ವಿಜ್ಞಾನಮಯಿ/ ಸ್ವಚ್ಛಕಾರಕಗಳಿಂದ ಹಾನಿ ಬೇಡ- ಸುಮಂಗಲಾ ಎಸ್. ಮುಮ್ಮಿಗಟ್ಟಿ

ಟಿವಿಯಲ್ಲಿ ಬರುವ ಬಣ್ಣ, ಬಣ್ಣದ ಜಾಹೀರಾತುಗಳಿಗೆ ಮರುಳಾಗಿ ಡಿಟರ್ಜಂಟ್‌ಗಳನ್ನು ಕೊಳ್ಳುವಾಗ ಮಹಿಳೆಯರು ಎಚ್ಚರ ವಹಿಸಬೇಕು. ಅದರಲ್ಲಿನ ಪ್ರಬಲ ರಾಸಾಯನಿಕಗಳು ಚರ್ಮಕ್ಕೆ ಭಾರಿ ಹಾನಿ ಉಂಟುಮಾಡುತ್ತವೆ

ಅಂದು ನೀಲಾ ಕೆಲಸಕ್ಕೆ ಬಂದಾಗಲೇ ತಡವಾಗಿತ್ತು, ಹೇಗೂ ರಜಾ ದಿನ ಎಂದು ನಾನು ಸುಮ್ಮನಾದೆ. ನೆಲ ಒರೆಸುವಾಗ ಯಾಕೋ ಫ್ಲೋರ್ ಕ್ಲೀನರನ ವಾಸನೆಯೇ ಇಲ್ಲವಲ್ಲಾ ಎಂದು ಕೊಂಡರೂ ನಾನು ಪದೇ ಪದೇ ಅದನ್ನು ಕಡಿಮೆ ಬಳಸು ಎಂದು ಹೇಳಿದ್ದು ಈ ಹಟಮಾರಿ ಹುಡುಗಿಗೆ ಕೊನೆಗೂ ತಿಳಿಯಿತಲ್ಲ ಎಂದು ಕೊಂಡು ಸುಮ್ಮನಾದೆ.

ಆದರೆ ಆನಂತರ ಆಕೆಗೆ ಟೀ ಕೊಡುವಾಗ ಗಮನಿಸಿದೆ, ಕೈಯ ಚರ್ಮವೆಲ್ಲಾ ಸುಲಿದು ಕೆಂಪಗಾಗಿತ್ತು! “ಯಾಕೆ! ನೀಲಾ ಕೈಗೇನಾಯ್ತು?” ಎಂದರೆ ತನ್ನ ಮಾಮೂಲಿ ಪೆಚ್ಚು ನಗು ನಗುತ್ತಾ, “ಅಯ್ಯೋ ಏನಿಲ್ಲ ಅಕ್ಕ ಆ ಕಡೆ ರೋಡ್ ಅಪಾರ್ಟಮೆಂಟ್‌ನಲ್ಲಿ ಕೆಲಸಕ್ಕೆ ಹೋಯ್ತಿನಲ್ಲಾ ಅವರು ಅದ್ಯಾವುದೋ ಹೊಸ ಬಟ್ಟೆ ಒಗೆಯೋ ಸೋಪು ತಂದಿದಾರೆ, ಘಮ ಘಮ ಅನ್ನುತ್ತೆ, ನಿನ್ನೆ ಬಟ್ಟೆ ನೆನೆಸುವಾಗ ಅದನ್ನ ಜಾಸ್ತಿ ಹಾಕೊಂಡಿದ್ದೆ, ಬಟ್ಟೆಗೆ ಹೆಂಗೆ ಚೆನ್ನಾಗಿ ನೊರೆ ಬಂತು ಅಂತೀರಾ, ಆದರೆ ಸಂಜೆ ಹೊತ್ತಿಗೆ ಕೈ ಚರ್ಮ ಎಲ್ಲ ಸುಲೀತು ನೋವೇನಿಲ್ಲ ಬಿಡಿ” ಎನ್ನುತ್ತಾ ಮತ್ತೆ ನಕ್ಕಳು.

“ಹೌದು ನಿನಗೆ ಮೊದಲೇ ಸೋಪು ಅಂದರೆ ಪ್ರೀತಿ ತಾನೆ ಚೆನ್ನಾಗೇ ಹಾಕಿದೀಯಾ ಅದಕ್ಕೇ ಹಿಂಗಾಗಿದೆ, ಅವರನ್ನ ಕೇಳಿ ಬಳಸೋದು ತಾನೆ?” ಎಂದೆ. ”ಕೇಳಿದೆ ಅಕ್ಕ ಅವರಿಗೂ ಗೊತ್ತಿಲ್ಲ ಹೊಸಾದು ನೋಡಿ ಮೊನ್ನೆ ಶಾಪಿಂಗ್ ಮಾಲ್ ಗೆ ಹೋದಾಗ, ತಂದಿದಾರೆ ಒಂದಕ್ಕೊಂದು ಫ್ರೀ ಬೇರೆ ಅಂತೆ” ಅವಳ ಮಾತು ಕೇಳಿ ನಾನು ಹಣೆ ಹಣೆ ಚಚ್ಚಿಕೊಂಡೆ. ಕೊಬ್ಬರಿ ಎಣ್ಣೆಯ ಡಬ್ಬ ಕೊಟ್ಟು “ ಕೈಗೆ ಹಚ್ಚಿಕೋ ನಾಳೆ ಬರುವಾಗ ಅದ್ಯಾವ ಸೋಪು ತಿಳ್ಕೊಂಡು ಬಾ” ಎಂದೂ ಹೇಳಿದೆ. ಇವಳಿಗೆ ಅದೊಂದು ಕೆಟ್ಟ ಅಭ್ಯಾಸವಿದೆ ಸೋಪುಗಳನ್ನು ಹೆಚ್ಚು ಬಳಸಿದರೆ ಶುಚಿಯಾಗುತ್ತೆ ಅನ್ನುವ ಭ್ರಮೆ. ಚೆನ್ನಾಗಿ ಸೋಪು ಹಾಕೋದು ಆಮೇಲೆ ಅದನ್ನು ತೊಳೆಯಲು ನೀರು ಸುರಿಯೋದು.

ಮರುದಿನ ನೀಲಾ ಆ ಮನೆಯ ಹುಡುಗನ ಹತ್ತಿರ ಬರೆಯಿಸಿಕೊಂಡು ಬಂದಿದ್ದ ಚೀಟಿಯನ್ನು ಕೊಟ್ಟಾಗ ಅವಳ ಕೈ ಕೆಲಸ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅದನ್ನು ನೋಡಿ ನಾನು ತಬ್ಬಿಬ್ಬಾದೆ. ಅದು ವಾಶಿಂಗ್ ಮೆಷಿನ್‌ಗಳಿಗೆ ಬಳಸುವ ಸೋಪಾಗಿತ್ತು. “ಇವತ್ತು ನೀನು ನೀರಿಗೆ ಕೈ ಹಾಕಬೇಡ, ಬರಿ ಗುಡಿಸಿ ಹೋಗು ಸಾಕು, ಆಮೇಲೆ ಆ ಕೈನ ಡಾಕ್ಟ್ರಿಗೆ ತೋರಿಸು, ಆ ಮನೆಯವರಿಗೆ ಹೇಳು ಇದು ಕೈಯಿಂದ ಬಟ್ಟೆ ಒಗೆಯೋ ಸೋಪಲ್ಲ ಅಂತ”.

“ ಇಲ್ಲ ಅಕ್ಕ ನಿನ್ನೆನೇ ನಾ ಹೇಳ್ದೆ ಸೋಪಿಂದ ಕೈ ಹೀಗಾಗಿದೆ ಅಂದ್ರೆ ಅವರು ಅದು ಎಷ್ಟು ಕಾಸ್ಟ್ಲಿ ಸೋಪು ಅಂತಾ ನಿಂಗೆ ಗೊತ್ತಾ ಅಂದ್ರು. ನಿನ್ನೆನೂ ಅದರಲ್ಲೆ ಒಗೆದೆ ಆದ್ರೆ ಕಡಿಮೆ ಪುಡಿ ಹಾಕ್ಕೊಂಡೆ” ಎಂದಳು. ಏನಾದ್ರೂ ಮಾಡು ಮೊದಲು ಡಾಕ್ಟ್ರ ಹತ್ತಿರ ಹೋಗು ಎಂದು ಕಳಿಸಿದೆ. ಅವಳೇನೋ ಹೋದಳು. ಆದರೆ ಯೋಚಿಸುವ ಸರದಿ ನನ್ನದಾಗಿತ್ತು. ಮಾರುಕಟ್ಟೆಯ ಈ ಥಳಕುಗಳಿಗೆ ಮಹಿಳೆಯರೇ ಏಕೆ ಬಲಿಯಾಗುತ್ತಾರೆ? ಸರಿಯಾಗಿ ವಿಷಯಗಳನ್ನು ತಿಳಿದರೆ ಇಂತಹ ಅನಾಹುತಗಳಾಗುವುದಿಲ್ಲ.

ಇಂದು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಹಲವಾರು ಬಗೆಯ ಬಟ್ಟೆಒಗೆಯುವ ಸೋಪುಗಳು ಅಥವಾ ಡಿಟರ್ಜಂಟುಗಳು ಯಾವುದರಿಂದ ಆಗಿವೆ? ಯಾವುದಕ್ಕೆ ಯಾವುದನ್ನು ಬಳಸಬೇಕು? ನಮಗೆ ಯಾವುದು ಸುರಕ್ಷಿತ? ಎಂದು ನಾವು ಸಾಮಾನ್ಯವಾಗಿ ಯೋಚಿಸುವುದೇ ಇಲ್ಲ.

ಈ ಸೋಪುಗಳು ಮತ್ತು ಡಿಟರ್ಜಂಟುಗಳು ತಲೆ ಮತ್ತು ಬಾಲವಿರುವ ಉದ್ದನೆಯ ರಾಸಾಯನಿಕ ಅಣುಗಳಿಂದಾಗಿವೆ. ಇವುಗಳನ್ನು ಮೇಲ್ಮೈಕಾರಕಗಳು ಅಥವಾ ಸರ್ಫೆಕ್ಟಂಟಂಟ್ ಗಳು ಎಂದು ಕರೆಯುತ್ತಾರೆ. ಇದರ ತಲೆಯ ಭಾಗ ನೀರಿನಿಂದ ಆಕರ್ಷಿತವಾದರೆ ಬಾಲದ ಭಾಗ ಜಿಡ್ಡಿರುವ ಕಡೆ ಆಕರ್ಷಿತವಾಗುತ್ತದೆ, ನಾವು ಬಟ್ಟೆಯನ್ನು ಡಿಟರ್ಜಂಟನೊಂದಿಗೆ ನೆನೆಸಿದಾಗ ಅದರ ಅಣುವಿನ ಬಾಲ ಜಿಡ್ಡು ಮತ್ತು ಕೊಳೆಗೆ ಅಂಟಿಕೊಂಡು ಅದನ್ನು ಒಡೆಯುತ್ತದೆ. ನೀರಿನೊಂದಿಗೆ ಜಾಲಿಸಿದಾಗ ಅದರ ಬಾಲದ ಭಾಗ ಜಿಡ್ಡು ಮತ್ತು ಕೊಳೆಯನ್ನು ತೊಳೆದು ಹಾಕುತ್ತದೆ. ಇಲ್ಲಿ ನೊರೆಯಾದರೆ ಮಾತ್ರ ಬಟ್ಟೆ ಸ್ವಚ್ಛವಾಗುತ್ತದೆ ಅಥವಾ ಬಹಳ ಪುಡಿ ಹಾಕುವುದರಿಂದ ಬಟ್ಟೆ ಸ್ವಚ್ಛವಾಗುತ್ತದೆ ಎನ್ನುವುದು ಕೇವಲ ಭ್ರಮೆ.

ಇದು ಸಾಮಾನ್ಯ ಡಿಟರ್ಜಂಟ್‌ಗಳ ವಿಷಯವಾದರೆ, ಇತ್ತೀಚೆಗೆ ಬಂದಿರುವ ಡಿಟರ್ಜಂಟ್‌ಗಳಲ್ಲಿ ಬಣ್ಣ ಬಣ್ಣದ ಗ್ರ್ಯಾನೂಲ್‌ಗಳು ಮತ್ತು ಅದರೊಂದಿಗೆ ಸುವಾಸನೆಯನ್ನೂ ನೀವು ಗಮನಿಸಿರುತ್ತೀರಿ. ನಿಮ್ಮ ಮನೆಯ ಟಿ.ವಿ ಯಲ್ಲಿ ಬರುವ ಸೋಪಿನ ಜಾಹೀರಾತುಗಳನ್ನು ಗಮನಿಸಿ ಕೆಲವು ಹೊಳಪನ್ನು ಕೊಡುತ್ತವೆ ಎಂದರೆ ಮತ್ತೆ ಕೆಲವು ಹಾರ್ಡ್‌ ವಾಟರಿನಲ್ಲೂ ನಮ್ಮ ಸೋಪು ನಿಮ್ಮ ಬಟ್ಟೆಗಳನ್ನು ಝಗಮಗಿಸುವಂತೆ ಮಾಡುತ್ತದೆ ಎನ್ನುತ್ತವೆ, ಇನ್ನು ಕೆಲವು ಅದರಲ್ಲಿ ಎಂಜೈಮ್‌ಗಳಿವೆ ಎನ್ನುತ್ತವೆ. ಅದರೊಂದಿಗೆ ಬಟ್ಟೆಯ ಎಳೆಯನ್ನು ಬಂಧಿಸಿ ಗಟ್ಟಿ ಮುಟ್ಟಾಗಿಸುತ್ತವೆ ಎನ್ನುವುದೂ ಉಂಟು. ಇವುಗಳಲ್ಲಿ ಉತ್ಪ್ರೇಕ್ಷೆಇದ್ದರೂ ಸುಳ್ಳೇನಲ್ಲ. ಬೇರೆ ಬೇರೆ ರಾಸಾಯನಿಕಗಳು ಈ ಕಾರ್ಯವನ್ನು ನಿರ್ವಹಿಸಬಲ್ಲವು, ಕೆಲವನ್ನು ತಣ್ಣೀರಿನಲ್ಲಿ ಬಳಸಿದರೆ ಮತ್ತೆ ಕೆಲವಕ್ಕೆ ಬಿಸಿ ನೀರು ಬೇಕು.

ಬಟ್ಟೆಗಳಿಗೆ ಹೊಳಪನ್ನು ಕೊಡಲು ಆಪ್ಟಿಕಲ್ ಬ್ರೈಟ್‌ನರ್‌ಗಳನ್ನು ಬಳಸಿದಾಗ ಅವು ಬಿಸಿಲಿನಲ್ಲಿ ಹೆಚ್ಚು ಹೊಳೆಯುತ್ತವೆ. ಅದೇ ರೀತಿ ಎಂಜೈಮ್‌ಗಳನ್ನು ಬಳಸಿದಾಗ, ಸಾಮಾನ್ಯವಾಗಿ ಪ್ರೋಟಿಯೇಸ್ ಅಂದರೆ ಪ್ರೋಟೀನ್ ಒಡೆಯುವ ಕಿಣ್ವಗಳು ಅಥವಾ ಎಂಜೈಮ್‌ಗಳನ್ನು ಬಳಸುತ್ತಾರೆ. ನಮ್ಮ ದೇಹದ ರಚನೆಯೂ ಕೂಡಾ ಪ್ರೋಟೀನಿನ ಮೂಲ ಧಾತುಗಳಾದ ಅಮೈನೋ ಆಮ್ಲಗಳಿಂದಾಗಿದೆ. ಕೊಳೆಯಲ್ಲಿರುವ ಪ್ರೋಟೀನನ್ನು ಒಡೆದು ತೆಗೆಯುವ ಈ ಎಂಜೈಮ್‌ಗಳು ಅತಿಯಾದರೆ ನಮ್ಮ ಕೈಯ ಚರ್ಮದ ಅಮೈನೋ ಆಮ್ಲಗಳನ್ನು ಕೂಡ ಅರಗಿಸಿಕೊಳ್ಳಬಲ್ಲದು. ಹಾಗೆಯೇ ಲೈಪೇಸ್‌ಗಳು ಕೊಬ್ಬು ಅಥವಾ ಜಿಡ್ಡಿನಂಶವನ್ನು ಒಡೆಯುತ್ತವೆ, ಬಟ್ಟೆಯೇನೋ ಜಿಡ್ಡಿನ ಕೊಳೆಯಿಂದ ಮುಕ್ತವಾಗುತ್ತದೆ ಆದರೆ ಅದರ ಜೊತೆಗೆ ನಮ್ಮ ಕೈಯ ಎಣ್ಣೆಯಂಶವನ್ನು ಪೂರ್ತಿಯಾಗಿ ತೆಗೆದು ಹಾಕಿ ಅವುಗಳನ್ನು ಒರಟಾಗಿಸುತ್ತವೆ. ಒಣ ಚರ್ಮ ಬಹಳ ಬೇಗನೇ ಚರ್ಮದ ರೋಗಗಳಿಗೆ ತುತ್ತಾಗುತ್ತದೆ. ಇನ್ನು ಒರಟು ನೀರಿಗಾಗಿ ತಯಾರಿಸಿದ ಸೋಪನ್ನು ಸಿಹಿ ನೀರಿಗೆ ಬಳಸಿದಾಗ, ಬಟ್ಟೆಗಳು ಹಾಳಾಗುವುದರ ಜೊತೆಗೆ ಬಳಸಿದವರ ಕೈಯ ಚರ್ಮ ಸೀಳುತ್ತದೆ. ಘಮ ಘಮಿಸುವ ಡಿಟರ್ಜಂಟ್‌ಗಳಲ್ಲಿ ಸುಗಂಧಗಳ ಬಳಕೆಯಾಗುತ್ತದೆ. ಲಿಮೋನ್ ಸಾಮಾನ್ಯವಾಗಿ ಬಳಕೆಯಾದರೆ ಬೇರೆ ರಾಸಾಯನಿಕ ಸುಗಂಧಗಳ ಬಳಕೆಯೂ ಉಂಟು.

ಇನ್ನು ಕೆಲವು ಸೋಪುಗಳನ್ನು ವಾಶಿಂಗ್ ಮೆಶಿನ್‌ಗೆಂದೇ ತಯಾರಾಗಿರುತ್ತವೆ. ಅವುಗಳಲ್ಲಿ ಎಂಜೈಮ್‌ಗಳ ಬಳಕೆ ಸಾಮಾನ್ಯ. ಆದರೆ ಬಳಸುವ ವಿಧಾನದ ತಿಳಿವಳಿಕೆಯೂ ಅಷ್ಟೇ ಅವಶ್ಯಕ. ಇಲ್ಲವಾದಲ್ಲಿ ಕೈಯ ಚರ್ಮಕ್ಕೆ ಘಾಸಿಯಾಗುವುದು ಖಚಿತ.

ಸಾಮಾನ್ಯವಾಗಿ ಡಿಟರ್ಜಂಟ್‌ಗಳಂತಹ ಸಾಮಾನುಗಳನ್ನು ಮನೆಗೆ ಆಯ್ಕೆ ಮಾಡುವವಳು ಮಹಿಳೆ. ನಾವು ಇವುಗಳನ್ನು ಕೊಳ್ಳುವ ಮುಂಚೆ ಅವುಗಳ ಮೇಲಿರುವ ಅಡಕ ವಸ್ತುಗಳು ಮತ್ತು ಬಳಕೆಯ ವಿಧಾನವನ್ನು ಓದಬೇಕು. ನಿಮ್ಮ ಮನೆಯ ನೀರು ಮೆದು ನೀರೇ ಅಥವಾ ಒರಟು ನೀರೇ ಎಂಬುದನ್ನು ತಿಳಿದುಕೊಳ್ಳಬೇಕು. ತಣ್ಣೀರಿನಲ್ಲಿ ಒಗೆಯಬೇಕೋ ಅಥವಾ ಬಿಸಿನೀರು ಬಳಸಬೇಕೋ ಎನ್ನುವುದು ಹಾಗೂ ವಾಶಿಂಗ್ ಮೆಶಿನ್‌ಗೆ ಬಳಸುವ ಸೋಪೋ ಅಥವಾ ಕೈಯಿಂದ ಒಗೆಯುವ ಸೋಪೋ ಎನ್ನುವುದನ್ನು ತಿಳಿದು ಅವಶ್ಯಕತೆಗೆ ಅನುಗುಣವಾಗಿ ಕೊಳ್ಳಬೇಕು ಹಾಗೂ ಬಳಸಬೇಕು.

ಸುಮಂಗಲಾ ಎಸ್. ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *