ವೇಶ್ಯೆಯರ ವೀರಗಾಥೆ – ಮಹಿಳಾ ಚರಿತ್ರೆಯಾಗಿ “ಬೇಗಂ ಜಾನ್”

ಏಪ್ರಿಲ್ 2017ರಲ್ಲಿ ತೆರೆಕಂಡ ಹಿಂದಿ ಸಿನಿಮಾ’ ಬೇಗಂ ಜಾನ್’ ಅದೇ ಹೆಸರಿನ ಒಬ್ಬ ವೇಶ್ಯೆಯ ಮತ್ತು ಅವಳು ನಿರ್ವಹಿಸುತ್ತಿದ್ದ ಪಂಜಾಬ್ ಪ್ರಾಂತ್ಯದ ವೇಶ್ಯಾಗೃಹದಲ್ಲಿ ವಾಸಿಸುತ್ತಿದ್ದ ಇತರ ವೇಶ್ಯೆಯರ ಕತೆ. 1947ರಲ್ಲಿ ನಡೆದ ದೇಶದ ವಿಭಜನೆಯ ಸಂದರ್ಭದಲ್ಲಿ ಭಾರತ-ಪಾಕಿಸ್ತಾನದ ಗಡಿ ವೇಶ್ಯಾಗೃಹದ ನಡುವೆ ಹಾದುಹೋದಾಗ, ಆ ವೇಶ್ಯೆಯರು ತಮ್ಮ ಮನೆ, ವೃತ್ತಿ, ಜೀವನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಹೋರಾಡುವ ಬಗೆಯನ್ನು ಈ ಚಿತ್ರ ನಿರೂಪಿಸುತ್ತದೆ. ಹೈದರಾಬಾದ್‍ನ ಇಂಗ್ಲಿಷ್ ಮತ್ತು ಫಾರಿನ್ ಲಾಂಗ್ವೇಜಸ್ ವಿಶ್ವವಿದ್ಯಾಲಯದ ಫಿಲಂಸ್ ಸ್ಟಡಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆದ ಡಾ. ಎಚ್.ಎಸ್. ನಿಖಿಲಾ ಅವರು ಈ ಚಿತ್ರದ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಅದೇ ಹೆಸರಿನ ಒಬ್ಬ ವೇಶ್ಯೆಯ ಮತ್ತು ಅವಳು ನಿರ್ವಹಿಸುತ್ತಿದ್ದ ಪಂಜಾಬ್ ಪ್ರಾಂತ್ಯದ ವೇಶ್ಯಾಗೃಹದಲ್ಲಿ ವಾಸಿಸುತ್ತಿದ್ದ ಇತರ ವೇಶ್ಯೆಯರ ಕತೆ. 1947ರಲ್ಲಿ ನಡೆದ ದೇಶದ ವಿಭಜನೆಯ ಸಂದರ್ಭದಲ್ಲಿ ಭಾರತ-ಪಾಕಿಸ್ತಾನದ ಗಡಿ ವೇಶ್ಯಾಗೃಹದ ನಡುವೆ ಹಾದುಹೋದಾಗ, ಆ ವೇಶ್ಯೆಯರು ತಮ್ಮ ಮನೆ, ವೃತ್ತಿ, ಜೀವನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಹೋರಾಡುವ ಬಗೆಯನ್ನು ಈ ಚಿತ್ರ ನಿರೂಪಿಸುತ್ತದೆ. ಹೈದರಾಬಾದ್‍ನ ಇಂಗ್ಲಿಷ್ ಮತ್ತು ಫಾರಿನ್ ಲಾಂಗ್ವೇಜಸ್ ವಿಶ್ವವಿದ್ಯಾಲಯದ ಫಿಲಂಸ್ ಸ್ಟಡಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆದ ಡಾ. ಎಚ್.ಎಸ್. ನಿಖಿಲಾ ಅವರು ಈ ಚಿತ್ರದ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸರಿಸುಮಾರು 1990ರ ದಶಕದಿಂದ ಇಲ್ಲಿಯವರೆಗೂ ದೇಶದ ವಿಭಜನೆಯಾಗಿ ಭಾರತ-ಪಾಕಿಸ್ತಾನವೆಂಬ ಎರಡು ರಾಷ್ಟ್ರಗಳು ಹುಟ್ಟುವ ಪ್ರಕ್ರಿಯೆಯಿಂದ ಮಹಿಳೆಯರ ಜೀವನ ಹೇಗೆ ತಲ್ಲಣಗೊಂಡಿತ್ತು ಎಂದು ತೋರಿಸುವ ಅನೇಕ ಅಧ್ಯಯನಗಳು ಬಂದಿವೆ. ರಾಷ್ಟ್ರೀಯ/ರಾಷ್ಟ್ರೀಯತೆಯ ಇತಿಹಾಸದ ಸಮಾಂತರವಾಗಿ ವಿಭಜನೆಯ ಸುತ್ತ ಒಂದು ಹೊಸ ಮಹಿಳಾ ಚರಿತ್ರೆಯನ್ನು ಬರೆಯುವ ಪ್ರಯತ್ನಗಳು ಆಗಿವೆ, ಆಗುತ್ತಿವೆ. ಈ ಚರಿತ್ರೆಗಳೊಡನೆ ಬೇಗಂ ಜಾನ್ ಸಿನಿಮಾ ಯಾವ ರೀತಿ ಸಂಭಾಷಣೆ ಕೈಗೊಳ್ಳುತ್ತದೆ ಎನ್ನುವುದು ಒಂದು ಕುತೂಹಲಕಾರಿ ವಿಷಯ.

“ನಮ್ಮಿಂದಲೇ ಬರುವುದಾ ಬೆಳಗು” (ಹಿಂದಿಯಲ್ಲಿ, “ವೋ ಸುಬಹ್ ಹಮೀ ಸೆ ಆಯೆಗಿ). ಸಿನಿಮಾದಲ್ಲಿ ಈ ಹಾಡನ್ನು ಕ್ಲೈಮಾಕ್ಸ್‍ನ ಕೊನೆಯ ಹಂತದಲ್ಲಿ ಅಳವಡಿಸಲಾಗಿದೆ. ಹಿನ್ನೆಲೆಯಲ್ಲಿ ಪಿಟೀಲಿನ ನಾದದಿಂದ ಶುರುವಾಗುವ ಈ ಹಾಡು, ಒಂದೆರಡು ನಿಮಿಷದ ವಿರಾಮದ ನಂತರ ಮತ್ತೆ ಹಿನ್ನೆಲೆಯಲ್ಲಿ ಹೆಣ್ಣು ಮತ್ತು ಗಂಡು ಧ್ವನಿಗಳಲ್ಲಿ ಕೇಳಿಬರುತ್ತದೆ. ಬೇಗಂ ಜಾನ್‍ನಲ್ಲಿ ಅಳವಡಿಸಿರುವ ಮೂರು ಚರಣಗಳು ಒಂದು ಪಲ್ಲವಿಯನ್ನು ಒಳಗೊಂಡಿರುವ ಈ ಹಾಡು, ಹೊಚ್ಚಹೊಸ ಹಾಡೇನಲ್ಲ. 1958ರಲ್ಲಿ ರಮೇಶ್ ಸಯ್ಗಲ್ ನಿರ್ದೇಶಿಸಿ, ರಾಜ್ ಕಪೂರ್-ಮಾಲಾ ಸಿನ್ಹ ನಟಿಸಿದ ಫಿರ್ ಸುಬಹ್ ಹೋಗಿ (ಮತ್ತೆ ಬೆಳಗಾಗುವುದು) ಎಂಬ ಸಿನಿಮಾದಲ್ಲಿ ಮೊದಲು ಬಳಕೆಯಾಗಿತ್ತು. ಉರ್ದು ಕವಿ ಸಾಹಿರ್ ಲುಧ್ಯಾನ್ವಿಯವರು ಸಾಹಿತ್ಯ ರಚಿಸಿರುವ ಈ ಹಾಡು ಅದೇ ಸಿನಿಮಾದಲ್ಲಿ ಸಣ್ಣ ವ್ಯತ್ಯಾಸದೊಂದಿಗೆ (ಮುಂದೆ ಲೇಖನದಲ್ಲಿ ಈ ವ್ಯತ್ಯಾಸದ ಕುರಿತಾಗಿ ಮತ್ತಷ್ಟು ಹೇಳುತ್ತೇನೆ) ಎರಡು ಬಾರಿ ಪುನರಾವರ್ತನೆಗೊಳ್ಳುತ್ತದೆ.

ಹಳೆಯ ಹಾಡಿಗೊಂದು ಅರ್ಥ
ಮೊದಲೇ ಹೇಳಿದಂತೆ ಬೇಗಂ ಜಾನ್‍ನಲ್ಲಿ ಬರುವ ಹಾಡು ಫಿರ್ ಸುಬಹ್ ಹೋಗಿ (1958) ಯಲ್ಲಿ ಮೊದಲೇ ಅಳವಡಿ ಸಲಾಗಿತ್ತು. ಆ ಸಿನಿಮಾದಲ್ಲಿ ಹಾಡು ಎರಡು ಸಲ ಬರುತ್ತದೆ. ಬೇಗಂ ಜಾನ್‍ನಲ್ಲಿ ಇರುವ ಚರಣಗಳನ್ನು ಒಳಗೊಂಡು, ಮೊದಲ ಸಲ ಬಂದಾಗ ಪಲ್ಲವಿಯಲ್ಲಿ ಒಂದು ಸಣ್ಣ ಬದಲಾವಣೆ ಇದೆ. “ವೊ ಸುಬಹ್ ಹಮೀ ಸೆ ಆಯೆಗಿ” (ನಮ್ಮಿಂದಲೇ ಬರುವುದಾ ಬೆಳಗು) ಬದಲಾಗಿ “ವೊ ಸುಬಹ್ ಕಭೀ ತೊ ಆಯೆಗಿ” (ಎಂದಾದರೂ ಬರುವುದಾ ಬೆಳಗು) ಎಂದು ಮೊದಲ ಸಲದ ಹಾಡಿನಲ್ಲಿ ಬರುತ್ತದೆ. ಸಿನಿಮಾದ ಕೊನೆಯಲ್ಲಿ ಮತ್ತೊಮ್ಮೆ ಬಂದಾಗ ಬೇಗಂ ಜಾನ್‍ನಲ್ಲಿ ಅಳವಡಿಸಿರದ ಬೇರೆ ಚರಣದ ಜೊತೆ, ಪಲ್ಲವಿಯಲ್ಲಿ “ವೊ ಸುಬಹ್ ಹಮೀ ಸೆ ಆಯೆಗಿ” (ನಮ್ಮಿಂದಲೇ ಬರುವುದಾ ಬೆಳಗು) ಎಂಬ ಸಾಲು ಬರುತ್ತದೆ. ಅಂದರೆ ಬೇಗಂ ಜಾನ್ ಸಿನಿಮಾದಲ್ಲಿ ಫಿರ್ ಸುಬಹ್ ಹೋಗಿಯ ಮೊದಲ ಸಲದ ಹಾಡಿನ ಚರಣದ ಜೊತೆ, ಎರಡನೆಯ ಸಲದ ಹಾಡಿನ ಪಲ್ಲವಿಯನ್ನು ಸೇರಿಸಿ ಅಳವಡಿಸಿಕೊಳ್ಳಲಾಗಿದೆ.

ಇನ್ನು ಫಿರ್ ಸುಬಹ್ ಹೋಗಿಯಲ್ಲಿ ಈ ಹಾಡುಗಳು ಬರುವ ಸಂದರ್ಭದ ಕಡೆ ತಿರುಗುವ ಮುನ್ನ ಆ ಸಿನಿಮಾದ ಕಡೆ ಗಮನ ಹರಿಸೋಣ. ಫಿರ್ ಸುಬಹ್ ಹೋಗಿ ಚಿತ್ರ ರಷ್ಯಾದ ಬರಹಗಾರ ದೊಸ್ತಾವೆಸ್ಕಿಯ ಕಾದಂಬರಿ ಕ್ರೈಮ್ ಅಂಡ್ ಪನಿಷ್ಮೆಂಟ್ ಆಧರಿಸಿದ ಸಿನಿಮಾ. ಬಡ ವಿದ್ಯಾರ್ಥಿ ರಾಮ್ ವಿದ್ಯಾಭ್ಯಾಸಕ್ಕೂ ದುಡ್ಡಿರದೆ, ಮನೆಬಾಡಿಗೆಗೂ ದುಡ್ಡಿರದೆ ಕಡುಬಡತನದಲ್ಲಿರುವಾಗ, ಸೋನಿ ಎಂಬುವ ಬಡಹುಡುಗಿಯ ಮೇಲೆ ಪ್ರೀತಿ ಹುಟ್ಟುತ್ತದೆ. ಆದರೆ ಕುಡಿತದ ಚಟಕ್ಕೆ ಬಿದ್ದ ಅವಳ ಅಪ್ಪ ಅವಳ ಮದುವೆಯನ್ನು ಹಣದ ಆಸೆಗೆ ಬಿದ್ದು, ವಯಸ್ಸಾದ ಶ್ರೀಮಂತನೊಂದಿಗೆ ಮಾಡಲು ಹೋದಾಗ, ಅವಳನ್ನು ಆ ಮದುವೆಯಿಂದ ಪಾರುಮಾಡಲು ರಾಮ್ ಸಾಲಕೊಡುವ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ . ದುಷ್ಟ ಧನ್ನೇಷಾನ ಖಜಾನೆಯಿಂದ ಹಣ ಕದಿಯಲು ಹೋಗುತ್ತಾನೆ. ಖಜಾನೆಯಿಂದ ಹಣ ಕದಿಯುತ್ತಿರಬೇಕಾದರೆ, ಧನ್ನೇಷಾ ಅಲ್ಲಿಗೆ ಬಂದಾಗ, ತನ್ನ ಕೃತ್ಯವನ್ನು ಮುಚ್ಚಿಹಾಕಲು ಆತುರದಲ್ಲಿ ಧನ್ನೇಷಾನನ್ನು ಕೊಲ್ಲುತ್ತಾನೆ. ಕೊಂದ ಪಾಪದ ಹೊರೆ ಅವನ ಮೇಲಿದ್ದರೂ ಪೋಲೀಸರಿಗೆ ಹೇಳಲು ಅಂಜುತ್ತಿರುತ್ತಾನೆ. ಈ ನಡುವೆ, ಸೋನಿಯ ತಂದೆ ಮದುವೆ ಮಂಟಪದಲ್ಲಿ ಸಾಯುವುದರಿಂದ, ವಯಸ್ಸಾದ ಧನಿಕನ ಜೊತೆ ಸೋನಿಯ ಮದುವೆ ಮುರಿದು ಬೀಳುತ್ತದೆ. ಅಷ್ಟರಲ್ಲಿ ಧನ್ನೇಷಾನ ಕೊಲೆಯ ಪ್ರಕರಣದಲ್ಲಿ ಬೇರೊಬ್ಬನನ್ನು ಬಂಧಿಸಲಾಗುವುದು. ಕೋರ್ಟಿನಲ್ಲಿ ವಿಚಾರಣೆ ನಡೆದು ಅವನ ವಿರುದ್ಧದ ತೀರ್ಪಾಗುವ ಮೊದಲು ರಾಮ್ ತಾನೇ ಆ ಕೊಲೆ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾನೆ. ಅವನ ಬಡತನ, ವಿವಶತೆಯನ್ನು ಪರಿಗಣಿಸಿ ಕೋರ್ಟು ಅವನಿಗೆ ಮೂರು ವರ್ಷದ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.

ಈ ಸಿನಿಮಾದಲ್ಲಿ ಮೊದಲ ಸಲ ನಾವು ಚರ್ಚಿಸುತ್ತಿರುವ ಹಾಡು ಬರುವುದು, ರಾಮ್-ಸೋನಿಯರ ಪ್ರೇಮ ಬಡತನದ ಜೊತೆ ಹೋರಾಡುತ್ತಿದ್ದ ಸಂದರ್ಭದಲ್ಲಿ. ಸೋನಿ ರಾತ್ರಿಯೆಲ್ಲಾ ಬಟ್ಟೆ ಹೊಲಿದು ರಾಮ್ ಕಾಲೇಜಿನ ಫೀಸ್ ಭರಿಸಲು ಬೇಕಾದ ಇಪ್ಪತ್ತು ರೂಪಾಯಿಗಳನ್ನು ಸಂಪಾದಿಸಲು ಗಿರಾಕಿಯ ಮನೆಗೆ ಬಟ್ಟೆಗಳನ್ನು ಕೊಡಲು ಹೋದಾಗ ಅವಳಿಗೆ ಮದ್ಯಪಾನ ಮಾಡಿಸಿ ಅವಳ ಮೇಲೆ ಬಲಾತ್ಕಾರವೆಸಗಲು ಗಿರಾಕಿ ಪ್ರಯತ್ನಿಸಿದ ಸಮಯದಲ್ಲಿ ರಾಮ್ ಅಲ್ಲಿಗೆ ಬಂದು ಅವಳನ್ನು ಅವನಿಂದ ಪಾರುಮಾಡುತ್ತಾನೆ. ದುಃಖ ಅವಮಾನಗಳಿಂದ ತನ್ನ ಬಡತನವನ್ನು ಗಿರಾಕಿ ಯಾವ ರೀತಿ ದುರುಪಯೋಗ ಪಡಿಸಲು ಯತ್ನಿಸಿಸದನೆಂದು ಹೇಳಿ ಬಡವರಿಗೆ ಮಾನ ಗೌರವ ಇರುವುದಿಲ್ಲವಾ ಎಂದು ಅವಳು ಕೇಳಿದಾಗ, ರಾಮ್ “ವೊ ಸುಬಹ್ ಕಭೀ ತೊ ಆಯೆಗೀ” (ಎಂದಾದರೂ ಬರುವುದು ಆ ಬೆಳಗು) ಎಂದು ಹಾಡುತ್ತಾನೆ; ಅವನ ಆಶಾವಾದದಿಂದ ಅವಳೂ ಉತ್ಸಾಹಗೊಂಡು ಅವಳೂ ಅವನೊಡನೆ ದನಿಗೂಡಿಸುತ್ತಾಳೆ.

ಎರಡನೆಯ ಬಾರಿ ಹಾಡು ಬರುವುದು ಸಿನಿಮಾದ ಕಡೆಯಲ್ಲಿ. ರಾಮ್‍ಗೆ ಮೂರು ವರ್ಷಗಳ ಶಿಕ್ಷೆ ಪ್ರಕಟನೆಯಾಗಿ ಅವನು ಜೈಲು ಸೇರಿದಾಗ, ಸೋನಿ ಅವನನ್ನು ನೋಡಲು ಬರುತ್ತಾಳೆ. ತನ್ನ ತಮ್ಮ-ತಂಗಿಯರು ಅವನ ಬಗ್ಗೆ ವಿಚಾರಿಸುತ್ತ ಎಂದು ಬರುವನೆಂದು ಕೇಳುತ್ತಿದ್ದಾರೆ ಎಂದು ಅವಳ ಹೇಳಿದಾಗ, ಅವಳ ಮಾತಿಗೆ ಉತ್ತರವೆಂಬಂತೆ “ವೊ ಸುಬಹ್ ಹಮೀ ಸೆ ಆಯೆಗೀ” (ನಮ್ಮಿಂದಲೇ ಬರುವುದಾ ಬೆಳಗು) ಎಂದು ರಾಮ್ ಹಾಡಲು ಶುರು ಮಾಡುತ್ತಾನೆ. ತಾನು, ತನ್ನಂತೆ ಬಡತನದ ಬೇಗೆಯಲ್ಲಿ ಬೆಂದ ಯುವಕರಿಂದ ನಾಳಿನ ಬೆಳಗು ಬರುವುದೆಂಬ ವಿಶ್ವಾಸ ಆ ಹಾಡಿನಲ್ಲಿದೆ.

ಫಿರ್ ಸುಬಹ್ ಹೋಗಿಯ ಈ ಎರಡೂ ಸಂದರ್ಭಗಳನ್ನು ನೋಡಿದಾಗ, ತಮ್ಮ ಕಾಲ ಇವತ್ತು ಚೆನ್ನಾಗಿಲ್ಲ, ಆದರೆ ಇಂದಿನ ಕತ್ತಲೆ ಕರಗಿ ನಾಳೆ ಬೆಳಗಾಗುತ್ತದೆ ಎಂಬ ಆಶಾಭಾವವಿದೆ. ಮೊದಲ ಸಲ ಒಳ್ಳೆಯ ಸಮಯ ಬರುವುದು ಎಂದು ಹಾಡಿದರೆ, ಎರಡನೆಯ ಸಲ, ಆದ ಅಚಾತುರ್ಯಕ್ಕೆ ಬೆಲೆ ತೆತ್ತು, ಮುಂದೆ ತಮ್ಮ ಜೀವನವನ್ನು ರೂಪಿಸಿ ಬೆಳಗಿನೆಡೆಗೆ ತೆಗೆದುಕೊಂಡು ಹೋಗಬೇಕೆನ್ನುವ ಒಂದು ಜವಾಬ್ದಾರಿ, ಮಾರ್ಪಾಡಾದ ಪಲ್ಲವಿಯಲ್ಲಿ ವ್ಯಕ್ತವಾಗಿದೆ. ಈ ಎರಡೂ ಸಂದರ್ಭಗಳಲ್ಲಿ ಬಡತನದ ಬೇಗೆಯಿಂದ, ಅದು ಹುಟ್ಟು ಹಾಕುವ ವಿವಶತೆಯಿಂದ ಹೊರಬಂದಾಗ ಹೊಸ ಬೆಳಗಾಗುವುದು ಎಂಬ ಅರ್ಥ ಬರುತ್ತದೆ. 1958ರ ಸಂದರ್ಭದಲ್ಲಿ ನೋಡಿದಾಗ, ಸ್ವಾತಂತ್ರ್ಯ ಬಂದು ಒಂದು ದಶಕದ ಮೇಲಾಗಿದ್ದರೂ ಹಣವಂತರು ಅಧಿಕಾರ ಮೆರೆಯುವುದು, ಬಡವರ ಜೀವನಕ್ಕೆ, ಆಶಯಗಳಿಗೆ ಬೆಲೆಯಿರದಿರುವುದು, ಇವುಗಳ ಟೀಕೆಯನ್ನು, ಕಮ್ಯೂನಿಸಮ್-ಸೋಷ್ಯಲಿಸಮ್‍ನ ಪ್ರಭಾವವಿದ್ದ ಸಾಹಿರ್ ಲುಧ್ಯಾನ್ವಿಯ ಈ ಸಾಲುಗಳಲ್ಲಿ ಕಾಣುತ್ತೇವೆ.

ಆದರೆ ಇದೇ ಹಾಡು ಬೇಗಂ ಜಾನ್‍ನಲ್ಲಿ ಬಂದಾಗ ಏನಾಗುತ್ತದೆ? ಇದನ್ನು ನೋಡುವ ಮೊದಲು, ಸ್ಥೂಲವಾಗಿ ಬೇಗಂ ಜಾನ್ ಸಿನಿಮಾದ ನಿರೂಪಣಾ ಕ್ರಮ ಮತ್ತದು ನಿರೂಪಿಸುವ ಕತೆಯ ಕಡೆ ಗಮನ ಹರಿಸೋಣ. ಸಿನಿಮಾ ಶುರುವಾಗುವುದು ವರ್ತಮಾನದಲ್ಲಿ, ಅಂದರೆ 2016ರಲ್ಲಿ. ದೆಹಲಿಯ 2012ರ ನಿರ್ಭಯ ಘಟನೆಯನ್ನು ನೆನಪಿಸುವ ಒಂದು ದೃಶ್ಯದಿಂದ ನಿರೂಪಣೆ ಪ್ರಾರಂಭವಾಗುವುದು. ಸಿನಿಮ ಶೀರ್ಷಿಕೆ ಬರುವ ಮೊದಲೇ ಸಿನಿಮಾಗೆ ಒಂದು ಮುನ್ನುಡಿಯಾಗಿ ಈ ದೃಶ್ಯ ಬರುತ್ತದೆ. ದೆಹಲಿಯ ಕನ್ನಾಟ್ ಪ್ಲೇಸಿನ ಬಸ್ ಒಂದರಲ್ಲಿ ಅಕ್ಕಪಕ್ಕ ಕೂತು ಪ್ರಯಾಣಿಸುತ್ತಿದ್ದ ಹುಡುಗ-ಹುಡುಗಿಯನ್ನು ಬಸ್ ಏರಿದ ಕುಡಿದ ಅಮಲಿನಲ್ಲಿದ್ದ ಮೂರು-ನಾಲ್ಕು ಹುಡುಗರು ಕೀಟಲೆ ಮಾಡಿ ತೊಂದರೆ ಕೊಡಲು ಪ್ರಯತ್ನಿಸುತ್ತಾರೆ. ಅದನ್ನು ವಿರೋಧಿಸಿದ ಆ ಹುಡುಗ-ಹುಡುಗಿಯನ್ನು ಅವರು ಬಸ್ಸಿನಲ್ಲೇ ಹೊಡೆಯಲಾರಂಭಿಸುತ್ತಾರೆ. ನಂತರ ಬಸ್ ನಿಲ್ಲಿಸಿ ಹುಡುಗನಿಗೆ ಹೊಡೆದು ಹುಡುಗಿಯ ಮೇಲೆ ಬಲತ್ಕಾರವೆಸಗಲು ಪ್ರಯತ್ನಿಸಿದಾಗ, ಹುಡುಗಿ ಕತ್ತಲೆಯಲ್ಲಿ ಓಡಿಹೋಗಿ, ಅಲ್ಲಿಗೆ ಆ ಕ್ಷಣ ಬಂದ ಒಬ್ಬ ಮುದುಕಿಯ ಹಿಂದೆ ನಿಂತುಕೊಳ್ಳುತ್ತಾಳೆ. ಮುದುಕಿಯ ಮುಖ ಸುಕ್ಕಾಗಿದ್ದರೂ, ಸಣ್ಣ ಹುಡುಗಿಯಂತೆ ರಿಬ್ಬನ್ ಕಟ್ಟಿದ ಎರಡು ಜಡೆಗಳಲ್ಲಿರುತ್ತಾಳೆ.

ಹುಡುಗರು ಆ ಮುದುಕಿಯನ್ನು ಓಡಿಸಲು ಯತ್ನಿಸಿದಾಗ, ಮುದುಕಿ, ಮಹಾಶ್ವೇತಾದೇವಿಯ “ದೋಪ್ದಿ” ಕತೆ ನೆನಪಿಸುವ ರೀತಿಯಲ್ಲಿ ತನ್ನ ಬಟ್ಟೆಗಳನ್ನು ಕಳಚಿ, ತನ್ನ ನಗ್ನತೆಯಿಂದ ಅವರನ್ನು ಎದುರಿಸುತ್ತಾ, ಬೆರಗುಗೊಳಿಸುತ್ತಾಳೆ. ಇದನ್ನು ಕಂಡ ಹುಡುಗರು ಏನೂ ಮಾಡಲು ತೋಚದೆ ಮುಜುಗರ, ಜಿಗುಪ್ಸೆಗೊಂಡು ಓಡಿಹೋಗುತ್ತಾರೆ. ಈ ದೃಶ್ಯದ ನಂತರ ಸಿನಿಮಾದ ಶೀರ್ಷಿಕೆ ಬರುತ್ತದೆ. ತದನಂತರ, ಅಮಿತಾಭ್ ಬಚ್ಚನ್ನ್‍ನ ಹಿನ್ನೆಲೆ ನಿರೂಪಣಾ ಧ್ವನಿಯಲ್ಲಿ ಕಪ್ಪ-ಬಿಳುಪು ದೃಶ್ಯಗಳಲ್ಲಿ, ಲಾರ್ಡ್ ಮೌಂಟಬ್ಯಾಟನ್ ಮತ್ತು ಸರ್ ಸಿರಿಲ್ ರ್ಯಾಡ್‍ಕ್ಲಿಫ್ ಅವರುಗಳು 1947ರಲ್ಲಿ ನಾಲ್ಕು ವಾರದಲ್ಲಿ ನಕ್ಷೆಯಲ್ಲಿ ಗೀರೆಳೆದು, ದೇಶದ ವಿಭಜನೆ ಹೇಗೆ ಮಾಡಿದರು, ಅದರಿಂದಾದ ಪರಿಣಾಮಗಳು – ಜನ ಜಾನುವಾರು, ಭೂಮಿಯ ವಿಭಜನೆಗಳ ಕುರಿತಾಗಿ ತಿಳಿಸುತ್ತಾರೆ. ಹೀಗೆ ಗಡಿ ನಿರ್ಧರಿಸುತ್ತಿರುವಾಗ, ದೇಶವನ್ನು ವಿಭಜಿಸುತ್ತಿರುವ ಗಡಿಗೆ ಬೇಗಂ ಜಾನಿನ ವೇಶ್ಯಾಗೃಹ ಹೇಗೆ ಅಡ್ಡಬಂದಿತು ಎಂದು ಹೇಳುತ್ತ, ಮತ್ತೆ ಬಣ್ಣದ ದೃಶ್ಯ ತೆರೆಯ ಮೇಲೆ ಶುರುವಾಗುತ್ತದೆ; ಹಿನ್ನಲೆ ನಿರೂಪಣೆ ನಿಂತು ಬೇಗಂ ಜಾನ್ ಮತ್ತಿತರ ವೇಶ್ಯೆಯರ ಕತೆ ಪರದೆಯ ಮೇಲೆ ತೆರೆದುಕೊಳ್ಳುತ್ತದೆ, ಮತ್ತು ಆ ಕ್ಷಣದಿಂದ ಪೂರ್ತಿ ಸಿನಿಮ 1947ಕ್ಕೆ ತಿರುಗುತ್ತದೆ.

ಅಮಿತಾಭ್ ಬಚ್ಚನ್ ಅವರ ಹಿನ್ನೆಲೆ ನಿರೂಪಣೆಯೊಂದಿಗೆ ಸಿನಿಮಾ ಹೋಗುವ ಭೂತಕಾಲಕ್ಕೂ, ಸಿನಿಮಾ ಶುರುವಾಗುವ ಇವತ್ತಿನ ದೆಹಲಿಯ ದೃಶ್ಯಕ್ಕೂ ಏನು ಸಂಬಂಧ? ವರ್ತಮಾನ-ಭೂತಗಳ ನಂಟು ಏನು? ಹಿಂದೆ ಆಗಿ ಹೋದ ವೇಶ್ಯೆಯ ಕತೆಯ ನಿರೂಪಣೆ, ಇವತ್ತು ನಡೆಯುತ್ತಿರುವ ಹಣ್ಣಿನ ಶೋಷಣೆಯ ಪುನರಾವರ್ತನೆಯೇ? ದಿಟ್ಟತನದಿಂದ ಎದುರಿಸಿದ ಆ ಮುದುಕಿಯನ್ನು ಯಾವ ಕೊಂಡಿ ಇಂದಿನ ತೊಂದರೆಗೊಳಗಾದ, ಮಾನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಆ ಹುಡುಗಿಗೆ ಬೆಸೆದಿದೆ? ಶೋಷಣೆ, ಬಲಾತ್ಕಾರಗಳನ್ನು ಎದುರಿಸುತ್ತಿರುವ ಇಂದಿನ ಹೆಣ್ಣಿಗೆ ವೇಶ್ಯೆಯ ಹಿನ್ನೆಲೆಯಿಂದ ಬಂದವಳು ಆದರ್ಶಪ್ರಾಯಳಾಗಬಲ್ಲಳೇ? ವೇಶ್ಯೆಯ ವೀರಗಾತೆಯ ನಿರೂಪಣೆ ನಾಳಿನ ಸಮಾಜಕ್ಕೊಂದು ಮಾದರಿಯಾಗಬಹುದೇ? “ವೇಶ್ಯೆಯರಂತೆ ಬಾಳಿ, ರಾಣಿಯರಂತೆ ಹೋರಾಡಿದ” ಈ ಹೆಂಗಸರು ಮಹಿಳಾ ಚರಿತ್ರೆಯ ಬುನಾದಿಯಾಗಬಹುದೇ? ಬೇಗಂ ಜಾನ್ ಸಿನಿಮ ಪ್ರಾರಂಭದಲ್ಲಿ ಹುಟ್ಟುಹಾಕುವ ಈ ಪ್ರಶ್ನೆಗಳನ್ನು ಉದ್ದೇಶಿಸುವ ರೀತಿ ಕುತೂಹಲಕಾರಿಯಾಗಿದೆ.

ಚಿತ್ರದಲ್ಲಿ ಬರುವ ಒಂದು ಪಾತ್ರ ಲಾಡ್ಲಿ. 11-12 ವರ್ಷದ ಎಳೆ ಬಾಲಕಿ. ಜಮೀಲ ಎಂಬ ವೇಶ್ಯೆಯ ಮಗಳಾದರೂ ವೇಶ್ಯಾಗೃಹದಲ್ಲೆಲ್ಲರ ಮುದ್ದಿನ ಮಗಳು. ಬೇಗಂ ಜಾನ್ ಅಮ್ಮ ಎಂದು ಸಂಬೋಧಿಸುವ ವೃದ್ಧೆ, ಲಾಡ್ಲಿಗೆ ಅಜ್ಜಿಯಂತೆ ಕತೆಗಳನ್ನು ಹೇಳುತ್ತಾಳೆ. ವೇಶ್ಯಾಗೃಹಕ್ಕೆ ಕುತ್ತು ಬಂದು ಸಂಕಷ್ಟಗಳು ಎದುರಾಗುವ ಮೊದಲು ಅಜ್ಜಿ ಲಾಡ್ಲಿಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕತೆಯನ್ನೂ, ಮೀರಾಬಾಯಿ ಕತೆಯನ್ನೂ, ರಜಿಯಾ ಸುಲ್ತಾನರ ಕತೆಯನ್ನೂ ಹೇಳುತ್ತಿರುತ್ತಾಳೆ. ತಮಗೆ ಬಂದ ಕಷ್ಟಗಳ ವಿರುದ್ಧ ಹೋರಾಡಿ ಹೇಗೆ ವೀರಮಹಿಳೆ, ಸಾಧಕರೆನಿಸಿಕೊಂಡರು ಎಂದು ವಿವರಿಸುತ್ತಾಳೆ. ಅಜ್ಜಿ ಇವರ ಕತೆಗಳನ್ನು ಹೇಳುವಾಗ ಲಾಡ್ಲಿಗೆ ಬೇಗಂ ಜಾನ್ ಆ ವೀರಮಹಿಳೆಯರ ಸ್ವರೂಪದಲ್ಲಿ ಕಣ್ಣಮುಂದೆ ಬರುತ್ತಾಳೆ. ಅದಲ್ಲದೆ ಬೇಗಂಜಾನಿನಂತೆ ತಾನೂ ಕೂಡ, ಬೇಗಂ ಜಾನಿನ ಕಿರಿಯ ಸ್ವರೂಪವಾಗಿ ಚಿತ್ರಿಸಿಕೊಳ್ಳುತ್ತಾಳೆ. ಬೇಗಂ ಜಾನ್ ರಜಿಯಾ ಸುಲ್ತಾನ್ ಆದರೆ, ತಾನು ಕಿರಿಯ ರಜಿಯ.

ಲಾಡ್ಲಿಯ ಕಣ್ಣಿನಲ್ಲಿ ಬೇಗಂ ಜಾನ್, ಆಗಿ ಹೋದ ಆ ವೀರ ಮಹಿಳೆಯರ ಮೂರ್ತ ಸ್ವರೂಪ. ಸಮಾಜ ತುಚ್ಛೀಕರಿಸುವ ಸಾಮಾನ್ಯ ವೇಶ್ಯೆಯಾಗಿ ಮೂಡದೆ, ಬೇಗಂ ಜಾನ್ ಲಾಡ್ಲಿಯ ದೃಷ್ಟಿಯ ಮೂಲಕ ಸಿನಿಮಾದಲ್ಲಿ ನಮ್ಮ ಸಮಾಜ ಕೊಂಡಾಡುವ ಅಸಾಮಾನ್ಯ ಹೆಣ್ಣುಗಳಂತೆ ಗೋಚರಿಸುತ್ತಾಳೆ. ಅಲ್ಲದೆ ಅವರ/ಅವಳಂತೆ ತಾನೂ ಆಗಬೇಕೆಂಬ ಮಹದಿಚ್ಛೆಯನ್ನು ಲಾಡ್ಲಿಯಲ್ಲಿ ನೋಡುತ್ತೇವೆ.

ಲಾಡ್ಲಿಗೆ ಹೇಗೇ ಕಾಣಲೀ, ಬೇಗಂ ಜಾನ್ ಮತ್ತು ಇತರ ವೇಶ್ಯೆಯರು ಸಮಾಜಬಾಹಿರರಾಗಿದ್ದರು. ಅದಕ್ಕೆ ಸಾಕ್ಷಿಯೆಂಬಂತೆ ಊರಾಚೆ ಇದ್ದ ಅವರ ವೇಶ್ಯಾಗೃಹ. ಹಾಗಾಗಿ ವಿಭಜನೆಯಾಗಿ ದೇಶಗಳೆರಡು ಹುಟ್ಟುವ ಗಡಿ ಅವಳ ವೇಶ್ಯಾಗೃಹದ ನಡುವೆ ಹಾದುಹೋದಾಗ, ಅವಳು ತನ್ನ ಮನೆಯ ಇಬ್ಭಾಗದ ವಿರುದ್ಧ ಸೆಟೆದು ನಿಲ್ಲುತ್ತಾಳೆ. ಸಮಾಜದ ಬಾಹಿರವಾಗಿರುವ ಅವರು ಆ ಸಮಾಜದ ಕಾನೂನಿನ ಬಾಹಿರ ಕೂಡ ಎಂದು ತರ್ಕಿಸುತ್ತ ತನ್ನ ಸ್ವಾತಂತ್ರ್ಯವನ್ನ ಸ್ವ-ಘೋಷಿಸುತ್ತಾಳೆ. ಆ ಸಮಾಜದ ಜಾತಿ ಮತಗಳ ಭೇದ-ಭಾವ ಇರದ ತನ್ನ ರಾಜ್ಯದಲ್ಲಿ ಸಮಾಜದ ಯಾವ ಕಟ್ಟುಪಾಡುಗಳಿಲ್ಲ, ತಮ್ಮ ವೃತ್ತಿಯನ್ನು ನಿರ್ವಹಿಸಲು ಬೇಕಾದ ನಿಯಮಗಳು, ಕಾಯ್ದೆಗಳಿಗೆ ತಾವು ಬದ್ಧರೆಂದೂ, ಹೊಸ ಸರ್ಕಾರದ ಭಾರತ-ಪಾಕಿಸ್ತಾನದ ಅಧಿಕಾರಿಗಳೇ ಆಗಲೀ, ಊರಿನ ಪೋಲೀಸರೇ ಆಗಲಿ ಅವರ ಅಧಿಕಾರಕ್ಕೆ ತನ್ನ ಸಾಮ್ರಾಜ್ಯದಲ್ಲಿ ಯಾವ ಬೆಲೆಯೂ ಇಲ್ಲ ಎಂದು ವಾದಿಸುತ್ತಾಳೆ. ಆ ಪ್ರಾಂತ್ಯದ ರಾಜನ ಸುರಕ್ಷಾಹಸ್ತದಿಂದ ತಮ್ಮ ಜೀವನ, ವೃತ್ತಿಬದುಕನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿರುವ ಅವರು, ಯಾವ ರೀತಿಯಲ್ಲೂ ಹೊಸ ಸರ್ಕಾರಕ್ಕೆ ಬದ್ಧವಲ್ಲವೆನ್ನುತ್ತಾಳೆ. ಹೊಸ ದೇಶಗಳು ಹುಟ್ಟಲು ತನ್ನ ಮನೆಮಠ ಇಬ್ಭಾಗವಾಗಬೇಕಾದರೇ, ಅಧಿಕಾರಿಗಳು ಗುರುತುಪಡಿಸುವ ದೇಶದ ಗಡಿಯೊಳಗೆ ಸೇರಬೇಕಾದರೇ, ತಮ್ಮ ಭೂಮಿ, ತಮ್ಮ ಮೈಮನಸ್ಸುಗಳ ಸ್ವಾತಂತ್ರ್ಯವನ್ನು ತ್ಯಜಿಸಬೇಕಾಗುತ್ತದೆ. ಹಾಗೆ ಮಾಡುವುದು, ಹೊಸ ದೇಶದಲ್ಲಿ ವಿಲೀನಗೊಳ್ಳುವುದು ಗುಲಾಮಗಿರಿಯ ಸಂಕೇತವೆಂದು ಭಾವಿಸುತ್ತಾಳೆ.

ಕಾನೂನಾತ್ಮಕವಾಗಿ ಬೇಗಂ ಜಾನ್ ಮತ್ತವಳೊಡನಿದ್ದ ಇತರ ವೇಶ್ಯೆಯರನ್ನು ಎತ್ತಂಗಡಿ ಮಾಡಿಸಲು ವಿಫಲರಾದ ಭಾರತ-ಪಾಕಿಸ್ತಾನಗಳನ್ನು ಪ್ರತಿನಿಧಿಸುತ್ತಿದ್ದ ಅಧಿಕಾರಿಗಳು, ಕಬೀರನೆಂಬ ಲಂಪಟ ಮತ್ತವನ ಖಾಸಗಿ ಸೇನೆಯ ಸಹಾಯ ಪಡೆದು ವೇಶ್ಯೆಯರನ್ನು ಓಡಿಸಲು ಪ್ರಯತ್ನಿಸುತ್ತಾರೆ. ಆದರದಷ್ಟು ಸುಲಭವಾಗಿರಲಿಲ್ಲ: ವೇಶ್ಯೆಯರೆಲ್ಲರೂ ಬಂದೂಕು ಚಲಾಯಿಸುವುದರಲ್ಲಿ ತಾಲೀಮು ತೆಗೆದುಕೊಂಡು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಜ್ಜುಗೊಳ್ಳುತ್ತಾರೆ. ಅದೇ ಸಮಯದಲ್ಲಿ, ಲಾಡ್ಲಿ, ಅವರಮ್ಮ ಜಮೀಲಾ, ಮತ್ತು ವೇಶ್ಯಾಗೃಹಕ್ಕೆ ಆಗ ತಾನೇ ತನ್ನ ಕುಟುಂಬದಿಂದ ತಿರಸ್ಕೃತಗೊಂಡು, ವೇಶ್ಯಾಗೃಹದಲ್ಲಿ ಶಬ್ನಂ ಎಂದು ನಾಮಕರಣ ಮಾಡಿಸಿಕೊಂಡ ಮತ್ತೊಬ್ಬ ಎಳೆ ಹುಡುಗಿಯರನ್ನು, ಸುರಕ್ಷಿತವಲ್ಲದ ವೇಶ್ಯಾಗೃಹವನ್ನು ತ್ಯಜಿಸಬೇಕೆಂದು ಬೇಗಂ ಜಾನ್ ಒತ್ತಾಯಿಸುತ್ತಾಳೆ. ಅವಳ ಒತ್ತಾಯದ ಮೇರೆಗೆ ರಾತ್ರಿ ಮನೆಬಿಟ್ಟು ಹೊರಟ ಮೂವರ ಮುಂದಾಗುವವನು ಆ ಊರಿನ ಪೋಲೀಸ್ ಅಧಿಕಾರಿ. ವೇಶ್ಯೆಯ ಜೊತೆ ಮಜ ತೆಗೆದುಕೊಳ್ಳಲು ಇದು ಸೂಕ್ತ ಸಮಯವೆಂದು ತನ್ನ ಪ್ಯಾಂಟ್ ಕಳಚುತ್ತಾ, ಕೈಮುಗಿದು ಅಳುತ್ತಾ ಅಂಗಲಾಚುತ್ತಿದ್ದ ಜಮೀಲಾಳ ಕಡೆ ಬರುತ್ತಿದ್ದಂತೆ, ಲಾಡ್ಲಿ ಅವಳ ಮುಂದೆ ನಿಂತು ತನ್ನ ಬಟ್ಟೆಯನ್ನು ಕಳಚಲು ಪ್ರಾರಂಭಿಸುತ್ತಾಳೆ.

ಲಾಡ್ಲಿ ಬಟ್ಟೆಬಿಚ್ಚುತ್ತಿರುವಂತೆ ತನ್ನ ತಾಯಿಯನ್ನು ಬಲಾತ್ಕರಿಸಿ ಅವಮಾನಿಸಲು ಬಂದ ಪೋಲೀಸನಿಗೆ ಕಸಿವಿಸಿಯಾಗಿ, ನೀನು ನನ್ನ ಮಗಳಂತೆ, ಹಾಗೆ ಮಾಡಬೇಡವೆಂದು ಬೇಡುತ್ತಿರುವಂತೆಯೇ ಅವಳು ಪೂರ್ತಿ ಬೆತ್ತಲೆಯಾಗುತ್ತಾಳೆ. ಚಿತ್ರದ ಆರಂಭದಲ್ಲಿ ಬಂದ ದೃಶ್ಯದ ಮರುರೂಪ ಈ ದೃಶ್ಯ. ಅದೇ ರಿಬ್ಬನ್ ಕಟ್ಟಿದ ಎರಡು ಜಡೆ. ಯಾವ ಹೆಣ್ಣಿನ ದೇಹವನ್ನು ಅವಳ ದೌರ್ಬಲ್ಯವಾಗಿ ಸಮಾಜ ಮಾರ್ಪಡಿಸುತ್ತೋ ಅದೇ ದೇಹವನ್ನು ಅಸ್ತ್ರವಾಗಿ ಬಳಸಿ ಎದುರಾಳಿಯನ್ನು ಸೋಲಿಸಿ ಅವಮಾನಿಸುತ್ತಾಳೆ. ಇಲ್ಲಿ ಯಾವ ಕೃಷ್ಣನೂ ಬಂದು ಬೆತ್ತಲಾಗಿಸುವ ಹೆಣ್ಣಿಗೆ ವಸ್ತ್ರ ನೀಡಿ ಅವಳ ಮಾನ ಕಾಪಾಡುವ ಅವಶ್ಯಕತೆ ಇಲ್ಲ; ಬಲಾತ್ಕಾರ ಮಾಡಿ ಅವಮಾನಿಸಲು ಬಂದವರಿಗೆ ತನ್ನ ನಗ್ನತೆಯಿಂದಲೇ ಸವಾಲೆಸೆಯುತ್ತಾಳೆ.

ಇತ್ತ ಕಡೆ ಕಬೀರನ ಖಾಸಗಿ ಸೇನೆ ವೇಶ್ಯಾಗೃಹದ ಮೇಲೆ ಧಾಳಿ ಮಾಡುತ್ತದೆ. ವೇಶ್ಯೆಯರು ತಮ್ಮ ಬಂದೂಕುಗಳಿಂದ ಅವರ ಒಂದೊಂದು ಗುಂಡಿಗೂ ಉತ್ತರಿಸುತ್ತಾರೆ. ಆದರೆ ಕಬೀರನ ಕಡೆಯವರು ಅಷ್ಟಕ್ಕೇ ನಿಲ್ಲಿಸದೆ ವೇಶ್ಯಾಗೃಹದೊಳಗೆ ಉರಿಯುವ ಕೊಳ್ಳಿಗಳನ್ನು ಬಿಸುಡುತ್ತಾರೆ. ತಮ್ಮ ಮನೆ ಹೊತ್ತಿ ಉರಿಯುತ್ತದೆ, ತಮ್ಮ ದಂಧೆಯ ಭಾಗವಾಗಿ ಅವರನ್ನು ನೋಡಿಕೊಳ್ಳುತ್ತಿದ್ದ ಸಲೀಂಗೂ ಬೆಂಕಿ ತಗುಲಿ ಅವನೂ ಉರಿಯುತ್ತಿದ್ದಂತೆ ಬೇಗಂ ಜಾನ್ ಅವನ ಉರಿಯುವ ದೇಹದ ವೇದನೆಯನ್ನು ಗುಂಡೇಟಿನಿಂದ ಕೊನೆಗೊಳಿಸುತ್ತಾಳೆ. ಇನ್ನೇನು ಮನೆ ಖಾಲಿಯಾಯಿತು, ನಿರ್ಗತಿಕರಾದ ವೇಶ್ಯೆಯರು ತಮ್ಮ ಕೈಸೇರಿ ಮಜ ಮಾಡಬಹುದೆಂದು ಕಬೀರ ಹರ್ಷಿಸುತ್ತಿರುವಾಗಲೇ, ಬೇಗಂ ಜಾನ್ ಮತ್ತಿತರ ವೇಶ್ಯೆಯರು ಉರಿಯುವ ಮನೆಯತ್ತ ತಿರುಗುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ “ವೊ ಸುಬಹ್ ಹಮೀ ಸೆ ಆಯೆಗಿ” ಹಾಡಿನ ರಾಗ ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ಹೋರಾಟದ ಆಯಾಸ, ಮನೆಯನ್ನು ಉಳಿಸಿಕೊಳ್ಳಲಾಗದ ಹತಾಶೆಯನ್ನು ಬದಿಗಿಟ್ಟು, ಅವರ ಆ ಸೋಲಿನ ಸ್ಥಿತಿಯಲ್ಲೂ ಅವರಿಗಾಗಿ ಹದ್ದಿನಂತೆ ಕಾಯುತ್ತಿರುವ ಕಬೀರ ಮತ್ತವನ ಸೇನಯ ಕೈಗೆ ಸಿಗಬಾರದು, ಭಾರತ-ಪಾಕಿಸ್ತಾನದ ಅಧಿಕಾರಿಗಳ ಆಜ್ಞೆಗೆ ಮಣಿಯಬಾರದೆಂದು, ನಗುನಗುತ್ತಾ ಉರಿಯುವ ಮನೆಯೊಳಗೆ ಹೋಗುತ್ತಾರೆ; ಇವರನ್ನು ಹೊರಹಾಕಲು ಪ್ರಯತ್ನಿಸಿದ ಎಲ್ಲರೂ ಭಯಗ್ರಸ್ಥರಾಗಿ ನೋಡುತ್ತ ಚೀರುತ್ತಾ ಇರುವಂತೆ, ಈ ವೇಶ್ಯೆಯರು ಮನೆಯ ಬಾಗಿಲು ಮುಚ್ಚಿಕೊಳ್ಳುತ್ತಾರೆ. ಪಿಟೀಲಿನ ರಾಗ ಕಡಿಮೆಯಾಗುತ್ತಿದ್ದಂತೆ, ಉರಿಯುವ ವೇಶ್ಯಾಗೃಹದ ಒಳಗೆ ಒಂದು ಕೋಣೆಯಲ್ಲೆಲ್ಲರೂ ಸೇರಿ ತಮ್ಮ ಅಂತ್ಯವನ್ನು ಎದುರುನೋಡುತ್ತಿರುವಾಗ, ಬೇಗಂ ಜಾನ್, ಲಾಡ್ಲಿಗೆ ಯಾವಾಗಲೂ ಕತೆ ಹೇಳುತ್ತಿದ್ದ ಅಜ್ಜಿಗೆ ರಾಣಿ ಪದ್ಮಾವತಿಯ ಕತೆ ಹೇಳಲು ಆದೇಶಿಸುತ್ತಾಳೆ. ಹಿನ್ನೆಲೆ ರಾಗ ನಿಂತು ಪದ್ಮಾವತಿಯ ಕತೆ ಶುರುವಾಗುತ್ತದೆ. ಎದುರಾಳಿಗೆ ಸೋತು ತಮ್ಮ ದೇಹದ ಮೇಲಿನ ಅಧಿಕಾರ ಸಮರ್ಪಿಸಿ ಗುಲಾಮರಾಗಿ ಬದುಕುವುದು ರಾಣಿ ಪದ್ಮಾವತಿಗೆಷ್ಟು ಅಸಹ್ಯಕರವಾಗಿತ್ತೋ ಇವರಿಗೂ ಅಷ್ಟೆ: ಆಕ್ರಮಣಕಾರ ತಮ್ಮನ್ನು ವಶಪಡಿಸಿಕೊಳ್ಳುವುದು ಇಚ್ಛಿಸದೆ ಅಗ್ನಿಪ್ರವೇಶಿಸಿದ ರಾಣಿಗೆ ಇದ್ದ ಗೌರವ, ಘನತೆ, ಮರ್ಯಾದೆ ತಮಗೂ ಇದೆ ಎನ್ನುವಂತೆ, ರಾಣಿ/ಪತಿವ್ರತೆಗೂ-ವೇಶ್ಯೆಗೂ ಆಶ್ಚರ್ಯಕರ ಮತ್ತು ಅನಿರೀಕ್ಷಿತ ಸಮಾನತೆಯನ್ನು ಈ ಮೂಲಕ ಸಿನಿಮ ಸೃಷ್ಟಿಸುತ್ತದೆ.

ಕತೆ ಹೇಳುವ ಧ್ವನಿ ಸಣ್ಣದಾಗುತ್ತಿದ್ದಂತೆ ಗಂಡು ಧ್ವನಿಯಲ್ಲಿ “ವೊ ಸುಬಹ್ ಹಮೀ ಸೆ ಆಯೆಗಿ” ಹಾಡು ಶುರುವಾಗುತ್ತದೆ. ಈ ಹಾಡಿನ ಚರಣ-ಪಲ್ಲವಿಗಳು ಹಿನ್ನೆಲೆಯಲ್ಲಿ ಕೇಳಿಬರುತ್ತಿರುವಾಗಲೇ ಅನೇಕ ದೃಶ್ಯಗಳ ಮೊಂತಾಜ್ ತೆರೆ ಮೇಲೆ ಬರುತ್ತವೆ; ಈ ಸಿನಿಮಾದ ನಿರೂಪಣೆ ಪ್ರಯಾಣಿಸುವ ಅನೇಕ ‘ಕಾಲ’ಗಳ ಮಿಶ್ರಣ ಈ ದೃಶ್ಯಗಳು: 1) ಉರಿಯುತ್ತಿರುವ ಮನೆ, ಉರಿಯುವ ಮನೆಯೊಳಗೆ ಬೆಂದ ದೇಹಗಳ ಭಾಗಗಳು, ಮನೆಯ ದಿನನಿತ್ಯ ಬಳಸುವ, ಮನೆಯನ್ನು ಅಲಂಕರಿಸಿದ ವಸ್ತುಗಳು, ತಮ್ಮ ನೆಚ್ಚಿನ ಸಲೀಮನು ಬಳಸಿದ ಸುಟ್ಟ ಬಂದೂಕು, ಬದುಕಿಬಾಳಿ ಕರ್ಕಲಾದ ಪಳೆಯುಳಿಗಳು; ಉರಿಯುತ್ತಿರುವ ಮನೆಯನ್ನು ಹತಾಶೆ, ದಿಗ್ಭ್ರಮೆಗಳಿಂದ ನಿಂತು ನೋಡುತ್ತಿರುವ ಘನ ಅಧಿಕಾರಿಗಳು; ಇನ್ನೂ ಹೊಗೆಯಾಡುತ್ತಿರುವ ಮನೆಯನ್ನು ಬೆಳಗಾದ ಮೇಲೆ ಕುತೂಹಲದಿಂದ ನೋಡಲು ಬಂದ ಊರಿನವರು; 2) ಬಾಲಕಿಯಿಂದ ಸೋತು ಅವಮಾನಿತನಾಗಿ ಅಧಿಕಾರ ತ್ಯಜಿಸಿದ ಊರಿನ ಪೋಲಿಸ್ ಅಧಿಕಾರಿ, ತಮ್ಮ ಪಾಪಕರ್ಮಗಳನ್ನು ಅರಗಿಸಿಕೊಳ್ಳಲಾರದೇ, ಗುಂಡು ಹಾರಿಸಿಕೊಂಡು ಆತ್ಮಹತ್ಯೆಮಾಡಿಕೊಂಡ ಪಾಕಿಸ್ತಾನ ಸರ್ಕಾರದ ಅಧಿಕಾರಿ, ತಮ್ಮ ಪಾಪ ಕೃತ್ಯಗಳನ್ನು ಮರೆಯಲು ಕುಡಿತದ ಮೊರೆಹೋದ ಭಾರತದ ಅಧಿಕಾರಿ; 3) 2016ರ ಬೆತ್ತಲೆ ವೃದ್ಧೆ – 1947ರ ಬೆತ್ತಲೆ ಬಾಲಕಿ; 4) ಸಮಾಜದಿಂದ ದೂರವಾದರೂ ತಮ್ಮ ತಮ್ಮ ನಡುವಿನಲ್ಲೇ ಸ್ನೇಹ, ಪ್ರೀತಿ ಬೆಳೆಸಿ, ಸುಖದುಃಖಗಳನ್ನು ತಮ್ಮತಮ್ಮಲ್ಲೇ ಹಂಚಿಕೊಂಡು ಜೀವನ ನಡೆಸುತ್ತಿದ್ದ ವೇಶ್ಯೆಯರ ಜೀವನದ ಅನೇಕ ಸುಂದರ ಕ್ಷಣಗಳು, ಮತ್ತವು ದುರಂತದಲ್ಲಿ ಅಂತ್ಯಗೊಂಡ ರೀತಿ, ಆ ಜೀವಂತ ಬದುಕಿನ ಸುಂದರ ಕ್ಷಣಗಳ ನಡುವೆ ಭಾರತದ ತ್ರಿವರ್ಣ ಧ್ವಜ, ಅದನ್ನು ಏರಿಸಲು ಕೊನೆಗೊಳಿಸಿದ ಜೀವಗಳು, ಹಾಗೇ ಮಬ್ಬಿನಲ್ಲಿ ಪರದೆಯ ಮೇಲೆ ಮೂಡುವ ಭಾರತದ ತ್ರಿವರ್ಣ ಧ್ವಜ, ಇದನ್ನು ಮೆರೆಸಲು ಕತ್ತಲಲ್ಲಿ ಬೆಂಕಿಯ ಬೇಗೆಯಲ್ಲಿ ಉರಿದುಹೋದ ಜೀವಗಳ ದೃಶ್ಯ.

ಡಾ. ಎಚ್. ಎಸ್. ನಿಖಿಲಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *