Latestಅಂಕಣ

ವಿಜ್ಞಾನಮಯಿ/ ಮಹಿಳೆ, ಮಳೆ ಮತ್ತು ಬೆಳೆ – ಸುಮಂಗಲಾ ಮುಮ್ಮಿಗಟ್ಟಿ

 ಪ್ರಪಂಚದ ಮೊದಲ ವಿಜ್ಞಾನಿ ಮಹಿಳೆ ಎಂದು ಹಲವರು ಹೇಳುವುದರಲ್ಲಿ ಯಾವುದೇ ಅತಿರೇಕವಿಲ್ಲ. ಇಂದು ಮಹಿಳೆಯ ವಿವೇಕ ಈ ನಿಟ್ಟಿನಲ್ಲಿ ಮತ್ತೊಮ್ಮೆ ಎಚ್ಚೆತ್ತುಕೊಳ್ಳ ಬೇಕಾಗಿದೆ. ಕೃಷಿ ಮಹಿಳೆ ಹೊಲ ಮನೆಗಳ ಎಲ್ಲ ಕೆಲಸಗಳಲ್ಲಿ ತನಗರಿಯದೆಯೇ ಅವುಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ನಿರ್ವಹಿಸುತ್ತಿರುತ್ತಾಳೆ.  

ಇತ್ತೀಚಿನ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಉತ್ತರ ಕರ್ನಾಟಕ ಮತ್ತು ಕರಾವಳಿ ಹಾಗೂ ಇತರ ಭಾಗಗಳು ತತ್ತರಿಸಿ ಹೋಗಿರುವುದು ಎಲ್ಲರಿಗೆ ತಿಳಿದಿರುವ ವಿಷಯ. ಇದರಲ್ಲಿ ಹೆಚ್ಚು ತೊಂದರೆಗೆ ಒಳಗಾಗಿರುವವರು ಮಹಿಳೆಯರು ಎಂದರೆ ಅತಿಶಯೋಕ್ತಿಯಾಗಲಾರದು. ಮಹಿಳೆ ಗೃಹಿಣಿಯೇ ಆಗಿರಲಿ, ಉದ್ಯೋಗ ನಿರತಳೇ ಆಗಿರಲಿ, ಆಕೆಗೆ ಮನೆಯ ಆಗು ಹೋಗುಗಳ ಜವಾಬ್ದಾರಿ ಹೆಚ್ಚೇ. ಅದರಲ್ಲೂ ಕೃಷಿ ಮಹಿಳೆಯಾಗಿದ್ದರಂತೂ ಇನ್ನೂ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದರಲ್ಲೂ ಇಂತಹ ಆಪತ್ಕಾಲದಲ್ಲಿ ಅದು ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಹೊಲ ಮನೆಗಳ ಎಲ್ಲ ಕೆಲಸಗಳಲ್ಲಿ ಆಕೆಯ ಜವಾಬ್ದಾರಿ ಇರುತ್ತದೆ. ತನಗರಿಯದೆಯೇ ಕೃಷಿ ಮಹಿಳೆ ಅವುಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ನಿರ್ವಹಿಸುತ್ತಿರುತ್ತಾಳೆ.

ಕೆಲವು ವರ್ಷಗಳ ಹಿಂದಿನ ಮಾತು. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಮತ್ತು ಮೈಲಾರದ ಹಾದಿಯಲ್ಲಿರುವ ಗುಡ್ಡದ ಆನ್ವೇರಿ ಎನ್ನುವ ಹಳ್ಳಿಗೆ ನಾನು ಹೋದಾಗ, ಬೆಳಗಿನ ಎಂಟು ಗಂಟೆಯಾಗಿತ್ತು. ಉತ್ತು ತಯಾರಿ ಮಾಡಿದ್ದ ಹೊಲಗಳನ್ನು ಹಿಂದಿನ ಒಂದೆರಡು ದಿನ ಬಿದ್ದ ಮಳೆ ಹದವಾಗಿಸಿತ್ತು. ಊರಿನ ಹಲವು ರೈತರ ಮನೆಯ ಮುಂದೆ ನೊಗ ಹೂಡಿದ ಎತ್ತುಗಳು ತಯಾರಾಗಿ ನಿಂತಿದ್ದವು. ಅದರೊಂದಿಗೆ ಬಿತ್ತುವ ಕೂರಿಗೆ ಮತ್ತಿತರ ಸಾಮಗ್ರಿಗಳು ಸಜ್ಜಾಗುತ್ತಿದ್ದವು. ನಾನು ನನ್ನ ದೊಡ್ಡವ್ವನ ಮನೆಯೊಳಗೆ ಕಾಲಿಟ್ಟಾಗ, ಮನೆಯ ಪಡಸಾಲೆಯಲ್ಲಿ ಹಳೆಯ ಸೀರೆಯ ಗಂಟುಗಳನ್ನು ಹರವಿಕೊಂಡು ಕುಳಿತಿದ್ದಳು. ತುಂಬಾ ಗಂಭೀರವಾಗಿ ಆಕೆ ಏನನ್ನೋ ಹುಡುಕುತ್ತಿದ್ದದ್ದನ್ನು ನೋಡಿ, “ ಏನ್ ದೊಡ್ಡವ್ವಾ ಏನೋ ಬಂಗಾರ ಹುಡಕಾಕತ್ತಿದ್ದಂಗ ಕಾಣಿಸ್ತದ“ ಎಂದೆ. “ಹೌದವ್ವ, ಬಂಗಾರನ ರೊಕ್ಕ ಇದ್ದರ ಕೊಳ್ಳಬಹುದು ಆದರ, ಆದರ ಇವನ್ನಾ ಕೊಳ್ಳಾಕಾ ಬರುದಿಲ್ಲಾ” ಎಂದಾಗ ಹತ್ತಿರ ಹೋಗಿ ನೋಡಿದೆ. ಆ ಗಂಟುಗಳಲ್ಲಿ ಹೀರೆ, ಕುಂಬಳ, ಸೌತೆ, ಪುಂಡಿ, ಎಳ್ಳು, ಗುರೆಳ್ಳು …..ಮುಂತಾದ ಬೀಜಗಳು ಅಲ್ಲಿದ್ದವು!ಅದರಲ್ಲೂ ಉತ್ತಮವಾದುದನ್ನು ಆಯ್ದು ಇಡಲಾಗಿತ್ತು. “ಒಂದೀಟು ತಡಿಯವ್ವ ಬಂದೆ, ಹೆಂಗೂ ಬಿತ್ತಾಕ ಹೊಂಟಾರ ಅವ್ರಿಗೆ ಕೊಟ್ಟರ ಜ್ವಾಳದ ಸಾಲಿನ ನಡುವ ಅಲ್ಲಲ್ಲೆ ಚೆಲ್ಲಿದರ ಹುಟ್ತಾವು” ಎಂದಳು.

ಮುಂದಿನ ಒಂದು ಘಂಟೆ ಬೀಜ ಸಂಗ್ರಹಣೆ, ಅದರ ಉಪಯೋಗ, ಭವಿಷ್ಯದ ಪೀಳಿಗೆಯ ಚಿಂತೆ, ನೀರಿನ ಲಭ್ಯತೆಯ ಕಾಳಜಿ, ಕೆರೆ ನೀರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ, ನೆರೆ ಬಂದಾಗ , ಅತಿವೃಷ್ಟಿಯಾದಾಗ ಆಹಾರದ ಬೇಡಿಕೆಯನ್ನು ಪೂರೈಸಲು ಬೇಕಾದ ವಿಧಾನ ಮುಂತಾದ ಹಲವಾರು ವಿಷಯಗಳು ಆಕೆಯ ಮಾತಿನಲ್ಲಿ ಬಂದು ಹೋದವು. ಯಾವುದೇ ಪರಿಸರ ಪರಿಣತರು ಹೇಳಬಹುದಾದ ವಿಷಯಗಳೆಲ್ಲವನ್ನೂ ಆಕೆ ಹೇಳಿದಳು. ಅವು ಓದಿನ ಮಾತುಗಳಾಗಿರಲಿಲ್ಲ, ಅನುಭವದ ಮಾತುಗಳಾಗಿದ್ದವು.

ಇಂದು ಮತ್ತೊಮ್ಮೆ ಅವು ನೆನಪಾದವು, ಮಹಿಳೆಯ ಜಾಣ್ಮೆ ಹೇಗೆ ಕುಟುಂಬವನ್ನು ಕಾಯಬಲ್ಲವು ಎನಿಸಿತು. ಇಂದು ಹಾವೇರಿ ಜಿಲ್ಲೆಯ ವರದಾನದಿ ತಟದ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ವಿಷಯ ತಿಳಿದಾಗ, ಅಲ್ಲಿಯೂ ಒಬ್ಬ ದೊಡ್ಡವ್ವ ಇದ್ದಿರಬಹುದಲ್ಲವೇ ಎನಿಸಿತು.

ಪ್ರಪಂಚದ ಮೊದಲ ವಿಜ್ಞಾನಿ ಮಹಿಳೆ ಎಂದು ಹಲವರು ಹೇಳುವುದರಲ್ಲಿ ಯಾವುದೇ ಅತಿರೇಕವಿಲ್ಲ. ಇಂದು ಮತ್ತೊಮ್ಮೆ ಮಹಿಳೆಯ ವಿವೇಕ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ. ಹೀಗೆಂದಾಗ, ಮಹಿಳೆಯೇ ಏಕೆ ಎಲ್ಲ ಜವಾಬ್ದಾರಿಗಳನ್ನು ಹೊರಬೇಕು? ಎಲ್ಲಕ್ಕೂ ಆಕೆಯೇ ಯಾಕೆ ಕಾರಣವಾಗಬೇಕು? ಎನ್ನುವ ಮಾತುಗಳು ಕೇಳಿ ಬರಬಹುದು.ಇದು ಜವಾಬ್ದಾರಿಯ ಪ್ರಶ್ನೆಯಲ್ಲ. ಬದಲಾಗಿ ಇದು ಪ್ರಕೃತಿಯ ಪರವಾಗಿ ನಾರಿಯ ಬದ್ಧತೆಯ ವಿಷಯ.

ಇಂದು ಯಾರು ಏನೇ ಹೇಳಿದರೂ , ಏರುತ್ತಿರುವ ತಾಪಮಾನ, ಮತ್ತು ಬದಲಾಗುತ್ತಿರುವ ಹವಾಮಾನದ ಪರಿಣಾಮವನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಮನುಕುಲ ತನ್ನ ಕೃತ್ಯಗಳಿಗಾಗಿ ಇಡಿಯ ಜೀವ ಸಂಕುಲವನ್ನು ಅಪಾಯಕ್ಕೆ ಒಡ್ಡಿದ ಹೊಣೆ ಹೊರಬೇಕಾಗುತ್ತದೆ. ಹಾಗಾಗಬಾರದು ಎನ್ನುವ ಸಣ್ಣ ಪ್ರಯತ್ನವೇ ಮಹಿಳೆಯ ವಿವೇಕದ ಬಳಕೆಯ ಪ್ರಯತ್ನ. ಅಂಧ ಅನುಕರಣೆಗೆ ಒಳಪಡದೇ ನಮಗೂ ಪ್ರಕೃತಿಗೂ ಹಿತ ಎನಿಸುವ ಹಾದಿಯಲ್ಲಿ ನಾವು ಸಾಗಬೇಕಾದ ಅನಿವಾರ್ಯತೆಯನ್ನು ಇಂದು ಜಗತ್ತಿನ ಎಲ್ಲ ಮಹಿಳೆಯರು ತಮ್ಮ ಕುಟುಂಬಗಳಿಗೆ ತಿಳಿಸಿ ಕೊಡಬೇಕು ಹಾಗೂ ಮನೆಯ ಸದಸ್ಯರು ಅದನ್ನು ಪರಿಗಣಿಸಬೇಕು. ಇದು ಅತಿ ಆದರ್ಶದ ಮಾತು ಎನಿಸಿದರೂ ಕೂಡಾ ಮೊದಲ ಹೆಜ್ಜೆಯನ್ನು ಇಡಲೇಬೇಕು.

ವಾರಗಟ್ಟಲೇ ಸುರಿಯುತ್ತಿದ್ದ ಮಳೆಯಲ್ಲಿ ಕೊಪ್ಪೆ ಹೊದ್ದು ಶಾಲೆಗೆ ಹೋದ ನೆನಪು ಹಲವಾರು ಮಲೆನಾಡಿಗರಿಗಿದೆ. ಆಗೆಲ್ಲ ಹೀಗಾಗಲಿಲ್ಲ ಏಕೆ? ಹಾವೇರಿ ಜಿಲ್ಲೆಯ ರಿತ್ತಿ, ಕೊರಡೂರು, ಮುಗದೂರು ಗ್ರಾಮಗಳ ಮನೆಯ ಹಿತ್ತಿಲಲ್ಲೇ ಹೊಳೆ ಹರಿಯುತ್ತಿತ್ತು. ಮಳೆಗಾಲದಲ್ಲಿ ಅದು ಮೆಟ್ಟಿಲಿಗೇ ಬರುತ್ತಿತ್ತು. ಆದರೆ ಹಾನಿಯನ್ನುಂಟು ಮಾಡುತ್ತಿರಲಿಲ್ಲ

ಈಗೇಕೆ ಹೀಗೆ? ಯೋಚಿಸಿದರೆ ನಮಗೇ ಉತ್ತರಗಳು ದೊರೆಯುತ್ತವೆ.

– ಸುಮಂಗಲಾ ಎಸ್. ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *