ವಿಶ್ವ ಕವಿತಾ ದಿನ/ ಜಗದೆಲ್ಲ ಕವಿತೆಗಳೇ ಬನ್ನಿ- ಎಂ.ಆರ್. ಕಮಲ
ಜಗದೆಲ್ಲ ಕವಿತೆಗಳೇ ಬನ್ನಿ !
ಬೇಲಿಯಲ್ಲಿ ತೂಗಿ, ಚಿಟ್ಟೆಯಂತೆ ಹಾರಿ,
ಮಾಯೆಯ ರಥವೇರಿ, ಕಿನ್ನರರ ಸೇರಿ
ಚುಕ್ಕೆ ಮನೆ, ಚಂದ್ರನಂಗಳದಲ್ಲಿ
ನಲಿವ ಕವಿತೆಗಳೇ ಬನ್ನಿ ಬನ್ನಿ
ಬಿದ್ದ ತೊಲೆ, ಒದ್ದ ಕನ್ನಡಿ, ಮುರಿದ ಮನೆ,
ಹರಿದ ಅಂಗಿ, ಗಾರು ನೆಲ, ಗೀರು ಗಾಯ
ಬೆಂಕಿಗೂಡ ಬೂದಿ ಬದುಕು, ಕರಕು
ಕವಿತೆಗಳೇ ಬನ್ನಿ ಬನ್ನಿ
ಬಣ್ಣದಲ್ಲಿ ಬೆಳಗಿ, ಮೋಹದಲ್ಲಿ ಮುಳುಗಿ
ಸೂರ್ಯನ ಹೊದ್ದು, ಕೆಂಡಗನಸ ಕದ್ದು
ಕುಣಿವ ಬೆಳಕ ಮಣಿಸುವ, ಮಿಂಚಿನಂಥ
ಕವಿತೆಗಳೇ ಬನ್ನಿ ಬನ್ನಿ
ಗಾಳಿ ಗೋಳು, ಹುಯಿಲು ಮರ
ಮೌನ ಮಂಜು, ಬೆಳದಿಂಗಳ ಸುಕ್ಕು,
ಉಸಿರ ದಾರ ಕತ್ತರಿಸುವ ಹಿಮದ
ಕವಿತೆಗಳೇ ಬನ್ನಿ, ಬನ್ನಿ
ಒಲವಿನಲ್ಲಿ ಅದ್ದಿ, ಅನೂಹ್ಯ ಬಣ್ಣ ಬಳಸಿ
ಅನುರಾಗದ ಚಿತ್ರ ಬರೆಯೋಣ ಬನ್ನಿ
- ಎಂ.ಆರ್. ಕಮಲ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.