ವಿಜ್ಞಾನ ವಿಸ್ಮಯ / ಅಮ್ಮ ಮಾತ್ರವೇ ಕೊಡುವ ಆನುವಂಶೀಯ ಬಳುವಳಿ – ಡಾ. ಟಿ.ಎಸ್. ಚನ್ನೇಶ್
ಮೈಟೊಕಾಂಡ್ರಿಯಾದ ಅಂದರೆ ಶಕ್ತಿಕೇಂದ್ರದ ಡಿ.ಎನ್.ಎ. ಸಂಪೂರ್ಣ ಅಮ್ಮನ ಬಳುವಳಿ. ಆದರೆ ನಮ್ಮ ಜೀವಿಕೋಶದ ಕೇಂದ್ರ ಡಿಎನ್ಎದಲ್ಲಿ ಅಪ್ಪ-ಅಮ್ಮನ ಸಮಪಾಲು ಸಾಗಿ ಬರುತ್ತದೆ. ಆದರೆ ಶಕ್ತಿಕೇಂದ್ರದ ಗುಣಗಳ ಬಳುವಳಿ ಮಾತ್ರ ಸಂಪೂರ್ಣವಾಗಿ ಅಮ್ಮನದೇ! ಹೆಣ್ಣುಸಂತಾನದ ಮೂಲಕ ಮಾತ್ರವೇ ಆನುವಂಶಿಕವಾಗಿ ಸಾಗುವ ವಿಶೇಷವಾದ ಭಾಗ ಮೈಟೊಕಾಂಡ್ರಿಯಾ ಇಡೀ ದೇಹದ ಶಕ್ತಿಯ ಕೇಂದ್ರ. ಜೀವಿಯ ಒಟ್ಟಾರೆ ಶಕ್ತಿಯ ನಿಭಾಯಿಸುವಿಕೆಯು ಹೆಣ್ಣಿನ ಕೊಡುಗೆ ಎಂಬುದಂತೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬಹುದೊಡ್ಡ ಸೋಜಿಗವನ್ನು ತಂದಿಟ್ಟಿದೆ. ಅಂತೂ “ಅಮ್ಮ-ತಾಯಿ-ಹೆಣ್ಣು” ಜೀವದ ನಿಜವಾದ ಶಕ್ತಿಕೇಂದ್ರವೇ!
ನನ್ನ ಅಮ್ಮ ನನಗೆ ಕೊಟ್ಟ ನನ್ನ ಎಲ್ಲಾ ಜೀವಿಕೋಶಗಳಲ್ಲಿನ ಮೈಟೊಕಾಂಡ್ರಿಯ ನನ್ನ ದೇಹದ ಪ್ರಾಣವಾಯುವಿನ ಸಂಚಲನವನ್ನು ನಿಭಾಯಿಸುತ್ತಿದೆ. ವಿಕಾಸದ ಆಟವೆಂದರೆ ಅದನ್ನು ನಾನು ನನ್ನ ಮಗನಿಗೆ ಕೊಡಲಾಗಲಿಲ್ಲ….!
ಮೈಟೋಕಾಂಡ್ರಿಯ ಬಹುಪಾಲು ಪ್ರಾಣಿವರ್ಗದ ಜೀವಕೋಶದ ಒಳಗಿನ ವಿಶಿಷ್ಠ ಭಾಗ ಹಾಗೂ ಶಕ್ತಿಕೇಂದ್ರ. ನಿಸರ್ಗದ ವಿಚಿತ್ರವೆಂದರೆ ಈ ಶಕ್ತಿಕೇಂದ್ರವು ತಾಯಿಯ- ಹೆಣ್ಣಿನ ಏಕಸ್ವಾಮ್ಯ. ಎಲ್ಲರ ಜೀವಿಕೋಶಗಳಲ್ಲೂ ಇರುವ ಮೈಟೊಕಾಂಡ್ರಿಯ ಕೇವಲ ಅಮ್ಮನ ಬಳುವಳಿ. ಹಾಗಾಗಿ ನಾನು ನನ್ನ ಮಗನಿಗೆ ಕೊಡಲಾಗಲಿಲ್ಲ ಅಂದದ್ದು.
ನಾನು ಅಮ್ಮನ ಮಗಳಾಗಿದ್ದರೆ ನನಗೆ ಬಂದಿರುವ ಮೈಟೊಕಾಂಡ್ರಿಯ ಮುಂದುವರೆಯುತ್ತಿತ್ತು. ಹೀಗೆ ಹೆಣ್ಣುಸಂತಾನದ ಮೂಲಕ ಮಾತ್ರವೇ ಆನುವಂಶಿಕವಾಗಿ ಸಾಗುವ ವಿಶೇಷವಾದ ಭಾಗ ಮೈಟೊಕಾಂಡ್ರಿಯಾ ಇಡೀ ದೇಹದ ಶಕ್ತಿಯ ಕೇಂದ್ರ.
ಆನುವಂಶೀಯತೆ ಎಂಬುದು ಪೋಷಕರಿಂದ ಪಡೆದ ಬಳುವಳಿ ಎಂಬುದು ನಮ್ಮ ಸಹಜವಾದ ತಿಳಿವಳಿಕೆ. ಹಾಗದರೆ ಇದೇನು, ಕೇವಲ ಅಮ್ಮನಿಂದ ಮಾತ್ರವೇ ಬರುವ ಆನುವಂಶೀಯತೆಯಲ್ಲಿ ಹೊಸತೇನು? ಎನ್ನಿಸಬಹುದು. ಇದು ವಿಕಾಸದಲ್ಲಿ ಬಹಳ ಹಿಂದೆಯೆ ನಡೆದ ವಿಶೇಷವಾದ ಜೈವಿಕ ವಲಸೆಯ ಬಳುವಳಿ. ನಮ್ಮನಿಮ್ಮೆಲ್ಲರ ಸಹಜವಾದ ಅನುಭವವೆಂದರೆ ನಮ್ಮ ಸ್ನೇಹಿತರ ಅಥವಾ ಬಂಧುಗಳ ಮನೆಯಲ್ಲಿ ಹುಟ್ಟಿದ ಮಗುವನ್ನು ನೋಡಲು ಹೋಗಿ, ಮೊದಲು ಕಂಡಾಗ ಮಗುವಿನ ಅವಯವಗಳನ್ನು ಪೋಷಕರಿಗೆ ಹೋಲಿಸುತ್ತೇವೆ. “ಕಣ್ಣುಗಳೋ ಎಲ್ಲಾ ಅಪ್ಪನಂತೆ” ಎಂದು, “ಮೂಗೆಲ್ಲಾ ಅವರ ಅಮ್ಮನದೆ ಅಂತಲೋ” ಅಷ್ಟೆಕೇ “ಹುಬ್ಬುಗಳು ಥೇಟ್ ಅವರ ಅಜ್ಜನ ಹಾಗೆ” ಎಂದೂ, “ಅದು ಬಿಡಿ ತುಟಿಯಂತೂ ಅವರ ಅಜ್ಜಿಯದೇ” – ಹೀಗೆ ಅವರ ಅಪ್ಪ ಅಮ್ಮನಿಂದ ಆರಂಭಿಸಿ ಅವರ ಅಮ್ಮ-ಅಪ್ಪನ ತರೆಹೆವಾರಿ ಅವಯವಗಳ ಸಮೀಕರಿಸಿ ಮಗುವನ್ನು ವಿವರಿಸುತ್ತೇವಲ್ಲವೆ?
ಹೀಗೆ ನಾವೆಲ್ಲಾ ನಮ್ಮ ಅಮ್ಮಅಪ್ಪನ ಗುಣಗಳ ಬಳುವಳಿಯಾಗಿ ಅಥವಾ ಅವರ ಅಮ್ಮಅಪ್ಪನ ಗುಣಗಳ ಅಥವಾ ಇನ್ನೂ ಹಿಂದೆ ಹೋಗಿ ತಾತಮುತ್ತಾತಂದಿರ ಹೊತ್ತುತಂದ ಗುಣಗಳನ್ನು ವೈಜ್ಞಾನಿಕವಾಗಿ ವಿವರಿಸಿದ ಆನುವಂಶೀಯತೆಯ ಕಥನಕ್ಕೆ 1866ರಲ್ಲಿ ಮೊಟ್ಟಮೊದಲ ಬಾರಿ ಗ್ರೆಗೊರ್ ಮೆಂಡಲ್ ಅವರು ಬಟಾಣಿ ಕಾಳುಗಳ ಗುಣಗಳ ಅಧ್ಯಯನದಿಂದ ನಾಂದಿ ಹಾಡಿದ್ದರು. ಓರ್ವ ಚರ್ಚನ ಪಾದ್ರಿಯಾಗಿ ಹತ್ತಾರು ಸಾವಿರ ಬಟಾಣಿಗಿಡಗಳನ್ನು ಕಾಳು ಕಟ್ಟಿಸುವ ಪ್ರಯೋಗ ನಡೆಸಿ ಅಮ್ಮ -ಅಪ್ಪ ನಮ್ಮ ಕೆಲವು ಗುಣಗಳನ್ನು ಸರಾಸರಿ ಹಂಚಿಕೊಟ್ಟಿರುತ್ತಾರೆಂದೂ, ಆ ಹಂಚಿಕೆಗೆ ಎಂದು ಆಗಿನ್ನೂ “ಜೀನು” ಗಳೆಂದು ಹೆಸರಿಸದೆ “ಗೊತ್ತಿರದ ಬಳುವಳಿ”ಗಳು ಎಂದು ಕರೆದಿದ್ದರು.
ಅವುಗಳನ್ನು ನಿಭಾಯಿಸುವ ಡಿ.ಎನ್.ಎ.ಗಳ ಬಗೆಗೂ ತಿಳಿದಿರಲಿಲ್ಲ. ಈ ಡಿ.ಎನ್.ಎ.ಯು ಜೀವಿಕೋಶದಲ್ಲಿದ್ದು ಆನುವಂಶೀಯತೆಯನ್ನು ಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗೆ ಜೀವಿಯಿಂದ ಅದರ ಸಂತತಿಗೆ ಸಾಗುವ ಹಿನ್ನೆಲೆಯಲ್ಲಿ ಅಮ್ಮನದೇ ಆದ ವಿಶೇಷತೆಯೂ ಒಂದಿದೆ. ನಮ್ಮ ಆನುವಂಶೀಯತೆಯಲ್ಲಿ ಅಮ್ಮ-ಅಪ್ಪ ಇಬ್ಬರ ಪಾಲು ಇದ್ದರೂ, ಅಪ್ಪನದು ಇದ್ದರೂ ಇಲ್ಲವಾಗಿ ಅಮ್ಮ ಮಾತ್ರವೇ ಮಗುವಿನಲ್ಲಿ ಉಳಿದುಕೊಳ್ಳುವ ಸೋಜಿಗದ ಕಥೆಯಿದೆ.
ನಮ್ಮ ಜೀವಿಕೋಶದಲ್ಲಿ ಶಕ್ತಿಯನ್ನು ನಿಭಾಯಿಸುವ ಭಾಗವೊಂದಿದೆ. ಅದನ್ನು ಮೈಟೊಕಾಂಡ್ರಿಯ ಎನ್ನುತ್ತೇವೆ. ಒಂದು ರೀತಿಯಲ್ಲಿ ಇದು ಶಕ್ತಿಕೇಂದ್ರ! ಅದರೊಳಗೂ ಒಂದು ಭಿನ್ನವಾದ ಡಿ.ಎನ್.ಎ ಇರುತ್ತದೆ. ಇದು ಜೀವಿಕೋಶದ ಕೇಂದ್ರದಲ್ಲಿರುವ ಕೋಶಕೇಂದ್ರದ ಡಿ.ಎನ್.ಎ ಜೊತೆಗೆ ಆನುವಂಶಿಕವಾಗಿ ಮಕ್ಕಳಿಗೂ ಸಾಗಿಬರುತ್ತದೆ. ಮೈಟೊಕಾಂಡ್ರಿಯವು ಜೀವಿ ಕೋಶದೊಳಗಿರುವ ವಿಶಿಷ್ಟವಾದ ಮೆಂಬರೇನ್- ಬೌಂಡ್ ಅಂಗ. ಅಂದರೆ ಅವು ಎರಡು ವಿಭಿನ್ನ ಪೊರೆಗಳೊಂದಿಗೆ ಸುತ್ತುವರೆದಿರುತ್ತವೆ (ಮೆಂಬರೇನ್-ಬೌಂಡ್ ಆಗಿರುತ್ತವೆ). ಆ ಪೊರೆಗಳು ಮೈಟೊಕಾಂಡ್ರಿಯದ ಪ್ರಮುಖ ಉದ್ದೇಶವನ್ನು ನಿರ್ವಹಿಸುತ್ತವೆ, ಇದು ಮೂಲಭೂತವಾಗಿ ಶಕ್ತಿಯನ್ನು ಉತ್ಪಾದಿಸುತ್ತದೆ. ಜೀವಕೋಶದೊಳಗಿನ ರಾಸಾಯನಿಕಗಳನ್ನು ಬಳಸಿ ಪ್ರಕ್ರಿಯೆಗಳಾಗಿಸುವ ಮೂಲಕ ಆ ಶಕ್ತಿಯು ಉತ್ಪತ್ತಿಯಾಗುತ್ತದೆ, ಅಂದರೆ, ಪರಿವರ್ತನೆಗೊಳ್ಳುತ್ತದೆ. ಮತ್ತು ಆ ಪರಿವರ್ತನೆಯ ಪ್ರಕ್ರಿಯೆಯು ಎಟಿಪಿ ರೂಪದಲ್ಲಿ ಶಕ್ತಿಯನ್ನು ಉತ್ಪಾದಿಸುತ್ತದೆ, ಏಕೆಂದರೆ ಫಾಸ್ಫೇಟ್ ಹೆಚ್ಚಿನ ಶಕ್ತಿಯ ಬಂಧವಾಗಿದೆ ಮತ್ತು ಕೋಶದೊಳಗಿನ ಇತರ ಪ್ರತಿಕ್ರಿಯೆಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಆದ್ದರಿಂದ ಮೈಟೊಕಾಂಡ್ರಿಯದ ಉದ್ದೇಶ ಆ ಶಕ್ತಿಯನ್ನು ಉತ್ಪಾದಿಸುವುದು.
ಕೆಲವು ವಿಭಿನ್ನ ಕೋಶಗಳು ವಿಭಿನ್ನ ಪ್ರಮಾಣದ ಮೈಟೊಕಾಂಡ್ರಿಯವನ್ನು ಹೊಂದಿರುತ್ತವೆ ಏಕೆಂದರೆ ಅವುಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ ಉದಾಹರಣೆಗೆ, ಸ್ನಾಯು ಬಹಳಷ್ಟು ಮೈಟೊಕಾಂಡ್ರಿಯವನ್ನು ಹೊಂದಿದೆ, ಪಿತ್ತಜನಕಾಂಗ, ಮೂತ್ರಪಿಂಡವೂ ಸಹಾ ಹಾಗೆಯೆ! ಸ್ವಲ್ಪ ಮಟ್ಟಿಗೆ ಮೆದುಳು ಮೈಟೊಕಾಂಡ್ರಿಯವು ಉತ್ಪಾದಿಸುವ ಶಕ್ತಿಯಿಂದ ಹೊರಗುಳಿಯುತ್ತದೆ. ಆದ್ದರಿಂದ ಮೈಟೊಕಾಂಡ್ರಿಯವು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ಮಾರ್ಗಗಳಲ್ಲಿ ಒಂದು ವೇಳೆ ದೋಷವನ್ನು ಹೊಂದಿದ್ದರೆ, ಆಗ ಸ್ನಾಯು, ಮೆದುಳಿನಲ್ಲಿ, ಕೆಲವೊಮ್ಮೆ ಮೂತ್ರಪಿಂಡದಲ್ಲೂ ರೋಗಲಕ್ಷಣಗಳನ್ನು ಕಾಣುತ್ತೇವೆ. ವಿವಿಧ ರೀತಿಯ ಲಕ್ಷಣಗಳು. ಮತ್ತು ಮೈಟೊಕಾಂಡ್ರಿಯದ ಕ್ರಿಯೆಯಲ್ಲಿ ವ್ಯತ್ಯಾಸವಾದಾಗ ಉಂಟುಮಾಡುವ ಎಲ್ಲಾ ವಿಭಿನ್ನ ಕಾಯಿಲೆಗಳು ನಮಗೆ ಇನ್ನೂ ತಿಳಿದಿಲ್ಲ.
ಈ ಮೈಟೊಕಾಂಡ್ರಿಯದ ಅಂದರೆ ಶಕ್ತಿಕೇಂದ್ರದ ಡಿ.ಎನ್.ಎ. ಸಂಪೂರ್ಣ ಅಮ್ಮನ ಬಳುವಳಿ. ಆದರೆ ನಮ್ಮ ಜೀವಿಕೋಶದ ಕೇಂದ್ರ ಡಿಎನ್ಎದಲ್ಲಿ ಅಪ್ಪ-ಅಮ್ಮನ ಸಮಪಾಲು ಸಾಗಿ ಬರುತ್ತದೆ. ಆದರೆ ಶಕ್ತಿಕೇಂದ್ರದ ಗುಣಗಳ ಬಳುವಳಿ ಮಾತ್ರ ಸಂಪೂರ್ಣವಾಗಿ ಅಮ್ಮನದೇ! ಆದ್ದರಿಂದ ನಮ್ಮೊಳಗಿರುವ ಮೈಟೊಕಾಂಡ್ರಿಯದ ಡಿ.ಎನ್.ಎ. ಮಾತ್ರ ನಮ್ಮ ಅಮ್ಮ ಅವರಮ್ಮನಿಂದ, ಅವರಮ್ಮ ಅವರಮ್ಮನಿಂದ ಹೀಗೆ ಅಮ್ಮಂದಿರಿಂದ ಸಾಗಿಬಂದ ಬಳುವಳಿ. ಹೆಣ್ಣಾಗಲಿ ಗಂಡಾಗಲಿ ಅವರೊಳಗಿನ ಮೈಟೊಕಾಂಡ್ರಿಯ ಹೆಣ್ಣಿನದು! ನಮ್ಮ ಅಮ್ಮ ನಿಜಕ್ಕೂ ನಮ್ಮ ಶಕ್ತಿಕೇಂದ್ರವೇ! ಶಕ್ತಿಕೇಂದ್ರವಾಗಿ ಒಟ್ಟಾರೆ ಆರೋಗ್ಯದ ಬಗೆಗೆ ನಿಭಾಯಿಸುವ ಗುಣಗಳ ನಿರ್ವಹಿಸುವ ಸಾಧ್ಯತೆಗಳಿವೆ. ಆದ್ದರಿಂದ ನಮ್ಮ ಮೆದುಳಿನ ಮತ್ತು ಇಂದ್ರಿಯಗಳ ಕ್ರಿಯೆಗಳಲ್ಲಿ ಮೈಟೊಕಾಂಡ್ರಿಯದ ಡಿ.ಎನ್.ಎ ಪಾತ್ರದ ಅರಿವಿನ ಅಧ್ಯಯನಗಳಿಗೆ ಮಹತ್ವ ಬಂದಿದೆ. ಜೀವಿಸೃಷ್ಟಿಯ ಕ್ರಿಯೆಯಲ್ಲಿ ಅಪ್ಪ-ಅಮ್ಮನ ಒಟ್ಟಾರೆ ಪಾತ್ರವಿದ್ದರೂ, ಸಂತತಿಯಲ್ಲಿ ಪಾಲ್ಗೊಳ್ಳುವ ಅಪ್ಪನ ಜೀವಿಕೋಶವು ಸಹಜವಾಗಿ ಅದೂ ಮೈಟೊಕಾಂಡ್ರಿಯವನ್ನು ಹೊಂದಿದ್ದು, ಅದನ್ನೂ ಸಂತತಿಗೆ ವರ್ಗಾಯಿಸಿರುತ್ತದೆ. ಹಾಗಿದ್ದೂ ಅದು ಮಕ್ಕಳಲ್ಲಿ ಭಾಗವಾಗದ ಬಗೆಗೆ ಸೋಜಿಗದ ಸಂಗತಿಗಳಿವೆ. ಹೆಣ್ಣುಭ್ರೂಣವನ್ನು ಹೊಕ್ಕ ಗಂಡಿನ ಜೀವಿಕೋಶದ ಭಾಗವಾದ ಮೈಟೊಕಾಂಡ್ರಿಯವು ಭ್ರೂಣದಲ್ಲಿ ಸೇರುವುದೇ ಇಲ್ಲ. ಹಾಗೇ ಕರಗಿಹೋಗುತ್ತದೆ. ಕೇವಲ ಅಮ್ಮನ ಭ್ರೂಣದಿಂದ ವರ್ಗಾಾಯಿಸಿದ ಮೈಟೊಕಾಂಡ್ರಿಯಾ ಮಾತ್ರವೇ ಸಂತತಿಯ ಭಾಗವಾಗುತ್ತದೆ.
ಹೀಗೆ ಜೀವಿಕೋಶವನ್ನು ಮತ್ತೊಂದು ಜೀವಿಕೋಶವು ಹೊಕ್ಕರೆ ಅದನ್ನು ಸೋಂಕು ಎನ್ನುತ್ತೇವೆ. ನಮಗೆಲ್ಲಾ ಬ್ಯಾಕ್ಟೀರಿಯಾವೇ ಮುಂತಾದ ಸೂಕ್ಷ್ಮಾಣು ಜೀವಿಗಳಿಂದ ಸೋಂಕು ತಗುಲಿ ಕಾಯಿಲೆಗೆ ಒಳಗಾಗುವ ಪ್ರಕ್ರಿಯೆಯ ತರಹವೇ ಮೈಟೊಕಾಂಡ್ರಿಯವೂ ಕೂಡ ಪ್ರಾಣಿ ಹಾಗೂ ಸಸ್ಯಜೀವಿಕೋಶವನ್ನು ಸುಮಾರು 200-300 ಕೋಟಿ ವರ್ಷಗಳ ಹಿಂದೆಯೆ ಸೇರಿಕೊಂಡಿದೆ. ಇದು ಮತ್ತೊಂದು ಬ್ಯಾಕ್ಟೀರಿಯಾದಿಂದಲೆ ಬಂದಿರುವುದೆಂದು ಅಂದಾಜಿಸಲಾಗಿದೆ.
ಆದರೆ ಇಲ್ಲಿನ ಸೋಂಕು ಯಾವುದೇ ಅನಾರೋಗ್ಯವನ್ನು ತರದೆ, ಇಡೀ ದೇಹವನ್ನು ನಿಭಾಯಿಸುವ ಶಕ್ತಿವ್ಯವಸ್ಥೆಯಾಗಿ ಜೀವಿಕೋಶದ ಭಾಗವಾಗಿದೆ. ಇಂತಹಾ ಮತ್ತೊಂದು ಜೀವಿಕೋಶವನ್ನು ಅನುಕೂಲವಾಗಿಸಿ ವರ್ಗಾಯಿಸುವ ಜವಾಬ್ದಾರಿಯನ್ನು ಅಮ್ಮನ ಅಥವಾ ಸ್ತ್ರೀ-ಜೀವಿಕೋಶವು ನಿಭಾಯಿಸುತ್ತಿದೆ.
ಇದೊಂದೇ ಅಲ್ಲಾ ಸಸ್ಯಗಳಲ್ಲಿರುವ ಹರಿದ್ರೇಣುಗಳು, ಅಂದರೆ ಹಸಿರಾಗಿರುವಂತೆ ಮಾಡುವ ಸಸ್ಯಜೀವಿಕೋಶದ ಭಾಗವೂ ಸಹಾ ಹೀಗೆ ತಾಯಿಕೋಶದ ಕೊಡುಗೆಯೇ! ಈ ಹರಿದ್ರೇಣುಗಳೂ ಸಹಾ ಸಂತತಿಯಿಂದ ಸಂತತಿಗೆ ವರ್ಗಾವಣೆಯಾಗುವುದು ಸಸ್ಯದ ಹೆಣ್ಣುಭಾಗದ ಕೊಡುಗೆ. ಇಲ್ಲೂ ಸಹಾ ಗಂಡಿನಿಂದ ವರ್ಗಾಯಿಸಬಹುದಾದ ಹರಿದ್ರೇಣುವು ಮುಂದಿನ ಸಂತತಿಯಲ್ಲಿ ದೇಹದ ಭಾಗವಾಗುವುದಿಲ್ಲ. ಈ ಹರಿದ್ರೇಣುವೂ ಸಹಾ ಮೈಟೊಕಾಂಡ್ರಿಯದಂತೆಯೇ ಬೇರೊಂದು ಜೀವಿಯಿಂದ ಸಸ್ಯಗಳೊಳಗೆ ವಲಸೆಯಾಗಿ ಬಂದದ್ದೇ! ವಿಶೇಷವೆಂದರೆ ಇವುಗಳೂ ಸಹಾ ಮೈಟೊಕಾಂಡ್ರಿಯಾದಂತೆಯೇ ಶಕ್ತಿಯ ಕುರಿತೇ ದುಡಿಯುತ್ತವೆ. ಇದನ್ನು ನಿಸರ್ಗವು ಬಹುಶಃ ತುಂಬು ಜಾಣತನದಿಂದಲೇ ವಿಕಾಸಗೊಳಿಸಿಕೊಂಡಿದೆ.
ಮೈಟೊಕಾಂಡ್ರಿಯವು ವಿಶೇಷವಾದ ಕೆಲಸವನ್ನು ನಿರ್ವಹಿಸುವ ಜೀವಿಕೋಶದ ಭಾಗ. ಈಗಾಗಲೆ ಹೇಳಿದಂತೆ ಅದು ಶಕ್ತಿಕೇಂದ್ರ. ನಮ್ಮ ಉಸಿರಾಟದಿಂದ ಪಡೆದುಕೊಂಡ ಆಮ್ಲಜನಕವನ್ನು ಶಕ್ತಿಗಾಗಿ ದೇಹಕ್ಕೆಲ್ಲಾ ಸಿಗುವಂತೆ ಮಾಡುವುದೇ ಈ ಮೈಟೊಕಾಂಡ್ರಿಯ. ಮೈಟೊಕಾಂಡ್ರಿಯವು ನಮ್ಮ ಜೀವಿಕೋಶದ ಭಾಗವಾಗಿರುವುದೇ ಒಂದು ವಿಶೇಷ. ಏಕೆಂದರೆ, ನಮ್ಮ ಜೀವಿಕೋಶದಲ್ಲಿ ಕೋಶಕೇಂದ್ರವೂ ಡಿ.ಎನ್.ಎ. ಹೊಂದಿದ್ದು, ಈ ಮೈಟೊಕಾಂಡ್ರಿಯವೂ ಡಿ.ಎನ್.ಎ.ಯನ್ನು ಹೊಂದಿರುತ್ತದೆ. ಅಂದರೆ ಈ ಮೈಟೊಕಾಂಡ್ರಿಯವೂ ಒಂದು ಜೀವಿಕೋಶದಂತೆಯೇ! ಜೀವಿಕೋಶದೊಳಗೊಂದು ಜೀವಿಕೋಶವಿದ್ದಂತೆ!
ವ್ಯತ್ಯಾಸವೆಂದರೆ ಮೈಟೊಕಾಂಡ್ರಿಯವು ಆಯಾ ಜೀವಿಯಲ್ಲಿ ಶಕ್ತಿಯ ಪೂರೈಸುವುದಾದರೆ, ಹರಿದ್ರೇಣುಗಳು ನಮಗೆಲ್ಲಾ ತಿಳಿದಂತೆ ಶಕ್ತಿಯನ್ನು ಉತ್ಪತ್ತಿ ಮಾಡುವ ಕೆಲಸವನ್ನು ಮಾಡುತ್ತವೆ. ಸೂರ್ಯನಿಂದ ಶಕ್ತಿಯನ್ನು ಪಡೆದು ಇಂಗಾಲದ ಡೈಆಕ್ಸೈಡನ್ನು ನೀರಿನೊಂದಿಗೆ ಸಂಯೋಜಿಸಿ ಸಕ್ಕರೆ ಮತ್ತು ಆಮ್ಲಜನಕವನ್ನು ಉತ್ಪತ್ತಿಮಾಡುವುದೇ ಈ ಹರಿದ್ರೇಣುಗಳು. ಉಸಿರಾಟದಿಂದ ಹೀರಿಕೊಮಡ ಆಮ್ಲಜನಕದಿಂದ ಒಳಗಿನ ಶಕ್ತಿಯನ್ನು ಹಂಚುವ ಕೆಲಸವನ್ನು ಮೈಟೊಕಾಂಡ್ರಿಯ ಮಾಡುತ್ತದೆ.
ಎಂಥಹಾ ಸೋಜಿಗವಲ್ಲವೇ? ಶಕ್ತಿಯ ಉತ್ಪಾದನೆ ಮತ್ತು ಹಂಚಿಕೆಯಂತಹಾ ಎರಡನ್ನೂ ನಿಭಾಯಿಸುವ ಗುಣವು ಕೇವಲ ಅಮ್ಮನ- ಹೆಣ್ಣಿನಕೊಡುಗೆ! ವಿಕಾಸದ ಹಾದಿಯಲ್ಲಿ ಇವುಗಳ ಸಂಪೂರ್ಣ ವಿವರಗಳು ತುಂಬಾ ಸೈದ್ಧಾಂತಿಕ ಹಾಗೂ ಇನ್ನೂ ಆಸಕ್ತಿದಾಯಿಕ ಸಂಗತಿಗಳನ್ನು ಹುಟ್ಟುಹಾಕಿವೆ. ಎಲ್ಲವನ್ನೂ ಜೀವಿಸಂಪೂರ್ಣ ತಿಳಿವಾಗಿ ಬಿಟ್ಟುಕೊಟ್ಟಿಲ್ಲ. ನಮ್ಮನಮ್ಮಿಲ್ಲರ ಕುತೂಹಲಕ್ಕೆ ಬೆರಗಿಗೆ ತನ್ನ ಮಡಿಲಲ್ಲಿ ಇಂತಹಾ ಸಹಸ್ರಾರು ಸಂಗತಿಗಳನ್ನಿಟ್ಟು ಪೋಷಿಸುತ್ತಿದೆ. ಜೀವಿಯ ಒಟ್ಟಾರೆ ಶಕ್ತಿಯ ನಿಭಾಯಿಸುವಿಕೆಯು ಹೆಣ್ಣಿನ ಕೊಡುಗೆ ಎಂಬುದಂತೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬಹುದೊಡ್ಡ ಸೋಜಿಗವನ್ನು ತಂದಿಟ್ಟಿದೆ. ಇನ್ನೂ ನಮಗರಿಯದವು ಎಷ್ಟೆಷ್ಟಿವೆಯೋ? ಅಂತೂ “ಅಮ್ಮ- ತಾಯಿ- ಹೆಣ್ಣು” ಜೀವದ ನಿಜವಾದ ಶಕ್ತಿಕೇಂದ್ರವೇ!
ಡಾ. ಟಿ.ಎಸ್. ಚನ್ನೇಶ್
Centre For Public Understanding Of Science
channeshts@gmail.com
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.