Uncategorizedವ್ಯಕ್ತಿಚಿತ್ರ

ವ್ಯಕ್ತಿಚಿತ್ರ/ ಅಪ್ರತಿಮ ಹೋರಾಟಗಾರ್ತಿ ಮಿರಿಯಂ ರೋಸ್ – ವಿನತೆ ಶರ್ಮ

ಆಸ್ಟ್ರೇಲಿಯಾ ದೇಶದ ಅಬೊರಿಜಿನಲ್- ಮೂಲನಿವಾಸಿ ಲೇಖಕಿ, ಹೋರಾಟಗಾರ್ತಿ ಮತ್ತು ಕಲಾವಿದೆ ಮಿರಿಯಂ-ರೋಸ್ ಶಾಲಾ ಶಿಕ್ಷಣದಲ್ಲಿ ಮೂಲನಿವಾಸಿ ದೃಶ್ಯಕಲೆಗಳನ್ನು ಅಳವಡಿಸಲು ಸರ್ಕಾರದೊಡನೆ ಕೆಲಸ ಮಾಡಿದರು. ಅವರ ಸಂಸ್ಕೃತಿಯಲ್ಲಿ ಅಡಗಿರುವ ಅಗಾಧ ವಿವೇಕ, ಲೋಕಜ್ಞಾನ, ಅರಿವು, ಧ್ಯಾನ ಕ್ರಿಯೆಗಳ ಪರಿಚಯ ಮಾಡಿಸಿದರು. ಪ್ರತಿಯೊಬ್ಬ ಮೂಲನಿವಾಸಿ ಮಗುವಿಗೂ ಮುಕ್ತ ಶಿಕ್ಷಣ ಸಿಗಬೇಕೆಂದು, ಶಿಕ್ಷಣವೇ ಅವರ ಉತ್ತಮ ಭವಿಷ್ಯದ ತಳಪಾಯ ಎಂದು ಹಂಬಲಿಸುತ್ತಾ ಆ ಕನಸನ್ನು ನನಸಾಗಿಸಲು ಅನವರತ ದುಡಿಯುವ ಹೋರಾಟಗಾರ್ತಿ ಮಿರಿಯಂ-ರೋಸ್.

ಇವರ ಹೆಸರು ಮಿರಿಯಂ-ರೋಸ್ ಉಂಗುಮ್ಮೆರ್ ಬೌಮನ್ನ್ (Miriam-Rose Ungunmerr Baumann). ಇವರು ಆಸ್ಟ್ರೇಲಿಯನ್ ಅಬೊರಿಜಿನಲ್ ಮಹಿಳೆ. ಆಸ್ಟ್ರೇಲಿಯಾ ದೇಶದ ನೆತ್ತಿಯಲ್ಲಿ, ಕೇಂದ್ರ ಸರ್ಕಾರದ ಆಳ್ವಿಕೆಯಲ್ಲಿರುವ ಉತ್ತರಭಾಗದ – Northern Territory ಯ ರಾಜಧಾನಿ ಡಾರ್ವಿನ್ ನಗರ. ಅಲ್ಲಿಂದ ಸ್ವಲ್ಪ ದಕ್ಷಿಣಕ್ಕೆ ಬಂದರೆ ಇರುವ ಪುಟಾಣಿ ಊರಾದ Nauiyu  ಈ ಮಹಿಳೆಯ ತವರು. ಹೋದ ತಿಂಗಳು ಜನವರಿ ೨೬ರಂದು ಅವರಿಗೆ ೨೦೨೧ ನೇ ಸಾಲಿನ “ಹಿರಿಯ ಆಸ್ಟ್ರೇಲಿಯನ್” ಬಿರುದು ಮತ್ತು ಗೌರವ ಸಂದಿದೆ. ಬಿರುದಿನ ವಿವರಣೆಯಲ್ಲಿ ಮಿರಿಯಂ-ರೋಸ್ ಒಬ್ಬ ಲೇಖಕಿ, ಹೋರಾಟಗಾರ್ತಿ ಮತ್ತು ಕಲಾವಿದೆ ಎಂದಿದೆ. ಆದರೆ ಅವರ ಹೆಸರು ಜನಜನಿತವಾಗುತ್ತಿರುವುದು Dadirri  ಎಂಬ ಧ್ಯಾನ ಕ್ರಿಯೆಯಿಂದ. ಆಕೆಯನ್ನು Dadirri ಧ್ಯಾನಿ ಎನ್ನಬಹುದೇನೋ!

ಮಿರಿಯಂ-ರೋಸ್ ಹೆಸರನ್ನು ನಾನು ಕೇಳಿದ್ದು ೨೦೨೦ ಜೂನ್ ತಿಂಗಳಿನಲ್ಲಿ. ಸತತ ಐದು ದಿನಗಳ ಕಾಲ ನಡೆದ Bush Adventure Therapy ಆನ್ ಲೈನ್ ಸಮಾವೇಶದಲ್ಲಿ ಭಾಗವಹಿಸಿದ್ದೆ. ಆಗ ಪ್ರಪಂಚದ ಹಲವಾರು ದೇಶಗಳು ಕೊರೋನ ಕಾರಣದಿಂದ ಲಾಕ್ ಡೌನಿನಲ್ಲಿದ್ದವು. ಅದೇ ಕಾರಣವು ನೂರಾರು ಜನರಿಗೆ ವರವಾಗಿ, ಕಡೆಯ ದಿನ ಶುಕ್ರವಾರ ಆನ್ ಲೈನ್ ಸಮಾವೇಶ ಆರಂಭವಾದಾಗ ಆರು ನೂರು ಜನರಿಗೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಭಾಗವಹಿಸಿದ ನಮಗೆ ದೇಶವಿದೇಶಗಳಿಂದ ಪಾಲ್ಗೊಂಡಿದ್ದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಷ್ಟೇ ಅಲ್ಲದೆ ಆರು ಮಂದಿ ಆಸ್ಟ್ರೇಲಿಯನ್ ಅಬೊರಿಜಿನಲ್- ಮೂಲನಿವಾಸಿ ಸಂಪನ್ಮೂಲ ವ್ಯಕ್ತಿಗಳಿಂದ ನೇರವಾಗಿ ಅವರ ಸಂಸ್ಕೃತಿಯಲ್ಲಿ ಅಡಗಿರುವ ಅಗಾಧ ವಿವೇಕ, ಲೋಕಜ್ಞಾನ, ಅರಿವುಗಳ ಪರಿಚಯವಾಗಿತ್ತು. ಈ ಆರೂ ಸೆಷೆನ್ ಗಳು ನನ್ನನ್ನು ಹಿಡಿದಿಟ್ಟಿತ್ತು. ಒಂದು ಸೆಷೆನ್ನಿನಲ್ಲಿ Dadirri ಕ್ರಿಯೆಯ ಪರಿಚಯ ಮಾಡಿಸಿ, ಇಪ್ಪತ್ತು ನಿಮಿಷ ನಾವೆಲ್ಲಾ ಅದರ ಅನುಭೂತಿಯನ್ನು ಪಡೆದೆವು. Dadirri ಕ್ರಿಯೆಯನ್ನು ಬೆಳಕಿಗೆ ತಂದವರು ಮಿರಿಯಂ-ರೋಸ್.

ಅವರ ಕುಲದ ಹೆಸರು NGANGIKURUNGKURR. ಕನ್ನಡ ಭಾಷೆಯಲ್ಲಿ ಅದನ್ನು ಬರೆಯುವುದು ಸ್ವಲ್ಪ ಕಷ್ಟವೇ ಅನ್ನಿ! ಅದನ್ನು ಮೊದಲೇ ಊಹಿಸಿ ಅರಿತವರಂತೆ ಮಿರಿಯಂ-ರೋಸ್ ತಮ್ಮ ಕುಲದ ಹೆಸರನ್ನು ವಿವರಿಸಿದ್ದಾರೆ. ಇಂಗ್ಲಿಷ್ ಭಾಷೆಗೆ ಭಾವಾನುವಾದ ಮಾಡಿದರೆ ಅವರ ಕುಲದ ಹೆಸರು ‘ಆಳನೀರಿನ ಸೆಲೆಯ ತರಂಗಗಳು.’ ತನ್ನ ಕುಲಜನರ ಸಾಂಕೇತಿಕ ಹೆಸರು ‘ಆಳದಲ್ಲಿನ ಶಬ್ದಗಳು’ ಎಂದು ಮಿರಿಯಂ-ರೋಸ್ ಅನೇಕ ಬಾರಿ, ಅನೇಕ ಹಿನ್ನೆಲೆಗಳಲ್ಲಿ ಹೇಳಿದ್ದಾರೆ. ಅವರು ಹಾಗೆ ಎಷ್ಟೋ ವರ್ಷಗಳಿಂದ ಹೇಳುತ್ತಾ ಬಂದಿರುವ ಫಲ ಈಗ ಆಸ್ಟ್ರೇಲಿಯಾದುದ್ದಕ್ಕೂ ಕಾಣುತ್ತಿದೆ. ‘ಆಳ ನೀರಿನ ಒರತೆಯ ಶಬ್ದ’ ವನ್ನು ಆಸ್ಟ್ರೇಲಿಯನ್ನರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಪ್ಪಟ ಆಸ್ಟ್ರೇಲಿಯನ್ ಧ್ಯಾನ Dadirri ಕ್ರಿಯೆ ಪ್ರಚಾರ ಪಡೆದು ಪ್ರಸಿದ್ಧಿಯಾಗಿದೆ. Dadirri ಯ ಮತ್ತು ಸಾಂಸ್ಕೃತಿಕ ಒಳನೋಟದ ಅನುಭವವನ್ನು ಪಡೆಯಲು ಆಸಕ್ತರು ದೇಶದ ಮೂಲೆಗಳಿಂದ ಮಿರಿಯಂ-ರೋಸ್ ತವರಿಗೆ ಹೋಗುತ್ತಿದ್ದಾರೆ. ಜಗತ್ತಿಗೆ ಕೊಡುಗೆಯಾಗಿ ತನ್ನ ಕುಲವು ಕೊಟ್ಟ Dadirri ಬಗ್ಗೆ ಹೆಮ್ಮೆಪಡುವ ಮಿರಿಯಂ-ರೋಸ್ ಅಬೊರಿಜಿನಲ್- ಮೂಲನಿವಾಸಿ ಧ್ಯಾನಕ್ರಿಯೆಯಿಂದ ಆಸ್ಟ್ರೇಲಿಯನ್ನರ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು ಎನ್ನುತ್ತಾರೆ.

ಲೋಕಜ್ಞಾನ : ನಾನು Dadirri ಕ್ರಿಯೆಯಲ್ಲಿ ಭಾಗವಹಿಸಿದಾಗ ಅದು ನಮ್ಮ ಭಾರತೀಯ ಧ್ಯಾನಕ್ಕೆ ಹತ್ತಿರವಾದದ್ದು ಎಂದೆನ್ನಿಸಿತು. ಅದರಲ್ಲಿ ಮತ್ತಷ್ಟು ಮುಳುಗಿದಾಗ ನಂತರ ಅದರ ಅನುಭವದ ಬಗ್ಗೆ ಯೋಚಿಸಿದಾಗ ಭಾರತದ ಮೂಲನಿವಾಸಿಗಳು ಕೂಡ ಹೀಗೆಯೇ ಅಲ್ಲವೇ ಬದುಕುವುದು ಅನ್ನಿಸಿತು. ಅಂದರೆ, ಅವರೆಲ್ಲ ನೆಲಕ್ಕೆ ಹತ್ತಿರವಾಗಿ, ತಮ್ಮ ಪ್ರಕೃತಿಯ ಭಾಗವಾಗಿ ಬದುಕುವ ಜನ. ಅಲ್ಲಿ ಹೆಚ್ಚಿನ, ಹೊರಗಿನ, ಮನುಷ್ಯ ಹುಟ್ಟಿಸುವ ಕರ್ಕಶ ಶಬ್ದಗಳು ಬೇಕಿಲ್ಲ, ಅಲ್ಲವೇ? ಪ್ರಕೃತಿಯಲ್ಲಿ ಜೀವಂತವಿರುವ, ಇಲ್ಲದಿರುವ ಎಲ್ಲವನ್ನೂ ನೋಡುವುದು, ಕೇಳುವುದು ಮತ್ತು ಅನುಭವಿಸುವುದು, ಅದುವೇ ಲೋಕಜ್ಞಾನವಲ್ಲವೇ? ವಾಹನ ಸದ್ದು, ನಗರದ ಸದ್ದು, ಉದ್ಯೋಗದ ಸದ್ದು, ಮೆಷಿನ್ನುಗಳು ಇವೆಲ್ಲವನ್ನೂ ಪಕ್ಕಕ್ಕಿಟ್ಟು ಕುಳಿತರೆ ಅದೆಷ್ಟು ಚೆನ್ನ! ಎಲೆ ಬೀಳುವುದು, ಹಕ್ಕಿ ಹಾಡು, ನೀರಿನ ಲಾಸ್ಯ, ಚಿಟ್ಟೆ ಹಾರಾಟ ಎಲ್ಲವೂ ನಮ್ಮೊಳಗೆ ಮಿಳಿತವಾಗಿ ನಾವು ಧ್ಯಾನಸ್ಥರಾಗಿಬಿಡಬಹುದು!!

ಅಬೊರಿಜಿನಲ್- ಮೂಲನಿವಾಸಿ ಸಂಸ್ಕೃತಿ ಪ್ರಪಂಚದ ಅತ್ಯಂತ ಪುರಾತನ ಸಂಸ್ಕೃತಿ ಎನ್ನುವುದು ಮತ್ತೊಂದು ಮಹತ್ವದ ಸಂಗತಿ. ಅದಕ್ಕೆ ಸುಮಾರು ೬೦ ಸಾವಿರದಿಂದ ೭೫ ಸಾವಿರ ವರ್ಷಗಳ ಇತಿಹಾಸವಿದೆ ಎನ್ನುವುದನ್ನು ಲಭ್ಯವಿರುವ ಪುರಾವೆಗಳು ನಿರೂಪಿಸಿವೆ. ಅಷ್ಟು ಪುರಾತನ ಸಂಸ್ಕೃತಿಯಿಂದ ಈಗಿನ ಜನಾಂಗವು ಕಲಿಯುವುದೆಷ್ಟಿದೆಯೋ ಏನೋ! ಅಂದಾಜಿಗೆ ಇನ್ನೂ ಬಂದಿಲ್ಲ. ಬ್ರಿಟಿಷ್ ವಸಾಹತು ಆಳ್ವಿಕೆಯು ಮುನ್ನೂರು ವರ್ಷಗಳ ಕಾಲ ಆ ಸಂಸ್ಕೃತಿಯನ್ನು ತುಳಿದು ಧ್ವಂಸ ಮಾಡಿ ಅಬೊರಿಜಿನಲ್- ಮೂಲನಿವಾಸಿ ಜನರನ್ನು ನಿರ್ನಾಮ ಮಾಡಲೆತ್ನಿಸಿತ್ತು. ಅದರ ಪರಿಣಾಮವಾಗಿ ಬಹುಜನ ಸಂಸ್ಕೃತಿಗಳ ಬಗ್ಗೆ ಇಂದಿಗೂ ಹೆಚ್ಚು ತಿಳಿದಿಲ್ಲ. ನಿಧಾನವಾಗಿ ಅವರ ಲೋಕದೃಷ್ಟಿಗಳು, ಜ್ಞಾನ, ಪ್ರಪಂಚದ ಮತ್ತು ವಿಶ್ವದ ಬಗ್ಗೆ ಇರುವ ಅರಿವು ಬೆಳಕಿಗೆ ಬರುತ್ತಿವೆ. ಅನೇಕ ಅಬೊರಿಜಿನಲ್ ಹಿರಿಯರು ಮತ್ತು ಕಿರಿಯರು ಅದಕ್ಕಾಗಿ ಶ್ರಮಪಡುತ್ತಿದ್ದಾರೆ.

ಮಿರಿಯಂ-ರೋಸ್ ಕಲೆ

ಮಿರಿಯಂ-ರೋಸ್ ಅವರದ್ದು ಅಪರೂಪದ ವ್ಯಕ್ತಿತ್ವ. ೧೯೭೫ ರಲ್ಲಿ ಅವರು ಪದವಿ ಗಳಿಸಿ Northern Territoryಯ ಪ್ರಪ್ರಥಮ ಅಬೊರಿಜಿನಲ್- ಮೂಲನಿವಾಸಿ ಶಾಲಾ ಶಿಕ್ಷಕಿಯಾದರು. ಸ್ವತಃ ಮೂಲನಿವಾಸಿ ಕಲೆಗಳನ್ನು ಅರಿತಿದ್ದ ಅವರು ಶಾಲಾ ಶಿಕ್ಷಣದಲ್ಲಿ ದೃಶ್ಯಕಲೆಗಳನ್ನು ಅಳವಡಿಸಲು ಸರ್ಕಾರದೊಡನೆ ಕೆಲಸ ಮಾಡಿದರು. ಕ್ಯಾಥೊಲಿಕ್ ಧರ್ಮವನ್ನು ಕೂಡ ಅನುಸರಿಸುವ ಅವರು ತಮ್ಮದೇ ಸಮುದಾಯದ ಅಬೊರಿಜಿನಲ್ ಶಾಲೆಯ ಪ್ರಿನ್ಸಿಪಾಲರಾದರು. ಪ್ರತಿಯೊಬ್ಬ ಮೂಲನಿವಾಸಿ ಮಗುವಿಗೂ ಮುಕ್ತ ಶಿಕ್ಷಣ ಸಿಗಬೇಕೆಂದು, ಶಿಕ್ಷಣವೇ ಅವರ ಉತ್ತಮ ಭವಿಷ್ಯದ ತಳಪಾಯ ಎಂದು ಹಂಬಲಿಸುತ್ತಾ ಆ ಕನಸನ್ನು ನನಸಾಗಿಸಲು ಅನವರತ ದುಡಿದರು. ಕ್ರಮೇಣ, ಶಿಕ್ಷಣ ಇಲಾಖೆಗೆ ನೇಮಕಗೊಂಡು, ನಂತರ ರಾಷ್ಟ್ರೀಯ ಸಮಿತಿಯಲ್ಲೂ ಸೇವೆ ಸಲ್ಲಿಸಿದರು. ಅದೇ ಕಾಲಕ್ಕೆ Miriam Rose Foundation ಸ್ಥಾಪಿಸಿದರು. ಅಬೊರಿಜಿನಲ್- ಮೂಲನಿವಾಸಿ ಮತ್ತು ಬಿಳಿಯರ ಸಮುದಾಯಗಳ ನಡುವೆ ಇದ್ದ ಕಂದಕವನ್ನು ಮುಚ್ಚುವತ್ತ ಮತ್ತು ತಮ್ಮ ಸಮುದಾಯದ ಮಕ್ಕಳು ಶಿಕ್ಷಣವಂತರಾಗುವತ್ತ ಅವರ ಫೌಂಡೇಶನ್ ಕೆಲಸ ಮಾಡುತ್ತಿದೆ. ಅವರ ಎಡಬಿಡದ ಸಮುದಾಯ ಸಮೃದ್ಧಿ ಕೆಲಸಗಳಿಗಾಗಿ ಅವರಿಗೆ Member of the Order of Australia ಪ್ರಶಸ್ತಿ ಸಿಕ್ಕಿದೆ. ಹೆಸರಾಂತ Charles Darwin ವಿಶ್ವವಿದ್ಯಾಲಯದಿಂದ ಅವರಿಗೆ ಶಿಕ್ಷಣದಲ್ಲಿ ಗೌರವ ಡಾಕ್ಟೊರೇಟ್ ಪದವಿಯೂ ಲಭಿಸಿದೆ.

ಮಿರಿಯಂ-ರೋಸ್ ಕಳೆದ ತಿಂಗಳು ಪ್ರಶಸ್ತಿ ಸ್ವೀಕರಿಸಿ ಎಲ್ಲರ ಸ್ವಾಸ್ಥ್ಯವನ್ನು ಕುರಿತು ಕೆಲ ಮಾತುಗಳನ್ನು ಹೇಳಿದರು. ದಿನನಿತ್ಯವೂ ತಮ್ಮ ಜನರು ಎರಡು ಪ್ರಪಂಚಗಳಲ್ಲಿ ಬದುಕುತ್ತಾರೆ. ಅವರದ್ದು ಮೂಲನಿವಾಸಿ ಆತ್ಮ. ಇರುವುದು ಈ ಆಧುನಿಕ ಆಸ್ಟ್ರೇಲಿಯಾದಲ್ಲಿ. ಅವರಂತೆಯೇ ಬೇರೆ ಆಸ್ಟ್ರೇಲಿಯನ್ನರೂ ಕೂಡ ಅದೇ ರೀತಿ ದ್ವಂದ್ವಗಳನ್ನು ಅನುಭವಿಸುತ್ತಾರೆ. ಕೆಲಸ, ಒತ್ತಡ, ನಗರದ ಕೃತಕತೆ, ಓಡುವಿಕೆಯೇ ಜೀವನದ ಗತಿಯಾಗಿರುವ ಈ ಕಾಲದಲ್ಲಿ ನಾವೆಲ್ಲರೂ ನಮ್ಮೊಳಗಿನ ಚೇತನವನ್ನು ಹುಡುಕಿ ಕಂಡುಕೊಳ್ಳಬೇಕಿದೆ. ನಮ್ಮ ಅಂತಃಚೇತನವನ್ನು ಜಾಗೃತಿಗೊಳಿಸಿಕೊಳ್ಳಬೇಕಿದೆ. ಉಳಿಸಿಕೊಳ್ಳಬೇಕಿದೆ. ಎಲ್ಲರೂ ಶಾಂತಿ ಸಮಾಧಾನದಿಂದ ಧ್ಯಾನ ಕ್ರಿಯೆಯನ್ನು ಮಾಡಬೇಕಿದೆ. ನಮ್ಮೊಳಗಿನ ಮೌನವನ್ನು ಆಲಿಸಬೇಕು, ಚೇತನದ ಬುಗ್ಗೆಯನ್ನು ಅನುಭವಿಸಬೇಕು, ಅದು ಒಬ್ಬ ವ್ಯಕ್ತಿಯ ಮತ್ತು ಸಮುದಾಯ ಸ್ವಾಸ್ಥ್ಯಕ್ಕೆ ಅವಶ್ಯಕ, ಎಂದು ಹೇಳಿದ್ದಾರೆ. ಅವರ ಮಾತುಗಳು ಸಮುದಾಯದಿಂದ ಸಮಾಜಗಳಿಗೆ ಹರಡಬೇಕಿದೆ.

  • ವಿನತೆ ಶರ್ಮ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *