ವಿಜ್ಞಾನ ವಿಸ್ಮಯ / ಜಿಯಾನ್‌ ಬರೇ: ಜಗತ್ತನ್ನು ಸುತ್ತಿ ಬಂದ ಮೊದಲ ಮಹಿಳೆ – ಡಾ. ಟಿ.ಎಸ್.‌ ಚನ್ನೇಶ್‌

ಇದೇ ವರ್ಷ ೨೦೨೦ರ ಜುಲೈ ೨೭ರಂದು ಗೂಗಲ್‌ ತನ್ನ ಮೊದಲ ಪುಟದ ಡೂಡಲ್‌ ಅನ್ನು ಜಿಯಾನ್‌ ಬರೇ ಎಂಬ ಮಹಿಳೆಯ ೨೮೦ನೆಯ ಜನ್ಮದಿನವೆಂದು ಹೆಸರಿಸಿ ವಿಶೇಷವೆಂದು ಪ್ರದರ್ಶಿಸಿತ್ತು. ಮೊಟ್ಟ ಮೊದಲ ಬಾರಿಗೆ ಒಂಟಿಯಾಗಿ ಮಹಿಳೆಯೊಬ್ಬಳು ಭೂಮಂಡಲವನ್ನು ಸುತ್ತಿ ಬಂದ, ಸರಿ ಸುಮಾರು ಎರಡೂವರೆ ಶತಮಾನಗಳು ಕಳೆದ ಮೇಲೆ ಆಕೆಯ ಸಾಹಸದ ಸಾಗರಯಾನದ ನೆನಪಿಗಾಗಿ ಗೌರವಿಸಿತ್ತು. ಹೆಣ್ಣೊಬ್ಬಳು ಗಂಡಸಿನಂತೆ ವೇಷ ತೊಟ್ಟು, ಹೆಣ್ತನವನ್ನು ಮರೆಮಾಚಿ ಧೈರ್ಯವಾಗಿ ನೂರಾರು ನೌಕಾ ಪಯಣಿಗರೊಂದಿಗೆ ಹೋಗಿ, ಕಷ್ಟಪಟ್ಟು ವರ್ಷಗಳ ನಂತರ ತಾಯ್ನಾಡನ್ನು ವಾಪಸ್ಸು ತಲುಪಿದ್ದ ಹಿನ್ನೆಲೆಯ ಕಥನವನ್ನು ಡೂಡಲ್‌ ಹೊಂದಿತ್ತು.

ಡೂಡಲಿನಲ್ಲಿ ಮಹಿಳೆಯೊಬ್ಬಳು ನಿಂತ ನೌಕೆಗೆ ಬೊಗನ್‌-ವಿಲ್ಲಾ ಹೂವುಗಳ ತೋರಣ ಸುತ್ತಿದ್ದಕ್ಕೂ ಅರ್ಥಪೂರ್ಣವಾದ ಹಿನ್ನೆಲೆ ಯಿದ್ದು ಅದನ್ನು ಮುಂದೆ ನೋಡೋಣ. ಈಗಲೂ ಸುಮಾರು ೨೫೦ ವರ್ಷಗಳ ನಂತರವೂ ಹೆಣ್ಣೊಬ್ಬಳು ತನ್ನ ಗಂಡನ ಜೊತೆಯಿದ್ದೂ ತಡರಾತ್ರಿಯಲ್ಲಿ ಮನೆಗೆ ಹಿಂದಿರುಗಲು ಯೋಚಿಸುತ್ತಾಳೆ. ಅಂತಹದರಲ್ಲಿ ೧೭೬೬ರಲ್ಲಿ ಕೇವಲ ತನ್ನ ಸಸ್ಯ-ಪ್ರೀತಿ ಹಾಗೂ ಜೀವನ-ಪ್ರೀತಿಯ ಹಿನ್ನೆಲೆಯಿಂದ ಸಾಗರಯಾನದ ಧೈರ್ಯ ಮಾಡಿದ್ದು ನಿಜಕ್ಕೂ ಅಚ್ಚರಿಯ ಸಂಗತಿ. ಮೊಟ್ಟ ಮೊದಲು ಭೂಮಂಡಲದ ಪ್ರದಕ್ಷಣೆ ಹಾಕಿ ಹಿಂದಿರುಗಿದರೂ ಇತ್ತೀಚೆಗಿನವರೆಗೂ ಯಾವುದೇ ಗೌರವಕ್ಕೂ ಪಾತ್ರವಾಗಿರದೆ, ಕೇವಲ ತನ್ನ ಕಡೆಗಾಲದ ಪಿಂಚಣಿ ಮಾತ್ರವೇ ಪಡೆದಿದ್ದ ನತದೃಷ್ಟ ಮಹಿಳಾ ಸಸ್ಯವಿಜ್ಞಾನಿ ಜಿಯಾನ್‌ ಬರೇ !

       ಜಿಯಾನ್‌ ಬರೇ, ವಿಶ್ವವಿದ್ಯಾಲಯದಲ್ಲಿ ಕಲಿತವಳಲ್ಲ. ಸ್ವಂತ ಹಿತಾಸಕ್ತಿಯಿಂದ ಸಸ್ಯಜ್ಞಾನದ ಪರಿಣಿತಿಯನ್ನು ಸಾಧಿಸಿದಾಕೆ. ಫ್ರಾನ್ಸ್‌ನ ಆಟನ್‌ ಎಂಬ ಗ್ರಾಮೀಣ ವಲಯದಲ್ಲಿ ೧೭೪೦ರಲ್ಲಿ ಜನಿಸಿದ್ದ ಜಿಯಾನ್‌ ಬರೇ ಆ ಕಾಲದಲ್ಲಿ ಫ್ರಾನ್ಸ್‌ನಲ್ಲಿ ಹೆಸರು ಮಾಡಿದ್ದ ಫಿಲಿಬೆರ್ಟ್‌ ಕಾಮರ್‌ಸನ್‌ ಎಂಬ ಸಸ್ಯವಿಜ್ಞಾನಿಯ ಜೊತೆ ಸಹಾಯಕಳಾಗಿದ್ದಳು. ತಮ್ಮ  ಮನೆಯನ್ನೂ ನೋಡಿಕೊಳ್ಳುತ್ತಿದ್ದ ಜಿಯಾನ್‌ಳ ಸಸ್ಯಜ್ಞಾನಕ್ಕೆ ಕಾಮರ್‌ಸನ್‌ ಅವರು ಮಾರುಹೋಗಿದ್ದರು. ಅಷ್ಟಲ್ಲದೆ, ಫ್ರಾನ್ಸ್‌ ದೇಶವು ೧೭೬೭ರಲ್ಲಿ ತನ್ನ ಪ್ರಪಂಚ ಪರ್ಯಟಣೆಯ ಸಾಗರಯಾನವನ್ನು ಕ್ಯಾಪ್ಟನ್‍  ಆಂಟೊನಿ  ಬೊಗೆನ್ ವಿಲ್ಲೈ ಎಂಬಾತನ ನೇತೃತ್ವದಲ್ಲಿ ಆಯೋಜಿಸಿದಾಗ ಅವರ ತಂಡದ ಸಸ್ಯವಿಜ್ಞಾನಿಯಾಗಿ ಹೊರಟ ಕಾಮರ್‌ಸನ್‌ ಸಹಾಯಕರೊಬ್ಬರನ್ನು ಕರೆದುಕೊಂಡು ಹೋಗಬಹುದಿತ್ತು. ಆಗ ಜಿಯಾನ್‌ ಬರೇಯನ್ನು ಜೊತೆಗೆ ಕರೆದುಕೊಂಡು ಹೋಗಲು ತಯಾರಾದರು. ಆ ಕಾಲದಲ್ಲಿ ಹೆಣ್ಣೊಬ್ಬಳು ನೌಕಾಯಾನಕ್ಕೆ ಅದರಲ್ಲೂ ಇಂತಹದ್ದೊಂದು ಹುಡುಕಾಟದ ಯಾನಕ್ಕೆ ಹೋಗುವಂತೆಯೇ ಇರಲಿಲ್ಲ. ಆಗ ಧೈರ್ಯವಹಿಸಿ ಗಂಡಸಿನ ವೇಷದಲ್ಲಿ ಹೊರಟು ಫ್ರಾನ್ಸಿನ “ಇಟ್ವಾಲ್‌” ಹೆಸರಿನ ನೌಕೆಯನ್ನು ಏರಿದಾಕೆ ಜಿಯಾನ್‌.

       ಜಿಯಾನ್‌ ಬರೇಗೂ ಮತ್ತು ಬೊಗನ್‌ವಿಲ್ಲಾಗೂ ಬಹು ದೊಡ್ಡ ಸಂಬಂಧವಿದೆ. ಅವರ ಸಸ್ಯಾನ್ವೇಷಣೆಯ ಅಲೆದಾಟದಲ್ಲಿ ಬ್ರೆಜಿಲ್‌ನಲ್ಲಿ ತಂಗಿದ್ದಾಗ, ಅಲ್ಲಿನ ಕಾಡಿನೊಳಗಿದ್ದ “ಬೊಗನ್‌ವಿಲ್ಲಾ” (ಬೊಗನ್‌ವಿಲಿಯಾ)ವನ್ನು ಸ್ವತಃ ಜಿಯಾನ್‌ ಬರೇ ಸಂಗ್ರಹಿಸಿದ್ದರು. ಕಾಮರ್‌ಸನ್‌ ಅವರ ಅನಾರೋಗ್ಯ ಕಾರಣದಿಂದ ನಡೆದಾಡುವ ಕಷ್ಟದಿಂದ ಆ ಅಲೆಮಾರಿ ಅನ್ವೇಷಣೆಯ ಹೆಚ್ಚಿನ ಪಾಲಿನ ಹುಡುಕಾಟ ಆಕೆಯೇ ನಿರ್ವಹಿಸಿದ್ದರು. ಕೇವಲ ಸಹಾಯಕಿ ಹಾಗೂ ಹೆಣ್ಣೆಂಬ ಕಾರಣದಿಂದ ದಾಖಲೆಯಲ್ಲಿ ಜಿಯಾನ್‌ ಹೆಸರು ತಪ್ಪಿಹೋಗಿದೆ. ಕಳೆದ ೨೦೧೦ರಲ್ಲಿ ಪ್ರೊ. ಗ್ಲಿನಿಸ್‌ ರಿಡ್ಲೇ (Prof. Glynis Ridley) ಎಂಬುವರು ಪ್ರಕಟಿಸಿದ “ದ ಡಿಸ್ಕವರಿ ಆಫ್‌ ಜಿಯಾನ್‌ ಬರೇ-ಅ ಸ್ಟೋರಿ ಆಫ್‌ ಸೈನ್ಸ್‌  (The Discovery of Jeanne Baret- A Story of Science) ಪುಸ್ತಕವು ಜಗತ್ತಿಗೆ ಹೊಸತೊಂದು ಬೆಳಕಿನ ಇತಿಹಾಸವನ್ನು ತೆರೆಯಿತು. ಪ್ರೊ. ರಿಡ್ಲೇ ೧೮ನೆಯ ಶತಮಾನದ ಜಾಗತಿಕ ಪರ್ಯಟಣೆಗಳ ಚರಿತ್ರೆಯ ಅಧ್ಯಯನಗಾರ್ತಿ. ಕೆಂಟುಕಿಯ ಲಾವೆವೆಲ್‌ ವಿಶ್ವವಿದ್ಯಾಲಯ(University of Louisville)ದ ಪ್ರೊಫೆಸರ್‌. ನೌಕಾಯಾನದ ಜರ್ನಲ್‌ಗಳ ದಾಖಲೆಗಳ ಪರಾಮರ್ಶಿಸಿ ಸಾಕಷ್ಟು ವಸ್ತುನಿಷ್ಠ ಹುಡುಕಾಟದ ಅಧ್ಯಯನ ಪ್ರೊ ರಿಡ್ಲೇ ಅವರದ್ದು.

         ಮಾರುವೇಷದಲ್ಲಿ ಜಿಯಾನ್ ಅಪಾರ ಸಸ್ಯಜ್ಞಾನದ ಮಹಿಳೆ. ಅದೆಲ್ಲವನ್ನೂ ಪರಿಸರದೊಂದಿಗೆ ತನ್ನ ಒಡನಾಟದಲ್ಲಿ ಕಲಿತ ಹೆಣ್ಣು ಮಗಳು.  ಹಾಗೆಂದೇ ಕಾಮರ್ ಸನ್ ಅವರ ಜೊತೆಯಾಗಿ ಆಕೆ ಆತನ ಸಹಾಯಕಿಯಾದವರು. ಕಾಮರ್‌ಸನ್‌ ಅವರ ಜೀವನದ ಮೊದಲ ಹೆಂಡತಿಯು ಪ್ರಸವ ಸಮಯದಲ್ಲಿ ಮರಣಹೊಂದಿದ್ದರಿಂದ ಮಗುವನ್ನು ಮನೆ ಕೆಲಸವನ್ನೂ ನಿರ್ವಹಿಸುವ ಮಹಿಳೆಯಾದಾಕೆ! ಜತೆಗಿದ್ದಾಗಲೇ ಜಿಯಾನ್ ಬರೇಯು ತನ್ನ ಸಸ್ಯಗಳ ಸ್ಥಳೀಯ ಜ್ಞಾನದ ಅಪರಿಮಿತ ಆಸಕ್ತಿ ಮತ್ತು ಶ್ರದ್ಧೆಯಿಂದ ಕಾಮರ್‌ಸನ್‌ಗೆ ಆಕರ್ಷಿತರಾದರು. ವಿಶ್ವವಿದ್ಯಾಲಯದ ಕಲಿಕೆಯ ತಿಳಿವಳಿಕೆಯ ಆತ, ಜಿಯಾನ್‌ ಅವರ ಜನಪರ ತಿಳಿವಳಿಕೆ ಮತ್ತು ಸಸ್ಯ ಪ್ರೀತಿಯನ್ನು ಕಂಡು ಬೆರಗಾಗಿ, ಮೋಹಗೊಂಡ ಜೀವನಕ್ಕೂ ಕರೆದುಕೊಂಡರು.  ಸಾಗರಯಾನಕ್ಕೆ ಆ ಕಾಲದಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲ. ಆದರೆ ಕಾಮರ್ ಸನ್ ಅವರಿಗೂ ತಮ್ಮ ಆರೋಗ್ಯವನ್ನು ನೋಡಿಕೊಳ್ಳಲೂ ಹಾಗೂ ಸಸ್ಯ ಸಂಗ್ರಹಕ್ಕೂ ಸಹಾಯಕ್ಕೆ ಜಿಯಾನ್ ಬರೇಯ ಅವಶ್ಯಕತೆಯಂತೂ ಇತ್ತು.  ಹಾಗಾಗಿ ತನ್ನ ಆಸಕ್ತಿ ಸಸ್ಯಗಳ ಅಧ್ಯಯನಕ್ಕಾಗಿ ಮಾರು ವೇಷದಲ್ಲಿ ಹೊರಟು ನಿಂತಳು.  ಜಿಯಾನ್ ಬರೇ ಕಾಮರ್‌ಸನ್ ಅವರ ಜೊತೆಯಾಗಿ  ಸಮುದ್ರಯಾನದಲ್ಲಿದ್ದಾಗ ಅವರ ನೌಕೆಯು ಬ್ರೆಜಿಲ್‌ ದೇಶದ ರಿಯೋನಲ್ಲಿದ್ದಾಗ ಬೊಗನ್ ವಿಲ್ಲಾ ಬಳ್ಳಿಯನ್ನು ಸಂಗ್ರಹಿಸಿದ್ದರು. 

       ಜಿಯಾನ್‌ ಬರೇಗೂ ಮತ್ತು ಬೊಗನ್‌ವಿಲ್ಲಾಗೂ ಸಾಮ್ಯತೆಯಿದೆ. ಆಕೆಯ ಬದುಕೊಂದು ಕರುಣಾಜನಕ ಸಂಗತಿ. ಹಾಗೆಯೇ ಬೊಗೆನ್‍ ವಿಲ್ಲಾ ಹೂವಿನದೂ ವಿಸ್ಮಯದ ಕಥೆ! ನೌಕೆಯೇರಿದಾಕೆ ಹೆಣ್ಣು- ಆದರೂ ಹೆಣ್ಣಾಗಿ ಕಾಣಿಸಿಕೊಳ್ಳದವಳು. ಗಂಡಾಗಿ ಕಾಣಿಸಿದರೂ ಗಂಡಲ್ಲ! ನಮ್ಮ ಕಣ್ಣಿಗೆ ಹೂವೆಂದು ಗೋಚರಿಸುವ ಬೊಗನ್ ವಿಲಿಯಾ ಹೂವೂ ಸಹಾ ಹೂವಲ್ಲ! ಅದು ಹೂ-ಎಲೆ! ಬಣ್ಣ ಬಣ್ಣದ ಹೂ ಎಲೆಯ ಮಧ್ಯದಲ್ಲಿರುವ ಪುಟ್ಟ ಬಿಳಿಯ ಹೂ ದೂರಕ್ಕೆ ಕಾಣುವುದಿಲ್ಲ. ಈ ಸಸ್ಯವನ್ನು ಪರಿಚಯಿಸಿದ ಜಿಯಾನ್ ಬರೇ ಕೂಡ ತನ್ನನ್ನು ಸ್ತ್ರೀಎಂದು ತೋರಿಸಿಕೊಳ್ಳದಾಕೆ. ಬೊಗನ್ ವಿಲ್ಲಾ ಕೂಡ ತನ್ನ ಹೂವನ್ನು ತೋರಿಸಿಕೊಳ್ಳದು. ಜಿಯಾನ್ ಕೂಡ ಒಂಟಿಯಾಗಿ ಹಡಗನ್ನೇರಿದ ದಿಟ್ಟೆ. ಬೊಗನ್ ವಿಲ್ಲಾ ಸಸ್ಯವೂ ಕೂಡ ಯಾವುದೇ ಕೀಟ-ರೋಗಗಳಿಗೂ ಜಗ್ಗದೇ ಜಗದ್ವ್ಯಾಪಿಯಾಗಿ ಬೆಳೆದು, ಬಿಸಿಲನ್ನು ಅಪಾರವಾಗಿ ಪ್ರೀತಿಸುವ ಸಸ್ಯವಾಗಿ ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಎಲ್ಲಾ ಕಡೆಗಳಲ್ಲಿ  ಹಬ್ಬಿದೆ.

          ಸಾಗರಯಾನದ ಮಧ್ಯಂತರದಲ್ಲಿ ಆಕಸ್ಮಿಕವಾಗಿ ಆಕೆ ಹೆಣ್ಣು ಎಂದು ಎಲ್ಲರಿಗೂ ತಿಳಿದಾಗ ಆಕೆಗೂ ಕಾಮರ್ ಸನ್ ಅವರಿಗೂ ಆದ ಭಯ ಅಷ್ಟಿಷ್ಟಲ್ಲ. ಆದರೂ ಸುಧಾರಿಸಿಕೊಂಡ ಅವರು, ಆ ವೇಳೆಗಾಗಲೇ ಮರೀಷಸ್ ದ್ವೀಪಕ್ಕೆ ಬಂದಿರುತ್ತಾರೆ. ಆಗ ಮರೀಷಸ್ ದ್ವೀಪದಲ್ಲಿ ಕಾಮರ್ ಸನ್ ಅವರ ಗೆಳೆಯರೊಬ್ಬರ ನೆರವು ಸಿಕ್ಕು, ಹೇಗೂ ಸಾಗರಯಾನದಲ್ಲಿ ಹೆಣ್ಣುಮಗಳನ್ನು ಕರೆತಂದುದಕ್ಕಾಗಿ ಅನುಭವಿಸಬೇಕಾದ ತೊಂದರೆಯಿಂದ ತಪ್ಪಿಸಿಕೊಳ್ಳಲು, ಮರೀಷಸ್ನಲ್ಲೇ ಉಳಿಯುತ್ತಾರೆ. ಅಲ್ಲಿದ್ದಾಗ ಕಾಮರ್‌ಸನ್ ಜತೆಗೂಡಿ ಮಡಗಾಸ್ಕರ್ ಮತ್ತೆಲ್ಲಾ ದ್ವೀಪಗಳಲ್ಲಿ ಸುತ್ತಾಡಿ ಸುಮಾರು 500 ಸಸ್ಯಗಳನ್ನೂ, ಹಲವಾರು ಜೀವಿ ಅವಶೇಷಗಳನ್ನೂ ಸಂಗ್ರಹಿಸುತ್ತಾಳೆ. ಆಗ ಆಕೆಯ ಸಂಗಾತಿ ಮತ್ತು ಗುರು ಕಾಮರ್ ಸನ್ ಉಸಿರಾಟಕ್ಕೆ ಸಂಬಂಧಿಸಿದಂತೆ ಶ್ವಾಸಕೋಶದ  ತೊಂದರೆಗೆ ಸಿಲುಕಿ 1773ರಲ್ಲಿ ಸಾವನ್ನಪ್ಪುತ್ತಾರೆ.  ಅಲ್ಲಿದ್ದಾಗ ಅವರಿಂದ ಜಿಯಾನ್ ಪಡೆದ ಮಗುವೂ ಕೂಡ ಸಾವನ್ನಪ್ಪುತ್ತದೆ. ಹೆಣ್ಣುಮಗಳೊಬ್ಬಳು ಅಪರಿಚಿತ ನೆಲದಲ್ಲಿ ಒಂಟಿಯಾಗಿ ಅಪಾರ ಜೀವಿಸಂಪನ್ಮೂಲವನ್ನು ಹೊತ್ತುಕೊಂಡು ತಾಯಿನಾಡನ್ನು ವಾಪಾಸ್ಸು ಸೇರುವ ಹಂಬಲವನ್ನು ಇಟ್ಟುಕೊಳ್ಳಲು ಎಂತಹಾ ಛಲವಿರಬೇಕಲ್ಲವೇ?

       ಮರೀಷಸ್‍ ಮತ್ತು ಮಡಗಾಸ್ಕರ್‌  ನಲ್ಲಿ ಇದ್ದ ಸಮಯವಷ್ಟೇ ಈಕೆಯ ನಿಜವಾದ ದಾಂಪತ್ಯ. ಒಂಟಿಯಾದ ಜಿಯಾನ್ ನಂತರ ಎಲ್ಲವನ್ನೂ ಕಳೆದುಕೊಂಡು ಮತ್ತೇ ತಾಯಿನಾಡಿನ ಹಂಬಲಕ್ಕೆ ಪರಿತಪಿಸುತ್ತಾಳೆ. ಅಲ್ಲಿ ಆಕಸ್ಮಿಕವಾಗಿ ಸಿಕ್ಕ ಫ್ರೆಂಚ್  ಸೈನಿಕ ಜೀನ್ ದುಬೆರ್ನಾಟ್‍ ನನ್ನು ವರಿಸಿ ಆತನ ನೆರವಿನಿಂದ 1774ರ ಕೊನೆಗೆ ತಾಯಿನಾಡಿಗೆ ಬಂದು ತಲುಪುತ್ತಾಳೆ. ಅಪಾರ ಜೀವಿ ಸಾಮಗ್ರಿಯೊಂದಿಗೆ  ತಾಯಿನಾಡಿಗೆ ಬಂದ ಆಕೆಯನ್ನೇನೂ ದೇಶ ನಾಯಕಿಯಂತೆ ಸ್ವಾಗತಿಸುವುದಿಲ್ಲ. ಸಾಮಾನ್ಯಳಂತೆ ಊರು ಸೇರಿ ನಿಟ್ಟುಸಿರು ಬಿಡುತ್ತಾಳೆ. ನಂತರದ ದಿನಗಳಲ್ಲಿ ನೌಕಾ ಇಲಾಖೆಯು ಗುರುತಿಸಿ ಒಂದಷ್ಟು ಜೀವನಾಂಶಕ್ಕಾಗಿ ಪಿಂಚಿಣಿಯನ್ನು ಮಂಜೂರು ಮಾಡುತ್ತದೆ. ಕೊನೆಗೂ ಸಹಸ್ರಾರು ಸಸ್ಯಗಳನ್ನೂ, ಸಂಗ್ರಹಿಸಿಟ್ಟ ಬೀಜ ಸಾಮಗ್ರಿಯನ್ನೂ ಹಾಗೂ  ನೂರಾರು ಜೀವಿ ಅವಶೇಷಗಳನ್ನೂ ಬಿಟ್ಟು 1807ರ ಆಗಸ್ಟ್ 5ರಂದು ಇಹಲೋಕ ತ್ಯಜಿಸುತ್ತಾಳೆ. ಆಗ ಆಕೆಗೆ 67 ವರ್ಷ.

       ಜಿಯಾನ್ ಬರೇ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ ಕುಟುಂಬದ ಮಗಳಾಗಿ ಹತ್ತಾರು ಮೈಲು ಸುತ್ತಾಟವನ್ನೂ ಮಾಡದಂತಹ ಪರಿಸ್ಥಿತಿಯಲ್ಲಿದ್ದ ಹೆಣ್ಣುಮಗಳು. ಆಕೆಯ ಅಪ್ಪ ಅನಕ್ಷರಸ್ತ. ತಾಯಿಯು ಸ್ವಂತ ಆಸಕ್ತಿಯಿಂದ ಕಲಿಯುವ ಹಂಬಲವನ್ನು ಬೆಳೆಸಿದಾಕೆ. ಇಂತಹಾ ಜಿಯಾನ್ ಅಪಾರ ಸಸ್ಯಪ್ರೀತಿಯನ್ನು ಗಳಿಸಿಕೊಂಡ ಕಾರಣದಿಂದ ಸಸ್ಯವಿಜ್ಞಾನಿ ಕಾಮರ್ ಸನ್ ಜೊತೆಯಾದವರು. ಆಕೆಯು ಒಂಟಿಯಾಗಿ ಹಡಗನ್ನೇರಿ ಹೆಣ್ತನವನ್ನೇ ಮರೆಮಾಚಿ, ಸರಿ ಸುಮಾರು 8 ವರ್ಷ ಜಗತ್ತನ್ನು ಸುತ್ತಿ ತಾಯ್ತನದ ಸಂಕಟವನ್ನು ಅನುಭವಿಸಿ, ಜತೆಗೆ ಹೆತ್ತ ಮಗು, ಸಂಗಾತಿ ಎಲ್ಲವನ್ನೂ ಕಳೆದುಕೊಂಡು ತಾಯಿನಾಡನ್ನು ತಲುಪುವ ಹಪಾಹಪಿಯಿಂದ ಕೊನೆಗೂ ಜಯಿಸಿ ಫ್ರಾನ್ಸಿಗೆ ವಾಪಾಸ್ಸು ಬಂದದ್ದೇ ದೊಡ್ಡ ಅಚ್ಚರಿ. ಹೀಗೆ ಹಡಗಿನಲ್ಲಿ ಜಗತ್ತನ್ನು ಸುತ್ತಿ ಬಂದ ಮೊಟ್ಟ ಮೊದಲ ಮಹಿಳೆಯೂ ಕೂಡ ಆಗಿದ್ದಾರೆ.  ಆಕೆಯಿಂದ ಪರಿಚಿತವಾದ ಬೊಗನ್ ವಿಲ್ಲಾ ಬಳ್ಳಿಯು ಅಕ್ಷರಶಃ ಜಗತ್ತಿನ ಬಿಸಿಲು ದಟ್ಟವಾದ ಎಲ್ಲಾ ನೆಲವನ್ನೂ ಆವರಿಸಿದೆ.

       ಸಸ್ಯ ವಿಜ್ಞಾನವೀಗ ಎರಡು ಶತಕಗಳಿಗೂ ಹೆಚ್ಚು ಕಾಲ ಕಾಣದಿದ್ದ ಜಿಯಾನ್ ಬೆರೇಯನ್ನು ಗುರುತಿಸಲು ಪ್ರಯತ್ನಿಸುತ್ತಿದೆ. ಕಾಮರ್ ಸನ್ ಅವರ ಹೆಸರಿನಲ್ಲಿ ಹತ್ತಾರು ಸಸ್ಯ ಪ್ರಭೇದಗಳಿವೆ. ಇತ್ತೀಚೆಗೆ ಅಷ್ಟೇ ೨೦೧೨ರಲ್ಲಿ ಟೊಮ್ಯಾಟೊ, ಬದನೆ ಸಂಕುಲವಾದ ಸೊಲಾನಮ್‌ನ ಒಂದು ಪ್ರಭೇದಕ್ಕೆ ಆಕೆಯ ಹೆಸರಿನಲ್ಲಿ ಸೊಲಾನಮ್‌ ಬರೆಶಿಯೆ (Solanum baretiae) ಎಂದು ಕರೆಯಲಾಗಿದೆ. ಆಕೆಯ ಬಗೆಗಿನ ಹೊಸ ಹುಡುಕಾಟ ಆರಂಭವಾಗಿದೆ. ವಿಜ್ಞಾನದ ಚರಿತ್ರೆಯಲ್ಲಿ ಜಿಯಾನ್‌ ಬರೇಯ ಪಾತ್ರವನ್ನೂ ಪರಿಗಣಿಸಲು, ಬೊಗನ್ ವಿಲ್ಲಾವನ್ನು ಆಕೆಯ ಗೌರವದಿಂದ ಹೆಸರಿಸಿ ಫ್ರಾನ್ಸ್ ದೇಶದ ರಾಷ್ಟ್ರೀಯ ಪುಷ್ಟ ಎಂದು ಕರೆಯುವ ಒತ್ತಡವನ್ನೂ ಮಾಡಲಾಗುತ್ತಿದೆ. ಜಿಯಾನ್‍ ಕುರಿತ ಸಸ್ಯವೈಜ್ಞಾನಿಕ ಹಾಗೂ ಸಾಗರಯಾನದ ಸಾಹಸಗಳು ಕೇವಲ ಒಂದು ದಶಕದಿಂದ ಮಾತ್ರವೇ ಚರ್ಚೆಗೆ ಬರುತ್ತಿವೆ. ಬೊಗನ್‍ ವಿಲಿಯಾ ಜೊತೆ ನೂರೆಂಟು ಗಿಡ-ಮರಗಳ ಸಂಗ್ರಹ ಮತ್ತು ನಾಮಕರಣದಲ್ಲಿ ಆಕೆಯ ಪಾತ್ರವನ್ನು ಗುರುತಿಸುವ ಕಾರ್ಯ ಆರಂಭವಾಗಿದೆ. ನನಗಂತೂ ಈ ಸಂಗತಿಯು ೨೦೧೪ರಲ್ಲಿ ತಿಳಿದಾಗಿನಿಂದಲೂ ಬೊಗನ್‌ವಿಲ್ಲಾ ಕಂಡಾಗ ಹೂ-ಎಲೆಯೊಳಗಿನ ಕಾಣಿಸದ ಹೂವನ್ನು ಹುಡುಕುತ್ತೇನೆ, ಅದರಲ್ಲಿ ಜಿಯಾನ್‌ ಬರೇಯನ್ನು ಕಾಣುತ್ತೇನೆ.   ನೀವೂ ಕೂಡ ಇನ್ನು ಮುಂದೆ ಮುಂಜಾನೆಯ ವಾಕಿಂಗ್‍ ನಲ್ಲೋ ಅಥವಾ ಸಂಜೆಯ ವಾಯು ವಿಹಾರದಲ್ಲೋ ಜಿಯಾನ್‍ ಜೀವನಕ್ಕೆ ಸಾಮ್ಯತೆಯನ್ನು ಹೊಂದಿರುವ ಬೊಗನ್‍ ವಿಲ್ಲಾ  ಕಾಣಿಸಿದರೆ, ಕಂಡ ಹೂಎಲೆಯ ಹಿಂದಿರುವ ನಿಜವಾದ ಹೂ ಹುಡುಕಿ. ಜಿಯಾನ್ ಬರೇಯನ್ನು ನೆನಪಿಸುತ್ತೀರಲ್ಲವೇ?   

  • ಡಾ. ಟಿ.ಎಸ್.‌ ಚನ್ನೇಶ್‌

Centre for Public Understanding of Science, Bengaluru

channeshts@gmail.com

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *