ವಿಜ್ಞಾನಮಯಿ/ಮಹಿಳೆಯ  ಶರೀರ  ರಚನೆ  ಜಗತ್ತಿನೆಲ್ಲೆಡೆ  ಒಂದೇ ರೀತಿಯಾಗಿಲ್ಲ!- ಸುಮಂಗಲಾ ಎಸ್.ಮುಮ್ಮಿಗಟ್ಟಿ

ಮಹಿಳೆಯ  ಶರೀರ  ರಚನೆ  ಜಗತ್ತಿನೆಲ್ಲೆಡೆ  ಒಂದೇ ರೀತಿಯಾಗಿಲ್ಲ! ಮಹಿಳೆಯ ಜನನ ಕಾಲುವೆ, ಆಕಾರ ಮತ್ತು ಅಳತೆಯಲ್ಲಿ ಬದಲಾವಣೆಯಾಗುವುದು ಆಕೆ  ಈ ಭೂಮಿಯ  ಯಾವ ಭಾಗದಲ್ಲಿರುತ್ತಾಳೆ ಎನ್ನುವುದನ್ನು ಅವಲಂಭಿಸಿದೆ. 

ಮಗಳನ್ನೋ, ಮಡದಿಯನ್ನೋ, ಗೆಳತಿ, ಸಹೋದರಿ, ಯಾರನ್ನಾದರೂ ಆಸ್ಪತ್ರೆಯ ಲೇಬರ್ ರೂಮಿಗೆ ಕಳಿಸಿ ನರ್ಸ್ ಹೇಳುವ “ಹೆರಿಗೆಯಾಯಿತು’  ಎನ್ನುವ ಸುದ್ದಿಗಾಗಿ ಕಾದು ಕುಳಿತವರಿಗೆ ಗೊತ್ತು ಆ ಚಡಪಡಿಕೆಯ ಅನುಭವ ಎಂಥಹದು ಎಂದು. ಪ್ರತಿ ಕ್ಷಣವೂ ಯುಗವೊಂದರಂತೆ ಭಾಸವಾಗುತ್ತದೆ. ತಾಯಿ ದೇಹದಿಂದ ಮಗು ಸುರಕ್ಷಿತವಾಗಿ ಹೊರ ಬಂದರೆ ಸಾಕಪ್ಪಾ ಎನಿಸಿ ಹೋಗಿರುತ್ತದೆ. ಅದಕ್ಕೆಂದೇ ಇರಬೇಕು ನಮ್ಮ ಜನಪದದಲ್ಲಿ ಗರ್ಭಿಣಿ ಯನ್ನು ಆಕೆಯ ಮಗುವನ್ನು ಸೇರಿಸಿ“ಕೊಡದೊಳಗಿನ ಕುಂಬಳಕಾಯಿ” ಎಂದು ವರ್ಣಿಸುತ್ತಾರೆ.

ಹೆರಿಗೆಯನ್ನು ಮಹಿಳೆಯ ಮತ್ತೊಂದು ಹುಟ್ಟು ಎಂದೇ ಪರಿಗಣಿಸುತ್ತಾರೆ. ಕಾಲ ಕಳೆದಂತೆ ವಿಜ್ಞಾನ ಮತ್ತು ತಂತ್ರ ಜ್ಞಾನದ ಕೊಡುಗೆ ವೈದ್ಯಕೀಯ ವಿಜ್ಞಾನವನ್ನು ಮತ್ತಷ್ಟು ಬಲಪಡಿಸಿ ಆಕೆಯ ಹೆರಿಗೆಯನ್ನು ಮತ್ತೂ ಸುರಕ್ಷಿತ ಮತ್ತು ಅಪಾಯ ರಹಿತವನ್ನಾಗಿಸಿದೆ. ಆ ನಿಟ್ಟಿನಲ್ಲಿ ನಡೆದ ಇತ್ತೀಚಿನ  ಸಂಶೋಧನೆಯೊಂದು ಮಹಿಳೆಯ ಶರೀರ ರಚನೆ ಮತ್ತು ವಿಕಾಸಹಾದಿಯಲ್ಲಿನ  ವ್ಯತ್ಯಾಸ ವನ್ನು ಕಂಡು ಹಿಡಿದಿದೆ.ಬೆನ್ನು ಮೂಳೆ ನೆಟ್ಟಗಾಗಿ ಮಾನವ ಗುರುತ್ವಾಕರ್ಷಣೆಗೆ ವಿರುಧ್ಧವಾಗಿ ಎದ್ದು ನಿಲ್ಲುವ ಪ್ರಕ್ರಿಯೆಯಲ್ಲಿ ಹೇಗೆ ಮಹಿಳೆಯ ವಸ್ತಿಭಾಗ ಕಿರಿದಾಗಿ, ಆಕೆಯ ಜನನ ಕಾಲುವೆ ಕಿರಿದಾದ್ದರಿಂದ ಹೆರಿಗೆಯ ಸಮಯದ ಸಾವಿಗೆ ಕಾರಣವಾಗಿದೆ ಎನ್ನುವುದು. ಇದೀಗ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಮಾಡಿದ   ಸಂಶೋಧನೆ  ಮತ್ತೊಂದು ಹೊಸ ವಿಷಯವನ್ನು ಪ್ರಕಟಿಸಿದೆ.

ಈ ಸಂಶೋಧನೆಯ ಪ್ರಕಾರ, ಮಹಿಳೆಯ ಜನನ ಕಾಲುವೆ, ಆಕಾರ ಮತ್ತು ಅಳತೆಯಲ್ಲಿ ಬದಲಾವಣೆಯಾಗುವುದು ಆಕೆ  ಈ ಭೂಮಿಯ  ಯಾವ ಭಾಗದಲ್ಲಿರುತ್ತಾಳೆ ಎನ್ನುವುದನ್ನು ಅವಲಂಭಿಸಿದೆ. ಆದರೆ ಬಹುತೇಕ ವೈದ್ಯಕೀಯ ವಿಜ್ಞಾನದ ಪುಸ್ತಕಗಳು  ರಚನೆಯಾಗಿರುವುದು, ಯುರೋಪಿಯನ್ ಮಹಿಳೆಯ ಶರೀರ ರಚನೆಯನ್ನು ಆಧರಿಸಿ. ಲಂಡನ್ನಿನ ರೋಹೆಮ್ ಪ್ಟನ್   ಮಾನವ ವಿಕಾಸ ಶಾಸ್ತ್ರ ವಿಭಾಗದ  ಹಿರಿಯ ಪ್ರಾಧ್ಯಾಪಕಿ ಲಿಯಾ ಬೆಟ್ಟಿಯ ಪ್ರಕಾರ, ಮಹಿಳೆಯ ದೇಹದ ಈ ಜನನ ಕಾಲುವೆಯ ಆಳ ಮತ್ತು ಅಗಲ ನವಜಾತ ಶಿಶುವಿನ ಹೊರ ಜಗತ್ತಿನ ಪಯಣವನ್ನು ನಿರ್ಧರಿಸುತ್ತವೆ. ಮತ್ತು ಈ ವಿಷಯದಲ್ಲಿ ಏಕೈಕ ಮಾನ ದಂಡವನ್ನಿಟ್ಟುಕೊಂಡು, ಹೆರಿಗೆಯನ್ನು ಮಾಡಿಸುವುದು ತಾಯಿ ಮತ್ತು ಮಗು ಇಬ್ಬರಿಗೂ ಅಪಾಯಕಾರಿ.ಯಾಕೆಂದರೆ ಪ್ರಸೂತಿ ತರಬೇತಿಗಾಗಿ ಬಳಸುವ ಮಾದರಿ, ಯುರೋಪಿಯನ್ ಮಹಿಳೆಯ ದೇಹ ರಚನೆಯನ್ನುಹೋಲುತ್ತದೆ. ಉದಾಹರಣೆಗೆ, ಆಫ್ರಿಕಾದ ಸಹರಾ ಪ್ರದೇಶದ ಮಹಿಳೆಯರ ಜನನ ಕಾಲುವೆ ಹೆಚ್ಚು  ಆಳವಾಗಿದ್ದರೆ, ಅಮೆರಿಕಾದ ಮೂಲ ನಿವಾಸಿ ಮಹಿಳೆಯ ಜನನ ಕಾಲುವೆ ಹೆಚ್ಚು ಅಗಲವಾಗಿರುತ್ತದೆ. ಯುರೋಪಿಯನ್ ಮತ್ತು ಏಷ್ಯಾದ ಮಹಿಳೆಯರು ಇವೆರಡರ ಮಧ್ಯೆ ಬರುತ್ತಾರೆ.

ಇದು ಬಹಳ ಪ್ರಮುಖವಾದ ವಿಷಯವಾಗುತ್ತದೆ ಯಾಕೆಂದರೆ, ಹೆರಿಗೆಯ ಸಮಯದಲ್ಲಿ ಮಗು ಹೊರಳುತ್ತಾ ಜನನ ಮಾರ್ಗದಲ್ಲಿ ಚಲಿಸುತ್ತದೆ. ಹಾಗೆ ಚಲಿಸುವಾಗ ಅದು ತನ್ನ ಭುಜ ಮತ್ತು ತಲೆಯ ಭಾಗವನ್ನು ಜನನ ಕಾಲುವೆಯ ಅಂಚುಗಳಿಗೆ ಒತ್ತುತ್ತ ಅದಕ್ಕೆ ತಕ್ಕಂತೆ ತನ್ನ ದೇಹವನ್ನು ಬಾಗಿಸಿ, ಬಳುಕಿಸಿ ಚಲಿಸುತ್ತದೆ. “ಮಹಿಳೆಯ ಜನನ ಮಾರ್ಗ ಪುಸ್ತಕದಲ್ಲಿ ವರ್ಣಿಸಿದ್ದಕ್ಕಿಂತ ಬೇರೆಯಾಗಿದ್ದರೆ,ಮಗುವಿನ ಚಲನೆಯೂ ಕೂಡ ನಾವು ನಿರೀಕ್ಷಿಸಿದ್ದಕ್ಕಿಂತ ಬೇರೆಯೇ ಆಗಿರುತ್ತದೆ” ಎನ್ನುತ್ತಾರೆ ಬೆಟ್ಟಿ. ಅವರ ಪ್ರಕಾರ ೨೦ನೆಯ ಶತಮಾನದ ಆರಂಭದಿಂದ ಮಧ್ಯ ಭಾಗದವರೆಗಿನ ಅವಧಿಯಲ್ಲಿ ಹೆರಿಗೆಯ ಸಮಯದಲ್ಲಿ ಮಗುವನ್ನು ಹೊರಳಿಸಲು ಇಕ್ಕಳ (ಫಾರ್ಸೆಪ್ಸ್) ಗಳನ್ನು ಬಳಸುತ್ತಿದ್ದ ವಿಧಾನ, ಪಠ್ಯ ಪುಸ್ತಕದ ವಿವರಣೆಯನ್ನು ಆಧರಿಸಿಯೇ ಇರುತ್ತಿತ್ತು

ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು ೩೦,೦೦೦ ಮಹಿಳೆಯರು ಹೆರಿಗೆಯ ಸಂಧರ್ಭದಲ್ಲಿ ಸಾಯುತ್ತಾರೆ.ಇದು ಹೆರಿಗೆಯ ಸಮಯದಲ್ಲಿ ಉಂಟಾಗುವ ಗೊಂದಲಗಳಿಂದಾಗಿ ನಡೆಯುತ್ತದೆ.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇದಕ್ಕೆಲ್ಲಾ  ಕಾರಣ ಮಾನವನ ದೊಡ್ಡ ಮೆದುಳನ್ನು  ಇಟ್ಟುಕೊಂಡಿರುವ ದೊಡ್ಡ  ತಲೆ ಬುರುಡೆ ( ಕ್ರೇನಿಯಮ್). ಆದರೆ ಇವು ಯಾವುವೂ ನಮೀಬಿಯಾ, ನಾನ್ ಜಿಂಗ್, ಮತ್ತು ನಾರ್ವೆಯ ಮಹಿಳೆಯರ ಜನನ ಮಾರ್ಗದ ರಚನೆ ಭಿನ್ನವಾಗಿರುವುದಕ್ಕೆ ಕಾರಣವನ್ನು ಕೊಡುವುದಿಲ್ಲ.ಅವರ ಅಂತರಿಕ ರಚನೆಯ ವ್ಯತ್ಯಾಸವನ್ನು ವಿವರಿಸುವುದಿಲ್ಲ.

ವಿಜ್ಞಾನಿ ಬೆಟ್ಟಿ ಊಹಿಸುವ ಪ್ರಕಾರ ಇದಕ್ಕೆ ಕಾರಣ ಮಾನವನ ವಲಸೆ ಇರಬಹುದು. ಸುಮಾರು 60,೦೦೦ ದಿಂದ 1,೦೦,೦೦೦ ವರ್ಷಗಳ ಹಿಂದೆ ಹೋಮೋ ಸೆಪಿಯನ್ನರು ಆಫ್ರಿಕಾದಲ್ಲಿ ಉಗಮವಾಗಿ ಹೊಸ ಹೊಸ ಭೂಖಂಡಗಳಿಗೆ ಚದುರಿ ಹೋದರು, ಪ್ರತಿ ಆರಂಭಿಕ ಸಮುದಾಯವೂ ಚಿಕ್ಕದಾಗಿರುತ್ತಿತ್ತು ಮತ್ತು ಅದು “ ಜೆನೆಟಿಕ್ ಬಾಟಲ್ ನೆಕ್” ಸೃಷ್ಟಿಸುತ್ತಿತ್ತು. ಅಂದರೆ ಆ ಭಾಗದಲ್ಲಿ ಒಂದೇ ರೀತಿಯ ಅನುವಂಶೀಯ ಗುಣಗಳ ದಟ್ಟಣೆ ಇರುತ್ತಿತ್ತು. ಆಫ್ರಿಕಾದಿಂದ ದೂರ ಹೋದಂತೆಲ್ಲ ಜೀನೀಯ ವೈವಿಧ್ಯ ಕಡಿಮೆಯಾಗುತ್ತಾ ಚದುರಿ ಹೋಯಿತು. ಇದರರ್ಥ ಅವರು ಹಂಚಿಕೊಂಡ ಯಾವುದೇ ಗುಣಗಳಿರಬಹುದು- ಅದು ಸ್ಕಾಂಡಿನೇವಿಯನ್ನರ  ಹೊಂಗೂದಲು, ಬಿಳಿಯ ಬಣ್ಣ, ನೀಲಿ ಕಣ್ಣು…. ಇತ್ಯಾದಿ ಅದು ಸ್ಥಳಿಯವಾಗಿ ಮಾತ್ರ ಪ್ರಬಲವಾಗುತ್ತದೆ. ಹಾಗೆಯೇ ವಸ್ತಿ ಅಥವಾ ಪೆಲ್ವಿಸ್ ಭಾಗದ ಆಕಾರ ರಚನೆ ಕೂಡಾ ಸಹರಾದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ವೈವಿಧ್ಯಮಯವಾಗಿದೆ.” ಇದು ಜನನ ಮಾರ್ಗದ ವೈವಿಧ್ಯದ  ಹಿಂದಿನ ಜನಾಂಗಗಳ ಇತಿಹಾಸದಿಂದ ತಿಳಿದು ಬರುತ್ತದೆ, ಆಗಿನಿಂದ ಇದು ಬದಲಾಗುತ್ತಾ ಬಂದಿದೆ, ಎನ್ನುವುದು ಸ್ಪಷ್ಟವಾಗುತ್ತದೆ” ಎನ್ನುತ್ತಾರೆ ಬೆಟ್ಟಿ.

ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ, ಆಫ್ರಿಕಾದಿಂದ ಜನಸಂಖ್ಯೆ ಇರುವ ದೂರ ಜನನ ಕಾಲುವೆಯ ರಚನೆಯ ವೈವಿಧ್ಯವನ್ನು ವಿವರಿಸಬಲ್ಲದು ಎನ್ನುವುದು.ಇದನ್ನು ನೋಡಿದಾಗ ಹೆಣ್ಣು ಕೇವಲ ತಾಯಿ, ಮಡದಿ, ಸಹೋದರಿ ಮುಂತಾದ ನಮ್ಮ ಸಾಮಾಜಿಕ ಪಾತ್ರಗಳನ್ನು , ಕೌಟುಂಬಿಕ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ  ಹೆಣ್ಣಲ್ಲ. ಆಕೆ ಮನುಕುಲವನ್ನು ಸದ್ದು ಗದ್ದಲವಿಲ್ಲದೇ ರೂಪಿಸುತ್ತಿರುವ, ವಿಕಾಸದ ಹಾದಿಯಲ್ಲಿ ತನ್ನ ಶರೀರವನ್ನು ಮಾರ್ಪಡಿಸಿಕೊಂಡು ಮತಿವಂತನನ್ನು ರೂಪಿಸಿತ್ತಿರುವ ಮಹಾಮಾತೆಯೂ ಹೌದು.ಈ ನಿಸರ್ಗ ತನ್ನೆಲ್ಲ ಪ್ರಯೋಗಗಳಿಗೆ ಆಕೆಯನ್ನು ಆಯ್ದು ಕೊಂಡಿದೆ ಎಂದರೂ ತಪ್ಪಾಗಲಾರದು.

ಸುಮಂಗಲಾ ಎಸ್.ಮುಮ್ಮಿಗಟ್ಟಿ

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *