಹೇಗೆ ಎಂಬುದನ್ನು ಇವರಿಂದ ತಿಳಿಯಬೇಕು. ಸೋಲೆಂಬುದು, ಕಷ್ಟವೆಂಬುದು ಅಲ್ಪವಿರಾಮ ಎಂದು ತೋರಿಸಿ ಸುಕ್ರಜ್ಜಿ ನಮ್ಮ ಕಣ್ಮುಂದೆ ಇಂದು ನಗುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ದುಡಿಮೆಯ ನಡುವೆಯೂ ಜನಪದ ಕಲೆ ಉಳಿಸಿಕೊಂಡು ಮುಂದುವರಿಸಿದ ಕೀರ್ತಿ ಸುಕ್ರಜ್ಜಿಯವರದು. ಹೀಗಾಗಿಯೇ ಸುಮಾರು 6000ಕ್ಕೂ ಹೆಚ್ಚು ಹಾಡುಗಳನ್ನು ಅವರು ಹಾಡಬಲ್ಲವರಾಗಿದ್ದರು. ಮದುವೆ ಶಾಸ್ತ್ರದ ಹಾಡುಗಳನ್ನು ಒಂದು ದಿನಕ್ಕೆ ಒಂದು ಸೆಕೆಂಡ ಕೂಡ ಬಿಡದೇ ಹಾಡುವ ಗಟ್ಟಿಗಿತ್ತಿ.
ಕಳೆ ಕೀಳುವಾಗ, ಬೆಟ್ಟಕ್ಕೆ ಹೋಗುವಾಗ, ಭತ್ತ ಮೆರೆಯುವಾಗ ಹಾಡು ಹೇಳುತ್ತ ಕೆಲಸ ಮಾಡುವುದೇ ಒಂದು ರೀತಿಯ ಹುರುಪು’ ಎನ್ನುತ್ತಾರೆ. ಗಂಡಸರೆಲ್ಲ ಗುಮಟೆ ಪದ ಹಾಡಿದರೆ ನಾವು ತಾರ್ಲೆ ಕುಣಿತಿದ್ವಿ’ ಎಂದು ಅಂದಿನ ಸುಂದರ ನೆನಪನ್ನು ಮಾಡಿಕೊಳ್ಳುತ್ತಾರೆ.
ತಾವು ಆಕಾಶವಾಣಿಯಲ್ಲಿ ಹಾಡು ಹೇಳಿ ರೇಕಾರ್ಡಿಂಗ್ ಮುಗಿಸಿ ಬಂದ ನಂತರ ಅದನ್ನು ಕೇಳಿದ ಬೊಮ್ಮ ಗೌಡರು ಅವರನ್ನು ಪ್ರಶಂಸಿಸುತ್ತಿದ್ದ ರೀತಿಯ ನೆನೆದುಕೊಳ್ಳುತ್ತಾರೆ. ಒಂದು ರೀತಿಯ ಆದರ್ಶ ದಾಂಪತ್ಯದ ಜೀವನಕ್ಕೂ ಅವರು ಸಾಕ್ಷಿಯಾಗುತ್ತಾರೆ. ಸಾಕು ಮಗ ಶಂಕರ ತೀರಿಕೊಂಡಾಗ ಮೊಮ್ಮಗ, ಮೊಮ್ಮಗಳು ಹಾಗೂ ಸೊಸೆಯ ಜವಾಬ್ದಾರಿ ಹೊತ್ತ ಜೀವ ಅವರದು. ಹಾಡಿನ ಬಗ್ಗೆ ಪ್ರೀತಿ ಇರುವುದರಿಂದಲೇ ಜೀವನದ ಎಲ್ಲ ಸಂದರ್ಭಗಳನ್ನು ಅವರು ಆರಾಮವಾಗಿ ಗೆದ್ದರು ಎನಿಸುತ್ತದೆ. ಸುಕ್ರಜ್ಜಿ ಜಾನಪದ ಹಾಡುಗಾರರಷ್ಟೇ ಅಲ್ಲ, ಅವರೊಬ್ಬರು ಹಾಲಕ್ಕಿಗಳ ಆಕರ ಗ್ರಂಥವೆಂದೇ ಹೇಳಬಹುದು. ಹಾಲಕ್ಕಿಗಳ ನೆಲೆಗಳ ಬಗ್ಗೆ ನಿಖರ ಮಾಹಿತಿ ಅವರಿಗಿದೆ.
ಸುಕ್ರಿ ಬೊಮ್ಮ ಗೌಡರಿರುವ ಊರು ನನ್ನೂರು ಬೇಲೇಕೇರಿಯಿಂದ ನಾಲ್ಕು ಕೀ.ಮೀ. ಅಂತರದಲ್ಲಿರುವ ಊರು. ವಯಸ್ಸಿನ ಭೇದವಿಲ್ಲದೆ ಅಂಕೋಲೆಯ ಸುತ್ತಮುತ್ತಲಿನವರು ಗೌರವಪೂರ್ವಕವಾಗಿ ಬಹಳ ಪ್ರೀತಿಯಿಂದ ಸುಕ್ರಜ್ಜಿ ಎಂದು ಸಂಬೋಧಿಸುವುದು ರೂಢಿ. ಮನೆಯ ಹಿರಿಯಳಂತೆ ನನ್ನ ತಾಲೂಕಿನ ಹಿರಿಯಜ್ಜಿಯಂತೆ ಅಕ್ಕರೆಯಿಂದ ಎಲ್ಲ ವಯೋಮಾನದವರು ಸಾಮಾನ್ಯವಾಗಿ ಸುಕ್ರಜ್ಜಿ ಎನ್ನುತ್ತಾರೆ. ಹಾಲಕ್ಕಿ ಒಕ್ಕಲಿಗ ಸಮಾಜದಲ್ಲಿಯ ಜನರ ಬಾಯಲ್ಲಿ ಸು’ ಎಂಬ ಅಕ್ಷರ
ಚು’ ಎಂದು ಉಚ್ಚಾರಗೊಂಡು ಚುಕ್ರಿ, ಚುಕ್ರಜ್ಜಿ ಎಂದು ಕೂಡ ಇವರನ್ನು ಸಂಬೋಧಿಸುತ್ತಾರೆ. ಇನ್ನು ಕೆಲವರು ಸುಕ್ರಜ್ಜಿ ಶುಕ್ರವಾರ ಹುಟ್ಟಿದ ಕಾರಣ ಅವರ ಹೆಸರು ಶುಕ್ರಿ ಎಂದು ಹೇಳುತ್ತಾರೆ. ಹೀಗಾಗಿ ಸುಕ್ರಿ, ಶುಕ್ರಿ, ಚುಕ್ರಿ ಹೀಗೆ ಬಗೆಯಾಗಿ ಅವರ ಹೆಸರು ಉಚ್ಚಾರಗೊಳ್ಳುತ್ತದೆ. ಹಾಲಕ್ಕಿ ಒಕ್ಕಲಿಗ ಭಾಷೆಯು ದ್ರಾವಿಡ ಭಾಷೆಗೆ ಸೇರಿದ ಒಂದು ಸಾಮಾಜಿಕ ಉಪಭಾಷೆ ಆದ ಕಾರಣ ಹಾಗೂ ದ್ರಾವಿಡ ಭಾಷಾ ಕುಟುಂಬದಲ್ಲಿ ಇಂತಹ ಪ್ರಕ್ರಿಯೆ ಸಹಜ ಎನ್ನಬಹುದು.
ಅಂಕೋಲಾದಿಂದ ಬೇಲೇಕೇರಿ ಮುಖ್ಯರಸ್ತೆ ಮೂಲಕವಾಗಿ ಸಂಚರಿಸುವಾಗಲೆಲ್ಲ ನಾಡೋಜ, ಪದ್ಮಶ್ರೀ ನೆನಪಾಗುತ್ತದೆ. ಬಡಗೇರಿಯ ಹಾದಿ ಕಂಡೊಡನೆ ಹಾಡುಹಕ್ಕಿಯ ಹಾಡು ಮನ ತುಂಬುತ್ತದೆ. ಆಲಿಸಿದವರಿಗಷ್ಟೆ ಅದು ಕೇಳಿಸುತ್ತದೆ. ಅಷ್ಟಕ್ಕೆ ಸುಮ್ಮನಾಗದ ಮನ ಚೂರು ಮುಂದೆ ಹೋಗಿ ಪದ್ಮಶ್ರೀ ಪುರಸ್ಕøತ ನಾಡೋಜ ಸುಕ್ರಿ ಬೊಮ್ಮ ಗೌಡರನ್ನು ಮಾತಾಡಿಸಿಕೊಂಡು ಬರೋಣ ಎಂದು ಬಯಸುತ್ತದೆ. ಇಂತಹದ್ದೆ ಒಂದು ಬಯಕೆ ಇಟ್ಟುಕೊಂಡೆ ಬಡಗೇರಿಯ ಸುಕ್ರಜ್ಜಿಯವರ ಮನೆಗೆ ಸಾಗುವ ಓಣಿ ತಲುಪಿದ್ದೆ. ಒಂಥರಾ ಖುಷಿ. ಅವರ ಮುಗ್ಧ ಮುಖ, ಎಂಬತ್ತರಲ್ಲೂ ಒಂದು ಕ್ಷಣ ಎಲ್ಲರನ್ನು ಸೆರೆಹಿಡಿಯುವ ನಗು, ಕೊರಳ ತುಂಬ ಸುತ್ತಿಕೊಂಡ ಕರಿಮಣಿ ಸರ, ಅವಳುಡುವ ಇತ್ತೀಚಿಗೆ ಹಾಲಕ್ಕಿ ಹೆಂಗಸರು ಉಡಲು ಮನಸ್ಸು ಮಾಡದ ಗೇಟ್ಗಿ’ ಸೀರೆ ಉಡುವ ಪದ್ಧತಿ ಹೀಗೆ ಎಲ್ಲ ಒಂದರ ಬೆನ್ನಿಗೊಂದು ನೆನಪಾಗುತ್ತ ಹೆಜ್ಜೆ ಅವರ ಮನೆಯೆಡೆಗೆ ಸಾಗಿತ್ತು.
ಜಂಬ ಪಡುಕಿಲ್ಲ ತಂಗಿ, ಯಾರ್ ಕೂಡೆ ಜಂಬ ಮಾಡಿ ಏನಾಗಬೇಕಾಗಿದು’ ಎಂದು ಜೀವನಾನುಭವದ ಕಥನ ಬಿಚ್ಚಿಡುವ ಸುಕ್ರಜ್ಜಿಯವರು ಕಥೆ ಹೇಳಲು ಕೂತರೆ ಹೊತ್ತು ಹೋಗಿದ್ದು ತಿಳಿಯದು. ಬಹಳಷ್ಟು ಬಾರಿ ಅವರೊಡನೆ ಕೆಲವೊಂದಿಷ್ಟು ಗಂಟೆಗಳನ್ನು ಕಳೆದದ್ದು ಇದೆ. ಆದರೆ ಪ್ರತಿ ಬಾರಿಯೂ ಸುಕ್ರಜ್ಜಿಯವರ ಸಾನಿಧ್ಯ ಮಲ್ಲಿಗೆ ಅರಳಿದಂತೆ ಹೊಸದು.
ಮಧ್ಯಾಹ್ನ ಗಂಜಿ ಉಣ್ಣುವ ಹೊತ್ತು. ಕೇರಿಯ ಜನರೆಲ್ಲ ಅಂಬಲಿ ಕುಡಿದು ಒಂದಷ್ಟು ಹೊತ್ತು ಬೆನ್ನು ಗೋಡೆಗೆ ಚಾಚಿದ್ದಾರೆ. ಸುಕ್ರಜ್ಜಿಯವರು ಕೂಡ ಮಲಗಿರಬಹುದೆನೋ ಎನ್ನುವ ಸಣ್ಣ ಆತಂಕದಲ್ಲಿಯೇ ಮನೆಯತ್ತ ಸಾಗಿದ್ದೆ. ಆದರೆ ಅಂತಹ ಬಿಸಿಲ ಝಳದಲ್ಲಿಯೂ ಅವರು ವಿರಮಿಸದೆ ಒಂದಿಲ್ಲೊಂದು ಕೆಲಸದಲ್ಲಿ ತೊಡಗುವ ಚುರುಕುತನ ಹುರುಪು ಹುಟ್ಟಿಸುವಂಥದ್ದು. ಬಾ ತಂಗಿ, ಒಂದೀಟು ಅಂಬಲಿ ಕುಡಿಲಕು’ ಎಂದು ಬಂದವರನ್ನು ಆತ್ಮೀಯವಾಗಿ ಸ್ವಾಗತಿಸುವ ರೀತಿ ಪದ್ಮಶ್ರೀ ಬಂದರೂ ಬದಲಾಗಿಲ್ಲ. ‘ಗಾಳಿಗೆ ತೆಣಿ ಮೆನೆ ಕುಂತ್ಕಂಡು ಮಾತಾಡ್ವಾ ಬಾ’ ಎಂದು ಕರೆದರು. ಮನೆ ಮುಂದಿನಿಂದ ಹಾಯುವವರೆಲ್ಲ “ದೊಡ್ಡವ್ವಿ, ಸುಕ್ರಜ್ಜಿ, ಅತ್ಗಿ” ಎಂದೆಲ್ಲ ಕರೆದು ಮಾತಾಡಿಸಿಕೊಂಡೆ ಹೋಗುತ್ತಿದ್ದರು.
ಸುಕ್ರಜ್ಜಿಯವರ ಚುರುಕುತನ ಮನೆಯಲ್ಲಿರಲಿ ವೇದಿಕೆಯಲ್ಲಿರಲಿ ಎದ್ದು ಕಾಣುತ್ತದೆ. ಚಿಕ್ಕವರನ್ನು ನಾಚಿಸುತ್ತದೆ.
ಕಾರವಾರಕ್ಕೆ ಹೋಗ್ಬೇಕು, ಕಾರ್ಯಕ್ರಮ ಇದ್. ಕಾರ್ ಕಳಿಸ್ತೀರ್’ ಎನ್ನುತ್ತ ಸುಕ್ರಜ್ಜಿಯವರು ವೇಳೆಗೆ ಸರಿಯಾಗಿ ತಯಾರಾಗಿ ಕುಳಿತಿರುತ್ತಾರೆ. ಕೋಣೆಯೊಳಗೆ ಅವರು ತಯಾರಾಗುವುದೇ ಒಂದು ಸಂಸ್ಕøತಿಯ ಕೈಗನ್ನಡಿ. ತಲೆಗೆಲ್ಲ ಎಣ್ಣೆ ಹಾಕಿ ಬಾಚಣಿಕೆಯಿಂದ ಬಾಚಿ ತಮ್ಮ ಕಪ್ಪನೆಯ ಚಿಕ್ಕ ಕೂದಲಿಗೊಂದು ಚವರಿ ಸೇರಿಸಿ ಜಡೆ ಹೆಣೆಯುತ್ತಾರೆ. ಮೇಲ್ಮುಖವಾಗಿ ಜಡೆ ಹೆಣೆಯುತ್ತ
ಮೊಳಗಾಲ ಮೊಳೆಹೊಯ್ದೆ ಬೆಟ್ಟಕ್ಕೆ ಬೇರೆದ್ದವೊ
ಕರಳೆ ಸುತ್ರಕೆ ನೆರ್ದವೊ/ಲಪ್ಪನೆ
ಮಗದೀರೊ ನೆರ್ದಾರೊ ಮದವೀಗೊ
ಎಂದು ಹಾಡು ಹೇಳುತ್ತಾರೆ. ಜಡೆಯನ್ನು ತುದಿವರೆಗೂ ಹೆಣೆದು ಕಪ್ಪನೆಯ ದಾರವೊಂದನ್ನು ಸುತ್ತಿ ಮುಡಿ ಕಟ್ಟಿ ದಾರದಿಂದ ಬಿಗಿ ಮಾಡುತ್ತಾರೆ. ಒಂದಲ್ಲ ಎರಡಲ್ಲ ಹಲವಾರು ಹಾಡುಗಳ ಕಣಜ ಅವರು. ಸುಕ್ರಜ್ಜಿಯ ಕೂದಲು ಇನ್ನೂ ಕಪ್ಪಾಗಿರುವ ರಹಸ್ಯವೇನು?’ ಎಂದೆ.
ದಿನಾ ತೆಂಗಿನೆಣ್ಣೆ ಹಾಕಿ ಬಾಚುವುದಷ್ಟೆ’ ಎಂದರು ನಗುತ್ತಾ. ಹಾಡಲ್ಲೆ ಮೈಮರೆತ ಅವರನ್ನು ಒಂದೆರಡು ಹಾಡು ಮುಗಿಯುತ್ತಿದ್ದಂತೆ ತಯಾರಾಗಲು ಎಚ್ಚರಿಸಿದೆ. ಹೊಸ ಪಟ್ಟೆ ಸೀರೆಯೊಂದನ್ನು ತಂದು ಉಡಲು ಶುರು ಮಾಡಿದರು. ಒಂದೇ ನಿಮಿಷದಲ್ಲಿ ಗೇಟ್ಗಿ ನಮೂನೆಯ ಸೀರೆಯುಟ್ಟು ಬಂದಾಗ ಇಷ್ಟು ವಯಸ್ಸಿನಲ್ಲಿಯೂ ಬತ್ತದ ಅವರ ಚುರುಕು ನಡೆಗೆ ಅಭಿನಂದಿಸಲೇಬೇಕು ಎನಿಸಿತು.
ಮಾತಾಡುತ್ತಾ ಗೇಟ್ಗಿ ಸೀರೆ ಬಗ್ಗೆ ಕೇಳಿದಾಗ `ಮುಂದನೋರು ಈ ಪದ್ಧತಿಯೆಲ್ಲ ಮರೀತಿರು, ಕೊಪ್ಪದಲ್ಲಿ ಈ ರೀತಿ ಸೀರೆ ಉಡೋರರೆ ಕಮ್ಮಿ ಆಗಿರು’ ಎಂದು ಆತಂಕ ವ್ಯಕ್ತಪಡಿಸಿದರು. ಮೊಮ್ಮಗಳು ಸುಬ್ಬಾಲಕ್ಷ್ಮೀ ನಗುತ್ತ ಅಡುಗೆ ಕೋಣೆ ದಾಟಿದಳು. ಸುಕ್ರಜ್ಜಿ ಒಂದೊಂದೇ ಎಳೆಯ ಬಣ್ಣದ ಮಣಿ ಸರ ತೊಡಲು ಶುರುಮಾಡಿದರು. ಹಳದಿ ಮಣಿ ಸರ, ಬಿಳಿ ಮತ್ತು ಕರಿ ಮಣಿ ಸೇರಿಸಿದ ಸರ ಒಂದೊಂದಾಗಿ ಧರಿಸಿದರೆ ಅವಳ ಅಲಂಕಾರ ಮುಗಿಯಿತು. ಕನ್ನಡಿ ನೋಡಿಕೊಳ್ಳದೆ ಪಟ್ ಅಂತ ತಯಾರಾಗಿ ಬಿಡುವ ಸುಕ್ರಜ್ಜಿಯವರ ಕೊರಳು ಸರದಿಂದ ತುಂಬಿದಾಗಲೇ ಅವರ ಸೌಂದರ್ಯ ಇಮ್ಮಡಿಸುವುದು. ಸದಾ ತಿರುಗಾಟ ಬಸ್ಸು, ಕಾರು, ರೇಲ್ವೆ, ವಿಮಾನ ಹೀಗೆ ಮುಂದುವರಿದ ಪ್ರಯಾಣ.
ಆರೋಗ್ಯದಲ್ಲಿ ವ್ಯತ್ಯಾಸ ಆದದ್ದು ಉಂಟಾ?’ ಎಂದರೆ ‘ಇಲ್ಲ’ ಎಂದು ನಾವೆಲ್ಲ ಅಚ್ಚರಿ ಪಡುವಂತೆ ಮಾಡುತ್ತಾರೆ. ಹೆಚ್ಚು ಆಸೆ ಪಡದ ನಿಸ್ವಾರ್ಥದ ಬದುಕು, ಪ್ರೀತಿಯ ಸೆಲೆ ತುಂಬಿಕೊಂಡು ಇದ್ದುದ್ದರಲ್ಲಿಯೆ ಸಂತೃಪ್ತಿ ಹೊಂದಿ ಖುಷಿಯಿಂದಿರುವ ಕಾರಣವೆ ಅವರ ಚೈತನ್ಯದ ಶಕ್ತಿ ಎಂದೆನಿಸಿದ್ದಂತೂ ನಿಜ.
`ಅತ್ತಿ, ಮುದಿಕೆ ಬಾರೆ’ ಎಂದು ಹಾಡಿಯ ಹೆಂಗಸೊಬ್ಬಳು ಸುಕ್ರಜ್ಜಿಯವರಿಗೆ ಒಂದು ಎಲೆ, ಅಡಿಕೆ ತಂದು ಕೊಟ್ಟಳು. ಈ ವೀಳ್ಯವೆ ಹಾಡಿಯವರ ಮದುವೆಯ ಮಮತೆಯ ಕರೆಯೋಲೆ. ಸುಕ್ರಜ್ಜಿಯವರ ಮನೆಯಲ್ಲಿ ಒಂದು ತಾಸು ಕುಂತರೆ ಸಾಕು ಹಾಲಕ್ಕಿಗಳ ಬದುಕು ಅಲ್ಲಿ ತೆರೆದುಕೊಳ್ಳುತ್ತದೆ. ವೀಳ್ಯ ಕೊಡಲು ಬಂದವಳ ತಲೆಗೆ ಚೂರು ಎಣ್ಣೆ ಹಾಕಿ ಕಳಿಸುತ್ತಾರೆ ಸುಕ್ರಜ್ಜಿ. ಇದರ ಬಗ್ಗೆ ವಿಚಾರಿಸಿದಾಗ ಸುಕ್ರಜ್ಜಿಯವರು ಮತ್ತೊಂದು ಮಾತು ಹೇಳಿದರು. ಮದುವೆಗೆ ಕರೆಯಲು ಬಂದವರ ಮನೆಯಲ್ಲಿ ತೆಂಗಿನಕಾಯಿಯ ಮರ ಇಲ್ಲದಿದ್ದರೆ ಅಂಥವರಿಗೆ ತೆಂಗಿನಕಾಯಿ ನೀಡುತ್ತೇವೆ ಎಂದರು.
ಕೆಲಸ ಮಾಡುವಾಗಲೆಲ್ಲ ತನ್ನ ಪಾಡಿಗೆ ತಾನು ಹಾಡಿಕೊಳ್ಳುವ ಸುಕ್ರಜ್ಜಿಯವರನ್ನು ಕಾಕಾಸೋಮಿ ಈ ಮುದ್ಕಿ ಸಾಯುತಂಕ ಹಾಡು ಹೇಳುದೆಯಾ. ಬಾಯ್ ಮುಚ್ಚುದೇಯಿಲ್ಲಾ’ ಎಂದು ರೇಗಿಸುತ್ತಿದ್ದರಂತೆ. ಅಷ್ಟೊಂದು ಹಾಡುಗಳನ್ನು ಸುಕ್ರಿಯವರು ತುಂಬಿಕೊಂಡಿದ್ದರು.
ಕುತ್ರಿ ಬಡಿಯುವ ಕೆಲಸಕೆ ಬಡಗೇರಿಯಿಂದ ಬೇಲೇಕೇರಿಯವರೆಗೂ ಕತ್ತಲಲ್ಲಿಯೆ ಸುಕ್ರಿ ಗೌಡರ ಮುಂದಾಳತ್ವದಲ್ಲಿ ಈ ಹೆಂಗಸರ ಪಂಗಡ ಹೊರಡುತ್ತಿತ್ತು. ಆಗೆಲ್ಲ ರಸ್ತೆ ದೀಪಗಳು ಇಲ್ಲದ ಕಾರಣ ಭತ್ತದ ಹುಲ್ಲಿನ ಚೂಡಿಯನ್ನು ಹಚ್ಚಿಕೊಳ್ಳುತ್ತಾ ಬೆಳಕು ಮಾಡಿಕೊಂಡು ಸಾಗುತ್ತಿದ್ದರಂತೆ. ಬೇಲೇಕೇರಿವರೆಗೂ ತಲುಪಲು ಐದು ಹುಲ್ಲಿನ ಕಟ್ಟು ಬೇಕಾಗುತ್ತಿತ್ತು. ದಾರಿ ಪೂರ್ತಿ ಹಾಡು ಹೇಳಿಕೊಂಡು ಹೋಗುತ್ತಿದ್ದ ಕಾರಣ ಹೆದರಿಕೆ ಆಗುತ್ತಿರಲಿಲ್ಲ ಎಂದು ಸುಕ್ರಿಯವರು ಆ ಕಾಲದ ತಮ್ಮ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ರಾಮಾಯಣ, ಮಹಾಭಾರತ, ಹೆಂಗಸರ ಹಾಡು, ಕೆಲಸದ ಹಾಡು, ಪುಗಡಿ ಹಾಡು, ನೀತಿ ಹಾಡು ಹೀಗೆ ಹಾಲಕ್ಕಿಗಳ ಜನಜೀವನ ಚಿತ್ರಿಸುವ ಎಲ್ಲ ಹಾಡುಗಳನ್ನು ಪಟಕ್ಕನೆ ಹಾಡಿ ಮುಗಿಸುತ್ತಾರೆ ಸುಕ್ರಜ್ಜಿಯವರು. ಇವರ ಹಾಡು ಕೇಳುತ್ತಿದ್ದರೆ ನಮಗನಿಸುವುದು ಇಷ್ಟೆ. ಪದ್ಮಶ್ರೀ ಪ್ರಶಸ್ತಿ ಸುಕ್ರಜ್ಜಿಯಂಥವರಿಗೆ ಬಂದು ಪ್ರಶಸ್ತಿಯ ಗೌರವ ಹೆಚ್ಚಾಗಿದೆ. ಸುಕ್ರಜ್ಜಿಯವರು ಹೀಗೆ ಹಾಡುತ್ತಲೇ ಇರಲಿ.
ಮೌಖಿಕ ಪರಂಪರೆಯ ಕಲಾವಿದೆಯಾಗಿ ಸುಕ್ರಜ್ಜಿಯವರ ಇನ್ನೊಂದು ಮಹತ್ವದ ಕಾರ್ಯಕ್ರಮವೆಂದರೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನ ಅವರ ಅಧ್ಯಕ್ಷತೆಯಲ್ಲಿ ನಡೆದದ್ದು ಅವಿಸ್ಮರಣೀಯ. ಎಪ್ಪತ್ತೆಂಟು ವರ್ಷ ದಾಟಿದ ಸುಕ್ರಜ್ಜಿಯವರ ಅಧ್ಯಕ್ಷತೆಯಲ್ಲಿ ಅನೇಕ ಸಾಹಿತ್ಯಾಸಕ್ತರು, ಕವಿಗಳು, ಸಾಹಿತಿಗಳು ಭಾಗವಹಿಸಿ ಧನ್ಯತೆಯನ್ನು ಮೆರೆದರು.
ಸಮ್ಮೇಳನಾಧ್ಯಕ್ಷತೆಯನ್ನು ಜವಾಬ್ದಾರಿಯಿಂದ ನಿಭಾಯಿಸಿ ಅವರಾಡಿದ ಮಾತು ಉಲ್ಲೇಖನೀಯ.
ಹಾಲಕ್ಕಿ ಸಂಸ್ಕøತಿಯ ಉಡುಗೆ ದೊಡ್ಡದ್ದು. ನಮ್ಮ ಔಷಧಿ, ಊಟದ ಪದ್ಧತಿ ಎಲ್ಲದ್ದಕ್ಕೂ ಹದವಿದೆ. ಈಗೀನ ಯುವಕರು ಅದನ್ನು ತಿಳಿದುಕೊಳ್ಳಬೇಕು.’ ಎನ್ನುತ್ತಾ `ಕನ್ನಡ ಶಾಲೆಗಳು ಉಳಿಯಬೇಕು. ಸಾರಾಯಿ ಮಾರಾಟ ನಿಲ್ಲಬೇಕು’ ಎಂದು ಸ್ಪಷ್ಟಪಡಿಸಿದರು. ಹೀಗೆ ನಿರಕ್ಷರಿಯಾಗಿದ್ದರೂ ವರ್ತಮಾನದ ತಲ್ಲಣಗಳನ್ನು ಗ್ರಹಿಸಬಲ್ಲವರಾಗಿದ್ದಾರೆ. ಈ ಹೊತ್ತಿನ ಎಲ್ಲ ಸಂಕೀರ್ಣ ಬದುಕಿನ ಆಚೆ ಇರಬಹುದಾದ ಸಂವೇದನೆಗಳ ಹುಡುಕಾಟಕ್ಕೆ ತೊಡಗಿದರೆ ಸುಕ್ರಜ್ಜಿಯಂತಹ ವ್ಯಕ್ತಿತ್ವವನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಇದ್ದಷ್ಟು ಕಡಿಮೆ ಎನ್ನುವ ಇಂದಿನ ಜಾಯಮಾನದಲ್ಲಿ ಇರುವುದರಲ್ಲಿಯೇ ಖುಷಿ ಪಡುವುದು ಹೇಗೆ ಎಂಬ ಪಾಠಕ್ಕೆ ಗುರುವಾಗಿ ನಿಲ್ಲುತ್ತಾರೆ. ಪ್ರತಿಯೊಬ್ಬರು ಕಂಡುಕೊಳ್ಳಬೇಕಾದ, ರೂಪಿಸಿಕೊಳ್ಳಬೇಕಾದ ಮಾದರಿ ಇದು. (ಸುಕ್ರಜ್ಜಿ ಕುರಿತ ಪುಸ್ತಕದ `ಸಂಪಾದಕಿಯ ಮಾತು’ ಸಂಗ್ರಹ ರೂಪ)
- ಅಕ್ಷತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.