ವಿಜ್ಞಾನಮಯಿ/ಮಹಿಳೆ , ಮೇದಿನಿ ಮತ್ತು ಮೇಕಪ್ – ಸುಮಂಗಲಾ ಮುಮ್ಮಿಗಟ್ಟಿ

ಮಹಿಳೆ ಮತ್ತು ಮಣ್ಣಿನ ನಡುವಿನ ಸಂಬಂಧ ಮಧುರವಾದದ್ದು, ಈಗ ಅವರು ಬಳಕೆ ಮಾಡುತ್ತಿರುವ ಸೌಂದರ್ಯ ಸಾಧನಗಳು ಭೂಮಿಯನ್ನು ಮತ್ತು ನೀರನ್ನು ಕಲುಷಿತಗೊಳಿಸುತ್ತಿದೆ. ಈಗ ಇದರ ವಿರುದ್ಧ  ’ಬೀಟ್ ದಿ ಮೈಕ್ರೋ ಬೀಡ್’ ಆಂದೋಲನ ಆರಂಭವಾಗಿದೆ. 

ಕೆಲವು ವರ್ಷಗಳ ಹಿಂದಿನ ಮಾತು. ಗದಗ ಜಿಲ್ಲೆಯ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ವಿಷಯದಲ್ಲಿ ರೈತರು ಧರಣಿ ಕುಳಿತಿದ್ದರು.ಆ ಗುಂಪಿನಲ್ಲಿ ರೈತರೊಂದಿಗೆ ರೈತ ಮಹಿಳೆಯರೂ ಇದ್ದರು ಮಾಧ್ಯಮಗಳು “ಅಷ್ಟೊಂದು ಒಳ್ಳೆಯ ಪರಿಹಾರ ದೊರೆಯುತ್ತಿರುವಾಗ ಭೂಮಿಯನ್ನು ಕೊಡಲು ನೀವೇಕೆ ಒಪ್ಪುತ್ತಿಲ್ಲ?”  ಎನ್ನುವ ಪ್ರಶ್ನೆಯನ್ನುಕೇಳಿದಾಗ ರೈತ ಮಹಿಳೆಯರು ಕೊಟ್ಟ ಉತ್ತರ “ ಈ ಗಂಡಸ್ರಿಗೇನ್ ತಿಳಿತದರೀ, ರೊಕ್ಕ ಇವತ್ತ ಬರ್ತ್ತದ ಉಂಡ ತಿಂದ ಕೂತ್ರ ಕೈ ಖಾಲಿ ಆಗ್ತದ, ಆದ್ರ ಹೊಲ ಇದ್ರ ಪ್ರತಿ ವರ್ಷ ಬೆಳಿ ಬರ್ತದ, ನಾಳೆ ಮಕ್ಕಳಿಗಿ ಬಿಟ್ಟು ಹೋಗಾಕ ಆಗ್ತದ. ಭೂಮಿ ತಾಯಿನ ನಂಬಿದವರಿಗೆ ಅಕಿ ಎಂದೂ ಮೋಸ ಮಾಡುದಿಲ್ಲರಿ, ಅದಕ ನಮಗೆ ನಮ್ಮ ಹೊಲ ಬೇಕು, ರೊಕ್ಕ ಅಲ್ಲ”

ಇದನ್ನು ಓದಿದಾಗ, ಮಹಿಳೆ ಮತ್ತು ಮಣ್ಣಿನ ನಡುವಿನ ಮಧುರ ಸಂಬಂಧದ ಅರಿವಾಗುತ್ತದೆ.ಇದೀಗ ಮಹಿಳೆಯರು ಈ ಭೂಮಿಗಾಗಿ ಒಂದಷ್ಟು ಕೆಲಸ ಮಾಡಬೇಕಾದ ಸಮಯ ಬಂದಿದೆ. ಅದೂ ಅವರೀಗಾಗಲೇ ಮಾಡುತ್ತಿರುವ ಕೆಲಸಗಳ ಜೊತೆ ಜೊತೆಗೇ, ಕೆಲವರಿಗೆ ಇದು ಬಹಳ ಸುಲಭವಾಗಬಹುದು, ಇನ್ನು ಕೆಲವರಿಗೆ ಸ್ವಲ್ಪ ಕಷ್ಟವಾಗಬಹುದು, ಮತ್ತೆ ಹಲವರಿಗೆ ಏನೂ ಆಗದಿರಬಹುದು. ನಮ್ಮ ಗ್ರಾಮೀಣ ಮಹಿಳೆಯರಿಗೆ ತಮಗೆ ಸಂಬಂಧವಿಲ್ಲ ಎನಿಸಬಹುದು. ಹಾಗಾದರೆ ಅದೇನು?

ನಿಮ್ಮ ಮೇಕಪ್!

ಈ ಭೂಮಿಯ ಮೇಲಿರುವ ಜೀವಿಗಳಿಗೆ ಕಂಟಕ ತರುವ ವಸ್ತುಗಳು ನಾವು ಬಳಸುವ ಮೇಕಪ್ ನಲ್ಲಿವೆ ಎಂದರೆ ನಂಬುತ್ತೀರಾ?  ಎಲ್ಲಿಯ ಸುವಾಸನೆಯುಕ್ತ ಸಾಬೂನು, ಪೌಡರ್ ಕ್ರೀಮ್ ಗಳು, ಬಣ್ಣ ಬಣ್ಣದ ಲಿಪ್ಸಸ್ಟಿಕ್ ಗಳು, ಹೊಳೆವ ನೇಲ್ ಪಾಲಿಶ್ ಗಳು ಎಲ್ಲಿಯ ಭೂಮಿ?  ಎಂದು ಯಾರಿಗಾದರೂ ಅನ್ನಿಸುವುದು ಸಹಜ. ಅದಕ್ಕಾಗಿಯೇ ಹೆಚ್ಚಿನ ವಿಷಯ ತಿಳಿಯುವ ಪ್ರಯತ್ನ ಮಾಡೋಣ

ಬೀದಿ ಬೀದಿ ಗಳಲ್ಲಿ ನಾಯಿ ಕೊಡೆಗಳಂತೆ ಏಳುತ್ತಿರುವ ಬ್ಯೂಟಿ ಪಾರ್ಲರುಗಳ ಬಗೆಗೆ ನಮಗೆಲ್ಲ ಗೊತ್ತಿದೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಹಿಳೆಯರೂ ಹುಡುಗಿಯರೂ ಅವನ್ನು ಬಳಸುತ್ತಿದ್ದಾರೆ. ಹಾಗಾದರೆ ಇವರೆಲ್ಲ ಬ್ಯೂಟಿ ಪಾರ್ಲರ್ ಗಳಿಗೆ ಹೋಗಬಾರದೆ? ಹಾಗೇನೂ ಇಲ್ಲ ಆದರೆ ಬಳಕೆದಾರರು ಹೆಚ್ಚಾದಂತೆ ಬಳಸುವ ವಸ್ತುಗಳೂ ಹೆಚ್ಚಾಗುತ್ತವೆ, ಮತ್ತು ಕಡಿಮೆ ಬೆಲೆಯಲ್ಲಿ ಸೇವೆಯನ್ನು ಕೊಡುವ ಪ್ರಯತ್ನದಲ್ಲಿ ಕಳಪೆ ಗುಣಮಟ್ಟದ ಸಾಮಾಗ್ರಿಗಳ ಬಳಕೆಯಾಗುತ್ತಿದೆ, ಅವುಗಳ ವೈಜ್ಞಾನಿಕ ವಿಲೇವಾರಿ ಆಗದೆ ಇದ್ದಾಗ ಅದು ಪರಿಸರಕ್ಕೆ ಮಾರಕವಾಗುತ್ತದೆ

ನೀವು ಸಂಜೆ ಮುಖ ತೊಳೆಯಲು ಬಳಸಿದ್ದ ಸೋಪಿನಲ್ಲಿಯಂತಹದೇ ವಸ್ತುವೊಂದು ರಾತ್ರಿಯ ನಿಮ್ಮ ಊಟದ ತಟ್ಟೆಯಲ್ಲಿದೆ ಎಂದರೆ ! ಹೌದು, ಇಂದು ನಮ್ಮ ಸೋಪು, ಕ್ಲೆನ್ಸರ್,  ಸ್ಕ್ರಬ್ ಗಳಲ್ಲಿರುವ ವಸ್ತುವೊಂದು ಜಲಚರಗಳಿಗೆ ಮಾತ್ರವಲ್ಲ ಇಡಿ ಜೀವ ಸಂಕುಲಕ್ಕೆ ಹಾಗೂ ಭೂಮಿಗೆ ಮಾರಕವಾಗುತ್ತಿದೆ. ಅದುವೇ  “ಮೈಕ್ರೋಬೀಡ್”.

ಮೈಕ್ರೋಬೀಡ್ ಗಳು

ನೀವು ಮುಖ ತೊಳೆಯುವಾಗ, ಇಲ್ಲವೇ ಪಾರ್ಲರನಲ್ಲಿ ಕ್ಲೆನ್ಸಿಂಗ್ ಅಥವಾ ಸ್ಕ್ರಬ್ ಮಾಡಿಸಿಕೊಳ್ಳುವಾಗ (ಇವು ಫೇಷಿಯಲ್ ನ ಹಂತಗಳು) ತರಿ ತರಿಯಾದ ಅಥವಾ ಉರುಟಾದ ಸಣ್ಣ ಸಣ್ಣ ಆದರೆ  ಮೃದುವಾದ  ವಸ್ತುಗಳು  ನಿಮ್ಮ ಚರ್ಮ ಕ್ಕೆ ತಗುಲುವುದು ನಿಮ್ಮ ಅನುಭವಕ್ಕೆ ಬಂದಿರುತ್ತದೆ. ಇಂತಹ ಪ್ಲಾಸ್ಟಿಕ್ ನಿಂದಾದ ಎರಡು ಮಿಲಿ ಮೀಟರಿಗಿಂತ ಚಿಕ್ಕ ಚಿಕ್ಕ ಮಣಿಗಳನ್ನು ಮೈಕ್ರೋಬೀಡ್ ಗಳು  ಎನ್ನುತ್ತಾರೆ. ಇವು ಕ್ರೀಮಿನೊಂದಿಗೆ ಚರ್ಮವನ್ನು ಮೃದುವಾಗಿ ತಾಡಿಸಿದಾಗ ಚರ್ಮದ ಮೇಲಿನ  ಸತ್ತ ಜೀವಕೋಶಗಳು (ಡೆಡ್ ಸ್ಕಿನ್ ಸೆಲ್ಸ್) ಬೇರ್ಪಟ್ಟು ಒಳಗಿನ ತಾಜಾ ಹೊಳೆವ ಚರ್ಮ ತೆರೆದುಕೊಳ್ಳುತ್ತದೆ. ನಮ್ಮ ಗ್ರಾಮೀಣ ಮಹಿಳೆಯರು ನದಿ ಹಳ್ಳಗಳಲ್ಲಿ ನಿಂತು ಬಟ್ಟೆ ಒಗೆದ ನಂತರ ಉರುಟು ಕಲ್ಲಿನಿಂದ ಉಜ್ಜಿದಾಗ, ಅಥವಾ ಪ್ಯೂಮಿಕ್ ಸ್ಟೋನ್ ನಿಂದ  ಉಜ್ಜಿದಾಗ  ಇದೇ ಪರಿಣಾಮ ಉಂಟಾಗುತ್ತದೆ.

ನಿಮ್ಮ ಮುಖಕ್ಕೆ ಹಚ್ಚಿದ ಸ್ಕ್ರಬ್ ಅಥವಾ ಕ್ರೀಂ ತೊಳೆದಾಗ ಅದರಲ್ಲಿರುವ  ಮೈಕ್ರೋಬೀಡಗಳು ಪಾರ್ಲರಿನ ವಾಶ್ ಬೇಸಿನ್ನಿನ ಮೂಲಕ ಚರಂಡಿಯನ್ನು, ನಂತರ ಅದು ಸೇರುವ ಕೊಳ, ಕೆರೆ ಅಥವಾ ನದಿ ಸಮುದ್ರಗಳ ತಳದಲ್ಲಿ ಸಂಗ್ರಹವಾಗುತ್ತದೆ. ಪ್ಲಾಸ್ಟಿಕ್ ಸೂಪ್ ಎಂದು ಕರೆಯುವ ಇದು ಇದರ ಮೈಕ್ರೋ ಬೀಡ್ ಗಳ ಮೇಲೆ ಇತರ ಮಲಿನಕಾರಕಗಳ ಲೇಪವನ್ನು ಬೆಳೆಸಿಕೊಳ್ಳುತ್ತದೆ. ಮೈಕ್ರೋ ಬೀಡ್ ಗಳು ಪಾಲಿ ಎಥಲೀನ್ ನಿಂದಾಗಿರುತ್ತವೆ, ಇವು ನೀರಿನಲ್ಲಿರುವ ಕೀಟ ನಾಶಕಗಳು ಕ್ರಿಮಿ ನಾಶಕಗಳನ್ನು ಹೀರಿಕೊಳ್ಳುತ್ತವೆ. ಈ ಪುಟ್ಟಪುಟ್ಟ ಬೀಡ್ ಗಳು ಜಲಚರಗಳಿಗೆ ಬಹಳ  ರುಚಿ ಕರವಾಗಿರುವಂತೆ ಕಾಣುತ್ತವೆ, ಹಾಗಾಗಿ ಅವು ಅವನ್ನು ಆಹಾರವೆಂದು ಭಾವಿಸಿ ನುಂಗಿ ಬಿಡುತ್ತವೆ. ಅವುಗಳ ದೇಹವನ್ನು ಸೇರಿದ ವಿಷಕಾರಿ ವಸ್ತುಗಳು  ಒಂದು ರೀತಿಯ ಹಾನಿಯನ್ನುಂಟು ಮಾಡಿದರೆ, ಪ್ಲಾಸ್ಟಿಕ್ ನಿಂದಾದ ಮೈಕ್ರೋ ಬೀಡ್ ಗಳು ಮತ್ತೊಂದು ರೀತಿಯ ಹಾನಿಯನ್ನುಂಟು ಮಾಡುತ್ತವೆ. ಮೀನೊಂದು ಇವನ್ನು ತಿಂದಾಗ ಅದನ್ನು ಸೇವಿಸುವ ಇತರೆ ಜೀವಿಗಳು ಅಥವಾ ಮಾನವನ ದೇಹವನ್ನು ಇವು ಸೇರಿ ಆಹಾರದ ಸರಪಳಿಯ ಒಂದು ಭಾಗವಾಗುತ್ತವೆ. ಎಷ್ಟೋ ಬಾರಿ ಜಲಚರಗಳ ಹಸಿವೆಯನ್ನು ಈ ವಸ್ತುಗಳು ಇಂಗಿಸಿ ಬಿಡುವುದು ಕಂಡು ಬರುತ್ತದೆ. ಇದರಿಂದ ಜಲಚರಗಳು ಸಾಯುತ್ತವೆ. ಅಮೆರಿಕದಲ್ಲಿ ದಿನಕ್ಕೆ 80,000 ಮೈಕ್ರೋಬೀಡ್ ಗಳು ಸಾಗರವನ್ನು ಸೇರಿ ಸಾಗರದ ತಳದಲ್ಲಿ ಟೆನ್ನಿಸ್ ಕೋರ್ಟಿನಷ್ಟು ದೊಡ್ಡ ಮೈಕ್ರೋ ಬೀಡ್ ಗಳ ಜಾಲವನ್ನು ಸೃಷ್ಟಿಸಿತ್ತು.

ಪ್ಲಾಸ್ಟಿಕ್ ನ ಈ ಪುಟ್ಟ ಮಣಿಗಳು  ಮಾಡುತ್ತಿರುವ  ಆವಾಂತರವನ್ನು ಗಮನಿಸಿದ ಅಮೆರಿಕ ಸರಕಾರ ಇವುಗಳ ಬಳಕೆಯನ್ನು2007ರಲ್ಲಿ ನಿಷೇಧಿಸಿತು. ಇಂಗ್ಲೆಂಡ 2018 ರಲ್ಲಿ ನಿಷೇಧಿಸಿದೆ, ನಂತರ ಇತರ ಪಾಶ್ಚಿಮಾತ್ಯ ದೇಶಗಳು ಈ ಕೆಲಸ ಮಾಡಿವೆ. ಭಾರತದಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಇವನ್ನು ಅಪಾಯಕಾರಿ ಎಂದು ವರ್ಗೀಕರಿಸಿದೆ. ಭಾರತದ ಪ್ರಮುಖ ಬ್ರಾಂಡ್ ಗಳು ಇವನ್ನು ಬಳಸುತ್ತಿರುವುದು  ಅಧ್ಯಯನಗಳಿಂದ  ತಿಳಿದು ಬಂದಿದೆ.

ಮೈಕ್ರೋಬೀಡ್ ಗಳು  ಬಹಳ ಸಣ್ಣವಾಗಿರುವುದರಿಂದ   ಬಳಸಿದಾಗ ನಮ್ಮ ದೇಹವನ್ನು ಸೇರುವ ಸಾಧ್ಯತೆಗಳು ಉಂಟು. ಇವು ನಾವು ಬಳಸುವ ಟೂತ್ ಪೇಸ್ಟ್ ನಲ್ಲಿ ಕೂಡಾ ಇವೆ, ಹಾಗಾಗಿ ಬಾಯಲ್ಲಿ ಉಳಿದು  ನಮ್ಮ ದೇಹದ ಒಳ ಸೇರಿದರೆ ಅಪಾಯ ಖಚಿತ. ಇವು ಮಹಿಳೆಯರ ದೇಹದಲ್ಲಿರುವ  ಸ್ತ್ರೀ ಹಾರ್ಮೋನ್  ಈಸ್ಟ್ರೋಜನ್ ಅನ್ನು ಅನುಕರಿಸುತ್ತವೆ, ಇದರಿಂದ ದೇಹದಲ್ಲಿಈಸ್ಟ್ರೋಜನ್ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗುತ್ತದೆ. ವಿಶೇಷವಾಗಿ  ಹದಿಹರೆಯದ  ಹುಡುಗಿಯರಲ್ಲಿ ಇವು ಸ್ತನ ಕ್ಯಾನ್ಸರ್ ಗೆ  ಕಾರಣವಾಗುತ್ತಿರುವುದು  ಕಂಡು ಬಂದಿದೆ. ವಿಪರ್ಯಾಸವೆಂದರೆ ಹದಿ  ಹರೆಯದ  ಹುಡುಗಿಯರು ಇವನ್ನು ಹೆಚ್ಚು ಹೆಚ್ಚಾಗಿ ಬಳಸುವುದು. ಮೈಕ್ರೋಬೀಡ್ ಗಳು ಅಕಸ್ಮಾತ್ ಆಗಿ ಕಣ್ಣನ್ನು ಸೇರಿದರೆ ಕಣ್ಣಿನ ಕಾರ್ನಿಯಾಗೆ ತೊಂದರೆಯನ್ನುಂಟು  ಮಾಡುತ್ತವೆ. ಆದುದರಿಂದ ಇವನ್ನು ಬಳಸುವಾಗ ಅತಿಯಾದ ಎಚ್ಚರಿಕೆಯ ಅವಶ್ಯಕತೆ ಇದೆ. ನಿಮ್ಮ ಪಾರ್ಲರ್ ನ ಸಿಬ್ಬಂದಿಗೆ ಇದರ ಅರಿವಿದೆಯೇ? ಸರಿಯಾದ ತರಬೇತಿ ಇದೆಯೇ? ಗಮನಿಸಿ.

ಈಗ ನಾವು ಮಾಡ ಬೇಕಾದದ್ದು

ವಿಷಯವೇನೋ ಅರ್ಥವಾಯಿತು  ಆದರೆ ನಾವೇನು ಮಾಡಬೇಕು?  ನಾವು ಬಳಸುವ ಈ ಪ್ರಸಾಧನಗಳು ಜೀವರಕ್ಷಕ ಔಷಧಿಗಳೇನೂ ಅಲ್ಲ. ಅಂದಾಗ ಅವನ್ನು ಬಿಡಬಹುದು ಹಾಗಾದರೆ ನಾವು  ಸುಂದರಿಯರಾಗಿ ಕಾಣಬಾರದೆ?  ಖಂಡಿತ ಇದು ಪ್ರತಿಯೊಬ್ಬ ಮಹಿಳೆಯ ಹಕ್ಕು ಕೂಡ. ಆದರೆ ಅದಕ್ಕಾಗಿ ಮೈಕ್ರೋ ಬೀಡ್ ಇರುವ ಪ್ರಸಾಧನಗಳನ್ನೇ ಬಳಸಬೇಕಿಲ್ಲ. ನಮ್ಮ ಕಡಲೆ, ಹೆಸರು, ಅಕ್ಕಿ ಹಿಟ್ಟುಗಳು ಸಹ ಮೈಕ್ರೋ ಬೀಡ್ ಗಳ ಕೆಲಸವನ್ನು ಮಾಡಬಲ್ಲವು. ಈಗ ಜಗತ್ತಿನಾದ್ಯಂತ  ಬೀಟ್ ದಿ ಮೈಕ್ರೋ ಬೀಡ್ ಆಂದೋಲನ ಆರಂಭವಾಗಿದೆ. ಎಲ್ಲ ದೇಶಗಳ ಮಹಿಳೆಯರು ಈ ಭೂಮಿಯ ರಕ್ಷಣೆಗಾಗಿ ಭಾಗಿಯಾಗಿದ್ದಾರೆ, ಬನ್ನಿ ನಾವೂ ಕೈ ಜೋಡಿಸೋಣ.

ಸುಮಂಗಲಾ ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *