Latestಅಂಕಣ

ವಿಜ್ಞಾನಮಯಿ/ ಹೀಗಿರಲಿ ನಮ್ಮ ಹೆಜ್ಜೆ ಗುರುತು- ಸುಮಂಗಲಾ ಎಸ್. ಮುಮ್ಮಿಗಟ್ಟಿ

ಭೂಮಿಯ ತಾಪಮಾನ ಏರಿಕೆ ತಡೆಯುವಲ್ಲಿ ನಾವೆಲ್ಲ ಕಡಿಮೆ ಇಂಗಾಲಾಮ್ಲ ಉರಿಸುವುದು ಅತ್ಯಗತ್ಯ. ನಮ್ಮ ಕಾರ್ಬನ್‌ ಫುಟ್‌ಪ್ರಿಂಟ್‌ ಚಿಕ್ಕದಾಗಿಸುವ ಪ್ರಕ್ರಿಯೆ ಮನೆಯಿಂದ, ಅದೂ ಮನೆಯ ಮಹಿಳೆಯರಿಂದ ಆರಂಭವಾಗಬೇಕು

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಮದುವೆಗಳಾಗುತ್ತಿವೆ. ಅದೂ ಸಿನಿಮಾ ತಾರೆಯರು, ದೊಡ್ಡ ದೊಡ್ಡ ಧನಿಕರು, ದೇಶದ ಉದ್ಯಮಿಗಳು, ಇತ್ಯಾದಿ. ಅಷ್ಟೇ ಆಗಿದ್ದಲ್ಲಿ ಈ ವಿಷಯ ಬಗ್ಗೆ ಚರ್ಚಿಸುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಅಬ್ಬರದ, ಆಡಂಬರದ ಆ ವಿವಾಹಗಳನ್ನು ನೋಡಿದಾಗ ಆತಂಕವಾಗುತ್ತದೆ.

ನಾವೇನು ಮಾಡುತ್ತಿದ್ದೇವೆ? ಭೂಮಿಯ ಸಂಪನ್ಮೂಲಗಳನ್ನು ಈ ರೀತಿ ಕೊಳ್ಳೆ ಹೊಡೆಯುವ ಹಕ್ಕನ್ನು ನಮಗೆ ನೀಡಿದವರು ಯಾರು? ಕೇವಲ ಒಂದಷ್ಟು ಜನರ ಸುಖ ಸಂತೋಷಕ್ಕಾಗಿ ಭವಿಷ್ಯದ ಪೀಳಿಗೆಗಳಿಗೆ ಹೊರೆಯಾಗುವುದು ಯಾವ ನ್ಯಾಯ?

ಹಾಂ, ಅಂತಹದೇ ಒಂದು ವಿವಾಹದಲ್ಲಿ ಸೊಸೆಯನ್ನು ಮನೆ ತುಂಬಿಸಿಕೊಳ್ಳುವಾಗ ಕೆಂಪು ನೀರಿನಲ್ಲಿ ಪಾದಗಳನ್ನಿಟ್ಟ ಆಕೆ ತನ್ನ ಹೆಜ್ಜೆಯ ಗುರುತುಗಳನ್ನು ಮೂಡಿಸುತ್ತಾ ಮನೆಯೊಳಗೆ ಕಾಲಿಡುವ ಸಂಭ್ರಮ. ಎಂತಹ ಅರ್ಥಪೂರ್ಣ ಆಚರಣೆ!
ಆದರೆ, ಇಕಾಲಜಿಯಲ್ಲಿ (ಜೀವ ಪರಿಸ್ಥಿತಿ ಶಾಸ್ತ್ರ) ಇಲ್ಲಿ ಹೆಜ್ಜೆ ಗುರುತು ಎಷ್ಟು ಪುಟ್ಟದಾಗಿರುತ್ತದೋ ಅಷ್ಟು ಒಳ್ಳೆಯದು. ಮನಸ್ಸು ಮಾಡಿದರೆ ನಾವು ಮಹಿಳೆಯರು ನಮ್ಮ ಹೆಜ್ಜೆ ಗುರುತನ್ನು ಚಿಕ್ಕದಾಗಿಸಬಹುದು, ಇದರಿಂದ ನಾವು ಭೂಮಿಗೆ ಹೊರೆ ಯಾಗುವುದಿಲ್ಲ. ಮಾತ್ರವಲ್ಲ ನಮ್ಮ ಮುಂದಿನ ಜನಾಂಗವೂ ಸಂತಸದಿಂದಿರಲು ಸಾಧ್ಯವಾಗುತ್ತದೆ. ಅದಕ್ಕೆ ನಮ್ಮ ನಮ್ಮ ಮನೆಯೇ ಮೊದಲ ಪ್ರಯೋಗ ಶಾಲೆಯಾಗುವುದು ಅವಶ್ಯಕ. ಆದರೆ ಹಾಗೆ ಮಾಡುವ ಮೊದಲು ಈ ಇಕಾಲಜಿಯಲ್ಲಿ ಹೆಜ್ಜೆ ಗುರುತು ಎಂದರೇನು? ಎನ್ನುವುದನ್ನು ತಿಳಿಯೋಣ.

ಇಂಗಾಲದ ಹೆಜ್ಜೆ ಗುರುತು

ನಾವು ಬಳಸುವ ಎಲ್ಲ ವಸ್ತುಗಳು ಇಂಗಾಲ ಅಥವಾ ಕಾರ್ಬನ್‌ನಿಂದ ಆಗಿವೆ, ಅದು ಬೆಳಗಿನ ಊದುಬತ್ತಿಯಿಂದ ಹಿಡಿದು ರಾತ್ರಿಯ ಸೊಳ್ಳೆ ಬತ್ತಿಯವರೆಗೆ. ನಮ್ಮ ಆಹಾರ, ಅರಿವೆ, ಇಂಧನ, ಔಷಧಿ ಎಲ್ಲವೂ ನಾವು ಬಳಸಿದಾಗ ಇಂಗಾಲದ ಡೈ ಆಕ್ಸೈಡ್‌ ಆಗಿ ಬದಲಾಗುತ್ತದೆ. ನಾವು ದಿನವೊಂದಕ್ಕೆ ಅಥವಾ ವರ್ಷವೊಂದಕ್ಕೆ ಎಷ್ಟು ಇಂಗಾಲವನ್ನು ಬಳಸುತ್ತೇವೆ ಎನ್ನುವುದು ನಮ್ಮ ಇಂಗಾಲದ ಫುಟ್ ಪ್ರಿಂಟ್ ಅಥವಾ ಇಂಗಾಲದ ಹೆಜ್ಜೆ ಗುರುತು ಎನಿಸಿಕೊಳ್ಳುತ್ತದೆ.

ಇಂಗಾಲಕ್ಕೇಕೆ ಇಷ್ಟೊಂದು ಮಹತ್ವ? ಎಂಬ ಪ್ರಶ್ನೆ ಬರಬಹುದು. ಇಂಗಾಲ ಅದು ಇಂಗಾಲವಾಗಿರುವಷ್ಟು ಸಮಯ ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ. ಉದಾಹರಣೆಗೆ ಎಲ್ಲ ಮರಗಳಲ್ಲಿ ಇಂಗಾಲವಿದೆ ಅದನ್ನು ನಾವು ಕಡಿದು ಉರಿಸಿದಾಗ ಅದು ಇಂಗಾಲದ ಡೈ ಆಕ್ಸೈಡ ಆಗಿ ಪರಿಸರಕ್ಕೆ ಸೇರುತ್ತದೆ. ಇದು ಹಸಿರು ಮನೆ ಅನಿಲಗಳಲ್ಲಿ ಒಂದು ಪ್ರಮುಖ ಅನಿಲವಾಗಿ ಭೂಮಿಯ ತಾಪಮಾನದ ಏರಿಕೆಗೆ ಕಾರಣವಾಗಿದೆ. ಹಾಗೆಯೆ ನಾವು ಬಳಸುವ ಬಹುತೇಕ ವಸ್ತುಗಳ ತಯಾರಿಕೆಯಲ್ಲಿ ಇಂಗಾಲ, ಇಂಗಾಲದ ಡೈ ಆಕ್ಸೈಡ ಆಗಿ ಪರಿವರ್ತನೆಯಾಗುತ್ತದೆ. ಅದ್ದೂರಿ ಮದುವೆಯೊಂದರಲ್ಲಿ ಬಳಸುವ ಅಲಂಕಾರಿಕ ಸಾಮಗ್ರಿಗಳಿಂದ ಹಿಡಿದು ಊಟದವರೆಗೆ ಎಲ್ಲವೂ ಅಧಿಕ ಇಂಗಾಲವನ್ನು ಪರಿವರ್ತಿಸುವ ವಸ್ತುಗಳು. ಅದು ಅವ್ರ ಹಣ ಅವರು ಖರ್ಚು ಮಾಡಿದರೆ ನಮಗೇನು ಎನ್ನುವವರೂ ಇದ್ದಾರೆ. ಈ ಭೂಮಿ, ಇಲ್ಲಿಯ ಸಂಪನ್ಮೂಲಗಳು ಯಾರ ಆಸ್ತಿಯೂ ಅಲ್ಲ, ಹಾಗೆಯೇ ಹಣದಿಂದ ಅವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಅವನ್ನು ಹಾಳು ಮಾಡುವ ಹಕ್ಕೂ ನಮಗಿಲ್ಲ.

ಹಾಗಾದರೆ ನಾವೇನು ಮಾಡಬೇಕು? ವನಿತೆಯ ಪಾತ್ರವೇನು?

ನಾವು ನಮ್ಮ ಮನೆಯ ಒಡತಿಯರು. ಹಾಗಾಗಿ ಮನೆಯಿಂದ ಪ್ರಾರಂಭಿಸಿ ಭೂಮಿಯ ಭವಿಷ್ಯವನ್ನು ಕಾಪಾಡಬಹುದು. ಸರಿ ಹಾಗಾದರೆ ಪ್ರಾರಂಭಿಸೋಣ. ಮೊದಲು ನಿಮ್ಮ ಚಪ್ಪಲಿಗಳನ್ನು ತೆಗೆಯಿರಿ ಎಷ್ಟು ಇವೆ? ಎಣಿಸಿ. ಒಂದು, ಎರಡು, ಮೂರು, ನಾಲ್ಕು……..ಎಷ್ಟಿವೆ? ಬಳಸಲು ನಿಮಗೆಷ್ಟು ಬೇಕು? ಎಲ್ಲವನ್ನೂ ನೀವು ಬಳಸುತ್ತೀರಾ ? ಖಂಡಿತಾ ಎಲ್ಲವನ್ನೂ ಬಳಸುತ್ತಿರುವುದಿಲ್ಲ. ಕೆಲವು ಹಳೆಯದೂ ಅಲ್ಲ, ಹೊಸದೂ ಅಲ್ಲ, ಕೆಲವು ಬಿಗಿಯಾಗುತ್ತದೆ, ಕೆಲವು ಸಡಿಲವಾಗುತ್ತದೆ. ಈಗ ಯಾವುದು ಬೇಡವೋ ಅದನ್ನು ಪಕ್ಕಕ್ಕೆ ಎತ್ತಿ ಇಡಿ. ಈಗ ನಿಮ್ಮ ವಾರ್ಡರೋಬ್ ಗೆ ಹೋಗಿ ಅಲ್ಲಿಯ ನಿಮ್ಮ ಬಟ್ಟೆಗಳನ್ನು ಕೂಡ ಹೀಗೆಯೇ ತೆಗೆಯಿರಿ. ಇದೇ ರೀತಿ ಮನೆಯ ಎಲ್ಲ ಭಾಗಗಳಲ್ಲಿಯೂ ಇದೇ ರೀತಿ ಮಾಡಿ ನೀವು ಸಂಗ್ರಹಿಸಿರುವ ವಸ್ತುಗಳ ರಾಶಿಯನ್ನು ನೋಡಿ ಅವುಗಳಲ್ಲಿ ಯಾವುವು ಮರುಬಳಕೆಯಾಗಬಹುದೋ ಅವನ್ನು ಸೂಕ್ತ ರೀತಿಯಲ್ಲಿ ಬಳಸಿ, ಇಲ್ಲವೇ ಅವಶ್ಯಕತೆ ಇರುವವರಿಗೆ ಕೊಟ್ಟು ಬಿಡಿ. ಉಳಿದುವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.

ಇತ್ತೀಚಿನ ದಿನಗಳಲ್ಲಿ ಇವನ್ನು ದೊಡ್ಡ ದೊಡ್ಡ ಮಾಲ್ ಗಳು ತೆಗೆದುಕೊಳ್ಳುತ್ತವೆ ಆದರೆ ಎಚ್ಚರಿಕೆ, ಅದಕ್ಕೆ ಎಷ್ಟೋ ಪಟ್ಟು ಸಾಮಾನನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಇದೇ ಸೂತ್ರವನ್ನು ನೀವು ನಿಮ್ಮ ಮನೆಯ ಇತರ ಸದಸ್ಯರಿಗೂ ಅನ್ವಯಿಸಬಹುದು. ಹೀಗೆ ಮಾಡಿದಾಗ ನಿಮಗೇ ಗೊತ್ತಾಗುತ್ತದೆ ನಾವೆಷ್ಟು ಭೂಮಿಗೆ ಅನವಶ್ಯಕವಾಗಿ ಭಾರವಾಗಿದ್ದೇವೆ ಎಂದು.

ಮಹಿಳೆಯರು ಎದುರಿಸುವ ಸವಾಲು

ಇಂತಹ ಕೆಲಸಗಳನ್ನು ಮಾಡುವುದು ಸುಲಭವೇನಲ್ಲ, ಮನೆಯ ಇತರ ಸದಸ್ಯರು ಇದಕ್ಕೆ ಸಹಕಾರ ನೀಡದಿದ್ದರೆ ಅವರ ಮನವೊಲಿಸುವ ಜವಾಬ್ದಾರಿ ಕೂಡ ಮನೆಯೊಡತಿಗೆ ಇರುತ್ತದೆ. ಅದೂ ದಿನಕ್ಕೊಂದು ನೂರು ಜಾಹೀರಾತುಗಳು ಮನೆಯ ಟಿ.ವಿ ಯಲ್ಲಿ ಬರುತ್ತಿರುವಾಗ, ಮನೆಯ ಹದಿಹರೆಯದ ಮಕ್ಕಳು ಇವುಗಳಿಂದ ಪ್ರಭಾವಿತರಾಗುತ್ತಿದ್ದಾಗ ಅದು ನಿಜಕ್ಕೂ ಕಷ್ಟದ ಕೆಲಸ. ಇದರ ಜೊತೆಗೆ ಕೊಳ್ಳು ಬಾಕುತನವನ್ನು ಪ್ರೋತ್ಸಾಹಿಸುವ ಅನ್ ಲೈನ್ ಸೇಲುಗಳು ಆಫರ್‌ಗಳು ಬರುತ್ತಿರುವಾಗ ಈ ಕೆಲಸವನ್ನು ಮಾಡುವುದು ಸುಲಭವಲ್ಲ. ಬರಲಿರುವ ಹೊಸ ವರ್ಷದ ನೆಪದಲ್ಲಿ ಈಗಾಗಲೇ ಅವು ಆರಂಭವಾಗಿವೆ. ಆದರೆ ನಮಗೆ ಗೊತ್ತಿದೆ, ಮನಸ್ಸು ಮಾಡಿದರೆ ಇದು ಆಕೆಗೆ ಕಠಿಣವಲ್ಲ. ಈ ಕೆಲಸವನ್ನು ಮಾಡುವಾಗ , ಮಾಡಿದ ಮೇಲೆ ಸಿಗುವ ತೃಪ್ತಿ ಖಂಡಿತವಾಗಿಯೂ ಬೇರೆಯದೇ ಆಗಿರುತ್ತದೆ. ಇಡಿಯ ಜಗತ್ತು ಒಂದಾಗಿ ಶೃಂಗಸಭೆಗಳನ್ನು ಮಾಡಿ ಪರಿಹರಿಸಲು ಪ್ರಯತ್ನಿಸುತ್ತಿರುವ ಸಮಸ್ಯೆಗೆ ನಾವು ಪರಿಹಾರ ನೀಡುವಲ್ಲಿ ನಾವೂ ಕೈ ಜೋಡಿಸುತ್ತಿದ್ದೇವೆ ಎಂಬ ಆನಂದ ನಮಗಿರುತ್ತದೆ.

ಪ್ರಕೃತಿಯ ಬಳಕೆಯನ್ನು ಯಾರೇ ಮಾಡಲಿ, ಆದರೆ ಅದರಿಂದ ಮೊದಲು ತೊಂದರೆಗೀಡಾಗುವುದು ನಿಸರ್ಗಕ್ಕೆ ಹತ್ತಿರವಿದ್ದವರೇ. ಇಂದು ಅಭಿವೃದ್ಧಿಯ ಅತ್ಯಂತ ಮುಂಚೂಣಿಯಲ್ಲಿರುವವರು ಅತಿ ದೊಡ್ಡ ಕಾರ್ಬನ್ ಫುಟ್ ಪ್ರಿಂಟ್ ಬಿಟ್ಟರೆ, ಆಫ್ರಿಕಾದ ಮೂಲ ನಿವಾಸಿ ಅಥವಾ ಅಂಡಮಾನಿನ ಜಾರವಾ ತನ್ನ ಯಾವುದೇ ಹೆಜ್ಜೆ ಗುರುತನ್ನು ಮೂಡಿಸುವುದೇ ಇಲ್ಲ. ನಾವು ಆಡಂಬರದ ಅಂಧಾನುಕರಣೆ ಮಾಡದೇ ಮಾಡದೇ ಸರಳ ಜೀವನ ನಡೆಸಿದಲ್ಲಿ ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಸ್ವಲ್ಪವನ್ನಾದರೂ ಸಾಧಿಸಲು ಸಾಧ್ಯ.

ಸುಮಂಗಲಾ ಎಸ್. ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *