ವಿಜ್ಞಾನಮಯಿ/ ವಿಜ್ಞಾನರಂಗದಲ್ಲಿ ಎಷ್ಟು ಮಹಿಳೆಯರು? – ಸುಮಂಗಲಾ ಮುಮ್ಮಿಗಟ್ಟಿ
ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ದಿನಕ್ಕೆಂದು ಪ್ರತಿವರ್ಷವೂ ಒಂದು ಧ್ಯೇಯ ವಾಕ್ಯವನ್ನು ಆಯ್ದುಕೊಳ್ಳುತ್ತದೆ. ಈ ಬಾರಿಯ ಧ್ಯೇಯ ವಾಕ್ಯ “ವಿಜ್ಞಾನದಲ್ಲಿ ಮಹಿಳೆ” ಎಂದು. ಈ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಬಾರಿ ಚರ್ಚೆಗೆ ಒಳಗಾಗಿದೆ. ಇದೀಗ ನಾವು ಈ ವಿಷಯವನ್ನು ನಮ್ಮ ದೇಶದ ಮಟ್ಟದಲ್ಲಿ ಚರ್ಚಿಸಬೇಕಾಗಿದೆ.
ಇಸ್ರೋದ ಮಂಗಳಯಾನ, ಚಂದ್ರಯಾನಗಳು ಉಡಾವಣೆಯಾದಾಗ ಬಹಳ ಸಂಭ್ರಮದಿಂದ ಅವುಗಳ ಹಿಂದಿದ್ದ ಮಹಿಳೆಯರನ್ನು ನಾವೆಲ್ಲ ಅಭಿನಂದಿಸಿದ್ದೇವೆ, ಹೆಮ್ಮೆಪಟ್ಟಿದ್ದೇವೆ. ಹಾಗೆಯೇ ಭಾರತದ ಗಗನ್ ದೀಪ್ ಗೆ ರಾಯಲ್ ಸೊಸೈಟಿಯ ಸದಸ್ಯತ್ವ ದೊರಕಿದಾಗ ಸಂತೋಷ ಪಟ್ಟಿದ್ದೇವೆ. ಇದು ಭಾರತದ ಮಹಿಳೆಯರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸೂಚಿಸುತ್ತದೆ. ಆದರೆ ಇಷ್ಟು ಸಾಕೆ? ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಎಷ್ಟು ಜನರಿದ್ದಾರೆ?
ಭಾರತೀಯ ಮಹಿಳೆಯರು ಬಹಳ ಹಿಂದಿನಿಂದಲೂ ಭಾರತದ ವಿಜ್ಞಾನ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಅದು ಕೇವಲ ಅಲ್ಪ ಪ್ರಮಾಣದ್ದು ಮಾತ್ರ ಇಂದಿಗೂ ಇದು ತೃಪ್ತಿಕರವಾಗಿಯೇನೂ ಇಲ್ಲ. ದಾಖಲೆಗಳ ಪ್ರಕಾರ ಇದು ಕೇವಲ 25%. ದೇಶದ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ 3 ಲಕ್ಷ ವಿಜ್ಞಾನಿಗಳಲ್ಲಿ ಮಹಿಳೆಯರ ಪ್ರಮಾಣ ಕೇವಲ 14% . ದೇಶದ I.I.T. ಗಳಿಗೆ ಬರುವ ಮಹಿಳಾ ಅರ್ಜಿಗಳು 10 % ನ್ನು ದಾಟಿಲ್ಲ. ಇಂಡಿಯನ್ ನ್ಯಾಶನಲ್ ಸೈನ್ಸ್ ಅಕಾಡಮಿ, ಇಂಡಿಯನ್ ಅಕಾಡಮಿ ಆಫ್ ಸೈನ್ಸ್, ಮತ್ತು ನ್ಯಾಶನಲ್ ಅಕಾಡಮಿ ಆಫ್ ಅಗ್ರಿಕಲ್ಚರಲ್ ಸೈನ್ಸ್ ಕೊಡಮಾಡುವ ಫೆಲೋಶಿಪ್ ಗಳಲ್ಲಿ ಕೇವಲ 5% ಮಾತ್ರ ಮಹಿಳೆಯರಿಗೆ ದೊರೆತಿವೆ. ಹಾಗಾದರೆ ನಮ್ಮ ಹುಡುಗಿಯರು ಇವುಗಳನ್ನು ಪಡೆಯಲಾರದಷ್ಟು ದಡ್ಡರೇ?
ಉತ್ತರವನ್ನು ಹುಡುಕಲು ನಾವು ಹತ್ತು ಮತ್ತು ಹನ್ನೆರಡನೆಯ ತರಗತಿಯ ಫಲಿತಾಂಶವನ್ನು ಹುಡುಕಿದಾಗ ಪ್ರತಿ ಬಾರಿಯೇ ಹುಡುಗಿಯರದೇ ಮೇಲುಗೈ. ಆ ನಂತರ ಡಿಗ್ರಿ ತರಗತಿಗಳಲ್ಲಿ ಇದು ಕಡಿಮೆಯಾದರೂ ಅಲ್ಲಿಯೂ ಬಂಗಾರದ ಪದಕ ವಿಜೇತ ಹಲವು ಯುವತಿಯರು ನಮಗೆ ಸಿಗುತ್ತಾರೆ. ಮುಂದಿನ ಪಿಎಚ್.ಡಿ ಅಧ್ಯಯನದಲ್ಲಿ ಇವರ ಸಂಖ್ಯೆ ತೀರಾ ಕ್ಷೀಣಿಸುತ್ತದೆ ಹಾಗೂ ಡಾಕ್ಟರೇಟ್ ನಂತರದ ಸಂಶೋಧನೆಯಲ್ಲಿ ಬೆರಳೆಣಿಕೆಗೆ ಈ ಸಂಖ್ಯೆ ಇಳಿಯುತ್ತದೆ. ಹಾಗಾದರೆ ಮೊದಲು ಟಾಪರ್ ಗಳಾಗಿದ್ದ ಆ ಹುಡುಗಿಯರೆಲ್ಲ ಎಲ್ಲಿ ಕಳೆದು ಹೋದರು? ಪ್ರಶ್ನೆ ಎದುರಾಗುತ್ತದೆ. ಇದು ಕೇವಲ ನನಗೆ ನಿಮಗೆ ಎದುರಾಗುವ ಪ್ರಶ್ನೆಯಲ್ಲ. ಬಹಳಷ್ಟು ಜನ ಸಂಶೋಧಕರು, ಸಂಸ್ಥೆಗಳು ಇದನು ಗಮನಿಸಿವೆ. ಇಂಡಿಯನ್ ಅಕಾಡಮಿ ಆಫ್ ಸೈನ್ಸ್ ಈ ವಿಷಯದ ಅಧ್ಯಯನಕ್ಕೆಂದೇ ಸಮಿತಿಯೊಂದನ್ನು ನೇಮಿಸಿದೆ. ಇದನ್ನು
ಇದರ ಪ್ರಕಾರ ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಹಿಂದುಳಿಯಲು ನಮ್ಮ ಲ್ಲಿಯ ಸಾಂಸ್ಕ್ರತಿಕ ಮತ್ತು ಸಾಮಾಜಿಕ ವ್ಯವಸ್ಥೆಗಳೆ ಕಾರಣ. ಹುಡುಗಿಯರನ್ನು ಪದವಿಯವರೆಗೆ ವಿಜ್ಞಾನದಲ್ಲಿ ಓದಿಸುವ ಪೋಷಕರು ಉನ್ನತ ಅಧ್ಯಯನದ ವಿಷಯ ಬಂದಾಗ ಹಿಂಜರಿಯುತ್ತಾರೆ. ಇದಕ್ಕೆ ಅಪವಾದಗಳು ಇರಬಹುದಾದರೂ ತೀರ ಕಡಿಮೆ. ಪದವಿ ಮುಗಿಯುವ ಹೊತ್ತಿಗೆ ಮದುವೆಯ ವಯಸ್ಸಿಗೆ ಬಂದ ಹುಡುಗಿಗೆ ಕೆಲಸ ಮಾಡಲು ಅನುಮತಿ ಕೊಡುತ್ತಾರೆ ಕೂಡ ಮದುವೆಗೆ ಅನುಕೂಲ ವಾಗಲಿ, ಈಗಿನ ಹುಡುಗರು ನೌಕರಿಯಲ್ಲಿರುವ ಹುಡುಗಿಯರನ್ನು ಬಯಸುತ್ತಾರೆ ಎಂದು. ಅಕಸ್ಮಾತ್ ಹುಡುಗನ ಮನೆಯವರು ಬಯಸಿದರೆ ನೌಕರಿ ಬಿಡಬಹುದು ಎಂಬ ಆಯ್ಕೆಯೂ ಅದರ ಹಿಂದಿರುತ್ತದೆ.
ಉನ್ನತ ಅಧ್ಯಯವನ್ನು ಕೈಗೊಂಡು ಸಂಶೋಧನ ಕ್ಷೇತ್ರಕ್ಕೆ ಕಾಲಿಟ್ಟ ಮಹಿಳೆಯರ ಹಾದಿಯೇನೂ ಸುಗಮವಾಗಿರುವುದಿಲ್ಲ. ಅಷ್ಟು ಹೊತ್ತಿಗೆ ಆಕೆಯ ಮದುವೆಯಾಗಿರುತ್ತದೆ. ಈ ಮದುವೆ ಎಂಬ ವ್ಯವಸ್ಥೆ ಒಬ್ಬ ಪುರುಷನ ಜೀವನದಲ್ಲಿ ಬೀರುವ ಪರಿಣಾಮಕ್ಕೂ ಮಹಿಳೆಯ ಜೀವನದಲ್ಲಿ ಬೀರುವ ಪರಿಣಾಮಕ್ಕೂ ಹೆಚ್ಚಿನ ವ್ಯತ್ಯಾಸವಿದೆ. ಮಹಿಳೆ ಹೊಸ ಮನೆಗೆ ಹೋಗಬೇಕು, ಅದುವರೆಗೆ ತಾನರಿತಿರದ ಜನರೊಡನೆ ಬೆರೆತು ಇರಬೇಕು. ಇದರ ಜೊತೆಗೆ ತಾನು ಹುಟ್ಟಿ ಬೆಳೆದ ತೌರನ್ನು ತೊರೆಯಬೇಕು. ಆದರೆ ಪುರುಷನಿಗೆ ಈ ತೊಂದರೆಗಳು ಇರುವುದಿಲ್ಲ. ಅವನು ಮದುವೆಯ ಹೊರತಾಗಿಯೂ ತನ್ನ ಅಧ್ಯಯನ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಬಹುದು. ಮದುವೆಯ ನಂತರವೂ ಸಂಶೋಧನೆ ನಡೆಸಿ ಕೊಂಡು ಹೋಗುವ ಅವಕಾಶ ದೊರೆತ ಮಹಿಳೆಯರು ಅದನ್ನು ಮುಂದುವರಿಸುತ್ತಾರೆ ಆದರೆ ಅದು ಸ್ವಲ್ಪಕಾಲ. ಹೆಚ್ಚುತ್ತಿರುವ ವಯಸ್ಸಿನಿಂದಾಗಿ ಅಕೆ ಮುಂದಿನ ಜವಾಬ್ದಾರಿಗೆ ಸಿದ್ಧಳಾಗಬೇಕು. ಆಕೆಯ ಗರ್ಭಾವಸ್ಥೆ ಆಕೆಯನ್ನು ಸಂಶೋಧನೆ ಕ್ಷೇತ್ರದಲ್ಲಿ ಮುಂದುವರಿಯಲು ಬಿಡುವುದಿಲ್ಲ.
ಅಧ್ಯಯನದ ವರದಿಯೊಂದರ ಪ್ರಕಾರ, ಯಾವುದೇ ಸಂಶೋಧನೆಯಲ್ಲಿ ಆರು ತಿಂಗಳುಗಳ ಗ್ಯಾಪ್ ಬಂದರೆ ಅದು ಅವರ ಸಂಶೋಧನೆಯನ್ನು ಮೂರು ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಇನ್ನು ಆಕೆ ತಾಯಿಯಾಗಿ ಮಗುವಿನ ಜವಾಬ್ದಾರಿಯನ್ನು ಮುಗಿಸಿ ಮತ್ತೆ ಲ್ಯಾಬ್ ಗೆ ಬರುವ ವೇಳೆಗೆ ಎಲ್ಲವೂ ಬದಲಾಗಬಹುದು. ಈ ಮದುವೆ, ಬಸಿರು, ಬಾಣಂತನಗಳ ಕಾರಣಗಳಿಗೆ, ಬಹುತೇಕ ಗೈಡ್ ಗಳು ಮಹಿಳೆಯರನುನ್ನು ಸಂಶೋಧನೆಗೆ ಸೇರಿಸಿಕೊಳ್ಳುವುದೇ ಇಲ್ಲ.
ಇದೆಲ್ಲವೂ ಸರಿಯಾಗಿದ್ದು ಆಕೆ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿದ್ದಾಳೆ ಎಂದರೆ ಆಕೆಗೆ ಆಕೆಯ ಸಾಮರ್ಥ್ಯಕ್ಕೆ ದೊರೆಯಬೇಕಾದ ಮನ್ನಣೆ ದೊರೆಯುವುದಿಲ್ಲ. ಆಕೆಗೆ ದೊಡ್ಡ ದೊಡ್ಡ ಸೆಮಿನಾರುಗಳು ಅಂತಾರಾಷ್ಟ್ರೀಯ ಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶಗಳು ಕೇವಲ ಮಹಿಳೆ ಎಂಬ ಕಾರಣಕ್ಕೆ ದೊರೆಯುವುದಿಲ್ಲ. ಅಲ್ಲಿಯೂ ಪುರುಷ ವರ್ಗದ ಪ್ರಾಬಲ್ಯದಿಂದಾಗಿ ಆಕೆ ಹಿಂದುಳಿಯಬೇಕಾಗುತ್ತದೆ. ಮೇಲ್ನೋಟಕ್ಕೆ ಏನೂ ಗೋಚರವಾಗುವುದಿಲ್ಲ ಆದರೆ ಕಣ್ಣಿಗೆ ಕಾಣದ ಪಾರದರ್ಶಕ ಗೋಡೆಯೊಂದು ಕೆಲಸ ಮಾಡುತ್ತಿರುತ್ತದೆ. ಇದನ್ನೇ ಮಹಿಳಾ ವಿಜ್ಞಾನಿಗಳ ಕ್ಷೇತ್ರದಲ್ಲಿ Glass ceiling, Sticky floor, Leaking pipe ಎಂದೆಲ್ಲ ಕರೆಯುತ್ತಾರೆ.
ಹಾಗಾದರೆ ಮಹಿಳೆ ಈ ಕ್ಷೇತ್ರದಲ್ಲಿ ಸೋಲನ್ನು ಒಪ್ಪಿಕೊಂಡಿದ್ದಾಳೆಯೇ ಎಂದರೆ ಖಂಡಿತಾ ಇಲ್ಲ. ಹೋರಾಟದ ಗುಣವನ್ನು ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಅದನ್ನು ತನ್ನ ಜೀನ್ ಗಳಲ್ಲಿಯೇ ಪಡೆದಿರುವ ಮಹಿಳೆ ಹೋರಾಡುತ್ತಲೇ ತನ್ನ ಸಾಧನೆಯ ಹಾದಿಯ ಜೊತೆ ಜೊತೆಗೆ ತನಗಿಂತ ಕಿರಿಯರನ್ನು ಪ್ರೋತ್ಸಾಹಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾಳೆ. ತಾನು ತಿರಸ್ಕ್ರತಳಾದರೂ ಇಂಡಿಯನ್ ಅಕಾಡಮಿ ಅಫ್ ಸೈನ್ಸ ಸ್ಥಾಪಕರಲ್ಲಿ ಒಬ್ಬರಾದ ಜಾನಕಿ ಅಮ್ಮಾಳ್ ನಿಂದ ಪ್ರಾರಂಭಗೊಂಡು ಇಂದಿನ ಪ್ರೊ. ರೋಹಿಣಿ ಗೋಡ್ ಬೋಲೆಯವರೆಗೆ ಮಹಿಳಾ ವಿಜ್ಞಾನಿಗಳು ತಮಗಿಂತ ಕಿರಿಯರನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಇದಕ್ಕಾಗಿ ನಡೆದ ಅಧ್ಯಯನಗಳು ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿವೆ. ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಭರವಸೆಯೂ ಇದೆ.
ಮೊದಲು ತಾಯಿ ತಂದೆಯರು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ವಿಜ್ಞಾನದಲ್ಲಿ ಮುಂದುವರಿಯುವ ಆಸಕ್ತಿಯಿರುವ ಯುವತಿಯರಿಗೆ ಪ್ರೋತ್ಸಾಹ ನೀಡಬೇಕು, ಪತಿ ಯಾವುದೇ ಹಂತದಲ್ಲಿ ಆಕೆಗೆ ಕೀಳರಿಮೆ ಉಂಟಾಗದಂತೆ ನೋಡಿಕೊಳ್ಳಬೇಕು. ಸಂಶೋಧನಾ ಸಂಸ್ಥೆಗಳಲ್ಲಿ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಇರಬೇಕು. ಯುವತಿಯರಿಗಾಗಿ ಇರುವ ಫೆಲೋಶಿಪ್ ಗಳು ಸರಿಯಾದ ರೀತಿಯಲ್ಲಿ ಹಂಚಿಕೆಯಾಗಬೇಕು ಮತ್ತಷ್ಟು ಹೆಚ್ಚಿಸಿದಲ್ಲಿ ಒಳಿತು. ಲ್ಯಾಬ್ ಗಳಲ್ಲಿ ಪುರುಷ ಸಹೋದ್ಯೋಗಿಗಳು ಆಕೆಯನ್ನು ತಮ್ಮಲ್ಲಿ ಒಬ್ಬಳಂತೆ ಕಾಣಬೇಕೇ ಹೊರತು ಪ್ರತಿಸ್ಪರ್ಧಿಯಂತೆ ಕಾಣಬಾರದು.
ಅದ್ಭುತ ಅಂತಃ ಶಕ್ತಿಯನ್ನು ಹೊಂದಿರುವ ಮಹಿಳೆಯ ಸಾಮರ್ಥ್ಯದಿಂದ ದೇಶದ ಅಭಿವೃದ್ಧಿ ಸಾಧ್ಯವೇ ಹೊರತು ಆಕೆಯನ್ನು ಮಹಿಳೆ ಎಂಬ ಕಾರಣಕ್ಕೆ ಇಲ್ಲ ಸಲ್ಲದ ಸಾಮಾಜಿಕ ಬಂಧನಗಳಿಗೆ ಒಳಪಡಿಸುವುದರಿಂದ ಅಲ್ಲ. ಆಕೆಗೂ ಸಮಾನ ಅವಕಾಶಗಳು ದೊರೆತಾಗ ಸಮಾನತೆಯ ಜಗತ್ತು ನಮ್ಮದಾಗುತ್ತದೆ. ದೇಶದ ವಿಜ್ಞಾನ ಕ್ಷೇತ್ರದಲ್ಲಿ ಇವೆಲ್ಲ ಅಡೆತಡೆಗಳನ್ನು ಮೀರಿ ಮಿಂಚುತ್ತಿರುವ ಹಲವಾರು ಮಹಿಳೆಯರಿದ್ದಾರೆ ಅವರಿಗೆ ನಮ್ಮ ಅಭಿವಂದನೆಗಳು. ಇಂಥವರ ಸಂತತಿ ನಮ್ಮ ದೇಶದಲ್ಲಿ ಸಾವಿರವಾಗಲಿ, ವಿಜ್ಞಾನವನ್ನು ಒಪ್ಪಿ ಅಪ್ಪಿಕೊಳ್ಳುವವರು ಮತ್ತೂ ಹೆಚ್ಚಾಗಲಿ ಎಂಬುದೆ ಈ ವಿಜ್ಞಾನ ದಿನದ ಹಾರೈಕೆ.

-ಸುಮಂಗಲಾ ಎಸ್. ಮುಮ್ಮಿಗಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.