ವಿಜ್ಞಾನಮಯಿ/ಹೀಗಿರಲಿ ನಮ್ಮ ಗಣಪ – ಸುಮಂಗಲಾ ಮುಮ್ಮಿಗಟ್ಟಿ

ಶ್ರಾವಣ  ಬಂದರೆ  ಹಬ್ಬಗಳ  ಸರತಿ  ಆರಂಭವಾದಂತೆ. ಇತ್ತೀಚೆಗಷ್ಟೇ ವರಮಹಾಲಕ್ಷ್ಮಿ ವ್ರತವನ್ನು ಮುಗಿಸಿರುವ ನಮ್ಮ ಸಹೋದರಿಯರು ಗೌರಿ  ಗಣೇಶರನ್ನು ಸ್ವಾಗತಿಸಲು ಸನ್ನದ್ಧರಾಗುತ್ತಿದ್ದಾರೆ. ಈ ಸಮಯದಲ್ಲಿ ವಿಜ್ಞಾನಮಯಿ ನಮ್ಮ ಮನೆಯ ವಿನಾಯಕ ಹೇಗಿದ್ದರೆ ನಮಗೂ  ಪರಿಸರಕ್ಕೂ  ಸುರಕ್ಷಿತ ಎನ್ನುವುದನ್ನು ಚರ್ಚಿಸುತ್ತಿದೆ. ಹೌದು ಮನೆಯ ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲರು ಇನ್ನು ಹಬ್ಬ ಹರಿದಿನಗಳ ಆಚರಣೆಯಂತೂ ಅವರದೇ ನಿರ್ಧಾರ. ಪರಿಸರದ ಬಗ್ಗೆ ನಾವು ತೆಗೆದುಕೊಳ್ಳುವ ಸಣ್ಣ ಸಣ್ಣ ನಿರ್ಧಾರಗಳು ಸಹ ದೊಡ್ಡ ಪರಿಣಾಮಕ್ಕೆ ಕಾರಣವಾಗುತ್ತವೆ. ನಮ್ಮ ಕಾವೇರಿಯ ನಾಡು ಕೊಡಗು, ಕೇರಳದ ನೋವನ್ನು ನಾನಿಲ್ಲಿ ಮತ್ತೆ ಹೇಳಬೇಕಿಲ್ಲ.

ಹೂಳು ತುಂಬಿದ ಜಲಾಶಯಗಳು, ಕೆರೆಗಳು ಇದಕ್ಕೆ ಒಂದು ಕಾರಣವಾದರೆ, ನಾವು ತ್ಯಜಿಸುವ ತ್ಯಾಜ್ಯಗಳು, ಪ್ಲಾಸ್ಟಿಕ್ ವಸ್ತುಗಳು ಪರೋಕ್ಷವಾಗಿ ಕಾರಣವಾಗುತ್ತವೆ. ಇರಲಿ, ಅದನ್ನು ಮತ್ತೊಮ್ಮೆ ಚರ್ಚಿಸೋಣ. ಈಗ ಸದ್ಯಕ್ಕೆ ನಮ್ಮ ಗಣಪತಿಯ ಹಬ್ಬ ಪರಿಸರಕ್ಕೆ ಹಾನಿಯನ್ನುಂಟು ಮಾಡದಂತೆ ಏಕೆ? ಹೇಗೆ ಮಾಡುವುದು ಯೋಚಿಸೋಣ.

ಗಣೇಶ ನಮ್ಮೆಲ್ಲರ ಅಚ್ಚು ಮೆಚ್ಚಿನ ದೇವತೆ, ಮಾನವ ದೇಹ, ಆನೆಯ ಮುಖ, ಹಾವಿನ ಪಟ್ಟಿ, ಮೂಷಿಕ ವಾಹನ ಮತ್ತು ಅವನ ದೇಹವಾಗಿರುವ ಮಣ್ಣು ಎಲ್ಲವೂ ಪ್ರಕೃತಿಯ ಸಂಕೇತ. ಜೀವವೈವಿಧ್ಯವನ್ನು ಒಂದಾಗಿ, ಪ್ರತಿನಿಧಿಸುವ ಅವನು ಸುಸ್ಥಿರ ಅಭಿವೃಧ್ಧಿಯ ಪ್ರಚಾರಕ. ಅವನ ವಿಗ್ರಹ ಮಣ್ಣಿನಿಂದ ಆಗಿದ್ದಾಗ ಮಾತ್ರ ಅವನ ಈ ಸಂದೇಶದ ಸಾರ್ಥಕತೆ. ಯಾವುದೋ ಕೆರೆಯ ಮಣ್ಣಿನಿಂದ ಮಾಡಿದ ಅವನು ಮತ್ತಾವುದೋ ಕೆರೆಯಲ್ಲಿ ಮುಳುಗುತ್ತಾನೆ ಅದೂ ದೊಡ್ದ ಕೆರೆಯಲ್ಲಿ. ಇದರ ಹಿಂದಿರುವ ಉದಾತ್ತವಾದ ಉದ್ದೇಶವನ್ನು ಗಮನಿಸಿ ಆ ನೆಪದಲ್ಲಿಯಾದರೂ ಸಣ್ಣ ಕೆರೆಯ ಹೂಳು ತೆಗೆಯುವಂತಾಗಬೇಕು. ದೊಡ್ಡ ಕೆರೆಯನ್ನು ಅವನು ಸೇರಬೇಕು ಅದಕ್ಕಾಗಿ ಆ ಕೆರೆಯೂ ಕೂಡ ಶುಚಿಗೊಳಿಸಿಕೊಂಡು ಸಿದ್ದವಾಗಬೇಕು. ಆದರೆ ನಾವು ಮಾಡುತ್ತಿರುವುದೇನು? ಕೆರೆಗಳಿಗೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಮೂರ್ತಿಗಳನ್ನು ತರುತ್ತೇವೆ. ಅವುಗಳನ್ನು ಅಂದಗಾಣಿಸಲು ಅವುಗಳಿಗೆ ಬಳಿದ ಬಣ್ಣಗಳು ಎನಾಮಲ್ಲಿನವು. ಅದರಲ್ಲಿರುವ ಸೀಸ, ಕ್ರೋಮಿಯಂ, ಕ್ಯಾಡ್ಮಿಯಂ, ಪಾದರಸ, ಅವುಗಳ ಸಂಯುಕ್ತಗಳು ಪರಿಸರಕ್ಕೂ ನಾವೂ ಸೇರಿದ ಹಾಗೆ ಇತರ ಜೀವಿಗಳಿಗೆ ಮಾರಕ. ಗರಿಕೆ ಗಣಪನಿಗೆ ಪ್ರೀತಿ ಪಾತ್ರ ಆದರೆ ಈ ರಾಸಯನಿಕಗಳಿರುವ ಹೊಳೆ ದಂಡೆಯ ಗರಿಕೆ ವಿಷ ಪೂರಿತವಾಗಿರುತ್ತದೆ. ಬುದ್ಧಿ ಪ್ರದಾಯಕನಾದ ಗಣಪನ ಬಣ್ಣದ ಸೀಸ ನೀರು,ಗಾಳಿ, ಅಹಾರದ ಮೂಲಕ ನಮ್ಮ ದೇಹವನ್ನು ಸೇರುತ್ತದೆ ರಕ್ತದಲ್ಲಿ ಸೇರಿ ದೇಹದಲ್ಲಿ ಮೂತ್ರಪಿಂಡ, ಹೃದಯ ಮತ್ತು ಯಕೃತ್ತುಗಳಿಗೆ ಹಾನಿಯುಂಟು ಮಾಡುತ್ತದೆ, ನಮ್ಮಂತೆ ಇತರ ಜೀವಿಗಳಿಗೂ ಕೂಡ. ಇದು ಮಿದುಳಿನ ನರಕೋಶಗಳನ್ನು ಅದರಲ್ಲೂ ಮಕ್ಕಳ ನರಕೋಶವನ್ನು ಸೇರಿದರೆ, ಅವರ ಬುದ್ಧಿಶಕ್ತಿಯನ್ನು ಕುಂಟಿತಗೊಳಿಸುತ್ತದೆ. ಹೀಗೆ ಬುದ್ಧಿಪ್ರದಾಯಕನಾದ ಗಣೇಶನನ್ನು ನಾವು ಬುದ್ಧಿವಿನಾಶಕನ್ನಾಗಿ, ವಿಘ್ನವಿನಾಶಕನನ್ನು, ವಿಘ್ನಪ್ರದಾಯಕನನ್ನಾಗಿ ಮಾಡುತ್ತಿದ್ದೇವೆ. ನಮಗೇ ಹೀಗಾದರೆ ಇನ್ನು ಬೇರೆಯ ಜೀವಿಗಳ ಗತಿಯೇನು?

ಇನ್ನು ಗಣಪನ ಅಲಂಕಾರಕ್ಕೆ ನಾವು ಬಳಸುವ ಪ್ಲಾಸ್ಟಿಕ್ಕಿನ ಹೂವು, ಥರ್ಮಕೋಲ್ ಮಂಟಪ, ಇವೆಲ್ಲವೂ ಪರಿಸರಕ್ಕೆ ಹಾನಿಕಾರಕ. ಪೂಜೆಯ ನಂತರ ಅವನ್ನು ಎಸೆಯುತ್ತೇವೆ, ಇಲ್ಲ ನೀರಿಗೆ ಬಿಡುತ್ತೇವೆ. ಜೈವಿಕವಾಗಿ ವಿಘಟನೆಗೊಳ್ಳದ ಇವುಗಳಿಂದ ಮಣ್ಣು ,ನೀರು ಎಲ್ಲವೂ ಕಲುಷಿತಗೊಳ್ಳುತ್ತದೆ ಮಣ್ಣಿನಲ್ಲಿರುವ ಎರೆಹುಳುವಿನಿಂದ,ಕೆರೆಯ ನೀರಿನಲ್ಲಿರುವ ಮೀನು, ಹಾವು, ಏಡಿ ಮುಂತಾದ ಜೀವಿಗಳು ರಾಸಾಯನಿಕಗಳಿಂದ ಸಾಯುತ್ತವೆ. ಇದು ಕೇವಲ ಕಲ್ಪನೆಯಲ್ಲ. ಬೆಂಗಳೂರು ಹಾಗೂ ರಾಜ್ಯದ ಇತರ ನಗರಗಳ ದೊಡ್ಡ ಕೆರೆಗಳಲ್ಲಿ ನಡೆಸಿದ ಅಧ್ಯಯನಗಳಲ್ಲಿ, ಹಬ್ಬಕ್ಕೆ ಮುಂಚಿನ ಹಾಗು ಹಬ್ಬದ ನಂತರದ ರಾಸಾಯನಿಕಗಳ ಪ್ರಮಾಣದಲ್ಲಿ,ಜೀವಿಗಳ ಸಂಖ್ಯೆಯಲ್ಲಿ ಕಂಡು ಬರುವ ವ್ಯತ್ಯಾಸ ಇದನ್ನು ದೃಢಪಡಿಸಿದೆ.

ಇದು ಮನೆಗಳ ಗಣಪನ ವಿಷಯವಾದರೆ, ಸಾರ್ವಜನಿಕ ಗಣಪನ ಪಾತ್ರವಂತೂ ಇನ್ನೂ ಗಂಭೀರ. ಗಣೇಶನ ಹಬ್ಬ ಸಾರ್ವಜನಿಕವಾದದ್ದು. ಭಾರತದ ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ, ಜಾತಿ ಮತಗಳ ಭೇಧವನ್ನು ತೊರೆದು ಎಲ್ಲ ಜನಾಂಗಗಳು ಇದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ, ಜನರಲ್ಲಿ ಒಗ್ಗಟ್ಟನ್ನು ಮೂಡಿಸುವ ಉದ್ದೇಶ ಅಂದಿನ ನಾಯಕರದಾಗಿತ್ತು. ಅದು ಯಶಸ್ವಿಯೂ ಆಯಿತು. ಆದರೆ ಇಂದು ಅದು ನಿಜ ಅರ್ಥವನ್ನು ಕಳೆದುಕೊಂಡು ನೆಲ, ಜಲ, ವಾಯು, ಶಬ್ಧ ಮಾಲಿನ್ಯದ ಮೂಲವಾಗಿದೆ. ಮನೆ ಮನೆಗೆ ಹೋಗಿ, ಇಲ್ಲವೇ ರಸ್ತೆಯಲ್ಲಿ ಡಬ್ಬ ಹಿಡಿದು ಜನರಿಗೆ ತೊಂದರೆಯನ್ನು ಕೊಡುತ್ತ ಹಣ ಸಂಗ್ರಹಿಸುವುದರೊಂದಿಗೆ ಇದು ಆರಂಭವಾಗುತ್ತದೆ. ನಂತರ ದೊಡ್ಡ ದೊಡ್ಡ ಪ್ಲಾಸ್ಟರ್ ಅಫ್ ಪ್ಯಾರಿಸ್ ನ ಮೂರ್ತಿಗಳಿಗೆ ಆರ್ಡರ್ ಕೊಡುತ್ತಾರೆ. ಈ ರಸ್ತೆಯ ಅಥವಾ ಸಾರ್ವಜನಿಕ ಗಣೇಶಗಳಿಗೆ ಹಬ್ಬದ ದಿನ ಮಾತ್ರ ಎಂಬುದಿಲ್ಲ, ಇಡಿಯ ತಿಂಗಳು ಇವರು ಗಣೇಶನನ್ನು ಇಡುತ್ತಾರೆ. ಮೂರು, ಐದು ದಿನಗಳ ಈ ಗಣೇಶನ ಉತ್ಸವ ಕರ್ಕಶವಾದ ಮೈಕಾಸುರನ ಹಾವಳಿಯಿಂದ ಸುತ್ತು ಮುತ್ತಲಿನ ಜನರಿಗೆ ಹಿಂಸೆಯನ್ನು ಉಂಟುಮಾಡುತ್ತದೆ, ಇದಕ್ಕೆ ಸಮಯದ ಮಿತಿಯಿದ್ದರೂ ಕೂಡ ಜನರು ಅನುಸರಿಸುವುದು ಕಡಿಮೆ. ಗಣೇಶನನ್ನು ತರುವಾಗ ಮತ್ತು ಕಳಿಸುವಾಗ ಬಳಸುವ ಪಟಾಕಿಗಳ ಸದ್ದು ಸುತ್ತಲಿನ ಪ್ರಾಣಿ ಪಕ್ಷಿಗಳು, ಮಕ್ಕಳು ಮತ್ತು ವೃದ್ದರಿಗೆ ತೊಂದರೆಯನ್ನು ಉಂಟು ಮಾಡುತ್ತದೆ. ವಿವಿಧ ಆಕಾರ ಮತ್ತು ವಿನ್ಯಾಸದ ಗಣೇಶಗಳಿಗೆ ತಕ್ಕಂತೆ ಅದನ್ನು ಇಡುವ ಪೆಂಡಾಲುಗಳು ಸಿಧ್ಧವಾಗುತ್ತವೆ. ಅದಕ್ಕಾಗಿ ಬಳಸುವ ವಸ್ತುಗಳು ನೆಲ, ಜಲ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಈ ದೊಡ್ಡ ದೊಡ್ಡ ಗಣೇಶಗಳನ್ನು ನೀರಿನಲ್ಲಿ ಮುಳುಗಿಸಲು ಅವುಗಳ ಭುಜದ ಮೇಲೆ ಹತ್ತಿ ಕೂಡುವುದನ್ನು ನೋಡಿದ್ದೇನೆ, ಹೀಗೆ ಹೋದ ಯುವಕರಲ್ಲಿ ಕೆಲವರು ಮುಳುಗಿ ಸತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ನಿಜಕ್ಕೂ ಹಬ್ಬದ ಉದ್ದೇಶ ನಮಗಿಲ್ಲಿ ಕಾಣುತ್ತಿದೆಯೇ? ಇಂತಹ ಹಬ್ಬ ನಮಗೆ ಬೇಕೆ? ಎಂದು ಯೋಚಿಸುವ ಕೊನೆಯ ಅವಕಾಶ ನಮ್ಮ ಮುಂದಿದೆ, ಈ ಧರಣಿ ನಾನಿನ್ನು ತಾಳುವುದಿಲ್ಲ ಎಂಬ ಎಚ್ಚರಿಕೆಯನ್ನು ಕೊಟ್ಟಾಗಿದೆ. ಇನ್ನೂ ಎಚ್ಚರಗೊಳ್ಳದಿದ್ದರೆ ಈ ಹೋಮೋಸೆಪಿಯನ್ನನ ಅವಸಾನ ಖಚಿತ.

ಹಾಗಾದರೆ ನಾವೇನು ಮಾಡಬೇಕು?

ಮನೆಯಿಂದ ನಮ್ಮ ಕೆಲಸವನ್ನು ಪ್ರಾರಂಭಿಸೋಣ. ನಮ್ಮ ಮನೆಗೆ ಮಣ್ಣಿನ ಬಣ್ಣ ರಹಿತ ಗಣೇಶನನ್ನು ಬರಮಾಡಿಕೊಳ್ಳೋಣ. ಅದು ಚಿಕ್ಕದಾಗಿಯೇ ಇರಲಿ, ಅವನನ್ನು ಭಕ್ತಿಯಿಂದ ನೈಸರ್ಗಿಕ ವಸ್ತುಗಳಾದ ಗರಿಕೆ, ಹೂವುಗಳಿಂದ ಮಾತ್ರ ಅಲಂಕರಿಸೋಣ. ನಂತರ ಗಣೇಶನನ್ನು ವಿಸರ್ಜಿಸುವ ಮುನ್ನ ಅವುಗಳೆಲ್ಲವನ್ನೂ ತೆಗೆದು ಬಿಡೋಣ. ಸಾಧ್ಯವಾದಷ್ಟೂ ಗಣಪನ ವಿಸರ್ಜನೆ ನಗರಸಭೆ. ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ಕಡೆಯಲ್ಲಿಯೇ ನಡೆಯಲಿ. ಅಂಥ ವ್ಯವಸ್ಥೆ ಇಲ್ಲವಾದಲ್ಲಿ ಮನೆಯ ಬಕೆಟ್ಟನಲ್ಲಿ ಮುಳುಗಿಸಿ ನಂತರ ಆ ನೀರನ್ನು ಗಿಡಗಳಿಗೆ ಹಾಕಿ, ಖಂಡಿತವಾಗಿಯೂ ವಿನಾಯಕ ಪ್ರಸನ್ನನಾಗುತ್ತನೆ.

ನಿಮ್ಮಲ್ಲಿ ಸಾರ್ವಜನಿಕ ಗಣಪತಿಯನ್ನು ಕೂಡಿಸುತ್ತಿದ್ದರೆ ನಿಮ್ಮ ಜನರಿಗೆ ಸಣ್ಣ ಮಣ್ಣಿನ ಗಣಪತಿಯನ್ನೇ ತರಲು ವಿನಂತಿಸಿ, ಶಬ್ದಮಾಲಿನ್ಯವಾಗದಂತೆ ತಿಳಿಸಿ ಹೇಳಲು ಪ್ರಯತ್ನಿಸಿ. ಹೋಮ, ಯಾಗ, ಪಟಾಕಿಯ ನೆಪದಲ್ಲಿ ವಾಯುಮಾಲಿನ್ಯವಾಗದಂತೆ ನೋಡಿಕೊಳ್ಳಿ , ಶಾಂತಿ, ಸೌಹಾರ್ಧಕ್ಕೆ ಹೆಚ್ಚಿನ ಮಹತ್ವ ಕೊಡಿ. ನಿಮ್ಮ ಸುತ್ತಲಿನ ಪರಿಸರ ಶುಚಿಯಾಗಿರಲಿ, ಗಣಪತಿಯ ಪೆಂಡಾಲಿಗೆ, ಮಾವು, ಬಾಳೆ, ಅಡಿಕೆಯ ತಳಿರನ್ನೇ ಬಳಸಿ. ಅಯ್ಯೋ ನಮ್ಮ ಮಾತನ್ನು ಯಾರು ಕೇಳುತ್ತಾರೆ ಎಂಬ ಉದಾಸೀನ ಬೇಡ. ಈಗಾಗಿರುವ ನೈಸರ್ಗಿಕ ಅವಘಡಗಳು ನಾವು ಪೃಕೃತಿಯನ್ನು ಉಪೇಕ್ಷಿಸಿದ್ದರ ಪರಿಣಾಮ ಎನ್ನುವುದು ಜನರಿಗೆ ತಿಳಿದಿದೆ.  ಹಾಗಾಗಿ ಇದು ಸೂಕ್ತ ಸಮಯ, ಇದನ್ನು ನಾವು ಬಳಸಿಕೊಂಡು ಭೂಮಿಯ ರಕ್ಷಣೆಗೆ ಮುಂದಾಗೋಣ.

ಸುಮಂಗಲಾ .ಎಸ್‌. ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *