ವಿಜ್ಞಾನಮಯಿ/ಮಹಿಳೆಯ ಪ್ರಯೋಗ ಶಾಲೆ ಅಡುಗೆ ಮನೆ – ಸುಮಂಗಲಾ ಮುಮ್ಮಿಗಟ್ಟಿ
ಅಡುಗೆ ಎನ್ನುವುದು ಕೇವಲ ಒಂದು ಕೆಲಸ ಹಾಗೂ ಮಾಡುವ ಅಡುಗೆ ಕೇವಲ ಹೊಟ್ಟೆ ತುಂಬಿಸುವ ವಸ್ತು ಎನ್ನುವಂತೆ ಯಾವ ಮಹಿಳೆಯೂ ಮಾಡುವುದಿಲ್ಲ. ಇತ್ತೀಚಿನ ಆಧುನಿಕ ಅಡುಗೆ ಮನೆಯೇ ಆಗಿರಲಿ, ಸಾಂಪ್ರದಾಯಿಕ ಅಡುಗೆ ಮನೆಯೇ ಆಗಿರಲಿ, ಅಂದಿನಿಂದ ಇಂದಿನ ವರೆಗೆ ಅದೊಂದು ಆಕೆಯ ಪ್ರಯೋಗ ಶಾಲೆಯೇ ಸರಿ.
ಎಂತಹ ಸ್ಟಾರ್ ಹೋಟೆಲಿನ ಬಾಣಸಿಗರಾಗಿರಲಿ, ಆವರ ಮನೆಗಳಲ್ಲಿ ಅಡುಗೆ ಮಾಡುವವರು ಮಾತ್ರ ಆ ಮನೆಯ ಮಹಿಳೆಯರು, ಹಾಗೆಂದು ಪುರುಷರು ಅಡುಗೆ ಮಾಡಬಾರದು ಎಂದೇನೂ ಇಲ್ಲ. ಇಂದಿನ ದಿನಗಳಲ್ಲಿ ಎಲ್ಲರೂ ಎಲ್ಲವನ್ನೂ ಮಾಡುವ ಅನಿವಾರ್ಯತೆ ಇದೆ. ಆದರೆ ಮಹಿಳೆಯ ಪ್ರಯೋಗ ಶಾಲೆಯಾಗಿ ಅಡುಗೆ ಮನೆ ಮಹತ್ವದ ಸ್ಥಾನವನ್ನು ಪಡೆಯುತ್ತದೆ. ಮಕ್ಕಳು ಊಟ ಮಾಡಲು ಹಠ ಹಿಡಿದಾಗ, ಹಿರಿಯರು ಊಟ ಸೇರುತ್ತಿಲ್ಲ ಎಂದಾಗ, ಅವೇಳೆಯಲ್ಲಿ ಅಥಿತಿಗಳು ಆಗಮಿಸಿದಾಗ, ಆಕೆ ಅದನ್ನು ನಿಭಾಯಿಸಿದ ಮತ್ತು ನಿಭಾಯಿಸುತ್ತಿರುವ ವಿಧಾನಗಳು ನಿಜಕ್ಕೂ ವೈಜ್ಞಾನಿಕ ಮತ್ತು ಅಧ್ಯಯನ ಯೋಗ್ಯ. ಇದೇನು ಹೊಸ ವಿಷಯವಲ್ಲ ಎನಿಸಬಹುದು. ಆದರೆ ಅದರ ಹಿಂದೆ ಅಡಗಿರುವ ಪರಿಸರ ಪ್ರಜ್ಞೆಗಳು ನಿಜಕ್ಕೂ ಮೆಚ್ಚುವಂತಹವು.
ಹಿಂದಿನ ದಿನಗಳಲ್ಲಿ ಮಹಿಳೆಯರು ಮನೆ ಕೆಲಸವನ್ನು ಮಾತ್ರ ಮಾಡುತ್ತಿದ್ದರು ಹಾಗಾಗಿ ಅವರಿಗೆ ಸಮಯವಿರುತ್ತಿತ್ತು ಎನ್ನುವವರೂ ಇದ್ದಾರೆ, ಆದರೆ ಕಾರಣ ಅದು ಮಾತ್ರವಲ್ಲ ಎನ್ನುವುದು ಇಂದಿನ ಮಹಿಳೆಯರ ಅಡುಗೆ ಮನೆಯನ್ನು ನೋಡಿದಾಗ ಗೊತ್ತಾಗುತ್ತದೆ.
ಬಯಲು ಸೀಮೆಯವರ ಬಾಳಕ, ಉಪ್ಪಿನಕಾಯಿ, ಚಟ್ನಿ ಪುಡಿಗಳು, ತೊಕ್ಕು,ಸಂಡಿಗೆ ಹಪ್ಪಳಗಳು. ಮಲೆನಾಡಿನವರ ಗೊಜ್ಜು, ಸಾರು,ಹಸಿ, ಪಲ್ಲ್ಯ,ಹುಳಿಗಳು, ಹಲಸಿನ ಖಾದ್ಯಗಳು, ಬಾಳೆಯ ಉಪ್ಪೇರಿಗಳು, ಮಾವಿನ ರಸವನ್ನು ಒಣಗಿಸಿಟ್ಟುಕೊಳ್ಳುವ, ಸೌತೆಯನ್ನು, ಗೆಣಸು ಗೆಡ್ಡೆಗಳ್ನ್ನು ಶೇಖರಿಸುವ ಅವರ ಪರಿಯಲ್ಲಿ ಕಂಡು ಬರುವ ಪ್ರಯೋಗಶೀಲತೆಯನ್ನು ಕಂಡಾಗ ನಿಜಕ್ಕೂ ಅಚ್ಚರಿಯೆನಿಸದೇ ಇರದು. ಇಂದಿನ ಮಾರು ಕಟ್ಟೆಯನ್ನು ಆಕ್ರಮಿಸಿರುವ “ ರೆಡಿ ಟು ಈಟ್” ಗಳು,ಬಾಹ್ಯಾಕಾಶಕ್ಕೆ ಹೋಗುವವರಿಗೆ ತಯಾರಾಗುವ “ ಟ್ಯೂಬ್ ಆಹಾರಗಳು” ಇಲ್ಲಿಂದಲೇ ಸ್ಪೂರ್ತಿ ಪಡೆದಿವೆ. ಆ ಆಹಾರಗಳಿಗೆ ಒಂದಷ್ಟು ಪ್ರಿಸರ್ವೇಟಿವ್ ಗಳು, ಬಣ್ಣ, ಪ್ಯಾಕೇಂಜಿಂಗ್ ವಸ್ತು ಮಾತ್ರ ಹೊಸದಷ್ಟೇ.
ಹಾಗೆ ನೋಡಿದರೆ ಇಂದಿನ ಮಹಿಳೆಯ ಅಡುಗೆ ಮನೆ ಗ್ಲೋಬಲ್ ಆಗಿದೆ. ಮುಂಚೆ ತನ್ನ ತಾಯಿ ಮಾಡುತ್ತಿದ್ದ ತನ್ನ ಪ್ರದೇಶದ ಅಡುಗೆಯನ್ನು ಮಾತ್ರ ಕಲಿಯುತ್ತಿದ್ದ ಹುಡುಗಿ ಈಗ ‘ಯು ಟ್ಯೂಬ್’ ನಲ್ಲಿ ಇಡಿಯ ದೇಶದ ಮಾತ್ರವಲ್ಲ ದೇಶ ವಿದೇಶಗಳ ಅಡುಗೆಯನ್ನೂ ಕಲಿಯುತ್ತಿದ್ದಾಳೆ. ಹಾಗೆಂದೇ ಅಡುಗೆ ಮನೆಗೆ, ಹಲವಾರು ರಾಸಾಯನಿಕ ವಸ್ತುಗಳು, ಉಪಕರಣಗಳು ಬಂದಿವೆ. ಕರಿಯುವ, ಹುರಿಯುವ, ಉಕ್ಕರಿಸುವ,ಬೇಯಿಸುವ, ಸುಡುವ ಮತ್ತು ಊರಿಡುವ ವಿಧಾನಗಳು ಹೊಸ ರೂಪ ತಳೆದಿವೆ. ಉದಾ; ಗ್ಯಾಸ್ ಒಲೆಯ ಮೇಲೆ ಮಾಡಿದ ಅಡುಗೆಗೆ ಹಿಂದಿನ ಕಾಲದ ಕಟ್ಟಿಗೆ ಒಲೆಯ ಮೇಲೆ ಮಾಡಿದ ವಾಸನೆ ಕ್ಷಮಿಸಿ, “ಫ್ಲೇವರ” ಬರಿಸಲು ಖಾದ್ಯ ತಯಾರಾದ ಮೇಲೆ, ಮಧ್ಯದಲ್ಲಿ ಒಂದು ಬಟ್ಟಲಿನಲ್ಲಿ ನಿಗಿನಿಗಿಸುವ ಇದ್ದಿಲಿನ ಕೆಂಡವನ್ನಿಟ್ಟು ಅದರ ಮೇಲೆ ತುಪ್ಪ ಸುರಿದು ಮುಚ್ಚುತ್ತಾರೆ. ಕೆಲ ನಿಮಿಷದ ನಂತರ ಅದನ್ನು ತೆಗೆದು ಬಿಟ್ಟಾಗ ಅಡುಗೆಗೆ ಬೇರೆಯದೇ ಘಮ ಬಂದಿರುತ್ತದೆ, ಇದೇ ರೀತಿ ಸಿಜಲಿಂಗ್, ಮ್ಯಾರಿನೇಟಿಂಗ್, ಫರಮೆಂಟಿಂಗ್ ಹಳೆಯ ಅಡುಗೆಯ ಪದ್ಧತಿಯ ಹೊಸ ರೂಪ ತಳೆದು, ಹೆಚ್ಚು ಹೆಚ್ಚು ವೈಜ್ಞಾನಿಕವಾಗಿ ಪ್ರಯೋಗವಾಗುತ್ತಿವೆ. ಶುಚಿ, ರುಚಿ. ಮತ್ತು ಪೌಷ್ಟಿಕತೆಯನ್ನು ಹೆಚ್ಚಿಸುವ ಪ್ರಯೋಗಗಳು ನಿರಂತರವಾಗಿ ಅಡುಗೆ ಮನೆಯ ಪ್ರಯೋಗ ಶಾಲೆಯಲ್ಲಿ ನಡೆಯುತ್ತಲೇ ಇರುತ್ತವೆ.
ಹೀಗೆ ಹೇಳಿದಾಗ, ಇಂದಿನ ಮಹಿಳೆಯರೆಲ್ಲಿ ಅಡುಗೆ ಮಾಡುತ್ತಾರೆ, ಹೊರಗಡೆ ತಿನ್ನುವುದೇ ಹೆಚ್ಚು ಎನ್ನುವುದನ್ನೂ ಕೇಳುತ್ತೇವೆ. ಹಾಗೆ ಹೇಳುವವರಿಗೂ ಗೊತ್ತು ಹೊರಗಿನ ಅಡುಗೆಯನ್ನು ನಿತ್ಯ ತಿನ್ನಲು ಸಾಧ್ಯವಿಲ್ಲ ಎನ್ನುವುದು.ಹೋಟೆಲಿನಲ್ಲಿ ಊಟ ಮಾಡುವಾಗಲೂ ಕೂಡ ಮಹಿಳೆಯರು ಇದರಲ್ಲಿ ಏನಿದೆ ? ಹೇಗೆ ಮಾಡಿದ್ದಾರೆ ? ಕೂಲಂಕಶ ವಿಚಾರ ಮಾಡುವುದನ್ನು ನೋಡುತ್ತೇವೆ.
ಆಹಾರವನ್ನು ಕೆಡದಂತೆ ಇರಿಸುವ, ಉಳಿದ ಆಹಾರವನ್ನು ಮತ್ತ್ಯಾವುದೋ ರೂಪಕ್ಕೆ ಪರಿವರ್ತಿಸಿ, ಅದರ ಸದುಪಯೋಗ ಮಾಡುವ ಜಾಣ್ಮೆ ಇಂದು ಮೊನ್ನೆಯದಲ್ಲ. ಮತ್ತೊಂದು ವಿಷಯವನ್ನು ಇಲ್ಲಿ ಹೇಳಲೇ ಬೇಕು, ಇಂದಿನ ಮಹಿಳೆಯ ಅಡುಗೆಯ ಪ್ರಯೋಗಶೀಲತೆಯನ್ನು ಆಕೆ ತನ್ನ ಮಕ್ಕಳನ್ನು ವ್ಯಾಸಂಗ ಅಥವಾ ಕೆಲಸಕ್ಕಾಗಿ ವಿದೇಶಗಳಿಗೆ ಕಳಿಸುವಾಗ ನೋಡಬೇಕು, ಆಗ ಮನೆಯಲ್ಲಿ ಹೊಸ ಹೊಸ ಪ್ರಯೋಗಗಳು ಭರ್ಜರಿಯಾಗಿ ನಡೆಯುತ್ತವೆ. ಗೊಜ್ಜವಲ್ಲಕ್ಕಿ,ಉಪ್ಪಿಟ್ಟು ,ತರಾವರಿ ಅನ್ನದ ಮಿಕ್ಸ್ ಗಳು ಮನೆಯಲ್ಲಿಯೇ ತಯಾರಾಗುತ್ತವೆ.
ಇನ್ನು ಡಯಟ್ ಮಾಡುವ ಮಹಿಳೆಯರ ಕನ್ ಟೆಂಟ್ ಕಾನ್ಸಿಯಸ್ ನೆಸ್, ಪ್ರೋಟೀನು ಕಾರ್ಬೋಹೈಡ್ರೇಟ್, ಫ್ಯಾಟ್ ಗಳ ಲೆಕ್ಕಾಚಾರ, ಎನರ್ಜಿ ಡ್ರಿಂಕ್ ಮತ್ತು ಬಾರ್ ಗಳ ತಯಾರಿಕೆ, ಇವೆಲ್ಲವೂ ಆಕೆಯ ಪ್ರಯೋಗ ಶೀಲತೆಯನ್ನು ಎತ್ತಿ ತೋರಿಸುತ್ತವೆ. ಭಾರತೀಯ ನಾರಿಯ ಇಂದಿನ ಅಡುಗೆ ಮನೆ ಯಾವುದೇ ಲ್ಯಾಬ್ ಗಿಂತ ಕಡಿಮೆ ಇಲ್ಲ. ಜೈ ಅಡುಗೆ ಮನೆ ಎನ್ನೋಣವೇ?

ಸುಮಂಗಲಾ ಎಸ್. ಮುಮ್ಮಿಗಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.