ವಿಜ್ಞಾನಮಯಿ/ಹೆಣ್ಣಿನ ಬದುಕು ಹಗುರಾಗಿಸಿದ ಪ್ಯಾಡ್‌ಗಳು – ಸುಮಂಗಲಾ ಮುಮ್ಮಿಗಟ್ಟಿ

ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿರುವುದನ್ನು ನಾವು ನೋಡುತ್ತೇವೆ , ಆದರೆ ಆ ಹಾದಿ ಆಕೆಗೆ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಆದರೆ ಅವೆಲ್ಲವನ್ನೂ ಮೀರಿ ಆಕೆ ಇಂದಿನ ಸ್ಥಿತಿಯನ್ನು ತಲುಪಲು ವಿಜ್ಞಾನ ಮತ್ತು ತಂತ್ರಜ್ಞಾನ ತನ್ನದೇ ಕೊಡುಗೆಯನ್ನು ನೀಡಿದೆ. ವಿಜ್ಞಾನ ಮತ್ತುತಂತ್ರಜ್ಞಾನ ಕ್ಷೇತ್ರಕ್ಕೆ ಮಹಿಳೆಯೂ ಕೂಡ ಮಹತ್ತರ ಕಾಣಿಕೆಯನ್ನುಕೊಟ್ಟಿದ್ದಾಳೆ. ಮಹಿಳೆಯ ಋತು ಸ್ರಾವದ ದಿನಗಳು, ಬಸಿರು, ಬಾಣಂತನಗಳುಆಕೆಯನ್ನು ಸದಾ ಭಾದಿಸುತ್ತಿದ್ದ ಅಂಶಗಳಾಗಿದ್ದವು. ಸುಮಾರು ಹತ್ತು ಸಾವಿರವರ್ಷಗಳ ಹಿಂದೆ ಮನುಷ್ಯ ಕೃಷಿಯನ್ನು ಆರಂಭಿಸಿದಾಗ ಒಂದೆಡೆ ನೆಲೆ
ನಿಂತ. ಕೃಷಿಯಲ್ಲಿ ಕೈ ಜೋಡಿಸುವುದರ ಜೊತೆ ಜೊತೆಗೇ ಆಕೆ ಮನೆ ಮಕ್ಕಳ ಜವಾಬ್ದಾರಿಯನ್ನು ಹೊತ್ತಳು. ಆಹಾರದ ಸುರಕ್ಷಿತ ಸಂಗ್ರಹ, ಬೆಳೆದ ಆಹಾರ ಪದಾರ್ಥಗಳನ್ನು ಮುಂದಿನ ಬೆಳೆಯವರೆಗೆ ಜತನವಾಗಿರಿಸುವುದು, ಕುಟುಂಬ ವ್ಯವಸ್ಠೆಯ ನಿರ್ವಹಣೆ ಯಾವುವೂ ಸುಲಭವಾಗಿರಲಿಲ್ಲ. ಆಕೆಯ ಅಂತಃಶಕ್ತಿ ಅವೆಲ್ಲವನ್ನೂ ನಿಭಾಯಿಸಲು ಸಾಧ್ಯವಾಗಿಸಿತು. ಆಕೆ ಮನೆಯಿಂದ ಹೊರಬಂದು ಕೆಲಸಕ್ಕೆ ತೊಡಗಿಸಿಕೊಳ್ಳಲು ಆಕೆಗೆ ನೆರವಾದ ವಿಜ್ಞಾನದ ಮಹತ್ತರ ಅವಿಷ್ಕಾರಗಳಲ್ಲಿ ಅತ್ಯಂತ  ಪ್ರಮುಖವಾದವುಗಳಲ್ಲಿ ಸ್ಯಾನಿಟರಿ ನ್ಯಾಪಕಿನ್ ಮತ್ತು ಕುಟುಂಬ ಯೋಜನೆಯ ಕಾರ್ಯಕ್ರಮಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ.

ಮೊದಲು ಬಸಿರು ಅಥವಾ ಬಾಣಂತನ ಹಂತದಲ್ಲಿ ಮಾತ್ರ ಇರುತ್ತಿದ್ದ ಮಹಿಳೆ ಈಗ ಒಂದಷ್ಟು ಬಿಡುವಿನಿಂದ ಉಸಿರಾಡಿದಳು. ಮನೆಯಿಂದ ಹೊರಬಂದು ಔದ್ಯೋಗಿಕ ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡಳು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಗಮನ ಹರಿಸಿದಳು. ಅದುವರೆಗೆ ಕೇವಲ ಒಂದು ಹಂತದವರೆಗೆ ಮಾತ್ರ ಕಾರ್ಯ ನಿರ್ವಹಿಸಲು ಆಕೆಗೆ ಸಾಧ್ಯವಾಗಿತ್ತು. ಋತು ಸ್ರಾವದ ಸಮಯದಲ್ಲಿ ಅದುವರೆಗೆ ಬಳಸುತ್ತಿದ್ದ ಬಟ್ಟೆಯ ಪ್ಯಾಡ್ ಗಳು ಅಷ್ಟೇನೂ ಅರೋಗ್ಯಕರವಾದವುಗಳಾಗಿರಲಿಲ್ಲ. ಈಗಲೂ ನಮ್ಮ ದೇಶದಲ್ಲಿ ತಾಯಿ ಮಗಳು ಒಂದೇ ಬಟ್ಟೆಯನ್ನು ಬಳಸುವ ಉದಾಹರಣೆಗಳು ಸಾಕಷ್ಟಿವೆ. ಬಟ್ಟೆಯ ಪ್ಯಾಡ್ ಗಳು ಉಂಟು ಮಾಡುತ್ತಿದ್ದ ತುರಿಕೆ, ತರಚುವಿಕೆ, ಅವುಗಳನ್ನು ಒಗೆದು ಒಣಗಿಸುವ ಸಮಸ್ಯೆ, ಅದರಿಂದ ಉಂಟಾಗುತ್ತಿದ್ದ ಸೋಂಕು ಎಲ್ಲವೂ ಆಕೆ ಹೇಳಿಕೊಳ್ಳಲಾರದೆ ಅನುಭವಿಸಿದ ಸಮಸ್ಯೆಗಳು. ಕೇಳಲು ಬಹಳ ಸಾಮಾನ್ಯ ಎಂದೆನಿಸಿದರೂ ಕೂಡ ಅನುಭವಿಸಿದ ಮಹಿಳೆ ಮಾತ್ರ ಬಲ್ಲಳು ಅವು ಕೊಡುವ ಹಿಂಸೆಯನ್ನು. ವಿಜ್ಞಾನ ಇಲ್ಲಿ ಆಕೆಯ ಸಹಾಯಕ್ಕೆ ಬಂತು. ಬೆಂಜುಮಿನ್ ಫ್ರಾಂಕ್ಲಿನ್ ಯುದ್ದದಲ್ಲಿ ಗಾಯಗೊಂಡ ಸೈನಿಕರ ರಕ್ತ ಸ್ರಾವವನ್ನು ಹೀರಲು ದಪ್ಪನೆಯ ಪ್ಯಾಡ್ ಗಳನ್ನು ತಯಾರಿಸಿದ್ದು ಸ್ಯಾನಿಟರಿ ಪ್ಯಾಡಗಳ ಆವಿಷ್ಕಾರಕ್ಕೆ ನಾಂದಿಯಾಯಿತು. ಅದರೆ ಇವು ವಾಣಿಜ್ಯಾತ್ಮಕವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದುಸುಮಾರು 1888 ರಲ್ಲಿ.

ಲಿಸ್ಟರ್ಸ್ ಟವೆಲ್ ಎಂದು ಕರೆಯಲಾದ ಮೊದಲ ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪ್ ಕಿನ್ ಗಳುಅಮೆರಿಕದ ಮಾರುಕಟ್ಟೆಗೆ ಬಂದವು. ಇವಕ್ಕೆ ಸ್ಫೂರ್ತಿಯಾದದ್ದು ಆಸ್ಪತ್ರೆಯ ದಾದಿಯರು ಬಳಸುತ್ತಿದ್ದ ಮರದ ಹೊಟ್ಟನ್ನು ತುಂಬಿದ್ದ ಹೀರುಪ್ಯಾಡಗಳು. ಅವರೆ ಮೊಟ್ಟಮೊದಲ ಬಳಸಿ ಬಿಸಾಡುವ ಪ್ಯಾಡಗಳನ್ನು ಬಳಸಿದವರು. ಆಸ್ಪತ್ರೆಯಲ್ಲಿ ಅವು ಅವರಿಗೆ ಲಭ್ಯವಿದ್ದದ್ದು ಇದಕ್ಕೆ ಕಾರಣ. ಇವು ಒಂದು ಬಾರಿ ಮಾತ್ರ ಬಳಕೆಗೆ ಯೋಗ್ಯವಾದದ್ದರಿಂದ ಎಲ್ಲರೂ ಕೊಳ್ಳಲು ಸಾಧ್ಯವಿರದಷ್ಟು ದುಬಾರಿಯಾಗಿದ್ದವು. ಜಾನ್ಸನ್ ಮತ್ತು ಜಾನ್ಸ್ ನ್ ಹಾಗೂ ಕೊಟೆಕ್ಸ್ ಕಂಪನಿಗಳು ಇವನ್ನು ಮಾರುಕಟ್ಟೆಗೆ ತಂದವು. ಮೊದಲು ಬ್ಯಾಂಡೇಜ್ ತಯಾರಕರು ಮಾತ್ರ ಇವನ್ನು ತಯಾರಿಸುತ್ತಿದ್ದದ್ದು ಇವು ಎಂತಹ ಉತ್ಪನ್ನಗಳಾಗಿದ್ದವು ಎಂಬುದನ್ನು ತೋರಿಸುತ್ತದೆ. ಮೊದಲು ಇವನ್ನು ಕೊಳ್ಳುವ ಮಹಿಳೆಯರು ಅಂಗಡಿಯಲ್ಲಿ ಇಟ್ಟಿದ್ದ ಡಬ್ಬಿಯೊಂದರಲ್ಲಿ ಹಣ ಹಾಕಿ ಅಲ್ಲಿ ಇಟ್ಟಿರುತ್ತಿದ್ದ ಪ್ಯಾಕೆಟ್ಟನ್ನು ತೆಗೆದುಕೊಳ್ಳುತ್ತಿದ್ದರು. ಅಂದರೆ ಅದನ್ನು ಕೊಳ್ಳಲು ಅವರು ಅಂಗಡಿಯವನನ್ನು ಕೇಳುತ್ತಿರಲಿಲ್ಲ. ನಮ್ಮಲ್ಲಿ ಇಂದಿಗೂ ಕೂಡ ಇವನ್ನು ಮುಜುಗುರದಿಂದಲೇ ಕೊಳ್ಳುವ ಮಹಿಳೆಯರು ಇದ್ದಾರೆ. ಮೊದಲ ಸ್ಯಾನಿಟರಿ ಪ್ಯಾಡ್ ಗಳಲ್ಲಿ ಕಾಟನ್ ವೂಲ್ ನ್ನು ಇರಿಸಿ ಅದರ ಎರಡು ತುದಿಗಳನ್ನು ಕುಣಿಕೆಯಾಗಿಸಿ ಸೊಂಟದ ಪಟ್ಟಿಯಲ್ಲಿ ಸಿಕ್ಕಿಸಿ ಒಳ ಉಡುಪಿನ ಒಳಭಾಗದಲ್ಲಿ ಧರಿಸಲು ಅನುಕೂಲವಾಗುವಂತೆ ಸಿಧ್ಧಪಡಿಸಲಾಗಿತ್ತು ಆದರೆ ಅದು ಕುಣಿಕೆಯಿಂದ ಜಾರುವ ಭೀತಿ ಇದ್ದೇ ಇರುತ್ತಿತ್ತು. ದಿನಗಳಲ್ಲಿ ಅಂದರೆ 1980  ರಲ್ಲಿ ಪಟ್ಟಿಗಳು ಮರೆಯಾಗಿ ಪ್ಯಾಡ್‌ಗಳ ತಳಕ್ಕೆ ಅಂಟು ಪಟ್ಟಿಯನ್ನು ಹಚ್ಚುವ ಪದ್ಧತಿ ಬಳಕೆಗೆ ಬಂದಿತು. ಈ ಅಂಟು ಪಟ್ಟಿಯನ್ನು ಕಿತ್ತು ಒಳ ಉಡುಪಿನ ಒಳ ಭಾಗಕ್ಕೆ ಅಂಟಿಸುವುರಿಂದ ಇದು ಬೇಕಾದ ಸ್ಥಳದಲ್ಲಿ ಕದಲದೇ ಇರುತ್ತದೆ. ಇದು ಜನಪ್ರಿಯವಾದಾಗ ಬೆಲ್ಟ್‌ನ ಪ್ಯಾಡುಗಳು ಮಾರುಕಟ್ಟೆಯಿಂದ ಹಿಂದೆ ಸರಿದವು.

90 ರ ದಶಕದಲ್ಲಿ  ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಮಹತ್ವದ ಬದಲಾವಣೆಗಳಾದವು ಅವುಗಳಲ್ಲಿ ಬಳಸುತ್ತಿದ್ದ ವಸ್ತು, ಅವುಗಳ ದಪ್ಪ, ಆಕಾರ, ಎಲ್ಲವೂ ಬದಲಾಗುತ್ತಲೇ ಹೋದವು. ಮೊದಲಿನ ಎರಡು ಸೆಂಟಿಮೀಟರ್ ದಪ್ಪದ ಪ್ಯಾಡ್ ಗಳು ಸೋರುತ್ತಿದ್ದವು ಕೆಲವು ಕಂಪನಿಗಳು ಬದಿಗಳಲ್ಲಿ ರೆಕ್ಕೆಗಳನ್ನು ಸೇರಿಸಿದವು. ಇನ್ನೂ ಕೆಲವು ಪ್ಯಾಡ್‌ಗಳನ್ನು ತೆಳುವಾಗಿಸಿದವು. ಅದಕ್ಕಾಗಿ ಸ್ಪ್ಯಾಗ್ನುಮ್, ಪಾಲಿ ಅಕ್ರಲೇಟ್ ಎಂಬ ಹೆಚ್ಚು ಹೀರುವ ಜೆಲ್ ಗಳನ್ನು ಬಳಸಲಾಯಿತು. ಇವು ಪೆಟ್ರೋಲಿಯಂ ಉತ್ಪನ್ನಗಳಾಗಿದ್ದವು. ಹೀರು ಭಾಗದ ಮೂಲ ವಸ್ತು ಮರದ ಪಲ್ಪನಿಂದಾಗಿದ್ದರೆ, ಪ್ಯಾಡ್ ದಪ್ಪನಾಗಿರುತ್ತಿತ್ತು, ಈಗ ಆ ಜಾಗದಲ್ಲಿ ಪಾಲಿ ಅಕ್ರಲೇಟ್ ಜೆಲ್ ಬಂದದ್ದರಿಂದ ಪ್ಯಾಡ್ ಗಳು ತೆಳುವಾದವು. ಇದು ದ್ರವವನ್ನು ಬೇಗ ಹೀರುವುದಲ್ಲದೆ ಬಹಳ ಹೊತ್ತು ಅದನ್ನು ಹಿಡಿದಿಟ್ಟು ಕೊಳ್ಳುತ್ತಿತ್ತು. ಪ್ಯಾಡ್ ನ ಮೇಲಿನ ಭಾಗ ಪಾಲಿಪ್ರೊಪಲೀನ ನಿಂದ ಆಗಿದ್ದು, ಇಂದು ಮಾರುಕಟ್ಟೆಯಲ್ಲಿ ಹಲವಾರು ವಿಧದ, ಹಲವಾರು ಸಂದರ್ಭಗಳಲ್ಲಿ ಬಳಸಲು ಅನುಕೂಲವಿರುವ ಪ್ಯಾಡ್ ಗಳು ಲಭ್ಯವಿವೆ. ಇವುಗಳಲ್ಲಿ ಕೆಲವು ಸುವಾಸನೆಯುಕ್ತವೂ, ಆಂಟಿ ಬ್ಯಾಕ್ಟೀರಿಯಾ ರಾಸಾಯನಿಕವನ್ನು ಒಳಗೊಂಡಿರುವಂಥಹವೂ ಆಗಿವೆ.

ಈ ಮಧ್ಯೆ ಬಟ್ಟೆಯ ಸ್ಯಾನಿಟರಿ ಪ್ಯಾಡುಗಳು ಮರಳಿ ಹೊಸ ರೂಪವನ್ನು ಪಡೆದು ಕೊಂಡು ಬಂದವು. ಅವುಗಳಲ್ಲಿ ಇರಿಸಿದ್ದ ಚೀಲದಂಥಹ ರಚನೆಯಲ್ಲಿ ಹೀರು ವಸ್ತುವನ್ನು
ಇರಿಸಬಹುದಾಗಿದೆ. ಇವನ್ನು ಶುಚಿಗೊಳಿಸಿ ಮತ್ತೆ ಬಳಸಬಹುದು. ರಾಸಾಯನಿಕಗಳ ಬಳಕೆ ಇಲ್ಲದಿರುವುದು ಹಾಗೂ ಕಡಿಮೆ ಬೆಲೆ ಅವನ್ನು ಆಕರ್ಷಣೀಯವಾಗಿಸಿದರೂ ಅವನ್ನು ತೊಳೆದು ಒಣಗಿಸುವ ಹಾಗೂ ಸ್ವಚ್ಚತೆಯ ಕೊರತೆ ಅವನ್ನು ಅಷ್ಟಾಗಿ ಜನಪ್ರಿಯಗೊಳಿಸಿಲ್ಲ. ಇವೆಲ್ಲದರ ನಡುವೆ ಸ್ಯಾನಿಟರಿ ಪ್ಯಾಡ್‌ಗಳ ಬೆಲೆ ಕಡಿಮೆಗೊಳಿಸುವ ಪ್ರಯತ್ನ ನಡೆಯುತ್ತಲೇ ಬಂತು. ಈ ನಿಟ್ಟಿನಲ್ಲಿ ಭಾರತದ ತಮಿಳುನಾಡಿನ
ಕೊಯಿಮತ್ತೂರಿನ ಅರುಣಾಚಲಂ ಮುರುಗನಾಥಂ ಕಂಡು ಹಿಡಿದ ಮಷಿನ್‌ನ ಕಥೆ ಬಾಲಿವುಡ್ ಸಿನೆಮಾ ಕೂಡಾ ಆಗಿರುವುದು ಎಲ್ಲರಿಗೆ ತಿಳಿದಿರುವ ವಿಷಯ.

ಹಾಗೆ ನೋಡಿದರೆ ಭಾರತದಲ್ಲಿ 2018 ನ್ನು ಸ್ಯಾನಿಟರಿ ಪ್ಯಾಡ್ ವರ್ಷ ಎಂದೇ ಕರೆಯಬಹುದು. ಸಿನೆಮಾದ ಜೊತೆ ಜೊತೆಗೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಸ್ಯಾನಿಟರಿ ಪ್ಯಾಡ್‌ಗಾಗಿ ಮಾತನಾಡಿದರು. ಮಹಿಳೆಯ ಸ್ವಚ್ಚತೆಯ , ಆರೋಗ್ಯದ, ವಿಷಯ ಈಗ ಆಕೆಯದಷ್ಟೇ ಆಗಿ ಉಳಿದಿಲ್ಲ. ಇದರ ಜವಾಬ್ದಾರಿಯನ್ನು ಎಲ್ಲರೂ ತೆಗೆದು ಕೊಳ್ಳುತ್ತಿದ್ದಾರೆ ಎನ್ನುವುದು ಸಂತಸದ ವಿಷಯ. ಕೇಂದ್ರ ಸರಕಾರವೂ ಸಹ ಈ ನಿಟ್ಟಿನಲ್ಲಿ ಕೈಗೊಂಡ ಮಹತ್ವದ ತೀರ್ಮಾನವನ್ನು ನೀವು ಇದೇ ಪತ್ರಿಕೆಯಲ್ಲಿ ಓದಿದ್ದೀರಿ. ಎಲ್ಲವೂ ಸರಿಯೇ, ಆದರೆ ಭಾರತದಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಇನ್ನೂ ಎಲ್ಲರನ್ನೂ ತಲುಪವ ಬೆಲೆಗೆ ದೊರೆಯುತ್ತಿಲ್ಲ. ಅದರ ಜೊತೆಗೆ ಇವುಗಳ ತ್ಯಾಜ್ಯ ನಿರ್ವಹಣೆ ಸಮಸ್ಯೆಯಾಗುತ್ತಿದೆ. ಪರಿಸರದ ದೃಷ್ಟಿಯಿಂದ ಇವುಗಳ ವೈಜ್ಞಾನಿಕ ನಿರ್ವಹಣೆಯ, ಬದಲಿ ವ್ಯವಸ್ಥೆಯ ಪ್ರಯತ್ನಗಳು ನಡೆದಿವೆ ಅವುಗಳನ್ನು ಮುಂದಿನ ಅಂಕಣಗಳಲ್ಲಿ ತಿಳಿಯೋಣ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ವಿಜ್ಞಾನಮಯಿ/ಹೆಣ್ಣಿನ ಬದುಕು ಹಗುರಾಗಿಸಿದ ಪ್ಯಾಡ್‌ಗಳು – ಸುಮಂಗಲಾ ಮುಮ್ಮಿಗಟ್ಟಿ

  • July 31, 2018 at 6:33 pm
    Permalink

    ಹಿತೈಷಿಣಿಯಲ್ಲಿ ಅತ್ಯಂತ ಪ್ರೌಢ ಮಟ್ಟದ ಲೇಖನಗಳು ಪ್ರಕಟವಾಗುತ್ತಿವೆ. ಚಿಂತನಶೀಲತೆಯನ್ನು ಹೆಚ್ಚಿಸಿ ಓದಿನ ತೃಪ್ತಿ ನೀಡುತ್ತಿವೆ.
    ‘ಹಿತೈಷಿಣಿ’ ಗೆ ಸಕಲ ಶುಭಕಾಮನೆಗಳು.

    Reply

Leave a Reply

Your email address will not be published. Required fields are marked *